ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕುಮಟೆಗೆ ಬಂದಾ ಕಿಂದರಿ ಜೋಗಿ

ekkund31.jpgಕಥನ ಕವನಗಳ ಪರಂಪರೆಗೆ ಹೊಸದೊಂದು ದಿಕ್ಕು ಕಾಣಿಸಿದ ಮತ್ತು ಸಮಾಜವಾದಿ ಚೈತನ್ಯವನ್ನು ಕಾವ್ಯದ ಅಂಗಳದಲ್ಲಿ ಹೊಳೆಯಿಸಿದ ಕವಿ ಸು ರಂ ಎಕ್ಕುಂಡಿಯವರು. ಬಾನಿಗೇ ಗೆರೆ ಬರೆವ ಬೆಳ್ಳಕ್ಕಿಗಳ ಸಾಲಿನಲ್ಲಿ ಅವರು ಮತ್ತಾವುದೋ ಲೋಕದ ಬಾಗಿಲು ಕಂಡವರು. ಅವರ ಕಾವ್ಯ ಅಂಥ ಉಲ್ಲಸಿತ ಮತ್ತು ಅವಿಶ್ರಾಂತ ಪಥದ ಬೆಳಕಿಗೆ ಆಶಿಸಿದ್ದಾಗಿದೆ. ಅವರ ಕಾವ್ಯ, ನೋವಿನ ತೀವ್ರತೆಯಿಂದಾಗಿ ದೃಢಗೊಂಡ ಚೈತನ್ಯವುಳ್ಳದ್ದು. ಅದರಿಂದಾಗಿಯೇ, ಮೈಯಿರದ ದನಿಗಳು ಕೂಡ ಅಮ್ಮ ಕೊಟ್ಟ ಬೀಜವನ್ನು ಬಿತ್ತುವ ಹಂಬಲವನ್ನು ಅಲ್ಲಿ ವ್ಯಕ್ತಪಡಿಸುತ್ತವೆ.

ಉತ್ತರ ಕನ್ನಡದ ಬಂಕಿಕೊಡ್ಲದಲ್ಲಿ ಬೆಳಗಿದ ಎಕ್ಕುಂಡಿಯವರ ಕಾವ್ಯಾಶ್ರಮದಲ್ಲಿ ಮಳೆಗಂಧವಿದೆ. ವೈರುದ್ಧ್ಯಗಳನ್ನು ಸೋಜಿಗವೆಂಬಂತೆ ಪರಸ್ಪರ ಸೇರಿಸಿ ಸಂವಾದಕ್ಕೆ ಅನುವಾಗಿಸಬಲ್ಲ ಹಿರಿತನವಿದೆ. ಕಡಲ ಬೇಲೆಯಂಥ ಹೆಜ್ಜೆ ಸಾಕ್ಷಿಗಳನ್ನು ಉಳಿಸಿಕೊಳ್ಳುವ ನೆಲೆಯಿದೆ. ಉಪ್ಪಿನಾಗರದಲ್ಲಿನ ಬಾಣಲೆಯ ಬೆಂಕಿಗಳನ್ನೂ ಒಂದು ಗಳಿಗೆ ಆರಿಸಬಲ್ಲ ಶಕ್ತಿಯಿರುವ ಬಕುಲದ ಹೂಗಳಿವೆ. ಶ್ರಮಿಕ ಬದುಕಿನ ಕಥನಗಳನ್ನು ಎಕ್ಕುಂಡಿಯವರು ಕಂಡಿರಿಸಿದ ಪರಿಯೇ, ರಮ್ಯದ ಗರಿಗಳನ್ನು ಕಟ್ಟಿಕೊಂಡೂ ಅದರಾಚೆಯ ಸತ್ಯವನ್ನು ಗಳಿಸುವಂಥ ಹಾದಿಯದ್ದು. 

ಕಾವ್ಯವನ್ನು ಗಾಢವಾಗಿ ಬದುಕಿದ ಎಕ್ಕುಂಡಿಯವರು, ಕುಮಟೆಯ ಕಿನಾರೆಯಲ್ಲಿನ ಬಂಕಿಕೊಡ್ಲದಲ್ಲಿ ಅನುಭವದ ದಾರಿ ನಡೆದರು. ಹಾಲಕ್ಕಿಗಳ ಗುಮಟೆಯ ನಾದಕ್ಕೆ ಕಿವಿಗೊಟ್ಟರು. ಅವರ ಹಾಡೊಳಗಿನ ನೋವಿಗೆ ಅಕ್ಷರಗಳಲ್ಲಿ ಜಾಗ ಹುಡುಕಿದರು. ಎಲ್ಲರಿಗೂ ಬೇಕಾದ ಎಕ್ಕುಂಡಿ ಮಾಸ್ತರರಾದರು. ಎಲ್ಲರನ್ನೂ ಹಾಡೊಳಗೆ ಕರೆವ ಕಿಂದರಿ ಜೋಗಿಯಾದರು.

ಎಕ್ಕುಂಡಿ ಕಾವ್ಯದ ಗಂಭೀರ ಅಧ್ಯಯನಾಕಾಂಕ್ಷಿಗಳಿಗೆ ಅರ್ಥಪೂರ್ಣ ಪ್ರವೇಶಿಕೆಯಾಗಬಲ್ಲ ಒಂದು ಕೃತಿ, ಕವಿ, ಪತ್ರಕರ್ತ ಜಿ ಎನ್ ಮೋಹನ್ ಸಂಪಾದಿಸಿರುವ “ಎಕ್ಕುಂಡಿ ನಮನ”. ಈ ಪುಸ್ತಕಕ್ಕೆ ಮೋಹನ್ ಅವರು ಬರೆದ ಮುನ್ನುಡಿ “ಬಂಡೆ ಮತ್ತು ಚಿಟ್ಟೆ” ಇಲ್ಲಿ ಕೊಟ್ಟಿದ್ದೇವೆ. ಎಕ್ಕುಂಡಿಯವರ ಕಾವ್ಯ ಕುರಿತ ಹೆಚ್ಚಿನ ಓದಿಗಾಗಿ ಸಾಹಿತ್ಯ ಅಕಾಡೆಮಿ ಪ್ರಕಟಿಸಿರುವ “ಸಾಲುದೀಪಗಳು” ಕೃತಿಯಲ್ಲಿನ, ಮೋಹನ್ ಅವರೇ ಬರೆದ ಮತ್ತೊಂದು ಲೇಖನವನ್ನೂ ಓದಬಹುದು. ಅಲ್ಲದೆ, ಸಾಹಿತ್ಯ ಅಕಾಡೆಮಿ ಎಕ್ಕುಂಡಿ ಕುರಿತ ವಿಚಾರ ಸಂಕಿರಣ ಏರ್ಪಡಿಸಿ ಪ್ರಕಟಿಸಿದ ಪುಸ್ತಕವನ್ನೂ ಗಮನಿಸಬಹುದು.

ಇವತ್ತಿಗೂ ಎಕ್ಕುಂಡಿಯವರ ಕಾವ್ಯ ತೆರೆದು ತೋರುವ ಸಾಧ್ಯತೆಗಳು ಹಲವಾರು ಎಂಬ ಕಾರಣಕ್ಕಾಗಿ ಇದಿಷ್ಟು.

‍ಲೇಖಕರು avadhi

14 June, 2007

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading