ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೇಂಜ ಇನ್ನು ನೆನಪು..

ಹಿರಿಯ ವ್ಯಂಗ್ಯಚಿತ್ರಕಾರ ಕೇಂಜ ಇನ್ನು ನೆನಪು

ನಾಡಿನ ಖ್ಯಾತ ಹಿರಿಯ ವ್ಯಂಗ್ಯಚಿತ್ರಕಾರ ವಾಸು ಶೆಟ್ಟಿ ಕೇಂಜ ಅವರು 2025ರ ಸೆಪ್ಟೆಂಬರ್ 12 ರಂದು ತಮ್ಮ 78 ನೇ ವಯಸ್ಸಲ್ಲಿ ನಮ್ಮನ್ನಗಲಿದ್ದಾರೆ.

ಐದಾರು ದಶಕಗಳು ನಾಡಿನ ವ್ಯಂಗ್ಯಚಿತ್ರಾಸಕ್ತರನ್ನೂ ಹಾಗೂ ವ್ಯಂಗ್ಯಚಿತ್ರಾಭಿಮಾನಿಗಳನ್ನು ನಗಿಸಿ ಹಗುರಾಗಿಸಿದ್ದಾರೆ. ಈ ಹಿರಿಯ ಜೀವದ ಜೀವನದ ಬಗ್ಗೆ ಒಂದು ಪುಟ್ಟ ಹಿನ್ನೋಟ ಇಲ್ಲಿದೆ.

1947 ರ ಜೂನ್ ನಾಲ್ಕರಂದು ಜನಿಸಿದ ವಾಸು ಶೆಟ್ಟಿ ಕೇಂಜ ಅವರ ಮೂಲ ಸ್ಥಾನ ಉಡುಪಿ ಜಿಲ್ಲೆಯ ಕುತ್ಯಾರು ಗ್ರಾಮ.

ಮುಂಬಯಿಯತ್ತ ಪಯಣ
ವಿ ಎಸ್ ಕೇಂಜ ಅವರು ತಮ್ಮ ಹತ್ತೊಂಬತ್ತನೇ ವಯಸ್ಸಲ್ಲೇ ಮುಂಬಯಿಗೆ ಹೋಗಿ ನೆಲೆಸಿದ್ದರು. ಆಮದು-ರಫ್ತು ಕಂಪನಿಯಲ್ಲಿ ಕೆಲಸದಲ್ಲಿದ್ದರು. ಓದುವ ತುಡಿತವಿದ್ದುದ್ದರಿಂದ ಸಂಜೆ ಕಾಲೇಜಿಗೆ ಹೋಗುತ್ತಾ ಬಿಕಾಂ ಅನ್ನು ಮಾಡಿದ್ದರು.

ಚಿತ್ರಕಲೆಯಲ್ಲಿ ಆಸಕ್ತಿ
ಚಿತ್ರಕಲೆಯನ್ನು ಅಂಚೆ ಶಿಕ್ಷಣದ  ಮೂಲಕ ಕಲಿತಿದ್ದರು. ನಂತರ ಚಿತ್ರ ಬರೆಯುವುದನ್ನು ಹವ್ಯಾಸವನ್ನಾಗಿಸಿಕೊಂಡು ಸತತವಾಗಿ ಅಭ್ಯಾಸಿಸಿ ರೂಢಿಸಿಕೊಂಡು ಕರಗತ ಮಾಡಿಕೊಂಡರು. ಆನಂತರ ವ್ಯಂಗ್ಯಚಿತ್ರ ರಚನೆಯನ್ನೂ ಮಾಡಲು ಆರಂಭಿಸಿದರು.

ಕನ್ನಡ ಪ್ರೀತಿ
ಮುಂಬಯಿಯಲ್ಲಿ ವಾಸವಿದ್ದರೂ ಕೇಂಜ ಅವರ ಮನಸ್ಸು ಕನ್ನಡನಾಡಲ್ಲೇ ಇತ್ತು. ಇಲ್ಲಿನ ಆ ಕಾಲದ ಖ್ಯಾತ ವ್ಯಂಗ್ಯಚಿತ್ರಕಾರರ ವ್ಯಂಗ್ಯಚಿತ್ರಗಳನ್ನು ನೋಡುತ್ತಾ ಅವುಗಳಿಂದ ಸ್ಫೂರ್ತಿ ಪಡೆಯುತ್ತಾ ತಮ್ಮದೇ ಒಂದು ಶೈಲಿಯನ್ನು ರೂಢಿಸಿಕೊಂಡರು. ಆ ಕಾಲದಲ್ಲಿ ಖ್ಯಾತರಾಗಿದ್ದ ನಾಡಿಗ್ ಅವರ ಕಾರ್ಟೂನ್ಗಳು ವಿಎಸ್ಕೆ ಅವರಿಗೆ ಇಷ್ಟವಾಗಿದ್ದವಂತೆ.

ವ್ಯಂಗ್ಯಚಿತ್ರ ಕ್ಷೇತ್ರಕ್ಕೆ ಎಂಟ್ರಿ
1978 ರಲ್ಲಿ ಮೊದಲ ಕಾರ್ಟೂನ್ ತುಷಾರದಲ್ಲಿ ಪ್ರಕಟವಾಗಿತ್ತು. ನಂತರದಲ್ಲಿ ಮುಂಬಯಿಯಲ್ಲಿನ ‘ಕರ್ನಾಟಕ ಮಲ್ಲ’ ಪತ್ರಿಕೆಗೆ ಪ್ರತಿದಿನವೂ ಪ್ಯಾಕೆಟ್ ಕಾರ್ಟೂನ್‌ ಬರೆಯಲು ಪ್ರಾರಂಭಿಸಿದರು. ಅದರೊಂದಿಗೆ ಅಕ್ಷಯ, ಉದಯದೀಪ, ಮಾಸ ಪತ್ರಿಕೆ ‘ಸಂತೋಷ’ ಹಾಗೂ ಸಂಜೆ ಪತ್ರಿಕೆ ‘ಸಂಜೆ ಸುದ್ದಿ’ ಗಳಿಗೂ ಕಾರ್ಟೂನ್ ಬರೆಯುತ್ತಿದ್ದರು.

ನಾಡಿನ ಪತ್ರಿಕೆಗಳಲ್ಲೂ ಪ್ರಕಟ
ಮುಂಬಯಿಯಲ್ಲಿನ ಪತ್ರಿಕೆಗಳಲ್ಲದೇ ನಾಡಿನ ಉದಯವಾಣಿ, ತರಂಗ, ತುಷಾರ, ಸುಧಾ, ಮಯೂರ, ಕಸ್ತೂರಿ ಹೀಗೆ ಎಲ್ಲಾ ಸಾಕಷ್ಟು ಪತ್ರಿಕೆಗಳಲ್ಲೂ ಹಾಗೂ ಅವುಗಳ ವಿಶೇಷಾಂಕಗಳಲ್ಲೂ ಕೇಂಜ ಅವರ ಕಾರ್ಟೂನ್ಗಳು ಪ್ರಕಟವಾಗುತ್ತಿದ್ದವು. ಹಾಗಾಗಿ ವಿಎಸ್ಕೆ ಅವರು ಕಾರ್ಟೂನಾಸಕ್ತ ಕನ್ನಡಿಗರಿಗೆ ಹತ್ತಿರವಾಗಿದ್ದರು. 

ಅಷ್ಟು ಹೊತ್ತಿಗೆ ವಿಎಸ್ಕೆ ಅವರದ್ದೇ ಆದ ಒಂದು ವಿಭಿನ್ನ ಶೈಲಿಯು ರೂಪಿತವಾಗಿತ್ತು. ಅವರ ಸಹಿ ಗಮನಿಸದೆಯೂ ಅವರ ವ್ಯಂಗ್ಯಚಿತ್ರಗಳನ್ನು ನೋಡಿ ಇದು ಕೇಂಜ ಅವರದ್ದೇ ಎಂದು ಗುರುತಿಸಬಹುದಾಗಿತ್ತು!

ನಿರಂತರ ತುಡಿತ
ಸದಾ ಒಂದು ನೋಟ್ಬುಕ್ ಇಟ್ಟುಕೊಂಡು ಐಡಿಯಾ ಬಂದಾಗೆಲ್ಲಾ ಕರಡು ಪ್ರತಿ ರಚಿಸಿಕೊಳ್ಳುತ್ತಿದ್ದರು. ಮತ್ತೆ ಸಮಯ ಮಾಡಿಕೊಂಡು ಅವನ್ನು ಪೂರ್ಣಗೊಳಿಸಿ ಪ್ರಕಟಣೆಗೆ ಕಳಿಸುವುದು ಅವರ ಕ್ರಮವಂತೆ.

ಪುಸ್ತಕ ಪ್ರೇಮಿ
ಚಿತ್ರ ಹಾಗೂ ವ್ಯಂಗ್ಯರಚನೆಯ ಜೊತೆಗೆ ಹೆಚ್ಚು ಸಮಯವನ್ನು ಪುಸ್ತಕಗಳನ್ನು ಓದಲೂ ಕೊಡುತ್ತಿದ್ದರು. ಓದಿನ ಗೀಳಿದ್ದರಿಂದ ಸಾಕಷ್ಟು ಪುಸ್ತಕ ಗಳನ್ನು ಕೊಂಡು ತರುವ ಅಭ್ಯಾಸವೂ ಅವರಿತ್ತು.

ಮನೆಯಲ್ಲಿ ಅವುಗಳ ಸಂಗ್ರಹವೂ ಈಗಲೂ ಭದ್ರವಾಗಿವೆ ಎನ್ನುವುದು ಅವರ ಮಡದಿ ಮತ್ತು ಅವರ ಮಗಳ ಮಾತು.

ಕೊಂಡು ಓದುವುದಲ್ಲದೇ ಪ್ರತಿದಿನವೂ ಲೈಬ್ರರಿಗೆ ಹೋಗಿ ಕೂತೂ ಓದುತ್ತಿದ್ದರು. ಆ ಅಭ್ಯಾಸವು ಇಳಿವಯಸ್ಸಲೂ ಮುಂದುವರಿದಿತ್ತು. ಹೆಚ್ಚೆಚ್ಚು ಓದುತ್ತಾ ಜ್ಞಾನಾರ್ಜನೆ ಮಾಡಿಕೊಂಡಿದ್ದು ಅವರ ಕಾರ್ಟೂನ್ ರಚನೆಗೆ ನೆರವಾಗಿರಬಹುದು. ಅಲ್ಲದೇ ಕೇಂಜ ಅವರು ಕ್ಯಾಪ್ಷನ್ಲೆಸ್ ಕಾರ್ಟೂನ್ಗಳನ್ನೂ ರಚಿಸಿದ್ದಾರೆ.

ಮರಳಿ ಉಡುಪಿಗೆ
ಶ್ವೇತಾ ಶೆಟ್ಟಿ ಅವರು ವಿ ಎಸ್ ಕೇಂಜ ಅವರ ಒಬ್ಬಳೇ ಮಗಳು. ನಿವೃತ್ತಿಯ ನಂತರ ಮುಂಬಯಿಯಿಂದ ಉಡುಪಿಗೆ ಬಂದು ಮಗಳ ಮನೆಯಲ್ಲಿಯೇ ವಾಸವಾಗಿದ್ದರು.

ಸಂಘದ ನಂಟು
ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘದ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿದ್ದೇ ಅಲ್ಲದೇ ಸಂಘದ ವ್ಯಂಗ್ಯಚಿತ್ರ ಪ್ರದರ್ಶನಗಳಲ್ಲಿ ಕೇಂಜ ಅವರ ವ್ಯಂಗ್ಯಚಿತ್ರಗಳು ಇರುತ್ತಿದ್ದವು. ಸಂಘದ ವಾಟ್ಸ್ಯಾಪ್ ಗ್ರೂಪ್ನಲ್ಲಿ ಪೋಸ್ಟ್ ಆದ ಕಾರ್ಟೂನ್ ಗಳನ್ನು ಗಮನಿಸುತ್ತಾ ಅದರ ಬಗ್ಗೆ ಕಾರ್ಟೂನಿಷ್ಟರೊಂದಿಗೆ ಚರ್ಚಿಸುತ್ತಿದ್ದರು ಎನ್ನುವುದು ಅವರ ಕಾರ್ಟೂನಿಷ್ಟ್ ಗೆಳೆಯರ ಮಾತು.

ಪ್ರಶಸ್ತಿ-ಪುರಸ್ಕಾರ
1990 ರಲ್ಲಿ ಹಿಂದೂಸ್ತಾನ್ ಟೈಮ್ಸ್ ಅವರ ಕಾರ್ಟೂನ್ ಸ್ಪರ್ಧೆಯಲ್ಲಿ ಕೇಂಜ ಅವರ ಕಾರ್ಟೂನ್‌ ಆಯ್ಕೆಯಾಗಿತ್ತು ಹಾಗೂ ಬಹುಮಾನವನ್ನೂ ಗಳಿಸಿತ್ತು.

ಸತೀಶ್ ಆಚಾರ್ಯ ಅವರು ನಡೆಸುವ ‘ಕಾರ್ಟೂನ್ ಹಬ್ಬ-2021 ರಲ್ಲಿ ವಿ ಎಸ್ ಕೇಂಜ ಅವರನ್ನು ಸನ್ಮಾನಿಸಿ ಗೌರವಿಸಿದ್ದರು. ಕಾಪುವಿನಲ್ಲಿ ಸನ್ಮಾನಿಸಿದ್ದರು. ಅಲ್ಲಿ ಅವರಿಗೆ ಒಳ್ಳೆಯ ಹೆಸರಿತ್ತು.

ಕೊಳಲು ವಾದನ
ಅವರು ತಮ್ಮ ಖುಷಿಗಾಗಿ ಕೊಳಲು ವಾದನವನ್ನೂ ಕಲಿತಿದ್ದರು. ತಮ್ಮ ಬಿಡುವಿನ ವೇಳೆಯಲ್ಲಿ ಕೊಳಲು ನುಡಿಸುತ್ತಿದ್ದರು. ಆ ಕ್ಷಣಗಳೆಲ್ಲಾ ನಮಗೆ ‘ವಿಶೇಷ ಅನುಭವ’ ಎಂಬುದು ಅವರ ಮನೆಯವರ ಮಾತು.

ಮೊಮ್ಮಗಳ ಕಲಾವಂತಿಕೆ
ವಿ ಎಸ್ ಕೇಂಜ ಅವರ ಮೊಮ್ಮಳು (ಶ್ವೇತಾ ಅವರ ಮಗಳು) ಸಾನ್ವಿಕಾಗೆ ಬಾಲ್ಯದಿಂದಲೂ ಚಿತ್ರ ಬರೆಯವುದು ಅಭ್ಯಾಸವಾಗಿದೆ. ಫೋಟೋಗಳನ್ನು ನೋಡಿ ಪೋಟ್ರೇಟ್ಗಳನ್ನು ಬರೆಯುತ್ತಿರುತ್ತಾಳೆ. ಅಲ್ಲದೇ ತನ್ನ ತಾತ ವಿ ಎಸ್ ಕೇಂಜ ಅವರ ಪೋಟ್ರೇಟನ್ನೂ ಬರೆದಿದ್ದಾಳೆ. ಬಹುಶಃ ತಾತನೇ ಈ ಪುಟಾಣಿಗೆ ಸ್ಫೂರ್ತಿ ಇರಬಹುದು. ಮುಂದಿನ ದಿನಗಳಲ್ಲಿ ತಾತನ ತರಹವೇ ಕಾರ್ಟೂನ್ ರಚಿಸಿಬಹುದೇನೋ? ಯಾರು ಬಲ್ಲರು? ಕಾದು ನೋಡಬೇಕಿದೆ.

ಕಾರ್ಟೂನ್‌ ಸಂಗ್ರಹ
ಕೇಂಜ ಅವರು ತಮ್ಮ ಪ್ರಕಟಿತ ಎಲ್ಲಾ ವ್ಯಂಗ್ಯಚಿತ್ರಗಳನ್ನು ಸಂಗ್ರಹಿಸಿ, ಅಂಟಿಸಿಟ್ಟಿದ್ದಾರೆ. ಈ ಕಾರ್ಟೂನ್ಗಳ ಸಂಗ್ರಹವು ನಾಲ್ಕೈದು ಪುಸ್ತಕಗಳಾಗಿವೆ. ಆ ಸಂಗ್ರಹ ಮುಂಬರುವ ಪೀಳಿಗೆಗೆ ಅನುವಾಗಲಿವೆ.

ಅಲ್ಲದೇ ಈಗ ಅವರ ಕುಟುಂಬದವರು ಕೇಂಜ ಅವರು ವ್ಯಂಗ್ಯಚಿತ್ರ ರಚನೆಗೆ ಬಳಸುತ್ತಿದ್ದ ಎಲ್ಲಾ ಕಲಾ ಸಾಮಗ್ರಿಗಳನ್ನು ಜತನ ಮಾಡಿಟ್ಟಿದ್ದಾರೆ. ಕೇಂಜ ಅವರ ನೆನಪು ಅವುಗಳಲ್ಲಿ ಮನೆ ಮಾಡಿವೆ.

ಕೇಂಜ ಅವರ ಕಟ್ಟಕಡೆಯ ವ್ಯಂಗ್ಯಚಿತ್ರವು ಉದಯವಾಣಿಯಲ್ಲಿ ಪ್ರಕಟವಾಗಿತ್ತು ಎನ್ನಲಾಗಿದೆ.

ಇಡೀ ಜೀವನ ವ್ಯಂಗ್ಯಚಿತ್ರ ರಚನೆಯ ಬಗ್ಗೆ ಚಿಂತಿಸುತ್ತಾ ಅದನ್ನೇ ರೂಢಿಸಿಕೊಂಡಿದ್ದ ಹಿರಿಯ ಜೀವಕ್ಕೆ ಎಲ್ಲಾ ವ್ಯಂಗ್ಯಚಿತ್ರಾಸಕ್ತರ ಪರವಾಗಿ ಅಂತಿಮ ನಮನಗಳು!

‍ಲೇಖಕರು Admin

24 September, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading