
ಕಿರಣ ಭಟ್
ಬಹುಷ: ನಾವು ಎಂಟನೆಯತ್ತಿ ಒದುತ್ತಿದ್ದ ಸಮಯ. ಸದಾನಂದನೆಂಬ ಕಿಲಾಡಿ ಹುಡುಗನೊಬ್ಬ ಒಂದು ದಿನ ವಿಶೇಷ ವಸ್ತುವೊಂದನ್ನು ತಂದ. ಗೋಲಾಕರದ ಸಣ್ಣ ವಿಕ್ಸ್ ಆಕಾರದ ಡಬ್ಬಿಯದು. ಅದಕ್ಕೆ ಮುಚ್ಚಲು ಮುಚ್ಚಿತ್ತು. ಗೆಳೆಯರಿಗೆ ತೋರಿಸಿಯೂ ತೋರಿಸದವನ ಹಾಗೆ ಡಬ್ಬ ಹಿಡಿದುಕೊಂಡು ಡೌಲಿನಿಂದ ಒಡಾಡುತ್ತಿದ್ದ. ನಮಗೆಲ್ಲ ಅಪರಿಮಿತ ಕುತೂಹಲ.
ಕೊನೆಗೂ ಸಂಜೆ ಶಾಲೆ ಬಿಟ್ಟ ಮೇಲೆ ಆ ಡಬ್ಬಿಯ ರಹಸ್ಯ ಬಯಲಾಯ್ತು. ಸಂಜೆ ಆಪ್ತ ಗೆಳೆಯರ ಸಮ್ಮುಖದಲ್ಲಿ ಡಬ್ಬಿಯ ಮುಚ್ಚಳ ತೆಗೆಯಲಾಯಿತು. ಒಂಥರಾ ಕಪ್ಪು ಅಂಟಿನಂಥಾ ವಸ್ತು ತುಂಬಿದ ಡಬ್ಬಿ ಅದು. ಅದನ್ನ ‘ಅಂಜನ’ ಅಂತ ಹೇಳ್ತಾರೆ ಅಂತ ಸದಾನಂದ ಹೇಳುತ್ತಿದ್ದ. ಅದರಲ್ಲಿ ಕಣ್ಣಿಟ್ಟು ನೋಡಿದರೆ ಕೋರಿಕೊಂಡದ್ದೆಲ್ಲ ಕಾಣುತ್ತದಂತೆ. ಹಾಗಂತ ಎಲ್ಲರಿಗೂ ಕಾಣೋದಿಲ್ಲ. ಅಂಥವರಿಗೆ ಮಾತ್ರ. ಸ್ವತಃ ಸದಾನಂದನಿಗೂ ಏನೂ ಕಾಣುತ್ತಿರಲಿಲ್ಲ.
ನನಗೂ. ಒಬ್ಬೊಬ್ಬರಾಗಿ ನೋಡುತ್ತ ಹೋದೆವು. ಕೊನೆಗೂ ಹರಿ ಎಂಬ ಹುಡುಗ ‘ನನಗೆ ಕಾಣ್ತದೆ’ ಅಂತ ಚೀರಿದ. ನಮ್ಮಪ್ಪ ಎಲ್ಲಿದಾರೆ’ ಅಂತ ಕೇಳಿದರೆ ‘ ಪೇಟೇಲಿ’ ಅಂದ. ಸದಾ ನ ಅಣ್ಣ ಏನು ಮಾಡುತ್ತಿದ್ದಾನೆ ಅಂತ ಕೇಳಿದರೆ ‘ಸೈಕಲ್ ಹೊಡೀತಿದಾನೆ’ ಎಂದ. ಕೊನೆಗೆ ಸೈಮನ್ ತನ್ನ ‘ವೈರಿ’ ಜಾನ್ ಏನು ಮಾಡಿತ್ತಿದ್ದಾನೆ ಎಂತ ಕೇಳಿದಾಕ್ಷಣ ಹರಿ ಜೋರಾಗಿ ನಗತೊಡಗಿದ. ‘ಯಾಕೋ ಎಂತಾ ಆಯ್ತೋ’ ಅಂದ್ರೆ, ಜಾನ್ ಎಲ್ಲಾ ಬಿಚ್ಕೊಂಡು ಸ್ನಾನ ಮಾಡತಿದಾನೆ. ಎಲ್ಲ ಕಾಣತದೆ’ ಅಂತ ಗಹಗಹಿಸತೊಡಗಿದ. ಅಷ್ಟೇ ಹೊತ್ತಿಗೆ ನಮ್ಮ ಸೈನ್ಸ್ ಮಾಸ್ತರು ಬಂದು ಅದೆಲ್ಲ ಬೋಗಸ್ ಅಂತ ಹೇಳಿ, ಲೆಕ್ಚರ್ ಕೊಟ್ಟು ಹೋದ ಮೇಲೆ ಹರಿ ಸುಳ್ಳುತನವೂ ಬಯಲಾಗಿ, ‘ಅಂಜನ’ದ ಡಬ್ಬಿಯೂ ಬರೀ ತಗಡು ಡಬ್ಬಿಯಾಯಿತು.
ಎಲ್ಲರ ಬಾಲ್ಯದಲ್ಲೂ ಇಂಥ ಫ್ಯಾಂಟಸಿ ಯ ಘಟನೆಗಳು ನಡೆದೇ ಇರುತ್ತವೆ. ಇಂಥ ಭ್ರಮೆಯ ಎಳೆಯಮಂದನ್ನು ಸುಮಾ ಎಂಬ ಹುಡುಗಿಯ ವಾಸ್ತವಿಕ ಬದುಕಿನ ಕಥೆಯ ಜೊತೆ ಕಸಿ ಮಾಡುವದರ ಮೂಲಕ ಡಾ. ಕೆ. ಶಿವಲಿಂಗಪ್ಪ ಬೂದಿಹಾಳು ‘ನೋಟ್‌ಬುಕ್’ ಎನ್ನುವ ಮಕ್ಕಳ ಕಥೆಯೊಂದನ್ನು ಕಟ್ಟುತ್ತಾರೆ. ಇತ್ತೀಚೆಗೆ ಬಿಡುಗಡೆಯಾದ ಅವರ ‘ನೋಟ್‌ಬುಕ್’ ಮಕ್ಕಳ ಕಥಾಸಂಕನದ ಹೆಸರೂ ‘ನೋಟ್‌ಬುಕ್’. ತನ್ನ ಕನಸುಗಳನ್ನೆಲ್ಲ ನೋಟ್‌ಬುಕ್ ನ ಕೊನೆಯ ಪುಟಗಳಲ್ಲಿ ಬರೆದಿಡುತ್ತಿರುವ ಹುಡುಗಿ ಸುಮಾ. ಅಚ್ಚರಿಯೆಂಬಂತೆ ಸೈಕಲ್ ನ ವಿಷಯದಲ್ಲಾಗಲೀ, ಶೂ ಗಳ ವಿಷಯದಲ್ಲಾಗಲೀ ಆಕೆ ಬರೆದಿಟ್ಟ ಕನಸುಗಳು ನನಸಾಗುವ ಚಮತ್ಕಾರಗಳೂ ಘಟಿಸಿವೆ.

ಆಸೆಗಳನ್ನೆಲ್ಲ ಕೊನೇ ಪುಟದಲ್ಲಿ ಬರೆದು ಎಲ್ಲ ಕನಸುಗಗಳನ್ನೂ ನನಸಾಗಿಸಿಕೊಳ್ಳುತ್ತಿದ್ದ ಸುಮಾ ಇಂದು ಮಾತ್ರ ಖಗೋಳಶಾಸ್ತ್ರದ ಪ್ರಾಜೆಕ್ಟ್ ಒಂದರ ವಿಷಯದಲ್ಲಿ ಆಕೆಯನ್ನು ತೀವ್ರವಾಗಿ ಇಕ್ಕಟ್ಟಿಗೆ ಸಿಲುಕಿಸುತ್ತಿದ್ದ ವೀರೇಶ್ ಸರ್ ಕುರಿತು ಬರೆಯುವಾಗ ಮಾತ್ರ ‘ ನೀನು ಅವರಿಗೆ ಶಾಪ ಕೊಡು’ ಎಂದು ಬರೆದಿದ್ದಾಳೆ. ಮುಂದೆ ಇಸ್ರೋ ನಲ್ಲಿ ಆಕೆಯ ಪ್ರಾಜೆಕ್ಟ್ ಗೆ ಬಹುಮಾನ ಬಂದು, ಅದೇ ಸಂತೋಷದಲ್ಲಿ ಕೊನೆಯ ಪುಟ ತೆರೆದರೆ ಅಲ್ಲಿ ವಿರೇಶ್ ಸರ್ ಅಕ್ಷರಗಳು…. ‘…..ಹಿಂದೆ ನಾನು ಸಂಶೋಧನೆಯಲ್ಲಿ ವಿಫಲಗೊಂಡ ವಿಷಯದಲ್ಲಿಯೇ ನೀನು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುವೆ……. ಇದಕ್ಕಾಗಿ ನಾನು ನಿನಗೆ ಅನೇಕ ಬಾರಿ ಕಷ್ಟಗಳನ್ನು ನೀಡಿದ್ದೇನೆ. ಆದರೆ ಅವೆಲ್ಲವೂ ನಿನ್ನೊಳಗಿನ ಪ್ರತಿಭೆಯನ್ನು ನಾನು ಸಾಣೆ ಹಿಡಿಯಲು ಮಾಡಿದ ತಂತ್ರಗಳೇ….. ಥ್ಯಾಂಕ್ಯೂ ಮಗಳೇ” ಹೀಗೆ ನೋಟ್‌ಬುಕ್ ನ ಕೊನೆಯ ಪುಟದಲ್ಲೇ ವೀರೇಶ್ ಸರ್ ರ ಅಕ್ಷರಗಳು ಕಾಣಿಸಿಕೊಳ್ಳುವದರ ಮೂಲಕ ಆ ಹುಡುಗಿಯ ಬದುಕಲ್ಲಿ ಅದುವರೆಗೂ ನಡೆದ ಚಮತ್ಕಾರಗಳಿಗೊಂದು ತಾರ್ಕಿಕ ಅಂತ್ಯವೂ ದೊರೆಯುತ್ತದೆ.
ಇಂಥ ಸುಮಾರು ಎಂಟು ಕಥೆಗಳು ‘ನೋಟ್‌ಬುಕ್’ ನ ಪುಟಗಳಲ್ಲಿವೆ. ಇವುಗಳಲ್ಲಿ ನೋಟಬುಕ್ ಎನ್ನುವ ಕಥೆಯೂ ಸೇರಿದಂತೆ ಮರ‍್ನಾಲ್ಕು ನೀಳ್ಗತೆಗಳು. ಬರಹಗಾರರು ಶಿಕ್ಷಕರಾಗಿದ್ದುದರಿಂದಲೋ ಏನೋ ಕಥೆಗಳ ಕ್ಯಾನವಾಸ್ ಬಹುಭಾಗ ಶಾಲೆಗಳ ಆವಾರದಲ್ಲೇ ಹರವಿಕೊಂಡಿದೆ. ಒಂದಿಲ್ಲೊಂದು ರೀತಿಯಲ್ಲಿ ಕಥೆಗಳಲ್ಲಿ ಮಕ್ಕಳು ಮತ್ತು ಶಾಲೆ ತಳಕು ಹಾಕಿಕೊಂಡಿವೆ. ಮತ್ತು ಆ ಕಾರಣಕ್ಕಾಗಿಯೇ ಅವು ಜೀವನಾನುಭವದ ಸಾರವನ್ನೆಲ್ಲ ತುಂಬಿಕೊಂಡು ಜೀವಂತವಾಗಿವೆ. ಮಕ್ಕಳ ಬದುಕಿನ ಖುಷಿಯ ಭಾಗವೇ ಆಗಿರುವ ನಿಸರ್ಗವೂ ಕಥೆಗಳ ತುಂಬ ತುಂಬಿಕೊಂಡು ತಂಪು ಕೊಡುತ್ತದೆ. ಮಕ್ಕಳ ಕನಸುಗಳಿಗೂ ಇಲ್ಲಿ ಪ್ರಮುಖ ಸ್ಥಾನವಿದೆ. ಆದರೆ ಎಲ್ಲ ಕನಸುಗಳ ದಾರಿಯಲ್ಲೂ ಬದುಕಿನ ವಾಸ್ತವ ಮುಖಾಮುಖಿಯಾಗುತ್ತದೆ. ‘ಹೊಸ ಬಟ್ಟೆ’ಯ ಖುಶಿ ಹೊಸ ಲಂಗದ ಕನಸು ಕಾಣುತ್ತಲೇ ವಾಸ್ತವವನ್ನು ಒಪ್ಪಿಕೊಂಡರೆ, ‘ಲೈಟು ಕಂಬ’ದ ಬಡ್ಯೆಗ ವಾಸ್ತವಕ್ಕೆ ಸಡ್ಡು ಹೊಡೆದು ತಕ್ಕ ಕನಸಾದ ವಿಮಾನ ವನ್ನು ತಾನೇ ತಯಾರಿಸಿ ಜನರ ಶಹಬ್ಬಾಸ್ ಗಳಿಸುತ್ತಾನೆ. ‘ಮಳೆಬಿಲ್ಲು’ ಮತ್ತು ‘ಕೂಸುಮೋಡ’ ದಂಥ ಕಥೆಗಳು ಮತ್ತೆ ಮತ್ತೆ ಮಕ್ಕಳನ್ನು ನಿಸರ್ಗದ ತೆಕ್ಕೆಗೆ ಒಯ್ಯುತ್ತವೆ.
ಕಥೆಗಳು ಬಹುಪಾಲು ಗ್ರಾಮೀಣ ಪರಿಸರದಲ್ಲೇ ಮೈದಳೆದವು. ಒಂದೆರಡು ಕಥೆಗಳಲ್ಲಂತೂ ಬಳ್ಳಾರಿಯ ಹಳ್ಳಿಯ ಗಾಳಿಯೊಂದಿಗೆ ಭಾಷೆಯ ಬನಿಯೂ ಸೇರಿಕೊಂಡಿದೆ.
ಕನ್ನಡದ ಮಕ್ಕಳ ಕಥಾಲೋಕ ಫ್ಯಾಂಟಸಿಯ, ಜಾನಪದ ಕಥೆಗಳಾಚೆ ಹರಡಿಕೊಳ್ಳುತ್ತಿದೆ. ಮಕ್ಕಳಿಗೆ ನೀತಿ ಹೇಳುವ, ಉಪದೇಶ ಮಾಡುವ ಕಥೆಗಳಿಗಿಂತ ಭಿನ್ನವಾಗಿ ಅವರದೇ ಲೋಕದ ಕಥೆಗಳನ್ನು ಮಕ್ಕಳಿಗೆ ಹೇಳಲು ಮಕ್ಕಳ ಸಾಹಿತಿಗಳು ಪ್ರಯತ್ನಿಸುತ್ತಿದ್ದಾರೆ. ಡಾ. ಶಿವಲಿಂಗಪ್ಪ ಹಂದಿಹಾಳು ಇಂಥ ಕೆಲವು ಕಥೆಗಳನ್ನು ‘ನೋಟಬುಕ್’ನಲ್ಲಿ ಬರೆದುಕೊಟ್ಟಿದ್ದಾರೆ.

ಒಂದಕ್ಕಿಂತ ಒಂದು ಚಂದ ಕಥೆಗಳಿವೆ. ಮಕ್ಕಳು ಇಷ್ಟಪಡುವ ಬಣ್ಣಗಳು, ಚಿತ್ರಗಳು ಇಡಿಯ ನೋಟಬುಕ್ ತುಂಬ ಇವೆ. ಚಂದದ ವಿನ್ಯಾಸವಿದೆ. ಅವರು ಇನ್ನೂ ತಾಂತ್ರಿಕವಾಗಿ ಇನ್ನೂ ಎರಡುಹೆಜ್ಜೆ ಮುಂದೆ ಹೋಗಿದ್ದಾರೆ. ಬಹುಷ: ಕನ್ನಡದಕ್ಕೆ ಅಪರೂಪವೆಸಿಗಹುದಾದ ‘ನೋಡುಕಥೆ’ಗಳನ್ನು ಪುಸ್ತಕದಲ್ಲಿ ಅಳವಡಿಸಿದ್ದಾರೆ. ಕಥೆಯಲ್ಲೇ ಇರುವ ಕ್ಯೂ ಆರ್ ಕೋಡ್ ಬಳಸಿ ಕಥೆಗಳ ಓದಿನ ವಿಡಿಯೋ ನೋಡಬಹುದು. ರಂಗಭೂಮಿಯ ಹಿನ್ನೆಲೆಯ ಕಲಾವಿದರು ತುಂಬ ಚೆನ್ನಾಗಿ ಕಥೆಗಳನ್ನು ಓದಿದ್ದಾರೆ.
ಆಧುನಿಕ ಮಕ್ಕಳ ಸಾಹಿತ್ಯದ ಹಾದಿಯ ಮುಂಪಥಿಕರಾದ ಆನಂದ್ ಪಾಟೀಲರು ಇಂದಿನ ಕನ್ನಡ ಮಕ್ಕಳ ಸಾಹಿತ್ಯದ ಸ್ಥಿತಿಗತಿಗಳನ್ನು ವಿಶ್ಲೇಷಿಸುತ್ತಲೇ ಪುಸ್ತಕದ ಕುರಿತ ವಿವರವಾದ ಹಿನ್ನುಡಿ ಬರೆದಿದ್ದಾರೆ. ಬೆನ್ನಿನ ಪುಟದಲ್ಲಿ ಕೇಶವ ಮಳಗಿಯವರ ಬರಹವಿದೆ.
ಪುಸ್ತಕವನ್ನು ‘ಕವನ ಪ್ರಕಾಶನ’ ಪ್ರಕಾಶಿಸಿದೆ. ಪುಸ್ತಕದ ಬೆಲೆ ಮುನ್ನೂರು ರೂಪಾಯಿಗಳು. ಇಷ್ಟೆಲ್ಲ ವೈಶಿಷ್ಟ್ಯಗಳಿರುವ ಈ ಪುಸ್ತಕ ಈ ಬೆಲೆಗೆ ಯೋಗ್ಯವಾದದ್ದೇ.
ಆದರೆ…… ಸುಮಾರು ಎರಡು ದಶಕಗಳ ಹಿಂದಿನ ಮಾತು. ‘ಚಿಂತನ ಪುಸ್ತಕ ಮಳಿಗೆ’ ಯ ನಾವು ಬಸ್ಸುಗಳಲ್ಲಿ ಪುಸ್ತಕ ಮಾರುತ್ತಿದ್ದ ದಿನಗಳು. ಕೆಲವು ಬಾರಿ ಮಕ್ಕಳ ಪುಸ್ತಕಗಳನ್ನು ಒಯ್ಯುತ್ತಿದ್ದೆವು. ಅವುಗಳ ಬೆಲೆ ಸುಮಾರಿಗೆ ಹತ್ತು ರೂಪಾಯ ಇರುತ್ತಿತ್ತು. ಇಂಥ ಪುಸ್ತಕಗಳನ್ನು ಕೊಳ್ಳುತ್ತಿದ್ದವರು ಹೆಚ್ಚಾಗಿ ಗ್ರಾಮೀಣ ಮಹಿಳೆಯರು. ಮನೆಗೆ ಕೊಂಡೊಯ್ದು ಮಕ್ಕಳಿಗೆ ಕೊಡಬೇಕೆಂಬ ಆಸೆ ಅವರಿಗಿದ್ದರೂ ಹತ್ತು ರೂಪಾಯಿ ಕೊಡುವದೂ ಅವರಿಗೆ ಕಷ್ಟವಾಗುತ್ತಿತ್ತು. ಆ ಕಾರಣಕ್ಕಾಗಿ ನಾವೇ ಒಂದು ಮಕ್ಕಳ ನಾಟಕ, ಮೂರು ಕಥೆ, ಕೆಲವು ಹಾಡುಗಳನ್ನು ಸೇರಿಸಿ ‘ ಆಡು ಬಾ; ಹಾಡು ಬಾ’ ಎನುವ ಕಿರು ಪುಸ್ತಕ ತಂದೆವು. ಅದೇ ಮಹಿಳೆಯರು ಖುಶಿ ಖುಶಿಯಿಂದ ಪುಸ್ತಕ ಕೊಳ್ಳುವಂತಾಯಿತು.
ಮಕ್ಕಳ ಸಾಹಿತ್ಯ ಮಕ್ಕಳನ್ನ ಮುಟ್ಟಬೇಕು ಆಂತಾದರೆ ಮೊದಲು ಪಾಲಕರ ಕೈಗೆ ಎಟುಕಬೇಕು. ಮಕ್ಕಳಿಗೆ ಬೇರೆಯೇ ಅನುಭವ ನೀಡಬಲ್ಲ ಇಂಥ ಪುಸ್ತಕಗಳನ್ನು ಪ್ರಕಾಶಿಸಲು ದೊಡ್ಡ ದೊಡ್ಡ ಪ್ರಕಾಶಕರು ಮುಂದೆ ಬರಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಗಳು ಪ್ರಕಟವಾದಾಗ ಬೆಲೆಯೂ ಕಡಿಮೆಯಾಗಿ ಹೆಚ್ಚು ಹೆಚ್ಚು ಮಕ್ಕಳಿಗೆ ಪುಸತಕಗಳು ತಲುಪಲು ಸಾಧ್ಯ.






ಥ್ಯಾಂಕ್ಯೂ ಅವಧಿ