ಕುಮುದವಲ್ಲಿ ಅರುಣಮೂರ್ತಿ
ನನಗೆ ಬುದ್ಧಿ ಬಂದಾಗಿನಿಂದ…ಯಾವತ್ತೂ ಆಗಸ್ಟ್ ೧೫ರ ನಮ್ಮ ಸ್ವತಂತ್ರ ಭಾರತದ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ತಪ್ಪಿಸಿದ್ದೇ ಇಲ್ಲ. ನನ್ನ ದೇಶ, ನಮ್ಮ ಸಂಸ್ಕೃತಿ ಅಂದ್ರೆ ವಿಪರೀತ ಅಭಿಮಾನ ಇರಿಸಿಕೊಂಡವಳು. ಶಾಲೆಯಲ್ಲಿ, ಕಾಲೇಜಿನಲ್ಲಿ ನಾನು ಹಾಡುವ ದೇಶಭಕ್ತಿಗೀತೆಗಳು ವರ್ಲ್ಡ್ ಫೇಮಸ್ಸಾಗಿತ್ತು. ಓದು ಮುಗಿಸಿ ಕೆಲ್ಸಕ್ಕೆ ಸೇರಿಕೊಂಡಾಗ…ನಮ್ಮ ಆಫೀಸ್ ನಲ್ಲಿ ಆಗಸ್ಟ್ ೧೫ ಸುಮ್ಮನೆ ರಜೆ ಘೋಷಿಸಿದ್ದನ್ನ ಕಂಡು ಅದರ ವಿರುದ್ಧ ತಿರುಗಿ ಬಿದ್ದು…ಮ್ಯಾನೇಜ್ಮೆಂಟ್ ಜೊತೆ ವಾದ ಮಾಡಿ, ಧ್ವಜಾರೋಹಣ ಮಾಡಲೇ ಬೇಕೆಂದು ಅವರ ಮನವೊಲಿಸಿ, ಅಂದಿನಿಂದ ಪ್ರತಿ ವರ್ಷ ಅದನ್ನು ಆಚರಣೆಗೆ ತಂದವಳು. ಮದುವೆಯಾದ ನಂತರ, ನಮ್ಮ ಮಾವನವರದೇ ಆಫೀಸ್ ಇತ್ತು. ಅಲ್ಲಿ ಬಹಳ ವರ್ಷಗಳಿಂದ ಅವರು ತಪ್ಪದೇ ಸ್ವಾತಂತ್ರ್ಯ ದಿನಾಚರಣೆಯಂದು ಧ್ವಜಾರೋಹಣ ಮಾಡುತ್ತಿದ್ದುದನ್ನ ಕಂಡು ಸಿಕ್ಕಾಪಟ್ಟೆ ಖುಷಿಪಟ್ಟವಳು.

ಇಂತಹ ನಾನು, ನನ್ನ ಪತಿ-ಮಕ್ಕಳೊಡನೆ ೨೦೦೪-೨೦೦೫ ರ ಅವಧಿಯಲ್ಲಿ ಈಸ್ಟ್ ಆಫ್ರಿಕಾದ ಕೀನ್ಯಾದಲ್ಲಿ ನೆಲೆಸಬೇಕಾದ ಪ್ರಮೇಯ ಬಂದಾಗ, ಅಮ್ಮ ಅಪ್ಪ ಅತ್ತೆ ಮಾವರನ್ನು ಬಿಟ್ಟು ಹೋಗೋ ನೋವಿಗಿಂತಾ ನನ್ನ ದೇಶ ತೊರೆದು ಹೋಗಬೇಕಾಯ್ತಲ್ಲಾ ಅಂತ ಚಿಂತಿಸಿದ್ದೇ ಹೆಚ್ಚು. ನನ್ನ ಬುದ್ಧಿ ತಿಳಿದಿದ್ದ ನನ್ನ ತಂಗಿ ನನಗೊಂದು ರಾಷ್ಟ್ರಧ್ವಜವನ್ನು ತಂದು ಕೊಟ್ಟಿದ್ದಳು. ಅದನ್ನು ಒಂದು ಖಾದಿ ಕವರ್ನಲ್ಲಿಟ್ಟು ಜೋಪಾನವಾಗಿ ಒಯ್ದಿದ್ದೆ. ಆಗಸ್ಟ್ ೧೪, ೨೦೦೪ ಸಂಜೆಯಿಂದಲೇ ಹೇಳತೀರದ ಸಂಕಟ. ಇಂಥಾ ದಿನ ನನ್ನ ದೇಶ, ನನ್ನ ಜನ, ನನ್ನ ನೆಲ ಬಿಟ್ಟು ಇಲ್ಲೆಲ್ಲೋ ಇದ್ದೀನಲ್ಲಾ ಅನ್ನೋ ದುಃಖ. ರೇಡಿಯೋ, ದೂರದರ್ಶನಗಳಲ್ಲಿ ಹಿಂದಿನ ದಿನದಿಂದಲೇ ಶುರುವಾಗುತ್ತಿದ್ದ ದೇಶಭಕ್ತಿ ಗೀತೆಗಳು, ವಿಶೇಷ ಕಾರ್ಯಕ್ರಮಗಳನ್ನೆಲ್ಲಾ ನೆನೆದು ಕಣ್ಣಂಚು ಒದ್ದೆಯಾಗಿತ್ತು. ನಮ್ಮ ಮನೆಯ ಹಿಂದೆ ಒಂದು ಚರ್ಚ್ ಇತ್ತು. ಅಲ್ಲಿ ಥರಾವರಿ ಹೂ ಗಿಡಗಳಿದ್ವು. ಅಲ್ಲಿ ಹೋಗಿ, ಅಲ್ಲಿದ್ದ ಮದರ್ ಜೊತೆ ಮಾತಾಡಿ, ಒಂದಷ್ಟು ಬಿಳಿ, ಕೇಸರಿ ಗುಲಾಬಿಗಳನ್ನು ಹಾಗೇ ಒಂದಷ್ಟು ಹಸಿರು ಗರಿಕೆಯನ್ನು ತಂದು…ಡೈನಿಂಗ್ ಟೇಬಲ್ ಮೇಲೆ ಅಲಂಕಾರಿಕವಾಗಿ ಜೋಡಿಸಿಟ್ಟು, ಮಧ್ಯದಲ್ಲಿ ಒಂದಷ್ಟು ಮಣ್ಣು ತುಂಬಿ, ತಂಗಿ ಕೊಟ್ಟಿದ್ದ ಧ್ವಜವನ್ನು ಕೋಲಿಗೆ ಸಿಕ್ಕಿಸಿ, ಕಟ್ಟಿಟ್ಟೆ. ಮಕ್ಕಳಿಗೆ ಮೊದಲೇ ಹೇಳಿಬಿಟ್ಟಿದ್ದೆ, ಬೆಳಗ್ಗೆ ಬೇಗ ಎದ್ದು ಫ್ಲ್ಯಾಗ್ ಹಾಯಿಸ್ಟ್ ಮಾಡಿ ಸ್ಕೂಲಿಗೆ ಹೋಗಬೇಕು ಅಂತ! ಅವೂ ಉತ್ಸಾಹದಿಂದ ಸರಿ ಎಂದಿದ್ದವು. ನನಗೆ ರಾತ್ರಿಯೆಲ್ಲಾ ನಿದ್ದೆ ಇಲ್ಲ. ಆಫ್ರಿಕಾದ ಕಪ್ಪು ಜನರ ದೇಶದ, ಒಂದು ಸಣ್ಣ ಟೌನ್ ಶಿಪ್ ನಲ್ಲಿ , ನನ್ನ ಮನೆಯಲ್ಲಿ ನಾವು ಮೂರೇ ಜನ ಧ್ವಜಾರೋಹಣ ಮಾಡಬೇಕಲ್ಲಾ ಅಂತ. ಬೆಳಗ್ಗೆ ಬೇಗ ಎದ್ದು, ಸ್ನಾನ ಮಾಡಿ ದೇವರಿಗೆ ತುಪ್ಪದ ದೀಪ ಹಚ್ಚಿಟ್ಟು, ಮಕ್ಕಳಿಗೂ ಸ್ನಾನ ಮಾಡಿಸಿದೆ. ನನ್ನ ಪತಿ ಹಿಂದಿನ ದಿನವೇ ಕೆಲಸದ ನಿಮಿತ್ತ ಬೇರೆ ಊರಿಗೆ ಹೋಗಿದ್ದರಿಂದ ಅವರಿರಲಿಲ್ಲ. ಸರಿ..ಶುರುವಾಯ್ತು ನನ್ನ ಗೀತಗಾನ ಕಾರ್ಯಕ್ರಮ.
“ವಿಶ್ವವಿನೂತನ ವಿದ್ಯಾ ಚೇತನ…” ಅಂತ ಹಾಡಿ,
ಮಕ್ಕಳ ಕೈಯಲ್ಲಿ ಧ್ವಜಾರೋಹಣ ಮಾಡಿಸಿ, “ಜನಗಣಮನ…” ವನ್ನ ತುಂಬಿದ ಕಣ್ಣುಗಳ ಜೊತೆ ಹಾಡಿ….
ನಂತರ “ವಂದೇ ಮಾತರಂ…” ಹಾಡಿ ಮಕ್ಕಳನ್ನ ಶಾಲೆಗೆ ಕಳುಹಿದೆ.
ನಂತರ ಒಬ್ಬಳೇ ಮನೆಯಲ್ಲಿ. ಮತ್ತೆ ಹಳೆಯ ನೆನಪುಗಳು ಮುತ್ತತೊಡಗಿತ್ತು. ಅಷ್ಟರಲ್ಲಿ ನನ್ನ ಮನೆ ಕೆಲಸಕ್ಕೆ ಬರುತ್ತಿದ್ದ “ಪೆನಿನ” ಬಂದಳು. ಅವಳು ನಾವು ಮಾಡಿದ ಧ್ವಜಾರೋಹವನ್ನು ಕಂಡು …” ಓಹ್, ಈಸ್ ಟುಡೇ ಯುವರ್ ಕಂಟ್ರೀಸ್ ಇಂಡಿಪೆಂಡೆನ್ಸ್ ಡೇ?” ಅಂತ ಕೇಳಿದ್ಲು. ತಗೊಳಪ್ಪಾ, ಅವಳು ಕೇಳಿದ್ದೇ ತಡಾ….ಶುರುವಾಯ್ತು ನನ್ನ ದೇಶಭಕ್ತಿ ಕಥೆ. ಭಗತ್, ನೇತಾಜಿ, ಗಾಂಧೀಜಿ…ಅಂತ ಎಲ್ಲಾ ಹೋರಾಟಗಾರರ ಬಗ್ಗೆ ಹೇಳಿ, ನಾವು ಹೇಗೆ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತೇವೆ ಅಂತ ವಿವರಿಸಿದೆ. ಅಷ್ಟರಲ್ಲಿ ಬೆಂಗಳೂರಿನಿಂದ ಫೋನ್ ಬಂತು.
“ಹಲೋ…” ಅಂದೆ,
ನನ್ನ ಅತ್ತಿಗೆ ವೀಣಾ…” ವಲ್ಲೀ…ಇಲ್ಲಿ ಆಫೀಸ್ ನಲ್ಲಿ ಫ್ಲ್ಯಾಗ್ ಹಾಯಿಸ್ಟ್ ಆಗ್ತಿದೆ. ನಾವೆಲ್ಲಾ ನಿಮ್ಮನ್ನ ಮಿಸ್ ಮಾಡ್ಕೊಳ್ತಾ ಇದೀವಿ. ನೀನು ಅಲ್ಲಿಂದ್ಲೇ ನ್ಯಾಷನಲ್ ಆಂತೆಮ್ ಹಾಡು…ನಾನಿಲ್ಲಿ ಸ್ಪೀಕರ್ ಆನ್ ಮಾಡ್ತೀನಿ…” ಅಂದಾಗ, ನನ್ನ ಕಣ್ಣಲ್ಲಿ ಆನಂದಭಾಷ್ಪ!
ಫುಲ್ ಜೋಶ್ ನಲ್ಲಿ…ಶುರುವಾಯ್ತು ರಾಷ್ಟ್ರಗೀತೆ. ನಂತರ, ನನ್ನ ಮೆಚ್ಚಿನ …”ಈ ನಮ್ಮ ತಾಯಿನಾಡು ನಿರುಪಮ ಲಾವಣ್ಯದ ಬೀಡು…” ಹಾಡಿದೆ. ಅಲ್ಲಿಂದ ಚಪ್ಪಾಳೆಯ ಸೌಂಡನ್ನ ಪೋನ್ ನಲ್ಲೇ ಕೇಳಿ ಏನೋ ಆನಂದ. ಇಷ್ಟಕ್ಕೇ ನಿಲ್ತಾ ನನ್ನ ದೇಶಪ್ರೇಮ? ಉಹೂ…ಮತ್ತೆ ಶುರುವಾಯ್ತು ನನ್ನ ಆರ್ಕೆಸ್ಟ್ರಾ!
” ಭರತ ಭೂಮಿ ನನ್ನ ತಾಯಿ….”, 
“ಹಿಂದ್ ದೇಶ್ ಹೈ ಹಮಾರಾ…” ,
“ಜನನಿ ಭಾರತಿ ಜನ್ಮ ಧಾತ್ರಿ….” ,
“ಅಪಿಸ್ವರ್ಣ ಮಯೀಲಂಕಾ….”,
“ನಿನ್ನದೆ ನೆಲ ನಿನ್ನದೆ ಜಲ ನಿನ್ನದೇ ಆಕಾಶ…” ,
“ಕಣ್ಣು ಬೇರೇ..ನೋಟವೊಂದು ನಾವು ಭಾರತೀಯರು…”,
“ಇಳೆಗೆ ಬಂತು ಭಾರತಕೆ ಬಂತು ಬಿಡುಗಡೆಯ ನಾಡಹಬ್ಬ…”……
……ಒಂದೇ ಎರಡೇ? ಏನಿಲ್ಲಾ ಅಂದ್ರೂ ಒಂದಿಪ್ಪಾತ್ತಾದ್ರೂ ಹಾಡುಗಳನ್ನ ಹಾಡಿದೀನಿ….ಉಸಿರುಕಟ್ಟಿ ಕೆಮ್ಮು ಬರೋವರೆಗೂ….!! ನಮ್ಮನೆ ಕೆಲ್ಸದ ಹುಡುಗಿ “ಪೆನಿನ” …ಇದೆಂಥಾ ಹುಚ್ಚುತನ ಅನ್ನೋ ರೀತೀಲಿ ನನ್ನ ನೋಡ್ತಿದಿದ್ದು ಅರಿವಾದಾಗ..ತಡ್ಯೋಕೆ ಆಗ್ಲಿಲ್ಲ. ತುಂಬಾ ಅಳು ಬಂದುಬಿಡ್ತು. ಪಾಪ ಆ ಹುಡುಗಿ, ತನಗೆ ಗೊತ್ತಿದ್ದ ರೀತೀಲಿ ನನ್ನ ಸಂತೈಸಿದ್ಲು. ಅಂತೂ ನನ್ನ ಆ ವರ್ಷದ ಇಂಡಿಪೆಂಡೆನ್ಸ್ ಡೇ ಹೀಗೆ ಮುಗೀತು. ಅಲ್ಲಿದ್ದದ್ದು ಒಂದೇ ವರುಷ.
ಭಾರತಕ್ಕೆ ಹಿಂತಿರುಗಿ ಬಂದ ಮೇಲೆ, ಮತ್ತೆ ಮಾಮೂಲು. ಆಗಿನಿಂದ ಪ್ರತಿವರ್ಷ ಸ್ವಾತಂತ್ರ್ಯದಿನಾಚರಣೆಯಂದು, ಅದನ್ನು ನೆನದು, ನಾನು ಅಷ್ಟೊಂದು ಭಾವುಕಳಾಗುವ ಅಗತ್ಯವಿತ್ತೇ? ಅಂತ ಯೋಚಿಸ್ತೀನಿ. ಆದರೆ ಹೌದು, ನಮ್ಮ ದೇಶ ಬಿಟ್ಟು…ದೂರದ ಯಾವುದೋ ದೇಶದಲ್ಲಿ ಇದ್ದಾಗ…ಎಲ್ಲವನ್ನ, ಎಲ್ಲರನ್ನ ಎಷ್ಟು ಮಿಸ್ ಮಾಡ್ಕೋತೀವಿ ಅನ್ನೋದನ್ನ ಅನುಭವಿಸಿದಾಗ ಮಾತ್ರ ತಿಳಿಯುತ್ತೆ. ಮತ್ತೆ ಇಂದು ಈ ದಿನದ ಸ್ವಾತಂತ್ರ್ಯೋತ್ಸವದ ಸಮಯದಲ್ಲಿ ಆ ಘಳಿಗೆ ನೆನಪಿಗೆ ಬಂತು. ನಿಮ್ಮೊಡನೆ ಹಂಚಿಕೊಳ್ಳೋಣ ಅಂತ ಅನಿಸಿತು.
ಎಲ್ಲರಿಗೂ…
“ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು”






ಭಾವಪೂರ್ಣವಾಗಿದೆ . ಖುಷಿಯಾಯಿತು .