ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೆ ನಲ್ಲತಂಬಿ ಸರಣಿ- ಹುಲಿಯ ಪ್ರಶ್ನೆಗಳು

ಮೂಲ: ಎಸ್ ರಾಮಕೃಷ್ಣ 

ಕನ್ನಡಕ್ಕೆ: ಕೆ ನಲ್ಲತಂಬಿ 

5

ಬೇಟೆ ಎಂಬುದು ಸಾಹಸದ ಕ್ರೀಡೆಯೇ? ಅಥವಾ ಕೊಲೆಯೇ? ಹಸಿವಿಗಾಗಿ ಮೃಗಗಳನ್ನು ಕೊಲ್ಲುವುದಕ್ಕೂ, ಹೆಮ್ಮೆಪಡುವುದಕ್ಕಾಗಿ ಕೊಲ್ಲುವುದಕ್ಕೂ ವ್ಯತ್ಯಾಸ ಇದೆಯಲ್ಲವೇ? ಆಳುವ ಅರಸ ಬೇಟೆ ಆಡುವುದು ಸರಿಯೇ? ಈ ಪ್ರಶ್ನೆಗಳನ್ನು ಇತಿಹಾಸದ ಪುಸ್ತಕಗಳಲ್ಲಿ ಹುಡುಕಿ ಅಲೆದು ಮೋಸ ಹೋಗಿದ್ದೇನೆ. 

ಪರಂಗೀಯರಿಗೆ ಭಾರತ ಎಂದ ಕೊಡಲೇ…. ಒರಟು ಆನೆ, ಹುಲಿ, ಹಾವು ಇವೇ ಗುರುತಾಗುತ್ತವೆ. ಅವರ ಅನುಭವದ ಟಿಪ್ಪಣಿಗಳಲ್ಲಿ ಹಾಗೆಯೇ ಬರೆದಿದ್ದಾರೆ. ಅದನ್ನು ಓದುವ ವಿದೇಶೀಯರೆಲ್ಲರಿಗೂ ಭಾರತ ಎಂದರೆ ನಾಗರಿಕತೆಯಿಲ್ಲದ ಮನುಷ್ಯರು ವಾಸಿಸುವ ಒಂದು ದಟ್ಟವಾದ ಕಾಡು ಎಂದು ತೋರಬಹುದು. 

ಭಾರತೀಯರನ್ನು ಸುಧಾರಣೆ ಮಾಡಿ ನಾಗರೀಕರಾಗಿಸಿದ್ದು ಬ್ರಿಟೀಷ್ ಸರಕಾರ  ಎಂಬ ಸುಳ್ಳನ್ನು ಮತ್ತೆ ಮತ್ತೆ ಬ್ರಿಟೀಷ್ ಚರಿತ್ರೆಯ ಬರಹಗಳು ಹೇಳುತ್ತಲೇ ಬಂದಿವೆ. ಆಹಾರಕ್ಕಾಗಿ ಬೇಟೆಯಾಡುವುದು ಬುಡಕಟ್ಟಿನ ಜನಗಳಿಂದ ಮುಂದುವರೆಯುತ್ತಿದೆ. ಆದರೆ, ಹಣವಂತರ ಮನರಂಜನೆಯಾಗಿ, ಶೌರ್ಯವನ್ನು ಸ್ಥಾಪಿಸುವ ಸಾಹಸದ ಕ್ರೀಡೆಯಾಗಿ ಹೇಗೆ ಬೇಟೆ ಬದಲಾಯಿತು! ವನ್ಯ ಮೃಗಗಳು ಇಂದು ಅಂತಾರಾಷ್ಟ್ರೀಯ ಮಾರುಕಟ್ಟೆಯ ವಸ್ತುಗಳಾಗಿರುವುದು ಯಾಕೆ? ಇವು  ನಾವು ಅರಿತುಕೊಳ್ಳಬೇಕಾದ ಸತ್ಯ. 

ಯಾವ ಹುಲಿಯನ್ನು ರಾಷ್ಟ್ರೀಯ ಮೃಗವಾಗಿ ಹೆಮ್ಮೆಯಿಂದ ಇಂದು ಪರಿಗಣಿಸುತ್ತೇವೆಯೋ, ಅದು ನೂರಾರು ವರ್ಷಗಳು ಬೇಟೆಯಾಡುತ್ತಿರುವ ಮನುಷ್ಯರಿಂದ ಜೀವ ಉಳಿಸಿಕೊಳ್ಳಲು ತಪ್ಪಿಸಿಕೊಂಡು  ಓಡಿದ ಓಟವನ್ನೂ, ಪಟ್ಟ ಗಾಯಗಳನ್ನೂ, ಪಡೆದ ನೋವುಗಳನ್ನೂ ಅರಿತಿರುವಿರೇನು?  ಹಾಗೆ ಓಡಿದ ಹುಲಿಗಳ ಹೆಜ್ಜೆ ಗುರುತುಗಳ ಕೆಳಗೆ ನಾವು ಅರಿಯದ ಇತಿಹಾಸ ಮರೆಯಾಗಿದೆ. ಅಧಿಕಾರ ಮನುಷ್ಯರನ್ನು ಮಾತ್ರವಲ್ಲ, ಮೃಗಗಳನ್ನೂ ಸಹ ತನ್ನ ವಾಸಸ್ಥಳದಿಂದ ದೂರ ಮಾಡುತ್ತದೆ ಎಂಬುದೇ ಕಾಲ ನಮಗೆ ಮನದಟ್ಟು ಮಾಡಿಕೊಡುವ ಸತ್ಯ. 

ಇತಿಹಾಸದ ಪೂರ್ತಿ ಒಣಗದ ರಕ್ತದ ಪಂಜದ  ಗುರುತುಗಳಲ್ಲಿ ಹುಲಿಯ ಮೌನ ಪ್ರಶ್ನೆಗಳು ಹುದುಗಿವೆ. ಕಾಲ ಮರೆತು ಹೋದ ಆ ಪ್ರಶ್ನೆಗಳು ಮುಖ್ಯವಾದವು. ಅದಕ್ಕೆ ಮನಃಸಾಕ್ಷಿಯುಳ್ಳ ಮನುಷ್ಯ ಉತ್ತರಿಸಲೇ ಬೇಕು. ನಿಜವಾಗಲೂ ಪ್ರತಿ ಹುಲಿಯೂ ಮನುಷ್ಯನನ್ನು ನೋಡಿ ಕೇಳಬೇಕೆಂದುಕೊಳ್ಳುವುದು, ‘ಹಸಿದರೇ ಮಾತ್ರ ನಾವು ಬೇಟೆಯಾಡುತ್ತೇವೆ. ಅದೂ ಸಹ ಒಂದು ಜಿಂಕೆಯನ್ನೋ, ಮೊಲವನ್ನೋ.  ಆದರೆ ನೀವೋ ನಿಮ್ಮ ಮನರಂಜನೆಗಾಗಿ ಬೇಟೆಯಾಡುತ್ತೀರಿ. ಒಂದೆರಡನ್ನಲ್ಲ, ಒಂದೇ ಸಮಯದಲ್ಲಿ 40 ಮೃಗಗಳನ್ನೂ ಸಹ ಕೊಂದು ನಿಮ್ಮನ್ನು ಶೂರರನ್ನಾಗಿ ಗುರುತಿಸಿಕೊಳ್ಳುತ್ತೀರಿ ಎಂದರೇ, ನಮ್ಮಿಬ್ಬರಲ್ಲಿ ಯಾರು ಅಪಾಯಕಾರಿ?’ 

ಕಾಲ ಈ ಪ್ರಶ್ನೆಯನ್ನು ನಮ್ಮ ಮುಂದಿಟ್ಟಿದೆ. ಉತ್ತರ ತಿಳಿದಿದ್ದರೂ ನಾವು ಹೇಳಲು ನಿರಾಕರಿಸುತ್ತೇವೆ. ಹುಲಿಯನ್ನು ನೋಡಿ ಹೆದರಿ ನಡುಗಿದ ಕಾಲ ಹೋಗಿ, ಮನುಷ್ಯರನ್ನು ಕಂಡು ಹುಲಿ ಅಂಜಿ ಅಡಗುವ ಕಾಲ ಬಂದಿದೆ. ಒಂದು ಜೀವದ  ಅಳಿವು ಮತ್ತೊಂದು ಪ್ರಾಣಕ್ಕೆ ಚೆಲ್ಲಾಟವಾಗಿ ಬದಲಾಗಿದೆ. ಹೇರಳವಾಗಿ ಹಣ ಸಂಪಾಧಿಸುವ ಕಳ್ಳ ಸಂತೆಯಾಗಿ ಇಂದು ಬೇಟೆ ಬದಲಾಗಿದೆ. ಈ ವಿರೋಧಾಭಾಸ ಸ್ಥಿತಿ ಹೇಗೆ ಉಂಟಾಯಿತು? ಅದನ್ನು ಯಾಕೆ ಸಮಾಜ ಕಂಡುಕೊಳ್ಳುವುದೇ ಇಲ್ಲ? 

ಪ್ರಕೃತಿಯನ್ನು ದೋಚಿದ್ದು ಮೃಗಗಳನ್ನು ಆಹಾರವಾಗಿಸಿಕೊಂಡ ಆದಿವಾಸಿಗಳಲ್ಲ, ರಾಜ್ಯವಾಳಿದ ಅರಸರುಗಳು. ಭಾರತ ಬ್ರಿಟೀಷರ ಅಧೀನವಾದ ಮೇಲೆ ಮೊದಲ ಮಹಾರಾಣಿಯಾಗಿ ಇಂಗ್ಲೆಂಡಿನ ರಾಣಿ ಪದವಿ ವಹಿಸುತ್ತಾರೆ. ಅವರ ನಂತರ, ಇಂಗ್ಲೆಂಡಿನ ಮೂರು ರಾಜರು ಭಾರತವನ್ನು ಆಳಿದರು. ನಾಲ್ಕನೇಯ ರಾಜನಾಗಿ ಪದವಿ ವಹಿಸಿಕೊಂಡವನು ವೇಲ್ಸ್ (Wales) ರಾಜಕುಮಾರನೂ ವಿಕ್ಟೋರಿಯಾಳ ಮೊಮ್ಮಗನೂ ಆದ ಐದನೆಯ ಜಾರ್ಜ್.

ಆತ ಭಾರತಕ್ಕೆ ಬಂದು ಪಟ್ಟಾಭಿಷೇಕ ಮಾಡಿಕೊಳ್ಳಬೇಕೆಂದು ಬಯಸಿದ. ಅದಕ್ಕಾಗಿ 40 ದಿನಗಳು ಪ್ರಯಾಣ ಮಾಡಿ ಭಾರತಕ್ಕೆ ಬಂದು ಸೇರಿದ. 1911 ಡಿಸಂಬರ್ 12ನೆಯ ತಾರೀಕು ವಿಶೇಷ ದರ್ಬಾರ್ ವ್ಯವಸ್ಥೆ ಮಾಡಲಾಯಿತು. ರಾಜಕುಮಾರರು, ವೈಸ್ರಾಯ್ಗಳು, ಕಿರು ರಾಜರುಗಳು, ಐ.ಸಿ.ಎಸ್ ನೌಕರರು, ಭಾರತದ ಪ್ರಭುಗಳು ಒಳಗೊಂಡ ನೂರಾರು ಸಂಖ್ಯೆಯಲ್ಲಿ ದರ್ಬಾರ್ ಹಾಲ್ ನೆರೆದಿತ್ತು. ಹೊಸ ರಾಜ, ರಾಣಿಯರ ಪಟ್ಟಾಭಿಷೇಕ ವೈಭವದಿಂದ ನೆರವೇರಿತು. 

ತಮಿಳು ನಾಡಿನಲ್ಲೂ ಸಹ ಹಲವು ಜಾಗಗಳಲ್ಲಿ, ಐದನೆಯ ಜಾರ್ಜ್ ಪದವಿ ವಹಿಸುವುದನ್ನು ಸಂಭ್ರಮಿಸುವ ರೀತಿಯಲ್ಲಿ, ಪ್ರತಿಮೆಗಳನ್ನೂ, ಅಲಂಕಾರದ ಕಮಾನುಗಳನ್ನೂ ನಿರ್ಮಾಣ ಮಾಡಲಾಯಿತು. ಚೆನ್ನೈನಲ್ಲಿರುವ ಪನಗಲ್ ಉದ್ಯಾನವನದಲ್ಲಿ ಒಂದು ಕಾಲದಲ್ಲಿ ಐದನೆಯ ಜಾರ್ಜಿಗೆ ಎದೆಯಳತೆಯ ಪ್ರತಿಮೆ ಇತ್ತು. ಐದನೆಯ ಜಾರ್ಜಿಗೆ ಬೇಟೆಯಾಡುವುದು ಬಹಳ ಇಷ್ಟವಾದ ಮನರಂಜನೆ. ರಾಜಕುಮಾರನಾಗಿ ಭಾರತಕ್ಕೆ ಬಂದ ದಿನಗಳಲ್ಲಿಯೇ, ನೇಪಾಳದ ದಟ್ಟವಾದ ಕಾಡುಗಳಲ್ಲಿ ಬೇಟೆಯಾಡಬೇಕೆಂದು ವೇಲ್ಸ್ ಆಸೆಪಟ್ಟ.

ಕಾಲರಾ ರೋಗ ಹಬ್ಬಿದ್ದ ಸಮಯವಾದುದರಿಂದ, ಆತನ  ಬಯಕೆ ಆಗ ಈಡೇರಲಿಲ್ಲ. ಆದ್ದರಿಂದ, ರಾಜನಾದ ಕೂಡಲೇ, ಒಂದು ದೊಡ್ಡ ಬೇಟೆಯನ್ನು ನಡೆಸಬೇಕೆಂದು ಯೋಜನೆ ಮಾಡಿಕೊಂಡ. ಅದನ್ನು ನೇಪಾಳದ ರಾಜ ರಾಣಾ ಏರ್ಪಾಡು  ಮಾಡಿದರು. ಹಿಮಾಲಯದ ತಪ್ಪಲಿನಲ್ಲಿ ಇರುವ ದರಾಯ್ ಭಾಗದಲ್ಲಿ ಶಿಬಿರ ಹೂಡಿ ಬೇಟೆಯಾಡಲು ವ್ಯವಸ್ಥೆ ಮಾಡಲಾಯಿತು. ವಿಶೇಷ ರೈಲಿನಲ್ಲಿ ನೇಪಾಳದ ಗಡಿಯವರೆಗೆ ಹೋದ ಜಾರ್ಜ್, ಅಲ್ಲಿಂದ ಕಾರಿನಲ್ಲಿ ಕಾಡಿನೊಳಗೆ ನಿರ್ಮಾಣವಾಗಿದ್ದ ಶಿಬಿರಕ್ಕೆ ಹೋದ. 

ಈ ಬೇಟೆಗಾಗಿ 14,000 ಆಳುಗಳು, 300 ಆನೆಗಳು, ಡಬಲ್ ಬ್ಯಾರೆಲ್, ಸಿಂಗಲ್ ಬ್ಯಾರೆಲ್ ತುಪಾಕಿಗಳು ಎಂದು ಬಗೆ ಬಗೆಯಾದ ಆಯುಧಗಳನ್ನು ರಾಜನ ಜತೆಗೆ ಕಳುಹಿಸಿಕೊಡಲಾಯಿತು. ರಾಜ ಐದನೆಯ ಜಾರ್ಜ  ಬೇಟೆಯಾಡಲು ಬರುತ್ತಾನೆ ಎಂಬುದರಿಂದ, ನಾಲ್ಕು ದಿನಗಳ ಮೊದಲೇ 20 ಪ್ರತ್ಯೇಕ ಗುಂಪುಗಳು ಕಾಡಿನೊಳಗೆ ಹೋಗುತ್ತವೆ. ಹುಲಿಗಳ ಓಡಾಟಗಳನ್ನು ಅರಿಯುವುದಕ್ಕಾಗಿ, ಎಮ್ಮೆ ಕರುಗಳನ್ನು ನೀರಿರುವ ತೊರೆಯ ಸಮೀಪದಲ್ಲಿ ಕಟ್ಟಿಹಾಕುತ್ತಾರೆ. ಅದನ್ನು ಕೊಲ್ಲಲು ಹುಲಿ ಬರುತ್ತದೆಯೇ ಎಂದು ಗಮನಿಸುತ್ತಾರೆ. ಹುಲಿ, ಎಮ್ಮೆ ಕರುಗಳನ್ನು ಕೊಂದ  ಜಾಗಗಳನ್ನು ಗುರುತಿಟ್ಟುಕೊಳ್ಳುತ್ತಾರೆ. 

ಕೆಲವು ಜಾಗಗಳಲ್ಲಿ ಸಾಸಿವೆ ಎಣ್ಣೆಯನ್ನು ರಬ್ಬರ್ ಚೆಂಡುಗಳಲ್ಲಿ ಸವರಿ ಹುಲಿ ನೀರು ಕುಡಿಯಲು ಬರುವ ತೊರೆಗಳಲ್ಲಿ ತೇಲಬಿಡುವರಂತೆ. ಹುಲಿ ನೀರು ಕುಡಿಯುವಾಗ ಎಣ್ಣೆಯ ಪಸೆ ಮುಖದಮೇಲೆ ಹರಡಿಕೊಳ್ಳುತ್ತದೆ. ಹುಲಿ ಮುಖವನ್ನು ಕಾಲಿನಿಂದ ಒರೆಸುವಾಗ ಕಣ್ಣಿಗೆ ಎಣ್ಣೆಯ ಪಸೆ ಅಂಟಿಕೊಳ್ಳುತ್ತದಂತೆ. ನಂತರ ಆ ಹುಲಿಯಿಂದ ಸರಿಯಾಗಿ ನೋಡಲಾಗುವುದಿಲ್ಲ.  ಅದು ತಿಳಿದ ತಕ್ಷಣ ಅದನ್ನು  ಸುತ್ತಿ ಬಳಸುತ್ತಾರೆ. ಹುಲಿಯ ಬೇಟೆಗೆ ತಕ್ಕ ಕಾಲ ಜನವರಿಯಿಂದ ಮಾರ್ಚಿನವರೆಗೆ ಆ ಪರ್ವದಲ್ಲಿ ಹುಲ್ಲು ಸೊಂಪಾಗಿ ಬೆಳೆದಿರುವುದಿಲ್ಲ. ಪೊದರುಗಳು ಒಣಗಿ ಹೋಗಿರುತ್ತವೆ. ಆದ್ದರಿಂದ ಹುಲಿಗಳನ್ನು ಸುಲಭವಾಗಿ ಸುತ್ತುವರೆಯಬಹುದು. ಪೊದರುಗಳಿಗೆ ಬೆಂಕಿ ಹಚ್ಚಿ ಹುಲಿ ತಪ್ಪಿಸಿಕೊಂಡು ಹೋಗುವಾಗ ಅದನ್ನು ಕೊಲ್ಲುವುದು. ಅಥವಾ, ಹುಲಿ ಅವಿತಿರುವ ಜಾಗದ ಸುತ್ತ ಆನೆಗಳಿಂದ ಒಂದು ವೃತ್ತವನ್ನು ರಚಿಸಿ ಮಧ್ಯೆ ಹುಲಿಯನ್ನು ಓಡಲು ಬಿಟ್ಟು ಕೊಲ್ಲುವುದು. ಈ ಎರಡರಲ್ಲಿ ಯಾವುದನ್ನು ರಾಜ ಬಯಸುತ್ತಾನೋ… ಅದರಂತೆ ಬೇಟೆಯಾಡಬಹುದು ಎಂದು ನಿರ್ಧರಿಸಿಕೊಳ್ಳುತ್ತಾರೆ. 

ಹುಲಿಯನ್ನು ಆನೆಗಳಿಂದ ಸುತ್ತುವರೆಸಿ ಬಳಸಿ ನೇರವಾಗಿ ಬೇಟೆಯಾಡೋಣ ಎಂದು ರಾಜ ತೀರ್ಮಾನಿಸಿಸುತ್ತಾನೆ. ಅದೇ ಸಾಹಸ ಎನ್ನುತ್ತಾನೆ. ಅದರಂತೆ ಮೊದಲ ದಿನ, 300 ಆನೆಗಳನ್ನು ಕರೆದೊಯ್ಯಲಾಗುತ್ತದೆ. ಒಂದು ಆನೆಯ ಮೇಲೆ ಚಿನ್ನದ ಅಂಬಾರಿಯಲ್ಲಿ, ಐದನೆಯ ಜಾರ್ಜ್ ತುಪಾಕಿಯೊಂದಿಗೆ ಕುಳಿತುಕೊಳ್ಳುತ್ತಾನೆ. 300 ಆನೆಗಳು ಅವುಗಳ ಜತೆಜತೆಯಲ್ಲಿ ನಡೆಯುವ ಆಳುಗಳು, ಶಿಕಾರಿಗಳು, ಬಲಿಷ್ಠ ದೇಹದ ಗ್ರಾಮ ವಾಸಿಗಳು, ಬೇಟೆಯಾಡಿದ ಹುಲಿಯ ಚರ್ಮವನ್ನು ಸುಲಿಯಲು ವಿಶೇಷ ಸಾಮರ್ಥವುಳ್ಳ ಆದಿವಾಸಿಗಳು, ಬೇಟೆಯನ್ನು ಫೋಟೋ ತೆಗೆಯಲು ಫೋಟೋಗ್ರಫರುಗಳು ಎಂದು ಒಂದು ಪಟಾಲಂ ಹುಲಿಯ ಬೇಟೆಗೆ ಹೊರಡುತ್ತದೆ. 

ಹುಲಿ ಅವಿತಿರುವ ಜಾಗವನ್ನು 300 ಆನೆಗಳು ಸುತ್ತಿ ಬಳಸಿಕೊಳ್ಳುತ್ತವೆ. ಹುಲಿ ತಪ್ಪಿಸಿಕೊಳ್ಳಲು ಆಗದೆ  ಕೋಪದಿಂದ ಜಿಗಿಯುತ್ತದೆ. ಆನೆಯ ಮೇಲೆ ಕುಳಿತ ವೀರರು ಶೂಲದಿಂದ ಹುಲಿಯನ್ನು ಅಟ್ಟಿಸಿ ರಾಜನ ಮುಂದೆ ಹೋಗುವಂತೆ ಮಾಡುತ್ತಾರೆ. ಹುಲಿ ಆವೇಶದಿಂದ ಹಾರುತ್ತದೆ. ಐದನೆಯ ಜಾರ್ಜ್ ತನ್ನ ತುಪಾಕಿಯಿಂದ ಹುಲಿಯನ್ನು ಗುಂಡಿಕ್ಕಿ ಕೊಲ್ಲುತ್ತಾನೆ. ಕೊಂದ ಹುಲಿಯ ಜತೆ ಫೋಟೋ ತೆಗೆದುಕೊಳ್ಳುತ್ತಾನೆ. ಹೀಗೆ ಐದು ದಿನ ನಿರಂತರವಾಗಿ ಬೇಟೆಯಾಡಿ, 39 ಹುಲಿಗಳು, 18 ಘೇಂಡಾಮೃಗಗಳು, 4 ಕರಡಿಗಳು, 6 ಕಾಡೆಮ್ಮೆಗಳನ್ನು ಕೊಲ್ಲಲಾಗುತ್ತದೆ. ಹಕ್ಕಿಗಳು, ಮೊಲಗಳು, ಜಿಂಕೆಗಳು ಮುಂತಾದುವನ್ನು ಆಹಾರಕ್ಕಾಗಿ ಬೇಟೆಯಾಡಲಾಗುತ್ತದೆ. 

ಹೊಸ ರಾಜನ ಪದವಿ ಸ್ವೀಕಾರ ಸಂಭ್ರಮ 39 ಹುಲಿಗಳನ್ನು ಕೊಂದು ಉತ್ಸಾಹದಿಂದ ಪ್ರಾರಂಭವಾಗುತ್ತದೆ. ಈ ಕೆಲಸಕ್ಕಾಗಿ ತನಗೆ ನೆರವಾಗಿ ಬಂದಿದ್ದ 14,000 ಆಳುಗಳಿಗೆ ರಾಜ ಸನ್ಮಾನ ನೀಡುತ್ತಾನೆ. ನೇಪಾಳ ರಾಜನಿಗೆ ವಿಶೇಷ ಸಲವತ್ತುಗಳನ್ನೂ ಬಹುಮಾನಗಳನ್ನೂ  ನೀಡಲಾಗುತ್ತದೆ. 

ಪ್ರತಿಯಾಗಿ, ನೇಪಾಳದ ರಾಜ ಆನೆಯಿಂದ ಗಿಳಿಯವರೆಗೆ 70 ಬಗೆಯ ಕಾಡು ಮೃಗಗಳನ್ನು ಬೋನು, ಪಂಜರಗಳಲ್ಲಿ ಕೂಡಿ ಹಾಕಿ  ಇಂಗ್ಲೆಂಡಿನಲ್ಲಿರುವ ಮೃಗಾಲಯಕ್ಕೆ ಬಳುವಳಿಯಾಗಿ ಕಳುಹಿಸುತ್ತಾನೆ. ಹುಟ್ಟಿದ ಕಾಡನ್ನು ಬಿಟ್ಟು ಬೇರೇನನ್ನೂ ಅರಿಯದ ಕರಡಿಯೂ, ಘೇಂಡಾಮೃಗವೂ, ತೋಳವೂ ಹಡಗಿನಲ್ಲಿ ಪಯಣ ಮಾಡಿ ಇಂಗ್ಲೆಂಡಿನಲ್ಲಿ ಪ್ರದರ್ಶನದ ವಸ್ತುಗಳಾಗುತ್ತವೆ. ಆ ಊರಿನ ಚಳಿಯೂ, ಆಹಾರವೂ ಒಗ್ಗಿಕೊಳ್ಳದೆ ನಿಧಾನವಾಗಿ ಸತ್ತುಹೋಗುತ್ತವೆ. 

ನೆನಪಿನಲ್ಲಿ ಕಾಡಿರುವ ಮೃಗವನ್ನು ಪಳಗಿಸಲು ಸಾಧ್ಯವಿಲ್ಲ ಎನ್ನುತ್ತಾರೆ. ಅದು ನಿಜ. ಮನುಷ್ಯ ನೆನಪುಗಳನ್ನು ದೂರ ಎಸೆದು ಯಾವ ಹೀನ ಸ್ಥಿತಿಗೂ ತನ್ನನ್ನು ಒಪ್ಪಿಸಿಬಿಡುತ್ತಾನೆ. ಮೃಗಗಳು ಹಾಗಲ್ಲ. ಉಪವಾಸವಿದ್ದು ಸಾಯುತ್ತವೆಯೇ ಹೊರತು, ಅದು ಸುಲಭವಾಗಿ ತನ್ನನ್ನು ಬಿಟ್ಟುಕೊಡುವುದಿಲ್ಲ. ಒಂದು ಮೃಗ ಮಣಿದುಹೋಗುತ್ತದೆ ಎಂದರೆ ಮನುಷ್ಯನ ಮೇಲಿನ ಪ್ರೀತಿಯಿಂದ ಮಾತ್ರವೇ ಹೊರತು, ಭಯದಿಂದ ಅಲ್ಲ. 

ಒಂದೇ ಬೇಟೆಯಲ್ಲಿ ಅಷ್ಟು ಹುಲಿಗಳನ್ನು ಕೊಂದ ಸಂತೋಷದಲ್ಲಿ ಐದನೆಯ ಜಾರ್ಜ್ ಭಾರತದ ರಾಜಧಾನಿಯಾಗಿದ್ದ ಕಲ್ಕತ್ತಾವನ್ನು ಬದಲಾಯಿಸಿ, ದಿಲ್ಲಿಯನ್ನು ಹೊಸ ರಾಜಧಾನಿಯಾಗಿ ಘೋಷಿಸುತ್ತಾನೆ. ಬ್ರಿಟಿಷ್ ವಾಸ್ತುಶಿಲ್ಪ ತಜ್ಞನಾದ ಎಡ್ವಿನ್ ಲುಟ್ಟಿಯನ್ಸ್ (Edwin Landseer Lutyens) ಬಳಿ ಹೊಸ ರಾಜಧಾನಿ ನಿರ್ಮಾಣ ಮಾಡುವುದರ ಬಗ್ಗೆ  ಸಮಾಲೋಚನೆ ಮಾಡುತ್ತಾನೆ. ‘ಮನುಷ್ಯರ ಸಮಾಧಿಗಳು ಇಲ್ಲದ  ವಿಸ್ತೀರ್ಣವಾದ ಭೂಮಿ ಇದ್ದರೆ, ಅದರಲ್ಲಿ ಒಂದು ಹೊಸ ದಿಲ್ಲಿ ನಗರವನ್ನು ಸೃಷ್ಟಿಸಿ ತೋರಿಸುತ್ತೇನೆ’ ಎನ್ನುತ್ತಾನೆ ಎಡ್ವಿನ್ ಲುಟ್ಟಿಯನ್ಸ್. ಹಾಗೆ ಒಂದು ಹೊಸ ದೆಹಲಿ ನಿರ್ಮಾಣವಾಗುತ್ತದೆ! 

| ಇನ್ನು ನಾಳೆಗೆ |

‍ಲೇಖಕರು Admin

30 July, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading