ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾಸು ಕುಡಿಕೆ: ಶೇರು ಮೌಲ್ಯಮಾಪನ ಮತ್ತು 'ನಿರೀಕ್ಷೆ'ಯ ಎಡವಟ್ಟು!

ಕಾಸು ಕುಡಿಕೆ- 3

-ಜಯದೇವ ಪ್ರಸಾದ ಮೊಳೆಯಾರ
Rule No.1:   Do not lose money!
Rule No.2:   Never forget Rule No.1 !!                                        -Warren Buffet
1 ನೇ ಖಾಯಿದೆ:  ದುಡ್ಡು ಕಳೆದುಕೊಳ್ಳಬೇಡಿ !
2 ನೇ ಖಾಯಿದೆ:  1ನೇ ಖಾಯಿದೆಯನ್ನು ಎಂದಿಗೂ ಮರೆಯಬೇಡಿ !!                 -ವಾರೆನ್ ಬಫೆಟ್

ಒಂದು ವಿಶಾಲವಾದ ಕೋಣೆಯಲ್ಲಿ ನಿರಂತರವಾಗಿ ಅಡ್ಡಾದಿಡ್ಡಿ ಪುಟಿದೇಳುವ ಸಾವಿರಾರು ಚೆಂಡುಗಳಿದ್ದಂತೆ, ಶೇರು ಬಜಾರಿನಲ್ಲಿ ಸಾವಿರಾರು ಶೇರುಗಳ ಬೆಲೆಗಳು ನಿರಂತರವಾಗಿ ಏರಿಳಿಯುತ್ತಲೇ ಇರುತ್ತದೆ. ಒಂದು ಕ್ಷಣ ಒಂದು ಶೇರು ಇಲ್ಲಿದ್ದರೆ, ಮರುಕ್ಷಣ ಅಲ್ಲಿ. ಮುಂದೆ ಎಲ್ಲಿ ಎಂದು ಹೇಳಲಾಗದು. ಒಂದು ರೀತಿಯಲ್ಲಿ ಹುಚ್ಚು ಹಿಡಿದಂತೆ ನೆಗೆದಾಡುವ ಶೇರು ಬೆಲೆಗಳ ಹಿಂದೆ ಯಾವುದಾದರೂ ತಾರ್ಕಿಕ ನೆಲೆ ಇದೆಯೇ? ಅಥವ ಇದೆಲ್ಲಾ ಬರೇ ಹುಚ್ಚೇ? – ಇದು ಶೇರಿನಲ್ಲಿ ಹಣ ಹೂಡುವ ಎಲ್ಲರನ್ನೂ ಕಾಡುವ ಪ್ರಶ್ನೆ. ಶೇರು ಬೆಲೆಗಳ ಏರಿಳಿತದ ಮರ್ಮವನ್ನು ಭೇದಿಸಿ ಒಮ್ಮೆ ಕರಗತ ಮಾಡಿಕೊಂಡರೆ ಅದೊಂದು ಆರ್ಥಿಕ ನಿರ್ವಾಣವೇ ಸರಿ. ದುಡ್ಡು ಬಾಚಿಕೊಳ್ಳಲು ಎರಡು ಕೈಗಳು ಸಾಲವು. ಹಾಗಾಗಿ, ಶೇರು ಪೀಡಿತ ಗಂಡುಗಲಿಗಳು ಈ ಗುಂಗಿನಲ್ಲೇ ಸದಾ ಲೀನವಾಗಿರುತ್ತಾರೆ, ತಮ್ಮ ತಾರುಣ್ಯದ ಕನಸುಗಳ ದಿನಗಳಂತೆ.
ನನ್ನ ನೆರೆಮನೆಯ ಶಾ. ಲಾ. ಉಪಾಧ್ಯಾಯರು ಮೊನ್ನೆ ಮೊನ್ನೆ ತಾನೆ ನಿವೃತ್ತಿಗೊಂಡು  ತಿರುಪತಿ ತಿಮ್ಮಪ್ಪನಿಗೆ ಹರಕೆ ಹೇಳಿ ತಮ್ಮ ಪಿ.ಎಫ್ ದುಡ್ಡಿನಿಂದ 100 ರಿಲಾಯನ್ಸ್ ಇಂಡಸ್ಟ್ರೀಸ್ ಶೇರುಗಳನ್ನು ಪ್ರತಿ ಶೇರು ಒಂದರ 1000 ರೂಪಾಯಿಗಳಂತೆ ಖರೀದಿಸುತ್ತಾರೆ. ಮರುದಿನ ಬೆಳಗ್ಗೆ ಉಪಾಧ್ಯಾಯರು ವೆಂಕಟೇಶ ಸುಪ್ರಭಾತವನ್ನು ಭಕ್ತಿಯಿಂದ ಕೇಳಿ, ಆಮೇಲೆ ದಿನದ ಪೇಪರು ತೆರೆದು ನೋಡುತ್ತಾರೆ. ರಿಲಾಯನ್ಸ್ ಕಂಪೆನಿಗೆ ಕೃಷ್ಣಾ-ಗೋದಾವರಿ ಬೇಸಿನ್ನಲ್ಲಿ ಹೊಸ ತೈಲ ನಿಕ್ಷೇಪವೊಂದರ ಪತ್ತೆಯಾಗಿರುತ್ತದೆ. ಇದು ಕಂಪೆನಿಯ ಭವಿಷ್ಯಕ್ಕೆ ಪೂರಕವಾದ ಅಂಶ. ಭವಿಷ್ಯದ ಆದಾಯ ಹೆಚ್ಚಾಗುವ ಸಂಭವ. ಆ ದಿನ ಮಾರುಕಟ್ಟೆಯಲ್ಲಿ ರಿಲಯನ್ಸ್ ಆ ಸಿಹಿ ಸುದ್ದಿಯ ಬಲದಿಂದ 50 ರೂ ಹೆಚ್ಚಿಸಿಕೊಂಡು 1050 ಕ್ಕೆ ಏರುತ್ತದೆ. ಉಪಾಧ್ಯಾಯರು ಖುಶಿಯಿಂದ ಬೀಗುತ್ತಾರೆ. ತಿಮ್ಮಪ್ಪನಿಗೆ ಇನ್ನೊಮ್ಮೆ ಭಕ್ತಿಯಿಂದ ಕೈಮುಗಿಯುತ್ತಾರೆ.
ಅದಕ್ಕೂ ಮರುದಿನ, ವಕೀಲ ರಾಮ್ಜೇಠ್ ಮಲಾನಿಯವರು ಸುಪ್ರೀಂ ಕೋರ್ಟ್ ನಲ್ಲಿ ನಡೆಯುತ್ತಿರುವ ಅಂಬಾನಿ ಸಹೋದರರ ಕೇಸಿನಲ್ಲಿ ತಮ್ಮ ಅದ್ಭುತ ವಾಕ್ಚಾತುರ್ಯದಿಂದ ಕೋರ್ಟ್ ನಲ್ಲಿ ರಿಲಾಯನ್ಸ್ ಇಂಡಸ್ಟ್ರೀಸ್ ವಿರುದ್ಧ ವಾದ ಮಂಡಿಸುತ್ತಾರೆ. ಇದನ್ನು ಕೇಳಿದ ಜನತೆಗೆ ರಿಲಾಯನ್ಸ್ ಈ ಕೇಸಿನಲ್ಲಿ ಸೋಲಬಹುದು ಎಂಬ ಆತಂಕ ಮೂಡುತ್ತದೆ. ಇದು ಕಂಪೆನಿಯ ಆದಾಯಕ್ಕೆ ಮಾರಕ ಸಂಗತಿ. ಹಾಗಾಗಿ ಅಂದು ಬೇಡಿಕೆ ಕಡಿಮೆಯಾಗಿ ರಿಲಾಯನ್ಸ್ 100 ರೂ ಕಳೆದುಕೊಂಡು 950 ಕ್ಕೆ ಕ್ಲೋಸ್ ಆಗುತ್ತದೆ. ಉಪಾಧ್ಯಾಯರಿಗೆ ಆವಾಗ ಬೇಸರವಾದರೂ ಮುಂದೊಂದು ದಿನ ಉತ್ತಮ ತ್ರೈಮಾಸಿಕ ಸಾಧನೆಯ ಮೇರೆಗೆ  ರಿಲಾಯನ್ಸ್ 1100 ರೂಪಾಯಿಗೆ ಏರಿದಾಗ ಮತ್ತೆ ಖುಶಿಯಿಂದ ಉಬ್ಬುತ್ತಾರೆ; ದೇವರಿಗೆ ಹಣ್ಣುಕಾಯಿ ಆರ್ಪಿಸುತ್ತಾರೆ.
ಹೀಗೆ ಸಿಹಿಸುದ್ದಿಗೆ ಹಿಗ್ಗುತ್ತಾ, ಕಹಿಸುದ್ದಿಗೆ ಕುಗ್ಗುತ್ತಾ ಶೇರುಗಳೂ, ಒಟ್ಟಿಗೆ ಉಪಾಧ್ಯಾಯರೂ ತಮ್ಮ ಸಹಬಾಳ್ವೆ ನಡೆಸುತ್ತಿದ್ದಾರೆ. ಬೆಲೆಗಳ ಏರಿಳಿತದ ಈ ಕ್ರಮವನ್ನು ಅರ್ಥೈಸಿಕೊಂಡ ಶಾ. ಲಾ. ಉಪಾಧ್ಯಾಯರು ತಮ್ಮ ಶೇರು ಖರೀದಿಯ ರಣ ತಂತ್ರವನ್ನು ರೂಪಿಸಿಯೇ ಬಿಡುತ್ತಾರೆ. ಯಾವುದೇ ಕಂಪೆನಿಯ ಸಿಹಿಸುದ್ದಿ ಬಂದೊಡನೆಯೇ ಎಲ್ಲರಿಗೂ ಮೊದಲಿಗರಂತೆ ಆ ಕಂಪೆನಿಯ ಶೇರನ್ನು ಖರೀದಿಸಬೇಕು ಎಂದುಕೊಳ್ಳುತ್ತಾರೆ. ಸಿಹಿ ಸುದ್ದಿಗೆ ಶೇರು ಬೆಲೆ ಮೇಲೇರಲೇ ಬೇಕಲ್ಲವೇ?
ಮೊನ್ನೆ ಒಂದು ದಿನ ಹೀಗೆ ಆಯಿತು: ವಿಪ್ರೋ ತ್ರೈಮಾಸಿಕ ರಿಸಲ್ಟ್ಸ್ ಬಂದಿತ್ತು. ವಿಪ್ರೋ ಆದಾಯದಲ್ಲಿ 25% ವೃದ್ಧಿಯನ್ನು ದಾಖಲಿಸಿತ್ತು. ಇದೊಂದು ಭಾರೀ ಉತ್ತಮ ಬೆಳವಣಿಗೆ ಎಂದುಕೊಂಡ ಶಾ. ಲಾ. ಉಪಾಧ್ಯಾಯರು ಶೇರೊಂದರ 700 ರೂಪಾಯಿಯಂತೆ ಮಾರುಕಟ್ಟೆಯ ಬೆಲೆಯಲ್ಲಿ 100 ವಿಪ್ರೋ ಕೂಡಲೇ ಕೊಂಡರು. ಉಪಾಧ್ಯಾಯರು ಮುಗಿಬಿದ್ದು 100 ವಿಪ್ರೋ ಕೊಂಡು ಅವರ ಎಕೌಂಟ್ 70,000 ರೂಪಾಯಿಗಳಿಗೆ ಡೆಬಿಟ್ ಆದ ಮರುಕ್ಷಣದಿಂದಲೇ ವಿಪ್ರೋ ಶೇರು ಕುಸಿಯತೊಡಗಿತು. ಉಪಾಧ್ಯಾಯರು ಬೆವರಲಾರಂಭಿಸಿದರು. ಏನು ಮಾಡುವುದು ಎಂದರಿಯದೆ ಅತೀವ ಆತಂಕಕ್ಕೆ ಒಳಪಟ್ಟರು. ದಿನದ ಕೊನೆಗೆ ವಿಪ್ರೋ 5% ದಷ್ಟು ಕುಸಿದಿತ್ತು. ರಾತ್ರಿಯಿಡೀ ಭಜನೆಯಲ್ಲೇ ಕಾಲ ಕಳೆದರು. ವಿಪ್ರೋ ಮರುದಿನ ಇನ್ನೂ 2% ಕುಸಿಯಿತು. ಕೊನೆಗೆ, 5000 ರೂಪಾಯಿಯ ನಷ್ಟದೊಂದಿಗೆ ಘಾಸಿಗೊಂಡ ಉಪಾಧ್ಯಾಯರು ವಿಪ್ರೋ ದಿಂದ ಹೊರ ಬಂದರು. ಈಗ ವಿಪ್ರೋದ ಹೆಸರು ಕೇಳಿದರೂ ಬೆಚ್ಚಿ ಬೀಳುವ ಉಪಾಧ್ಯಾಯರಿಗೆ ನಡೆದ ಅನಾಹುತದ ಅರಿವಾಗಲಿಲ್ಲ. ಉತ್ತಮ ತ್ರೈಮಾಸಿಕ ಸಾಧನೆಯ ಬಳಿಕವೂ ವಿಪ್ರೋ ಏಕೆ ಕುಸಿಯಿತು? ಇದು ಮುಖ್ಯ ಪ್ರಶ್ನೆ.
ಕಳೆದೆರಡು ದಶಕಗಳಿಂದ ಭಾರತೀಯ ಶೇರು ಮಾರುಕಟ್ಟೆಯನ್ನು ತಮ್ಮ ಮುಷ್ಟಿಯಲ್ಲಿರಿಸಿಕೊಂಡಿರುವ ವಿದೇಶಿ ಹಾಗೂ ಸ್ವದೇಶಿ ಸಾಂಸ್ಥಿಕ ಹೂಡಿಕೆದಾರರು  (Foreign Institutional Investors ಮತ್ತು  Domestic Institutional Investors) ಮತ್ತು ದೊಡ್ಡ ದೊಡ್ಡ ಹೂಡಿಕೆದಾರರು ಎಲ್ಲಾ ಕಂಪೆನಿಗಳ ಶೇರಿನ ಮೌಲ್ಯಮಾಪನವನ್ನು ನಿರಂತರವಾಗಿ ಮಾಡುತ್ತಲೇ ಇರುತ್ತಾರೆ. ಅದರಲ್ಲಿ ಹಾಲಿ ವರ್ಷದ ಆದಾಯ (E.P.S) ಅಲ್ಲದೆ ಭಾವಿ ವರ್ಷಗಳ ನಿರೀಕ್ಷಿತ ಆದಾಯವೂ ಸೇರಿರುತ್ತದೆ. ಜಾಗತಿಕ ಮಾರುಕಟ್ಟೆ, ಔದ್ಯೋಗಿಕ ವಾತಾವರಣ, ದೇಶದ ಆರ್ಥಿಕ ಪ್ರಗತಿ, ಕಂಪೆನಿ ನ್ಯೂಸ್, ಗಾಸಿಪ್, ವಿಶ್ಲೇಶಣೆಗಳು ಇತ್ಯಾದಿಗಳ ಮೇಲೆ ಶೇರುಗಳ ಬೆಲೆಗಳನ್ನು ನಿರಂತರವಾಗಿ ಪರಿಷ್ಕರಿಸುತ್ತಲೇ ಇರುತ್ತಾರೆ ಹಾಗೂ ಅದೇ ಬೆಲೆಗಳನ್ನು ಆಧಾರವಾಗಿಟ್ಟು ಶೇರುಗಳನ್ನು ಖರೀದಿ-ಬಿಕರಿ ಮಾಡುತ್ತಾರೆ. ಅಂತೆಯೇ ಮಾರುಕಟ್ಟೆಯಲ್ಲಿ ಬೆಲೆಗಳು ಏರಿಳಿಯುತ್ತಾ ಇರುತ್ತವೆ.
ಉಪಾಧ್ಯಾಯರು ವಿಪ್ರೋ ಖರೀದಿಸಿದ ಸಂದರ್ಭದಲ್ಲಿ ಮಾರುಕಟ್ಟೆ ಆಗಾಗಲೇ ವಿಪ್ರೋದಲ್ಲಿ 40% ದಷ್ಟು ಆದಾಯದ ವೃದ್ಧಿಯ ನಿರೀಕ್ಷೆ ಹೊಂದಿತ್ತು. ಮಾರ್ಕೆಟ್ ಬೆಲೆಯಾದ ರೂ 700 ರಲ್ಲಿ 40% ಬೆಳವಣಿಗೆಯ ನಿರೀಕ್ಷೆಯೂ ಅಡಕವಾಗಿತ್ತು. 25% ಉತ್ತಮ ಏರಿಕೆಯಾಗಿದ್ದರೂ ಕೂಡಾ ನಿರೀಕ್ಷಿತ 40% ಸಾಕಾರವಾಗದೆ ಹೋದದ್ದೇ ಮಾರುಕಟ್ಟೆಯ ನಿರಾಸೆಗೆ ಕಾರಣ. ಹೊಸ ಮೌಲ್ಯಮಾಪನಕ್ಕನುಸಾರ ಶೇರು ಬೆಲೆ ಕುಸಿಯಿತು. ಏರುತ್ತಿರುವ ಬಿ.ಪಿ ಯ ನಡುವೆ ಉಪಾಧ್ಯಾಯರು ಶೇರು ಮೌಲ್ಯಮಾಪನ ಮತ್ತು ಅದರೊಳಗೆ ‘ನಿರೀಕ್ಷೆ’ಯ (Expectation) ಮಹತ್ವದ ಬಗ್ಗೆ ಪ್ರಾಥಮಿಕ ಪಾಠ ಕಲಿತರು.
ಹೀಗೆ ಮಾರುಕಟ್ಟೆಯಲ್ಲಿ ಪ್ರತಿಯೊಂದು ಸುದ್ದಿಯನ್ನೂ ‘ನಿರೀಕ್ಷೆ’ಯ ಮಾನದಂಡದಲ್ಲಿ ನೋಡಬೇಕು. ನಮಗೆ ಸಿಕ್ಕ ಸುದ್ದಿಯನ್ನು ಮಾರುಕಟ್ಟೆ ಈಗಾಗಲೇ ಅರಿತಿದ್ದು, ಶೇರು ಬೆಲೆಯಲ್ಲಿ ಅದನ್ನು ಗಣನೆಗೆ ತೆಗೆದುಕೊಂಡಿದ್ದಲ್ಲಿ (Discountಮಾಡಿದ್ದಲ್ಲಿ) ಆ ಸುದ್ದಿಯ ಘೋಷಣೆಯಾದ ಕೂಡಲೇ ಅದು ಶೇರು ಬೆಲೆಯನ್ನು ಅಷ್ಟಾಗಿ ಬಾಧಿಸುವುದಿಲ್ಲ. ಹೊರಬಿದ್ದ ಸುದ್ದಿ ಅನಿರೀಕ್ಷಿತವಾದಲ್ಲಿ ಮಾತ್ರ ಶೇರು ಬೆಲೆ ಅದಕ್ಕನುಸಾರವಾಗಿ ಏರಿಳಿಯಬಹುದು. ಅಲ್ಲದೆ ನಿರೀಕ್ಷೆಗಿಂತ ಭಿನ್ನವಾದ ಅಂಶಗಳಿದ್ದಲ್ಲಿ ಅಷ್ಟರಮಟ್ಟಿಗೆ ಬೆಲೆ ಹೆಚ್ಚು-ಕಡಿಮೆಯಾದೀತು. ಆದ್ದರಿಂದ ಶೇರು ಬೆಲೆಯನ್ನು ಪ್ರೆಡಿಕ್ಟ್ ಮಾಡುವಾಗ ಮತ್ತು ಸುದ್ದಿಗಳ ಆಧಾರದಲ್ಲಿ ಅವುಗಳಲ್ಲಿ ದುಡ್ಡು ಹೂಡುವಾಗ ಮಾರುಕಟ್ಟೆಯ ಪೂರ್ವಭಾವಿ ನಿರೀಕ್ಷೆಯನ್ನು ಗಮನದಲ್ಲಿ ತೆಗೆದುಕೊಳ್ಳಲೇ ಬೇಕು. ಈ ಬಗ್ಗೆ ಮಾಹಿತಿ ಶೇರು ಪಂಡಿತರ ಲೇಖನಗಳಲ್ಲಿ, ಟಿ.ವಿ ಶೋಗಳಲ್ಲಿ ಆಗಾಗ್ಗೆ ಬರುತ್ತಿರುತ್ತದೆ. ಈ ಬಗ್ಗೆ ವಿಶೇಷ ಹಾಗೂ ನಿರಂತರ ಅಧ್ಯಯನದ ಅಗತ್ಯ ಬರುತ್ತದೆ. ಅಧ್ಯಯನವಿಲ್ಲದೆ ಬರೇ ಸುದ್ಧಿಯ ಆಧಾರದ ಮೇಲೆ ಏಕಾಏಕಿ ಹಣ ಹೂಡಿದರೆ ಎಡವಟ್ಟಾದೀತು.
=====================================
ಶೇರು ಮೌಲ್ಯ ಮಾಪನ (Valuation) ಹೇಗೆ?

ಶೇರು ಮೌಲ್ಯಮಾಪನಕ್ಕೆ, ಒಂದು ಕಂಪೆನಿಯ ಆದಾಯ ಅಥವ ಅರ್ನಿಂಗ್ಸ್ ಮೂಲಭೂತವಾಗಿ ಅತಿಮುಖ್ಯವಾಗುತ್ತದೆ. ಕಂಪೆನಿಯ ಒಟ್ಟು ವಾರ್ಷಿಕ ಆದಾಯವನ್ನು ಶೇರುಗಳ ಸಂಖ್ಯೆಯಿಂದ ಭಾಗಿಸಿದರೆ, ಪ್ರತಿ ಶೇರಿನ ಆದಾಯ (Earnings per share or E.P.S) ಸಿಗುತ್ತದೆ. ಒಂದು ಕಂಪೆನಿಯ ಒಂದು ಶೇರು ಕೊಳ್ಳುವುದು ಎಂದರೆ ಆ ಕಂಪೆನಿಯ ಒಂದು ಪ್ರತಿ ಶೇರಿನ ಆದಾಯವನ್ನು ಅಥವ E.P.Sಅನ್ನು ಖರೀದಿಸಿ ನಮ್ಮದಾಗಿಸಿಕೊಂಡಂತೆ.
ಈಗ ಪ್ರಶ್ನೆ ಬರುವುದು, ಈ ‘ಅರ್ನಿಂಗ್ಸ್ ಪರ್ ಶೇರ್’ ಅಥವ E.P.S ಅನ್ನು ಎಷ್ಟು ಹೆಚ್ಚುವರಿ ಮೊತ್ತ ಕೊಟ್ಟು ಕೊಳ್ಳಬಯಸುತ್ತೀರಿ ಎನ್ನುವುದು. ಇದು ಆ ಶೇರಿನ ಗುಣಮಟ್ಟವನ್ನು ಹೊಂದಿಕೊಂಡಿದೆ. ಭವಿಷ್ಯದ ಉತ್ತಮ ಸಾಧನೆಯ ನಿರೀಕ್ಷೆಯಿರುವ ಕಂಪೆನಿಗಳಿಗೆ ಬೇಡಿಕೆ ಜಾಸ್ತಿ ಇದ್ದು ಅವುಗಳ ಶೇರುಗಳಿಗೆ ಜಾಸ್ತಿ ಬೆಲೆಕೊಟ್ಟು ಕೊಳ್ಳುವ ಮನಸ್ಸು ಮಾಡುತ್ತೀರಿ. ಈ ರೀತಿ ಭವಿಷ್ಯದ ನಿರೀಕ್ಷೆಗೆ ಅನುಗುಣವಾಗಿ ತಮ್ಮ ಆದಾಯದ ಏಷ್ಟೋ ಪಟ್ಟು ಜಾಸ್ತಿ ಬೆಲೆಗೆ ಒಳ್ಳೆಯ ಕಂಪೆನಿಯ ಶೇರುಗಳು ಮಾರುಕಟ್ಟೆಯಲ್ಲಿ ಬಿಕರಿಯಾಗುತ್ತವೆ. ಇದನ್ನು Price/Earnings Ratio ಅಥವಾ  P/E Ratio ಎಂದು ಕರೆಯುತ್ತಾರೆ. ಇದು 5, 10, 20, 30, 50, 100 ಎಷ್ಟಾದರೂ ಆಗಿರಬಹುದು. ಅದು ಶೇರಿನಿಂದ ಶೇರಿಗೆ, ಉದ್ಯಮದಿಂದ ಉದ್ಯಮಕ್ಕೆ ಅವುಗಳ ಸಾಧನೆಯನ್ನು ಅನುಸರಿಸಿ ವ್ಯತ್ಯಾಸವಾಗುತ್ತದೆ. ಅಷ್ಟೇ ಅಲ್ಲದೆ, ಒಟ್ಟಾರೆ ಮಾರುಕಟ್ಟೆ ಬುಲ್ಲಿಶ್ ಆಗಿದ್ದಾಗ ಎಲ್ಲಾ ಕಂಪೆನಿಯ P/E ಗಳು ಜಾಸ್ತಿಯಾಗಿರುತ್ತದೆ. ಮಾರುಕಟ್ಟೆ ಕಾಂತಿಕಳೆದುಕೊಂಡು ಬೇರಿಶ್ ಆಗಿರುವಾಗ ಎಲ್ಲಾ ಶೇರುಗಳ P/E ಗಳು ಕುಸಿದಿರುತ್ತವೆ.
ಕಂಪೆನಿಯ ವ್ಯವಹಾರ ಮತ್ತು ನಿರೀಕ್ಷೆಯನ್ನು ಹೊಂದಿಕೊಂಡು E.P.S ಮತ್ತುP/E – ಇವೆರಡೂ ಏರಿಳಿಯುತ್ತಾ ಇರುತ್ತವೆ. ಒಂದು ಕಂಪೆನಿಯ ಶೇರು ಬೆಲೆ ಎಂದರೆ ಇವೆರಡು ಮಾಪನಗಳ ಮಿಶ್ರಫಲ.
====================================

‍ಲೇಖಕರು avadhi

17 March, 2010

6 Comments

  1. sreenivasa

    kannadadalli athuttamavvagi sheru hoodike bagge bareyuttidderi.heege munduvarisiri.vandanegalu

    • jayadev

      ellarigU dhanyavaada
      jayadev

  2. Sreeja VN

    Very good write up… the examples u quote are very apt. though interested in commerce, i hate reading the commerce page in news paper, becoz i feel its a waste of time and energy.
    But The write ups like this are an exception. ur writing style can bring even complex commercial topics nearer to common man . thanks

  3. ರಂಜಿತ್

    ಬಹಳ ಸುಲಭವಾಗಿ ಅರ್ಥವಾಗುವಂತೆ ವಿಶದೀಕರಿಸಿದ್ದೀರಿ… ಥ್ಯಾಂಕ್ಯೂ…

  4. shankar

    Very good write

  5. Rajshekar k

    Dear i need information about future and opition plesea help me

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading