ಪುತಳಾ
ಕೆ ನೀಲಾ

ಹತ್ತೆಲ್ಲ ಹಾಡಿದರೂ ಸಿಟ್ಟೆಲ್ಲ ನಿನ ಮ್ಯಾಲೆ
ನುಡಿಯ ತಪ್ಪಿದರ ನೀ ಒಡದ್ಹೇಳ
ಹರಿದ ಕೌದಿಯ ಮೇಲೆ ಪುತಳಾಬಾಯಿ ಅಂಗಾತ ಮಲಗಿದ್ದಳು. ಕೌದಿಯ ಅಂಚಿನ ಕರಿ ಹರಿದು ಟಿಸಿಲೊಡೆದಿತ್ತು. ಕೌದಿಯ ಒಡಲಿನಲ್ಲಿ ಒಂದು ಕಾಲಕ್ಕೆ ಚಿತ್ತಾರಗೊಂಡು ಕೈ ಕೈ ಹಿಡಿದು ಮುಗುಳ್ನಗುತ್ತ ಭುಲಾಯಿ ಹಾಕುವ ಭಂಗಿಯಲ್ಲಿದ್ದ ಗಂಗಿ-ಗೌರಿಯರು ಈಗ ಕೌದಿ ಸವೆ-ಸವೆದು ಇವರನ್ನು ವಿರೂಪಗೊಳಿಸಿತ್ತು. ರೆಕ್ಕೆ ಬಿಚ್ಚಿ ಹಾರಾಡಿಕೊಂಡಿದ್ದ ಹಕ್ಕಿಯ ಸಾಲುಗಳು ದಿಕ್ಕೆಟ್ಟು ರೆಕ್ಕೆಗಳೇ ಇಲ್ಲದಂತೆ ತುಂಡಾಗಿದ್ದವು. ವಿಚಿತ್ರ ನಮೂನೆಯ ಘಾಟು ಕೌದಿಯ ಮೈ ತುಂಬ ಆವರಿಸಿಕೊಂಡಿತ್ತು ಪುತಳಾ ಮಲಗಿದ್ದಲ್ಲಿಂದಲೇ ಮಾಳಿಗೆ ದಿಟ್ಟಿಸುತ್ತಿದ್ದಳು. ಹುಳುಕು ಜಂತಿಯ ಮೇಲೆ ಇಳಿಜಾರಾಗಿ ಒಂದು ಮತ್ತೊಂದರಾಸೆಯಲ್ಲಿ ತಬ್ಬಿಕೊಂಡ ಶಾಬಾದಿ ಕಲ್ಲುಗಳು. ಸೂಜಿ ಮೊನೆಯಷ್ಟು ಬೆಳಕಿನ ಮೇಲೆಯೂ ಕರುಣೆಯಿಲ್ಲದಂತೆ ಧಾಳಿ ಮಾಡಿದ ಕಾಳ ಕತ್ತಲೆಯು ತನ್ನ ಹರಿತ ಉಗುರು ಹೊದ್ದು ಆವರಿಸಿಕೊಂಡಿತ್ತು. ಪುತಳಾಬಾಯಿಗೆ ಕತ್ತಲು-ಬೆಳಕಿನ ನಡುವಿನ ವ್ಯತ್ಯಾಸ ಅರಿವಿಗೆ ಬರುತ್ತಿಲ್ಲ. ಕಾಲವೆಂಬುದು ನಿರ್ಜೀವವಾಗಿ ಅಲ್ಲೇ ಬಿದ್ದಂತಾಗಿತ್ತು. ಎಲ್ಲ ಎಲ್ಲವೂ ನಿಂತು ಹೋದ ಹೊತ್ತಲ್ಲಿ ಅವಳ ಕಣ್ಣಂಗಳದಿಂದ ಕಣ್ಣೀರ ಹನಿಗಳು ಮಾತ್ರ ಸಳ ಸಳನೆ ಜಿನುಗುತ್ತಿದ್ದವು. ಧಾರೆಗಟ್ಟಿ ಕಪಾಳು ಸೋಕಿ ಕಿವಿಯ ಸಂದು ದಾಟಿ ಕರ್ರನೆಯ ಕೂದಲೊಳಗೆ ಇಂಗುತ್ತಿದ್ದವು.
ಹರಿದಷ್ಟು ಬರಿದಾಗದ ಕಣ್ಣೀರಹನಿಗಳು. ನರಳುವ ಅಲೆಗಳಂತೆ ಮತ್ತೆ ಮತ್ತೆ ಜಾರುವ ಹನಿಗಳು ಪುತಳಾಬಾಯಿಯ ಜಿಡ್ಡುಗಟ್ಟಿದ ಅಗಾಧ ಕೂದಲರಾಶಿಯನ್ನು ಹಸಿಗೊಳಿಸುತ್ತಿದ್ದವು. ಹಾಗೆ ಎಷ್ಟೋ ಹೊತ್ತು ಹರಿವ ಹನಿಗಳೇ ಕತ್ತಲೆಯ ರಾಜ್ಯವಾಳುತ್ತಿದ್ದವು. ಉಸಿರು ನಿಂತೇ ಹೋದಂತಾಗಿದ್ದ ಪುತಳಾಬಾಯಿಯ ಶರೀರದಲ್ಲಿ ಕೊನೆಗೂ ಕ್ರಮೇಣ ಒಂದು ಪುಟ್ಟ ಚಲನೆ ಮರುಹುಟ್ಟು ಪಡೆಯಿತು. ಅವಳು ಸೂರಿನಿಂದ ಮೆಲ್ಲಗೆ ದಿಟ್ಟಿ ಕದಲಿಸಿದಳು. ಸಂಕಟದ ಭಾರದಲ್ಲಿ ಅಲ್ಲಿವರೆಗೆ ಒತ್ತರಿಸಿ ಬರಬೇಕಾದ ಅಳುವೆಂಬುದು ಸಹ ಮಾತು ಕಳಕೊಂಡು ಬಿಕ್ಕುತ್ತಿತ್ತು. ಈಗ ಮೆಲ್ಲ ಮೆಲ್ಲಗೆ ಕತ್ತಲೆ ಖೋಲಿಯಲ್ಲಿ ಶಬ್ದಗಳು ಒಂದರ ಸೆರಗ್ಹಿಡಿದು ಮತ್ತೊಂದು ಹಣಿಕತೊಡಗಿದವು.
ಗೋಡೆಯ ಮೇಲೆ ಹರಡಿಕೊಂಡಿದ್ದ ಅಲ್ಲಲ್ಲಿ ಧೂಳಿನ ಸೆಳಕು ಹೊದ್ದ ಘತ್ತರಗಿ ಭಾಗಮ್ಮನ ಫೋಟೋದ ಮೇಲೆ ಒರಗಿಕೊಂಡಿದ್ದ ಹಲ್ಲಿಯೊಂದು ಚಿಕ್ಚಿಕ್ಕೆನ್ನತೊಡಗಿತು. ಮುರುಕು ಗುಡಿಸಿಲಿನಿಂದ ಛಟಾಕು ಗಾಳಿಯೊಂದಿಗೆ ಬೆಳಕಿನ ತುಣುಕೊಂದು ಇಣುಕಿತು. ಬೆನ್ನ ಹಿಂದೆಯೇ ಮದ್ಯಾಹ್ನದಿಂದ ರಾತ್ರಿವರೆಗೂ ನಡೆದ ಘಟನೆಯು ಮರೆವಿನ ಹೊದಿಕೆ ಕಳಚಿ ಪುತಳಾಬಾಯಿಯ ಮೆದುಳು ಎದೆಯಂಗಳದತ್ತ ನೆನಪಾಗಿ ಇಳಿಯಿತು. ನೆನಪಿನೊಂದಿಗೆ ಅಪಮಾನದ ಎಳೆಯೊಂದು ಉರುಳಾಗಿ ಸುತ್ತಿಕೊಳ್ಳತೊಡಗಿತು. ಅಲ್ಲಿವರೆಗೂ ಥೇಟ್ ಕಲ್ಲಿನಂತಾಗಿದ್ದ ಪುತಳಾಬಾಯಿಯು ಈಗ ದು:ಖದ ಕಟ್ಟೆಯೊಡೆದು ಕುಗ್ಗಿದಳು. ತಲ್ಲಣಿಸಿದಳು. ಮತ್ತು ಕರುಳು ಕಿತ್ತಿ ಬರುವಂತೆ ಬಿಕ್ಕಳಿಸಿ ಅಳತೊಡಗಿದಳು. ಒಳಗಿನ ದನಿಯೊಂದು ಒಳ-ಒಳಗೆ ಸಂಕಟದ ಕಡಲಾಗಿ ಭೋರ್ಗರೆಯುತ್ತಿತ್ತು. ……. ನಡೆದ ಘಟನೆಯ ನೆನಪೆಂಬುದೇ ಕರುಳು ಕೊಯ್ವ ಚೂಪುಗತ್ತಿಯಾಗಿ ಝಳಪಿಸುತ್ತಿತ್ತು…………

ಹೌದು. ಖಡಿ ಮದ್ಯಾಹ್ನ. ಸಣ್ಣೂರು ಎಂಬ ಅಂಗೈಯಗಲ ಹಳ್ಳಿ ಗಾಯಗೊಂಡ ಹೆಬ್ಬಾವಿನಂತೆ ಅಡ್ಡಾದಿಡ್ಡಿಯಾಗಿ ಹೊರಳಾಡುತಿತ್ತು. ಊರಾಚೆಯ ಕೇರಿಯನ್ನು ಆಪೋಷನ ಮಾಡುವಂತೆ ಮಾಪುರತಾಯಿಯ ಗುಡಿಯ ಮುಂದೆ ಭುಸುಗುಡುತಿತ್ತು. ಗುಡಿಯ ಮುಂಭಾಗ ಪಂಚಾಯತ್ ಕಟ್ಟಿಯೂ ಆಗಿ ಮಾರ್ಪಟ್ಟಿತ್ತು. ಎಲ್ಲ ಕೆಲಸ ಬೊಗಸಿಯನ್ನು ಮೂಲೆಗೆ ತಳ್ಳಿ ಊರ ಹಿರಿ-ಕಿರಿಯರು ಧಾವಿಸಿ ಬಂದಿದ್ದರು. ಊರಾಚೆ ಕೇರಿಯ ಜನರು ಒಂದೊಂದೆ ಹೆಜ್ಜೆಯನ್ನು ಎತ್ತಿಡುತ್ತ ಬರುತ್ತಿದ್ದರು. ಹೆಂಗಸರು ದೂರ ದೂರದಲ್ಲಿ ನಿಲ್ಲುವ ಸಾಹಸ ಮಾಡಿದ್ದರು. ಕೆಲವು ಹಿರಿಯ ಜೋಗತಿಯರು ಮಣ್ಣಿನ ನೆಲದ ಮೇಲೆ ಕೂತಿದ್ದರು. ಅವರ ಮುಖವು ಮುಗಿಲು ಕಳಚಿ ಬಿದ್ದಂತೆ ಕುಸಿದು ಹೋಗಿತ್ತು. ಪುತಳಾಬಾಯಿಗೆ ಕೊಡುವ ಶಿಕ್ಷೆಯ ಬಗ್ಗೆ ನೆನೆದು ಗಾಬರಿಯೆಂಬುದು ಅವರ ಎದೆಯಲ್ಲಿ ಅವಲಕ್ಕಿ ಕುಟ್ಟುತ್ತಿತ್ತು. ಹಿರಿಕರೆನಿಸಿಕೊಂಡವರು ಇನ್ನೇನು ಬರುವರೆಂದು ಗುಲ್ಲೆದ್ದಿತು. ಅಷ್ಟರಲ್ಲಿ ಮಾಪುರತಾಯಿಯ ಗುಡಿಯ ಪುಜಾರಿಯು ಹಣೆ ತುಂಬ ಭಂಡಾರ ಬಳಿದುಕೊಂಡು ಧೋತರಿನ ಚುಂಗನ್ನು ಎತ್ತಿ ಕಟ್ಟಿ ಹೆಗಲ ಮೇಲಿನ ಅರಿಶಿನ ಶಲ್ಯ ನೆಲ ತಾಗುವಂತೆ ನಡೆದು ಬಂದು ಕಟ್ಟೆಯ ತುದಿಗೆ ಕುಂತನು. ಊರಾಚೆಯ ಕೇರಿಯ ಅನೇಕ ಹುಡುಗಿಯರಿಗೆ ನೇಮ-ನಿಷ್ಠೆಯಲ್ಲಿ ದೇವದಾಸಿಯಾಗಿಸಿ ಪಳಗಿದ್ದ ಪೂಜಾರಿಯು ಆತಂಕದಿಂದಲೇ ಬಂದಿದ್ದ.
……….. ಏನು ಮಾಡಿದ್ದಳು ಪುತಳಾ?
ಅಂದಿನ ನಸುಕು ಹರಿಯುವ ಹೊತ್ತು. ಪುತಳಾಬಾಯಿಯು ಲಿಂಗಣ್ಣನ ಎದೆಗೆ ತನ್ನ ಎಡಗಾಲಿನಿಂದ ಝಾಡಿಸಿ ಒದ್ದು ಹೊರಹಾಕಿದ್ದಳು. ತಳಬಾಗಿಲಿನ ತೋಳಿಗೆ ಕೈ ಹಿಡಿದು ಹಲ್ಕಾ ಮಗನೇ, ನೀ ಏನ್ ನನಗ ತಾಳಿ ಕಟ್ಟಿದ ಗಂಡೇನೋ…….? ಬೇಕಂದರ ಯಾಂವನ ಬಲ್ಲೆರೇ ಹೋಗ್ತಿನಿ..ಇಲ್ಲ ಎಡಗಾಲಿಲಿ ಒದಿತಿನಿ. ನೀ ಯಾಂವನೋ ಕೇಳಲಾಕ? ನನ್ನ ಮ್ಯಾಲ ಕೈ ಮಾಡ್ತಿ ಏನೋ……ಆ ತಾಯಿ ಎಲ್ಲಮ್ಮನ ಸೇವಾ ಮಾಡಲಾಕ ಹುಟ್ಟಿನಿ. ನಿನ್ನಂಥ ಭಾಂಚೋದನ ಸೇವಾ ಮಾಡಲಾಕ ಅಲ್ಲ. ಧೊಡ್ಡಂವ ಇದ್ರ ನಿನ್ನ ಮನಿಗಿ. ನನಗೇನೋ……
ಪುತಳಾಬಾಯಿಯ ಆಕ್ರೋಶಕ್ಕೆ ಹಣೆಯ ಭಂಡಾರ ಮೂಗಿನ ನತ್ತು ಬೆಂಕಿಯುಂಡೆಯಂತೆ ಜ್ವಲಿಸುತ್ತಿದ್ದವು. ಕಣ್ಣಗುಡ್ಡೆಗಳು ಕಿಡಿ ಕಾರುತಿದ್ದವು. ಅನೇಕ ವರ್ಷಗಳಿಂದ ತನ್ನ ಪಾಡಿಗೆ ತಾನು ಬೆಳೆಯುತ, ಅರಿಶಿನ ಕುಂಕುಮ ಎಣ್ಣೆಯಿಂದ ಬಲಿಯುತಿದ್ದ ಕೂದಲಿನ ಬೆಟ್ಟವು ಇವಳ ಸಿಟ್ಟಿನ ಭರಕ್ಕೆ ಹರಿತ ತಲವಾರಿನಂತೆ ಅತ್ತಿತ್ತ ಸರಿದಾಡುತಿತ್ತು.
ಅಂದು ಅಕ್ಕ ಪಕ್ಕದವರು ಇನ್ನೂ ನಿದ್ದೆಯಲ್ಲಿದ್ದರು. ಕೊನೆ ಮನೆಯ ನಿದ್ದೆ ಬಾರದ ಮುದುಕಿ ಸಕ್ಕುಬಾಯಿಗೆ ಎಲ್ಲವೂ ತಿಳಿದುಕೊಳ್ಳಲಾಗಲಿಲ್ಲ. ಆದರೆ ಇವಳು ಉಟ್ಟ ಹಸಿರು ಇಳಕಲ್ ಸೀರೆಯನ್ನು ಮೊಳಕಾಲವರೆಗೂ ಸರಿಸಿ ಬಿದ್ದ ಸೆರಗಿನ ಖಬರೂ ಇಲ್ಲದೆ ಎಡಗಾಲೆತ್ತಿ ಅರೆಬರೆ ಬತ್ತಲ ಮೈಯಿನ ಲಿಂಗಣ್ಣನ ಎದೆಗೆ ಗುರಿಯಿಟ್ಟು ಒದೆಯುವುದು ಕಾಣಿಸಿತ್ತು. ಅಲ್ಲಿವರೆಗೂ ಭೌಭೌ ಎನ್ನುತ್ತಿದ್ದ ನಾಯಿಗಳು ಥಟ್ಟಂತ ಗಪ್ಪಾದವು. ಇವರ ಬಯ್ಗಳ ಆವಾಜಿಗೆ ಕೆಲವು ಮನೆಗಳ ಬಾಗಿಲು ತೆರೆದುಕೊಂಡವು. ಯಾಕ? ಯಾನಾಯ್ತು?…. ಅಂತೆಲ್ಲ ಕುತೂಹಲದಿಂದ ಹೆಣ್ಣು ಗಂಡುಗಳು ಮುಂದ್ಹೆಜ್ಜೆ ಇಡುವ ಮೊದಲೇ ಲಿಂಗಣ್ಣನೆಂಬ ಧಡೂತಿ ಗಂಡಸು ಏಯ್ ನಿನ್ನವ್ನ ಸೂಳಿ, ನಿನಗ ಸುಮ್ಮನ ಬಿಡಾಲಾ…..ನಿನ್ನಂಥ ಬೀದಿ ನಾಯಿಗಿ ಏನ್ ಮಾಡ್ತಿನಿ ನೋಡು ಗುಡುಗಿ ಭರ-ಭರ ನಡೆದು ಹೋದನು. ಅವನು ನಡೆದು ಹೋದ ರಭಸಕ್ಕೆ ನೆಲ ಧಿಮಿಗುಡುತಿತ್ತು. ಯಕ:ಶ್ಚಿತ್ ದೇವದಾಸಿ ಹೆಂಗಸು ಹೀಗೆ ನಡುಬೀದಿಯಲ್ಲಿ ಅವಮಾನಗೊಳಿಸಿದ್ದನ್ನು ಲಿಂಗಣ್ಣನನ್ನು ಪಾತಾಳಕ್ಕೆ ತಳ್ಳಿತ್ತು. ಮರುಕ್ಷಣವೇ ಭುಸುಗುಡುವ ಹಾವಿನ ಹೆಡೆಯಾಗಿ ಫೂತ್ಕರಿಸುವಂತೆ ಮಾಡಿತು. ತಿಳುವಳಿಕೆ ಬಂದಾಗಿನಿಂದ ರಕ್ತದ ನರನಾಡಿಯಲ್ಲಿ ಹರಿಯುತ್ತಿರುವ ಪೌರುಷಕ್ಕೆ, ಹಮ್ಮಿಗೆ, ಹೆಂಗಸರನ್ನು ಭೋಗಿಸಿ ಬೀಸಾಡುವ ತನ್ನ ಪರಮಾಧಿಕಾರಕ್ಕೆ ನಡು ಬೀದಿಯಲ್ಲಿ ಪುತಳಾಬಾಯಿ ಚಾಟಿ ಬೀಸಿದ್ದಳು. ಹೆಣ್ಣಾದವಳು ಅದರಲ್ಲೂ ಇಟ್ಟುಕೊಂಡವಳು ತನ್ನ ತೊತ್ತಾಗಿ ಬಿದ್ದಿರಬೇಕಾದದ್ದು ಅವಳ ಕರ್ತವ್ಯ ಎಂದು ಬಗೆದಿದ್ದನು.
ಆದರೆ ಅನಿರೀಕ್ಷಿತ ಧಾಳಿಯಿಂದ ತತ್ತರಿಸಿದ್ದನು. ಹಾಗೇನಾದರೂ ಅವಕಾಶ ಸಿಕ್ಕರೆ ಪುತಳಾಬಾಯಿಯ ಕುತ್ತಿಗೆ ಹಿಚುಕುತಿದ್ದನು. ಅದಕ್ಕೆ ಅವಕಾಶವೇ ಕೊಡದಂತೆ ದೆವ್ವಿನಂಥ ಶಕ್ತಿಯು ಅವಳ ದೇಹ ಹೊಕ್ಕಿತ್ತೊ…. ಪುತಳಾ ಥೇಟ್ ರಣಚಂಡಿಯಂತೆ ಕಂಡು ಅವನೊಳಗೂ ಅವ್ಯಕ್ತ ಭಯ ಹುಟ್ಟಿ ಎದೆ ಝಲ್ಲೆಂದು ಪ್ರತಿಯಾಗಿ ಅವಳ ಮೇಲೆ ಹಲ್ಲೆ ಮಾಡಲಾಗದೆ ಅಸಹಾಯಕನಾಗಿ ಅಲ್ಲಿಂದ ಓಡಲೇಬೇಕಿತ್ತು. ಎಲ್ಲ ಹಂಗುಹರಿದು ನಿಂತವಳ ಚಂಡಿಯಂಥ ಅವತಾರಕ್ಕೆ ಅವನು ತತ್ತರಿಸಲೇಬೇಕಿತ್ತು. ಅವನು ಅವಳ ಮೇಲೆ ಸೇಡು ತೀರಿಸಿಕೊಳ್ಳುವ ಸವಾಲು ಹಾಕಿ ಓಡುವ ಪರಿಗೆ ಉಟ್ಟ ಧೋತರು ತೊಡರುಗಾಲಾಗುತಿತ್ತು.
ಲಿಂಗಣ್ಣ ಗಲ್ಲಿಯಿಂದ ಮರೆಯಾದದ್ದೇ ತಡ ಇತ್ತ ಅಲ್ಲಿದ್ದವರು ಪುತಳಾಬಾಯಿಯ ಮನೆಯ ಸುತ್ತ ನೆರೆಯತೊಡಗಿದರು. ಗುಂಪಿನ ನಡುವಲ್ಲಿ ವಯಸ್ಸಾದ ಯಲ್ಲಮ್ಮ ಜೋಗತಿಯೂ ಇದ್ದಳು. ‘ಯಾನಾಯ್ತೇ ಪುತಳಿ…..’ ಎಂದು ವಿಚಾರಿಸುವ ಧಾಟಿಯಲ್ಲಿ ದನಿ ಎತ್ತರಿಸಿ ಕೇಳಿದಳು. ಜನಜಂಗುಳಿಯ ನಡುವೆ ಯಲ್ಲಮ್ಮ ಕಂಡದ್ದೇ ತಡ ಪುತಳಾಬಾಯಿಯ ಆಕ್ರೋಶ ಮಸ್ತಕಕ್ಕೆ ಏರಿತ್ತು. ಅದರಲ್ಲಿಯೂ ಅವಳ ದನಿಯೊಳಗಿನ ಗತ್ತು ಮತ್ತಷ್ಟು ಕೆರಳಿಸಿತ್ತು. ಕ್ಷಣ ಮಾತ್ರದಲ್ಲಿ ಅವಳ ಕಣ್ಮುಂದೆ ಹಿಂದಿನ ಎಷ್ಟೆಲ್ಲ ಘಟನಾವಳಿಗಳು ಅವತರಿಸಿದ್ದವು…………
…………ಪುತಳಾಬಾಯಿಯು ಏಳು ವರ್ಷದವಳಿದ್ದಾಗ;
ಗುಡಿಸಲ ಮುಂದೆ ಪಕ್ಕದ ಮನೆಯ ಕಲ್ಲಿ ನಾಗಿಯರ ಜೊತೆ ಕುಂಟಾಪಿಲ್ಲೆ ಆಡ್ತಿದ್ದಳು. ಮೊದಲಿನ ಮನೆಯ ಗೋಲದಲ್ಲಿ ಹಾಕಿದ್ದ ಚಿಂಪುಗಲ್ಲಿಗೆ ಬಲಗಾಲು ಎತ್ತಿ, ಎಡಗಾಲಿನ ಪಾದದ ಎಳೆಯ ಮುಂಬೆರಳಿನಿಂದ ಛಕ್ಕಂತ ಎಗರಿಸಿದಳು. ಮತ್ತು ಎರಡನೆಯ ಮನೆಯ ಗೋಲಿನ ನಡುವಿಗೆ ಬಂದು ಬೀಳುವಂತೆ, ಗೆರೆ ದಾಟದಂತೆ ಎಚ್ಚರಿಕೆ ವಹಿಸಿದಳು. ಚಿಂಪುಗಲ್ಲು ತುಂಬ ಕರೆಕ್ಟಾಗಿ ಎರಡನೆಯ ಮನೆಯ ಗೋಲು ಸೇರಿತು. ಇವಳು ಖುಷಿಯಿಂದ ತೆಲೆಯೆತ್ತಿದಳು. ಮತ್ತು ಮೊದಲಿನ ಗೋಲಿನಿಂದ ಎರಡನೆಯ ಗೋಲಿಗೆ ಎಗರಬೇಕು….. ಅಷ್ಟರಲ್ಲಿ ಯಲ್ಲಮ್ಮ ಮತ್ತು ಮಾಪುರತಾಯಿಯ ಗುಡಿಯ ಪೂಜಾರಿ ಭರಭರನೆ ನಡೆದು ತನ್ನದೇ ಗುಡಿಸಿಲ ಮುಂದೆ ಬರುವುದನ್ನು ಕಣ್ಣಿಗೆ ಬಿತ್ತು. ಚಿತ್ತ ಅತ್ತ ಹೊರಳಿತು. ಅಷ್ಟರಲ್ಲಿ ನಾಗಿ ಮತ್ತು ಕಲ್ಲಿ ಇಬ್ಬರೂ ‘ಗೆರಿ ತುಳದಿ, ಗೆರಿ ತುಳದಿ ಸೋತಿ ಸೋತಿ’ ಎಂದು ಕುಣಿಯತೊಡಗಿದರು. ಚಿಂಪುಗಲ್ಲನ್ನು ಯಶಸ್ವಿಯಾಗಿ ಹಾರಿಸಿ ದಾಟಿಸಿದ ಪುತಳಾ ತಾನೆಲ್ಲಿ ಸೋತೆ ಎಂದು ಹಣೆ ಹುಬ್ಬಿಗೆ ಗಂಟಿಟ್ಟು ಏಯ್ ಎಲ್ಲಿ ಎಲ್ಲಿ…..? ಎಂದು ಕಣ್ಣಗಲಿಸಿ ಕೇಳಿದಳು. ‘ಎಲ್ಲಿ ನಿಂತಿದಿ ನೋಡು…’ತಾನು ಒಂಟಿಗಾಲಲ್ಲಿನಿಂತಿದ್ದು ಎರಡೂ ಗೋಲು ಮನೆ ಸೇರುವ ನಡುವಿನ ಗೆರೆಯ ಮೇಲೆ.
ಕಲ್ಲಿ ನಾಗಿಯರು ಪುತಳಾಗೆ ಕೈ ಎಳೆದು ಸರಿಸಿದರು. ಮತ್ತು ಇವಳು ಸೋತು ಅವರು ಆಟಕ್ಕೆ ನಿಂತರು. ಗೆದ್ದೇ ಬಿಡುವ ಉಮೇದಿನಲ್ಲಿದ್ದ ಪುತಳಾ ತನಗರಿವಿಲ್ಲದೆ ಸೋತಿದ್ದಕ್ಕೆ ಹೋ ಎಂದು ಅಳತೊಡಗಿದಳು. ಅಷ್ಟರಲ್ಲಿ ಅವಳ ಅವ್ವ ಕರೆದಿದ್ದಕ್ಕೆ ಫುಗ್ಗಾ ತೋಳಿನಿಂದ ಮೂಗು ಒರೆಸಿಕೊಳ್ಳುತ ಅತ್ತ ನಡೆದಳು. ಮಣ್ಣಿನ ಗೋಡೆಗೆ ಒರಗಿ ಕೂತ ಯಲ್ಲಮ್ಮ ಘಲ್ಲೆನ್ನುವ ಕೆಂಪು ರಾಶಿ ಬಳೆಗಳಿರುವ ಕೈಗಳನ್ನು ಚಾಚಿ ಪುತಳಾಳನ್ನು ಕರೆದು ಬರಸೆಳೆದು ತೊಡೆಯ ಮೇಲೆ ಕೂಡಿಸಿಕೊಂಡು ಮುದ್ದು ಮಾಡಿದ್ದಳು. ಸೋತ ನೋವು ಮರೆಯಾಯಿತು.
ಅಂದು ಆ ಗುಡಿಸಿಲಿನಲ್ಲಿ ಪುತಳಾಬಾಯಿಯ ಜೀವನದ ಭವಿಷ್ಯವೇ ನಿರ್ಣಯವಾಗಿತ್ತು. ಮತ್ತು ಅದರ ನೇತೃತ್ವ ಯಲ್ಲಮ್ಮ ವಹಿಸಿದ್ದಳು. ಮುಂದೆ ಪೂಜಾರಿ ಹೇಳಿದ ದಿನ. ಹಾಲ್ದಿಂಗಳ ಹುಣ್ಣಿಮೆ. ಚಿಲ್ಲೆಂದ ಕುರಿಯ ಕೊರಳಿನ ರಕ್ತ. ಸಿಡಿದ ಕೆಂಪು ಹನಿಗಳು ಹೆಂಡಿಯಿಂದ ಸಾರಿಸಿದ ಹೊಡ್ಡು ತಗ್ಗು ನೆಲಕ್ಕೆ ಅಡ್ಡಾದಿಡ್ಡಿಯಾಗಿ ಚಿತ್ತಾರದ ರಂಗೋಲಿ ಬರೆಯಿತು. ಐದು ಪದರಿನ ದಾರ ಸುರಗಿಯಾಗಿ ಸುತ್ತಿಕೊಂಡಿತು. ನಡುವೆ ಕುಳಿತ ಪುತಳಾ ಸುರಿವ ತಣ್ಣೀರಿಗೆ ಗಡಗಡ ನಡಗುತ್ತಿದ್ದಳು. ಕಾಸಿನಗಲ ಕುಂಕುಮ ಹಣೆ ತುಂಬ ಕಪಾಳಿಗೆ ನೇತಾಡುತ್ತಿರುವ ಸದಾಮಲ್ಲಿಗೆ ಹೂವಿನ ದಂಡಿ ಸರಿಸಿದಷ್ಟೂ ಕಣ್ಣಿಗಡ್ಡವಾಗುತ್ತಿತ್ತು. ಮಾಪುರಿತಾಯಿಯ ಮುಂದೆ ಕಟ್ಟಿದ ಕರಿಮಣಿ ತಾಳಿಯೊಂದಿಗೆ ಪುತಳಾ ಆಟವಾಡುತಿದ್ದಳು. ಅಂದು ಮನೆಗೆ ಬಂದ ಯಲ್ಲಮ್ಮನೇ ಪೂಜಾರಿಯ ನೆರವಿನಿಂದ ಎಲ್ಲವೂ ನೆರವೇರಿಸಿದ್ದಳು. ಕವಡಿ ಕಣ್ಣಿನ ಹಸಿರು ಪತ್ತಳುಟ್ಟ ಮಾಪುರಿ ಐದು ಅಕ್ಕ ತಂಗಿಯರೊಂದಿಗೆ ಕಟ್ಟಿಗೆ ರೂಪದಲ್ಲಿ ಕೂತು ದಾಸಿಯಾದ ಹೊಸ ಎಳೆಬಾಲೆಗೆ ದುರುಗುಟ್ಟಿ ನೋಡುತ್ತಿರುವಂತಿತ್ತು.
…….ಪುತಳಾ ತಾಳಿಯ ಗುಳ್ಳಿನೊಂದಿಗೆ ಆಟವಾಡುತ್ತಲೇ ಬೆಳೆದಳು. ಮುಂದೆ ಇದೇ ಯಲ್ಲಮ್ಮ ಮೈನೆರೆದ ಪುತಳಾಬಾಯಿಯ ಉಡಿ ತುಂಬಲು ಊರಿನ ಬಟ್ಟೆ ವ್ಯಾಪಾರಿ ಭೀಮಪ್ಪನನ್ನು ಕರೆ ತಂದಿದ್ದಳು. ನಡುವಯಸ್ಸಿನ ಭೀಮಪ್ಪ ಭರ್ಜರಿಯಾಗಿಯೇ ಉಡಿ ತುಂಬಿದ್ದನು. ಮನೆ ಮಂದಿಯೆಲ್ಲ ಹೊಸ ಬಟ್ಟೆಯ ಮಿಂಚಲ್ಲಿ ಮಿಂದರು. ಆಗ ತಾನೆ ಅರಳುವ ಮೈಮನಗಳ ಬಿಸಿಯಲ್ಲಿ ಪುತಳಾ ಸಹ ಹೊಳೆಯಂತೆ ಹರಿದದ್ದು ಸುಳ್ಳಲ್ಲ. ಯಲ್ಲಮ್ಮನ ಕಿವಿಗೆ ಹೊಸ ಬೆಂಡೋಲೆ ಬಂದಿತ್ತು.. ದಿನಗಳ ಕಾಲಿಗೆ ಮೊದ-ಮೊದಲು ಸಂಭ್ರಮದ ಗಿಲಕಿಯಿತ್ತು. ಕ್ರಮೇಣ ಗಿಲಕಿಯ ಶಬ್ದ ಮಂದವಾಗತೊಡಗಿತು.
……..ಪುತಳಾಗೆ ಯಲ್ಲಮ್ಮನನ್ನು ನೋಡುತ್ತಲೇ ಎಲ್ಲವೂ ನೆನಪಾಗಿ ‘ಹಲ್ಕಟ್ ಹೆಂಗ್ಸೇ ನಿನಲಿಂದೇ ನನ ಬಾಳ್ಯಾ ಹಿಂಗಾಗ್ಯಾದ….’ ಅಂದವಳೆ ಅವಳತ್ತ ನುಗ್ಗಿದ್ದಳು. ಹಲ್ಲುಗಳು ಕಟಕಟನೆ ಕಡಿದು ಬಿರುಗಾಳಿಯಂತೆ ಎರಗಿದ ಪರಿಗೆ ಅಲ್ಲಿದ್ದವರು ಮನೆಯವರು ಅವಳನ್ನು ಬಿಗಿಯಾಗಿ ತೆಕ್ಕೆಯಲ್ಲಿ ಹಿಡಿದು ಒಳಗೆ ತಂದಿದ್ದರು. ಪುತಳಾ ಆಕ್ರೋಶ ಸಿಟ್ಟು ತಲೆಗೆ ಏರಿ ಮೂರ್ಛೆ ಹೋಗಿದ್ದಳು. ‘ಮಾಪುರಿ ಸಿಟ್ಟು ಸುಮ್ಮನಲ್ಲ. ಏನಾರಾ ಹರಕಿ ಮರತೀರಿ ಏನ್ ನೋಡ್ರಿ…..’ ಬಂದವರು ಗೊಣಗುತ ಮರಳಿದರು.
‘ಈಕಿ ಹಿಂಗ ಮಾಡಿದ್ರ ನಮ್ಮ ಜೀವನ ಹ್ಯಾಂಗ ನಡಿಬೇಕು.? ಇದ್ದವ್ರು ಹೊಳ್ಳಿ ನೋಡಲ್ಲ. ಮಾಪುರಿ ಸಿಟ್ಟಾಗ್ತಾಳ. ದೇವ್ರ ಹೆಣ್ಮಕ್ಕಳಾಗಿ ಇದ್ರೇ ಚಲೊ…..’ ಸೀತಾಬಾಯಿ ಮಾತಿಗೆ ಗಂಗಮ್ಮ, ‘ಬಿಡು. ಎಲ್ಲರೂ ಪುತಳಿಹಂಗ ಮಾಡದೂರ ಹ್ಯಾಂಗ? ಅಂವ ಹೊಡದನಂತ ಇಕಿ ಅಂವನಿಗಿ ಹೊರಗ ಹಾಕದಳಂತ. ಮತ್ತ ಬೇಕನಸದಾಗ ಏನ್ ಮಾಡತಾಳ? ಹೊಯ್ಮಾಲಿ…….’
………ಪುತಳಾ ಭಾರವಾದ ಕಣ್ ರೆಪ್ಪೆಯನ್ನು ಒಮ್ಮೆ ಬಿಗಿಯಾಗಿ ಮುಚ್ಚಿ ಮಗ್ಗಲು ಹೊರಳಿದಳು. ಕಣ್ಣುಗಳು ಮುಚ್ಚಿದರೇನು ತೆರೆದರೇನು….. ನೆನಪ ಹಕ್ಕಿಯ ರೆಕ್ಕೆಗಳು ಗಾಯಗೊಂಡಂತೆ ಫಡಫಡಿಸುತ್ತಲೇ ಇದ್ದವು. ಅರಳಿದ ಹರೆಯಕ್ಕೆ ಹರಿವು ಬೇಕೆನಿಸಿದ್ದು ಸುಳ್ಳೇ…..? ಒತ್ತರಿಸಿ ಬಂದ ಹನಿಯೊಂದು ಕಣ್ಣಂಗಳದಲ್ಲಿ ಥಟ್ಟಂತ ನಿಂತುಕೊಂಡಿತು. ಹಾಗಂತ ಬೇರೆ ದಾರಿಯೇನಿತ್ತು? ಹುಡುಕಿದ ದಾರಿಗಳು ನೆನಪಾದವು….
ಬಯಸಿದರೂ ಬಿಡುಗಡೆ ಸಿಗದ ನೋವುಗಳಿಂದ ತಪ್ಪಿಸಿಕೊಳ್ಳಲು ಎಷ್ಟೋ ದಿನಗಳವರೆಗೆ ಎಲ್ಲರ ಕಣ್ತಪ್ಪಿಸಿ ತುಳಜಾಪುರ ಅಂಬಾಬಾಯಿಯ ದರ್ಶನದ ನೆಪ ಮಾಡಿ ಬಯಕೆಗಳ ಬೆಟ್ಟದ ಮೇಲೆ ಹೆಜ್ಜೆಯೂರಿ ನಡೆಯುತ್ತಿದ್ದಳು. ಆದರೆ ದೇಹದ ಕಾವು ಮೆದುಳ ಮಾತನು ನುಂಗಿ ನೊಣೆಯುತಿತ್ತು. ಲಿಗಿ-ಲಿಗಿ ಬೆಂಕಿ ಬಹಳ ದಿನಗಳವರೆಗೆ ಜ್ವಲಿಸಲಿಲ್ಲ. ಒಳಗಣ ಅರಿವು ಬೆಳಕಾಗುವ ಮುನ್ನವೇ ಹೊರಗಣ ದೇಹಗಳ ಬಯಕೆ ದೀವಟಿಗೆಯಾಗಿ ಬೆನ್ನಟ್ಟುತಿತ್ತು. ಬರುಬರುತ ಪುತಳಾನ ಕೂದಲು ಗಂಟುಗೊಳ್ಳತೊಡಗಿತು. ಅದೂ ಮಾಪುರತಾಯಿಯ ಮಹಿಮೆಯೆಂದು ಭಕ್ತಿಯಿಂದ ಅರಿಶಿನ ಕುಂಕುಮ ಇಟ್ಟು ಪೂಜಿಸಿದರು. ಅಂದಿನಿಂದ ಜಡೆಯು ದೇವದಾಸಿತನಕ್ಕೆ ಗಟ್ಟಿ ಛಾಪು ಒತ್ತಿತು……..
…….ಅಪ್ಪ ಲಕ್ವಾ ಆಗಿ ಮೂಲೆ ಹಿಡಿದ. ಅವ್ವ ಕೂಲಿಯೂ ಮಾಡಲಾಗದೆ, ಒಡಲ ಉರಿಯೂ ತಾಳಲಾಗದೆ ‘ನಿನಗ ದೇವ್ರಿಗಿ ಯಾಕ ಬಿಟ್ಟೀವಿ? ಗರತಿ ಹಂಗ ಬಿಂಕ ಮಾಡಲಾಕ ಅಲ್ಲ…..’ ಚುಚ್ಚು ಮಾತು ಕರುಳಿನಲ್ಲಿ ಕತ್ತರಿಯಾಡಿಸಿದಂಗಾಗುತಿತ್ತು.
………ಪುತಳಾಬಾಯಿ ಅಂಗಾತ ಮಲಗಿದಳು. ಅಜರ್ಪುರ ಕಲ್ಲುಗಳ ನಡುವಿನಿಂದ ಸಣ್ಣಗೆ ಮಣ್ಣು ಉದುರುತಿತ್ತು. ಬೆನ್ನ ಹಿಂದಿನ ಕೂದಲು ಮೆಲ್ಲಗೆ ಈಟಿಯಂತೆ ಇರಿಯತೊಡಗಿತು. ಕಣ್ಣ ಕೊನೆಯಿಂದ ಹನಿಯೊಂದು ಮತ್ತೆ ಚುರುಗುಟ್ಟತೊಡಗಿತು. ಪರಡಿ ಹಿಡಿಯುವಾಗ ನುಂಗಿಸಿದ ಕರ್ಪೂರದಂತಹ ಹೊಗೆಯುಳ್ಳ ಬೆಂಕಿಯೊಂದು ಒಳಗೆ ಸುಡುವಂತೆ ಭಾಸವಾಗತೊಡಗಿತು. ಪರಡಿ ಹಿಡಿದು ಜೋಗಾಕೆ ಹೋಗಿ ನೋಡಿದ್ದಳು. ಬೇಕೆನಿಸಿದಾಗ ಬೇಕೆಂದಕಡೆ ಮಾತ್ರ ಬಯಕೆಗೆ ಜಾಗ ಕಾಣಿಸಿದ್ದಳು. ನೆಲೆ ಕಾಣಲು ಹುಡುಕಾಡುತ ಅಲೆದದ್ದೆಷ್ಟೋ ದಾರಿ. ಈಗ ಅವಳಿಗೆ ಮೌಶಿಯ ನೆನಪಾಗತೊಡಗಿತು. ಬದುಕಿನಲ್ಲಿ ಅತ್ಯಂತ ಯಾತನೆ ಮತ್ತು ಭಯಪಟ್ಟ ಘಟನೆ ಅದು……..
…………….ಕೂಸಿದ್ದಾಗ ಮೌಶಿಯನ್ನು ದೇವದಾಸಿಯಾಗಿಸಲಾಗಿತ್ತು. ಭರಪೂರ ಜವಾನಿಯಲ್ಲಿದ್ದಾಗ ಅವಳ ಮುಂದೆ ಊರಿನ ಗಂಡಸು ಜಾತಿ ಮಂಡಿಯೂರಿ ಕೂಡುತಿತ್ತು. ಮೌಶಿಯ ಅಪ್ಪ ಗಂಡುಗಳ ವ್ಯವಹಾರ ಕುದುರಿಸುವಲ್ಲಿ ಪಳಗಿದ್ದನು. ಅಚ್ಚರಿಯೆಂದರೆ ಮೌಶಿಗೆ ಬಹಳ ಬೇಗ ವಯಸ್ಸಾದ ಸುದ್ದಿ ಊರ ತುಂಬ ಓಡಾಡಿ ಮೀಸೆಯುಳ್ಳವರ್ಯಾರೂ ಅವಳತ್ತ ಹಾಯದಂತಾಯಿತು. ನೋಡನೋಡುತ್ತಲೇ ಸೌಂದರ್ಯ ಕರಗಿ ಕಡ್ಡಿಯಂತಾದಳು. ಆದರೆ ಅದೊಂದು ಬೆಳಗಿನಲ್ಲಿ ಮೌಶಿಯ ಹೆಣ ಮಾಪುರತಾಯಿಯ ಗರ್ಭಗುಡಿಯಲ್ಲಿರುವ ಸುದ್ದಿಯಿಂದ ಊರಿಗೂರು ಹೌಹಾರಿತು.
ಎಷ್ಟೋ ದೇವದಾಸಿಯರ ಸಾವುಗಳನ್ನು ನೋಡಿದ್ದರು. ಆದರೆ ಹೀಗೆ ಮಾಪುರತಾಯಿಯ ಪಾದಕ್ಕೆ ಹಣೆ ಕೊಟ್ಟು ಸತ್ತವರನ್ನು ನೋಡಿರಲಿಲ್ಲ. ಹೆಣ ಎತ್ತಲು ಒಳಗೆ ಹೋದವರ ನದರಿಗೆ ಬಿದ್ದಿದ್ದೇನು? ಮೌಶಿಯ ಬಿಗಿದ ಮುಷ್ಠಿಯಲ್ಲಿ ಮಾಪುರತಾಯಿಯ ಬಲಗಣ್ಣಿನ ಕವಡಿ. ಹಣೆಯ ಭಂಡಾರ. ದೇವಿಯತ್ತ ನೋಡಿದರೆ, ಯಾರೊಂದಿಗೋ ಕಿತ್ತಾಡಿದಂತೆ ಉಡಿಸಿದ ಸೀರೆ ಹರಿದು ಹೋಗಿದೆ. ಒಂಟಿಗಣ್ಣಲ್ಲಿ ರೋದಿಸುತ್ತಿರುವಂತೆ ದೇವಿಯ ಅವತಾರವಾಗಿದೆ. ಸುತ್ತಲಿನ ಪೂಜಾ ಸಾಮಗ್ರಿಗಳು ಚೆಲ್ಲಾಪಿಲ್ಲಿಯಾಗಿ ಕೊರಳಸರದ ಕವಡಿಗಳು ಅಕರಾಳ-ವಿಕರಾಳ ಬಿದ್ದಿವೆ. ಕದನಕ್ಕೆ ಸಾಕ್ಷಿಯಾಗಲೊಲ್ಲದ ನಂದಾದೀಪ ಕಣ್ಮುಚ್ಚಿ ಬಹಳ ಹೊತ್ತಾಗಿತ್ತೇನೋ….
ಹಿರಿಯ ಜೋಗತಿಯೊಬ್ಬಳ ಕಣ್ಣಿಂದ ಹನಿದ ನೀರು ಮೌಶಿಯ ಜಡೆಗಟ್ಟಿದ ಕೂದಲಿನ ಮೇಲೆ ಟಪ್ಪೆಂದಿತು. ಮೌಶಿಯ ದೇಹವೇನೋ ಎಲುಬಿನಗೂಡಾಗಿತ್ತು. ಆದರೆ ಮಿರುಗುವ ಕರ್ರನೆ ಕೂದಲು ಆಲದ ಮರದ ಬಿಳಲಿನಂತೆ ಅಚಲವಾಗಿಯೇ ಇತ್ತು. ಮೌಶಿಯ ಬದುಕು ಪೂರ್ತಿ ಜಡೆಯೇ ನುಂಗಿ ನಿಂತಂತೆ ಸೆಟೆದಿತ್ತು. ಅವಳು ಇಲ್ಲವಾಗಿದ್ದಳು. ಮತ್ತು ಅವಳನ್ನು ಅಂತರ್ಗತವಾಗಿಸಿಕೊಂಡ ಜಡೆ ಮಾತ್ರ ಎಂದೋ ಧರಿಸಿದ ಮಾಸಿದ ಅರಿಶಿನ ಕುಂಕುಮದಲ್ಲಿಯೇ ಬೀಗಿ ನಿಂತಿತ್ತು. ಜೋಗತಿಯರು ಅವಳ ಫೆಂಟಿ-ಫೆಂಟಿಯಂಥ ಕೂದಲನ್ನೇ ಹಿಡಿದು ಎತ್ತಿದರು. ಗರ್ಭಗುಡಿಯಂಗಳದ ‘ರಣರಂಗ’ವನ್ನು ಎಲ್ಲರೂ ಸುಮ್ಮನೇ ನೋಡುತ್ತಿದ್ದರು. ಮೌಶಿಯ ಕಣ್ಣುಗಳು ತೆರೆದೇ ಇದ್ದವು ಭಯಂಕರವಾಗಿ. ಮಾಪುರಿಯಂತೆ……..
……..ಪುತಳಾಬಾಯಿ ಇದೆಲ್ಲವನ್ನೂ ಕಣ್ಣಾರೆ ಕಂಡಿದ್ದಳು. ಮನಸು ಕುದಿವ ಎಣ್ಣೆಯಂತೆ ಖಳಖಳಿಸುತ್ತಲೇ ಇತ್ತು. ಬರು-ಬರುತ್ತ ಮೌಶಿ ಯಾಕೋ ಬಹಳ ಕಾಡುತ್ತಿದ್ದಳು. ತನ್ನ ದಿನಚರಿಯ ಪುಟಗಳು ಅಲ್ಲೊಂದು-ಇಲ್ಲೊಂದರಂತೆ ಬಿಚ್ಚಿಕೊಳ್ಳುತ್ತಿದ್ದವು…….
………ಚುರುಕು ನಡಿಗೆಯ ಹಿಮ್ಮತ್ತಿನ ಸ್ವಭಾವದ ಪುತಳಾ, ಬಾಳೆಗಂಟಿಗೆ ಅವ್ವನ ಹಳೆಕಾಲದ ಬೆಳ್ಳಿಡಾಬು ಬಿಗಿದು, ಕಾಲಲ್ಲಿ ನುಗ್ಗಾದ ರುಳಿ-ಪೈಜಾಣಾ ಧರಿಸಿ, ಉಲ್ಲಾಸದಿಂದಲೇ ಎಲ್ಲರೊಂದಿಗೆ ಹೆಜ್ಜೆಹಾಕುತ್ತಿದ್ದಳು. ಬಾಜಾರು-ಬಾಜಾರ್ ತಿರುಗಿ ಹೊತ್ತಿಳಿದು ಹೈರಾಣಾಗಿ ಮನೆಗೆ ಬಂದರೆ, ಇವಳು ಬರುವುದನ್ನೆ ಕಾಯುತ ಕೂಡುವ ಮನೆಮಂದಿ. ಜಗಾ ಹೊತ್ತ ಪರಡಿಯೊಳಗಿನ ಹಿಟ್ಟು, ಭಂಢಾರದ ಸಣ್ಣ ಬುಟ್ಟಿ, ಎಣ್ಣೆ ಖಮಟಿನಲ್ಲಿ ಮಿಂದಂತಿರುವ ಟೊಂಕದ ಚಂಚಿ ಹೀಗೆ ಎಲ್ಲವೂ ಜಾಡಿಸಿದ ಮೇಲೆ ರೊಕ್ಕದ ಬಂದಿಗಳು, ಕೆಲವು ನೋಟುಗಳು ಸಿಗುತ್ತಿದ್ದವು. ಹೀಗೆ ಅಂಗಡಿಯವರು ಹಾದಿಹೋಕರು ಹಾಕಿದ ಭಿಕ್ಷೆಯ ಹಣ ಎಲ್ಲವನ್ನೂ ಅಪ್ಪನ ಕೈಗೆ ಕೊಡುತ್ತಿದ್ದಳು. ಸುತ್ತಾಡಿ ಥಕಾಯಿಸಿರುತ್ತಿದ್ದಳು. ಪಡಸಾಲೆಯ ಬೀಸಾಕಲ್ಲಿಗೆ ತಲೆಯಿಟ್ಟರೆ ಸಾಕು ನಿದ್ದೆಯೆಂಬುದು ಬಲೆಯಂತೆ ಹೆಣೆಯುತ್ತಿತ್ತು.

ಪುತಳಾ ಬಹಳೇ ವ್ಯಾಕುಲದಲ್ಲಿರುತ್ತಿದ್ದಳು. ಬೇಡವಾದರೂ ಬಾಗಿಲು ಬಡಿಯುವವರು, ಹಾದಿ-ಬೀದಿಯಲ್ಲಿ ಸನ್ನೆ ಮಾಡುವವರು, ಬಂದು ಹೋಗುವಾಗ ಖಾಲಿ ಕಿಸೆ ತೋರಿಸುವವರು ಇದ್ದೇ ಇದ್ದರು. ‘ದೇವ್ರ ಹೆಂಗಸೂರಿಗೇನ ಕಮ್ಮಿಯಿಲ್ಲಪೋ. ಉಳ್ಳವರ ಮನ್ಯಾನ ದಾಗಿನು-ದಾಸ್ತಾನು ಎಲ್ಲ ಅವರ ಮನಿನೇ ಸೇರ್ಯಾದ. ಕೈ ಬೀಸದೂರ ಕೈಲಾಸ’ ಅಂತ ವ್ಯಂಗ್ಯ ಆಡುವವರ ಸಂಖ್ಯೆಗೂ ಕಮ್ಮಿಯೇನಿರಲಿಲ್ಲ.
ಹೆಜ್ಜೆ ಹೆಜ್ಜೆಗೂ ದೇವದಾಸಿ ಎಂಬುದನ್ನು ನೆನಪಿಸುವಂತೆ ಕಾವಲು ಕೋಟೆಯಾಗಿ ಜಡೆಯು ಬೆನ್ನಿಗೆ ಚುಚ್ಚಿ ಎಚ್ಚರಗೊಳಿಸುತ್ತಿತ್ತು. ಒಮ್ಮೊಮ್ಮೆ ಮದುವೆಯಾಗಿ ಎಲ್ಲರಂತಿರುವ ಬಯಕೆ ಬಂದಾಗ ಅವ್ವ ‘ದೇವ್ರ ಹೆಣ್ಮಗಳು ಮದುವಿ ಆದ್ರ ನಡುಗಂಬ ಉರಿತದ.’ ಅಂತ ಬಾಯಿ ಮುಚ್ಚಿಸುತ್ತಿದ್ದಳು.
ಒಂದು ದಿನ ಕಿರಾಣಿ ಅಂಗಡಿಯ ಮಾಲಿಕ ಲಿಂಗಣ್ಣನ ದುಕಾನಿನ ಮುಂದೆ ಪರಡಿ ಹೊತ್ತು ಬಂದ ಪುತಳಾಗೆ ಹತ್ತು ರೂಪಾಯಿ ಹಾಕಲು ಕೈಯೆತ್ತಿದವನು ಅದೇಕೋ ಚಿತ್ತವಿಟ್ಟು ಅವಳನ್ನೇ ನೋಡುತ ‘ನೀ ಸಣ್ಣೂರಾಕಿ ಅಲ?’ ಕೇಳಿದನು. ‘ಹೊಯಿಂದರಿ ಸಾವ್ಕಾರಾ’ ಅಂದು ಪುತಳಾ ಹೊಳ್ಳಿ ಹೊಂಟಳು. ಮರುದಿನದಿಂದ ಪುತಳಾ ಬರುವುದನ್ನೇ ಕಾದು ನಿಂತವನ ಹಠಕ್ಕೆ ಇವಳು ಕರಗಿದಳು. ಒಲವಿನ ಪರಸ್ಪರ ಸಾಂಗತ್ಯಕ್ಕೆ ಇವಳಿಗೂ ನೆಮ್ಮದಿ ತಂದಿತ್ತು. ಎಲ್ಲವೂ ಸಾಕೀಗ. ಇದಷ್ಟಕ್ಕೇ ಕಡೆಯಾಗಲಿ ತಾಯೀ. ಸಾಯಾತನಕ ನಿನ ಸೇವಾ ಮಾಡ್ತಿನಿ ಅಂತ ಮಾಪುರಿಗೆ ಮೊರೆಯಿಟ್ಟಳು. ಇವಳು ನಂಬಿದಳು. ನೆಚ್ಚಿ ನಡೆದಳು. ಪರಡಿ ಹೊತ್ತು ಬಾಜಾರಿಗೆ ಹೋಗುವುದನ್ನು ಬಿಟ್ಟಳು.. ಲಿಂಗಣ್ಣನ ಬೇಕು ಬೇಡಗಳೇ ಅವಳಿಗೆ ಪ್ರಧಾನ. ಓಣಿಯವರು ಇತರ ಜೋಗತಿಯರು ಕಿಸಕ್ಕೆಂದು ನಕ್ಕು ಅಬಬಬಬಾ ಪುತಳಿ, ದೇವಿ ಸೇವಾ ಬಿಟ್ಟು ಸಂಸಾರಸ್ಥೆ ಆಗ್ಯಾಳಪೊ. ಬೆಂಕಿಯಂಥ ಮಾಪುರಿ ಸುಮ್ಮ ಇರತಾಳಾ? ದೇವದಾಸಿ ಅಂದ್ರ ದೇವದಾಸಿ ಹಂಗಿರಬೇಕು ಅಂತ ವ್ಯಂಗ್ಯವಾಡಿದರು. ಘನಂದಾರಿ ಗಿರಾಕಿ ತರುವ ಯಲ್ಲಮ್ಮ ಜೋಗತಿ ಬರಿಗೈಯಲ್ಲಿ ವಾಪಾಸ್ಸಾಗಿ ಹಲ್ಲು ಮಸೆದಳು.
ಅದೊಂದು ದಿನ ನೆರೆಮನೆಯ ಮರೆಮ್ಮನ ಒತ್ತಾಯಕ್ಕೆ ‘ಹಿಂಗೆ ಹೋಗಿ ಬರಾಣಾ’ ಅನ್ನಿಸಿ ಬಾಜಾರಿಗೆ ಹೊರಟಳು. ವರ್ಷಗಟ್ಟಲೆಯಿಂದ ನಾಪತ್ತೆಯಾಗಿದ್ದವಳು ಕಾಣಿಸಿಕೊಂಡಿದ್ದಕ್ಕೆ ಯಾರೆಲ್ಲ ಮಾತಾಡಿಸಿದರು. ಹೊತ್ತು ಹೋಗಿದ್ದು ಗೊತ್ತಾಗಲೇ ಇಲ್ಲ. ‘ರಾತ್ರಿ ಅವ್ರು ಬರ್ತಾರ. ಜಲ್ದಿ ಹೋಗಬೇಕು’ ಅಂತ ನೆನಪಾಗಿ ಭರಾಭರಾ ರಸ್ತೆ ದಾಟಿ ಹೊಂಟಳು. ದೂರದಿಂದ ಲಿಂಗಣ್ಣ ಬರುವುದು ಕಾಣಿಸಿತು. ಇವಳು ಏನೋ ಹೇಳಲು ಮುಂದಾಗಬೇಕು ಅಷ್ಟರಲ್ಲಿ ಸಮೀಸಿದ ಲಿಂಗಣ್ಣ ‘ಯಾಂವನ ಬಲ್ಲಿ ಮಕ್ಕೊಲಾಕ ಬಾಜಾರಕ ಬಂದಿದಿ?’ ಎಂದು ಇದ್ದಕ್ಕಿದ್ದಂತೆ ಬಯ್ಯುತ ಅವಳ ಗಲ್ಲಕ್ಕೆ ರೊಂಯ್ಯೆಂದು ಭಾರಿಸಿದನು. ಈ ಧಾಳಿ ಪುತಳಾಗೆ ಅನಿರೀಕ್ಷಿತವಾಗಿತ್ತು.
‘ಏಸ್ ಮಂದಿಗಿ ಸೆರಗ ಹಾಸಿದಿ? ತಿರಗಿ ಭಿಕ್ಕಿ ಉಂಡವರಿಗಿ ಮನಿ ಅಡಿಗಿ ಹ್ಯಾಂಗ ಸೈ ಹತ್ತದ? ಕಂಡಲ್ಲಿ ಕಾಲ ಕುಣಸದಾಕಿಗಿ ಗರತಿ ಗುಣ ಹ್ಯಾಂಗ ಬರತದ? ಖಾಂದಾನಿ ಮನಷ್ಯಾ ನಾ ಅಂಬಾದು ಖಬರಿಲ್ಲ? ನಾ ಇಟಕೊಂಡ ಸೂಳಿ ನೀ. ಅದಕ್ಕಂತರೆ ನಿನ್ನಂಥವರಿಗಿ ದೇವ್ರ ಸೇವಾಕ ಹಚ್ತಾರ. ನನ್ನ ಕಿಮ್ಮತ್ತಿಗಿ ಧಕ್ಕಿ ತರಲಾಕ ಬಾಜಾರಕ ಬಂದಿದಿ…….’ ಅವಳ ಮರದ ಕೊಂಬೆಯಂಥ ಕೂದಲನ್ನು ಹಿಡಿದೆಳೆದು ನೆಲಕ್ಕೆ ಕೆಡವಿದನು. ಪುತಳಾ ನೆಲಕ್ಕೆ ಬಿದ್ದಳು. ಲಿಂಗಣ್ಣ ಅಸಹ್ಯ ಬರಿಸುವಂತಹ ಮತ್ತೆಲ್ಲ ಮಾತುಗಳನ್ನು ಆಡುತ್ತಿದ್ದನು. ಆಘಾತಕ್ಕೊಳಗಾದ ಇವಳಿಗೆ ಯಾವುದೂ ಕೇಳಿಸದಂಗೆ ಆಗಿತ್ತು. ತಮಾಷಾದಂತೆ ನಿಂತು ನೋಡಿದ ಜನರು ಮುಸಿ ಮುಸಿ ನಗುತ ಕರಗಿದರು.
ಪುತಳಾಗೆ ಒಮ್ಮೆಲೆ ಮುಗಿಲು ಮುರಿದು ಮೈಮೇಲೆ ಬಿದ್ದಂಗಾಯ್ತು. ಮಣ್ಣು ಕಣ್ಣಲ್ಲಿ ಹೊಕ್ಕು, ಉಸುಕಿನಲ್ಲಿ ಅಂಗೈ ತರಿದು ಗಲ್ಲದ ಏಟು ಧಗ್ಗೆನ್ನುವ ಕೊಳ್ಳಿಯಾಗಿ, ಹೆಜ್ಜೆಗಳು ನೆಲ ಒದೆಯುತ ಸಾಗಿದವು. ಬೆನ್ನಿಗೆ ತೂರಾಡುವ ಜಡೆಯು ಗಾಯದ ಮೇಲೆ ಉಪ್ಪಿನಂತೆ ಬಿದ್ದ ಕಡೆ ಬಡಿದು ಮತ್ತಷ್ಟು ನೋವಾಗುತಿತ್ತು. ಗಹಗಹಿಸುವ ದನಿಗಳು ಕತ್ತಲೆಯಲ್ಲಿ ಕೈಯಾಡಿಸುತ ಬೆನ್ನಟ್ಟಿದಂತಾಗಿ ಗುಡಿಸಿಲಿಗೆ ಬಂದು ಬಾಗಿಲಿಕ್ಕಿ ನೆಲದ ಮೇಲೆ ಬಿದ್ದು ಭೋರೆಂದು ಅತ್ತಳು. ……….
ನಸುಕಿನಲ್ಲಿ ಬಂದವನು ಲಿಂಗಣ್ಣನೇ ಆಗಿದ್ದನು. ‘ನಿಂದ ಒಳ್ಳೆದ ಸಲ್ಲ್ಯಾಕನೇ ಹೊಡದಿನಿ… ಮೊದಲೇ ದೇವದಾಸಿ. ಏನ್ ಮಾಡಿಲ್ಲಂದರ್ನೂ ಮಂದಿ ಸಂಶಯ ಮಾಡ್ತಾರಿಲ್ಲ…..’ ರಮಿಸಲು ಬಂದಾಗ ಪುತಳಾ ಉರಿವ ಕುಂಡವಾಗಿದ್ದಳು……..
ಈಪರಿ ಹೊಡೆಯುವುದು ಮೊದಲ ಸಲವೇನಾಗಿರಲಿಲ್ಲ. ಸೋಪತಿಯಾದ ಹೊಸತರಲ್ಲಿ ಹುಚ್ಚುಪ್ರೀತಿಯೆಂಬುದು ತುಂಬಿತುಳುಕಾಡಿತ್ತು. ಆದರೆ ಬರು-ಬರುತ ಪಕ್ಕದ ಮನೆಯ ಗಂಡಸರು ಮಾತಾಡಿದರೆ ಲಿಂಗಣ್ಣನ ಹಣೆಗೆ ಗಂಟು ಬರುತಿತ್ತು. ಖರ್ಚಿಗೆ ರೊಕ್ಕ ಬೇಕು ಅಂದಾಗ, ‘ಯಾಕ? ಈಸ್ ದಿನಾ ಗಳಿಸಿದ್ದು ಏನ್ ಮಾಡಿದಿ?’ ವ್ಯಂಗ್ಯವಾಡುತಿದ್ದ. ಆಗೆಲ್ಲ ಮೂಲೆಯಲ್ಲಿ ತುಕ್ಕುಹಿಡಿದ ಕುಡುಗೋಲು ತಗೊಂಡು ಕೂಲಿ ಹುಡುಕಿ ಹೊರಡುತ್ತಿದ್ದಳು. ಇವಳ ಮೇಲೆ ನಿರ್ಭರವಾಗಿದ್ದ ಮನೆಯವರೂ ಕ್ರಮೇಣ ಇವಳನ್ನು ನಿಂದಿಸತೊಡಗಿದರು. ಕೂಲಿ ಮಾಡಿ ತಂದ ರೊಕ್ಕದಲ್ಲಿ ಹೊಟ್ಟೆ ತುಂಬಿಸಿಕೊಳ್ಳಬೇಕೆನ್ನುವಂತ ದಿನಗಳೂ ಬಂದವು. ಹೈರಾಣಾಗುವುದೂ ತಪ್ಪಲಿಲ್ಲ. ವಿಚಿತ್ರ ನಮೂನೆಯ ಒದ್ದಾಟ…… ಆದರೂ ಬದುಕಿನ ಬಂಡಿ ನಡೆಸುತ್ತಿದ್ದಳು. ಲಿಂಗಣ್ಣ ಬಂದಾಗ ಎಲ್ಲವೂ ನೀಟಿರಬೇಕು. ಇಲ್ಲದಿದ್ದರೆ ಆರಂಭದಲ್ಲಿ ಬಯ್ಯುತ್ತಿದ್ದವನು ಕ್ರಮೇಣ ಕೈಯೆತ್ತತೊಡಗಿದ. ಬಯಸಿ ಕಟ್ಟಿಕೊಂಡವಳಿಗೆ ಬಿಡಿಸಿಕೊಳ್ಳುವುದು ಕಷ್ಟವಾಗತೊಡಗಿತು.
ಇಂದು ನಡುರಸ್ತೆಯಲ್ಲಿ ತನ್ನನ್ನು ಎಳೆದಾಡಿ ಹೊಡೆದವನು ಮತ್ತೆ ಸಮಜಾಯಿಸುತ್ತಿರುವುದು ಹೇಸಿಗೆಯೆನಿಸಿತು. ಸರಿಕ ಜೋಗತಿಯರು, ರಸ್ತೆಯ ಜನ ನೋಡಿ ಗಹಗಹಿಸಿ ನಗುವಂತೆ ಮಾಡಿದ್ದು ಪುತಳಾಗೆ ಸಹಿಸುವುದು ಆಗಲೇ ಇಲ್ಲ. ನುಂಗಿದ ನೋವು ಅವನ ಎದೆಗೆ ಗುರಿಯಿಡಲು ಸಜ್ಜಾಯಿತು……..
………..ಪುತಳಾ ಈಗ ತಲೆಯೆತ್ತಿ ಎದ್ದು ಕೂತಳು. ಅಲ್ಲಿವರೆಗೂ ಇವಳ ಬೆನ್ನ ಮರೆಯಲ್ಲಿದ್ದ ಕೌದಿಯ ನಡುವಿನ ‘ಪಗಡಿ ಬಾಜಾರ’ ಚಿತ್ರವು ಢಾಳಾಗಿ ಕಾಣಿಸತೊಡಗಿತು.
***
ಪಂಚಾಯತಿ ಕಟ್ಟೆಯ ಮೇಲೆ ಊರ ಹಿರಿಯರು. ಅವರೊಂದಿಗೆ ಲಿಂಗಣ್ಣ. ಪೂಜಾರಿ. ಸುತ್ತ ನೆರೆದ ಜನಸ್ತೋಮ. ದೇವದಾಸಿಯಾದವಳು ಲಿಂಗಣ್ಣನಂಥ ಸಭ್ಯ ಗೃಹಸ್ಥನನ್ನು ಅಪಮಾನಗೊಳಿಸಿದ್ದು ತಪ್ಪು. ‘ಊರು ಕಾಯುವ ಮಾಪುರಿ ಶಿಕ್ಷೆ ಏನೂಂತ ಅಪ್ಪಣೆ ಕೊಡಲಿ’.
ಹಿರಿಯ ಜೋಗತಿಯರು ಹಲ್ಲು ಕಚ್ಚಿ ಕೂತಿದ್ದರು. ‘ಕರಸ್ರಿ ಪುತಳಿಗೆ……’ ಪೂಜಾರಿಯ ಮೈ ತುಂಬತೊಡಗಿತು. ದೇವದಾಸಿ ನೀತಿ-ನಿಯಮಗಳನ್ನು ಮುರಿಯುತ್ತಿರುವ ಪುತಳಾನ ಕಾರಣದಿಂದ ಉಳಿದ ದೇವದಾಸಿಯರ ಗತಿ ಏನಾಗುವುದೋ…..?ಬೆಂಕಿಯಂಥ ಮಾಪುರಿ ಹುರದ ತಿಂತಾಳ.’ ಗುಜುಗುಜು ನಡೆದಿತ್ತು.
ಪುತಳಾಗೆ ಕರೆಯಲು ಹೋದವರು ಬರಿಗೈಯಲ್ಲಿ ವಾಪಾಸ್ಸಾದರು. ‘ಪಾತಾಳದಾಗ ಹೋದರ್ನೂ ಹಿಡದ ತರ್ರಿ……’ ಪುಜಾರಿ ಮೈಯಲ್ಲಿ ಮಾಪುರಿ ಪೂರಾ ಪ್ರವೇಶ ಮಾಡಿದಂತೆ ತೂರಾಡತೊಡಗಿದನು. ಎಲ್ಲರೂ ಭಯ-ಭಕ್ತಿಯ ಮೊತ್ತವಾಗಿ ಕಂಪಿಸತೊಡಗಿದರು.
ಅಷ್ಟರಲ್ಲಿ, ‘ಪುತಳಾ ಗುಡ್ಯಾಗ ಹಳಾ……’ ಅಂತ ಯಾರೋ ಎತ್ತರದ ದನಿಯಲ್ಲಿ ಹೇಳಿದರು. ನೆರೆದವರು ಹಾಂ.. ಎನ್ನುತ ಮಾಪುರಿ ಗುಡಿಯತ್ತ ಧಾವಿಸಿದರು. ಗರ್ಭಗುಡಿ ಲಿಗಿಲಿಗಿ ಬೆಳಕಿನಿಂದ ಪ್ರಜ್ವಲಿಸುತಿತ್ತು. ಪುತಳಾ ದೇವಿಯ ಮುಂದೆ ಕೂತಿದ್ದಳು. ಅವಳ ಕಣ್ಣುಗಳು ಗರಗರ ತಿರುಗುತ್ತಿದ್ದವು. ಸಮೇವಿನಲ್ಲಿ ದೀಪ ಧಗಧಗಾ ಉರಿಯುತಿತ್ತು.
ಜನ ದಿಕ್ಕೆಟ್ಟು ನೋಡತೊಡಗಿದರು. ಪುತಳಾ ಎರಡೂ ಕೈಯೆತ್ತಿ ಮಾಪುರಿಯ ಕಟ್ಟಿಗೆಯ ಪಾದಕ್ಕೆ ಬಡಿದಳು. ಡಜನ್ನುಗಟ್ಟಲೆ ಬಳೆಗಳು ಖಳಳಳಳ ಚೂರಾದವು.. ಹೊರಗೆ ಜನರು ಹಾಹಾ ಎಂದು ಹೌಹಾರುವ ಮುನ್ನವೇ ಉರಿವ ದೀವಟಿಗೆಯೆತ್ತಿ ಬಾಗಿಲು ದಾಟಿ ಬಂದಳು. ಯಾರ್ ಬರ್ತಿರಿ ಬರ್ರ್ಯೊ….. ಬಸವಿ ಬಂದಾಳ ಬೀದಿಗಿ. ಹಿಮ್ಮತ್ತಿದ್ದವರು ಮುಂದ ಬರ್ರಿ. ನನಗ ಇಟಕೊಂಡವರೂ ಬರ್ರಿ. ಮೀಸಿ ಹರದು ಹಗ್ಗ ಹೊಸಿತಿನಿ……ಮೈ ಮುಟ್ಟದವರಿಗಿ ಸುಮ್ಮನ ಬಿಡಾಲಾ……
ಮಾಪುರಿ ಬಂದಿದ್ದು ಯಾರ ಮೈಮೇಲೆ?. ಪೂಜಾರಿಯ ದನಿಯು ಗೌಜು ಗದ್ದಲದಲ್ಲಿ ಕೇಳಿಸುತ್ತಿರಲಿಲ್ಲ.
ಚಿಕ್ಕಂದಿನಿಂದ ಪುತಳಾನ ತಲೆಗೆ ನೇತಾಡುತ್ತಲೇ ಬೆಳೆದ, ಎಣ್ಣೆ ಅರಿಶಿನಿ-ಕುಂಕುಮದಿಂದ ಬೀಗಿದ, ಅವಳ ದೇವದಾಸಿತನಕ್ಕೆ ಮೊದಲ ಲಾಂಛನವಾಗಿ-ಸಾಕ್ಷಿಯಾಗಿ-ಕಾರಣವೂ ಆಗಿ ಮೆರೆದಾಡಿದ್ದ ಕೂದಲನ್ನು ಬೆಂಕಿಯಂಥ ಮಾಪುರಿಯ ಮುಂದೆಯೇ ಕರ್ರರ್ರನೇ ಕತ್ತರಿಸಿಕೊಂಡಳು. ದೇವದಾಸಿ ಪುತಳಾಬಾಯಿಗೆ ಶಿಕ್ಷೆ ಕೊಡಲು ಬಂದವರು ದಿಕ್ಕೆಟ್ಟು ನಿಂತರು.
ಪುತಳಾ ಉರಿವ ಪಂಜು ಮುಂದೆ ಮಾಡಿದಳು. ಮತ್ತು ಹೆಬ್ಬಾವಿನಂಥ ಕೂದಲಿನ ಹೆಡೆಯನ್ನು ಉರಿವ ದೀವಟಿಗೆಯ ಮೇಲೆ ಹಿಡಿದಳು. ನೆರೆದ ಜನತೆ ಒಂದೇ ಉಸಿರಿಗೆ ಹಾಂ….. ಎಂದಿತು. ಕಂಡು-ಕೇಳರಿಯದ ಘಟನೆಗೆ ಊರಿಗೆ ಊರು ಉಧೋ ಉಧೋ ಎಂದು ಸಾಕ್ಷಿಯಾಗತೊಡಗಿತು. ಉರಿವ ದೀವಟಿಗೆಯು ತನ್ನ ಕೆನ್ನಾಲಿಗೆ ಚಾಚತೊಡಗಿತು. ಎಷ್ಟೋ ವರ್ಷಗಳಿಂದ ಜಡೆಯಲ್ಲಿ ಮನೆಮಾಡಿಕೊಂಡಿದ್ದ ಹುಳು-ಹುಪ್ಪಡಿ, ಎಣ್ಣೆ, ಭಂಢಾರ, ಅರಿಶಿನ-ಕುಂಕುಮ ಸರ್ವೊಂದು ಉರಿವ ಕೆನ್ನಾಲಿಗೆಯಲ್ಲಿ ಛಟ್-ಫಟ್ ಛಟಾರೆಂದು ಉರಿದುರಿದು ನೆಲಕ್ಕೆ ಬೀಳತೊಡಗಿದವು.






ಕಥೆ ಬಹಳ ಚೆನ್ನಾಗಿ ಮೂಡಿಬಂದಿದೆ.ಹಂತ ಹಂತವಾಗಿ ಒಬ್ಬ ದೇವದಾಸಿಯ ಬದುಕು ನರಳಿದ ಬಗೆಯನ್ನು ಚಿತ್ರಿಸಿದೆ.ವೈಯುಕ್ತಿಕವಾಗಿ ಪುತಳಾ ಬಂಡೆದ್ದಳು.ಅವಳ ಮೌಶಿಯ ಪ್ರತಿಭಟನೆ ಅವಳಿಗೆ ಧೈರ್ಯ ತುಂಬಿದೆ.( ಇದಂತೂ ಕಥೆಯ ಅತ್ಯಂತ ಗಟ್ಟಿಯಾದ ಸೃಜನೆ ) ಆದರೆ ಇದು ತೀರಾ ಅಪರೂಪದ ಘಟನೆ.ಉಳಿದ ದೇವದಾಸಿಯರ ಪ್ರತಿಕ್ರಿಯೆಗಳನ್ನು ನೋಡಿದರೆ ಇದು ತಿಳಿಯುತ್ತದೆ. ಅವರೂ ಬಿಡುಗಡೆ ಬಯಸುತ್ತಾರೆ. ಆದರೆ ಮಾಪುರ ತಾಯಿ ಬಿಡುವಳೇ !
ಮನಮುಟ್ಟುವ ಚಿತ್ರಣ. ಜೋಗಿತಿಯ ಮೈಮನದೊಳಗೆಲ್ಲಾ ಹೊಕ್ಕಾಡಿ ಬಂದು ಅವಳ ವೇದನೆಯನ್ನೂ, ರೋಷವನ್ನೂ, ಪ್ರತೀಕಾರವನ್ನು ಅವಳ ಪರವಾಗಿ ಅಭಿವ್ಯಕ್ತಿಸಿದಂತಿದೆ.
ಕತೆ ತುಂಬಾ ಚೆನ್ನಾಗಿದೆ…
Nirupane channagide madam…
tejashree
Kathe mana kalakuvantide.
NIJAVAGI NANU HALLU KADIYUTTALE KATE ODIDENENO!GATTIYADA KATE.
kathe katheyanthale annisada haage … edure nadeethideyeno anno haage ….
‘aarada wadala uri…’ asankhyata dheera devadaasiyara badukugalu namma naduve ive. barevaagaloo aksharagalu bikkuttale yeraka hoydive..
nimma pratikriyegalige dhanyavaadagalu…
neela