ನೀರ ನಿಲುತಾಣ:ಅತಿಬುದ್ಧಿವಂತಿಕೆಯ ವಿಕಾರ
ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ. ಬಿ.ಸಿ.ರೋಡು (ಬಂಟ್ವಾಳ)ದಲ್ಲಿ ೧೯೮೪ರಿಂದ ೨೦೦೯ರ ಮಾರ್ಚ್ ವರೆಗೆ “ನೇಸರ ಮುದ್ರಣ” ಎಂಬ ಮುದ್ರಣಾಲಯ ನಡೆಸಿ, ಈಗ ಅದರಿಂದ ನಿವೃತ್ತ. ನಾನು ತುಂಬ ಪ್ರಭಾವಿತನಾಗಿರುವುದು ಗಾಂಧಿಯಿಂದ, ಡಾ. ರವೀಂದ್ರನಾಥ ಶಾನುಭಾಗರಿಂದ.
–
ಈ ವಿವಾದದಲ್ಲಿ ತೊಡಗಿಕೊಳ್ಳುವುದು ಅಗತ್ಯವೆ ಎಂಬ ಗೊಂದಲದಿಂದ ನಾನಿನ್ನೂ ಹೊರಗೆ ಬಂದಿಲ್ಲ. ಏನಾದರಾಗಲಿ ಬರೆದು ಬಿಡುತ್ತೇನೆ. ಸಾಹಿತ್ಯದ ವಿಷಯದಲ್ಲಿ ಚರ್ಚೆ ಮಾಡುವ ಆಸಕ್ತಿ ನನಗೆ ಅಷ್ಟಾಗಿ ಇಲ್ಲ. ಒಂದು ಒಳ್ಳೆಯ ಪುಸ್ತಕ ಎಲ್ಲಿಯಾದರೂ ಸಿಕ್ಕಿದರೆ ಓದುವುದು, ನಾಟಕ, ಆಟ ಒಳ್ಳೆಯದಿದೆ ಎಂದು ಯಾರಾದರೂ ಹೇಳಿದರೆ ನೋಡುವುದು, ತೀರ ಆಪ್ತವಲಯದಲ್ಲಿ ಅದು ಚೆನ್ನಾಗಿದೆ ಅಥವಾ ಇಲ್ಲ ಎಂದು ಒಟ್ರಾಶಿ ನನ್ನ ಅಭಿಪ್ರಾಯದ ವಿನಿಮಯ, ಇಷ್ಟಕ್ಕೆ ನನ್ನ ಸಾಹಿತ್ಯಾಸಕ್ತಿ ಸೀಮಿತ.
ಮೊನ್ನೆ ಗೆಳೆಯ ಅಶೋಕರು ಉಡುಪಿಗೆ ಹೋಗೋಣ ಎಂದು ಫೋನ್ ಮಾಡಿದಾಗ ಉದಯ ಭವಾಲ್ಕರರ ಸಂಗೀತ ಕಛೇರಿಗೆ ಎಂದುಕೊಂಡು, ಹಿಂದೆ ಮುಂದೆ ನೋಡದೆ, “ಖಂಡಿತ ಬರುತ್ತೇನೆ” ಎಂದೆ. ನಂತರ ಗೊತ್ತಾಯಿತು, ಅವರು ಹೇಳುತ್ತಿರುವುದು ನೀನಾಸಂನ ಮರುತಿರುಗಾಟದ ನಾಟಕಕ್ಕೆ ಎಂದು. ಅದೂ ಆಗಬಹುದು ಎಂದು ಮನಸ್ಸಿಗೆ ಅನ್ನಿಸಿದ್ದರಿಂದ ಹೊರಡಲು ತಯಾರಾದೆ. ಯಾವ ನಾಟಕ ಏನು ಕತೆ ಎಂಬುದನ್ನೂ ಕೇಳಲು ಹೋಗಲಿಲ್ಲ. ಮರುತಿರುಗಾಟ ಎಂದ ಕೂಡಲೇ ಕೆಲವು ವರ್ಷಗಳ ಕೆಳಗೆ ಮಂಗಳೂರಿನ ಕಾರ್ಪೋರೇಷನ್ ಬ್ಯಾಂಕ್ ಸಭಾಂಗಣದಲ್ಲಿ ಇದೇ ನೀನಾಸಂನವರು ಆಡಿದ್ದ, ಕುಮಾರವ್ಯಾಸ ಭಾರತದ ಒಂದು ಭಾಗವನ್ನು ಆಧಾರವಾಗಿಟ್ಟುಕೊಂಡ, ಒಂದು ಪ್ರಸಂಗವನ್ನು ನೋಡಿದ್ದೆ. ಭಾರಿ ಖುಷಿಯಾಗಿತ್ತು. ಹಾಗಾಗಿ ಈ ಸಲವೂ ಒಪ್ಪಿಬಿಟ್ಟೆ.
ಈ ನಡುವೆ “ಅವಧಿ”ಯಲ್ಲಿ ಹರೀಶ ಕೇರರ ವಿಮರ್ಶೆ ಪ್ರಕಟವಾದಾಗ “ಈ ನಾಟಕ ನೋಡುವ ಕೆಲಸ ನನಗೆ ಬೇಡ” ಅನ್ನಿಸಿತು. ಆದರೂ, ಹೇಗೂ ಒಪ್ಪಿಯಾಗಿದೆ, ಏನಿಲ್ಲದಿದ್ದರೂ ಹೋಗುವಾಗ ಬರುವಾಗ ಕೆಲವು ಸಜ್ಜನರ ಒಡನಾಟ ಸಿಗುತ್ತದೆ ಎಂಬುದರಿಂದ ಧೈರ್ಯ ಮಾಡಿದೆ.
*****
ನಾನು ನನ್ನ ಅಭಿಪ್ರಾಯಗಳನ್ನು ಹೇಳುತ್ತಿರುವುದು ಒಬ್ಬ ಸಾಮಾನ್ಯ ಪ್ರೇಕ್ಷಕನ ದೃಷ್ಟಿಯಿಂದ. ನಾಟಕ ಮಾಡುವವರು-ಬರೆಯುವವ, ನಾಟಕ ಆಯ್ಕೆ ಮಾಡುವವ, ನಾಟಕವನ್ನು ನಿರ್ದೇಶಿಸುವವ-ಇಂಥವರನ್ನು ನಾನು ದೃಷ್ಟಿಯಲ್ಲಿಟ್ಟುಕೊಂಡಿಲ್ಲ. ಆದರೆ ಇವರೆಲ್ಲ ನಾಟಕ ತಯಾರಿಸುವಾಗ, ನಾಟಕವನ್ನು ನೋಡುವ ಪ್ರೇಕ್ಷಕನನ್ನೂ ಅಗತ್ಯವಾಗಿ ಗಮನದಲ್ಲಿಟ್ಟುಕೊಳ್ಳಬೇಕು ಎಂಬುದು ನನ್ನ ಆಗ್ರಹ.
ನಾಟಕ ಎಂದರೆ ಅದರಲ್ಲಿ ನಟರು, ಘಟನೆಗಳು ಅಥವಾ ಕಥೆ, ಮಾತು, ಸಂಗೀತ, ವೇಷಭೂಷಣ, ಪ್ರಸಾಧನ, ಬೆಳಕು, ರಂಗವಿನ್ಯಾಸ ಇತ್ಯಾದಿಗಳೆಲ್ಲ ಇರುತ್ತವೆ ತಾನೆ? ಇವೆಲ್ಲ ನಾಟಕದ ಪರಿಕರಗಳು. ಇವೆಲ್ಲ ಇರುವುದು ನಾಟಕವನ್ನು ಪರಿಣಾಮಕಾರಿಯಾಗಿ ಪ್ರೇಕ್ಷಕರ ಎದುರಿಗೆ ಪ್ರದರ್ಶಿಸಲಿಕ್ಕೆ. “ವಿಭಿನ್ನ”ವಾಗಿರಬೇಕು ಎಂಬ ಕಾರಣಕ್ಕೋ, ತನ್ನ ನಾಟಕದ ವಸ್ತುವಿಗೆ ಇದು ಅಗತ್ಯವಿಲ್ಲ ಎಂಬುದರಿಂದಲೋ, ಕೆಲವು ನಿರ್ದೇಶಕರು ಇವುಗಳಲ್ಲಿ ಕೆಲವನ್ನು ಪೂರ್ತಿಯಾಗಿ ಕೈಬಿಡಬಹುದು. ರಂಗ ವಿನ್ಯಾಸವನ್ನೇ ಮಾಡದೆ ಖಾಲಿ ರಂಗಸ್ಥಳದಲ್ಲಿ ನಾಟಕ ಮಾಡಬಹುದು; ರಂಗಸ್ಥಳ ಕಾಣಲು ಬೇಕಾದಷ್ಟು ಮಾತ್ರ ಬೆಳಕಿನ ವ್ಯವಸ್ಥೆ ಮಾಡಿಕೊಳ್ಳಬಹುದು, ಹೀಗೆ. ಆದರೆ, ಕೆಲವು ಮುಖ್ಯ ಪರಿಕರಗಳನ್ನು ನಾಟಕದಿಂದ ತೆಗೆದುಬಿಟ್ಟರೆ, ಉದಾಹರಣೆಗೆ “ನನ್ನ ನಾಟಕಕ್ಕೆ ನಟರೇ ಬೇಡ”, “ನನ್ನ ನಾಟಕಕ್ಕೆ ಮಾತೇ ಬೇಡ” ಎಂದು ಹೇಳಿದರೆ, ಅಂಥ ನಾಟಕ ಒಂದು ಪ್ರಯೋಗವಾಗಿ ಉಳಿಯುತ್ತದೆ ಹೊರತು, ಸಾರ್ವತ್ರಿಕವಾಗಿ ನೋಡಬಹುದಾದ ನಾಟಕ ಆಗುವುದಿಲ್ಲ.
ಈಗ ನಮ್ಮ “ನೀರ ನಿಲುತಾಣ”ದಲ್ಲಿ “ಮಾತ”ನ್ನು ತೆಗೆದುಬಿಟ್ಟಿದ್ದಾರೆ. ಮಾತನ್ನೇ ತೆಗೆದುಬಿಟ್ಟ ಮೇಲೆ, ನಟರಿಗೇನು ಕೆಲಸ? ಅವರನ್ನೂ ತೆಗೆದುಬಿಡಬಹುದಿತ್ತಲ್ಲ ಎಂದರೆ, ಹಾಗಿಲ್ಲ, ನಟರನ್ನು ಉಳಿಸಿಕೊಂಡಿದ್ದಾರೆ. ಈ ನಟರು ಮಾತಾಡುವುದಿಲ್ಲ. ಬರೀ ಚಲನೆ, ನಟನೆ ಮಾಡುತ್ತಾರೆ. ಇವರ ಚಲನೆ, ನಟನೆಗಳು ನಡೆಯುವಾಗ ಕೆಲವೊಮ್ಮೆ ಹಿನ್ನೆಲೆಯಲ್ಲಿ ಸಂಗೀತ ಕೇಳುತ್ತದೆ. ಕೆಲವೊಮ್ಮೆ ಬೆಳಕು ನಿರ್ದಿಷ್ಟ ನಟನ ಮೇಲೆ ಕೇಂದ್ರೀಕರಿಸುತ್ತದೆ. ಎಂದರೆ ಒಟ್ಟು ಅರ್ಥ, ನಾಟಕದ ದೃಶ್ಯಗಳು ಏನನ್ನೋ ಹೇಳಲು ಪ್ರಯತ್ನಿಸುತ್ತಿವೆ. ಹೇಳುವ ಆ ಪ್ರಯತ್ನಕ್ಕೆ ನಾಟಕದ ಬಾಕಿ ಪರಿಕರಗಳನ್ನು ನಾಟಕಕಾರ/ನಿರ್ದೇಶಕ ಬಳಸಿಕೊಳ್ಳುತ್ತಾನೆ. ಆದರೆ ಮಾತನ್ನು ಬಳಸಿಕೊಳ್ಳಲು ಮಾತ್ರ ಅವನು ನಿರಾಕರಿಸುತ್ತಿದ್ದಾನೆ. ಇದು ನನಗೆ ಅರ್ಥವಾಗುವುದಿಲ್ಲ. ನಾಟಕಕಾರನಿಗೆ ಏನನ್ನೋ ಹೇಳಲಿಕ್ಕಿದೆ ಎಂಬುದು ಸ್ಪಷ್ಟ. ಹಾಗಿಲ್ಲದಿದ್ದರೆ ನಾಟಕ ಸೃಷ್ಟಿಯಾಗುತ್ತಲೇ ಇರಲಿಲ್ಲ. ಹೇಳಬೇಕಾದ್ದನ್ನು ಹೇಳಲು ಮಾತನ್ನು ಉಪಯೋಗಿಸಿಕೊಂಡಿದ್ದರೆ ಏನು ಸಮಸ್ಯೆಯಾಗುತ್ತಿತ್ತು? ಮಾತನ್ನು ಕೈಬಿಟ್ಟದ್ದರಿಂದ ನಾಟಕದ ಅನುಭವ ಪ್ರೇಕ್ಷಕನಿಗೆ ಹೆಚ್ಚು ಪರಿಣಾಮಕಾರಿಯಾಗಿ ಹೇಗೆ ದಾಟಿತು?
{“ನಿಮಗೆ ನಾಟಕದ ಹಿನ್ನೆಲೆ ಗೊತ್ತಿಲ್ಲ. ನಾಟಕಕಾರನ ಹಿನ್ನೆಲೆ ಗೊತ್ತಿಲ್ಲ. ನಾಟಕ ಏನು ಹೇಳುತ್ತಿದೆ ಎನ್ನುವುದು ನಿಮಗೇ ಅರ್ಥವೇ ಆಗಿಲ್ಲ. ಹಾಗಾಗಿ ನೀವು ಹೀಗೆ ಮಾತಾಡುತ್ತಿದ್ದೀರಿ. ನೀವು ನಾಟಕದ ಹಿನ್ನೆಲೆಯನ್ನು ಕೊಂಚ ಓದಿಕೊಂಡು ಮತ್ತೆ ಮಾತಾಡಿ” ಎಂದು ನನಗೆ ಹೇಳುವವರು ಇರಬಹುದು. ನಾನು ನಾಟಕಕ್ಕೆ ಹೋಗುವುದು ಯಾವ ಪೂರ್ವತಯಾರಿಯೂ ಇಲ್ಲದೆ. ಕಾಕತಾಳೀಯವಾಗಿ ಕೆಲವು ನಾಟಕದ ಬಗ್ಗೆ ಮೊದಲೇ ಗೊತ್ತಿರಬಾರದೆಂದಿಲ್ಲ. ಹಾಗೆ ಗೊತ್ತಿದ್ದಾಗ ನಾಟಕ ಅರ್ಥ ಮಾಡಿಕೊಳ್ಳುವುದು ಸ್ವಲ್ಪ ಸುಲಭವಾಗಿರಬಹುದು.ನಾನು ಮೃಚ್ಛಕಟಿಕವನ್ನು ಓದಿರಲಿಲ್ಲ. ಕೆಲವು ವರ್ಷಗಳ ಹಿಂದೆ ಆಡಿದ ಚಿರೇಬಂಡಿವಾಡೆ (ನಾನು ಹೆಸರು ತಪ್ಪು ಹೇಳಿದೆನೆ?)ಯನ್ನು ಓದಿರಲಿಲ್ಲ. ಶೂದ್ರ ತಪಸ್ವಿಯನ್ನೂ ಓದಿರಲಿಲ್ಲ. ಆದರೂ ಈ ನಾಟಕಗಳನ್ನು ನಾನು ನೋಡಿ ಆನಂದಿಸಿದ್ದೇನೆ. ಹಾಗಾದರೆ ಈ ನೀರ ನಿಲುತಾಣ ಯಾವ ದೊಡ್ಡ ಕುಂಬಳಕಾಯಿ ಅಂತ ನನಗೆ ಅರ್ಥವಾಗದೆ ಹೋಗುತ್ತದೆ?}
ನನಗೆ ಇದು ನೇರವಾಗಿ ಉಣ್ಣುವುದು ಬಿಟ್ಟು, ಕೈಯನ್ನು ಕುತ್ತಿಗೆಯ ಹಿಂಭಾಗದಿಂದ ತೆಗೆದುಕೊಂಡು ಹೋಗಿ ಬಾಯಿಗೆ ತುತ್ತು ಹಾಕಿಕೊಳ್ಳುವ ಹಾಗೆ ಕಾಣುತ್ತದೆ.
ಅದು ಹಾಗೆ ಹಾಕಿಕೊಳ್ಳುವವರ ಕರ್ಮ ನಮಗೇನು ಎಂದು ಸುಮ್ಮನಿರುವಂತಿಲ್ಲ. ಯಾಕೆಂದರೆ, ನಾಟಕದಿಂದ ತಮಗೆ ಏನೋ ಆನಂದ ಸಿಗುತ್ತದೆ ಎಂಬ ನಿರೀಕ್ಷೆಯಿಂದ ಪ್ರೇಕ್ಷಕರು ಕೂತು ಆ ನಾಟಕವನ್ನು ನೋಡುತ್ತಿದ್ದಾರೆ. ಆ ಆನಂದವನ್ನು ಕೊಡಬೇಕಾದವ ಮಾತೆಂಬ ಪರಿಕರದ ಸಹಾಯವನ್ನು ತಿರಸ್ಕರಿಸಿರುವುದರಿಂದ, ಮತ್ತು ಅದಕ್ಕೆ ಬದಲಿಯಾಗಿ ಪರಿಣಾಮಕಾರಿಯಾದ ಬೇರೊಂದು ಪರಿಕರವನ್ನು ಕಂಡುಕೊಳ್ಳದೆ ಇರುವುದರಿಂದ. ಹೇಳಲು ತಿಣುಕುವುದು ಅವನಿಗೆ ಅನಿವಾರ್ಯವಾಗುತ್ತದೆ. ಅವನ ಈ ತಿಣುಕಾಟ ಪ್ರೇಕ್ಷಕನಿಗೆ ಒಂದು ಹಿಂಸೆಯಾಗಿ ಪರಿಣಮಿಸುತ್ತದೆ. (ಭಾಷಣಕಾರನೊಬ್ಬ ಭಾಷಣ ಮಾಡುತ್ತಿರುವಾಗ ಅವನಿಗೆ ಸರಿಯಾದ ಒಂದು ಶಬ್ದ ಸಿಗದೆ ತಡಕಾಡತೊಡಗಿದರೆ, ಕೇಳುಗರು ಅವನ ಸಹಾಯಕ್ಕೆ ಧಾವಿಸುವುದನ್ನು ನೀವು ಕಂಡಿರಬಹುದು. ಕೇಳುಗರು ಯಾಕೆ ಹಾಗೆ ಮಾಡುತ್ತಾರೆ? ಯಾಕೆಂದರೆ ಭಾಷಣಕಾರನ ತಿಣುಕಾಟ ನೋದುವುದು ಅವರಿಗೆ ಒಂದು ಹಿಂಸೆ. ಅದರಿಂದ.) ಹೀಗಾಗಿ “ನೀರ ನಿಲುತಾಣ” ನೋಡುವುದೆಂದರೆ ಎರಡು ಗಂಟೆಗಳು ನಿರಂತರವಾಗಿ ನಾಟಕಕಾರ/ನಿರ್ದೇಶಕನ ತಿಣುಕಾಟವನ್ನು ಅಸಹಾಯಕರಾಗಿ ನೋಡುವ ಹಿಂಸೆಯೇ ಹೊರತು ಬೇರೇನೂ ಅಲ್ಲ.
ಈಗ ಚಲನೆಗೆ ಬರೋಣ. ಸಾಮಾನ್ಯವಾಗಿ ನಾಟಕದಲ್ಲಿ ಪಾತ್ರಗಳ ಚಲನೆಯ ವೇಗ ಎನ್ನುವುದು ನಿಜಜೀವನದಲ್ಲಿ ನಾವು ನೋಡುವಂತೆಯೇ ಇರುತ್ತದೆ. ಯಾವುದಾದರೂ ಒಂದು ನಿರ್ದಿಷ್ಟ ಉದ್ದೇಶವಿದ್ದರೆ, ಅ ಸಂದರ್ಭಕ್ಕೆ ಮಾತ್ರ ಚಲನೆಯ ವೇಗವನ್ನು ಕಡಿಮೆ ಅಥವಾ ಹೆಚ್ಚು ಮಾಡಬಹುದು. ಆದರೆ ಈ ನಾಟಕದಲ್ಲಿ ಉದ್ದಕ್ಕೂ ಚಲನೆ ಅತಿ ನಿಧಾನ. (ಅತಿ ವಿಲಂಬಿತ ಲಯವಂತೆ). ಸಂಗೀತದಲ್ಲಿ ಉದ್ದಕ್ಕೂ ವಿಲಂಬಿತ ಲಯ ಇರುವುದಿಲ್ಲ. ಮರುದಿನ ನಾನು ಭವಾಲ್ಕರರ ಕಚೇರಿಗೆ ಹೋಗಿದ್ದೆ. ವಿಲಂಬಿತ್ ನಲ್ಲಿ ಪ್ರಾರಂಭ ಮಾಡಿ ಅಲ್ಲೇ ನಿಂತು ಬಿಡುವುದಿಲ್ಲ ಅವರು. ಮಧ್ಯಲಯ, ದ್ರುತ್ ಗಳಿಗೆ ಹೋಗಿ, ಲಯದಲ್ಲಿ ಹಿಂದೆ ಮುಂದೆ, ಸ್ಥಾಯಿಯಲ್ಲಿ ಮೇಲೆ ಕೆಳಗೆ, ಆಟವಾಡಿ, ಹೇಗೆ ಹೇಗೆ ಸಾಧ್ಯವೋ ಹಾಗೆಲ್ಲ ಅವರ ಸ್ವರ ಸಂಚರಿಸುತ್ತದೆ. ಮತ್ತು ಹಾಗೆ ಅವರು ಸ್ವರಗಳೊಂದಿಗೆ ಆಡುವುದರಿಂದಲೇ ಆ ದೈವೀಸಂಗೀತದ ಸೃಷ್ಟಿ ಅವರಿಗೆ ಸಾಧ್ಯವಾಗುತ್ತದೆ. ಈ ನಾಟಕದಲ್ಲಿ ರಂಗದ ಎಡಭಾಗದಿಂದ ಒಂದು ಪಾತ್ರ ರಂಗವನ್ನು ಪ್ರವೇಶಿಸಿದರೆ, ಅದು ರಂಗದ ಮಧ್ಯಭಾಗದವರೆಗೂ ಬಂದು, ನಂತರ ರಂಗದ ಮುಂಭಾಗವನ್ನು ತಲುಪಲು ಕಡಿಮೆ ಎಂದರೆ ಎಂಟರಿಂದ ಹತ್ತು ನಿಮಿಷ ತೆಗೆದುಕೊಳ್ಳುತ್ತದೆ. ರಂಗದ ಮೂಲೆಯಲ್ಲಿ ಒಂದು ನಲ್ಲಿಯಲ್ಲಿ ನೀರು ನಿರಂತರವಾಗಿ ಬೀಳುತ್ತಿದೆ. ಅದರ ಶಬ್ದ ಕೇಳುತ್ತಿದೆ. (ಹಾಗೆ ಶಬ್ದ ಕೇಳಬೇಕೆಂದೇ ಫ್ಯಾನ್ ಆಫ್ ಮಾಡಿದ್ದರೆಂದು ನನಗೆ ಮತ್ತೆ ತಿಳಿಯಿತು.). ಪಾತ್ರಗಳು ಒಂದೊಂದಾಗಿ ರಂಗ ಪ್ರವೇಶ ಮಾಡುತ್ತವೆ. ಮಾತಿಲ್ಲ. ಕೆಲವೊಮ್ಮೆ ನಿಧಾನವಾಗಿ, ಕೆಲವೊಮ್ಮೆ ಜೋರಾಗಿ ಹಿನ್ನೆಲೆಯಲ್ಲಿ ವಾದ್ಯ ಸಂಗೀತ ಕೇಳುವುದೂ ಇದೆ. ಬಂದ ಪಾತ್ರಗಳು ಕೆಲವರು ತಾವು ನೀರು ಕುಡಿಯುತ್ತಾರೆ. ಕೆಲವರು ತಾವು ಕುಡಿದು ಇನ್ನೊಬ್ಬರಿಗೆ ಕೊಡುತ್ತಾರೆ. ಕೆಲವರು ತಾವು ಮಾತ್ರ ಕುಡಿಯಬೇಕು, ಬಾಕಿಯವರು ಕುಡಿಯಬಾರದು ಎಂಬ ಹಾವಭಾವ ತೋರಿಸುತ್ತಾರೆ, ಕೆಲವರು ನೀರಲ್ಲಿ ಆಟವಾಡುತ್ತಾರೆ. ಆದರೆ ಎಲ್ಲವೂ ನಿಧಾನ. ಅತಿ ನಿಧಾನ. ಸ್ವಲ್ಪ ಹೊತ್ತು ಇದನ್ನೆಲ್ಲ ನೋಡಿಯಾದ ಮೇಲೆ ನಾನು, ಪ್ರತಿಸಲ ರಂಗದ ಹಿಂಭಾಗದ ಮೂಲೆಯಿಂದ ಒಂದು ಹೊಸಪಾತ್ರ ಪ್ರವೇಶಿಸಿದಾಗಲೂ, “ಈ ಪಾತ್ರವೇ ಕೊನೆಯದಿರಬಹುದು” ಎಂದು ಆಸೆಯಿಂದ ನೋಡುತ್ತಿದ್ದೆ. ಆದರೆ ಅದು ಪಕ್ಕನೆ ಮುಗಿಯಲಿಲ್ಲ. ನಿಧಾನವಾಗಿ ಮತ್ತೊಂದು ಹೊಸಪಾತ್ರ ಪ್ರವೇಶಿಸುತ್ತಿತ್ತು. ಹೀಗೆ ಒಂದರ ಹಿಂದೆ ಒಂದು ಅನಂತವಾಗಿ ಬರುತ್ತಲೇ ಇದ್ದವು. ಕೊನೆಗೆ, ಮೊದಾಲು ಪ್ರವೇಶಿಸಿದ ಪಾತ್ರವೇ ಪುನಃ ಪ್ರವೇಶಿಸಿದಾಗ “ಈಗ ನಾಟಕ ಮುಗಿದಿದ್ದು ಗ್ಯಾರಂಟಿ” ಎಂದು ಮನಸ್ಸಿಗೆ ಖಚಿತವಾಯಿತು. ಓ ದೇವರೇ, ಬಚಾವ್!
ಎಂತದು ಈ ಅತಿವಿಲಂಬಿತ ಲಯ? ರಂಗದ ಒಂದು ಮೂಲೆಯಿಂದ ಇನ್ನೊಂದು ಜಾಗಕ್ಕೆ ಬರಲು ಪಾತ್ರವೊಂದು ನಿಧಾನವಾಗಿ ಹೆಜ್ಜೆ ಇಡುತ್ತ ಎಂಟು ಹತ್ತು ಮಿನಿಟುಗಳನ್ನು ತೆಗೆದುಕೊಳ್ಳುವುದನ್ನು ನೋಡುತ್ತ ಖಾಲಿ ಕೂರುವುದಕ್ಕೆ ಪ್ರೇಕ್ಷಕನಿಗೇನು ಗ್ರಹಚಾರವೆ? ಒದ್ದು (ಕುರ್ಚಿಗೆ) ಎದ್ದು ಹೋಗಿಬಿಡೋಣ ಎಂದು ಉರಿಯುತ್ತಿತ್ತು. “ನಿಮಗೆ ಈ ನಾಟಕ ಇಷ್ಟವಾಗದಿದ್ದರೆ ಬೇರೆಯವರಿಗೆ ತೊಂದರೆಯಾಗದಂತೆ ಎದ್ದು ಹೋಗಿ” ಎಂಬ ಸೂಚನೆಯನ್ನೂ ಯಾರೋ ಮೊದಲಿಗೆ ಕೊಟ್ಟಿದ್ದರು. ಟಿಕೆಟ್ಟಿಗೆ ಇಪ್ಪತ್ತೈದು ರೂಪಾಯಿ ಕೊಟ್ಟಿದ್ದೆ. ಅದರ ವಿಲೇವಾರಿ ಏನೆಂದು ಅವರು ಹೇಳಲಿಲ್ಲ!
ಈ ನಾಟಕ ನಿರ್ದೇಶಿಸಿದವರು ಇನ್ನೂ ತರುಣ. (ನನಗೀಗ ಅರವತ್ತು ಕಳೆಯಿತು). ಅವರ ಉತ್ಸಾಹವನ್ನು ನಾನು ಖಂಡಿತ ಮೆಚ್ಚುತ್ತೇನೆ. ನನ್ನ ಮಾತುಗಳಿಂದ ಅವರು ಉತ್ಸಾಹ ಕಳೆದುಕೊಳ್ಳಬಾರದು. ಈ ನಾಟಕ ಸಹವಾಸ ದೋಷದ ಫಲ ಇದ್ದರೂ ಇದ್ದೀತು. ಒಬ್ಬರೇ ಕೂತು ನಿಧಾನವಾಗಿ ಆಲೋಚನೆ ಮಾಡಿದರೆ, ಒಳ್ಳೆಯ ನಾಟಕಗಳನ್ನು ಆಯ್ಕೆ ಮಾಡುವುದು, ನಿರ್ದೇಶಿಸುವುದು ನಿಮಗೆ ಖಂಡಿತ ಸಾಧ್ಯ. ಸ್ವಲ್ಪ ದೂರ ಪ್ರೇಕ್ಷಕನ ಜೊತೆ ನೀವು ಪ್ರಯಾಣಿಸಿ ಅವನ ನಂಬಿಕೆಯನ್ನು ಸಂಪಾದಿಸಿಕೊಂಡರೆ, ನಂತರ ಅವನನ್ನು ನಿಮ್ಮ ಜೊತೆ ಒಯ್ಯುವುದು ನಿಮಗೆ ಕಷ್ಟವಾಗಲಾರದು. ನಿಮಗೆ ಶುಭವಾಗಲಿ.








spashta, nera matina lekhana
ನಿಮ್ಮ ಟಿಪ್ಪಣಿ ಹಿಡಿದುಕೊಂಡು ಮತ್ತೆ ಮಲೆಗಳಲ್ಲಿ ಮದುಮಗಳನ್ನು ಓದಬೇಕು ಎನ್ನುವಂತಾಗಿದೆ..good attempt
ಖಂಡಿತಾ ಅದು ಇನ್ ಮುಂದೆ ಆ ಪುಸ್ತಕದ appendix ಆಗಬೇಕು
ಸುಂದರರಾಯರ ಬರಹಕ್ಕೆ ನನ್ನ ತಕರಾರುಗಳು
* ನಾಟಕದ ನಿಧಾನ ಗತಿ, ಆಧುನಿಕ ಬದುಕಿನ ವಿವೇಚನಾರಹಿತ ತೀವ್ರಗತಿಗೆ ಕನ್ನಡಿ ಹಿಡಿದಿರುವ ವ್ಯಂಗ್ಯ. ಅಲ್ಲಿ ನೋಡುಗನಿಗೆ ದೊರೆಯುವ ಅಪಾರ ಬಿಡುವಿನ ಮೌನದ ಅವಕಾಶ, ನಾಟಕಕ್ಕೆ ಸಂವಾದವೊಂದನ್ನು ತನ್ನೊಳಗೇ ತಕ್ಷಣ ರೂಪಿಸಿಕೊಳ್ಳುವ ಅವಕಾಶ. ಇದು ಉದ್ದೇಶಪೂರ್ವಕ ಸಂರಚನೆ.
* ೧೯೪೮ರ ಸುಮಾರಿಗೆ ಸಾಮ್ಯುಯೆಲ್ ಬೆಕೆಟ್ ‘ವೇಟಿಂಗ್ ಫಾರ್ ಗೋಡೋ’ ನಾಟಕ ಮಾಡಿದಾಗಲೂ ಈ ಬಗೆಯ ಪ್ರತಿಕ್ರಿಯೆ ಬಂದಿತ್ತು. ಇದೇನು ನಾಟಕ, ಕತೆಯಿಲ್ಲ, ಮಾತಿಲ್ಲ. ಮುಖ್ಯಪಾತ್ರ ರಂಗದ ಮೇಲೆ ಬರುವುದೇ ಇಲ್ಲ- ಎಂದೆಲ್ಲ ಕಮೆಂಟ್ ಬಂದಿತ್ತು. ಈಗ ಅದು ಸೃಷ್ಟಿಸಿರುವ ಇತಿಹಾಸ ನಿಮಗೆ ಗೊತ್ತಿರಬಹುದು.
* ಗುಲ್ಬರ್ಗ, ಬಿಜಾಪುರದ ಮಂದಿ ತಮ್ಮೂರಿನಲ್ಲಿ ಮಳೆ ಬಾರದೆ ದಕ್ಷಿಣ ಕನ್ನಡಕ್ಕೆ ಹೊಟ್ಟೆಯ ತುತ್ತಿಗಾಗಿ ಗುಳೆ ಬಂದಾಗ, ಅವರನ್ನು ದ.ಕ.ದ ಮಂದಿ ಸ್ವೀಕರಿಸಿದ ರೀತಿಯೇ ವಿಚಿತ್ರವಾಗಿತ್ತು. ಅವರ ಮಾತು, ವರ್ತನೆ ಎಲ್ಲ ಒರಟು, ಕ್ಲೀನಿಲ್ಲ, ಎಲ್ಲ ಕಡೆ ಗಲೀಜು ಮಾಡ್ತಾರೆ ಎಂದೆಲ್ಲ ಅಸಹನೆಯಿಂದ ಕಮೆಂಟ್ ಮಾಡಿ, ಅಟ್ಟುವ ಪ್ರಯತ್ನಗಳು ನಡೆದಿದ್ದವು. ರಾಯರ ಪ್ರತಿಕ್ರಿಯೆಯಲ್ಲಿ ಇದೇ ಅಸಹನೆ ನನಗೆ ಕಾಣುತ್ತಿದೆ. ನಮ್ಮದಲ್ಲದ ಸಂಸ್ಕೃತಿಯೊಂದರ ಮೂಲದಿಂದ ಬಂದ ಸಾಹಿತ್ಯ ಕೃತಿಯನ್ನು ಸಹನೆಯಿಂದ ನೋಡಿ, ಅಧ್ಯಯನ ಮಾಡಿ, ಅರ್ಥ ಮಾಡಿಕೊಳ್ಳುವ ತಾಳ್ಮೆ ಅಗತ್ಯ.
* ನಾಟಕಕ್ಕೆ ಮಾತು ಅಗತ್ಯ ಎಂಬುದು ರಾಯರ ವಾದ. ಇದು ಯಕ್ಷಗಾನ ತಾಳಮದ್ದಳೆ ಕೇಳುಗರ ವಾದ. ಒಳ್ಳೆಯ ನಾಟಕಕ್ಕೆ ಮಾತು ಅನಿವಾರ್ಯವೇ ಅಲ್ಲ. ರಾಯರ ವಾದವನ್ನು ವಿಸ್ತರಿಸುವುದಾದರೆ, ಚಿತ್ರಜಗತ್ತಿನ ದಂತಕತೆಗಳಾದ ಚಾಪ್ಲಿನ್ನ ಮೂಕಿ ಚಿತ್ರಗಳು, ಕೆಲ ಭಾರತೀಯ ಮೂಕಿ ಚಿತ್ರಗಳು, ಪುಷ್ಪಕ ವಿಮಾನಂ ಮುಂತಾದ ಕ್ಲಾಸಿಕ್ಗಳೆಲ್ಲ ಬರಿ ತಿಪ್ಪೆ.
* ‘ಕುರ್ಚಿಗೆ ಒದ್ದು ಎದ್ದು ಹೋಗಿಬಿಡೋಣ ಎಂದು ಉರಿಯುತ್ತಿತ್ತು’- ಯಾರು ಬೇಡ ಎಂದಿದ್ದರು ?
* ನಾಟಕದ ಒಳ್ಳೆಯ ಪ್ರೇಕ್ಷಕರಿಗೆ ಹೊಸ ಪ್ರಯೋಗಗಳ ಬಗ್ಗೆ ಗೌರವ ಇರುತ್ತದೆ, ಅಸಹನೆ ಅಲ್ಲ.
– ಹರೀಶ್ ಕೇರ
ನನ್ನ ಗೆಳೆಯನನ್ನ ನಾಟಕಕ್ಕೆ ಕರೆದು ಕೊಂಡು ಹೋಗಿದ್ದೆ, ನಾಟಕ ಅರ್ಥ ಆಗಿಲ್ಲ, ಇನ್ನು ನನ್ನನ್ನ ನಾಟಕಕ್ಕೆ ಕರೆಯ ಬೇಡ ಅಂದ. ನಾಟಕ ಒಂದು ವರ್ಗದ ಸೊತ್ತಲ್ಲ. ಎಲ್ಲರಿಗೂ ಅರ್ಥ ಆಗೋ ಹಾಗೆ ಇರಬೇಕು. ಇಲ್ಲ ಅಂದ್ರೆ ಬರೀ ಬುದ್ದಿ ಜೀವಿಗಳಿಗೆ ಮಾತ್ರ ಅಂತ ಬೋರ್ಡ್ ಹಾಕಿ. ಸುಮ್ಮನೆ ಹೋಗಿ ನೋಡಿ enjoy ಮಾಡೋ ಹಾಗೆ ಇರ್ಬೇಕು. ಈ ನಾಟಕ ತುಂಬಾ academic ಆಗಿದೆ ಅನ್ನೋದು ನನ್ನ ಅಬಿಪ್ರಾಯ. Mostly ಅದಿಕ್ಕೆ ಇರ್ಬೇಕು ನಾಟಕಕ್ಕೆ ಜನ ಬರದೆ ಇರೋದು. ನೀನಾಸಂ ನಿಂದ ಇಂತ ನಾಟಕ expect ಮಾಡಿರಲಿಲ್ಲ. ಸುಬ್ಬಣ್ಣ ಅವರು ಹೆಗ್ಗೋಡಿನಂತ ಹಳ್ಳಿಯಲ್ಲಿ ನಾಟಕ ಶಾಲೆ ಸ್ತಾಪಿಸಿದ್ದರ ಉದ್ದೇಶ ನಾಟಕ ಎಲ್ಲರಿಗೂ ಸೇರಬೇಕು ಅನ್ನೋ ಉದ್ದೇಶದಿಂದ. ದಯವಿಟ್ಟು ಅದನ್ನ ಒಂದು ವರ್ಗದ ಸ್ವತ್ತಾಗಿ ಮಾಡ ಬೇಡಿ.