
ಮೂಲ: ಎಸ್ ರಾಮಕೃಷ್ಣನ್
1966 ರಲ್ಲಿ ತಮಿಳುನಾಡಿನ ವಿರುದುನಗರ್ ಜಿಲ್ಲೆಯ ಮಲ್ಲಾಂಕಿಣರು ಎಂಬ ಹಳ್ಳಿಯಲ್ಲಿ ಹುಟ್ಟಿದವರು. ಪೂರ್ಣಾವಧಿ ಬರಹಗಾರರಾಗಿ ಚೆನ್ನೈಯಲ್ಲಿ ವಾಸವಿದ್ದಾರೆ. ದೇಶಾಂತರಿ ಎಂಬ ಪ್ರಕಾಶನವನ್ನು ನಡೆಸುತ್ತಿದ್ದಾರೆ.
ಸಣ್ಣಕಥೆ, ಕಾದಂಬರಿ, ಅಂಕಣ, ಸಿನಿಮಾ ಸಾಹಿತ್ಯ, ಮಕ್ಕಳ ಸಾಹಿತ್ಯ, ಇತಿಹಾಸ, ನಾಟಕ, ಅನುವಾದ ಹೀಗೆ ಅನೇಕ ಪ್ರಕಾರಗಳ ಬರಹಗಳಲ್ಲಿ ತೊಡಗಿಕೊಂಡಿದ್ದಾರೆ. ಇಂಗ್ಲೀಷಿನಲ್ಲೂ ಬರೆಯುತ್ತಾರೆ. 10 ಕಾದಂಬರಿ, 21 ಸಣ್ಣಕಥೆಗಳ ಸಂಕಲನ, ಮೂರು ನಾಟಕ, 22 ಮಕ್ಕಳ ಸಾಹಿತ್ಯ, ಅನೇಕ ಅಂಕಣ ಸಂಕಲನಗಳನ್ನು ಬರೆದಿದ್ದಾರೆ.
ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಉತ್ತಮ ಕಾದಂಬರಿ ಪ್ರಶಸ್ತಿ, ಉತ್ತಮ ಪುಸ್ತಕ ಪ್ರಶಸ್ತಿ, ಠಾಗೂರ್ ಸಾಹಿತ್ಯ ಪ್ರಶಸ್ತಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮುಂತಾದುವುಗಳನ್ನು ಗಳಿಸಿದ್ದಾರೆ.
ತಮಿಳಿನ ಪ್ರಮುಖ ಸಾಹಿತಿಗಳಲ್ಲಿ ಒಬ್ಬರು.

ಕೆ ನಲ್ಲತಂಬಿ
15
ಇತಿಹಾಸದಲ್ಲಿ ನಾವು ಓದುವ ರಾಜರಿಗೂ, ಕತೆಗಳಲ್ಲಿ ಬರುವ ರಾಜರಿಗೂ ಬಹಳ ವ್ಯತ್ಯಾಸವಿದೆ. ರಾಜರ ಹೆಸರುಗಳು, ಆಳಿದ ಇಸವಿಗಳು, ಯುದ್ಧದಲ್ಲಿ ಪಡೆದ ಗೆಲುವುಗಳು, ಆಡಳಿತದ ಸಾಧನೆಗಳು, ಸೋಲುಗಳು ಮುಂತಾದುವು ಮಾತ್ರವೇ ಪಠ್ಯ ಪುಸ್ತಕಗಳಲ್ಲಿ ಇರುತ್ತವೆ. ಒಬ್ಬ ರಾಜ ಎಷ್ಟು ಗಂಟೆಗೆ ಏಳುತ್ತಾನೆ, ಏನು ತಿನ್ನುತ್ತಾನೆ, ಯಾವ ಬಗೆಯ ಉಡುಪನ್ನು ತೊಡುತ್ತಾನೆ, ಹೇಗೆ ನೀತಿ ಪರಿಪಾಲನೆ ಮಾಡುತ್ತಾನೆ, ಹೇಗೆ ಆಜ್ಞೆಗಳನ್ನು ಹೊರಡಿಸುತ್ತಾನೆ, ಯಾವ ಸಂಗೀತವನ್ನು ಬಯಸಿ ಕೇಳುತ್ತಾನೆ, ಯಾವ ಹೆಣ್ಣನ್ನು ಪ್ರೀತಿಸಿದ, ಯಾರು ಅವನ ಗುರು.. ಎಂದು ರಾಜರ ಬದುಕಿನ ಬಗ್ಗೆ ನೂರು ಪ್ರಶ್ನೆಗಳು ಸಾಮಾನ್ಯರ ಮನಸ್ಸಿನಲ್ಲಿ ಇದೆ. ಅದನ್ನು ಬರಹಗಾರನ ಕಲ್ಪನೆಗಳು ಮಾತ್ರವೇ ಅನೇಕ ಸಮಯ ಪೂರ್ಣಗೊಳಿಸುತ್ತದೆ.
ಹಾಗೆಂದರೆ, ರಾಜರ ದಿನನಿತ್ಯದ ಘಟನೆಗಳನ್ನು ಇತಿಹಾಸ ದಾಖಲು ಮಾಡಲೇ ಇಲ್ಲವೇ? ಈ ವಿಷಯದಲ್ಲಿ ಮೊಗಲ್ ದೊರೆಗಳು ಮುಂಚೂಣಿಯಲ್ಲಿದ್ದಾರೆ. ಚಕ್ರವರ್ತಿ ನಿದ್ದೆ ಮಾಡಿ ಬೆಳಗ್ಗೆ ಏಳುವುದರಿಂದ ಹಿಡಿದು, ರಾತ್ರಿಯ ನಾಟ್ಯ, ಔತಣದವರೆಗೆ ಎಲ್ಲ ಪ್ರಮುಖ ಘಟನೆಗಳನ್ನೂ ನಿಖರವಾಗಿ ಬರೆದಿಟ್ಟಿದ್ದಾರೆ.
ಅಬುಲ್ ಬಾಸಲ್ ಬರೆದ ‘ಅಕ್ಬರ್ ನಾಮ’, ಅಬ್ದುಲ್ ಹಮೀದ್ ಲಾಹಿರಿ ಬರೆದ ‘ಬಾದುಷಾ ನಾಮ’, ಜಹಾಂಗೀರ್ ಇತಿಹಾಸವನ್ನು ಅರಿತುಕೊಳ್ಳಲು ನೆರವಾಗುವ ‘ಮ ಆತ್ರಿ ರಹೀಮಿ’, ಷಹಜಹಾನ್ ಬಗ್ಗೆ ಸಾದಿಕ್ ಖಾನ್ ಬರೆದ ‘ತಾರೀಕ್ ಇ ಷಾ ಜಹಾನಿ’ ಮುಂತಾದ ಕೃತಿಗಳು ಮೊಗಲ್ ಅರಸರ ಜೀವನದ ಸಂಪೂರ್ಣ ದಾಖಲೆಗಳಾಗಿವೆ.

ಈ ಅರಸ ಚರಿತ್ರೆಗಳನ್ನು ಓದುವಾಗ, ಒಂದು ಪ್ರಮುಖ ಸತ್ಯವನ್ನು ಅರಿತುಕೊಳ್ಳಲು ಸಾಧ್ಯವಾಗುತ್ತದೆ. ಬಹಳ ದೂರದಲ್ಲಿರುವವರನ್ನೂ ಸಹ ತಮ್ಮ ಕೆಳಗೆ ತಲೆ ತಗ್ಗಿಸಿ ನಿಲ್ಲುವಂತೆ ಮಾಡುತ್ತದೆ ಅಧಿಕಾರ. ಆದರೆ, ಅದೇ, ಜತೆಯಲ್ಲಿರುವ ಕುಟುಂಬದ ಮನುಷ್ಯರನ್ನು ಅನ್ಯರಾಗಿಸಿ, ದ್ವೇಷಿಸುವಂತೆ ಮಾಡುತ್ತದೆ.
ಕಾಡಿನಲ್ಲಿ ಬಹಳ ಎತ್ತರಕ್ಕೆ ಬೆಳೆದು ನಿಂತ ಮರ, ಉಳಿದವುಗಳಿಂದ ಒಂಟಿಯಾಗುತ್ತದೆ ಎನ್ನುತ್ತಾರೆ. ಬಾನನ್ನು ಮುಟ್ಟವುದು ಒಂದು ಬಗೆಯಲ್ಲಿ ಹೆಮ್ಮೆ. ಮತ್ತೊಂದು ರೀತಿಯಲ್ಲಿ…. ಅರಿತೂ ಒಂಟಿಯಾಗುವುದು.
ಎತ್ತರಕ್ಕೆ ಬೆಳೆದು ನಿಂತ ಮರಕ್ಕೆ ಜತೆಯಿರುವುದಿಲ್ಲ. ಅದನ್ನು ನೋಡುವ ಮನುಷ್ಯ ತಲೆಯನ್ನು ಎತ್ತಿ ನೋಡಿ ವಿಸ್ಮಯದಿಂದ ಮೆಚ್ಚಿಕೊಳ್ಳುತ್ತಾನೆ. ಅದೇ ಮರವನ್ನು ಮತ್ತೊಬ್ಬ ಮನುಷ್ಯ ನೋಡಿ ಇದು ಯಾರಿಗೂ ಉಪಯೋಗವಿಲ್ಲದೆ ಎತ್ತರಕ್ಕೆ ಬೆಳೆದು ನಿಂತಿದೆ ಎಂದು ಕಟುವಾಗಿ ವಿಮರ್ಶೆ ಮಾಡುತ್ತಾನೆ. ಹೀಗೆ ವಿಸ್ಮಯವೂ ವಿಮರ್ಶೆಯೂ ಜತೆ ಜತೆಯಲ್ಲೇ ಇರುವುದೇ ರಾಜರ ಬದುಕು. ಭಯ ಅದೊಂದೇ ಅರಸನ ಏಕಮಾತ್ರ ಗೆಳೆಯ. ಅದನ್ನು ಹೊರಗೆ ತೋರಿಸಿಕೊಳ್ಳಲು ಸಾಧ್ಯವೇ ಇಲ್ಲ. ರಾಜರ ಬದುಕು ಬಟ್ಟ ಬಯಲಲ್ಲಿ ಹಚ್ಚಿಟ್ಟ ಬಂಗಾರದ ದೀಪದಂತೆ. ಗಾಳಿ ಯಾವಾಗ ಅದನ್ನು ನಂದಿಸುತ್ತದೆ ಎಂಬುದು ಯಾರಿಗೂ ತಿಳಿಯದು.
‘ಗೆಳೆಯರನ್ನು ಹತ್ತಿರದಲ್ಲಿ ಇಟ್ಟುಕೋ, ವೈರಿಗಳನ್ನು ಬಹಳ ಹತ್ತಿರದಲ್ಲಿ ಇಟ್ಟುಕೋ, ಇಬ್ಬರ ಬಗ್ಗೆಯೂ ಎಚ್ಚರಿಕೆಯಿಂದ ಇರು, ಇಬ್ಬರಲ್ಲಿ ಯಾರು ಬೇಕಾದರೂ ನಿನ್ನನ್ನು ಕೊಲ್ಲಬಹುದು’ ಎಂದು ರಾಜರಿಗೆ ಆಲೋಚನೆ ಹೇಳುತ್ತಾರಂತೆ. ಅದೇ, ಇತಿಹಾಸದಲ್ಲಿ ನಡೆದಿರುವುದು. ಮುಕ್ಕಾಲು ಭಾಗ ಭಾರತವನ್ನು ಒಂದೇ ಛತ್ರಛಾಯೆಯೊಳಗೆ ತಂದು ಆಡಳಿತ ಮಾಡಿದ ಚಕ್ರವರ್ತಿಗೂ ಸಹ ನೆಮ್ಮದಿಯಾದ ಸಾವು ದೊರಕಲಿಲ್ಲ ಎಂಬುದೇ ಇತಿಹಾಸದ ಸತ್ಯ.
ಭೃಹತ್ ಮಾಳಿಗೆಯಲ್ಲಿ ಸಾವಿರಾರು ಕೆಲಸಗಾರರನ್ನು, ನೂರಾರು ಅಂಗರಕ್ಷಕರನ್ನು ಇಟ್ಟುಕೊಂಡು, ಚಿನ್ನದ ಮಂಚದಲ್ಲಿ ಮಲಗಿ, ಬೆಳ್ಳಿ ಬಟ್ಟಲಲ್ಲಿ ಹಾಲು ಸವಿಯುತ್ತಾ ಸಂತೋಷದಿಂದ ಇರುವುದು ಮಾತ್ರವಲ್ಲ ರಾಜನ ಬದುಕು. ಒಂದು ದಿನ ಬೆಳಗ್ಗೆ ಏಳುವುದರಿಂದ ರಾತ್ರಿ ನಿದ್ದೆ ಮಾಡುವವರೆಗೆ ಅವನ ಕೆಲಸಗಳು ಕ್ರಮವಾಗಿ ಯೋಜನೆ ಮಾಡಲಾಗಿರತ್ತದೆ. ಅದಕ್ಕಾಗಿ, ಸಮಯವನ್ನು ನಿರ್ಧರಿಸುವ ವಿಶೇಷ ಪದ್ಧತಿಯೊಂದು ಅಕ್ಬರ್ ಕಾಲದಲ್ಲಿ ಚಾಲನೆಯಲ್ಲಿತ್ತು.

‘ಐರೋಕಾ ಇ ದರ್ಶನ’ ಎಂಬುದು, ಸಾರ್ವಜನಿಕರಿಗೆ ಬೆಳಗ್ಗೆ ದರ್ಶನ ನೀಡಲು ತೆರೆದ ಬಯಲಿನಲ್ಲಿ ದರ್ಬಾರ್ ನಡೆಸುವುದು. ‘ದಿವಾನಿ ಖಾಸ್ ಓ ಆಂ’ ಎಂಬುದು, ರಾಜನ ಸಭೆಯಲ್ಲಿ ನಡೆಯುವ ದರ್ಬಾರ್. ‘ಖುಶಾಲ್ ಖಾನ’ ಎಂಬುದು, ಏಕಾಂತ ಭೇಟಿ. ಅಲಾವುದೀನ್ ಕಿಲ್ಜಿ, ಸಣ್ಣ ವಸ್ತುಗಳಿಗೂ ಅವನೇ ಬೆಲೆಯನ್ನು ನಿಗಧಿ ಮಾಡಿದ್ದಾನೆ. ಅಕ್ಬರ್, ಬಾಬರ್ ಆಡಳಿತ ಪದ್ಧತಿಯ ಶಿಸ್ತನ್ನು ಖುದ್ದಾಗಿ ಗಮನಿಸಿದ್ದಾರೆ. ಅರಬಿ ಕುದುರೆಗಳನ್ನು ಯಾವ ಬೆಲೆಗೆ ಖರೀದಿಸುತ್ತಾರೆ ಎಂಬುದರಿಂದ ಹಿಡಿದು, ಊರಿನ ಸಂತೆಯಲ್ಲಿ ಮಾವಿನ ಹಣ್ಣು ಯಾವ ಬೆಲೆಗೆ ಮಾರುತ್ತಾರೆ ಎಂಬುದೆಲ್ಲವನ್ನೂ ಅಕ್ಬರನ ಗಮನಕ್ಕೆ ತರಲಾಗಿದೆ.
ರಾಜ ಪದವಿ ಎಂಬುದು ದೇವರ ಬಳುವಳಿ. ಅದು, ಸಾವಿರ ಒಳ್ಳೆಯ ಗುಣಗಳನ್ನುಳ್ಳ ಒಬ್ಬನಿಗೆ ದೊರಕುತ್ತದೆ ಎನ್ನುತ್ತಾರೆ ಅಬುಲ್ ಬಾಸಲ್. ಸಾಮರ್ಥ್ಯ, ಪ್ರಾಮಾಣಿಕತೆ, ವಿಶಾಲ ಮನಸ್ಸು, ಅಪರಿಮಿತವಾದ ಸಹನೆ, ಮುಂದಾಲೋಚನೆ, ಪಾರಪಕ್ಷ ತೋರದಿರುವುದು, ಧಾನ ಧರ್ಮ ಮಾಡುವ ಗುಣ, ನ್ಯೂನತೆ ಇಲ್ಲದ ಚಿಂತನೆ, ಅಪರಾಧಗಳನ್ನು ಕ್ಷಮಿಸುವ ವಿವೇಕ, ತುಂಬು ಕರುಣೆ, ಮತ ಬೇಧ ಮಾಡದ ಮನಸ್ಸು, ಕಾಲವರಿತು ಕಾರ್ಯ ಮಾಡುವುದು, ಯಾವುದಕ್ಕೂ ಅಂಜದ ಗುಣ, ನಿಸ್ವಾರ್ಥತೆ ಮುಂತಾದ ಗುಣಗಳಿರುವವನೇ ರಾಜನಾಗಲು ಸಾಧ್ಯ.
ರಾಜನದವನು ಬೆಳಗಿನ ಜಾವ ಮೂರು ಗಂಟೆಗೆ ಎಚ್ಚೆತ್ತುಕೊಳ್ಳುತ್ತಾನೆ. ಅದೂ ಸಹ, ಅವನಾಗಿ ಏಳುವುದಿಲ್ಲ. ನಿದ್ದೆಯಿಂದ ಎಬ್ಬಿಸುವುದು ರಾಜನಿಗೆ ಇಷ್ಟವಾದ ರಾಣಿಯ ಕೆಲಸ. ರಾಜ ಯಾವ ಹೆಣ್ಣಿನೊಂದಿಗೆ ಯಾವ ಕೋಣೆಯಲ್ಲಿ ಮಲಗಿದ್ದರೂ, ದಿನವೂ ನಿದ್ದೆಯಿಂದ ಎಬ್ಬಿಸುವುದು ರಾಣಿಯಾಗಿರಬೇಕು. ಸೂರ್ಯೋದಯಕ್ಕೆ ಮೊದಲೇ ಪ್ರಜೆಗಳನ್ನು ಬೇಟಿಯಾಗಲು ರಾಜ ಎದ್ದು ತಯಾರಾಗಿ ಇರಬೇಕು ಎಂಬುದು ಪದ್ದತಿ.
ಪನ್ನೀರು, ಗುಲಾಬಿ ಹೂಗಳು, ಪರ್ಷಿಯಾದ ಅಪರೂಪದ ಪರಿಮಳ ದ್ರವ್ಯಗಳು ಬೆರೆಸಿದ ನೀರಿನಿಂದ ಸ್ನಾನ ಮಾಡಿ ತಯಾರಾಗಬೇಕು. ಈ ಸ್ನಾನದ ಕೊಠಡಿಯಲ್ಲಿ 12 ಜನ ಅಳುಗಳು ಇರುತ್ತಾರೆ. ಅವರು, ರಾಜನ ಸ್ನಾನಕ್ಕೆ ನೀರನ್ನು ಪ್ರತ್ಯೇಕವಾಗಿ ಮುದ್ರೆ ಹಾಕಿ ಸುರಕ್ಷಿತವಾಗಿ ಇಟ್ಟಿರುತ್ತಾರೆ. ಉಗುರುಬಿಸಿಯ ನೀರಲ್ಲೇ ರಾಜ್ಯ ಸ್ನಾನ ಮಾಡುವುದು. ಎಷ್ಟು ಬಿಸಿ ಇದೆ ಎಂಬುದನ್ನು ಪರೀಕ್ಷಿಸಲು ಪ್ರತ್ಯೇಕವಾಗಿ ಒಬ್ಬ ಆಳು ಇರುತ್ತಾನೆ.
ಅದೇ ರೀತಿಯಲ್ಲಿ, ರಾಜನ ದೇಹಕ್ಕೆ ಗಂಧ ಮತ್ತು ಸುವಾಸನೆಯ ತೈಲಗಳನ್ನು ಹಾಕಿ ಮೈ ಉಜ್ಜಲು ಸೇವಕಿಯರು ಇರುತ್ತಾರೆ. ಸ್ನಾನ ಮಾಡಿ ಮುಗಿಸಿದ ಕೂಡಲೇ ಅವರಿಗೆ ವಿಶೇಷವಾಗಿ ತಯಾರಿಸಿದ ರೇಷ್ಮೆ ವಸ್ತ್ರಗಳಲ್ಲಿ ಯಾವುದನ್ನು ರಾಜ ತೊಡುವುದು ಎಂದು ನಿರ್ಧರಿಸುತ್ತಾರೆ. ಬಟ್ಟೆ ತೊಟ್ಟ ಕೂಡಲೇ ತಮಟೆ ಬಾರಿಸುತ್ತಾರೆ. ಆ ಶಬ್ಧ ರಾಜ್ಯ ನಿದ್ದೆಯಿಂದ ಎದ್ದು ತಯಾರಾಗಿ ತನ್ನ ದಿನನಿತ್ಯದ ಕಾರ್ಯವನ್ನು ತೊಡಗಲಿದ್ದಾನೆ ಎಂಬುದರ ಸೂಚನೆ.

ಅದರ ನಂತರ ಅರಮನೆಯ ವೈದ್ಯರು ನಾಡಿ, ಹೊಟ್ಟೆ, ಉಷ್ಣ, ನಾಲಿಗೆ ಪರೀಕ್ಷೆ ಮುಂತಾದುವುದರೊಂದಿಗೆ ಮೂತ್ರದ ಬಣ್ಣ, ಮಲದ ಗುಣ, ಚರ್ಮದ ಬಣ್ಣದ ಬದಲಾವಣೆ, ಪಾದಗಳ ಮೃದುತನ, ಶ್ವಾಸದ ವೇಗ ಮುಂತಾದುವುವನ್ನು ಅರಿತುಕೊಳ್ಳುತ್ತಾರೆ. ವೈದ್ಯರ ಸಲಹೆಯಂತೆ ಯಾವ ಆಹಾರಗಳನ್ನು ಸೇವಿಸಬೇಕು, ಯಾವ ಹಣ್ಣಿನ ರಸವನ್ನು ಕುಡಿಯಬಾರದು ಎಂಬುದನ್ನು ರಾಜ ನಿರ್ಧಾರ ಮಾಡುತ್ತಾನೆ.
ಅದರ ನಂತರ ರಾಜ ತನ್ನ ಗುರುವನ್ನು, ದೇವರನ್ನು ನಮಸ್ಕರಿಸಬೇಕು. ದಿನವೂ ಧರ್ಮಬೋಧನೆ ಮಾಡಲು ಒಬ್ಬ ಜ್ಞಾನಿ ಅರಮನೆಯಲ್ಲಿ ಇರುತ್ತಾರೆ. ಅವರು ಅಂದಿನ ದಿನ ರಾಜನಿಗೆ ಜ್ಞಾನ ಬೋಧನೆ ಮಾಡುತ್ತಾರೆ. ಅದನ್ನು ವಿನಯದಿಂದ ಕೇಳಿಕೊಳ್ಳಬೇಕು. ಅದು ಮುಗಿದ ತಕ್ಷಣ ರಾಜನಿಗೆ ವಿಶೇಷ ಪೂಜೆ ಮಾಡಿ ತರುವ ಪ್ರಸಾದಗಳೊಂದಿಗೆ ಅರ್ಚಕರು ಕಾಯುತ್ತಿರುತ್ತಾರೆ. ಅವನ್ನು ಸ್ವೀಕರಿಸಬೇಕು.
ಭಾರತೀಯರು ಬೆಳಗಿನ ಜಾವ ಸೂರ್ಯನನ್ನು ವಂದಿಸುತ್ತಾರೆ ಎಂಬುದರಿಂದ, ಸೂರ್ಯನನ್ನು ನಮಸ್ಕರಿಸುವ ಸಮಯದಲ್ಲಿ ರಾಜ ದರ್ಶನ ನೀಡುವುದು ಅತಿ ಮುಖ್ಯವಾಗುತ್ತದೆ ಎಂಬ ಪದ್ಧತಿ ಅಕ್ಬರ್ ಕಾಲದಲ್ಲಿತ್ತು. ಆದ್ದರಿಂದ ಪ್ರಜೆಗಳನ್ನು ಭೇಟಿಯಾಗಲು ನಿರ್ಮಾಣ ಮಾಡಿರುವ ಪ್ರತ್ಯೇಕ ಮಂಟಪದಲ್ಲಿ ನಿಲ್ಲುತ್ತಾನೆ. ಬೆಳಗಿನ ಜಾವಕ್ಕೆ ಬಂದು ನಿಂತಿರುವ ಪ್ರಜೆಗಳು ರಾಜನನ್ನು ನಮಸ್ಕರಿಸಿ ಜಯಘೋಷಗಳನ್ನು ಮೊಳಗುತ್ತಾರೆ. ಅದನ್ನು ಸ್ವೀಕರಿಸುವ ರಾಜ ಸೂರ್ಯನನ್ನು ನಮಸ್ಕರಿಸುತ್ತಾನೆ.
ನಂತರ, ಪ್ರಜೆಗಳ ಕೊರತೆಯನ್ನು ನಿವಾರಿಸಲು ತೆರೆದ ಸಭೆಯಲ್ಲಿ ದರ್ಬಾರ್ ಪ್ರಾರಂಭವಾಗುತ್ತದೆ. ಇದು, ಒಂದೂವರೆ ಗಂಟೆ ನಡೆಯುತ್ತದೆ. ಆ ಸಮಯದಲ್ಲಿ, ಪ್ರಜೆಗಳು ಸುಲಭವಾಗಿ ರಾಜನನ್ನು ಭೇಟಿಯಾಗಿ ತಮ್ಮ ಸಮಸ್ಯೆಗಳನ್ನು ಮೊರೆಯಿಡಬಹುದು. ಅಲ್ಲಿ ಗಮನಕ್ಕೆ ತರುವ ಸಮಸ್ಯೆಗಳನ್ನು ಕ್ರಮವಾಗಿ ವಿಚಾರಿಸಿ ನ್ಯಾಯ ಇಲಾಖೆಯ ಗುಮಾಸ್ತರ ಮೂಲಕ ಟಿಪ್ಪಣಿಗಳನ್ನು ಬರೆಸಿ ತೀರ್ಪು ನೀಡಲಾಗುತ್ತದೆ.
| ಇನ್ನು ನಾಳೆಗೆ |






0 Comments