
ಮೂಲ: ಎಸ್ ರಾಮಕೃಷ್ಣನ್
1966 ರಲ್ಲಿ ತಮಿಳುನಾಡಿನ ವಿರುದುನಗರ್ ಜಿಲ್ಲೆಯ ಮಲ್ಲಾಂಕಿಣರು ಎಂಬ ಹಳ್ಳಿಯಲ್ಲಿ ಹುಟ್ಟಿದವರು. ಪೂರ್ಣಾವಧಿ ಬರಹಗಾರರಾಗಿ ಚೆನ್ನೈಯಲ್ಲಿ ವಾಸವಿದ್ದಾರೆ. ದೇಶಾಂತರಿ ಎಂಬ ಪ್ರಕಾಶನವನ್ನು ನಡೆಸುತ್ತಿದ್ದಾರೆ.
ಸಣ್ಣಕಥೆ, ಕಾದಂಬರಿ, ಅಂಕಣ, ಸಿನಿಮಾ ಸಾಹಿತ್ಯ, ಮಕ್ಕಳ ಸಾಹಿತ್ಯ, ಇತಿಹಾಸ, ನಾಟಕ, ಅನುವಾದ ಹೀಗೆ ಅನೇಕ ಪ್ರಕಾರಗಳ ಬರಹಗಳಲ್ಲಿ ತೊಡಗಿಕೊಂಡಿದ್ದಾರೆ. ಇಂಗ್ಲೀಷಿನಲ್ಲೂ ಬರೆಯುತ್ತಾರೆ. 10 ಕಾದಂಬರಿ, 21 ಸಣ್ಣಕಥೆಗಳ ಸಂಕಲನ, ಮೂರು ನಾಟಕ, 22 ಮಕ್ಕಳ ಸಾಹಿತ್ಯ, ಅನೇಕ ಅಂಕಣ ಸಂಕಲನಗಳನ್ನು ಬರೆದಿದ್ದಾರೆ.
ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಉತ್ತಮ ಕಾದಂಬರಿ ಪ್ರಶಸ್ತಿ, ಉತ್ತಮ ಪುಸ್ತಕ ಪ್ರಶಸ್ತಿ, ಠಾಗೂರ್ ಸಾಹಿತ್ಯ ಪ್ರಶಸ್ತಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮುಂತಾದುವುಗಳನ್ನು ಗಳಿಸಿದ್ದಾರೆ.
ತಮಿಳಿನ ಪ್ರಮುಖ ಸಾಹಿತಿಗಳಲ್ಲಿ ಒಬ್ಬರು.

ಕನ್ನಡಕ್ಕೆ: ಕೆ ನಲ್ಲತಂಬಿ
7
ಭಾರತದ ಹೊರಗೆ ಇದ್ದುಕೊಂಡು ಭಾರತದ ವಿಧಿಯನ್ನು ಬದಲಾಯಿಸಲು ಪ್ರಯತ್ನಿಸಿದ ಅತಿ ದೊಡ್ಡ ವೀರರು ಇಬ್ಬರು ಎಂದು ಹೇಳುವೆ. ಒಬ್ಬರು ಜಪಾನಿನಲ್ಲಿ ವಾಸಿಸುತ್ತಾ ಭಾರತ ರಾಷ್ಟ್ರೀಯ ಸೈನ್ಯವನ್ನು (Indian National Army) ನಿರ್ಮಾಣ ಮಾಡಿದ ರಾಸ್ ಬಿಹಾರಿ ಬೋಸ್. ಮತ್ತೊಬ್ಬರು ಜರ್ಮನಿಯಲ್ಲಿ ವಾಸವಿದ್ದ ತಮಿಳುನಾಡಿಗೆ ಸೇರಿದ ಶೆಂಬಗರಾಮನ್ ಪಿಳ್ಳೈ. ಇಬ್ಬರೂ, ಭಾರತದ ಸ್ವಾತಂತ್ರದ ಬಗ್ಗೆ ಹಿರಿಯ ಕನಸುಗಳೊಂದಿಗೆ ಕಾರ್ಯನಿರತರಾದವರು.
‘ಇಂಡಿಯನ್ ನ್ಯಾಷನಲ್ ಆರ್ಮಿ’ ಎಂದ ಕೂಡಲೇ, ನಮ್ಮ ನೆನಪಿಗೆ ಬರುವುದು ನೇತಾಜಿ. ಆದರೆ ಅವರು ಐ.ಎನ್.ಎ ಆನ್ನು ನಿರ್ಮಾಣಿಸಲಿಲ್ಲ. ಅದರ ನೇತೃತ್ವವನ್ನು ಅವರು ವಹಿಸಿದರು. ಇಂಡಿಯನ್ ನ್ಯಾಷನಲ್ ಆರ್ಮಿಯನ್ನು ನಿರ್ಮಾಣಿಸಿದವರು. ರಾಸ್ ಬಿಹಾರಿ ಬೋಸ್. ಹುಡುಕಾಟದಲ್ಲಿರುವ ಪ್ರಮುಖ ಅಪರಾಧಿಗಳ ಪಟ್ಟಿಯಲ್ಲಿ ಅವರ ಹೆಸರನ್ನು ಬ್ರಿಟೀಷ್ ಸರಕಾರ ಇಟ್ಟಿತ್ತು. ಆ ಪಟ್ಟಿಯಲ್ಲಿರುವ ಯಾರೊಬ್ಬರ ಬಗ್ಗೆಯಾದರೂ ಮಾಹಿತಿ ಕೊಟ್ಟರೋ, ಹಿಡಿದುಕೊಟ್ಟರೋ ನೂರು ಎಕರೆ ಜಮೀನು ಬಹುಮಾನವಾಗಿ ನೀಡಲಾಗುವುದೆಂದು ಘೋಷಣೆ ಮಾಡಿತ್ತು.
ಆ ಪಟ್ಟಿಯಲ್ಲಿದ್ದ ಮೊದಲ ಹೆಸರು… ರಾಸ್ ಬಿಹಾರಿ ಬೋಸ್! ಪಶ್ಚಿಮ ಬಂಗಾಳದ ಪೂರ್ವ ಬರ್ಧಮಾನ್ ಜಿಲ್ಲೆಯಲ್ಲಿರುವ ಸುಬಲ್ತಾ ಎಂಬ ಹಳ್ಳಿಯಲ್ಲಿ 1886, ಮೇ, 25ರಂದು ಹುಟ್ಟಿದರು. ತಮ್ಮ 15ನೇಯ ವಯಸ್ಸಿನಲ್ಲಿ, ಚಾರುಚಂದ್ರರಾಯ್ ಎಂಬುವರ ನೇತೃತ್ವದ ‘ಸುಹೃತ್ ಸಮ್ಮೇಳನ್’ ಎಂಬ ಕ್ರಾಂತಿಕಾರಿ ಸಂಘಟನೆಯಲ್ಲಿ ಸೇರಿಕೊಂಡರು. ಬಂಗಾಳದಲ್ಲಿದ್ದ ಕ್ರಾಂತಿಕಾರಿಗಳೊಡನೆ ಸೇರಿಕೊಂಡು ಬ್ರಿಟೀಷರಿಗೆ ವಿರುದ್ಧವಾಗಿ ಆಯುಧ ಹಿಡಿದು ಹೋರಾಡಲು ನಿರ್ಧರಿಸಿದರು. ಅದರ ಒಂದು ಭಾಗವಾಗಿ, ದೆಹಲಿಯಲ್ಲಿ ಅತಿದೊಡ್ಡ ಮೆರವಣಿಗೆಯನ್ನು ನಡೆಸಲಿರುವ ವೈಸ್ರಾಯನ್ನು ಬಾಂಬು ಎಸೆದು ಕೊಲ್ಲುವ ನಿರ್ಧಾರ ಮಾಡಲಾಯಿತು.

1912, ಡಿಸಂಬರ್ 23ರಂದು ದೆಹಲಿ ನಗರ ಸಂಭ್ರಮಾಚರಣೆಯ ಸಿದ್ಧತೆಯಲ್ಲಿತ್ತು. ಕಲ್ಕತ್ತಾದಿಂದ ಬದಲಾದ ಹೊಸ ರಾಜಧಾನಿಯಾಗಿ, ಹೊಸ ನಗರವಾದ ಹೊಸ ದೆಹಲಿಯಲ್ಲಿ ಸಂಭ್ರಮ ಆಚರಿಸುವ ಒಂದು ಭಾಗವಾಗಿ ವೈಸ್ರಾಯ್ ಹಾರ್ಡಿಂಗ್ ತನ್ನ ಮಡದಿಯೊಂದಿಗೆ ಆನೆಯ ಮೇಲೆ ಕುಳಿತು ಮೆರವಣಿಗೆ ಬಂದರು.
ಬೆಳಗ್ಗೆ 11.45ಕ್ಕೆ ಚಾಂದಿನಿಚೌಕ್ ನಲ್ಲಿರುವ ಪಂಜಾಬ್ ಬ್ಯಾಂಕ್ ಎದುರಲ್ಲಿರುವ ಗಡಿಯಾರದ ಗೋಪುರ ಒಂದರ ಮೇಲೆ ಮುಸುಕು ಹಾಕಿಕೊಂಡ ಇಬ್ಬರು ಮಹಿಳೆಯರು, ಆನೆಯ ಮೇಲೆ ಕುಳಿತು ಮೆರವಣಿಗೆ ಬರುತ್ತಿದ್ದ ವೈಸ್ರಾಯನ್ನು ದಿಟ್ಟಿಸಿ ನೋಡುತ್ತಿದ್ದರು. ಆನೆ ಮೆಲ್ಲಗೆ ಬಳುಕುತ್ತಾ ನಡೆಯುತ್ತಿತ್ತು. 500 ರಕ್ಷಣಾಧಿಕಾರಿಗಳು, 2500 ರಕ್ಷಣಾ ಸೈನಿಕರು ಭಾಗಿಯಾಗಿರುವ ಮೆರವಣಿಗೆಯಲ್ಲಿ ವೈಸ್ರಾಯ್ ಹೆಮ್ಮೆಯಿಂದ, ಜನಗಳನ್ನು ನೋಡುತ್ತಾ ಬರುತ್ತಿದ್ದರು. ಗಡಿಯಾರದ ಗೋಪುರದಲ್ಲಿ ಮರೆಯಾಗಿದ್ದ ಮಹಿಳೆ, ಸಿಗರೇಟ್ ಡಬ್ಬದೊಳಗೆ ಅಡಗಿಸಿಟ್ಟಿದ್ದ ಬಾಂಬ್ ಒಂದನ್ನು ಆನೆಯ ಕಡೆ ಎಸೆದಳು.
ಮತ್ತೊಬ್ಬ ಮಹಿಳೆ, ಒಂದು ಸಿಡಿ ಗುಂಡನ್ನು ಜನಗಳ ಗುಂಪಿನ ಕಡೆ ಎಸೆದಳು. ಆ ಬಾಂಬ್ ಆನೆಯ ಅಂಬಾರಿ ಮೇಲೆ ಬಿದ್ದು ಸಿಡಿಯಿತು. ವೈಸ್ರಾಯ್ ಗಾಬರಿಯಿಂದ ಕೆಳಗೆ ಬಿದ್ದರು. ಮಾವುತ ಆ ಜಾಗದಲ್ಲಿಯೇ ದೇಹ ಛಿದ್ರವಾಗಿ ಸತ್ತನು. ಇಬ್ಬರು ಮಹಿಳೆಯರು ತಮ್ಮ ಮುಸುಕನ್ನು ತೆಗೆದು ಓಡಿದರು. ಅವರು ಗಂಡಸರು ಎಂದು ಆಗಲೇ ತಿಳಿಯಿತು. ಇಡೀ ದೆಹಲಿಯೇ ತಮಾಷೆ ನೋಡುತ್ತಿರುವಾಗ, ಹಾಡುಹಗಲಲ್ಲಿ ಧೈರ್ಯವಾಗಿ ವೈಸ್ರಾಯ್ ಮೇಲೆ ಬಾಂಬ್ ಎಸೆದು, ಬ್ರಿಟೀಷರ ಸರ್ವಾಧಿಕಾರಕ್ಕೆ ಸವಾಲು ಎಸೆದ ಆ ಯುವಕರಲ್ಲಿ ಒಬ್ಬರೇ ರಾಸ್ ಬಿಹಾರಿ ಬೋಸ್!
ಅವರ ಜೊತೆಯಿದ್ದು ಬಾಂಬು ಎಸೆದವನು ಬಸಂತ್ ಕುಮಾರ್ ಬಿಸ್ವಾಸ್. ಈ ಘಟನೆಯ ಬಗ್ಗೆ ‘ನನ್ನ ಭಾರತದ ವರ್ಷಗಳು’ (My Indian Years) ಎಂಬ ಕೃತಿಯಲ್ಲಿ ವೈಸ್ರಾಯ್ ಹಾರ್ಡಿಂಗ್ (Charles Hardinge) ವಿಸ್ತಾರವಾಗಿ ಹೇಳಿದ್ದಾರೆ. ‘ಸುರಕ್ಷತೆಯ ಕಾರಣ ಮೆರವಣಿಗೆ ಹೋಗುವ ಹಾದಿಯಲ್ಲಿ ಯಾವ ಮನೆಯ ಮೇಲೂ, ಕಟ್ಟಡಗಳ ಮೇಲೂ ಜನಗಳು ನಿಲ್ಲಕೂಡದು ಎಂಬ ಕಟ್ಟಪ್ಪಣೆ ನೀಡಲಾಗಿತ್ತು. ಚಾಂದಿನಿ ಚೌಕ್ ಭಾಗದಲ್ಲಿ ಪ್ರತಿಮನೆಯ ಬಾಗಿಲಿನ ಮುಂದೆಯೂ ಒಬ್ಬ ಕಾವಲುಗಾರನನ್ನು ನಿಲ್ಲಿಸಲಾಗಿತ್ತು. ಅದಕ್ಕಾಗಿಯೇ 4000 ಕಾವಲುಗಾರರುಗಳನ್ನು ಪಕ್ಕದ ರಾಜ್ಯಗಳಿಂದ ಬರಮಾಡಿಕೊಳ್ಳಲಾಗಿತ್ತು.
ಚಾಂದಿನಿ ಚೌಕಿನ ಜನಸಂದಣಿಯ ವಾಣಿಜ್ಯ ಪ್ರದೇಶದಲ್ಲಿ ಆನೆ ಮೆಲ್ಲಗೆ ನಡೆದುಬರುವಾಗಲೇ ಒಂದು ಬಾಂಬನ್ನು ಎಸೆಯಲಾಯಿತು. ಅಂಬಾರಿಯ ಮೇಲೆ ಬಾಂಬು ಸಿಡಿದಿದ್ದರಿಂದ ನಾನು ಜಾರಿ ಕೆಳಗೆ ಬಿದ್ದೆ. ನನ್ನ ಹೆಂಡತಿ ಭಯದಿಂದ ಕಿರುಚಿದಳು. ನನಗೆ ಕಣ್ಣು ಮಂಕಾಗಿ ಮೂರ್ಛೆ ಬರುವಂತಾಯಿತು. ಹೀಕ್ ಬ್ರೇಸರ್ ಎಂಬ ರಕ್ಷಣಾ ಅಧಿಕಾರಿ ಒಂದು ಮಗುವನ್ನು ಎತ್ತಿಕೊಳ್ಳುವಂತೆ ನನ್ನನ್ನು ಹೊತ್ತುಕೊಂಡು ಕಾರಿನಲ್ಲಿ ಮಲಗಿಸಿದನು. ಅರ್ಧ ಮೂರ್ಛೆಯಲ್ಲಿದ್ದ ನನಗೆ ಏನು ನಡೆಯಿತೆಂದು ತಿಳಿಯಲಿಲ್ಲ.

ನನ್ನ ಜತೆ ಇದ್ದ ಸಹಾಯಕರೊಬ್ಬರಿಗೆ ಕಿವಿ ಕೇಳದೆ ಹೋಯಿತು. ನನಗೂ ಒಂದು ಕಿವಿ ಕೇಳಿಸಲಿಲ್ಲ. ನೋವು ತಡೆಯಲಾಗದೆ ನಾನು ಅತ್ತೆ. ನನ್ನ ಹೆಂಡತಿಯೂ ಕಣ್ಣೀರು ಸುರಿಸಿದಳು. ಬಾಂಬಿನಲ್ಲಿ ಸೂಜಿಗಳೂ, ಮೊಳೆಗಳೂ ಇದ್ದಿರಬೇಕೆಂದು ಕಾಣಿಸುತ್ತದೆ. ಅವು ನನ್ನ ದೇಹದೊಳಗೆ ಹೊಕ್ಕು ಆಳವಾದ ಗಾಯಗಳನ್ನು ಉಂಟುಮಾಡಿದ್ದವು. ಆರು ತಿಂಗಳ ನಿರಂತರ ಚಿಕಿತ್ಸೆಯ ನಂತರವೇ, ನನ್ನ ದೇಹ ಸುಧಾರಿಸಿಕೊಂಡಿತು. ನನ್ನನು ಕೊಲ್ಲಲು ಸಂಚು ಮಾಡಿದ ಆ ಭಾರತೀಯನ ಬೇಟೆ ಆಗ ಇನ್ನೂ ಮುಂದುವರೆಯುತ್ತಿತ್ತು’ ಎಂದು ಉಲ್ಲೇಖಿಸಿದ್ದಾರೆ.
‘ದೆಹಲಿ ಸಂಚು ಪ್ರಕರಣ’ ಎಂಬ ಈ ಬಾಂಬ್ ಪ್ರಕರಣದಲ್ಲಿ ರಾಸ್ ಬಿಹಾರಿ ಬೋಸ್ ಅವರನ್ನು ಪೋಲಿಸ್ ಹುಡುಕಾಡಿತು. ಅವರನ್ನು ಹಿಡಿಯಲು ಡೇವಿಡ್ ಬೇಟರ್ಸನ್ ಎಂಬ ಮುಖ್ಯ ಪೋಲಿಸ್ ಅಧಿಕಾರಿಯ ನೇತೃತ್ವದಲ್ಲಿ ಪ್ರತ್ಯೇಕ ಪಡೆಯೊಂದನ್ನು ರಚಿಸಲಾಯಿತು. ಆಗ ರಾಸ್ ಬಿಹಾರಿ ಬೋಸ್ ವನ್ಯ ಇಲಾಖೆಯ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ರಜೆಯಲ್ಲಿದ್ದ ಅವರು ನಡೆದ ಘಟನೆಗೂ ತನಗೂ ಯಾವ ಸಂಬಂಧವೂ ಇಲ್ಲ ಎಂಬಂತೆ, ಡೆಹರಾಡೂನಿನಲ್ಲಿ ಇದ್ದ ತನ್ನ ಕಾರ್ಯಾಲಯಕ್ಕೆ ಕೆಲಸಕ್ಕೆ ಹೋಗಲು ತೊಡಗಿದರು.
ರಾಸ್ ಬಿಹಾರಿ ಬೋಸ್ ಅವರಿಗೆ ನೆರವಾಗಿದ್ದವರನ್ನು ಪೋಲಿಸ್ ಕೈದು ಮಾಡಿತು. ಅವರನ್ನು ಹಿಡಿಯಲು ಲಾಹೋರಿಗೆ ಹೋದರು. ಆದರೆ, ಮಾರುವೇಷದಲ್ಲಿ ಪೋಲಿಸರಿಗೆ ಮೋಸಮಾಡಿ ಬಂಗಾಳದೊಳಗೆ ನುಸಿಳಿಕೊಂಡರು. ಇಚ್ಛಾರೂಪಧಾರಿಯಾಗಿ ಅವರು ಇದ್ದರು ಎಂದು ಪೋಲಿಸ್ ಟಿಪ್ಪಣಿಗಳು ಹೇಳುತ್ತವೆ. ಓಡುವ ರೈಲಿನಲ್ಲಿ ಪೋಲಿಸರು ಸುತ್ತಿ ಬಳಸಿದಾಗಲೂ, ಸನ್ಯಾಸಿಯಂತೆ ವೇಷಧರಿಸಿ ತಪ್ಪಿಸಿಕೊಂಡಿದ್ದಾರೆ. ಒಮ್ಮೆ ಉನ್ನತ ಪೋಲಿಸ್ ಅಧಿಕಾರಿಯ ಕುದುರೆ ಗಾಡಿ ಓಡಿಸುವವರಾಗಿಯೂ ರೂಪ ಬದಲಾಯಿಸಿಕೊಂಡು, ಜತೆಯಲ್ಲಿಯೇ ಪ್ರಯಾಣ ಮಾಡಿ ಕಣ್ಣಿಗೆ ಧೂಳೆರಚಿ ಹೋದರು.
ಮತೊಮ್ಮೆ, ಪೋಲಿಸು ಅಧಿಕಾರಿಗಳು ಹುಡುಕಿಕೊಂಡು ಬಂದಾಗ ಸತ್ತು ಹೋಗಿ ಆವಿಯಾಗಿ ಅಲೆದಾಡುವ ಮುದುಕನಂತೆ ವೇಷ ಧರಿಸಿ ಪೋಲಿಸಿನವರನ್ನು ಹೆದರಿಸಿ ತಪ್ಪಿಸಿಕೊಂಡಿದ್ದಾರೆ. ಮಗದೊಮ್ಮೆ ತನ್ನನ್ನು ಹಿಡಿಯಲು ಅಲೆದಾಡುತ್ತಿದ್ದ ಪೋಲಿಸ್ ಆಧಿಕಾರಿಯ ಬಳಿ, ಕೈರೇಖೆ ನೋಡಿ ಜಾತಕ ಹೇಳುವವರಂತೆ ಹೋಗಿ – ನಾಳೆ ಖಂಡಿತ ರಾಸ್ ಬಿಹಾರಿ ಬೋಸನ್ನು ಕೈದು ಮಾಡಬಹುದೆಂದು ನಂಬಿಕೆ ಹುಟ್ಟಿಸಿ ಅವರ ವಾಹನದಲ್ಲಿಯೇ ತಪ್ಪಿಸಿಕೊಂಡು ಹೋಗಿದ್ದಾರೆ. ಹೀಗೆ ರಾಸ್ ಬಿಹಾರಿ ಬೋಸಿನ ನಿಜ ಬದುಕಿನಲ್ಲಿ ನಡೆದ ಸ್ವಾರಸ್ಯವಾದ ಘಟನೆಗಳನ್ನು ಇಂದಿನವರೆಗೆ ಕತೆಗಳಾಗಿ ಮಾತನಾಡಲಾಗುತ್ತದೆ.
ಅದರ ಪರಮಾವಧಿ ಎನ್ನುವಂತೆ, 1915, ಮೇ 12 ರಂದು, ಎಸ್.ಎಸ್. ಸನೂಕಿಮಾರು ಎಂಬ ಜಪಾನೀಯ ಹಡಗಿನಲ್ಲಿ ಮಹಾಕವಿ ಠಾಗೂರ್ ಅವರ ಆಪ್ತ ಕಾರ್ಯದರ್ಶಿ ಎಂದು ಹೇಳಿಕೊಂಡು, ಬ್ರಿಟೀಷ್ ಪೊಲೀಸರನ್ನು ಮೋಸಗೊಳಿಸಿ ತಪ್ಪಿಸಿಕೊಂಡು ಸಿಂಗಪೂರಿಗೆ ಹೋಗಿ ಅಲ್ಲಿಂದ ಜಪಾನಿಗೆ ಹೋದರು. ಬ್ರಿಟೀಷ್ ಪೋಲಿಸ್ ಅವರನ್ನು ಅಲ್ಲಿಯೂ ಅಟ್ಟಿಸಿತು.
ಆಗ ಜಪಾನ್ ವಿಶ್ವವಿದ್ಯಾಲಯದಲ್ಲಿ ಕೇರಳದಿಂದ ಕೆಲವು ವಿದ್ಯಾರ್ಥಿಗಳು ಮೀನುಗಾರಿಕೆ ಕ್ಷೇತ್ರದಲ್ಲಿ ಕಲಿಯುತ್ತಿದ್ದರು. ಅವರಲ್ಲಿ ಒಬ್ಬರಂತೆ ರಾಸ್ ಬಿಹಾರಿ ಬೋಸ್ ವಿಶ್ವ ವಿದ್ಯಾಲಯದೊಳಗೆ ತಿರುಗಾಡುತ್ತಿದ್ದರು. ಅಲ್ಲಿಗೆ ಪೋಲಿಸ್ ಪಡೆ ಹೋಯಿತು. ಬುದ್ಧ ಬಿಕ್ಷು, ವ್ಯಾಪಾರಿ, ಟೀ ಅಂಗಡಿ ಮಾಲಿಕ, ಕೂಲಿ ಆಳು, ನಾಟಕ ನಟ ಎಂದು ಹಲವು ವೇಷಗಳನ್ನು ಧರಿಸಿ ಮೂರು ವರ್ಷ ಜಪಾನಿನಲ್ಲಿ ವಾಸವಿದ್ದರು. ಹತ್ತು ದಿನಗಳಿಗಿಂತ ಹೆಚ್ಚಾಗಿ ಒಂದು ಸ್ಥಳದಲ್ಲಿ ಉಳಿದುಕೊಳ್ಳಲು ಸಾಧ್ಯವಿರಲಿಲ್ಲ. ಪೋಲಿಸ್ ಸುತ್ತಿ ಬಳಸಿಬಿಡುತ್ತಿದ್ದರು. ತಪ್ಪಿಸಿಕೊಂಡು ಹೋಗಲಾಗದೆ ಬ್ರಿಟೀಷ್ ಗುಪ್ತಚರರು ಹಿಂಬಾಲಿಸುತ್ತಲೇ ಇದ್ದರು.

ಆ ದಿನಗಳಲ್ಲಿ ಉನ್ನತ ಶಿಕ್ಷಣಕ್ಕಾಗಿ ಕೇರಳದಿಂದ ಟೋಕಿಯೋಗೆ ಬಂದಿದ್ದ ನಾಯರಚ್ಚನ್ ಎಂದು ಕರೆಯಲ್ಪಡುವ ಎ.ಎಂ. ನಾಯರ್ ಅವರ ಪರಿಚಯ ದೊರಕಿತು. ಅವರು, ರಾಸ್ ಬಿಹಾರಿ ಬೋಸ್ ಅವಿತಿಟ್ಟುಕೊಳ್ಳಲು ಹಲವು ಸಹಾಯಗಳನ್ನು ಮಾಡಿದರು. ಟೋಕಿಯೋದಲ್ಲಿ ನಕಮುರಾಯಾ (Nakamuraya) ಎಂಬ ರೆಸ್ಟಾರಂಟ್ ಪ್ರಸಿದ್ಧವಾದದ್ದು. ಆ ರೆಸ್ಟಾರಂಟನ್ನು ನಡೆಸುತ್ತಿದ್ದವರು ಸೋಮ ಅಯ್ಸೋ. ಅವರು ರಾಸ್ ಬಿಹಾರಿ ಬೋಸ್ ತಲೆಮರೆಯಾಗಿರಲು ನೆರವಾದರು. ಆ ಸಮಯದಲ್ಲಿ ಅಯ್ಸೋ ಮಗಳ ಜತೆ ರಾಸ್ ಬಿಹಾರಿ ಬೋಸ್ ಅವರಿಗೆ ಪ್ರೇಮ ಉಂಟಾಯಿತು. ಜಪಾನ್ ಹುಡುಗಿಯನ್ನು ಮದುವೆಯಾದರೆ ಬ್ರಿಟೀಷ್ ಪೋಲಿಸ್ ಅಟ್ಟಿಸುವುದನ್ನು ತಪ್ಪಿಸಿಕೊಳ್ಳಬಹುದು ಎಂಬುದಕ್ಕಾಗಿ ಸೋಮ ಆಯ್ಸೋರ ಮಗಳನ್ನು ಮದುವೆಯಾಗಿ ಜಪಾನ್ ದೇಶದ ಪ್ರಜೆಯಾದರು.
ನಂತರ, ರಾಸ್ ಬಿಹಾರಿ ಬೋಸ್ ನಕಮುರಾಯಾ ರೆಸ್ಟಾರಂಟಿನಲ್ಲಿ ಭಾರತೀಯ ಆಹಾರಗಳನ್ನು ಪರಿಚಯಿಸುತ್ತಾರೆ. ಇಂದೂ ಸಹ, ಟೋಕಿಯೋದಲ್ಲಿ ಭಾರತೀಯ ಖಾದ್ಯಗಳನ್ನು ತಯಾರಿಸುವ ರೆಸ್ಟಾರಂಟಾಗಿ ನಕಮುರಾಯಾ ಪ್ರಸಿದ್ಧವಾಗಿದೆ. 1942ರಲ್ಲಿ ರಾಸ್ ಬಿಹಾರಿ ಬೋಸ್, ಜಪಾನಿನಲ್ಲಿದ್ದ ಭಾರತೀಯ ವಿದ್ಯಾರ್ಥಿಗಳಲ್ಲಿ ಸ್ವಾತಂತ್ರದ ಕಿಚ್ಚಿದ್ದವರನ್ನು ಒಂದುಗೂಡಿಸಿ ಒಂದು ಸಭೆಯನ್ನು ಏರ್ಪಾಡು ಮಾಡುತ್ತಾರೆ. ಆ ಸಭೆಯಲ್ಲಿ, ಭಾರತ ಬಿಡುಗಡೆ ಹೊಂದಲು ಬ್ರಿಟೀಷರನ್ನು ಎದುರಿಸಲು ಬಲಿಷ್ಠವಾದ ಸೈನ್ಯದ ಅಗತ್ಯವಿದೆ ಎಂದು ತಿಳಿಸಿದರು. ಅದರ ಮೊದಲ ಹೆಜ್ಜೆಯಾಗಿ ಭಾರತ ಸ್ವಾತಂತ್ರ ಲೀಗ್ ಒಂದನ್ನು ರಚಿಸಿದರು. ಅದಕ್ಕೆ ಜಪಾನ್ ಸರಕಾರ ನೆರವು ನೀಡಿತು.
ಜಪಾನಿಯರಿಂದ ರಣರಂಗದಲ್ಲಿ ಸೆರೆಹಿಡಿದು ಕೈದಿಗಳಾಗಿದ್ದ ಭಾರತೀಯರನ್ನೂ, ಸ್ವಾತಂತ್ರದ ಕಿಚ್ಚಿದ್ದ ಎಲ್ಲರನ್ನೂ ಸಂಘಟಿಸಿ ರೂಪಿಸಿದ್ದೆ ಇಂಡಿಯನ್ ನ್ಯಾಷನಲ್ ಆರ್ಮಿ. ಮೋಹನ್ ಸಿಂಗ್ ನೆರವಿನಿಂದ ಅದಕ್ಕೆ ನೇತೃತ್ವವನ್ನು ವಹಿಸಲು ನೇತಾಜಿಯನ್ನು ಕರೆಯಲಾಯಿತು. ನೇತಾಜಿಯನ್ನು, ರಾಸ್ ಬಿಹಾರಿ ಬೋಸ್ ಆಯ್ಕೆ ಮಾಡಲು ಮುಖ್ಯವಾದ ಕಾರಣ, ಅವರೂ ತನ್ನಂತೆಯೇ ಒಬ್ಬ ಸಾಹಸವುಳ್ಳ ಹೋರಾಟಗಾರರಾಗಿದ್ದರು ಎಂಬುದೇ!
ಸಿಂಗಪೂರಿನಲ್ಲಿ ನಡೆದ ಸಮಾರಂಭದಲ್ಲಿ, ಭಾರತೀಯ ರಾಷ್ಟ್ರೀಯ ಸೈನ್ಯದ ನೇತೃತ್ವವನ್ನು ನೇತಾಜಿ ವಹಿಸಿಕೊಂಡರು. 80,000ಕ್ಕೂ ಹೆಚ್ಚಾದ ಭಾರತೀಯರು ಅದರಲ್ಲಿ ಸೇರಿದರು. ಅದರಲ್ಲಿ, ಅರ್ಧಕ್ಕಿಂತಲೂ ಹೆಚ್ಚಿನವರು ತಮಿಳರಾಗಿದ್ದರು. ಮಹಿಳೆಯರಿಗಾಗಿ ಪ್ರತ್ಯೇಕ ವಿಭಾಗ ಆ ಸೈನ್ಯದಲ್ಲಿತ್ತು. ನೇತಾಜಿಯವರ ನೇತೃತ್ವದಲ್ಲಿ ಇಂಡಿಯನ್ ನ್ಯಾಷನಲ್ ಆರ್ಮಿ ವೀರಾವೇಶದಿಂದ ಮಣಿಪುರದ ಕೋಹಿಮ ಮತ್ತು ಇಂಪಾಲದ ಕಡೆಗೆ ಮುನ್ನುಗ್ಗಿತು. ಮತ್ತೊಂದು ಕಡೆ ಜಪಾನಿನ ಮೈತ್ರಿಪಡೆ ಅಂಡಮಾನನ್ನು ವಶಪಡಿಸಿಕೊಂಡು, ಅಲ್ಲಿ ಇಂಡಿಯನ್ ನ್ಯಾಷನಲ್ ಆರ್ಮಿಯ ಹೊಸ ಆಡಳಿತವನ್ನು ಜಾರಿಗೆ ತರುವುದಾಗಿ ಘೋಷಿಸಿತು. ಅದರ ಗವರ್ನರ್ ಜನರಲ್ ಆಗಿ ಕರ್ನಲ್ ಲೋಕನಾಥನ್ ಅವರನ್ನು ನೇಮಕಮಾಡಲಾಯಿತು.

ಜಪಾನ್ ಸೈನ್ಯದ ಜತೆಯಲ್ಲಿದ್ದುಕೊಂಡೇ ಸಂಚುಮಾಡಿ ಹಿಮ್ಮೆಟ್ಟಿದ್ದರಿಂದ, ನೇತಾಜಿಯವರ ‘ದಿಲ್ಲಿ ಚಲೋ’ ಎಂಬ ಯೋಜನೆ ಸೋಲನ್ನು ಕಂಡಿತು. ಇಂಡಿಯನ್ ನ್ಯಾಷನಲ್ ಆರ್ಮಿಯ (ಆಜಾದ್ ಹಿಂದ್ ಸೇನೆ) ಕೆಲವು ಸಿಪಾಯಿಗಳನ್ನು ಬ್ರಿಟೀಷ್ ನೈನ್ಯ ಸೆರೆಹಿಡಿದು, ಅವರನ್ನು ದಿಲ್ಲಿಯಲ್ಲಿ ಒಂದೇ ದಿನ ನೇಣುಹಾಕಲಾಯಿತು. ದೊಡ್ಡ ಕನಸೊಂದು ಕಣ್ಣ ಮುಂದೆಯೇ ನಶಿಸಿ ಹೋಗುವುದನ್ನು ರಾಸ್ ಬಿಹಾರಿ ಬೋಸ್ ಅರಿತುಕೊಂಡರು.
ಎರಡನೆಯ ಮಹಾ ಯುದ್ಧದ ಕಾಲದಲ್ಲಿ, ಟೋಕಿಯೋ ಮೇಲೆ ವಿಮಾನಗಳು ಗುಂಡಿನ ಮಳೆ ಸುರಿದವು. ಹೆಂಡತಿ ಮಕ್ಕಳನ್ನು ಸುರಕ್ಷಿತವಾದ ಸ್ಥಳಕ್ಕೆ ಕಳುಹಿಸಿಕೊಟ್ಟು ಅವರು ಮಾತ್ರ ಟೋಕಿಯೋ ನಗರದಲ್ಲಿ ಉಳಿದುಕೊಂಡರು. ಜನವರಿ 21, 1945ರಂದು ರಾಸ್ ಬಿಹಾರಿ ಬೋಸ್ ಸಹ ಮರಣ ಹೊಂದಿದರು.
ಬ್ರಿಟೀಷ್ ಸರಕಾರಕ್ಕೆ ಸಿಂಹಸ್ವಪ್ನವಾಗಿದ್ದ ರಾಸ್ ಬಿಹಾರಿ ಬೋಸ್ ಅವರ ಸ್ವಾತಂತ್ರದ ಕನಸು ಅವರ ಜೀವನ ಕಾಲದಲ್ಲಿ ನೆರವೇರಲಿಲ್ಲ. ಆದರೆ, ಅವರು ರೂಪಿಸಿದ ಉದ್ವೇಗ ವಿದೇಶಗಳಲ್ಲಿ ವಾಸಿಸುವ ಭಾರತೀಯರನ್ನು ಸಂಘಟಿಸಿತು. ಮಲೇಷಿಯಾ, ಬರ್ಮಾ, ಸಿಂಗಪೂರಿನಲ್ಲಿದ್ದ ಭಾರತೀಯರನ್ನು ಒಂದುಗೂಡಿಸಿತು. ಬಲಿಷ್ಟವಾದ ಆ ಸಂಘಟನೆಗೆ ಕಾರಣವಾಗಿ ರಾಸ್ ಬಿಹಾರಿ ಬೋಸ್ ಇದ್ದರು ಎಂಬುದೇ ಅವರ ಶ್ರೇಷ್ಠತೆ.
ರಾಸ್ ಬಿಹಾರಿ ಬೋಸ್ ಹೋರಾಡಿ ಒಂದುಗೂಡಿಸಿದ ಆ ಸಂಘಟನೆ, ಇಂದು ಛಿದ್ರವಾಗಿರುವುದಲ್ಲದೆ ರಾಸ್ ಬಿಹಾರಿ ಬೋಸಿನ ಇತಿಹಾಸವೂ ಎಳೆಯ ತಲೆಮಾರಿನವರು ಅರಿತುಕೊಳ್ಳಲಾಗದಂತೆ ಮುಚ್ಚಿಹಾಕಲಾಗಿದೆ.
ಇತಿಹಾಸದ ಘಟನೆಗಳನ್ನು ಸಲೀಸಾಗಿ ದಾಟಿಹೋಗುವ ಮಾಹಿತಿಗಳಾಗಿ ಪರಿವರ್ತಿಸಿರುವುದು, ಒಬ್ಬ ತನ್ನನ್ನು ಭಾರತೀಯನಾಗಿ ಭಾವಿಸಲಾಗದಿರುವುದಕ್ಕೆ ಕಾರಣವಾಗಿದೆ.
| ಇನ್ನು ನಾಳೆಗೆ |






0 Comments