ಠಕ್ಕ ಬಿಟ್ಟರೆ ಸಿಕ್ಕ! (ಠಕಾರದ ಕುರಿತು)

ಕೆ.ವಿ. ತಿರುಮಲೇಶ್
ಠಕ್ಕ ಬಿಟ್ಟರೆ ಸಿಕ್ಕ! (ಠಕಾರದ ಕುರಿತು)

ಕೆ.ವಿ. ತಿರುಮಲೇಶ್
ನಾಗರ ಹಾವೆ! ಹಾವೊಳು ಹೂವೆ!
ಬಾಗಿಲ ಬಿಲದೊಳು ನಿನ್ನಯ ಠಾವೆ?
–ಕವಿಶಿಷ್ಯ, “ಹಾವಿನ ಹಾಡು’
ಈ ಸಾಲುಗಳನ್ನು ಯಾವ ಕನ್ನಡ ವಿದ್ಯಾರ್ಥಿ ತಾನೇ ಕೇಳಿಲ್ಲ!
ಪಂಜೆ ಮಂಗೇಶರಾಯರ (ಕವಿಶಿಷ್ಯ) ಮಕ್ಕಳ ಪದ್ಯ “ಹಾವಿನ ಹಾಡು” ಸುರುವಾಗುವುದೇ ಹೀಗೆ. ಇದರಲ್ಲಿ ಬರುವ ‘ಠಾವು’ (‘ಠಾವೇ’ ಎನ್ನುವುದು ಠಾವಿನ ಪ್ರಶ್ನಾರ್ಥಕ ರೂಪ.) ಎಂಬ ಶಬ್ದದ ಅರ್ಥ ‘ಜಾಗ’ (ಅಥವಾ ‘ತಾಣ’) ಎಂಬುದಾಗಿ. ಬಹುಶಃ ಅದು ‘ಅಚ್ಚಗನ್ನಡ’ದ ಶಬ್ದ ಅಲ್ಲ; ಕನ್ನಡ ಎಲ್ಲಿಂದಲೋ ಯಾವಾಗಲೊ ಕಡ ತಂದುಕೊಂಡುದು. ಆದರೆ ಕನ್ನಡಿಗರಿದನ್ನು ಕನ್ನಡವೆಂದೇ ಸ್ವೀಕರಿಸಿದ್ದಾರೆ. ಇದು ಎಲ್ಲಿಂದ ಬಂತು ಎಂದು ಜನಸಾಮಾನ್ಯರು ಕೇಳುವುದಿಲ್ಲ.
ಈ ಠಾವಿನಲ್ಲಿ ಬರುವ ಠಕಾರವನ್ನು ಗಮನಿಸಿ:
ಕನ್ನಡದ ಅತ್ಯಂತ ಸುಂದರವಾದ ಅಕ್ಷರಗಳ ಪೈಕಿ ಠಕಾರವೂ ಒಂದು. ಇದು ರಕಾರದ ಹೊಟ್ಟೆಗೆ ಒಂದು ಬಿಂದು ಹಾಕುವ ಮೂಲಕ ರಚಿಸಲ್ಪಟ್ಟಿದೆ. ಯಾಕೆ ಹೀಗಾಯಿತು? ಯಾಕೆಂದರೆ ಕನ್ನಡವು ಸಂಸ್ಕೃತದಿಂದ ಮಹಾಪ್ರಾಣ ಧ್ವನಿಗಳನ್ನು ಪಡೆದುಕೊಂಡಾಗ ಅವುಗಳನ್ನು ಲಿಪೀಕರಿಸುವುದು ಹೇಗೆ ಎನ್ನುವ ಸಮಸ್ಯೆ ಉಂಟಾಯಿತು. ಆದಷ್ಟೂ ಸಂಸ್ಕೃತ ಮೂಲವನ್ನು ಹೋಲುವ ಅಕ್ಷರವಿನ್ಯಾಸಗಳನ್ನೇ ಅದು ಬಯಸಿತು. ದೇವನಾಗರಿಯಲ್ಲಿ ಠಕಾರವು ಉರುಟಾಗಿದೆಯಷ್ಟೆ? ಅದನ್ನು ಹಾಗೆಯೇ ಸ್ವೀಕರಿಸಿಕೊಳ್ಳುವ ಹಾಗೆ ಇರಲಿಲ್ಲ, ಕಾರಣ ಕನ್ನಡದ ರಕಾರ ಈಗಾಗಲೇ ಹಾಗೆ ಇತ್ತು. ಆದ್ದರಿಂದ ರಕಾರಕ್ಕೆ ಒಂದು ಬೊಟ್ಟು ಹಾಕಿ ಅದನ್ನೇ ಠಕಾರವಾಗಿ ಮಾಡಿಕೊಳ್ಳಲಾಯಿತು.
ಇಂದು ಕನ್ನಡದಲ್ಲಿ ಠಕಾರ ಕಾಣಿಸಿಕೊಳ್ಳುವುದು ಕೆಲವೇ ಕೆಲವು ಶಬ್ದಗಳಲ್ಲಿ.
ಅವುಗಳಲ್ಲಿ ಕೆಲವು ಸಂಸ್ಕೃತ ಮೂಲದವಾದರೆ ಇನ್ನು ಕೆಲವು ಇತರ ಮೂಲಗಳಿಂದ ಬಂದಂತೆ ಅನಿಸುತ್ತದೆ, ಬಹುಶಃ ಪರ್ಶಿಯನ್, ಅರೇಬಿಕ್, ಮರಾಠಿ, ಹಿಂದಿ, ಉರ್ದು ಇತ್ಯಾದಿ ಭಾಷೆಗಳಿಂದ, ವಿವಿಧ ಘಟ್ಟಗಳಲ್ಲಿ, ಬೇರೆ ಬೇರೆ ಶೈಲಿಗೋಸ್ಕರ, ರಾಜಕೀಯವೋ ಮತ್ತೊಂದೋ ಕಾರಣಕ್ಕಾಗಿ ಇವು ಬಂದಿರಬಹುದು. ಠಕಾರ ಮಾತ್ರವಲ್ಲ, ಇತರ ಮಹಾಪ್ರಾಣ ಅಕ್ಷರಗಳ ಕತೆಯೂ ಇದುವೇ. ಠಕಾರಕ್ಕೆ ಮಾತ್ರ ನಮ್ಮ ಪರಿಶೀಲನೆಯನ್ನು ಮಿತಗೊಳಿಸಿದರೆ, ಈ ಅಕ್ಷರವನ್ನು ಒಳಗೊಂಡ ಶಬ್ದಗಳು ಸಂಖ್ಯೆಯಲ್ಲಿ ಹೆಚ್ಚಿಲ್ಲದಿದ್ದರೂ ಅವುಗಳ ಬಳಕೆಯೇನೂ ಕಡಿಮೆಯಲ್ಲದ ಕಾರಣ, ಕನ್ನಡ ಮಾತಿನಲ್ಲಿ (ಮತ್ತು ಬರಹ ದಲ್ಲಿ) ಅವೀಗ ಸರ್ವೇ ಸಾಧಾರಣವಾಗಿವೆ.
ಸಂಸ್ಕೃತ ಮೂಲಕ್ಕೆ ಉದಾಹರಣೆ:
ಮಠ, ಕರ್ಮಠ, ಕಂಠ, ನಿಷ್ಠೆ, ಪ್ರತಿಷ್ಠೆ, ಕಠಿಣ, ಕುಠಾರ, ಪಠಿಸು ಇತ್ಯಾದಿ
ಇತರೇ ಮೂಲದ ಶಬ್ದಗಳಿಗೆ ಉದಾಹರಣೆ:
ಠಸೆ, ಠಾಣೆ, ಠಾವು, ವಠಾರ, ಠೇವಣಿ, ಠರಾವು, ಠಳಾಯಿಸು, ಠಿಕಾಣಿ, ಠೀವಿ, ಠಕ್ಕ ಇತ್ಯಾದಿ
ಇನ್ನು ಠೇಂಕಾರವೆಂಬುದು ಅನುಕರಣಪದವಾಗಿರಬಹುದು. ಅದೇ ರೀತಿ ಠೀಕ್ ಠಾಕ್ ಎಂಬ ಪದ ಕೂಡ.
ಮೇಲೆ ಸೂಚಿಸಿದ ಇತರೇ ಶಬ್ದಗಳಲ್ಲಿ ಕೆಲವು ಪರ್ಶಿಯನ್ ಮತ್ತು ಅರೇಬಿಕ್ ಭಾಷೆಗಳಿಂದ ಬಂದಿದ್ದರೆ, ಇನ್ನು ಕೆಲವು ಸಂಸ್ಕೃತದಿಂದಲೇ ಗುರುತಿಸಲಾರದಷ್ಟು ಮಟ್ಟಿನ ತದ್ಭವವೋ ‘ಅಪಭ್ರಂಶ’ವೋ ಆಗಿ ಪರಿವರ್ತನಗೊಂಡು ಕನ್ನಡದಲ್ಲಿ ಬಳಕೆಯಾಗುತ್ತಿರಬಹುದು. ಠಾವಿನ (ಮತ್ತು ಠಾಣೆಯ) ಮೂಲ ಬಹುಶಃ ಸಂಸ್ಕೃತದ ಸ್ಥಾನ ಆಗಿರಬಹುದು. ಇದು ನನ್ನ ೂಹೆ ಮಾತ್ರ. ಇವು ಕನ್ನಡಕ್ಕೆ ಬಂದ ದಾರಿಗಳು ಸ್ಪಷ್ಟವಿಲ್ಲ. ಆಸಕ್ತರಿಗೆ ಈ ಕ್ಷೇತ್ರದಲ್ಲಿ ಸಂಶೋಧಿಸಲು ಸಾಕಷ್ಟು ಅವಕಾಶಗಳೂ ಸವಾಲುಗಳೂ ಇವೆ. ಆದರೆ ಇಲ್ಲಿ ನನ್ನ ಲಕ್ಷ್ಯ ಠಕಾರ ಮಾತ್ರ.
ಮೇಲಿನ ಉದಾಹರಣೆಗಳಿಂದ ಕಂಡುಬರುವಂತೆ ಠಕಾರವು ಪದಗಳ ಆದಿಯಲ್ಲಿ, ಮಧ್ಯದಲ್ಲಿ, ಅಥವಾ ಅಂತ್ಯದಲ್ಲಿ ಬರುವುದರಿಂದ ಅದರ ವಿತರಣೆ ವ್ಯಾಪಕವಾಗಿದೆ ಎನ್ನಬಹುದು. ಆದರೂ ಅದು ಇನ್ನಿತರ ಅಕ್ಷರಗಳೊಂದಿಗೆ ಸಂಯುಕ್ತವಾಗುವುದು ವಿರಳ. ಅದು ಅನುನಾಸಿಕದ ನಂತರ ಬರಬಹುದು: ಕಂಠ, ಶುಂಠಿ ಇತ್ಯಾದಿ. ಅನುನಾಸಿಕದ ನಂತರ ಬರಬಹುದು: ಠೇಂಕಾರ ಮಾತ್ರ ಇದಕ್ಕೆ ಉದಾಹರಣೆಯಾಗಿ ನನಗೀಗ ಸಿಗುವಂಥದು. ಅನುನಾಸಿಕವನ್ನು ಬಿಟ್ಟರೆ ಠಕಾರ ಸಂಯುಕ್ತವಾಗಿ ಬರುವುದು ಷಕಾರದೊಂದಿಗೆ ಒತ್ತಕ್ಷರವಾಗಿ: ಬಲಿಷ್ಠ,ಕನಿಷ್ಠ, ನಿಷ್ಠ ಮೊದಲಾಗಿ.
ಕೆಲವರು ವಿಠ್ಠಲ, ಮುಠ್ಠಾಳ ಎಂದು ಮುಂತಾಗಿ ದ್ವಿತ್ವದಲ್ಲಿ ಬರೆಯುವುದಿದೆ. ವಾಸ್ತವಸ್ವದಲ್ಲಿ ಇವು ವಿಟ್ಠಲ, ಮುಟ್ಠಾಳ ಎಂದಿರಬೇಕು. ಯಾಕೆಂದರೆ ಯಾವುದೇ ಮಹಾಪ್ರಾಣ ಅಕ್ಷರಕ್ಕೆ ಯಾವುದೇ ಸ್ಫೋಟಾಕ್ಷರವು (Plosive) ಒತ್ತಾಗಿ ಬರುವುದು ಉಚ್ಚಾರಣೆಯ ರೀತ್ಯ (ಯಾವುದೇ ಭಾಷೆಯಲ್ಲೂ) ಸಾಧ್ಯವಿಲ್ಲ. (ಎಲ್ಲ ಮಹಾಪ್ರಾಣಗಳೂ ಸ್ಫೋಟಾಕ್ಷರಗಳೇ.) ಆದ್ದರಿಂದ ಠಕಾರಕ್ಕೆ ಠಕಾರವಾಗಲಿ (ದ್ವಿತ್ವ), ಟಕಾರವಾಗಲಿ ಒತ್ತಕ್ಷರವಾಗಲಾರದು. ಆದರೆ ರೂಢಿಯಲ್ಲಿರುವ ವಿಠ್ಠಲ ಮತ್ತು ಮುಠ್ಠಾಳ ರೂಪಗಳನ್ನು ಹಾಗೆಯೇ ಇರಿಸಿಕೊಂಡರೆ ಪ್ರಮಾದವೇನೂ ಇಲ್ಲ. ಬಹುಶಃ ಅವು ಅರ್ಥದ ಮೇಲೆ ಹೆಚ್ಚು ಒತ್ತು ಕೊಡುವುದಕ್ಕೆ ಹೀಗೆ ರೂಪ ತಾಳಿರಬಹುದು.
ಠಕಾರವು ಒತ್ತಕ್ಷರಗಳನ್ನು ತೆಗೆದುಕೊಳ್ಳುವುದೇ ಕಡಿಮೆ: ಆದರೆ ಅವರ್ಗೀಯಗಳಲ್ಲಿ ಯಕಾರವು (ಮಾತ್ರವೇ) ಅದಕ್ಕೆ ಒತ್ತಕ್ಷರವಾಗಿ ಬರುವುದನ್ನು ಕಾಣುತ್ತೇವೆ. ‘ಪಠ್ಯ’ ಎಂಬ ಏಕಮಾತ್ರ ಉುದಾಹರಣೆ ಥಟ್ಟನೆ ನೆನಪಿಗೆ ಬರುತ್ತದೆ. ಯಕಾರವು ಒಂದು ಅರ್ಧಸ್ವರಾಕ್ಷರ ಎನ್ನುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
![]()
ಸರ್, ತುಂಬಾ ಉಪಯುಕ್ತವಾದ ವಿಶ್ಲೇಷಣೆ.ಠಾವು ಎಂಬ ಶಬ್ದ ಕೇಶಿರಾಜ ಕೊಡುವ ಧಾತುಗಳಪಟ್ಟಿಯಲ್ಲಿದೆ ಎಂಬ ಅಂಶವನ್ನು ಕಿಟ್ಟೆಲ್ ತಮ್ಮ ನಿಘಂಟಿನಲ್ಲಿ ಸೂಚಿಸುತ್ತಾರೆ. ಪುರಂದರದಾಸರ ಗುಮ್ನನ ಕರೆಯದಿರೆ ಎಂಬ ಕೀರ್ತನೆಯಲ್ಲಿ ‘ಠಾವು ‘ಪ್ರಯೋಗವಾಗಿದೆ.(‘ ದೇವರಂತೆ ಒಂದು ಠಾವಿಗೆ ಕೂಡುವೆ’)ನೀವಂದಂತೆ ಠ ಅಥವಾ ಟದಿಂದ ಸುರುವಾಗುವ ಶಬ್ದಗಳು ವಿರಳ.ಚಿಕ್ಕಂದಿನಲ್ಲಿ ಶಬ್ದಬಂಡಿ ಆಡುವಾಗ ಈ.ಅಕ್ಷರಗಳಿಂದ ಶುರುವಾಗುವ ಶಬ್ದಗಳು ಬೇಗ ಖಾಲಿಯಾಗುತ್ತಿದ್ದು ಬಂಡಿಯಾಗುವ ಪ್ರಸಂಗಗಳು ಹೆಚ್ಚು ಬರುತ್ತಿದ್ದವು.
ಚೆನ್ನಾಗಿದೆ.
ಕನ್ನಡ ಶಬ್ದಗಳಲ್ಲಿ ಅಕ್ಷರಗಳನ್ನು ಬರೆಯುವಾಗ ಕೆಲವೊಮ್ಮೆ ಗೊಂದಲ ಉಂಟಾಗುತ್ತದೆ. ಅದರಲ್ಲಿ ಈ ಠ ಕಾರವೂ ಒಂದು. ಈ ಅಕ್ಷರದ ಕುರಿತು ಒಳ್ಳೆಯ ಮಾಹಿತಿ ನೀಡಿದಿರಿ. ತುಂಬಾ ಧನ್ಯವಾದಗಳು ಸರ್.