-ಅಕ್ಷತಾ ಕೆ
ಪಕಳೆ ಮಾತು ಉದಿರಾಡಬಹುದು, ತುಂಬೀತು ಸ್ವಾಂತರಂಗ
ಅಪ್ಪಿತಪ್ಪಿ ನೆಲದಲಿ
ಬಂದು ಇಳಿದರಿವುಗಳ
ಊದಿ ತೂರಿ ಹಾರಿಸು
ಮತ್ತೆ ಮೇಲೆ ಮುಗಿಲಲೀ
`ಗರಿಗಳಿರುವುದು ಹಾರಲಿಕ್ಕೆ. ಆದರೆ ಒಮ್ಮೊಮ್ಮೆ ಮಾತ್ರ ಅವು ಉದುರಿ ನೆಲಕ್ಕೆ ಬೀಳುತ್ತವಲ್ಲ, ಅದನ್ನು ಕವಿ ಒಂದೊಂದು ಗರಿ ಕವಿತೆಯ ರೂಪದಲ್ಲಿ ಸಿಗುತ್ತವೆ ಎನ್ನುತ್ತಾರೆ. ಒಂದೊಂದು ಗರಿಗೆ ಒಂದೊಂದು ತರದ ಶಕ್ತಿ-ಒಂದೊಂದು ತರದ ಜೀವ ಇರುತ್ತದೆ. ಓದುಗನಾದ ನೀನು ಅದನ್ನು ಚಿಠಿಠಿಡಿಜಛಿಚಿಣಜ ಮಾಡಿ ಊದಿ ತೂರಿಬಿಟ್ಟುಬಿಡು ಅದು ಇನ್ನೊಬ್ಬನಿಗೆ ಸಿಗತ್ತೆ ಅವನು ಅದನ್ನು ಮತ್ತೊಬ್ಬನೆಡೆಗೆ ಊದಿ ತೂರಿ ಕಳಿಸ್ತಾನೆ. ನನಗೆ ಪಂಪ ಹೇಗೆ ಸಿಕ್ಕಿದ್ದಾನೆ ಎಂದರೆ ಕಳೆದ ಸಾವಿರ ವರ್ಷದಿಂದ ಅವನನ್ನು ಊದಿ ತೂರಿ ಇಪ್ಪತ್ತೊಂದನೇ ಶತಮಾನದವರೆಗೂ ಕಳಿಸಿದ್ರಿಂದ ಪಂಪ ಸಿಕ್ಕಿದ್ದಾನೆ. ಇಲ್ಲಿತನಕ ಊದಿ ತೂರಿ ಕಳಿಸಿರುವುದರಿಂದ ಅಲ್ಲಮ ಸಿಕ್ಕಿದ್ದಾನೆ. ಅದು ನಮ್ಮಲ್ಲಿ ನಡೆದುಕೊಂಡು ಬಂದಿರೋ ಸಂಪ್ರದಾಯ. ಈಗ ನಮ್ಮದೇನು ಕರ್ತವ್ಯ ಎಂದರೆ ಊದಿ ತೂರಿ ಕಳಿಸಿ ಮುಂದೆ ಹೋಗ್ತಾ ಇರೋದು. ಆ ಪ್ರಯಾಣಕ್ಕೆ ಕೊನೆಯೇ ಇಲ್ಲ’.
ಬೇಂದ್ರೆಯವರ `ಗರಿ’ ಕವಿತೆಯ ಸಾಲುಗಳನ್ನು ಕಿರಂ ಗ್ರಹಿಸಿರುವ ಬಗೆ ಇದು.
ಕಾವ್ಯವನ್ನು ಊದಿ ತೂರಿ ಮುಂದಿನ ತಲೆಮಾರಿಗೆ ತಲುಪಿಸುವ ಸಂಪ್ರದಾಯದ ಬಗ್ಗೆ ಏನು ಹೇಳುತ್ತಿದ್ದಾರೋ ಅದನ್ನು ಕಿರಂ ಸ್ವತಃ ತಮ್ಮ ಬದುಕಿನ ಕೊನೆಯ ಕ್ಷಣದವರೆಗೂ ಒಂದು ವ್ರತದಂತೆ ನಡೆಸಿಕೊಂಡು ಬಂದಿದ್ದರು. `ಕಾವ್ಯ’ ಬರೆಯದಿದ್ದರೂ ನಡೆದಲ್ಲೆಲ್ಲ ಕಾವ್ಯದೊರತೆಗಳನ್ನು ಚಿಮ್ಮಿಸಿದರು. ನುಡಿನುಡಿದು ಕಿಂದರಿಜೋಗಿಯಂತೆ ಅಸಂಖ್ಯರನ್ನು ಕಾವ್ಯದೆಡೆಗೆ ಸೆಳೆದರು.
ಇಂತಿಪ್ಪ ಕಿ.ರಂ ಎಂಬ ಕಾವ್ಯಜೀವಿ ಬದುಕಿನ ಕೊನೆಯ ಕ್ಷಣದವರೆಗೂ ಕಾವ್ಯದೊಂದಿಗೆ ಒಡನಾಡುತ್ತಾ ಎಲ್ಲವನ್ನು ಕಾವ್ಯವಾಗಿಸಿಕೊಂಡವರು. ಅದರಲ್ಲೂ ಬೇಂದ್ರೆ ಕಾವ್ಯದ ಬಗ್ಗೆ ಅವರಿಗಿದ್ದ ಅನನ್ಯ ಆಸಕ್ತಿ `ನಲ್ಲನಲ್ಲೆಯರ ಲಲ್ಲೆ’ ಕವಿತೆಯ `ಹುಚ್ಚು ಹಿಡಿಸಿ ನುಡಿಸಬಲ್ಲೆ; ಹಿಡಿದ ಹುಚ್ಚು ಬಿಡಿಸಬಲ್ಲೆ’ ತರದ್ದು. ಮತ್ತೆ ಮತ್ತೆ ಬೇಂದ್ರೆ ಕಾವ್ಯ ಕಿ.ರಂರಿಂದ ಓದಿಸಿಕೊಂಡಿದೆ. ತನ್ನನ್ನೆ ತಾನು ನಿಕಷಕ್ಕೊಡ್ಡಿಕೊಂಡಿದೆ. ಪುನರ್ ಮನನಕ್ಕೂ ಒಳಗಾಗಿದೆ ಮತ್ತು ಪ್ರತಿ ಸತರ್ಿಯೂ ಹೊಸ ಅರ್ಥವನ್ನು ಸ್ಫುರಿಸಿದೆ. ಕಿರಂ ಅವರನ್ನು ಬಾಲ್ಯದಿಂದಲೂ ಹತ್ತಿರದಿಂದ ಕಂಡ ಕಾವ್ಯಪ್ರೇಮಿಯೊಬ್ಬರು ಹೇಳುತ್ತಿದ್ದರು `ಐದು ಸಾವಿರಕ್ಕೂ ಹೆಚ್ಚು ಬಾರಿ ಕಿ.ರಂ ಬೇಂದ್ರೆ ಕಾವ್ಯದ ಬಗ್ಗೆ ಮಾತಾಡಿರಬಹುದು’ ಎಂದು. ಆದರೆ ಪ್ರತಿಕ್ಷಣವೂ ಒಡನಾಡುತ್ತಿದ್ದರಲ್ಲ ಅದರ ಲೆಕ್ಕವಿಟ್ಟವರ್ಯಾರು… ಕಿರಂ ಬೇಂದ್ರೆ
ಕಾವ್ಯವನ್ನು ಓದುತ್ತಾ, ಓದಿಸುತ್ತಿದ್ದದು ಅಷ್ಟೇ ಅಲ್ಲ. ಅವರ ಶಿಷ್ಯರಿಂದ, ಗೆಳೆಯರಿಂದ ಓದಿಸಿಕೊಂಡು ಅರ್ಥ ಮಾಡಿಕೊಳ್ಳುತ್ತಾ ಅರ್ಥ ಮಾಡಿಸುತ್ತಿದ್ದರು. ಹಾಗೆ ಬೇಂದ್ರೆ ಕಾವ್ಯವನ್ನು ಅವರಿಗೆ ಓದಿಹೇಳಿದ, ಅವರೊಂದಿಗೆ ಓದಿದ ಅಸಂಖ್ಯ ಪುಣ್ಯವಂತರಲ್ಲಿ ನಾನೂ ಒಬ್ಬಳು ಎನ್ನುವುದೇ ಬೇಂದ್ರೆ ಕಾವ್ಯದ ಬಗೆಗಿನ ಅವರ ಮಾತುಗಳನ್ನು ಕಾಗದದ ಮೇಲೆ ತರಲು ನನಗಿರುವ ಏಕೈಕ ಅರ್ಹತೆ. ಒಮ್ಮೆ ಫೋನಿನಲ್ಲಿ ಸಖೀಗೀತದ ಸಾಲುಗಳನ್ನು ಕಿರಂ ಸರ್ ನನ್ನಿಂದ ಓದಿಸುತ್ತಿದ್ದರು. ಅವರು ಹೇಳಿದ ಮೂರ್ನಾಲ್ಕು ಸ್ಟಾಂಜಾಗಳು ನನ್ನ ಪಠ್ಯದಲ್ಲಿರಲಿಲ್ಲ. ಸರ್ ನೀವು ಹೇಳುತ್ತಿರುವುದು ಸಖೀಗೀತದ ಸಾಲುಗಳಲ್ಲ. ಬೇರೆ ಯಾವುದೋ ಪದ್ಯದ ಸಾಲುಗಳೆಂದು ಕಿ.ರಂ ಜೊತೆ ವಾಗ್ವಾದಕ್ಕಿಳಿದೆ. (ನಾನು ಅಲ್ಲಿತನಕ ನನ್ನ ಬಳಿ ಇದ್ದ `ಒಲವೇ ನಮ್ಮ ಬದುಕು’ ಸಂಗ್ರಹದಲ್ಲಿದಲ್ಲಿರುವುದು `ಸಖೀಗೀತ’ದ ಪೂರ್ಣಪಠ್ಯವೆಂದೆ ಬಗೆದಿದ್ದೆ).
ಅವರೆಷ್ಟು ಹೇಳಿದರೂ ಕೇಳುವ ಸ್ಥಿತಿಯಲ್ಲಿ ನಾನು ಇರಲಿಲ್ಲ. ಅವರೇ ನನ್ನ ಬಳಿ ಇಲ್ಲದ ಸಾಲುಗಳನ್ನು ಓದಿದರು. ಅದಾಗಿ ಎರಡೇ ದಿನಕ್ಕೆ ನಮ್ಮ ಮನೆಗೆ ಕಿ.ರಂ ಬಂದರು. ಕುಪ್ಪಳಿಗೆ ಬಂದಿದ್ದರಂತೆ, ತಿರುಗಿ ಬೆಂಗಳೂರಿಗೆ ಹೋಗುವವರು ಶಿವಮೊಗ್ಗೆಯಲ್ಲೇ ಇಳಿದು ಬಂದಿದ್ದಾರೆ. ಕೈಯಲ್ಲಿ ಸಖೀಗೀತ ಸಂಕಲನ ನನಗೆ ಕೊಡಲು… ಜೊತೆಗೆ `ಪೆದ್ದಮ್ಮ ಯಾವುದ್ಯಾವುದೋ ಸಖೀಗೀತದ ಪಠ್ಯ ಓದಿ ಆ ಸಾಲಿಲ್ಲ, ಈ ಸಾಲಿಲ್ಲ ಅನ್ನಬೇಡ. ಇದು ಸಖೀಗೀತ. ತಗೋ ಇದನ್ನು ಓದು. ಕಾವ್ಯವನ್ನು ಅರ್ಧಂಬರ್ಧ ಓದಬಾರದು… ಪೆದ್ದಪೆದ್ದಾಗಿರತ್ತೆ’ ಎಂಬ ನುಡಿಮುತ್ತು.
ತನ್ನ ಸುತ್ತಣ ಸಂದರ್ಭಗಳನ್ನು ವಿವರಿಸಿಕೊಳ್ಳಲು ಕಾವ್ಯವನ್ನೇ ಮೂಲಶಕ್ತಿಯನ್ನಾಗಿ ಬಳಸಿಕೊಳ್ಳುತ್ತಿದ್ದ ಕಿರಂ ಅವರನ್ನು, ಪ್ರಾದೇಶಿಕ ಸಂಸ್ಕೃತಿಯ ಸಾಧ್ಯತೆಗಳನ್ನುಬಳಸಿ ಕೊಂಡು ತನ್ನ ಸುತ್ತಣದ ವಾಸ್ತವಿಕತೆಯನ್ನು, ಮನುಷ್ಯ ಮತ್ತು ನಿಸರ್ಗದ ನಿಗೂಢಗಳನ್ನು ಶೋಧಕ್ಕೊಳಪಡಿಸುತ್ತಲೇ ಗೀತವಾಗಿಸಿದ ಬೇಂದ್ರೆ ಕವಿ ಸಹಜವಾಗಿಯೇ ಸೆಳೆದುಕೊಂಡರೆನ್ನಬಹುದು. ಈ ಲೋಕದ ಅನುಭವವನ್ನು ತನ್ನ ಒಟ್ಟೂ ಕಾವ್ಯದ ದ್ರವ್ಯವನ್ನಾಗಿಸಿಕೊಂಡು ಅದನ್ನು ವಿವರಗಳಲ್ಲಿ ಕಟ್ಟುವ ಕ್ರಮ, ನಿಸರ್ಗದ ಜತೆಗಿನ ಮನುಷ್ಯಸಂಬಂಧಕ್ಕೆ ಸೇತುವೆಯಾಗುವ ರೀತಿ, ಇಪ್ಪತ್ತನೇ ಶತಮಾನದಲ್ಲಿ ನಿಂತು ವಚನ ಚಳವಳಿ ಮತ್ತು ಪುರಾಣ ಪಾತ್ರಗಳೊಡನೆ ನಡೆಸುವ ಅನುಸಂಧಾನ, ಈ ನೆಲದ ಈ ಭಾಷೆಯ ಮೂಲಕ ಇಡೀ ವಿಶ್ವವನ್ನೇ ಕಟ್ಟಿಕೊಡುವ ಪ್ರಕ್ರಿಯೆ ಮತ್ತು ಕನ್ನಡ ಭಾಷೆಯ ಸಸೂಕ್ಷ್ಮ ಸಾಧ್ಯತೆಗಳನ್ನು ಬಳಸಿಕೊಂಡು ಜನಸಾಮಾನ್ಯರ ಬದುಕನ್ನೇ ಮಹಾಗೀತವನ್ನಾಗಿಸುವ ಪರಿ – ಇತ್ಯಾದಿ ಬೇಂದ್ರೆ ಕಾವ್ಯದ ನೆಲೆಗಳನ್ನು ಕಿರಂ ತಮ್ಮ ಮಾತುಗಳಲ್ಲಿ ಹೊಚ್ಚ ಹೊಸದು ಎಂಬಂತೆ ಕಟ್ಟಿಕೊಟ್ಟಿದ್ದಾರೆ.
ಅದರಲ್ಲೂ ಬೇಂದ್ರೆ ಕಾವ್ಯದಲ್ಲಿ ಕೇಳುವ ಹೆಣ್ಣಿನ ದನಿ ಹೆಣ್ಣೇ ತೆರೆದಿಡುತ್ತಿದ್ದಾಳೇನೊ ಎನಿಸುವಷ್ಟರ ಮಟ್ಟಿಗೆ ಎಲ್ಲ ಸುಖ ದುಃಖಗಳೊಂದಿಗೆ ಅನಾವರಣಗೊಳ್ಳುವ ಹೆಣ್ಣಿನ ಲೋಕವು ಕಿರಂ ಅವರ ಬೇಂದ್ರೆ ಕಾವ್ಯದ ಬಗೆಗಿನ ಚಚರ್ೆಯ ಕೇಂದ್ರವೃತ್ತಾಂತವಾಗಿದೆ.
ಬೇಂದ್ರೆ ತನ್ನ ಅನುಭವಕ್ಕೆ ಎದುರಾಗುವ ಕವಿಯಾದ್ದರಿಂದ ತಾನು ಮತ್ತೆ ಮತ್ತೆ ಬೇಂದ್ರೆ ಕಾವ್ಯವನ್ನು ಓದುವುದಾಗಿ ಹೇಳುತ್ತಿದ್ದ ಕಿರಂ, ಕಾವ್ಯವನ್ನು ಥೆರಪಿ ಎಂದು ಕೊನೆಯ ಕ್ಷಣದವರೆಗೂ ನಂಬಿಕೊಂಡಿದ್ದವರು. ಬೇಂದ್ರೆ ಕಾವ್ಯವೆಂಬ ಥೆರಪಿಯ ವಿಧಿವಿಧಾನಗಳನ್ನು ಶಕ್ತಿ, ಸೌಂದರ್ಯಗಳನ್ನು ಕಿರಂ ಮಾತುಗಳು ಅನಾವರಣಗೊಳಿಸುತ್ತವೆ. ಕಿರಂ ಬಾಯಲ್ಲಿಬೇಂದ್ರೆ ಪುನರ್ಸೃಷ್ಟಿಗೊಳ್ಳುತ್ತಾರೆ.
2008ರಿಂದಲೇ ಕಿರಂ ಭಾಷಣಗಳನ್ನು ಬರಹ ರೂಪಕ್ಕೆ ತರುವ ಕೆಲಸಕ್ಕೆ ಕೈ ಹಚ್ಚಬೇಕೆನ್ನುವುದು ನನ್ನ ಮಹದಾಕಾಂಕ್ಷೆಯಾಗಿತ್ತು. ಅವರು ನೀನಾಸಂ ಶಿಬಿರದಲ್ಲಿಬೇಂದ್ರೆಯವರ ಕಾವ್ಯದಲ್ಲಿ ವಿಶ್ವಾತ್ಮಕತೆಯ ಕುರಿತು ಮಾತಾಡಿದಾಗ ಭಾಷಣದ ಧ್ವನಿ ಮುದ್ರಣ ಸಿಡಿಯನ್ನು ಕೇಳಿ ಪಡೆದುಕೊಂಡಿದ್ದೆ. ಆದನ್ನು ಆಗೀಗ ಹಾಕಿ ಕೇಳುತ್ತಲೂ ಇದ್ದೆ. ಕಿ.ರಂ ಭಾಷಣವನ್ನು ಕೇಳುವುದು ಅದರಲ್ಲೂ ಅವರೆದುರಿಗೆ ಕುಳಿತು ಕೇಳುವ ಅನುಭವವೇ ದೊಡ್ಡದು ಎಂಬ ಪ್ರಜ್ಞೆ ನನ್ನೀ ಆಸಕ್ತಿಗೆ ಆಗೀಗ ತೊಡಕನ್ನುಂಟು ಮಾಡುತ್ತಿತ್ತು. ಜೊತೆಗೆ ಕಿ.ರಂ ಮಾತಿಲ್ಲದೆ ಒಂದು ದಿನ ಕಣ್ಮರೆಯಾಗಬಹುದು ಎಂಬ ಕಲ್ಪನೆ ಮಾಡಿಕೊಳ್ಳುವುದು ನನ್ನಿಂದ ಆಗ ಸಾಧ್ಯವಿರಲಿಲ್ಲ. ಕವಿಸಮಯದಲ್ಲಷ್ಟೆ ಅಲ್ಲ ನನ್ನೆಲ್ಲ ತಲ್ಲಣಗಳ ಹೊತ್ತಲ್ಲೂ ಕಿ.ರಂ ಹಾಗೆ ನಿಲುಕಿಬಿಡುತ್ತಿದ್ದದರಿಂದ ಆಸರೆಯಾಗಿ ಕಿ.ರಂ ಇದ್ದಾರೆ ಮತ್ತು ಸದಾ ಇರುತ್ತಾರೆ ಎಂಬ ಭಾವವೇ ತುಂಬಿಕೊಂಡಿತ್ತು. ಆದರೆ ಬೇಂದ್ರೆ ಕಾವ್ಯದ ರುಚಿಯನ್ನು ಸಂಚಯದ ಸಭೆಯಲ್ಲಿ ಹಂಚಿ ಬಂದವರು ಮತ್ತೆ ಸಿಗುವುದೇ ಇಲ್ಲ ಎಂಬುದು ಯಾರಿಗೆ ಗೊತ್ತಿತ್ತು. (ಅವರಿಗೆ ಗೊತ್ತಿತ್ತೋ ಏನೋ `ನೀನು ಜುಲೈ ತಿಂಗಳಿನಲ್ಲಿ ಒಂದ್ಹತ್ತು ದಿನವಿದ್ದು ಪಂಪನ ಬಗ್ಗೆ ಹೇಳುತ್ತಾ ಹೋಗ್ತೀನಿ ಬರಕೋ ಪಂಪನ ಬಗ್ಗೆ ಒಂದು ಕೃತಿ ತರೋಣ’ ಎಂದು ಹೇಳಿದ್ದರು. ಅವರಿಗೆ ಗೊತ್ತಿತ್ತು ಎಂದ್ಹೇಕೆ ಹೇಳುತ್ತಿದ್ದೇನೆ ಎಂದರೆ ಈ ಮಾತು ಹೇಳುವಾಗ ಇನ್ನೂ ಮೇ ತಿಂಗಳು ಕಳೆದಿರಲಿಲ್ಲ).
ಆದರೆ ಕಿರಂ ಇಲ್ಲದ ಈ ಹೊತ್ತಲ್ಲಿ ನನ್ನ ಪ್ರಜ್ಞೆ ಹೇಳುತ್ತಿದೆ, ಈ ಮೇಷ್ಟ್ರ ಮಾತುಗಳು, ಕಾವ್ಯದ ಬಗೆಗಿನ ನೋಟ, ಎಲ್ಲವನ್ನು ಕಾವ್ಯವಾಗಿಸುವ ಅಂತಸ್ಸತ್ವದ ಒಂದು ಪಾಲಾದರೂ ನನ್ನ ಕಿರಿಯ ಗೆಳೆಯರಿಗೆ ಲಭ್ಯವಾಗಬೇಕು. ನನಗೂ ಗೊತ್ತು ಕಿರಂ ಮಾತಿನ ಕಿರಣದ ಅಷ್ಟೂ ಪ್ರಭೆಯನ್ನು ಬರಹ ರೂಪಕ್ಕೆ ತರುವಲ್ಲಿ ಅಸಫಲಳೆಂದು. ಆದರೆ ಬೇಂದ್ರೆಯವರೇ ಹೇಳಿದಂತೆ `ಪಕಳೆಮಾತು ಉದಿರಾಡಬಹುದು, ತುಂಬೀತು ಸ್ವಾಂತರಂಗ’ ಆ ನಂಬಿಕೆ ನನಗಿದೆ. ಜೊತೆಗೆ ಕಿ.ರಂ ಬೇಂದ್ರೆ ಕಾವ್ಯದ ಕುರಿತು ಸಾವಿರಾರು ಉಪನ್ಯಾಸ ನೀಡಿದ್ದಾರಾದರೂ ಈ ಕೃತಿಯಲ್ಲಿ ನೀಡಲು ಸಾಧ್ಯವಾಗಿರುವುದು ಐದೇ ಬರಹಗಳನ್ನು (ಅದರಲ್ಲು ಒಂದು ಲೇಖನ `ಶೂದ್ರ’ ಪತ್ರಿಕೆಯ ಬೇಂದ್ರೆ ವಿಶೇಷಾಂಕದಲ್ಲಿಸ ್ವತಃ ಕಿರಂ ಬರೆದಿದ ್ದು.) ತೀರವೇ ಕಾಣದಷ್ಟು ಸಮುದ್ರದ ನೀರಿದ್ದರೂ ನಮಗೆ ದಕ್ಕುವುದು ಒಂದು ಬೊಗಸೆಯಷ್ಟೇ…






I would like to buy this book. Any idea where is this available?
Regards
Ramesh
ನಿಜವಾಗಿಯೂ ಆಪ್ತವಾದ ಬರೆಹ. ಕಿ.ರಂ ನನಗೂ ಬಹಳ ಆಪ್ತರಾಗಿದ್ದವರು. ನಾನು ತುಂಬಾ ಹಿಂದೆ ೧೯೮೨ ಇರಬಹುದು. ಅನಂತಮೂರ್ತಿಯವರು ಮೈಸೂರಿನಿಲ್ಲಿ ಇದ್ದಾಗ ಅವರ ಮನೆಗೆ ಹೋಗಿದ್ದೆ. ಅದು ನಾನು ಕವಿತೆ ಬರೆಯಲು ಶುರುಮಾಡಿದ್ದ ದಿನಗಳು. ರುಜುವಾತುವಿನಲ್ಲಿ ನನ್ನ ಒಂದು ಕವಿತೆ ಪ್ರಕಟವಾಗಿತ್ತು. ನಾನು ಓದಲು ಕಳಿಸಿದ ಇನ್ನೊಂದು ಕವಿತೆಗೆ ಅನಂತಮೂರ್ತಿ ಪ್ರತಿಕ್ರಿಯೆ ಸೂಚಿಸಿ ಆಗ್ಗೆ ಕೆಲದಿನದ ಹಿಂದೆ ಪತ್ರ ಬರೆದಿದ್ದರು. ಅಂದು ಅನಂತಮೂರ್ತಿ ಅಷ್ಟು ಆರಾಮವಿಲ್ಲದಿದ್ದರೂ ಸುಮಾರು ಒಂದು ಘಂಟೆ ನನ್ನೊಡನೆ ಮಾತಾಡಿದ್ದರು. ಅವರು ನಾನು ಕೋಲಾರದವನೆಂದು ಹೇಳಿದ ಬಳಿಕ ಹೇಳಿದ್ದಿದು: ಬೆಂಗಳೂರಿನಲ್ಲಿ ಕಿ.ರಂ ಇದ್ದಾರೆ. ಕಾವ್ಯದ ಬಗ್ಗೆ ಮಾತಾಡಬೇಕು ಅನ್ನಿಸಿದರೆ ಅವರ ಬಳಿ ಹೋಗಿ.
ಆಮೇಲೆ ನನ್ನ ಕಾವ್ಯವನ್ನು ಓದಿ ಮೆಚ್ಚಿದ್ದ ಕಿ.ರಂ ಜೊತೆ ಕಳೆದ ಅದೆಷ್ಟೋ ದಿನಗಳಲ್ಲಿ ಅವರಾಡಿದ ಮಾತುಗಳು ಕಾವ್ಯವನ್ನು ಓದುವ ನನ್ನ ಗ್ರಹಿಕೆಗಳನ್ನು ತಿದ್ದಿಬಿಟ್ಟವು. ಅವರು ಕಾವ್ಯವನ್ನು ಬಿಟ್ಟು ಹೋದರು. ಅಂಥವರ ಬರವಿಗೆ ನಾವಿನ್ನೆಷ್ಟು ಕಾಲ ಕಾಯಬೇಕೋ?