ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೈಲಾಗದವನಿಗೆ ಮೈಯೆಲ್ಲ ಪೌರುಷ!

chetana2.jpg“ಭಾಮಿನಿ ಷಟ್ಪದಿ”

window.jpg

ಚೇತನಾ ತೀರ್ಥಹಳ್ಳಿ

“ಹೆಂಗಸರಿಗೇನು? ಮೈ ಮಾರಿಯಾದರೂ ಜೀವನ ಮಾಡ್ತೀರಿ. ಕಷ್ಟವೆಲ್ಲ ನಮ್ಗೇ”

ಅಂವ ಎಂಜಲು ಹಾರಿಸುತ್ತ ಒದರುತ್ತಿದ್ದರೆ, ಅವಳು ಬಾಯಿ ಹೊಲಿದುಕೊಂಡವಳಂತೆ ಕುಂತಿದ್ದಳು.
ತಾತ್ಸಾರ ಹೆಚ್ಚಿ ಉಮ್ಮಳಿಕೆ ಬಂದು ಸೆರಗೊತ್ತಿಕೊಂಡು ಕುಸಿದಳು.

* * *

ಅಂವ ಅಂದ ಹಾಗೆ ಅವಳು ಮೈ ಮಾರಿದ್ದೇನೋ ಹೌದು. ಆದರೆ, ಇಡಿಯ ದೇಹವನ್ನಲ್ಲ, ಗೇಣು ಹೊಟ್ಟೆಯನ್ನ.
ಅಷ್ಟಕ್ಕೂ ಅದನ್ನ ಹಾಗೆ ಬಿಕರಿಗಿಟ್ಟಿದ್ದು ಅವನೇ.
ಮಗು ಹೆರಲು ಹೆದರುತ್ತಿದ್ದ ನಾಜೂಕಿನ ಹೆಂಡತಿಯನ್ನ ಶ್ರೀಮಂತನೊಬ್ಬ ಆಸ್ಪತ್ರೆಗೆ ಕರಕೊಂಡು ಬಂದಿದ್ದ.
ಅಲ್ಲೇ ವಾರ್ಡ್ ಬಾಯಾಗಿದ್ದ ಇಂವ ಹೆಂಡತಿಯ ಬಸಿರನ್ನೇ ಬಾಡಿಗೆಗಿಟ್ಟು ವ್ಯವಹಾರ ಕುದುರಿಸಿದ.
ಆ ಗಂಡ-ಹೆಂಡತಿಯದ್ದನ್ನೆಲ್ಲ ಟೆಸ್ಟ್ ಟ್ಯೂಬಿಗೆ ಸುರಿದ ಡಾಕ್ಟರು ಅದೇನೇನೋ ಮಾಡಿ ಅಂತೂ ಅವಳ ಹೊಟ್ಟೆಗೆ ಬಿಟ್ಟರು.

ಮನೆಯಲ್ಲಿ ಹಬ್ಬ! ಹಾಲಲ್ಲಿ ಕೈತೊಳೆಯುವುದು ಅಂದರೆ ಇದೇ… ಅಂವ ಕುಣಿದಾಡಿಬಿಟ್ಟ.
ಮೂರರ ಮಗನ ಕಣ್ಣುತುಂಬಾ ಸೇಬುಸೇಬು. ಕೆಲಸದವಳ ಕೆಲಸಕ್ಕೂ ಒಬ್ಬ ಕೆಲಸದಾಳು!
ಹೆಂಡತಿಯ ಬಯಕೆ ನೆವದಲ್ಲಿ ಜೀವಮಾನದ ಆಸೆಯೆಲ್ಲ ತೀರಿಸಿಕೊಂಡ ಅವನು.
ಅವಳು ಮಾತ್ರ ಮೂಲೆ ತಡಕುತ್ತ ಸೆರಗಿನ ತುದಿ ಹಿಡಿದು ಸೊರಗುಟ್ಟುತ್ತಿದ್ದಳು, “ಈ ಮಗು ನನಗೆ ದಕ್ಕುವುದಿಲ್ಲವಲ್ಲ!”

* * *

ಸುಖದ ಒಂಭತ್ತು ತಿಂಗಳಿಗೆ ಒಂಭತ್ತೇ ನಿಮಿಷ. ಸರಕ್ಕನೆ ಸರಿದುಹೋಗಿತ್ತು ಕಾಲ.
ಕೈಸೋಲುವ ಬೆಣ್ಣೆಮಗು, ಮೈತುಂಬಿ ನಿಂತಿತ್ತು.
“ಮಗ್ಗುಲಾಗಿ ಮೊಲೆಯೂಡಬೇಕು” ನಾಜೂಕುಗಿತ್ತಿ ಸಣ್ಣಗೆ ಚೀರಿದಳು. “ಅಯ್ಯೋ! ಇನ್ಫೆಕ್ಷನ್ ಆದೀತು!”
ಒಂಭತ್ತು ತಿಂಗಳು ಹೊತ್ತ ಹೊಟ್ಟೆಯಿಂದ ಆಗದ್ದು, ಹೊಸ ಹಾಲಿಂದ ಆಗುತ್ತೆ. ಬಡತನ ಹೊಲೆಯಲ್ಲವೇ!
ಮಗುವನಪ್ಪಿದ ಗಂಡ- ಹೆಂಡತಿ ಕಾನೂನಿನ ಹಾಳೆಗಳಲ್ಲಿ ಎಲ್ಲೆಲ್ಲೋ ಸೈನು ಹಾಕಿಸಿಕೊಂಡರು.
“ಈ ಮಗುವಿನೊಂದಿಗೆ ನಾನು ಯಾವ ಬಗೆಯ ಸಂಬಂಧವನ್ನೂ ಇರಿಸಿಕೊಳ್ಳುವುದಿಲ್ಲ” – ಸದ್ಯ! ಅವಳಿಗೆ ಕಾಣದಷ್ಟು ನೀರು ತುಂಬಿತ್ತು ಕಣ್ಣಲ್ಲಿ!!
ಅಂವ ಮಾತ್ರ ಕೊಟ್ಟದ್ದು ಸಾಲದೆಂದು ಚೌಕಶಿ ನಡೆಸುತ್ತ, ಹಣಪೀಕುತ್ತ, ಸತಾಯಿಸುತ್ತ ನಿಂತುಬಿಟ್ಟಿದ್ದ.

* * *

ದುಡ್ಡಿಲ್ಲದ್ದು ಬಡತನವಲ್ಲವಂತೆ. ಇದ್ದ ದುಡ್ಡು ಇಲ್ಲವಾಗುವುದೇ ಬಡತನವಂತೆ!
ಹೊರಟಲ್ಲಿಗೇ ಬಂದು ಸೇರಿತ್ತು ಸಂಸಾರ. ಮನೆ ಹಡದಿಗೆ ಏನೊಂದೂ ಸಾಲದೀಗ.
ಅವನಿಗೋ, ದುಡ್ಡಿನ ರುಚಿಹತ್ತಿಹೋಗಿತ್ತು. ಅವನ ಹಪಹಪಿಗೆ ಅವಳ ಸಿಡುಕು.

ಕೈಲಾಗದ ಗಂಡಸಿಗೆ ಮೈಯೆಲ್ಲ ಪೌರುಷ!
ಅದಕ್ಕೇ, ಅರಚುತ್ತಿದ್ದಾನೆ ಈಗ, “ಹೆಂಗಸರಿಗೇನು? ಮೈ ಮಾರಿಯಾದರೂ…”

‍ಲೇಖಕರು avadhi

3 January, 2008

3 Comments

  1. alpazna

    Nice one.
    ಇಂದು ಬೆಳಿಗ್ಗೆ ಓದಿದ (http://www.guardian.co.uk/worldlatest/story/0,,-7187105,00.html)
    ಲೇಖನವನ್ನು ಮತ್ತೊಮ್ಮೆ ಓದಬೇಕು ಅನ್ನಿಸ್ತಾ ಇದೆ.

  2. madhu maiya

    OK where are you Mrs chetana?
    Kaledu hogidiya?

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading