ಕಿ ರಂ ಅವರ ನೆನಪಿನಲ್ಲಿ ಗಿರಿಜಾ ಶಾಸ್ತ್ರಿ ಅವರು ಬರೆದಿದ್ದ ಈ ಲೇಖನ ಈಗಾಗಲೆ ’ಅವಧಿ’ಯಲ್ಲಿ ಪ್ರಕಟವಾಗಿತ್ತು.
ಕಿ ರಂ ನಮ್ಮಿಂದ ದೂರಾದ ಈ ದಿನದ ನೆನಪಿನಲ್ಲಿ ಈ ಲೇಖನ ನಿಮ್ಮ ಓದಿಗಾಗಿ
***
ಗಿರಿಜಾಶಾಸ್ತ್ರಿ,
ಮುಂಬಯಿ
3-4 ದಿನಗಳಿಂದ ಸತತವಾಗಿ ಕಿ.ರಂ ಅವರಿಗೆ ಫೋನ್ ಮಾಡುತ್ತಿದ್ದೆ. ಒಂದು ನಾಲ್ಕೈದು ಮಿಸ್ಕಾಲ್ ಗಳಾದರೂ ಹೋಗಿರಬೇಕು. ಆದರೂ ಮೇಷ್ಟ್ರು ಉತ್ತರಿಸಲಿಲ್ಲವಲ್ಲ ಎಂದು ಬೇಸರದಿಂದಲೇ ಹೊರಬಿದ್ದಿದ್ದೆ ಸಿನಿಮಾ ನೋಡಲೆಂದು. ನಾನು ಈ ಕಡೆಯಿಂದ ಕರೆಮಾಡುತ್ತಿದ್ದಾಗ ಅಲ್ಲಿ ಅವರಿಗೆ ಸಾವು ಕರೆ ಮಾಡುತ್ತಿತ್ತೆಂದು ಯಾರು ಕಂಡಿದ್ದರು. ಹಾಗೇನಾದರೂ ನನಗೆ ಕಾಣಲು ಶಕ್ಯವಿದ್ದಿದ್ದರೆ ಶತಾಯಗತಾಯ ನಾನು ಅವರನ್ನು ಫೋನಿನಲ್ಲಿ ಹಿಡಿದೇ ಹಾಕುತ್ತಿದ್ದೆ. ಇಲ್ಲ, ತಪ್ಪಿಸಿಕೊಂಡು ಬಿಟ್ಟರು ನಮ್ಮೆಲ್ಲರ ಅಚ್ಚುಮೆಚ್ಚಿನ ಮೇಷ್ಟ್ರು. ಕಿ.ರಂ ಎಂದರೆ ಕನ್ನಡ ಸಾಹಿತ್ಯ ಕನ್ನಡ ಸಾಹಿತ್ಯವೆಂದರೆ ಕಿ.ರಂ ಎನ್ನುವಂತಹ ಮೇರು ಸಮಾನ ಮೇಷ್ಟ್ರು ಧರೆಗೆ ಉರುಳಿ ಬಿಟ್ಟರು. ಅವರಿಗೆ ಅತ್ಯಂತ ಪ್ರಿಯವಾದ ಕಾವ್ಯದ ಬಗ್ಗೆ ಅಮೋಘವಾಗಿ ಮಾತನಾಡುತ್ತಲೇ ಅಸ್ತಂಗತರಾಗಿಬಿಟ್ಟರು.
ಮುಂಬಯಿಯಲ್ಲಿ ವಾಸವಾಗಿರುವ ನಮಗೆ ಕಿ.ರಂ ಅವರ ಒಡನಾಟ ಅಪರೂಪವೇ ಆಗಿದ್ದರೂ, ಬೆಂಗಳೂರಿನಲ್ಲಿಯೇ ಇರುವ ನನ್ನ ಉಳಿದ ಸಹಪಾಠಿಗಳಿಗಂತ ವಾಸಿ. ಅವರು ತೀರಿಕೊಂಡ ಸಂಗತಿಯನ್ನು ಬೆಂಗಳೂರಿನಲ್ಲಿರುವ ನನ್ನ ಗೆಳತಿಗೆ ನಾನು ಮುಂಬಯಿಯಿಂದ ತಿಳಿಸಬೇಕಾಯಿತು. ಮುಂಬಯಿಗೆ ಅವರು ಮೂರು ನಾಲ್ಕು ಸಲವಾದರೂ ಬಂದಿರಬೇಕು. ಇತ್ತೀಚೆಗೆ ಸಾಂಸ್ಕೃತಿಕ ಸಮಾವೇಶದ ಅಧ್ಯಕ್ಷರಾಗಿ ಅವರು ಎರಡು ದಿನಗಳ ಕಾಲ ಇಲ್ಲಿಗೆ ಬಂದಿದ್ದಾಗ ಅವರ ಅಧ್ಯಕ್ಷತೆಯಲ್ಲಿ ನಾನು ಅಕ್ಕಮಹಾದೇವಿಯ ಕುರಿತು ಒಂದು ಪ್ರಬಂಧ ಮಂಡಿಸಿದ ಖುಶಿ ನನಗಿನ್ನೂ ತಾಜಾ… ಅದು ಇನ್ನಷ್ಟು ತಾಜಾ ಆಗಿ ನನ್ನ ಅನುಭೂತಿಗೆ ಬರತೊಡಗಿದ್ದು ಅವರ ಸಾವಿನ ಈ ಗಳಿಗೆಯಲ್ಲಿಯೇ.

ಕನ್ನಡಸಾಹಿತ್ಯದ ಗಂಧ ಗಾಳಿಯಿಲ್ಲದ, ನಾನು ಐಚ್ಛಿಕವಾಗಿ ಬಿ.ಎ.ಗೆ ಮಣ್ಣುಹೊತ್ತಿದ್ದು ಮನಶ್ಶಾಸ್ತ್ರ, ಸಮಾಜಶಾಸ್ತ್ರ ಇತ್ಯಾದಿಗಳನ್ನು. ಹೀಗಾಗಿ ನಾನು ಕನ್ನಡ ಎಂ.ಎ ಗೆ ಸೇರಿದ್ದು ಒಂದು ಆಕಸ್ಮಿಕ. (ಸೈಕಾಲಜಿ ಎಂ.ಎ. ಗೆ ಸೀಟು ಸಿಗದೇ ಹೋದದ್ದೇ ಮುಖ್ಯ ಕಾರಣ). ಎಂ.ಎ.ಗೆ ಸೇರಿದ ಹೊಸತರಲ್ಲಿ ಕಿ.ರಂ ಅವರ ಸಾಹಿತ್ಯದ ಹುಚ್ಚು ಮುಖ್ಯವಾಗಿ ಕಾವ್ಯದ ಹುಚ್ಚು ನನಗೆ ವಿಚಿತ್ರವಾಗಿಯೇ ಕಂಡಿತ್ತು. ಅದರ ಆಳ ಅಗಲಗಳು ಅರಿವಿಗೆ ಬಂದದ್ದು, ಹತ್ತು ಹದಿನೈದು ವರುಷಗಳನಂತರ ನಾನು ಮುಂಬಯಿ ವಿ.ವಿ. ಯಲ್ಲಿ ಪಿಎಚ್.ಡಿ. ಅಧ್ಯಯನದ ಭಾಗವಾಗಿ ಕನ್ನಡ ಎಂ.ಎ. ತರಗತಿಗಳಿಗೆ ಅಧ್ಯಾಪನಕ್ಕೆ ತೊಡಗಿದಾಗಲೇ.
ಬೆಂಗಳೂರು ಕನ್ನಡ ಅಧ್ಯಯನ ಕೇಂದ್ರಕ್ಕೆ ಸೇರಿದ ಹೊಸತು. ಒಂದು ವಾರ ಕಿ.ರಂ ಅವರು ಪಾಠ ಮಾಡಲಿಲ್ಲ. ಬದಲಾಗಿ ಆ ಒಂದು ವಾರಗಳ ಕಾಲ ಇಡಿಇಡಿಯಾಗಿ ಬೇಂದ್ರೆ, ಕುವೆಂಪು, ಪು.ತಿ.ನ., ಕೆ.ಎಸ್.ನ, ಜಿ.ಎಸ್.ಎಸ್, ಗೋಪಾಲಕೃಷ್ಣ ಅಡಿಗ ಎಂದೆಲ್ಲಾ ಒಂದಾದ ಮೇಲೆ ಒಂದರಂತೆ ಕವನ ಸಂಕಲನಗಳನ್ನು ಓದುತ್ತಾ ಹೋಗಿದ್ದ ನೆನಪು ಮಾತ್ರ ಇಂದಿಗೂ ಮಾಸುವುದೇ ಇಲ್ಲ. ಅಂದು ನಮ್ಮ ಎದೆಯೊಳಗೆ ಇಳಿದ ಸಾಲುಗಳು ಇಂದಿಗೂ ಅನುರಣನ ಗೊಳ್ಳುತ್ತವೆ ಎಂದರೆ ಅತಿಶಯೋಕ್ತಿಯಲ್ಲ. ಕಾವ್ಯವಾಗಲೀ, ಗದ್ಯವಾಗಲೀ, ಸಾಹಿತ್ಯ ವಿಮರ್ಶೆಯಾಗಲೀ. ಪಾಶ್ಚಾತ್ಯ ಸಾಹಿತ್ಯವಾಗಲೀ ಅವರಿಗೆ ಪಠ್ಯ ಒಂದು ನೆಪಮಾತ್ರ ಅಷ್ಟೆ. ಆ ಪಠ್ಯದ ಮೂಲಕ ನಮಗೆ ಪರಿಚಯ ಮಾಡಿಸುತ್ತಿದ್ದುದು ಇಡಿಯ ಜಾಗತಿಕ ಸಾಹಿತ್ಯವನ್ನೇ. ಅಂದು ನಮ್ಮ ಎಳೆತಲೆಗಳ ಒಳಗೆ ಅದು ಎಷ್ಟರ ಮಟ್ಟಿಗೆ ಇಳಿಯಿತೋ ಗೊತ್ತಿಲ್ಲ. ಆದರೆ ಅದರಿಂದ ದೊರೆತ ಸಂಸ್ಕಾರ ಮಾತ್ರ ಗಾಢವಾಗಿ ಇಂದಿಗೂ ನಮ್ಮ ಬದುಕಿನ ಛಿಡಿ ಗಳಲ್ಲಿ, ನಮ್ಮನ್ನು ಮುನ್ನಡೆಸುತ್ತಲೇ ಇದೆ. ಇದು ಅಂದು ನಮಗೆ ಪಾಠ ಮಾಡಿದ ಎಲ್ಲ ಅಧ್ಯಾಪಕರಿಗೂ ಸಲ್ಲುವ ಮಾತು.
ನಾನು ಅವಾಚ್ಯ..ರೀ ಎಂದು ತಮ್ಮ ಗಡಿಯಾರವಿಲ್ಲದ ಬೋಳು ಕೈಯನ್ನು ತೋರಿಸುತ್ತಿದ್ದರು. ತಾಂಬೂಲದಿಂದ ಕೆಂಪಾದ ಹಲ್ಲುಗಳು, ಸಿಗರೇಟಿನ ವಾಸನೆಯ ಬಾಯಿ, ಅವರ ಉತ್ಸಾಹ ಆವೇಗಗಳಿಗೆ ಕುಣಿಯುತ್ತಿದ್ದ ನಾಟಕದವರಂತೆ ಬಿಟ್ಟ ಉದ್ದನೆ ಕೂದಲು, ತಮ್ಮ ತಮಾಶೆಗೆ ತಾವೇ ಜೋರಾಗಿ ನಗುತ್ತಿದ್ದ ರೀತಿ, ಎಲ್ಲವೂ ನಮಗೆ ತಮಾಶೆಯಾಗಿಯೇ ಕಾಣುತ್ತಿದ್ದವು. ಮೇಷ್ಟ್ರು ಎಷ್ಟು ತನ್ಮಯರಾಗಿ ಪಾಠಮಾಡುತ್ತಿದ್ದರೆಂದರೆ, ಮುಖದ ಮೇಲೆ ಇಳಿಯುತ್ತಿದ್ದ ಬೆವರಿನ ಪರಿವೆಯಾಗಲೀ, ಕೈಯಿನ ಸೀಮೇ ಸುಣ್ಣವೆಲ್ಲಾ ಮುಖ ಕೆನ್ನೆಗಳ ಮೇಲೆ ಪೌಡರಾಗುತ್ತಿದ್ದುದರ ಅರಿವಾಗಲೀ ಇರುತ್ತಲೇ ಇರಲಿಲ್ಲ. ನಮಗೆ ಮಾತ್ರ ಮುಸಿ ಮುಸಿ ನಗುವಿಗೆ ಗ್ರಾಹ್ಯವಾಗುತ್ತಿದ್ದುದನ್ನು ಬಿಟ್ಟರೆ-ಕಾವ್ಯದ ಪಠಣ ಎನ್ನುವುದು ಅವರಿಗೆ ಕೇವಲ ಪುಸ್ತಕವನ್ನು ಎದುರಿಗೆ ಇಟ್ಟುಕೊಂಡು ಓದುವ ಕ್ರಿಯೆಯಾಗಿರಲಿಲ್ಲ. ಕೈಬಾಯಿ ಇಡೀ ದೇಹ ಕಾವ್ಯದ ಸಾಲುಗಳನ್ನು ನಾಟ್ಯೀಕರಿಸುತ್ತಿದ್ದುದರ ಸೊಗಸನ್ನು ಕಂಡವರು ನಾವು. ಅವರ ಅಧ್ಯಯನ ಅಧ್ಯಾಪನದ ಅಗಾಧತೆಯನ್ನು ಅರಿಯದ, ಅರಗಿಸಿಕೊಳ್ಳಲು ಪ್ರಯಾಸ ಪಡುತ್ತಿದ್ದ ವಿದ್ಯಾಥರ್ಿಗಳು, ಬೆಲ್ಲು ಹೊಡೆದರೂ ತರಗತಿಯನ್ನು ಮುಂದುವೆರೆಸುತ್ತಿದ್ದ ಮೇಷ್ಟ್ರರ ಗಮನಸೆಳೆಯಲು ಡೆಸ್ಕಿನ ಮೇಲೆ ಪುಸ್ತಕಗಳನ್ನಿಟ್ಟು ಜೋರಾಗಿ ಬಡಿಯುವುದು, ಪುಸ್ತಕಗಳನ್ನು ಬೇಕೆಂದೇ ಕೆಳಗೆ ಶಬ್ದವಾಗುವಂತೆ ಬೀಳಿಸುವುದೂ ಇತ್ಯಾದಿ ಚೇಷ್ಟೆಗಳಲ್ಲಿ ತೊಡಗುತ್ತಿದ್ದರು. ಇಷ್ಟು ಮಾಡಿದರೂ ಮೆಷ್ಟ್ರರ ತಪಸ್ಸಿಗೆ ಭಂಗ ಬರುತ್ತಿರಲಿಲ್ಲ. ಅವರು ತರಗತಿಯಿಂದ ಹೊರಗೆ ಹೋದ ಕೂಡಲೇ ವಿದ್ಯಾರ್ಥಿಗಳು ನಿರಾಳ ನಿಟ್ಟುಸಿರು ಬಿಡುತ್ತಿದ್ದರು. ಅಂತಹ ಗುರುಗಳ ಜ್ಞಾನವನ್ನು ಅಂದು ಚೆಲ್ಲುಬಡಿಯುತ್ತಿದ್ದ ನಾವುಗಳು ಸರಿಯಾಗಿ ಉಪಯೋಗಿಸಿಕೊಳ್ಳಲಿಲ್ಲವಲ್ಲಾ ಎಂಬ ಕೊರಗು ಈಗ. ಆದರೆ ನನ್ನ ಜೂನಿಯರ್ ತರಗತಿಯಲ್ಲಿದ್ದ ಹುಡುಗಿಯೊಬ್ಬಳು ಮಾತ್ರ ಆ ಚಿಕ್ಕವಯಸ್ಸಿಗೇ ಸಾಹಿತ್ಯದಲ್ಲಿ ಗಂಭೀರ ಆಸಕ್ತಿಯನ್ನು ಇಟ್ಟುಕೊಂಡಿದ್ದವಳು, ಕಿ.ರಂ ಅವರ ಕ್ಲಾಸ್ ಎಂದರೆ ಸಾಯುತ್ತಿದ್ದಳು. ಈಗ ಅವಳೆಲ್ಲಿದ್ದಾಳೋ ಗೊತ್ತಿಲ್ಲ. ನನ್ನ ಹಾಗೇ ಅವಳೂ ಅವರ ಸಾವಿನ ಸುದ್ದಿ ತಿಳಿದ ಕ್ಷಣದಿಂದ ರಾತ್ರಿಯೆಲ್ಲಾ ಕನಸು ಎಚ್ಚರಗಳ ನಡುವೆ ಹೊಯ್ದಾಡಿರಬೇಕು. ಮೂಲೆಯಲ್ಲಿ ಬಿಕ್ಕುತ್ತಾ ರಾತ್ರಿ ನೂಕಿರಬೇಕು.
ಮಾರನೆಯ ದಿನ ಭಾನುವಾರ ಮುಂಜಾನೆ ಎದ್ದು ಬಾಲ್ಕನಿಗೆ ಬಂದು ನಿಂತರೆ- ಹೊರಗೆ ಗಾಳಿಯ ಅಲೆ ಹೊತ್ತು ತರುವ ದೂರದ ದೇವಸ್ಥಾನದ ಭಜನೆ, ಜಾಗಟೆ ಗಂಟೆಯ ನಾದ, ತೊನೆಯುವ ಗಿಡಮರಬಳ್ಳಿಗಳ ಮೇಲೆ ಮಳೆಹನಿಗಳ ಪಟಪಟ ಸದ್ದು, ಹಕ್ಕಿಗಳ ಕಲರವ, ಬೀಸುವ ಗಾಳಿ, ಶುಭೋದಯದಿಂದ ಕಂಗೊಳಿಸಬೇಕಾದ ಈ ಎಲ್ಲವುಗಳೂ ಸೂತಕದ ಕಳೆಯನ್ನು ಹೊದ್ದುಕೊಂಡುಬಿಟ್ಟಿದ್ದವು. ಅದನ್ನು ನೋಡುತ್ತಿದ್ದ ನನ್ನ ಮನದೊಳಗೆ ಮಸಣ ಗೂಡುಕಟ್ಟುತ್ತಿತ್ತು. ಅದಕ್ಕೆ ಪೂರಕವೆಂಬಂತೆ ಬೆಂಗಳೂರಿನಿಂದ ಫೋನ್ ಮಾಡಿದ ನನ್ನ ಗೆಳತಿಯರಾದ ಕುಸುಮ ಮತ್ತು ಗಿರಿಜಾ ನಾಗರಾಜ್ ಕಿ.ರಂ. ಅವರ ಶವ ಯಾತ್ರೆಯ ವಿವರ ಒದಗಿಸಿದರು.
ಕಿ.ರಂ ಅವರ ಬಗೆಗೆ ನನಗೆ ಹೀಗೆ ಅನ್ನಿಸಲು ನನ್ನದೇ ಆದ ಕಾರಣಗಳಿದ್ದವು. ನಾನು ಎಲ್ಲೂ ಪ್ರಕಟಣೆಗೆ ಕೊಡದ ನನ್ನ ಕೆಲವು ಕವಿತೆಗಳಿದ್ದವು. ಅವುಗಳಿಗೆ ಕಿ.ರಂ ಅವರ ಣಚಿಟಠಿ ಬಿದ್ದು ಬಿಟ್ಟರೆ ಅದು ಣಟಣಟಚಿಣಜ ಎಂದೇ ನಾನು ಭಾವಿಸಿದ್ದೆ. ಹೀಗಾಗಿ ಅವರು ಇಲ್ಲಿಗೆ ಬಂದಿದ್ದಾಗ ಅವುಗಳ ಅರ್ಹತೆಯನ್ನು ಪರೀಕ್ಷಿಸಿಕೊಡಬೇಕೆಂದೂ ಹಾಗೆ ಅವುಗಳು ಪ್ರಕಟಿಸಲು ಅರ್ಹವೇ ಆಗಿದ್ದಲ್ಲಿ, ನನ್ನ ಸಂಕಲನಕ್ಕೆ ಮುನ್ನುಡಿಯನ್ನೂ ಬರೆದುಕೊಡಬೇಕೆಂದು ಕೇಳಿಕೊಂಡಿದ್ದೆ. ಅದಕ್ಕೆ ಅವರು ಒಪ್ಪಿಕೊಂಡಿದ್ದರು. ಹೀಗೆ ಕೇಳಿಕೊಂಡಿದ್ದ ನಾನು ಕವಿತೆಗಳನ್ನು ಕಳುಹಿಸಲು ಸ್ವಲ್ಪ ನಿಧಾನ ಮಾಡಿದೆ. 70 -80 ಕವಿತೆಗಳನ್ನು ನಾನು ಡಿ.ಟಿ.ಪಿ ಮಾಡಬೇಕಿತ್ತು. ಸುಮಾರು ಒಂದೂವರೆ ತಿಂಗಳಿನ ನಂತರ ಅವರಿಗೆ ಫೋನಾಯಿಸಿ ಕವಿತೆಗಳನ್ನು ಕಳುಹಿಸುವೆನೆಂದು ನಿಮಗೆ ಹೇಳಿದ್ದೆ .. ಎಂದು ಮಾತು ಮುಗಿಸುವಷ್ಟರಲ್ಲೇ ಹೌದು ಹೇಳಿದ್ದಿರಿ..ಆದ್ರೆ ಕಳುಹಿಸಲಿಲ್ಲ. ಎಂದರು. ಹಾಗೆ ಅವರು ಹೇಳುವಾಗ ಧ್ವನಿ ಗಡುಸಾಗಿತ್ತೇ ಅಥವ ಈಗ ಹಾಗೆನಿಸುತ್ತಿದೆಯೇ? ತಿಳಿಯದು.
ಎಂ. ಎ. ಓದುತ್ತಿದ್ದಾಗಲೂ ನಾವು ಯಾವುದಾದರೂ ಅನುಮಾನಗಳನ್ನು ತೆಗೆದು ಕೊಂಡು ಅವರ ಬಳಿಗೆ ಹೋಗುವುದಿತ್ತು. ಆಗ ಸೆಂಟ್ರಲ್ ಕಾಲೇಜ್ ಇಲ್ಲವೆ ಕ್ಯಾಂಪಸ್ ಲೈಬ್ರರಿ, ಕನರ್ಾಟಕಾನ, ಸ್ಟಾಫ್ ರೂಮ್ ಹೀಗೆ ಎಲ್ಲೆಂದರಲ್ಲಿ ನಮ್ಮ ಸಾಹಿತ್ಯ ಆಸಕ್ತಿಗೆ ನೀರೆರೆದು ಪೋಷಿಸಲು ತಯಾರಾಗುತ್ತಿದ್ದರು. ಒಮ್ಮೆ ಯಾವುದೋ ಎಕ್ಸ್ಟರ್ನಲ್ ಎಂ. ಎ. ಮಾಡುತ್ತಿದ್ದ ವಿವಾಹಿತ ಮಹಿಳೆಯೊಬ್ಬರು ಬಂದಿದ್ದಾಗ, ಮೇಷ್ಟ್ರು ಕರೀತಿದ್ದಾರೆ’ ಎಂಬುದಾಗಿ ನನಗೆ ಕರೆ ಬಂದಿತು. ನಾನು ಆಶ್ಚರ್ಯದಿಂದ ಹೋದರೆ ನೋಡಿ ಇವರು…. ಅಂತಾ, ಇವರಿಗೆ ನಿಮ್ಮ ನೋಟ್ಸ್ ಎಲ್ಲಾ ಕೊಟ್ಟು ಸಹಾಯ ಮಾಡಿ ಎಂದು ಆದೇಶವಿತ್ತಿದ್ದರು. ಎಲ್ಲಾ ವಿದ್ಯಾರ್ಥಿಗಳನ್ನೂ ಬಿಟ್ಟು ನನ್ನನ್ನು ಆರಿಸಿಕೊಂಡದ್ದಕ್ಕೆ ನನಗೆ ಅಂದು ಖಂಡಿತವಾಗಿ ಖುಷಿಯಾಗಿದ್ದಿರಬಹುದು. ಸೆಮಿನಾರ್ಗೆಂದು ನಾನು ಪರ್ವ ಕಾದಂಬರಿಯನ್ನು ಆರಿಸಿಕೊಂಡಿದ್ದೆ. ಇದನ್ನು ಚರ್ಚಿಸುವ ಸಲುವಾಗಿ ಅವರ ಬಳಿಗೆ ಹೋಗಿದ್ದಾಗ ಅವರು ಇವುಗಳ ಬಗ್ಗೆ ಎಷ್ಟು ಹೊತ್ತು ಮಾತನಾಡಿದ್ದರು? ಆ ಪದಗಳನ್ನು ನಾನು ಕೇಳಿದ್ದೇ ಆಗ. ಆ ಮಾತುಗಳಿಗೀಗ ಮೂವತ್ತು ವರುಷಗಳಾದರೂ ಆಗಿರಬೇಕು. ಆದರೆ ಆ ಮಾತುಗಳು ನನ್ನೊಳಗೆ ಇಳಿಯತೊಡಗಿದ್ದು ಇತ್ತೀಚೆಗೆ ಮಾತ್ರ.
ನನ್ನ ಸಹಪಾಠಿಯೊಬ್ಬ ಕಾಲೇಜು ಬಿಟ್ಟ ಸ್ವಲ್ಪ ವರುಷಗಳಲ್ಲೇ ಅವರ ಬಳಿಗೆ ಹೋಗಿದ್ದನಂತೆ. ಮೂರು ದಿನಗಳ ಸತತ ಕಾವ್ಯ ಪಠಣ. ಜೊತೆಗೆ ಪಾನಗೋಷ್ಠಿ. ನಾನೂ ಕುಡೀತೀನಿ ಸಾರ್…ನಾನು ಕೊಡ್ತೀನಿ ಸಾರ್ ಎಂದೆಲ್ಲಾ ಅವನು ಸಡಗರ ಪಡುತ್ತಿದ್ದಾಗ ನೀನು ಕುಡೀಬಾರದು ಸುಮ್ಮನಿರೋ ಸೂ.. ಮಗನೇ ಎಂದು ಪ್ರೀತಿಯಿಂದ ಬೈದಿದ್ದರಂತೆ. ಇನ್ನೊಂದು ರಾತ್ರಿ ಹೀಗೆ ಕೆಲವು ಸಾಹಿತಿಗಳೊಡನೆ ಕಾವ್ಯವಾಚನದಲ್ಲಿ ಮಗ್ನರಾಗಿದ್ದಾಗ ಬೆಳಗಾದದ್ದೇ ತಿಳಿಯಲಿಲ್ಲವಂತೆ.
ಈಗ್ಗೆ ಕೆಲವು ದಿನಗಳ ಹಿಂದೆ ಯು.ಜಿ.ಸಿ.ಯ ಜೆ. ಆರ್.ಎಫ್ ಪಾಸಾದ ಒಬ್ಬ ವಿದ್ಯಾರ್ಥಿ ನಮ್ಮ ಮನೆಗೆ ಕಿ.ರಂ ಅವರ ಹೆಸರು ಹೇಳಿ ಫೋನ್ ಮಾಡಿದ್ದ. ಅವನಿಗೆ ಮುಂಬಯಿಯಲ್ಲಿ ಪಿ.ಎಚ್.ಡಿ ಮಾಡುವ ಯೋಚನೆ ಯಿತ್ತು, ಕಿ.ರಂ ನಿಮ್ಮ ಬಗ್ಗೆ ತುಂಬಾ ಹೇಳಿದ್ದಾರೆ, ಮೇಡಂ..ನೀವಿಬ್ಬರೂ ಅವರ ವಿದ್ಯಾರ್ಥಿಗಳೆಂದೂ ನಿಮ್ಮನ್ನು ಹಾಗೂ ಸರ್ ಅವರನ್ನು ಹೊಗಳಿದರು ಮೇಡಂ..ನಿಮಗೆ ಇಷ್ಟರಲ್ಲೇ ಅವರು ಫೋನ್ ಮಾಡ್ತಾರಂತೆ..- ಮೇಷ್ಟ್ರು ಫೋನ್ ಮಾಡಬಹುದೆಂದು ಕಾಯುತ್ತಲೇ ಇದ್ದೆ. ಆದರೆ ಅವರಿಗೆ ಇನ್ನೆಲ್ಲಿಂದಲೋ ಕರೆ ಬರುತ್ತಿತ್ತಲ್ಲಾ…
ಕಳೆದ ಮೇ ತಿಂಗಳಲ್ಲಿ ಅವರು ಸಮ್ಮೇಳನಾಧ್ಯಕ್ಷರಾಗಿ ಇಲ್ಲಿಗೆ ಬಂದಿದ್ದಾಗ ಸಮಾರೋಪ ಮುಗಿದು ಕರ್ನಾ ಟಕ ಸಂಘದ ಹೊರಗೆ ನಿಂತಿದ್ದರು. ನನ್ನ ಭಾಷಣದ ಬಗ್ಗೆ ಅವರ ಅಭಿಪ್ರಾಯ ಕೇಳಲು ಕಾತುರದಿಂದ ಅವರ ಬಳಿಗೆ ಹೋಗಿದ್ದೆ. ಚಿಠಿಠಿಡಿಠಚಿಛಿ ಚೆನ್ನಾಗಿದೆ, ಇರಿ ಒಂದ್ ನಿಮಿಷ ಸಿಗರೇಟು ತರ್ತೀನಿ ಎಂದು ಹೋದವರು ಹೊಗೆಯುಗುಳುತ್ತಾ ನನ್ನ ಮುಂದೆ ನಿಂತಿದ್ದರು. ಸರ್ ನೀವು ಎಸ್ ಅಂದ್ರೆ ಕನ್ನಡ ಸಾಹಿತ್ಯಾನೇ ಎಸ್ ಅಂದ ಹಾಗೇ’ ಎಂದು ನನ್ನ ಕವಿತೆಗಳ ಮೌಲ್ಯ ಮಾಪನಕ್ಕಾಗಿ ಕೇಳಿದಾಗ ಏನಿಲ್ಲಾ..ಅದೆಲ್ಲ ಭ್ರಮೆ ಎಂದಿದ್ದರು. ಯಾರದೋ ಭಾಷಣಕ್ಕೆ ಆಕ್ಷೇಪಣೆ ಮಾಡುತ್ತಾ ದುಂಡೀರಾಜ್ ಅವರನ್ನು ಮಾತಿಗೆಳೆದಿದ್ದರು. ಬೆಂಗಳೂರಿಗೆ ಬಂದಾಗ ಬನ್ನಿ ..ಅಡ್ರೆಸ್ ಇದೆಯಾ ಎಂದಾಗ ಇಲ್ಲ ಸಾರ್ ಆಫೀಸ್ ನಲ್ಲಿ ತೊಗೋತೀನಿ ಎಂದೆ. ಆಫೀಸ್ ಯಾಕೆ ಪೆನ್ ಇದ್ಯಾ ಬರ್ಕೊಳ್ಳಿ.. ಎಂದು ಹೇಳುತ್ತಾ ನನ್ ಮೊಮ್ಮಕ್ಕಳಿಗೆ ಒಂದು ನಾಲ್ಕು ಫ್ರಾಕುಗಳನ್ನು ತೊಗೋಬೇಕಲ್ಲಾ ಎಂದರು. ಸಾರ್, ಮೊದಲೇ ಹೇಳಿದ್ರೆ ನಾನೇ ತಂದು ಕೊಡತ್ತಿದ್ದೆ..ಈಗ ಅಂಗಡಿಗಳೆಲ್ಲಾ ಮುಚ್ಚಿರುತ್ತೆ ಎಂದಿದ್ದಕ್ಕೆ ಏ..ಬೊಂಬಾಯಲ್ಲೂ ಇಷ್ಟು ಬೇಗ ಮುಚ್ಚಿಬಿಡುತ್ತೇನ್ರೀ ಎಂದು ಎಲ್ಲ ಹಲ್ಲುಗಳನ್ನೂ ಪ್ರದರ್ಶಿಸಿ ನಕ್ಕಿದ್ದರು. ಹೌದೆಂದು ದುಂಡಿರಾಜ್ ಸಮಜಾಯಿಷಿ ಕೊಟ್ಟಿದ್ದರು. ಹತ್ತಿರದಲ್ಲೇ ಇದ್ದ ದಾದರ್ ಮಾರ್ಕೆಟ್ ಗಾದರೂ ಮೇಷ್ಟ್ರನ್ನ ಕರೆದುಕೊಂಡು ಹೋಗಿ ಬಟ್ಟೆ ಕೊಡಿಸಬೇಕಿತ್ತು ಎಂದು ಈಗ ಅನಿಸುತ್ತಿದೆ. ಎಂತಹ ಸಣ್ಣ ಸಣ್ಣ ಸಂಗತಿಗಳೂ ಸಾವಿನ ಸಮ್ಮುಖದಲ್ಲಿ ಅಮೂಲ್ಯವಾಗಿಬಿಡುತ್ತವೆೆ. ಪ್ರತಿಕ್ಷಣ ಸಾವಿನ ಅನುಭವವಾಗುತ್ತಿದ್ದರೆ ಬದುಕು ಎಷ್ಟು ಸುಂದರವಾಗುತ್ತಿತ್ತು. ಈ ‘ಅನಿತ್ಯ ಬೋಧ’ ದ ಅನುಭವವನ್ನು ಆತ್ಮಸಾತ್ ಮಾಡಿಕೊಳ್ಳುವುದರ ಮೂಲಕವೇ ಬದುಕಿನ ಪ್ರತಿಕ್ಷಣಗಳನ್ನು ಎಂತಹ ಅಮೂಲ್ಯವನ್ನಾಗಿ ಮಾಡಿಬಿಡಬಹುದು ಎಂದೆನಿಸಿತು.
ನನ್ನ ಕವಿತೆಗಳಿಗಾಗಿ, ಅವರ ಮುನ್ನುಡಿಗಾಗಿ ನಾನು ಅವರಿಗೆ ಫೋನು ಮಾಡಿದಾಗಲೆಲ್ಲಾ ‘ಲೈಬ್ರಿರಿಯಲ್ಲಿದ್ದೇನೆ’ ಎಂದೋ, ‘ತುಂಬಾ ಪದ್ಯಗಳಿವೆ ..ಬೇಗ ಓದೋಕ್ಕಾಗೊಲ್ಲಾ ಟೈಮ್ ಬೇಕು’ ಎಂದೋ, ‘ಕಾಲು ನೋವು ಹುಶಾರಿಲ್ಲ’ ಎಂದೋ ಹೇಳಿದ್ದರು. ಅವರಿಗೆ ಅಕಾಡೆಮಿ ಪ್ರಶಸ್ತಿ ಬಂದ ಸಂದರ್ಭದಲ್ಲಿ ಫೋನ್ ಮೂಲಕ ಅಭಿನಂದನೆಗಳನ್ನು ತಿಳಿಸಿದಾಗ ಸಂತೋಷಪಟ್ಟಿದ್ದರು. ಆಮೇಲೆ ಅವರು ತೀರಿಕೊಳ್ಳುವ ಮುಂಚಿನ ಮೂರು ದಿನಗಳಿಂದ ಅವರಿಗೆ ಫೋನ್ ಮಾಡುತ್ತಿದ್ದೆ. ಅವರು ಸಾಯುವ ಕೆಲವು ಗಂಟೆಗಳ ಮೊದಲೂ ಫೋನ್ ಮಾಡಿದ್ದೆ.
ಕಿ.ರಂ ಅವರನ್ನು ಕಾವ್ಯ ಗಾರುಡಿಗ, ಕಾವ್ಯ ಭಗೀರಥ, ಆಧುನಿಕ ಚಿಂತನೆಗಳ ಹರಿಕಾರ, ಸಂಸ್ಕೃತಿ ಚಿಂತಕ, ಆಧುನಿಕ ಅಲ್ಲಮ ಎಂದೆಲ್ಲಾ ಬಣ್ಣಿಸಿದ್ದಾರೆ. ಈ ಎಲ್ಲ ವಿಶೇಷಣಗಳೂ, ಅವರ ಸಾವಿನ ಸಂದರ್ಭದಲ್ಲಿ ಹುಟಿಕೊಂಡ ಉತ್ಪ್ರೇಕ್ಷೆಗಳಾಗದೇ ಅವರಿಗೆ ನಿಜವಾಗಿ ಸಲ್ಲುವಂತಹವು. ಯಾಕೆಂದರೆ ಪುಸ್ತಕ ಪ್ರಕಟಣೆ, ಪಿಎಚ್ ಡಿ ಪದವಿ ಇಂತಹ ಯಾವುದೇ ಭ್ರಮೆಗಳನ್ನು ಇಟ್ಟುಕೊಳ್ಳದ ಕಿ.ರಂಮೇಷ್ಟ್ರು ಎಷ್ಟು ಪಿ.ಎಚ್.ಡಿಗಳಿಗೆ ಮಾರ್ಗದರ್ಶಕರಾಗಬಹುದಿತ್ತು. ಅವರ ಶಿಷ್ಯ ಕೋಟಿಯಲ್ಲಿ ಯಾರಾದರೊಬ್ಬರಾದರೂ ಅವರು ಹೇಳಿದ್ದನ್ನೆಲ್ಲಾ ಅಕ್ಷರರೂಪಕ್ಕೆ ಇಳಿಸಿದ್ದರೆ ಎಷ್ಟು ಪುಸ್ತಕಗಳನ್ನು ಹೊರತರಬಹುದಿತ್ತು. ಉಹ್ಞುಂ..ಕಿ.ರಂ ಅವರಿಗೆ ಇವೆಲ್ಲಾ ಬೇಕಾಗಿರಲಿಲ್ಲ. ಅವುಗಳ ಬಗ್ಗೆ ಅವರಿಗೆ ದಿವ್ಯ ನಿರ್ಲಕ್ಷ್ಯ ಅವರಿಗೆ ಕೇವಲ ಮನುಷ್ಯ ಮಾತ್ರವಲ್ಲ ಇಡೀ ಜಗತ್ತಿನ ಜೀವ ಜಾಲ ಪರಿಸರ ಮುಖ್ಯವೆನಿಸಿರಬೇಕು, (ಒಂದು ಪುಸ್ತಕ ಬೆಳಕಿಗೆ ಬರಲು ಎಷ್ಟು ಮರಗಳು ಉರುಳಬೇಕು?) ಅದಕ್ಕೇ ಕೇವಲ ತೋಂಡೀ ಸಂಪ್ರದಾಯದ ಮಾಂತ್ರಿಕನಾಗಿಯೇ ತಮ್ಮ ಲೆಕ್ಕಾಚಾರಗಳನ್ನು ಮುಗಿಸಿಬಿಟ್ಟರು. ಕೊನೆಗೂ ನನ್ನ ಕವಿತೆಗಳಿಗೆ ಮುನ್ನುಡಿ ಬರೆಯದೇ ಹೋಗಿಬಿಟ್ಟರು.






ಗಿರಿಜಾ, ಕಿ ರಂ ಅವರ ಸಾವಿನ ಸುದ್ದಿ ತಿಳಿದ ತಕ್ಷಣ ಅವರನ್ನು ದಾಖಲಿಸಿದ್ದ ಆಸ್ಪತ್ರೆಗೆ ಧಾವಿಸಿದ್ದೆ. ಎಲ್ಲ ದುಗುಡಗಳನ್ನು ಕಳೆದುಕೊಂಡ ಮಗುವೊಂದು ಪ್ರಶಾಂತವಾಗಿ ಮಲಗಿ ನಿದ್ರಿಸುವಂತೆ ಕಂಡ ಕಿ ರಂ ಅವರ ಅಂದಿನ ಮುಖ ಅಚ್ಚಳಿಯದಂತೆ ಮನದಲ್ಲಿ ಉಳಿದುಕೊಂಡಿದೆ.ನಿಮ್ಮ ಈ ಲೇಖನ ಅವರ ಸಾವಿನ ದಿನವನ್ನು,ನನ್ನ ಪುಸ್ತಕ ಬಿಡುಗಡೆಗೆ ಒಪ್ಪಿಕೊಂಡು, ಅವರನ್ನು ಕರೆತರಲು ಕಾರು ಕಳುಹಿಸುವೆನೆಂದಾಗ ಬೇಡವೆಂದು ನಿರಾಕರಿಸಿ, ತಮ್ಮ ಮಗಳೊಡನೆ ಬಂದು, ಪುಸ್ತಕ ಬಿಡುಗಡೆ ಮಾಡಿ ಮೆಚ್ಚಿಕೊಳ್ಳುತ್ತಲೇ ಕಾಲೆಳೆದದ್ದು,ಹರಸಿದ್ದು, ಶುಭಾಶಯದ smsಗಳಿಗೆಲ್ಲ ತಪ್ಪದೆ ಫೋನು ಮಾಡಿ ಮರು ಹಾರೈಸುತಿದ್ದುದು ಎಲ್ಲವನ್ನೂ ಮತ್ತೆ ತಾಜಾಗೊಳಿಸಿದವು. ಆಪ್ತ ಬರಹ ನಿಮ್ಮದು.
ಗಿರಿಜಾ ಶಾಸ್ತ್ರಿ ಯವರಿಗೆ ನಮಸ್ಕಾರ. ನಿಮ್ಮ ಆಪ್ತ ಫೋಟೋ, ಜೊತೆಗೆ ಬರಹ, ಜೊತೆಗೆ ನಿಮ್ಮ ಮತ್ತು ಕಿ. ರಂ. ನೆನಪು….ಮನಸ್ಸು ತಂಪಾಯ್ತು.
ಗಿರಿಜಾ ಅವರ ಲೇಖನ ತುಂಬಾ ಆಪ್ತವೂ, ದುಗುಡಕಾರಿಯೂ ಆಯಿತು. ಕಿರಂ ಅದೆಷ್ಟು ಜನಕ್ಕೆ ದುಃಖವುಳಿಸಿ ಹೋದರು? ಅದಕ್ಕೇ ನನ್ನ ಕವನಸಂಕಲನ ಹಳದಿ ಚಿಟ್ಟೆ ಅವರಿಗೆ ಅರ್ಪಿಸಿ ಅವರು ಅಲ್ಲಿಂದಲೇ ಇದನ್ನು ಓದಲಿ ಎಂದು ಬಯಸಿದೆ.
ಆರ್ ವಿಜಯರಾಘವನ್
With all its warmth, the article of smt.Girija Shastry touched my heart. Ki.Ram always stayed away from publicity. He was an ocean of knowledge. Eventhough I had no close contact with him, I am admirer of him. I enjoyed his speech on Gopalakrishna Adiga’s poems in a seminar held at L.B. College Sagar, way back in 1993.
Thank s to Girija Shastry for presenting a touching article on Ki.Ram.
Megaravalli Ramesh (Ramesh Megaravalli)
ಗಿರಿಜಾ ಶಾಸ್ತ್ರಿರವರಿಗೆ ನಮನ. ಇಂತಹ ಅಮೂಲ್ಯ ಸಿದ್ಧಿ ಸಾಹಿತ್ಯದ ಪರ್ವತದ ಕುರಿತು ಮಾಹಿತಿ ತುಂಬ ಆಪ್ತ ಹಾಗೂ ಅವರ ವೈಚಾರಿಕ ಚಿಂತನೆಯ ನೆನಪುಗಳನ್ನು ಹಂಚಿಕೊಳ್ಳುತ್ತ ಬರಹ ಸಾಗಿದ ಪರಿ ಅದ್ಭುತ. ಅವರನ್ನು ಕಣ್ಣಾರೆ ನೋಡದಿದ್ದರು ನೋಡಿದವರ ಭಾವಗಳಲ್ಲಿ ಅವರ ಎತ್ತರವನ್ನು ಸುಲಭವಾಗಿ ಅಳೆಯಬಹುದು, ಅವರೆಷ್ಟು ದೊಡ್ಡವರಿದ್ದರೆಂದು! ಈ ಅಮೂಲ್ಯ ಜೀವಗಳೇ ಹಾಗೆ, ಇವರಿಗೆ ತೋರಿಕೆಯ ಮೌಲ್ಯಗಳು ಸಂಬಂಧಿಸಿರುವುದೇ ಇಲ್ಲ ಅನಿಸುತ್ತದೆ,