ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕುತೂಹಲದ ಜೊತೆ ಶ್ರದ್ಧೆ ಮಿಳಿತವಾದರೆ ಅಲ್ಲೊಬ್ಬ ತೇಜಸ್ವಿ ಇರುತ್ತಾರೆ..

– ಅಮೃತ ಕಿರಣ ಬಿ ಎಂ

ತೇಜಸ್ವಿ ಎಂಬ ವಿಸ್ಮಯ ಮರೆಯಾಗಿ ಸರಿಯಾಗಿ 8 ವರ್ಷ. ಅವರು ಇಲ್ಲದ ನಾಡಿನಲ್ಲಿ ನಾವು ಭರ್ತಿ ಎಂಟು ವಸಂತಗಳನ್ನು ಕಳೆದುಬಿಟ್ಟಿದ್ದೇವೆ. ಅವರು ದೈಹಿಕವಾಗಿ ಇಲ್ಲದಿದ್ದರೂ ನಮ್ಮೊಂದಿಗೆ ಸದಾ ಇರುತ್ತಾರೆ ಎಂಬ ಮಾತಿನಲ್ಲಿ ಸತ್ಯ ಇಲ್ಲದಿಲ್ಲ. ಅವರು ತಮ್ಮ ಸಹಜ ಬರವಣಿಗೆ ಮೂಲಕ ನಮ್ಮನ್ನು ಇನ್ನೂ ಚಕಿತಗೊಳಿಸುತ್ತಲೇ ಇದ್ದಾರೆ, ಮುಂದೆಯೂ ಇರುತ್ತಾರೆ.‘ಕನ್ನಡದಲ್ಲಿ ಏನೂ ಇಲ್ಲ, ಇರುವುದೆಲ್ಲವೂ ಬೂಸಾ ಎನ್ನುವವರು ಹಾಗೂ ಕನ್ನಡದಲ್ಲಿ ಸರ್ವಸಮಸ್ತವೂ ಇದೆ ಎನ್ನುವವರು ಕೊಂಚ ವಿವೇಕ ತೋರಿ ಮೌನವಹಿಸಿದರೆ ನಮ್ಮ ಅಗಾಧ ರಚನಾತ್ಮಕ ಜವಾಬ್ದಾರಿಗಳನ್ನು ನಿರ್ವಹಿಸಲು ತುಂಬಾ ಅನುಕೂಲವಾಗುತ್ತದೆ’ – ಇದು ಪೂರ್ಣಚಂದ್ರ ತೇಜಸ್ವಿ ಅವರ ಮನವಿಪೂರ್ವಕ ಆಗ್ರಹ. ಮಾಡುವುದನ್ನು ಬಿಟ್ಟು ಕೇವಲ ಆಡುವುದರಲ್ಲೇ ಕಾಲಕಳೆದು ದೊಡ್ಡವರೆನಿಸಿಕೊಳ್ಳಲು ಯತ್ನಿಸುವ ‘ಬುದ್ಧಿಜೀವಿ’ಗಳಿಗೆ ತೇಜಸ್ವಿ ಬಿಸಿ ಮುಟ್ಟಿಸಿದ್ದ ಪರಿ ಇದು. ತೇಜಸ್ವಿ ಹೇಳಿದ ಮಾತು ಪ್ರಸ್ತುತ ವೈರುಧ್ಯಗಳನ್ನೇ ಧ್ವನಿಸುತ್ತಿದೆ.
ಯಾವುದೇ ಪ್ರಶಸ್ತಿಗೆ ಅಪೇಕ್ಷೆ ಪಡೆದೆ, ಪ್ರಶಸ್ತಿ ಕೊಟ್ಟರೂ ತೆಗೆದುಕೊಳ್ಳದ ಬೆರಳೆಣಿಕೆಯ ವ್ಯಕ್ತಿಗಳಲ್ಲಿ ತೇಜಸ್ವಿ ಅಗ್ರಗಣ್ಯರು. ಎಲ್ಲ ಸಾಹಿತಿಗಳು ಸ್ವಲ್ಪ ಹೆಸರು ಮಾಡುತ್ತಿದ್ದಂತೆ ಬೆಂಗಳೂರು ಸೇರಿಬಿಡುವುದು ವಾಡಿಕೆ ಎಂಬಂತಾಗಿದ್ದ ದಿನಗಳಲ್ಲೇ ತೇಜಸ್ವಿ ಸ್ವಂತ ದಿಕ್ಕಿನಲ್ಲಿ ನಡೆದವರು. ನಗರ ಪ್ರದೇಶ ತೊರೆದು ದಟ್ಟ ಕಾನನವನ್ನು ಅರಸಿ ಮೂಡಿಗೆರೆಗೆ ಅಡಿಯಿಟ್ಟರು. ಅವರ ಸಹಜ ಕುತೂಹಲವೇ ಅವರ ಎಲ್ಲ ಕೆಲಸಗಳಿಗೆ ಪ್ರೇರಣೆ. ಶ್ರದ್ಧೆಗೆ ಮತ್ತೊಂದು ಹೆಸರೇ ತೇಜಸ್ವಿ. ಕುತೂಹಲದ ಜೊತೆ ಶ್ರದ್ಧೆ ಮಿಳಿತವಾದರೆ ಒಬ್ಬ ತೇಜಸ್ವಿ ಹುಟ್ಟುತ್ತಾರೆ. ಓದುಗರಲ್ಲಿ ಸಹಜವಾಗಿಯೇ ಕುತೂಹಲ ಸೃಷ್ಟಿಸುತ್ತಾ ಹೋಗುವ ಅವರ ಬರವಣಿಗೆಯೇ ಒಂದು ಕೌತುಕ.. ವಿಸ್ಮಯ..

ಒಬ್ಬ ಲೇಖಕ ತನ್ನ ವಾಸ್ತವ ಜಗತ್ತಿನೊಂದಿಗೆ ಹೇಗೆ ಸ್ಪಂದಿಸಬೇಕು ಅನ್ನೋದಕ್ಕೆ ಬೆಸ್ಟ್ ಎಕ್ಸಾಂಪಲ್ ನಮ್ಮ ತೇಜಸ್ವಿ. ಅವರು ವರ್ತಮಾನದ ತುಮುಲಗಳನ್ನು ತಮ್ಮ ಸ್ಪಷ್ಟ ಮಾತುಗಳಲ್ಲಿ ಹೇಳುತ್ತಾ ಬಂದಿದ್ದಾರೆ. ಕರ್ನಾಟಕದ ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಅಥವಾ ಇಂಗ್ಲೀಷ್ ಭಾಷೆಗಳನ್ನು ಯಾವ ಅನುಪಾತದಲ್ಲಿ ಕಲಿಸಬೇಕೆಂಬ ಬಗ್ಗೆ ಸ್ಪಷ್ಟ ನಿಲುವನ್ನ ಹೊಂದಿದ್ದರು. ಬಹುಶಃ ಅವರು ಇಂದು ಬದುಕಿದ್ದರೆ, ಸದ್ಯ ನಡೆಯುತ್ತಿರುವ ಮಾತೃಭಾಷೆ ಕುರಿತ ಸಂದಿಗ್ಧತೆಗೆ ಒಂದಿಷ್ಟು ಉಪಾಯಗಳನ್ನು ಸೂಚಿಸುತ್ತಿದ್ದರು.
ಜಾತಿ ಹಾಗೂ ಹಣ…ಈ ಎರಡೇ ಮನುಷ್ಯನ ಅಳತೆಗೋಲಾಗಿರುವ ಈ ಕಾಲದಲ್ಲಿ ತೇಜಸ್ವಿ ಪ್ರಸ್ತುತ ಅನಿಸುತ್ತಾರೆ. ಜನಸಾಮಾನ್ಯರಿಂದ ಹಿಡಿದು ಸರ್ಕಾರವನ್ನು ನೇರವಾಗಿ ತರಾಟೆಗೆ ತೆಗೆದುಕೊಂಡು ಸರಿದಾರಿ ತೋರುತ್ತಿದ್ದ ಒಬ್ಬ ಹಿರಿಯನಾಗಿ ತೇಜಸ್ವಿ ಇಂದು ನೆನಪಾಗುತ್ತಾರೆ. ರೈತರೆಲ್ಲಾ ಊರಗಲದ ಹೊಲಗಳನ್ನು ಬಿಟ್ಟು ಸಿಟಿಯ ನಾಲ್ಕಡಿ ಮನೆಗಳಲ್ಲಿ ಕೂತು ನರಕ ಅನುಭವಿಸುತ್ತಿದ್ದಾರೆ. ಜಮೀನಿನ ಬಿಸಿಲಿನಲ್ಲಿ ದುಡಿಯೋದು ಬೇಡಪ್ಪಾ ಅನ್ನೋರಿಗೆ ಅಪವಾದವಾಗಿದ್ದವರು ಅವರು. ಎಂಎ ಕನ್ನಡ ಮುಗಿಯುತ್ತಿದ್ದಂತೆ ಓರಗೆಯವರಂತೆ ಅಧ್ಯಾಪಕರಾಗಿ ಅಕ್ಯಾಡಮಿಕ್ ಆಗಿಯೋ, ಸಾಹಿತಿಯಾಗಿಯೋ ಗುರುತಿಸಿಕೊಳ್ಳುವ ಗೋಜಿಗೆ ಅವರು ಹೋಗಲೇ ಇಲ್ಲ. ನೇರವಾಗಿ ಮೂಡಿಗೆರೆಗೆ ತೆರಳಿ ಕೃಷಿ ಮಾಡಲಾರಂಭಿಸಿದರು. ಸಾಹಿತ್ಯ ಕೃಷಿಯನ್ನೂ ಅಷ್ಟೇ ಸಮರ್ಥವಾಗಿ ಮಾಡಿದರು. ಬದುಕನ್ನು ಎಂಜಾಯ್ ಮಾಡಬೇಕು ಅನ್ನುವವರಿಗೆ ತೇಜಸ್ವಿ ಒಂದು ಸವಾಲು. ಜೀವನವನ್ನು ಕಾಡಿನ ಮಧ್ಯದಲ್ಲೂ ಅನುಭವಿಸುವುದು ಹೇಗೆ ಎಂದು ತೋರಿಸಿಕೊಟ್ಟವರು ಅವರು. ಕಾಡಿನ ಪ್ರೀತಿ, ಪಕ್ಷಿಗಳ ಸೊಗಸು, ಬೇಟೆ, ನಳಪಾಕ, ಊರಿನ ಜನರೊಂದಿಗೆ ಒಡನಾಟ ಮೊದಲಾದವು ಅವರ ಕೃತಿಗಳನ್ನು ಓದಿದವರಿಗೆ ಸಹ್ಯವೆನಿಸುತ್ತವೆ. ಹವ್ಯಾಸಗಳಿದ್ದರೆ ಹೀಗೇ ಇರಬೇಕಪ್ಪಾ ಎಂಬ ಮಟ್ಟಿನವು ಅವು…
ವೈಜ್ಞಾನಿಕ ಬರಹಗಳಲ್ಲಿ ಅವರದ್ದು ಮೊದಲು ಹೆಸರು. ಕನ್ನಡದಲ್ಲಿ ತೀರಾ ಇಲ್ಲವೇ ಇಲ್ಲ ಎನ್ನುವಷ್ಟಿರುವ ಸಂದರ್ಭದಲ್ಲಿ ತೇಜಸ್ವಿ ವೈಜ್ಞಾನಿಕ ಲೇಖಕರಾಗಿ ಓದುಗರೊಂದಿಗೆ ಅನುಸಂಧಾನ ನಡೆಸುತ್ತಾ ಬಂದಿದ್ದಾರೆ. ಪರಿಸರದ ಕಥೆಯಲ್ಲಿ ವಿಜ್ಞಾನವನ್ನು ಅದೆಷ್ಟು ಸೊಗಸಾಗಿ ಕಾವ್ಯದ ರೀತಿ ಕಟ್ಟಿಕೊಟ್ಟಿದ್ದಾರೆ ಎಂಬುದು ಅವರ ಆಪ್ತ ಓದುಗರಿಗೆ ಗೊತ್ತು. ಹಾರುವ ತಟ್ಟೆ, ಮಿಸ್ಸಿಂಗ್ ಲಿಂಕ್ಸ್, ವಿಸ್ಮಯ ಮೊದಲಾದ ಕಥೆಗಳ ಸೊಗಸೇ ಬೇರೆ… ಹೊಸದಾಗಿ ಕನ್ನಡ ಸಾಹಿತ್ಯ ಓದಲು ಅಡಿಯಿಡುವವರಿಗೆ ಮೊದಲಿಗೆ ತೇಜಸ್ವಿ ಕೃತಿಗಳನ್ನೇ ಕೊಡಬೇಕು ಅನ್ನುವಷ್ಟರ ಮಟ್ಟಿಗೆ ಅವರ ಸಾಹಿತ್ಯ ಎಲ್ಲರನ್ನೂ ರುಚಿಸುತ್ತದೆ.
ತೇಜಸ್ವಿ ಬರವಣಿಗೆ ನಿಂತಿರಬಹುದು, ಅವರ ವಿಚಾರಧಾರಗಳಲ್ಲ… ಪ್ರತಿ ಬಾರಿ ಓದಿದಾಗಲೂ ಹೊಸ ಹೊಳಹು ತೆರೆದುಕೊಳ್ಳುತ್ತದೆ. ಮತ್ತೊಂದು ಕೌತುಕ ಮಾತನಾಡುತ್ತದೆ. ನಮಗೆ ಕಾಣದ ಯಾವುದೋ ಕಣ್ಣು ಅಲ್ಲಿ ಪಿಳಿಪಿಳಿ ಎನ್ನುತ್ತಿರುತ್ತೆ. ತಮ್ಮ ಸುತ್ತಮುತ್ತಲ ಬದುಕನ್ನೇ ವರ್ಣರಂಜಿತ ಕಾವ್ಯವಾಗಿಸಿದವರು ತೇಜಸ್ವಿ. ಯಾರನ್ನೂ ಮೆಚ್ಚಿಸಲೆಂದೋ, ಓಲೈಸಲೆಂದೋ ಅವರು ಬರೆದವರಲ್ಲ. ಅವರ ಜೀವನಪ್ರೀತಿಯೇ ನಮ್ಮೆಲ್ಲರಿಗೆ ಸದಾ ಸ್ಫೂರ್ತಿ. ತೇಜಸ್ವಿ ಮತ್ತೊಮ್ಮೆ ಹುಟ್ಟಿ ಬರಲಿ.
 

‍ಲೇಖಕರು G

15 April, 2015

2 Comments

  1. Anonymous

    ತೇಜಸ್ವಿಯವರನ್ನೊಮ್ಮೆ ಕಣ್ಣಾರೆ ನೋಡಲಿಲ್ಲವಲ್ಲ ಎಂಬ ಕೊರಗು ಮನಸೊಳಗೆ ಸುಳಿದಾಡುವಂತೆ, ಈ ಕೂಡಲೇ ಅವರ ಕೃತಿಗಳನ್ನು ಕೈಗೆತ್ತಿಕೊಂಡು ಓದುವಂತೆ ಪ್ರೇರಣೆಯಾಗುತ್ತಿದೆ…. ಸೊಗಸಾದ ಬರಹ….ನನ್ನೊಂದಿಗೆ ಹಂಚಿಕೊಂಡದ್ದಕ್ಕೆ ಧನ್ಯವಾದಗಳು

  2. srinivas

    ರೈತರೆಲ್ಲಾ ಊರಗಲದ ಹೊಲಗಳನ್ನು ಬಿಟ್ಟು ಸಿಟಿಯ ನಾಲ್ಕಡಿ ಮನೆಗಳಲ್ಲಿ ಕೂತು ನರಕ ಅನುಭವಿಸುತ್ತಿದ್ದಾರೆ. ಜಮೀನಿನ ಬಿಸಿಲಿನಲ್ಲಿ ದುಡಿಯೋದು ಬೇಡಪ್ಪಾ ಅನ್ನೋರಿಗೆ ಅಪವಾದವಾಗಿದ್ದವರು ಅವರು.
    ತೇಜಸ್ವಿ ಅವರ ಬಗೆಗಿನ ಈ ಮಾತು ನೂರಕ್ಕೆ ನೂರರಷ್ಟು ಸತ್ಯ.. ನಾವು ಕೂಡ ಕಾಂಕ್ರೀಟ್ ಕಾಡಿನಲ್ಲಿ ನೆಲೆಸಿ ನಮ್ಮತನ ಕಳೆದುಕೊಂಡು ಕಳೆದುಹೋಗಿದ್ದೇವೆ ಎನಿಸುತ್ತಿದೆ. ಒತ್ತಡದ ನಗರ ಜೀವನ ಬೇಡ ಎನಿಸುತ್ತಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading