ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಿರಣ ಭಟ್ ಕಂಡಂತೆ – ಸೊರದಾಂತಿ ನಲಿಕೆ…

ಸೊರದಾಂತಿ ನಲಿಕೆ ತುಳು ನಾಟಕ

ಕಿರಣ ಭಟ್

ಸೊರದಾಂತಿ ನಲಿಕೆ (Dumb dancer)
ಅದೊಂದು ಆವೇಶಭರಿತ ಕ್ರಿಯೆ.

ನಾಟಕದ ಆದಿ ಭಾಗ. ಯಕ್ಷಗಾನ ಕಲಿಕೆಯನ್ನ ಆಗ ತಾನೇ ಪ್ರಾರಂಭಿಸಿರುವ ಭೀಮ ನಿಗೆ ತಾನೊಂದು ಅದ್ಭುತ ಕಲಾವಿದನಾಗುವ ಬಯಕೆ. ಜೊತೆಗೆ ಇಲ್ಲೊಂದು ವಿಶೇಷವುಂಟು. ಈ ಭೀಮ ಹೆಸರಿಗೆ ಮಾತ್ರ ಭೀಮನಲ್ಲ. ಮಹಾಭಾರತದ ಭೀಮ ತಾನೇ ಎಂಬ ಭ್ರಮೆಯಲ್ಲಿ ಬದುಕತ್ತಿರುವವ. ಒಂಥರಹದ ವಿಚಿತ್ರ ಮಾನಸಿಕ ಸ್ಥಿತಿಯದು. ಮನಸಿನ ರೋಗದ ಮೊದಲ ಹಂತ. ಆಗಾಗ ಸ್ಥಿಮಿತ ತಪ್ಪಿದಾಗಲೆಲ್ಲ ಆತನ ಯಕ್ಷಗಾನದ ಗುರು ಆತನನ್ನ ಎಚ್ಚರಿಸುತ್ತ ತಹಬಂದಿಗೆ ತರುತ್ತಿರುತ್ತಾನೆ. ಆದರೂ ಭೀಮ ಅಶಾಂತ. ಕೂಗಾಡುವವ. ಅದೇ ಶಾಲೆಯ ಅಂಧ ಹಾಡುಗಾರನೊಬ್ಬನಲ್ಲಿ ತನ್ನ ಪ್ರತಿಸ್ಪರ್ಧಿಯನ್ನು ಕಾಣುವ ಭೀಮನಿಗೆ ಗುರುವಿನ ಮಗಳು ಶಕುಂತಲಾ ಆ ಹುಡುನನ್ನು ಇಷ್ಟಪಡುವ ಹಾಗೆ ನೆನೆಸಿಕೊಂಡು ಹೊಟ್ಟೆಯುರಿ. ಆಕೆಯಲ್ಲಿ ಈ ಭೀಮ ತನ್ನ ದ್ರೌಪದಿಯನ್ನು ಕಾಣತ್ತಿದ್ದಾನೆ.

ಒಂದು ಹಂತದಲ್ಲಿ ಭೀಮ ಗುರುವನ್ನು ಕೇಳಿಬಿಡುತ್ತಾನೆ.
” ನಮ್ಮಿಬ್ಬರಲ್ಲಿ ಯಾರು ಶ್ರೇಷ್ಠ? ನಾನೋ ಆ ಅಂಧ ಗಾಯಕನೋ?”
ಗುರು: ಆ ಹಾಡುವ ಹುಡುಗನೇ.
ಭೀಮ: ಯಾಕೆ? ನಾನೇಕೆ ಶ್ರೇಷ್ಠನಾಗೋದಿಲ್ಲ? ಅವನ್ಯಾಕೆ?
ಗುರು: ಬಹುಷ: ಆತ ಕಣ್ಣನ್ನು ಕಳೆದುಕೊಂಡದ್ದೇ ಇರಬಹುದು. ಒಂದು ಅಂಗವನ್ನ ಕಳೆದುಕೊಂಡವರಿಗೆ ಉಳಿದೆಲ್ಲ ಅಂಗಗಳು ಸೂಕ್ಷ್ಮ ಸಂವೇದಿಯಾಗಿರುತ್ತವೆ. ನೀನೂ ಚೆನ್ನಾಗಿ ಅಭ್ಯಾಸ ಮಾಡು. ತ್ಯಾಗವಿಲ್ಲದೇ ಏನೂ ಸಿದ್ಧಿಸುವದಿಲ್ಲ. ಅತಿಯಾದ ಮಾತು ಎಲ್ಲಕ್ಕೂ ಅಡ್ಡಿ ತರುತ್ತದೆ. ಸುಮ್ಮನೆ ನೃತ್ಯ ಮಾಡು ‘
‘ಸೊರದಾಂತಿ ನಲಿಕೆ’ ನಂತೆ.
ಮೂಕ ನರ್ತಕ…Dumb dancer.
ಇಂಥದೊಂದು ಕಿವಿಗೆ ಬಿದ್ದಿದ್ದೇ ತಡ ಭೀಮ ವ್ಯಗ್ರನಾಗುತ್ತಾನೆ.

‘ಸೊರದಾಂತಿ ನಲಿಕೆ…ಸೊರದಾಂತಿ ನಲಿಕೆ ಎಂದು ಕೂಗುತ್ತ ಓಡಾಡುತ್ತ ತನ್ನ ನಾಲಿಗೆಯನ್ನೇ ಕಡಿದು ಗುರುದಕ್ಷಿಣೆ ಕೊಟ್ಟುಬಿಡುತ್ತಾನೆ
ನಾಟಕದ ನಾಯಕ ‘ಮೂಕ ನರ್ತಕ’ ನಾಗಿಬಿಡುತ್ತಾನೆ. ಮುಂದೆ ಇದೇ ರೋಗ ಉಲ್ಬಣಗೊಳ್ಳುತ್ತ ಆತ ತನ್ನ ಮತ್ತು ದ್ರೌಪದಿ ಯ ನಡುವೆ ಅಡ್ಡ ಬಂದ ಅಂಧ ಹುಡುಗನನ್ನು ಕೊಂದೇಬಿಟ್ಟೆ ಎಂಬ ಪಾಪ ಪ್ರಜ್ಞೆಯೊಂದಿಗೆ ಮಾನಸಿಕ ಆಸ್ಪತ್ರೆ ಸೇರುತ್ತಾನೆ.

ಪ್ರೇಮಾ ಅದೇ ಆಸ್ಪತ್ರೆಯ ವೈದ್ಯೆ. ಒಂದು ವಿಶಿಷ್ಟವಾದ ಶಾಕ್ ಟ್ರೀಟ್ಮೆಂಟ್ ಮೂಲಕ ಭೀಮನನ್ನು ಮಿಥ್ಯದ ಜಗತ್ತಿನಿಂದ ಸತ್ಯದದ ಜಗತ್ತಿಗೆ ತರಬಹುದು ಎನ್ನುವದು ಆಕೆಯ ವಿಚಾರ. ಆಸ್ಪತ್ರೆಯ ಆಪರೇಶನ್ ಥಿಯೇಟರ್ ನಲ್ಲಿ ಯಕ್ಷಗಾನ ಪ್ರದರ್ಶನವೊಂದನ್ನ ಏರ್ಪಡಿಸುವದು. ಗದಾಯುದ್ಧದ ಕೊನೆಯ ಸನ್ನಿವೇಶದಲ್ಲಿ ಕರುಳು ಬಗೆದ ಶವವೊಂದಕ್ಕೆ ದುರ್ಯೋಧನನ ಮುಖವಾಡ ತೊಡಿಸಿ ಭೀಮನಿಗೊಂದು ಸತ್ಯದ ಶಾಕ್ ನೀಡುವದು ಆಕೆಯ ಇರಾದೆ.

ಆದರೆ ದಿನಕಳೆದಂತೆ ಆಕೆಯೇ ಭೀಮನೆಡೆಗೆ ಆಕರ್ಷಿತಳಾಗುತ್ತಾಳೆ. ಆಕೆಯನ್ನು ಹಿಡಿದು ಮಾತಾಡಿಸಬಂದ ಸಹೋದ್ಯೋಗಿ ದಿಲೀಪ್ ನ ಮೇಲೆ ಭೀಮ ಮಾಡಿದ ಅಟ್ಯಾಕ್ ನಲ್ಲಿ ‘ ತನ್ನ’ ಭೀಮನನ್ನು ಕಾಣುತ್ತಾಳೆ. ದ್ರೌಪತಿಯನ್ನು ತನ್ನಲ್ಲೇ ಕಾಣಿತ್ತ ಆಕೆಯೇ ಮಿಥ್ಯಾಲೋಕಕ್ಕೆ ಜಾರುತ್ತಾಳೆ. ಶಕುಂತಲೆಯನ್ನ ತಮ್ಮಿಬ್ಬರ ಮಧ್ಯೆ ಬಂದ ತಡೆಯಂತೆ ಕಾಣುತ್ತಾಳೆ.

ನಾಟಕದ ಕೊನೆಯಂತೂ ಘೋರ. ಆಕೆಯ ತುರುಬನ್ನ ರಕ್ತಸಿಕ್ಕ ಕೈಗಳಿಂದ ಬಾಚಿದ್ದಾನೆ ಭೀಮ. ಆಕೆಯ ಕೂದಲುಗಳು ಕೆಂಪಾಗಿವೆ. ಆಕೆಯಲ್ಲಿನ ದ್ರೌಪತಿ ಗಹಗಹಿಸುತ್ತಿದ್ದಾಳೆ. ದೂರದಲ್ಲಿ ಭೀಮ ದ್ರೌಪತಿಯರ ಮಧ್ಯೆ ಬಂದ ಶಕುಂತಲೆಯ ದೇಹ ಮಲಗಿದೆ. ಆಕೆಯನ್ನು ಕೊಂದ ಕ್ರೌರ್ಯ ಪ್ರೇಮಾಳ ಕಣ್ಣುಗಳಲ್ಲಿ ಕಾಣುತ್ತಿದೆ. ಸತ್ಯದ ಜಗತ್ತಿಗೆ ಬಂದ ಭೀಮ ತೆವಳುತ್ತ ..ತೆವಳುತ್ತ ಶಕುಂಲೆಯ ದೇಹದೆಡೆಗೆ ಹೋಗುತ್ತಿದ್ದಾನೆ ಜೋರಾಗಿ ರೋದಿಸುತ್ತಿದ್ದಾನೆ.

Carrimbhoy Asif ,ಕಲ್ಕತ್ತೆಯ ಇಂಗ್ಲೀಷ್ ನಾಟಕಕಾರ ಬರೆದ The Dumb Dancer ನಾಟಕದ ತುಳು ರೂಪಾಂತರವಿದು. ಆಸಿಫ್ ಕಥಕ್ಕಳಿ ನರ್ತಕನೊಬ್ಬನ‌ ಮಾನಸಿಕ ಸ್ಥಿತಿಯನ್ಬು ಕೇಂದ್ರವಾಗಿಟ್ಟುಕೊಂಡು ಬರೆದ ಈ ನಾಟಕ ಅನೇಕ ಪ್ರಯೋಗಗಳನ್ನ ಕಂಡಿದೆ.
ಪ್ರಸ್ತುತ ತುಳು ರಂಗಪ್ರಯೋಗದಲ್ಲಿ ಇದು ಭೀಮ ನೆಂಬ ಒಬ್ಬ ತೆಂಕುತಿಟ್ಟಿನ ಯಕ್ಷಗಾನ ಕಲಾವಿದನ ಕಥೆಯಾಗಿದೆ. ಇದೊಂದು ಮನೋವೈಜ್ಞಾನಿಕ ಭಿತ್ತಿಯ ಕಥೆ.

ಈ ನಾಟಕ ನಿಜವಾದ ಸ್ವಂತ ವ್ಯಕ್ತಿತ್ವ ಮತ್ತು ಜಗತ್ತಿಗೆ ತಾನು ತೋರಿಕೊಳ್ಳುತ್ತಿರುವ ವ್ಯಕ್ತಿತ್ವದ ನಡುವಿನ ಅನಿವಾರ್ಯ ಸಂಘರ್ಷವನ್ನ ತರೆದಿಡುತ್ತದೆ. ಪರಕೀಯವಾಗುವದು ಎನ್ನುವದೊಂದು ಅನಿವಾರ್ಯತೆ. ಕಲಾವಿದರ ಮಟ್ಟಿಗಂತೂ ಇದು ಅನಿವಾರ್ಯ. ಇಂಥ ಸ್ಪರ್ಧಾತ್ಮಕ ಜಗತ್ತಿನಲ್ಲಿ ಭೀಮ ಕಂಗಾಲಾಗುತ್ತಾನೆ. ಸತ್ಯದ ಜಗತ್ತನ್ನ ಎದುರಿಸಲಾರದೇ ಕತ್ತಲಲ್ಲೇ ಇರಬಯಸುತ್ತಾನೆ. ಮಿಥ್ಯ ಜಗತ್ತಿನ ಮೊರೆಹೋಗುತ್ತಾನೆ. ಪ್ರೇಮಾ ಕೂಡ ಮಾನಸಿಕವಾಗಿ ಘಾಸಿಯಾಗುವದು ಇಂಥ ಸಂಘರ್ಷದ ಕಾರಣಕ್ಕೇ.

ನಾಲ್ಕು ಕಂಬಗಳು, ಬದಿಗೆರಡು ಹಿಲಾಲುಗಳು. ಭಾಗವತರು ಏರು ದನಿಯಲ್ಲಿ ಹಾಡುತ್ತಿದ್ದಾರೆ…ಭೀಮ ದುಶ್ಯಾಸನರ ಯುದ್ಧ ತಾರಕ್ಕೇರಿದೆ…ಭೀಮ ದುಶ್ಯಾಸನನನ್ನ ಕೆಳಕ್ಕೆ ಕೆಡವಿದ್ದಾನೆ…ಕರುಳು ಬಗೆಯಹೊರಟಿದ್ದಾನೆ..

ಹೀಗೆ ಶುರುವಾಗುವ ಈ ನಾಟಕ ಫ್ಲಾಶ್ ಬ್ಯಾಕ್ ನಲ್ಲಿ ಕತೆ ಹೇಳುತ್ತ ಸಾಗುತ್ತದೆ. ವಾಸ್ತವವಾದೀ ಮನೋವೈಜ್ಞಾನಿಕ ಥ್ರಿಲ್ಲರ್ ನಂತಹ ಕತೆಯೊಂದನ್ನ ಸರಳವಾಗಿ ಹೇಳುತ್ತ ಸಾಗಬಹುದಾದ ಈ ನಾಟಕದಲ್ಲೂ ಸತ್ಯ ಮಿಥ್ಯೆಯ ಕಾರಣಕ್ಕಾಗಿ ಇಮೇಜ್ ಗಳದೇ ದರಬಾರು. ಪ್ರಸ್ತುತ ರಂಗಪ್ರಯೋಗವೂ ಇದಕ್ಕೆ ಹೊರತಾಗಿಲ್ಲ. ಕತೆ ಹೇಳುವ ಶೈಲಿಯೂ ತುಸು ಏರು ದನಿಯದೇ. ಹಾಗಾಗಿ ಶುರುವಿನಲ್ಲೇ ಪ್ರೇಮಾಳ ಆಂಗಿಕ‌ ಅಭಿನಯದ, ಮಾತಿನ ತುಸು ಹೆಚ್ಚಿನ ಬೀಸು ಮುಂದೊದಗಬಹುದಾದ ಆಕೆಯ ಸ್ಥಿತಿಯನ್ನ ಮೊದಲೇ ಸೂಚಿಸುವಂತಿದೆ. ನಿರ್ದೇಶಕರು ಇಂಥ ಸೂಕ್ಷ್ಮಗಳನ್ನ ಚೆನ್ನಾಗಿಯೇ ನಿರೂಪಿಸಿದ್ದಾರೆ. ಏರು ಧಾಟಿಯ ಮಾತಿನ ಭೀಮನ ವ್ಯಕ್ತಿತ್ವವನ್ನು ಕೂಡ ಗಮನಾರ್ಹವಾಗಿಯೇ ಕಟ್ಟುತ್ತಾರೆ. ಕಲಾವಿದ ಭೀಮ ಮತ್ತು ಆಟದ ಭೀಮ ವೇಷವನ್ನು ಒಟ್ಟೊಟ್ಟಿಗೇ ಇಟ್ಟು ನಾಟಕ ಕಟ್ಟುತ್ತ ಹೋಗುತ್ತಾರೆ. ಇದೇ ಸಮೀಕರಣವನ್ನು ಶಕುಂತಲೆ ಮತ್ತು ಅಂಧ ಗಾಯಕನಿಗೂ ದಾಟಿಸುತ್ತಾರೆ. ಇದು ಪೂರಕ ಕೂಡ.

ಇಷ್ಟು ಸರಿ.‌ಆದರೆ ಇದರ ಜೊತೆ ಮೂರನೆಯದಾಗಿ ಆಧುನಿಕ‌ ನೃತ್ಯಶೈಲಿಯನ್ನೂ ತಂದುಬಿಡುತ್ತಾರೆ. ಬಣ್ಣಬಣ್ಣದ ದೀಪಗಳು, ಸಂಗೀತ, ಹೊಗೆ ಎಲ್ಲ ಸೇರಿ ಸನ್ನಿವೇಶಗಳನ್ನು ತೀವ್ರವಾಗಿಸಿಬಿಡುತ್ತವೆ.ಇಮೇಜ್ ಗಳು ಹೆಚ್ಚಾಗುತ್ತ ಹೋಗುತ್ತವೆ. ನಾಟಕ ಇಮೇಜ್ ನ ಭಾರದಿಂದ ನಲುಗುತ್ತದೆ. ಭಾವಲೋಕದಲ್ಲಿ ವಿಹರಿಸುವಂತಾಗಿ,ಕಥೆ ಹಿನ್ನೆಲೆಗೆ ಸರಿಯುತ್ತದೆ. ರಿಯಲಿಸ್ಟಿಕ್ ಕಥೆಯೊಂದನ್ನು ಅದೂ ಮನೋವೈಜ್ಞಾನಿಕ ಕಥೆಯೊಂದನ್ನ ಹೇಳುವಾಗ ಇಂಥ ಎಚ್ಚರ ಬೇಕು.

ಉಳಿದಂತೆ ಅಭಿನಯದ ದೃಷ್ಟಿಯಲ್ಲಿ ಎಲ್ಲರ ಅಭಿನಯವೂ ಕಥೆ ಹೇಳುವದಕ್ಕೆ ಪೂರಕವಾಗಿದೆ. ಅಂಧ ಹುಡುಗನ‌ ಪಾತ್ರಧಾರಿ ಚಂದ ಹಾಡುತ್ತಾನೆ.‌ ಅನುವಾದದ ಮಾತುಗಳು ಶಕ್ತಿಯುತವಾಗಿವೆ.

ಪ್ರೊಫೆಷನಲ್ ನಾಟಕಗಳೇ ಹೆಚ್ಚಾಗಿರುವ, ವರ್ಷಕ್ಕೆ ಒಂದೋ ಎರಡೋ ಪ್ರಾಯೋಗಿಕ ನಾಟಕಗಳನ್ನ ಕಾಣುವ ತುಳು ರಂಗ’ಭೂಮಿ’ಗೆ ಈ ಪ್ರಯೋಗವೊಂದು ಖುಷಿಯ ಸಿಂಚನ.

ಖಂಡಿತವಾಗಿಯೂ ಆ ಮಟ್ಟಿಗೆ ಅಪರೂಪದ ಪ್ರಯೋಗವೇ.
ನಾಟಕ ಇನ್ನಷ್ಟು ಪ್ರದರ್ಶನಗಳನ್ನ ಕಾಣಲಿ. ಕನ್ನಡದಲ್ಲೂ ಬರಲಿ.

ಮಂಗಳೂರಿನ ‘ಅರೆಹೊಳೆ ನಾಟಕೋತ್ಸವ’ ದಲ್ಲಿ ಅಚಾನಕ್ಕಾಗಿ ನಾಟಕ ನೋಡಲು ಸಿಕ್ಕಿತು. ನಾಟಕ ಆಡಿದ ಮಣಿಪಾಲ ತಂಡಕ್ಕೂ, ತೋರಿಸಿದ ಅರೆಹೊಳೆ ಪ್ರತಿಷ್ಠಾನಕ್ಕೂ, ಅರೆಹೊಳೆ ಸದಾಶಿವರಾವ್ ರವರಿಗೂ ಅಭಿನಂದನೆಗಳು.

ನಾಟಕ: ಸೊರದಾಂತಿ ನಲಿಕೆ
ಮೂಲ: ಆಸಿಫ್ ಕರೀಮ್ ಭೋಯ್
ಪರಿಷ್ಕರಣೆ: ಕೆ. ಆರ್. ಓಂಕಾರ್
ತುಳುವಿಗೆ: ಸಂತೋಷ ಶೆಟ್ಟಿ, ಹಿರಿಯಡ್ಕ
ನಿರ್ದೇಶನ: ಭುವನ್ ಮಣಿಪಾಲ್

‍ಲೇಖಕರು Admin

10 March, 2022

2 Comments

  1. ಕಿರಣ ಭಟ್

    ಥ್ಯಾಂಕ್ಯೂ ಅವಧಿ

  2. T S SHRAVANA KUMARI

    ಉತ್ತಮ ಲೇಖನ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading