ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಿಟಕಿಯೊಂದು ತೆರೆದಿದೆ..

-ಶಿವಯೋಗಿ ಕಳ್ಳಿಮಠ

ಕನಸಿನ ಪರ್ಷಿಯ

ಕಿಟಕಿಯೊಂದು ತೆರೆದಿದೆ.
ಇಲ್ಲ ಇದು..
ಹೆಣ್ಣಿನ ಕಾಲುಗಳು
ಒದ್ದು ಕೆಡವಿದ ಗೋಡೆಯ
ಕಿಂಡಿ ಅಷ್ಟೇ.

ಸೂರ್ಯ ರಶ್ಮಿಯ
ಮೊಗೆದು ಬಾಚಿಕೊಳ್ಳುತಿವೆ.
ಕತ್ತಲ ಗವಿಯೊಳಗೆ ನರಳುತ್ತಿದ್ದ,
ಇರುವಿಕೆಯನ್ನೇ ಮರೆತಿದ್ದ
ಕಣ್ಣುಗಳು.
ಬೆಳಕ ವಾಸನೆ ಸಿಕ್ಕಿದ್ದೇ.
ಚೀತ್ಕರಿಸುತ್ತಿವೆ.
ಗರ್ಭದಲ್ಲಿ ಮಾತ್ರ ಬೆಳಕು
ಕಂಡ ಆತ್ಮಗಳು.

ಬಣ್ಣವೆಂದರೆ ಕಪ್ಪು ಮಾತ್ರ
ಎಂದು ತಿಳಿದಿದ್ದ
ಬಾಯಿ ಉಣ್ಣಲು ಮಾತ್ರ
ತೆಗೆದು, ಮುಚ್ಚುತಿದ್ದ.
ತಮ್ಮ ದ್ವನಿಗೆ ತಾವೇ ಮೋಹಗೊಳ್ಳತ್ತ.
ನಿಟ್ಟುಸಿರ ಗೀತೆಯೊಂದು
ಮುಗಿಲು ತಲುಪುವಂತೆ.
ಗಟ್ಟಿಯಾಗಿ ಅಳುತಿವೆ
ಮೊದಲ ಬಾರಿ.

ಬೇರನ್ನು ಹುಡುಕುತ್ತಿರುವ
ಈ ಚಿಗುರುಗಳಿಗೆ
ಅವ್ವನ ಗರ್ಭದ ಸಾಂತ್ವನ
ದೊರಕಲಿ.
ಹೆಬ್ಬಯಕೆಯ ತುಡಿತದಿಂದ ನೆಗೆದು
ಹಾರುತ್ತಿರುವ ಗಾಳಿಪಟವೇ
ಆಕಾಶವಾಗಲಿ.

ಬೆಂಕಿಯ ಗಿಡದಲ್ಲಿ.
ಬೆಳಕಿನ ಹೂ ಬಿರಿದು
ಗಂದವನ್ನೇ ಮಾತಾಡಲಿ..
ಈ ಗರ್ಭ ನೋವುಂಡಾದರೂ
ಬದುಕನ್ನು ಹಡೆಯಲಿ.

‍ಲೇಖಕರು Admin

21 January, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading