
-ಕಿರಣ್ ಭಟ್
Oranges and stones
by
Asther Theatre Palestine
ಇಡಿಯ ನಾಟಕವೇ ಒಂದು ರೂಪಕ. ಇದು ನಾಟಕದ ಹೆಸರಿನೊಂದಿಗೇ ಶುರುವಾಗುತ್ತದೆ. ಕಿತ್ತಳೆಯ ಹಣ್ಣು ಪ್ಯಾಲೆಸ್ಟೈನ್ ನ ಸಮೃದ್ಧಿ ಮತ್ತು ಪರಂಪರೆಯ ಸಂಕೇತ. ಇಂಥ ಪರಂಪರೆಯೊಂದನ್ನು ಕಳೆದ ಎಪ್ಪತೈದು ವರ್ಷಗಳಿಂದ ನಿರಂತರವಾಗಿ ಅಕ್ರಮಿಸುತ್ತ ನರಕವಾನ್ನಗಿಸಿದ್ದನ್ನು ಕಲ್ಲುಗಳ ಸಂಕೇತಗಳ ಮೂಲಕ ನಾಟಕ ಕಟ್ಟಿಕೊಡುತ್ತ ಹೋಗುತ್ತದೆ.
ನಾಟಕದ ಪ್ರಾರಂಭದಲ್ಲಿ, ಶಾಂತವಾದ ಮನೆಯೊಂದರಲ್ಲಿ,ಕಾವ್ಯ ಬರೆಯುತ್ತ, ಹೂಗಳನ್ನು ಅರಳಿಸುತ್ತ, ಕಿತ್ತಳೆ ಹಣ್ಣುಗಳನ್ನು ಬೆಳೆಸುತ್ತ ನೆಮ್ಮದಿಯ ಬದುಕು ಸಾಗಿಸುತ್ತರುವ ಮಹಿಳೆಯೊಬ್ಬಳಿದ್ದಾಳೆ. ಅಂಥ ಮನೆಗೆ ನಿತ್ರಾಣನಾದ ವ್ಯಕ್ತಿಯೊಬ್ಬ ಹೊಕ್ಕುತ್ತಾನೆ. ಆತನಿಗೆ ನೀರು ಕೊಟ್ಟು ಉಪ ಚರಿಸುತ್ತಾಳೆ ಆಕೆ. ಸ್ವಲ್ಪ ಚೇತರಿಸಿಕೊಳ್ಳುತ್ತಿದ್ದಂತೆ ಆ ವ್ಯಕ್ತಿ ತಾನು ತಂದ ಟ್ರಂಕಿನೊಳಗಿಂದ ಒಂದೊಂದೇ ವಸ್ತುಗಳನ್ನು ತೆಗೆದು ಆಕೆಯ ಮನೆ ತುಂಬಾ ಹರಡುತ್ತಾನೆ. ಮನೆಯನ್ನು ಅಕ್ರಮಿಸಿಕೊಳ್ಳುತ್ತ ಹೋಗುತ್ತಾನೆ. ಆಕೆಗೆ ಮನೆಯ ಕಾಗದ ತೋರಿಸಿ ಹೆದರಿಸುತ್ತಾನೆ. ಅವನ ಹುನ್ನಾರ ತಿಳಿದುಕೊಂಡ ಆಕೆ ಪ್ರತಿಭಟಿಸುತ್ತಾಳೆ.

ಒಂದು ಹಂತದಲ್ಲಿ ಆತ ಆಕೆಯ ಕೊರಳಲ್ಲಿದ್ದ ಬೀಗದ ಕೈಯನ್ನೂ ಕಿತ್ತುಕೊಳ್ಳುತ್ತಾನೆ. ಹೀಗೆ ನಾಟಕದುದ್ದಕ್ಕೂ ನಿರಂತರವಾದ ಸಂಘರ್ಷವಿದೆ. ಪ್ಯಾಲೆಸ್ಟೈನ್ ನ ನೆಲದ, ಜನರ ಮೇಲಾಗುತ್ತಿರುವ ದೌರ್ಜನ್ಯದ ಹರಳುಗಟ್ಟಿದ ಪ್ರತಿಮೆ ಈ ನಾಟಕ.
ಇಲ್ಲಿ ಮಾತುಗಳಿಲ್ಲ. ಭಾವಗಳನ್ನು ಬಿಂಬಿಸುವ ಸಂಗೀತವಿದೆ. ಬರಿಯ ರಂಗಚಲನೆಗಳೇ ನಾಟಕವನ್ನು ರೂಪಿಸುತ್ತ ಹೋಗುತ್ತವೆ. ಹಾಗೆ ನೋಡಿದರೆ ನಾಟಕದ ಪ್ರತಿ ನಡೆಯೂ ಒಂದು ರೂಪಕವೇ. ಪ್ರತಿ ಸಂಗತಿಯೂ ನಾಟಕದ ಆಶಯದ ಕಡೆಗೇ ಬೊಟ್ಟು ಮಾಡುತ್ತ ಹೋಗುತ್ತದೆ.
ಇಲ್ಲಿರುವ ಇಬ್ಬರೂ ಹಿರಿಯ ಕಲಾವಿದರೇ. ಬರಿಯ ಅವರ ರಂಗಾನುಭವ ಅಷ್ಟೇ ಅಲ್ಲ ಬದುಕಿನ ಅನುಭವವೂ ರಂಗದ ಮೇಲೆ ಸ್ಪುರಿಸುತ್ತದೆ.
ಪಗಡೆ ಆಟವನ್ನು ಕಿತ್ತುಹಾಕಿಬಿಡುವ ಚೆಸ್, ಮನೆಯ ಮಧ್ಯೆ ಕೊರೆದ ಗೆರೆ ಕುಂಟೋಬಿಲ್ಲೆಯಾಗುವದು ಇಂಥ ಹಲವಾರು ಸಂಗತಿಗಳು ಆಶಯಕ್ಕೆ ಪೂರಕವಾಗಿವೆ.
ನಾಟಕ ಶುರುವಾಗುವಾಗ ಮನೆಯ ಅಂಚಿನಲ್ಲಿ ಒಂದು ಕಿತ್ತಳೆ, ಒಂದು ಕಲ್ಲು ಹೀಗೆ ಇದ್ದವು. ನಾಟಕ ಮುಗಿಯುವಾಗ ಕಿತ್ತಳೆಯೆಲ್ಲಾ ಮಾಯವಾಗಿ ಬರೇ ಕಲ್ಲು ಉಳಿದಿರುತ್ತದೆ.
ನೋವಿನ ಧ್ವನಿ ಹರಡುತ್ತ ಹೋಗುತ್ತದೆ. ಕಲಾವಿದರಿಬ್ಬರ ಅದ್ಭುತ ಅಭಿನಯ ಮನದಲ್ಲಿ ಉಳಿಯುತ್ತದೆ.







0 Comments