ತೊಟ್ಟಿಲನಲ್ಲಿಡಲೆಂದೇ ತಂದಿರಿಸಿದ್ದ ಅವಧೂತರ ಭಾವಚಿತ್ರಕ್ಕಾಗಿ ತಲಾಷ್ ಆರಂಭಿಸಿದರಾದರೂ ಅದು ಸಿಗಲಿಲ್ಲ. ಆ ಕೂಡಲೆ ಯಾವುದೋ ಒಂದು ಫೋಟೋವನ್ನು ಅದರಲ್ಲಿರಿಸಿ ಸಮಯಪ್ರಜ್ಞೆ ಮೆರೆದರು, ಆದರೆ ಅದು ಸೂಫಿಸಂತ ಷೇಕ್ಷಾವಲಿಯವರ ಭಾವಚಿತ್ರವಾಗಿತ್ತು. ಅದನ್ನು ಹೂಮಾಲೆಗಳಿಂದ ಅಲಂಕರಿಸಿದರಲ್ಲದೆ ಶಾಸ್ತ್ರೋಕ್ತವಾಗಿ ಪೂಜೆ ಮಾಡಿದರು. ಇನ್ನೇನು ತೊಟ್ಟಿಲು ತೂಗುವುದೊಂದೇ ಬಾಕಿ. ಅಷ್ಟರಲ್ಲಿ ಎಡಮಗ್ಗುಲಿಂದ ಕಾಂಗ್ರೇಸ್ ಮಹಿಳೆಯರ ಗುಂಪು ಗಿರಿಜಾಳ ನೇತೃತ್ವದಲ್ಲೂ, ಬಲಗಡೆಯಿಂದ ಟಿಡಿಪಿಪಕ್ಷಕ್ಕೆ ಸೇರಿದ ಮಹಿಳೆಯರ ಗುಂಪು ಪಾರ್ವತಿ ಮೂಲಿಮನಿಯ ನೇತೃತ್ವದಲ್ಲೂ ಮೇಲೇರಿ ಕಾಣಿಸಿಕೊಂಡವು. ಜೋಗುಳ ಗೀತೆ ಹಾಡುವ ವಿಷಯದಲ್ಲಿ ಆ ಎರಡೂ ಗುಂಪುಗಳ ನಡುವೆ ಭಿನ್ನಾಭಿಪ್ರಾಯ ತಲೆದೋರದೆ ಇರಲಿಲ್ಲ.
ಆ ಎರಡೂ ಗುಂಪುಗಳ ಮಹಿಳಾ ಸದಸ್ಯೆಯರು ಹಿರೇಹಾಳಿನಾದ್ಯಂತ ಜಗಳಗಂಟಿಯರೆಂದು ಹೆಸರಾಗಿದ್ದಂಥವರೆ, ಪರಸ್ಪರ ಪೂರ್ವಾಗ್ರಹ ಪೀಡಿತರಾಗಿದ್ದಂಥವರೆ, ತಮ್ಮ ನಾಲಗೆಗಳನ್ನು ಮಾರಾಕಾಸ್ತ್ರಗಳನ್ನಾಗಿ ಪರಿವರ್ತಿಸಿ ಎದುರಾಳಿಗಳನ್ನು ಚಿತ್ ಮಾಡಬಲ್ಲಂಥವರೆ. ಅವರ ಪೈಕಿ ತುರುಬುಗಳಿದ್ದವರು ಅವುಗಳನ್ನು ಬಿಚ್ಚಿ ಬೆನ್ನಮೇಲೆ ಚೆಲ್ಲೊಡೆದರೆ ಇನ್ನೂ ಕೆಲವರು ಚೆಲ್ಲೊಡೆದಿದ್ದ ತಲೆಗೂದಲನ್ನು ಕಟ್ಟಿ ತುರುಬು ರೂಪಕೊಡುವುದರ ಮೂಲಕ ತಮ್ಮ ಬೆನ್ನುಗಳನ್ನು ಪ್ರದರ್ಶನಕ್ಕಿರಿಸಿದರು. ಅವರನ್ನಿವರೂ ಇವರನ್ನವರೂ ಹರಿತ ಬಯ್ಗಳಿಂದ ದೂಷಿಸಲಾರಂಭಿಸಿದರು, ಅದೂ ವಾಚಾಮಗೋಚರವಾಗಿ.
ಇನ್ನೇನು ಅವರೆಲ್ಲ ಕೈಕೈಮಿಲಾಯಿಸಿ ಕಾದಾಡುವುದರ ಮೂಲಕ ಪವಿತ್ರ ವೇದಿಕೆಯನ್ನು ರಣರಂಗವನ್ನಾಗಿ ಮಾರ್ಪಡಿಸಿಬಿಟ್ಟರೆನ್ನುವಷ್ಟರಲ್ಲಿ ಆ ಎರಡೂ ಪಕ್ಷಗಳ ಮುಖಂಡರುಗಳಾದ ಕೇಶವ ಮತ್ತು ಮಲ್ಲಣ್ಣ ಚಚರ್ಿಸಿ ಒಪ್ಪಂದಕ್ಕೆ ಬಂದರು, ಅದೆಂದರೆ ಅವರ ಪಾಡಿಗೆ ಅವರು ಹಾಡುವುದು, ಇವರ ಪಾಡಿಗೆ ಇವರು ಹಾಡುವುದು. ಅದರಿಂದ ಸ್ಪೂರ್ತಗೊಂಡ ಅವರು ಅದನ್ನು ಹಾಡಲಾರಂಭಿಸಿದರೆ ಇವರು ಇದನ್ನು ಹಾಡಲಾರಂಭಿಸಿದರು. ಹೀಗಾಗಿ ವೇದಿಕೆಯೆಂಬ ಎತ್ತು ಏರಿಗೆಳೆಯಿತಲ್ಲದೆ ಶ್ರೋತೃವರ್ಗವೆಂಬ ಕೆರೆ ನೀರಿಗಿಳಿಯಿತು. ಆ ಹಾಡುವ ಘರ್ಷಣೆಯಲ್ಲಿ ಲೌಡುಸ್ಪೀಕರ್ ತನ್ನ ನರನಾಡಿಗಳನ್ನು ಕಳೆದುಕೊಂಡು ನಿಷ್ಪ್ರಯೋಜಕವಾಯಿತು. ಅದನ್ನು ಬಾಡಿಗೆ ನೀಡಿದ್ದ ಉರುಕುಂದಿ ಬಾಯಿಬಾಯಿ ಬಡಿದುಕೊಳ್ಳಲಾರಂಭಿಸಿದ್ದು ಯಾರ ಗಮನಕ್ಕೂ ಬರಲಿಲ್ಲ.
ಆ ಎರಡು ಗುಂಪುಗಳ ಜುಗಲ್ಬಂಧಿ ಕರ್ಕಶವೂ ಅಭಾಸವೂ ಕಲಸುಮೆಲೋಗರವೂ ಆಗಿದ್ದರೂ ಶ್ರೋತೃಗಳು ಬೇಸರಪಟ್ಟುಕೊಳ್ಳದೆ ಆಸ್ವಾದಿಸಿದರು, ಹೊಟ್ಟೆಹುಣ್ಣಾಗುವಂತೆ ನಕ್ಕು ಹಗುರಾದರು. ಆದರೆ ಯಾವ ಮೂಲೆಯಿಂದಲೂ ಒನ್ಸ್ಮೋರ್ ಎಂಬ ಪ್ರೋತ್ಸಾಹಕ ಕೂಗು ಕೇಳಿ ಬರಲಿಲ್ಲ. ಮತ್ತಷ್ಟು ನಕ್ಕರೆಲ್ಲಿ ಅಭಾಸವಾಗುವುದೋ ಎಂಬ ಆತಂಕದಿಂದ ಆ ಕಡೆಯಿಂದ ಕೇಶವನೂ, ಈ ಕಡೆಯಿಂದ ಮಲ್ಲಣ್ಣನೂ ವೇದಿಕೆ ಪ್ರವೇಶಿಸಿ ಹೋಗಿರಿ ತಾಯಿ ಹೋಗಿರಿ ಎಂದು ಸಮಾಧಾನಪಡಿಸಿ ಆ ಗುಂಪುಗಳಲ್ಲಿಂದ ಬೀಳ್ಕೊಟ್ಟು ನೆಮ್ಮದಿಯ ಉಸಿರು ಚೆಲ್ಲಿದಾದಬಳಿಕ ಇನ್ನೊಂದು ವಾಕ್ಸಮರಕ್ಕೆ ನಾಂದಿ ಹಾಡಿತು, ಅದೆಂದರೆ..
ಸಿದ್ಧಾರೂಢರನ್ನು ಅಂಗಾತ ಮಲಗಿಸಿ ನಾಮಕರಣ ಮಾಡಿ ಜೋಗುಳ ಪಾಡಿದ ತೊಟ್ಟಿಲ ಲೀಲಾವು ಪ್ರಕರಣವನ್ನು ಕೇಶವ ಆರಂಭಿಸಿದ. ಅದಕ್ಕೆ ಮಲ್ಲಣ್ಣ ಸಾವಿರದೊಂದು ಎಂದು ಕೂಗಿದ. ಟಿಡಿಪಿಪಕ್ಷದವರು ಅಷ್ಟು ಕೂಗಿದ ಮೇಲೆ ಹಸ್ತಪಕ್ಷದವರು ಸುಮ್ಮನಿರಲಾದೀತೆ! ಭಕ್ತರ ಮೂಲೆಯಲ್ಲಿದ್ದ ವ್ಯಕ್ತಿಯೋರ್ವ ಎರಡು ಸಾವಿರದೊಂದು ಎಂದು ಕೂಗುವುದೆ! ಎಲ್ಲರೂ ತಿರುಗಿ ನೋಡುತ್ತಾರೆ, ಎದ್ದು ನಿಂತು ಮೀಸೆ ತಿರುವುತ್ತಿರುವುದು ಬೇರೆ ಯಾರೂ ಆಗಿರದೆ ಕಳ್ಳರೇವಣ್ಣನಾಗಿದ್ದನು. ಅವನೋ ಆಫ್ಟರಾಲ್ ಕಳ್ಳ! ಅಂಥವನು ಅಷ್ಟು ಕೂಗಿ ತಮ್ಮಂಥ ಸಭ್ಯಸ್ಥರ ಸ್ವಾಭಿಮಾನದ ಮೇಲೆ ಬರೆ ಎಳೆಯುವುದೆಂದರೇನು! ನಟ್ಟನಡುವೆ ಇದ್ದ ನಿವೃತ್ತ ಎಸೈ ಕರಡಿ ರುದ್ರಗೌಡ ಎದ್ದು ನಿಂತು ತನ್ನೆರಡೂ ಕೈಗಳನ್ನು ಬಾಯಿಯ ಮೇಲೆ ಲೌಡುಸ್ಪೀಕರ್ ಥರ ಇಟ್ಟುಕೊಂಡು ಜೋರಾಗಿ ಮೂರುಸಾವಿರದೊಂದು ಎಂದು ಕೂಗಿದನು. ಅವರು ಅಷ್ಟು ಕೂಗುವುದು ಇವರು ಇಷ್ಟು ಕೂಗುವುದು, ಈ ಪ್ರಕಾರವಾಗಿ ನಡೆಯುತ್ತ ಹೋಗಿ ಲೀಲಾವು ಹತ್ತುಸಾವಿರ ತಲುಪಿತು. ಇನ್ನು ಯಾರೊಬ್ಬರೂ ಅದಕ್ಕೆ ಮೀರಿ ಕೂಗುವುದಿಲ್ಲವೆಂದೇ ಎಲ್ಲರೂ ಭಾವಿಸಿದ್ದರು, ಕೇಶವ ಹತ್ತುಸಾವಿರ ಒಂದು ಸಾರಿ ಎರಡು ಸಾರಿ ಎಂದು ಹೇಳುತ್ತ ಮೂರುಸಾರಿ ಎಂದು ಹೇಳುತ್ತಿದ್ದಂತೆಯೇ!
ವ್ಯಕ್ತಿಯೋರ್ವ ಓಡೋಡಿ ಬರುತ್ತ ಹತ್ತುಸಾವಿರದ ಮೇಲೆ ನೂರಾ ಒಂದು ಎಂದು ಕೂಗುತ್ತಲೇ ವೇದಿಕೆ ಸಮೀಪಿಸಿದನು. ಎಲ್ಲರೂ ಬೆಕ್ಕಸಬೆರಗಾಗಿ ನೋಡುತ್ತಾರೆ ಮಜ್ಜಿಗೆ ಗವಿಸಿದ್ದ! ಎಡಗೈ
ಸೀನಪ್ಪನ ತೋಟಕ್ಕೆ ನೀರು ಹಾಯಿಸಲೆಂದು ಹೋಗಿ ಅದೇ ತಾನೆ ಸೆಲಿಕೆಯನ್ನು ಹೆಗಲ ಮೇಲಿರಿಸಿಕೊಂಡೇ ವಾಪಸ್ಸಾಗಿದ್ದ ಗವಿಸಿದ್ದ! ರೇಶ್ಮೆ ಈರಮ್ಮಜ್ಜಿಯ ಮನೆಗಂಟಿಕೊಂಡಂತೆ ಇರುವ ಗುಡಿಸಿಲನ್ನು ಹೋಲುವ ಮಣ್ಣಿನ ಮನೆಯನ್ನೇ ಅರಮನೆಯೆಂದು ಭಾವಿಸಿ ವಾಸಿಸುತ್ತಿರುವ ಗವಿಸಿದ್ದ! ತಮ್ಮಂಥ ಬಹುತೇಕ ಭೂಸ್ವಾಮಿಗಳ ಹೊಲಗದ್ದೆಗಳಲ್ಲಿ ಕೂಲಿನಾಲಿ ಮಾಡಿ ಸಂಸಾರವನ್ನು ಪೋಷಿಸುತ್ತಿರುವ ಗವಿಸಿದ್ದ! ನೋಡಿದಾದ ಬಳಿಕ ಎಲಾ ಇವ್ನ ಎಂದು ಉದ್ಗರಿಸಿದರು. ಅದರ ಮೇಲೆ ಇನ್ನೊಂದು ನೂರು ಕೂಗಬೇಕೆಂದು ಹಲವರು ಯೋಚಿಸಿದರಾದರೂ ಕೂಗಲಿಲ್ಲ. ಒಂದು ಎರಡು ಮೂರು ಕೂಗುವ ಮೊದಲು ಮುಖಂಡರೀರ್ವರು ಅವನನ್ನು ವೇದಿಕೆ ಬರಮಾಡಿಕೊಂಡು ಅಪಾದಮಸ್ತಕ ದಿಟ್ಟಿಸಿದರು, ತಲೆಗಿಲೆ ಕೆಟ್ಟಿರಬಹುದೆ ಎಂಬ ಅನುಮಾನದಿಂದ.
ದೇವರ ಕಾರ್ಯ ಮಾತು ತಪ್ಪಬಾರದೆಂದರು, ನಾಳೆ ಇಷ್ಟೊತ್ತಿಗೆ ಕೊಡದಿದ್ದರೆ ನಾನು ನಮ್ಮಪ್ಪ ಮಜ್ಜಿಗೆ ಈರಣ್ಣಗೆ ಹುಟ್ಟಿಲ್ಲಾಂತ ತಿಳ್ಕಳ್ಳಿ ಎಂದು ಭರವಸೆಯ ಮಾತುಗಳನ್ನಾಡಿ ಅವರ ಬಾಯಿ ಮುಚ್ಚಿಸಿದನು. ಸಭಿಕರತ್ತ ಬೆನ್ನು ಮಾಡಿ ತನ್ನ ಲುಂಗಿಯನ್ನು ಸಾಧ್ಯವಾದಷ್ಟು ಎತ್ತಿ ಗೀರುಗೀರಿನ ಡ್ರಾಯರ್ ಜೇಬಿನೊಳಗೆ ಬಲ ಮುಂಗೈತೂರಿಸಿ ಐನೂರರ ನೋಟನ್ನು ತೆಗೆದು ಅದನ್ನು ಎಲೆಅಡಿಕೆಯಲ್ಲಿರಿಸಿ ಸಿದ್ಧಾರೂಢರ ಪಾದಕ್ಕೆರಗುವುದರ ಮೂಲಕ ಭಕ್ತಿಯ ಪರಾಕಾಷ್ಠೆ ತಲುಪಿದನು. ಬೆನ್ನಹಿಂದೆಯೇ ಮಡಿಯುಡಿಯಲ್ಲಿದ್ದ ತನ್ನ ಪತ್ನಿ ಗೌರಮ್ಮ ವೇದಿಕೆಗೆ ಬಂದಳು, ಆ ದಂಪತಿಗಳು ತೊಟ್ಟಿಲನ್ನು ಎತ್ತಿಕೊಂಡೊಡನೆ ಜಯನಮ್ಮ ಪಾರೋತಿ ಪತಿ ಅರಅರ ಮಾದೇವೋ, ಸಿದ್ದಾರೂಢ ಮಾರಾಜ್ಕೂ ಜೈ ಎಂಬ ಘೋಷ ಮುಗಿಲು ಮುಟ್ಟಿತು. ಅದರ ಹಿಂದೆಯೇ ಆತನ ಐವರು ಸಹೋದರರು ಎಲ್ಲೆಲ್ಲಿಂದಲೋ ಬಂದು ವೇದಿಕೆಯನ್ನೇರಿ ಅವ್ನೀಗೆ ಬುದ್ದಿಲ್ಲಾಂದ್ರೆ ನಿಮಗಾದ್ರೂ ಅದಿರೋದು ಬ್ಯಾಡವೇನು! ತಂದೆ ಮಾಡಿದ ಆಸ್ತೀಲಿನ್ನೂ ಪಾವಲಿ ಭಾಗಾಗಿಲ್ಲ, ಅದೆಲ್ಲಿಂದ ಸಾವ್ರಾರ್ಗಟ್ಟಲೆ ಹೊಂದಿಸಿಕೊಡ್ತಾನೆ, ನಾವೂ ನೋಡೇಬಿಡ್ತೀವಿ, ಅವ್ನು ಕೊಟ್ಟ, ನೀವಿಸ್ಕೊಂಡ್ರಿ ಎಂದು ಬಾಯಿಗೆ ಬಂದಂತೆ ಮಾತಾಡಿ ಅಲ್ಲಿಂದ ವಾಪಸ್ಸಾದರು.
***
ಎಲ್ಲರಿಗೂ ಆಗಿರುವಂತೆ ನನಗೂ ಆಶ್ಚರ್ಯವಾಗದೆ ಇರಲಿಲ್ಲ.
ಎಲ್ಲಾ ಮನೆತನಗಳಂತೆಯೇ ಮಜ್ಜಿಗಿಯವರ ಮನೆತನವೂ ಹೀರೇಹಾಳಿನಲ್ಲಿ ಪ್ರಸಿದ್ದವಾಗಿರುವುದು. ನಮ್ಮ ಶಾಲೆಗೆ ಹೋಗುವ ರಥಬೀದಿಯಲ್ಲಿ ಅದಿರುವುದು. ತಾತ ಮುತ್ತಾತನ ಕಾಲದಿಂದ ಅವರಿಗೆ ನೂರಾರೆಕರೆ ಜಮೀನಿತ್ತಂತೆ, ಅದೀಗ ಇಲ್ಲವಂತೆ! ಶೆಟ್ರು ಮನೆ ಮತ್ತು ರೇಶ್ಮೆಯವರ ಮನೆಗಳ ನಡುವೆ ಒಂದುಕಾಲದಲ್ಲಿದ್ದ ಎರಡೂವರೆ ಎಕರೆ ವಿಸ್ತೀರ್ಣದ ಮನೆ ಕಾಲಾಂತರದಲ್ಲಿ ಹ್ರಸ್ವಗೊಂಡು ಹತ್ತು ಹಲವು ಮನೆಗಳಾಗಿರುವವು. ಅವುಗಳ ಪೈಕಿ ಕೆಲವು ನೆಲಕಚ್ಚಿದ್ದರೆ ಇನ್ನೂ ಕೆಲವು ಮುಷ್ಟಿಯಲ್ಲಿ ಜೀವ ಹಿಡಿದು ನಿಂತಿರುವವು. ಅವುಗಳ ವಾರಸುದಾರರ ಪೈಕಿ ಕೆಲವರು ಬಳ್ಳಾರಿ ಹೊಸಪೇಟೆಗಳಿಗೆ ಹೋಗಿ ನೆಲಸಿದ್ದರೆ ಇನ್ನೂ ಕೆಲವರು ಗ್ರಾಮಕ್ಕೆ ನೈರುತ್ಯ ದಿಕ್ಕಿನಲ್ಲಿರುವ ಜನತಾಮನೆಗಳಿಗೆ ತಮ್ಮ ವಾಸ್ತವ್ಯ ಬದಲಾಯಿಸಿರುವರು. ಎಲ್ಲರಿಗೆ ಬಂದಿರುವಂತೆ ಗವಿಸಿದ್ದನಿಗೂ ಜನತಾ ಮನೆ ಬಂದಿರುವುದು, ಆದರೆ ಅದನ್ನು ಬಾಡಿಗೆಗೆ ಕೊಟ್ಟು ತಾನು ರೇಶ್ಮೆಯವರ ಮನೆಪಕ್ಕದ ಸ್ವಂತ ಮನೆಯಲ್ಲಿ ವಾಸಿಸುತ್ತಿರುವನು, ಅದೂ ಹೆತ್ತಮಕ್ಕಳಿಂದ ಅಲಕ್ಷ್ಯಕ್ಕೀಡಾಗಿರುವ ವೃದ್ದತಾಯಿಯೊಡನೆ!
ಮಾಳಮ್ಮ ಎಂಬ ಹೆಸರಿನ ಅದು ಈ ಕಾಲದ್ದಲ್ಲವೇ ಅಲ್ಲ, ಯಾವ ಕಾಲದ್ದೋ! ಜನಗಣತಿ ಮಾಡುವ ಸಂದರ್ಭದಲ್ಲಿ ವಯಸ್ಸು ಕೇಳಿದ್ದಕ್ಕೆ ಇನ್ನೂರು ಮುನ್ನೂರು ವಸರ್ಾಂತ ಬರ್ಕೋ ಎಂದು ಹೇಳಿತ್ತು, ಅದರ ಆ ಹೇಳಿಕೆ ಸತ್ಯ ಅಲ್ಲದಿದ್ದರೂ ಸುಳ್ಳಂತೂ ಖಂಡಿತ ಅಲ್ಲ, ಅದರ ಕಪ್ಪನೆಯ ದೇಹವೋ, ಮಾರುದ್ದ ಕೇಶರಾಶಿಯೋ, ಪ್ರಪಂಚದ ಸಮಸ್ತಸುಕ್ಕುಗಳನ್ನು ಆಭರಣಗಳೋಪಾದಿಯಲ್ಲಿ ಧರಿಸಿ ದೇಹಕ್ಕಂಟಿರುವ ಚರ್ಮವೋ, ಬಾಯಿಯೊಳಗಿನ್ನೂ ಉದುರದೆ ಉಳಿದಿರುವ ಮುವ್ವತ್ನಾಲ್ಕು ನೇರಳೆವರ್ಣದ ದಂತಪಂಕ್ತಿಯೋ, ಕಿಪ್ಪೊಟ್ಟೆವರೆಗೆ ಇಳಿಬಿದ್ದಿರುವ ಸ್ತನಧ್ವಯವೋ, ಹಗಲಿರುಳ ವಟಗುಟ್ಟುವ ಅದರ ಬಾಯಿಯೋ, ನರಮಾನ್ನವರನ್ನು ನಾಯಿನರಿಗಳೆಂದೂ ನಾಯಿನರಿಗಳನ್ನು ನರಮಾನ್ನವರೆಂದು ಗುರುತಿಸಿ ಬಯ್ಯುವ ರೀತಿಯೋ! ಮನೆಯ ಮುಂದೆಯೇ ಅದು ಮಲಮೂತ್ರಗಳನ್ನು ವಿಸರ್ಜಿಸುವ ಪರಿಯೋ! ತನ್ನ ಸೊಸೆ ಗೌರಮ್ಮಳೊಂದಿಗೆ ಅದು ಕೌಶಲ್ಯಪೂರ್ಣವಾಗಿ ಜಗಳ ತೆಗೆಯುತ್ತಿದ್ದ ರೀತಿಯೋ! ಇಂಥ ಹಲವು ಕಾರಣಗಳಿಂದಾಗಿ ನನಗದು ಪ್ರಪಂಚ ಹತ್ತುಹಲವು ಅದ್ಭುತಗಳಲ್ಲಿ ಒಂದಾಗಿರುವುದು.
ಶಾಲೆಗೆ ಹೋಗುವಾಗ ಶಾಲೆಯಿಂದ ಬರುವಾಗ ಅದನ್ನು ನೋಡುವುದು, ಅದರ ಜೊತೆ ಒಂದೆರಡು ಮಾತುಗಳನ್ನಾಡುವುದು ನನ್ನ ದಿನಚರಿಯ ಮುಖ್ಯ ಭಾಗ. ಬಳ್ಳಾರಿಗೆ ಹೋದಾಗ ಅದಕ್ಕೆಂದೇ ಒಂದಿಷ್ಟು ಸಿಹಿ ದಿನಿಸನ್ನೂ, ಎಲೆಅಡಿಕೆ ಕಡ್ಡಿಪುಡಿಯನ್ನೂ ಕಟ್ಟಿಸಿಕೊಂಡು ಮರಳಿದವನೆ ಅದಕ್ಕೆ ಕಪ್ಪಕಾಣಿಕೆ ರೂಪದಲ್ಲಿ ಸಮರ್ಪಿಸುವುದರ ಮೂಲಕ ಅದರ ವಿಶ್ವಾಸವನ್ನು ಸಂಪಾದಿಸಿದ್ದೆ. ಆಶ್ಚರ್ಯದಿಂದ ಇನ್ನೂ ಬದುಕಿದ್ದೀಯಲ್ಲಭೇ ಎಂದು ಮೂಗಿನಮೇಲೆ ಬೆರಳಿಟ್ಟುಕೊಳ್ಳುತ್ತಿದ್ದ ಕೆಲವರಿಗೆ ನನಗೇನಾಗೈತ್ರಲೋ ಗೂದಿ, ಊರಾಗಿರೋರೆಲ್ಲ ಸತ್ತ ಮೇಲೆಯೇ ನಾನು ಸಾಯೋದು ಎಂದು ಮರುಜವಾಬು ನೀಡುತ್ತಿತ್ತು. ಅಂಥ ಮುದುಕಿಯನ್ನು ಸಂಬಾಳಿಸುವುದೆಂದರೆ ನೂರು ಜನರನ್ನು ಸಂಬಾಳಿಸಿದಂತೆಯೇ ಸರಿ.
ಈ ಕಾರಣದಿಂದಾಗಿ ಗವಿ ನನಗೆ ಪ್ರಿಯ ಮತ್ತು ಕುತೂಹಲದ ವ್ಯಕ್ತಿಯಾಗಿದ್ದನು. ತಿಂಗಳಿಗೊಮ್ಮೆಯಾದರೂ ನನ್ನಿಂದ ಐದೋ ಹತ್ತೋ ಸಾಲ ಪಡೆಯುತ್ತಿದ್ದ, ಕಡೇಮನಿ ಹುಸೇನಿಯ ಹಾಗೆ ಕೊಡೋದಿಲ್ಲ ಏನ್ಮಾಡ್ಕಂತೀಯ ಮಾಡ್ಕೋ ಹೋಗು ಎಂದು ಹೇಳಿ ಸಂಬಂಧ ಮುರಿದುಕೊಳ್ಳುತ್ತಿರಲಿಲ್ಲ. ಗಿಡ್ಡವೂ ಅಲ್ಲದ ಎತ್ತರವೂ ಅಲ್ಲದ ಅವನು ಖಾಲಿ ಇರುತ್ತಿರಲಿಲ್ಲ, ಏನಾದರೊಂದು ಕೆಲಸ ದೊರಕಿಸಿಕೊಂಡು ಅದನ್ನು ನೀಟಾಗಿ ಮಾಡಿಮುಗಿಸುತ್ತಿದ್ದ, ಸಂಬಂಧವಾಚಕಗಳನ್ನು ಪುಂಖಾನುಪುಂಖವಾಗಿ ಬಳಸುವುದರ ಮೂಲಕ ಗ್ರಾಮದ ಎಲ್ಲರಿಗೂ ಬೇಕಾಗಿದ್ದ. ಅಷ್ಟೇ ಅಲ್ಲದೆ ಹಬ್ಬಹರಿದಿವಸಗಳಲ್ಲಿ ಕೋಲಾಟ ಭಜನೆಗಳಂಥ ಸಾಂಸ್ಕೃತಿಕ ಚಟವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿದ್ದ, ವೀರಭದ್ರದೇವರ ಕೆಂಡಹಾಯುವ ಸಂದರ್ಭದಲ್ಲಿ ವೀರಗಾಸೆ ವೇಷ ಧರಿಸಿ ನರ್ತಿಸುತ್ತಿದ್ದ, ಅಲ್ಲದೆ ನುರಿತ ಸಮಾಳ ವಾದಕನೂ ಆಗಿದ್ದ, ಡ್ರಾಪ್ಔಟ್ ಮಕ್ಕಳನ್ನು ಪತ್ತೆ ಹಚ್ಚಿ ಶಾಲೆಗೆ ತಂದುಕೊಡುವುದರ ಮೂಲಕ ಶಿಕ್ಷಕರ ವಿಶ್ವಾಸಕ್ಕೂ ಪಾತ್ರನಾಗಿದ್ದ.
ವಾರಕ್ಕೊಮ್ಮೆಯಾದರೂ ಅಕ್ಷರ ದಾಸೋಹದ ವಿಶೇಷ ಊಟವನ್ನು ಮನೆಗೊಯ್ದು ತನ್ನ ವೃದ್ದ ತಾಯಿಗೆ ಉಣಬಡಿಸುತ್ತಿದ್ದ. ಕಾರಣ ಒಂದೇ ಕಡ್ಡಿ ಒಂದೇ ಬೀಡಿಯ ಆಸರೆಯಲ್ಲಿ ಆತನ ಬದುಕು ಸಾಗಿತ್ತು. ಅಂಥವನು ಲೀಲಾವಿನಲ್ಲಿ ಹತ್ತುಸಾವಿರದ ಮೇಲೊಂದು ನೂರು ಎಂದು ಕೂಗಿ ತೊಟ್ಟಿಲು ಪಡೆಯುವುದೆಂದರೆ! ಇಪ್ಪತ್ನಾಲ್ಕು ಗಂಟೆಯೊಳಗಾಗಿ ಲೀಲಾವಿನ ಮೊತ್ತವನ್ನು ಚುಕ್ತಾ ಮಾಡುವುದೆಂದರೆ ಸಾಮಾನ್ಯ ಸಂಗತಿಯೆ! ಎಲ್ಲರಂತೆಯೇ ದಿಗ್ಭ್ರಮೆಗೀಡಾಗಿದ್ದ ಶಿಕ್ಷಕ ಮಿತ್ರ ಸಿದ್ಧಾರೂಢರ ತೊಟ್ಟಿಲು ಮನೆಗೊಯ್ದಷ್ಟು ಸುಲಭವಲ್ಲ ಸಾರ್ ಮುಂದಿನ ಕಾರ್ಯಕ್ರಮಗಳನ್ನು ಮಾಡೋದು. ಹತ್ತಾರು ಮಂದಿ ಸಾಧುಸಂತರನ್ನು ಮನೆಗೆ ಬರಮಾಡಿಕೊಳ್ಳೋದಿದೆ, ಅವ್ರಿಗೆಲ್ಲ ಬ್ರಾಂದಿ ಗಾಂಜಾ ಕೊಡಿಸೋದಿದೆ, ನೂರಾರು ಮಂದಿಗೆ ಊಟ ಹಾಕೋದಿದೆ, ಅದ್ಕೆಲ್ಲ ಏನಿಲ್ಲಾಂದ್ರೂ ಇನ್ನೂ ಹತ್ತು ಸಾವಿರ ಖರ್ಚು ತಗಲ್ತದೆ, ನಾವೇನೋ ಸ್ಥಳೀಯರು, ಸಾಲ ಕೊಟ್ರೆ ವಸೂಲಿ ಮಾಡ್ತೀವಿ, ಆದ್ರೆ ನೀವು ಪರಸ್ಥಳದೋರು, ಅಲ್ಲದೆ ನಿಮ್ಮ ಕೈ ಸದಾಮುಂದು, ಯಾವುದ್ಕೂ ಹುಷಾರಿರಿ ಎಂದು ಹೇಳಿದ, ಆತನ ಸಲಹೆಯ ರೂಪದಲ್ಲಿ ನೀಡಿದ ಎಚ್ಚರಿಕೆ ಹಿಡಿಸಿತು, ಅಲ್ಲದೆ ಆತಂಕವೂ ಹೆಚ್ಚಿತು, ಕಾರಣ ಯಾರಾದರೂ ಏನಾದರೂ ಕೇಳಿದರೆ ಇಲ್ಲವೆನ್ನುವ ಜಾಯಮಾನ ನನ್ನದಲ್ಲ, ವಾಪಸ್ಸು ಬಂದಿರುವುದಕ್ಕಿಂತ ಕಳೆದುಕೊಂಡಿರುವುದೇ ಅಧಿಕ, ಅವನ ನಡೆನುಡಿ ಕುರಿತಂತೆ ಎಚ್ಚರಿಕೆಯಿರಬೇಕೆಂದು ನಿರ್ಧರಿಸಿದೆ.
ನಾನು ಸುಮ್ಮನಿದ್ದರೂ ನನ್ನ ಪಂಚೇಂದ್ರಿಯಗಳು ತೆಪ್ಪಗಿದ್ದರೆ ತಾನೆ! ಅವು ದೂರಸಂವೇದಿ ಉಪಗ್ರಹಗಳೋಪಾದಿಯಲ್ಲಿ ಮಜ್ಕಿಗೆಯವರ ಮನೆಯ ವಿದ್ಯಾಮಾನಗಳನ್ನು ಗಮನಿಸಲಾರಂಭಿಸಿದವು, ಅಲ್ಲದೆ ಶಾಲೆಗೆ ಹೋಗುವಾಗ ಬರುವಾಗ ಚಲನೆಯನ್ನು ಹ್ರಸ್ವಗೊಳಿಸಿ ಮಾಳವ್ವ ಎಂಬ ಮುದುಕಿಯನ್ನು ಗಮನಿಸತೊಡಗಿದೆ, ವಟವಟಗುಟ್ಟುತ್ತಿದ್ದ ಅದು ಹುಬ್ಬುಗಳ ಮೇಲೆ ಎಡಗೈಯನ್ನಿರಿಸಿ ನನ್ನನ್ನು ಗುರುತಿಸುವ ಸಾಹಸ ಮಾಡುತ್ತಿತ್ತಾದರೂ ಗುರುತಿಸುತ್ತಿರಲಿಲ್ಲ, ವೈಶಾಖದ ಬಿರುಬಿಸಿಲಿನಿಂದಾಗಿ. ಆದರೆ ಅಗಲಕ್ಕಿಂತ ಹೆಚ್ಚು ಉದ್ದವಿದ್ದ ಮನೆಯೊಳಗಿನ ವಿದ್ಯಾಮಾನಗಳೊಂದೂ ಗೋಚರಿಸುತ್ತಿರಲಿಲ್ಲ. ಆ ದಿವಸ ಎರಡಕ್ಕಿಂತ ಹೆಚ್ಚು ಸಲ ಗವಿ ಎದುರಾಗಿದ್ದುಂಟು, ಆದರೆ ತನ್ನ ಪಾಡಿಗೆ ತಾನು ಹೊರಟು ಹೋಗುತ್ತಿದ್ದುಂಟು. ವಿಚಿತ್ರವೆಂದರೆ ಅವನು ಎಂದಿಗಿಂತ ಹೆಚ್ಚು ಲವಲವಿಕೆಯಿಂದಿರುವಂತೆ ಗೋಚರಿಸಿದ.
ಮಧ್ಯಾಹ್ನದ ಸಮಯ. ಕಥೆಯೊಂದು ಅದೇ ತಾನೆ ಮನಸ್ಸಿನಲ್ಲಿ ಮೊಳಕೆಯೊಡೆಯಲಾರಂಭಿಸಿತ್ತು, ಅಕ್ಷರದ ಉಡುಗೆ ಧರಿಸಲು ಅವಸರಿಸುತ್ತಿರುವ ಅದಕ್ಕೆ ‘ತೊಟ್ಟಿಲು’ ಎಂಬ ಶೀರ್ಷಿಕೆ ಕೊಟ್ಟರೆ ಹೇಗೆ! ಆರಾಂಛೇರ್ ಮೇಲೆ ಕುಳಿತು ಲೆಟರ್ಪ್ಯಾಡನ್ನೂ ಪೆನ್ನನ್ನೂ ಕೈಗೆತ್ತಿಕೊಂಡೆ. ಒಂದೆರಡು ವಾಕ್ಯಗಳನ್ನು ಬರೆಯುವಷ್ಟರಲ್ಲಿ ಸುಸ್ತು ಆವರಿಸಿತು. ಪೆನ್ನಿನ ಮೊನೆಯಿಂದ ಗದ್ದವನ್ನು ತುರಿಸಿಕೊಳ್ಳುತ್ತ ಎದುರಿಗೆ ಗೋಡೆ ಮೇಲಿದ್ದ ಕನ್ನಡಿ ಕಡೆ ದೃಷ್ಟಿ ಹಾಯಿಸಿದೆ. ಅದರಲ್ಲಿ ರಥಬೀದಿಯ ಚಲನವಲನ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಕೆಂಡದಂಥ ಬಿಸಿಲನ್ನೂ ಲೆಕ್ಕಿಸದೆ, ಛತ್ರಿ ಟವಲ್ಲಿನ ನೆರವಿಲ್ಲದೆ ಅಡ್ಡಾಡುತ್ತಿದ್ದ ಜನರ ನಡುವೆ ಮಾನವಾಕೃತಿಯೊಂದು ಗೋಚರಿಸಲಾರಂಭಿಸಿತಲ್ಲದೆ ಅದು ಗವಿಸಿದ್ದನೆಂದು ಸ್ಪಷ್ಟವಾಯಿತು. ಅರೆ! ಅವನು ನನ್ನನ್ನು ಕಾಣಲಿಕ್ಕೆಂದೇ ಬರುವಂತಿದೆ, ಅಕಸ್ಮಾತ್ತೇನಾದರೂ ಬಂದರೆ ಸಿದ್ಧಾರೂಢರ ತೊಟ್ಟಿಲೆಂಬ ನಾನ್ಸೆನ್ಸನ್ನು ದೈವಿಕ ಹರಾಜಿನಲ್ಲಿ ಹಲವು ಸಾವಿರ ತೆತ್ತು ಪಡೆದ ಕಾರಣ ವಿಚಾರಿಸಬೇಕು. ಅಥವಾ ಅದನ್ನೆಲ್ಲ ಕಲ್ಪನೆಯ ನೆರವಿನಿಂದ ಸೃಜನಶೀಲವಾಗಿ ನಿಭಾಯಿಸಿದರಾಯಿತು. ಬಂದರೆ ಅವನು ಸಾಲ ಕೇಳದೆ ಇರಲಾರ. ನೂರೋ ಇನ್ನೂರೋ! ಕೇಳಿದರೆ ಕೊಟ್ಟು ನಿರಮ್ಮಳವಾಗಿ ಇರಬಹುದು, ಆದರೆ ಹಲವು ಸಾವಿರಗಳನ್ನು ಯಾಚಿಸಿದರೆ! ಆತಂಕಕ್ಕೊಳಗಾದೆ.
ಮೆಲ್ಲಗೆ ಬಲಗಾಲನ್ನು ಚಾಚಿ ಬಾಗಿಲ ಕದಗಳ ಪೈಕಿ ಒಂದನ್ನು ಮುಂದಕ್ಕೆ ತಳ್ಳಿದೆ, ಅದು ಕಿರ್ರೆಂದು ಸದ್ದು ಮಾಡುತ್ತ ಮುಚ್ಚಿಕೊಂಡಿತು. ಇನ್ನೊಂದನ್ನೂ ಮುಚ್ಚಿದರೆ ಹೇಗೆ ಎಂದು ಯೋಚಿಸುತ್ತಿರುವಷ್ಟರಲ್ಲಿ ಮನುಷ್ಯಾಕೃತಿಯ ನೆರಳು ಕಾಣಿಸಿಕೊಂಡಿತಲ್ಲದೆ ಕ್ರಮೇಣ ಕೋಣೆಯ ಅರ್ಧಭಾಗವನ್ನು ಆಕ್ರಮಿಸಿಕೊಂಡಿತು. ಕಾಣಿಸಬಾರದೆಂದು ನಿರ್ಧರಿಸಿ ಮೆಲ್ಲಗೆ ಹಿಂದೆ ಸರಿಯಲು ಪ್ರಯತ್ನಿಸಿದೆ, ಆದರೆ ಸಾಧ್ಯವಾಗಲಿಲ್ಲ. ಅಷ್ಟರಲ್ಲಿ ಮೇಸ್ಟ್ರೇ ಎಂದು ಕೂಗಿದ್ದೂ ಅಲ್ಲದೆ ತನ್ನೆರಡೂ ಕೈಗಳನ್ನು ಬಾಗಿಲ ತೋಳುಗಳಿಗೆ ಆನಿಸಿ ಒಳಗೆ ತನ್ನ ಕತ್ತನ್ನು ಚಾಚಿ ನೋಡಿಯೇಬಿಟ್ಟ. ನಿದ್ದೆಯ ಆರಂಭದ ಚರಣವನ್ನು ರಿಯಾಜ್ ಮಾಡಲಾರಂಭಿಸಿದ್ದ ನಾನು ಕಣ್ಣು ತೆರೆದು ನೋಡಿ ಓಹ್ ಗವಿಸಿದ್ದ! ಬಾರಪ್ಪಾ ಬಾ ಎಂದು ಸ್ವಾಗತಿಸುವುದು ಅನಿವಾರ್ಯವಾಯಿತು.
ನಿನ್ನೆ ದಿವಸ ಗವಿಯೆಂದು ಕರೆಸಿಕೊಳ್ಳತ್ತಿದ್ದ ವ್ಯಕ್ತಿ ಈ ದಿವಸ ಗವಿಸಿದ್ದಪ್ಪನೆಂದು ಕರೆಸಿಕೊಳ್ಳಲಾರಂಭಿಸಿದ್ದ, ಮೂಲೆಯಲ್ಲಿರುತ್ತಿದ್ದ ಸ್ಟೂಲಿನ ಮೇಲೆ ಕುಳಿತುಕೊಳ್ಳುತ್ತಿದ್ದವನು ನೆಲದ ಮೇಲೆ ವಲ್ಲಿ ಹಾಸಿ ಕುಳಿತುಕೊಂಡ. ನಖಶಿಖಾಂತ ವಿನಯ ಪ್ರಕಟಿಸಲಾರಂಭಿಸಿದ, ಸಾಲ ಕೇಳಲು ಈ ವರಸೆ ಆರಂಭಿಸಿರುವನೆಂದು ಭಾವಿಸಿದೆ. ಅವನ ಅಭಿನಯಕ್ಕೆ ಯಾವ ಕಾರಣಕ್ಕೂ ಮರುಳಾಗಬಾರದೆಂದು ನಿರ್ಧರಿಸಿದೆ. ಅಡುಗೆ ಊಟ ಇತ್ಯಾದಿ ಪ್ರಸ್ತಾಪಿಸಿದ, ಬಳಿಕ ತಾನೆ
ಈ ರಾತ್ರಿ ಮನೇಲಿ ಸಿದ್ಧಾರೂಢರ ಆರಾಧನೆ ಇಟ್ಕೊಂಡಿದ್ದೀವಿ ಸಾರ್, ನೀವು ರಾತ್ರಿ ಊಟಕ್ಕೆ ನಮ್ಮ ಮನೆಗೆ ಬರಬೇಕು ಸಾರ್, ಎಲ್ಲಾ ಮೇಸ್ಟ್ರುಗಳನ್ನು ಕರೆದಿದ್ದೀನಿ ಎಂದು ಹೇಳಿದ್ದು ಕೇಳಿ ಆಶ್ಚರ್ಯಪಟ್ಟೆ. ನನ್ನ ಮುಖ ವಿವರ್ಣಗೊಳ್ಳಲಾರಂಭಿಸಿತು. ಪುನಃ ಚೇತರಿಸಿಕೊಂಡು
ಗವಿಸಿದ್ದಪ್ಪ ಎಲ್ಲಾ ಬಿಟ್ಟು ಆ ತೊಟ್ಟಿಲನ್ಯಾಕೆ ಲೀಲಾವಿನಲ್ಲಿ ತಗೊಂಡೆ, ಅದರಲ್ಲೇ ಆರ್ತಿಂಗಳು ಸಂಸಾರ ನಡೆಸಬಹುದಿತ್ತಲ್ಲವೆ! ಎಂದು ಕೇಳಿದೆ, ಅಧಿಕಪ್ರಸಂಗವೆನಿಸಿದರೂ. ಸ್ವಲ್ಪ ಹೊತ್ತು ಮೌನವಹಿಸಿದಾದ ಬಳಿಕ
ನಮ್ಮದು ಮಜ್ಜಿಗೆ ಮನ್ತನ ಸಾರ್, ಒಂದುಕಾಲದಲ್ಲಿ ಊರೋರೆಲ್ಲ ನಮ್ಮನೇಲಿಂದ್ಲೇ ಮಜ್ಜಿಗೆ ಒಯ್ಯತ್ತಿದ್ದರು. ನಾವು ಹಿಂದಿನ ಕಾಲದಲ್ಲಿ ಸಾಹುಕಾರರಾಗಿದ್ವಿ, ಎಸ್ಟು ಒಡವೆವಸ್ತ ಇದ್ವು ಏನ್ಕತಿ! ನಮ್ಮ ತಾತ ಮೂರು ಖೂನಿ ಮಾಡಿ ದಕ್ಕಿಸಿಕೊಂಡಿದ್ರೆ ನಮ್ಮ ಅಪ್ಪ ಎರಡು ಖೂನಿ ಮಾಡಿ ಆಸ್ತಿ ಪಾಸ್ತೀನೆಲ್ಲ ಕಳೆದುಬಿಟ್ಟ, ಅಂತೂ ಶಿಕ್ಸೆಯಿಂದ ಪಾರಾಗಿ ಬಂದು ಮಜ್ಜಿಗಿಮನ್ತನದ ಮಾನ ಉಳುಸಿದ್ನಲ್ಲ ಅಸ್ಟೇ ಸಾಕು. ಈಗ ನಿನ್ನೆಮೊನ್ನೆ ಸಾಹುಕಾರರಾಗಿರೋರು ತಾತನ ತೊಟ್ಲೂನ ಲೀಲಾವಿನಲ್ಲಿ ತಗೊಳ್ಳೋದೆಂದ್ರೇನು! ಸಿದ್ದಾರೂಢ್ರು ನಮ್ಮ ಮನೆ ದೇವ್ರು, ತಾತ ಮುತ್ತಾತರೆಲ್ಲ ಅವರಿಗೆ ನಡಕೊಳ್ತಿದ್ರು. ಅದೂ ಅಲ್ದೆ ನಾನು ಮದುವೆಯಾಗಿ ಹತ್ತದಿನೈದು ವರ್ಸಾದ್ರು ಮಕ್ಕಳಿಲ್ಲ, ನಮ್ಮ ಗೌರಿ ತೊಟ್ಲು ತೂಗಿದ್ರೆ ತಾತ ಮಕ್ಕಳನ್ನ ಕೊಟ್ಟೇಕೊಡ್ತಾನೆ. ಏನ್ ಸ್ರೀಮಂತಿಕೆ ಇದ್ರೇನು ಪ್ರಯೋಜನ ಸಾರ್ ಮಕ್ಕಳುಮರಿ ಇಲ್ಲದ ಮೇಲೆ ಎಂದು ವಿವರಿಸಿದ, ಆತ ಹೇಳಿದ್ದು ಕೇಳಿ ಪೆಚ್ಚಾದೆ, ಪುನಃ ನಾನೆ ಅದೆಲ್ಲ ಸರಿಯಪ್ಪ, ಹಣಕಾಸಿಗೇನು ಮಾಡಿದೆ! ಎಂದು ಕೇಳಿದೆ ಕುತೂಹಲದಿಂದ.
ಅದಕ್ಕೆ ಅವನು ನಮ್ಮುದ್ಕೀಗೆ ಒಳ್ಳೆ ಬುದ್ದಿ ಕೊಟ್ಟಿದ್ದೇ ತಾತ! ನಿನ್ನೊಟ್ಟೀಲಿ ಒಂದು ಕೂಸಾಯಿತಂದ್ರೆ ನೆಮ್ಮದೀಂದ ಸುಡ್ಗಾಡನ ಸೇರ್ಕಂತೀನಿ ಎಂದು ಹೇಳಿ ತನ್ನಲ್ಲಿದ್ದ ಒಡೆವು, ಮುರುವು, ವಡ್ಯಾಣಾನ ಗುಟ್ಟಾಗಿ ನನ್ ಕೈಗಿಟ್ತು ಸಾ, ಅದ್ರ ಮ್ಯಾಲ ಅಣ್ಣತಮ್ಮಗೋಳೊಂದೇ ಅಲ್ದೆ ನನ್ನೆಣ್ತಿ ಗೌರೀನೂ ಕಣ್ಣಿಟ್ಟಿದ್ಲು. ಅದೂ ಅಲ್ದೆ ಸಿದ್ಧಾರೂಡರ ಮುಡುಪಲ್ಲಿ ಏಳೆಂಟ್ಸಾವ್ರ ಇತ್ತು. ಎಲ್ಲ ಅಂದ್ಕೊಂಡೇ ಜರುಗ್ತು, ತಾತ ದೊಡ್ಡಾತ ಎಂದು ಮನಸ್ಸಿನಲ್ಲೇ ಮೀಸೆ ತಿರುವಿದ.
ಅವನ ಮಾತು ಕೇಳಿ ಪೆಚ್ಚಾದೆ. ನನ್ನಿಂದ ಹಣಕಾಸನ್ನು ಆಪೇಕ್ಷಿಸದ ಅವನ ಸ್ವಾಭಿಮಾನವನ್ನು ಮೆಚ್ಚಿದೆ, ಕೇಳದೆ ಇರುವುದು ನನಗಾದ ಅವಮಾನವೆಂದೇ ಭಾವಿಸಿದೆ. ಆ ಅಪಮಾನದ ತಿಪ್ಪೆ ಸಾರಿಸುವ ದೃಷ್ಟಿಯಿಂದ ಗವಿಸಿದ್ದ ಸಾವಿರ ಎರಡು ಸಾವಿರ ಬೇಕಿದ್ದರೆ ಕೇಳಪ್ಪಾ, ಸಂಕೋಚಪಟ್ಕೋಬೇಡ ಎಂದು ಕೇಳಿದೆ. ಅದಕ್ಕೆ ಅವನು ನನ್ನತ್ತ ಕೃತಜ್ಞತಾಭಾವದಿಂದ ನೋಡಿದ, ಒದ್ದೆಯಾಗಲಿದ್ದ ಕಣ್ಣುಗಳನ್ನು ಮುಚ್ಚಿ ತೆರೆದ, ನೋಡಿದ ಇಂಥವರೂ ಭೂಮಿ ಮೇಲೆ ಇರುವರಲ್ಲಾ ಎಂಬ ಆಶ್ಚರ್ಯ ತನ್ನ ನೋಟದಲ್ಲಿತ್ತು,
ನಿಮ್ಮಂಥರಿರೋದ್ರಿಂದ್ಲೇ ಸಕಾಲಕ್ಕ ಮಳಿಬೆಳಿ ಆಗ್ತಿರೋದು ಸಾ, ನೀವಾದ್ರೂ ಬಾಯಿಬಿಟ್ಟು ಕೇಳಿದ್ರಲ್ಲ ಅಸ್ಟೇ ಸಾಕು, ಕೆಲವರಂತೂ ಎಲ್ಲಿ ಕೇಳ್ತಾನೋ ಎಂದು ಕಣ್ತಪ್ಪಿಸಿ ಅಡ್ಡಾಡ್ತಿದ್ರು ಸಾ, ನಾನಿದುವರ್ಗೂ ಯಾರ ಗಂಟು ಮುಳುಗಿಸಿಲ್ಲ, ಮೊಲೆ ಉಂಡೋವೇ ಬದ್ಕೋದು ಕಸ್ಟ, ಅಂತದ್ರಾಗ ವಿಸ ಉಂಡೋವು ಬದ್ಕುತಾವಾ! ಎಂದು ಹೇಳಿದಾದ ಬಳಿಕ ನಿಟ್ಟುಸಿರುಬಿಟ್ಟು ಪುನಃ ಹೇಳಿದ ಅಂಥ ಟೈಮು ಬಂದಿದ್ರೆ ನಿಮ್ಮನ್ನ ಕೇಳ್ತಿದ್ದೆ, ದೇವ್ರು ದೊಡ್ಡೋನು, ನಮ್ಮುದ್ಕೀಕೆ ಒಳ್ಳೆ ಬುದ್ದಿ ಕೊಟ್ಟ, ಸರಿ ಹೋತು, ಇಲ್ದಿದ್ರೆ ಜನತಾಮನಿ ಮಾರಬೇಕಿತ್ತು ಎಂದು ಹೇಳುತ್ತ ವಲ್ಲಿ ತುದಿಯಿಂದ ಕಣ್ಣಲ್ಲಿದ್ದ ನೀರೊರೆಸಿಕೊಂಡ.
ಅವನು ಹೇಳಿದ್ದು ಕೇಳಿ ನಾಚಿಕೆಯಿಂದ ಮುಖ ತಗ್ಗಿಸಿದೆ, ಕೈಕೈ ಹಿಚುಗಿಕೊಂಡೆ. ಆದರೂ ತಡವರಿಸುತ್ತ ಹ್ಹಾಂ! ಇರೋದೊಂದು ಮನೀನ ಮಾರ್ತಿದ್ದಿಯಾ! ಎಂದೆ, ಅದಕ್ಕೆ ಅವನು..
ಆಸ್ತಿಪಾಸ್ತೀನ ಸಂಪಾದಿಸಬಹ್ದು ಸಾ, ಆದ್ರೆ ಮಾನಮರ್ವಾದೆ ಹೋದ್ರೆ ಸಂಪಾದಿಸ್ಲಿಕ್ಕಾಗ್ತದಾ! ನಮ್ಮದು ಮೊದ್ಲೇ ಮಜ್ಜಿಗೇರ ಮನ್ತನ, ನಮ್ಮ ಹೀರೇರು ಮಾನಮರ್ಯಾದೇನ ಉಳಿಸ್ಕೊಳ್ಳೋಕೆ ಆಸ್ತಿ ಕಳ್ಕೊಂಡ್ರು, ಅಂಥೋರ ವಂಸದವನಾಗಿ! ಎಂದು ಪುನಃ ಗದ್ಗದಿತನಾದ. ಲೊಚಗುಟ್ಟಿದ ಹಲ್ಲಿ ಇದ್ದ ಗೋಡೆ ಕಡೆಗೆ ನೋಡಿ ನೆಮ್ಮದಿಯ ಉಸಿರುಬಿಟ್ಟ.
ಇಂಥ ಮಹಾನ್ ಸ್ವಾಭಿಮಾನಿಗಳಿಂದ ತುಂಬಿರುವ ಭಾರತದ ನಕ್ಷೆ ಕಣ್ಣಮುಂದೆ ಸುಳಿಯಿತು. ದೇಶ ಬದುಕಿರುವುದೇ ಇಂಥವರಿಂದ ಎಂದೆನ್ನಿಸಿತು. ಇಂಡಿಯಾ ಭಾರತ ಎಂಬ ದೇಶೀಯವಾಚಕಗಳು ಇಂಥವರಿಗೆ ತಿಳಿದಿರುವುದೋ ಇಲ್ಲವೋ!
ಕೆಳಗಿದ್ದ ವಲ್ಲಿಯನ್ನು ಕೊಡವಿ ಹೆಗಲ ಮೇಲೆ ಇಳಿಬಿಟ್ಟುಕೊಳ್ಳುತ್ತ ಎದ್ದವನೆ ಏನೋ ಬರೀತ್ತಿದ್ದಂಗಿದ್ರೀ ಬಂದು ತೊಂದ್ರೆ ಕೊಟ್ಟೆನೇನೊ! ಮಾಡಬೇಕಿರೋ ಕೆಲಸ ಮಸ್ತೈತಿ, ಹೊರಡ್ತೀನಿ, ಆದ್ರೆ ನೀವು ರಾತ್ರಿ ಬರೋದನ್ನು ಮಾತ್ರ ಮರೀಬ್ಯಾಡ್ರಿ ಸಾ, ಸಾಲಿ ಮಕ್ಕಳೀಗೂ ಹೇಳೀನಿ ಎಂದು ಅಲ್ಲಿಂದ ನಿರ್ಗಮಿಸಿದ.
ಅವನು ಅಲ್ಲಿಂದ ಹೋದ ಬಳಿಕ ತಪ್ಪಿತಸ್ತ ಭಾವದಿಂದ ಅಸ್ವಸ್ತಗೊಂಡೆ, ಸಂಜೆಯಾದೊಡನೆ..



tejasvi yavara malenada anubhavagalanteye kumviyavara bayalusime anubhava thanks to kumvi emba daitya prathibhege