ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೇರಳದಲ್ಲಿ ಕಿರಣ್ ಭಟ್: ‘ಡಂಪ್ಲಿಂಗ್‌ʼ ಎಂಬ ಅಡ್ಡ ಹೆಸರಿನ ಹೆಣ್ಣುಮಗಳೊಬ್ಬಳ ಕಥೆ

-ಕಿರಣ್ ಭಟ್

Dumpling
Hamazgayin State Theatre, Armenia
Dir: Narine Grigoryan

ಮನುಷ್ಯನ ಇಬ್ಬಂದಿತನ ಮತ್ತು ಸ್ವಾರ್ಥದ ಮುಖವಾಡ ಕಿತ್ತೆಸೆಯುವ ಪ್ರದರ್ಶನ

ಅರ್ಮೇನಿಯಾದ ಈ ನಾಟಕ, ಪ್ರಭುತ್ವವು ಸ್ವಾರ್ಥಕ್ಕಾಗಿ ನಕಲಿ ರಾಷ್ಟ್ಟೀಯತೆಯನ್ನು ಹೇಗೆ ದುರುಪಯೋಗಪಡಿಸಿಕೊಳ್ಳುತ್ತದೆ ಎನ್ನುವದನ್ನು ಈ ನಾಟಕ ವ್ಯಂಗ್ಯ ತುಂಬಿದ ಭಾಷೆಯ ಮೂಲಕ ಹೇಳುತ್ತ ಹೋಗುತ್ತದೆ. ಪ್ರಸ್ತುತ ಭಾರತದ ಸ್ಥಿತಿಗೂ ಕನ್ನಡಿ ಹಿಡಿಯುತ್ತದೆ.

ʼಡಂಪ್ಲಿಂಗ್‌ʼ ಎಂಬ ಅಡ್ಡ ಹೆಸರಿನ ಹೆಣ್ಣುಮಗಳೊಬ್ಬಳು ಪ್ರಶ್ಯನ್‌ ಆಕ್ರಮಣದಿಂದ ತಪ್ಪಿಸಿಕೊಳ್ಳಲು ಮೇಲ್ವರ್ಗದ ಗುಂಪಿನೊಂದಿಗೆ ಪ್ರಯಾಣಿಸುತ್ತಿದ್ದಾಳೆ. ಪ್ರಯಾಣದ ಪ್ರಾರಂಭದಲ್ಲಿ ಆಕೆಯನ್ನು ಕೀಳಾಗಿ ಕಂಡವರು ಮುಂದೆ ಹಸಿವು ಬಾಧಿಸತೊಡಗಿದಾಗ ಅವಳು ತಂದ ಆಹಾರಕ್ಕಾಗಿ ಕೈಯೊಡ್ಡುತ್ತಾರೆ.

ಮುಂದೆ ನಾಟಕ ತೆಗೆದುಕೊಳ್ಳುವ ತಿರುವೇ ಮಹತ್ವವಾದದ್ದು. ಹುಸಿ ರಾಷ್ಟ್ರೀಯತೆಯ ಮುಖಕ್ಕೆ ತಪರಾಕಿ ಕೊಡುವಂಥದ್ದು. ಪ್ರಯಾಣ ನಿಂತುಹೋಗಿದೆ. ಅಧಿಕಾರಿಯೊಬ್ಬ ಅವರನ್ನು ಮುಂದೆ ಹೋಗಲು ಬಿಡುತ್ತಿಲ್ಲ. ಅವನ ಶರತ್ತೊಂದಿದೆ. ಅದೆಂದರೆ ʼಡಂಪ್ಲಿನ್‌ʼ ಅವನ ಕೋಣೆಗೆ ಬರಬೇಕು. ದಾರಿಯುದ್ದಕ್ಕೂ ರಾಷ್ಟ್ರೀಯತೆಯ ಸೋಗು ಹಾಕಿದವರೆಲ್ಲ ಈಗ ಆಕೆಯನ್ನು ಅವನಿಗೆ ಒಪ್ಪಿಸಲು ಶತ ಪ್ರಯತ್ನ ಮಾಡುತ್ತಿದ್ದಾರೆ. ʼಇದು ದೇಶದ ಹಿತಕ್ಕಾಗಿ ಮಾಡಬೇಕಾದ ತ್ಯಾಗʼ ಎಂದು ವಾದ ಮಾಡುತ್ತಾರೆ. ನಿಜ ದೇಶಭಕ್ತೆಯಾದ ಆಕೆ ಅದನ್ನು ನಿರಾಕರಿಸುತ್ತಾಳೆ. ಆದರೆ ದೇಶಪ್ರೇಮಕ್ಕಿಂತ ಸ್ವಂತ ಸುರಕ್ಷತೆಯೇ ದೊಡ್ಡದು ಎನ್ನುತ್ತ ಅವಳನ್ನು ಒತ್ತಾಯಿಸುತ್ತ ಹೋಗುತ್ತಾರೆ.

ವಾಸ್ತವಾದೀ ನಿರ್ದೇಶನದ ಅತ್ಯುತ್ತಮ ಉದಾಹರಣೆ ಈ ನಾಟಕ. ಪ್ರತಿಯೊಂದು ಪಾತ್ರವೂ ಅಭಿನಯ, ಮಾತುಗಾರಿಕೆ ಮತ್ತು ಹಾವಭಾವಗಳಲ್ಲಿ ತೋರುವ ನೈಜತೆ ಇಡಿಯ ನಾಟಕದ ಹೆಚ್ಚುಗಾರಿಕೆ. ಅಂತೆಯೇ ನಾಟಕದ ರಂಸಜ್ಜಿಕೆಯೂ ವಿಶಿಷ್ಟವೇ. ಮೇಲ್ಮಹಡಿಗೆ ಒತ್ತುವ ಒಂದು ಏಣಿ. ಆರು ಕುರ್ಚಿಗಳು, ಎರಡು ಟೇಬಲ್‌ ಗಳು, ಎರಡು ಡೂಮ್‌ ಗಳಲ್ಲಿ ಇಡಿಯ ಪ್ರಯಾಣವನ್ನು ಕಟ್ಟುಕೊಡುವದಿದೆಯಲ್ಲ ಅದು ನಿಜಕ್ಕೂ ರಂಗಕರ್ಮಿಗಳಿಗೆ ಒಂದು ಪಾಠ.

ನಾಟಕದ ಕೊನೆಯ ಲೈಟಿಂಗ್‌ ಇಡಿಯ ನಾಟಕದ ಧ್ವನಿಯಾಗುವದೂ ವಿಶಿಷ್ಟವೇ. ʼಡಂಪ್ಲಿಂಗ್‌ʼ ಅಧಿಕಾರಿಯ ಬಳಿ ಹೋಗಿ ಬಂದಿದ್ದಾಳೆ. ಮರು ಪ್ರಯಾಣ ಪ್ರಾರಂಭವಾಗಿದೆ. ಅಕೆಗೆ ಹಸಿವಾಗಿದೆ. ರೋದಿಸುತ್ತಿದ್ದರೂ ಸಹ ಪ್ರಯಾಣಿಕರು ಆಕೆಯನ್ನು ಕಣ್ಣೆತ್ತಿಯೂ ನೋಡುತ್ತಿಲ್ಲ. ರಂಗದ ಮೇಲಿನ ದೀಪಗಳು ಆರಿವೆ. ಕ್ಯಾಬಿನ್‌ ನಲ್ಲಿ ಮಾತ್ರ ದೀಪವಿದೆ. ನಟನೊಬ್ಬ ಕ್ಯಾಬಿನ್‌ ನ ದೀಪಗಳನ್ನು ಆರಿಸುತ್ತಿದ್ದಾನೆ. ಸಹ ಪ್ರಯಾಣಿಕರ ಮೇಲಿನ ದೀಪಗಳೆಲ್ಲ ಆರಿವೆ. ಅವರೆಲ್ಲ ಈಗ ಕತ್ತಲಲ್ಲಿದಾರೆ.

ʼಡಂಪ್ಲಿಂಗ್‌ʼ ಮೇಲೆ ಮಾತ್ರ ಬೆಳಕಿದೆ.
ಪ್ರೇಕ್ಷಕರೀಗ ಎದ್ದು ನಿಂತು ಜೋರಾಗಿ ಚಪ್ಪಾಳೆ ತಟ್ಟುತ್ತಿದ್ದಾರೆ.

‍ಲೇಖಕರು avadhi

9 February, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading