ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾಸು ಕುಡಿಕೆ: ಭಲ್ಲೂಕರಾಯರೇ ಹೀಗೆ!

ಕಾಸು ಕುಡಿಕೆ -17 -ಜಯದೇವ ಪ್ರಸಾದ ಮೊಳೆಯಾರ ಶಿವಪೂಜೆಯಲ್ಲಿ ಕರಡಿ ನುಗ್ಗಿದಂತೆ…

There was a time when a fool and his money were soon parted. But, now it happens to everybody –  Adlai. E. Stevenson. ಒಬ್ಬ ಮೂರ್ಖ ಮತ್ತು ಆತನ ದುಡ್ಡು ಶೀಘ್ರದಲ್ಲಿಯೇ ಅಗಲುವ ಒಂದು ಕಾಲವಿತ್ತು. ಆದರೆ ಈಗ ಅದು ಎಲ್ಲರೊಡನೆಯೂ ನಡೆಯುತ್ತದೆ- ಅಡ್ಲೈ. ಇ. ಸ್ಟೀವನ್ಸನ್.
ಭಲ್ಲೂಕರಾಯರಿಗಾಗಿ ಹುಡುಕಾಡಿ ಹುಡುಕಾಡಿ, ಬಳಲಿ bend-ಆಗಿ ಸೋತು ಸುಣ್ಣವಾದೆ. (ಇವೆಲ್ಲಾ ಹೇಗಾಗುತ್ತೋ, ನನಗಿನ್ನೂ ಗೊತ್ತಿಲ್ಲ).  ಎಲ್ಲೆಲ್ಲಿ ಹುಡುಕಾಡಿದರೂ ಅವರು ನನ್ನ ಕಣ್ಣಿಗೆ ಬೀಳಲಿಲ್ಲ!! (ಕಣ್ಣಿಗೆ ಬಿದ್ದಿದ್ದರೆ ಇನ್ನೂ ಕಷ್ಟವಿತ್ತು ಅಲ್ಲವೆ?) ಅಷ್ಟೇ ಏಕೆ? ಮೊಬೈಲಿನಲ್ಲಿ ಕಿವಿಗೂ ಬೀಳಲಿಲ್ಲ. ಎರಡು ವಾರಗಳಿಂದ ಅವರನ್ನು ತಂದು ನಿಮ್ಮ ಮುಂದೆ ತಂದು ನಿಲ್ಲಿಸಬೇಕೆಂದು ಹಠ ಬಿಡದ ತ್ರಿವಿಕ್ರಮನಂತೆ ತಿರುಗಾಡುತ್ತಿದ್ದೇನೆ. ಜೊತೆಗೆ ಉದಯವಾಣಿಗೆ ಲೇಖನ ಸಬ್ಮಿಟ್ ಮಾಡುವ ಶನಿವಾರದ ಗಡು ಸಮೀಪಿಸುತ್ತಿದ್ದಂತೆ ಏರುತ್ತಿರುವ ಟೆನ್ಶನ್ ಬೇರೆ. ಇನ್ನೇನು, ಅಂಶುಮಾಲಿಯವರು ಹೇಳಿದಂತೆ ಮಣಿಪಾಲ ಪೋಲಿಸ್ ಠಾಣೆಯಲ್ಲಿ ಒಂದು F.I.R ನೋಂದಾಯಿಸುವುದೇ ಸೂಕ್ತ ಎಂಬ ಯೋಚನೆ ಮನಸ್ಸಿನಲ್ಲಿ ಗಟ್ಟಿಕಟ್ಟುತ್ತಿರುವಂತೆಯೇ ಸ್ವಯಂ ಭಲ್ಲೂಕರಾಯರೇ ಮೂತಿ ವರಸುತ್ತಾ ಡಯಾನ ಹೋಟೆಲಿನ ಉಪ್ಪರಿಗೆಯಿಂದ ಮೆಟ್ಟಲಿಳಿದು ಬರುತ್ತಿರುವುದು ಕಾಣಿಸಿತು. ಕಚಕ್ಕನೆ ಅವರ ಕೈಹಿಡಿದೆಳೆದು ‘ನಮಸ್ಕಾರ ರಾಯರೆ’ ಎಂದು ಹಲ್ಲು ಕಿರಿದೆ. ಮೊಬೈಲಿಗೂ ಸಿಗದ ಆಸಾಮಿಯನ್ನು ಕಂಡುಹಿಡಿದ ಸಂತಸ ನನ್ನದಾದರೆ ಭೂತದರ್ಶನವಾದಂತಹ ಗಾಬರಿ ಅವರದ್ದಾಗಿತ್ತು. “ಏನ್ರೀ, ಸುದ್ದಿಯಿಲ್ಲ? ಎರಡು ವಾರದಿಂದ ನಿಮ್ಮನ್ನು ಹುಡುಕುತ್ತಿದ್ದೇನೆ. ಮೊಬೈಲ್ ಕರೆಗೂ ಉತ್ತರಿಸುತ್ತಿಲ್ಲ” ಎಂದು ಆಕ್ಷೇಪಿಸಿದೆ. “ಹ್ಹೆ,, ಹ್ಹೆ, ಅದು ಅಂದ್ರೆ, ನಾನು ಸ್ವಲ್ಪ ಬಿಜ಼ಿ” ಅಂತ ಸಮಜಾಯಿಷಿ ನೀಡಿದರು ರಾಯರು. “ಇರ್ಲಿ ಬಿಡಿ. ಈಗ್ಲಾದ್ರೂ ಸಿಕ್ಕಿದ್ರಲ್ಲ. ನಿಮ್ಮನ್ನು ನಮ್ಮ ಕಾಸು-ಕುಡಿಕೆ ಓದುಗರಿಗೆ ಪರಿಚಯಿಸಬೇಕು. ಬನ್ನಿ ಮೇಲೆ ಹೋಟೆಲಿಗೆ ಹೋಗಿ ಕಾಫಿ ಕುಡಿಯುತ್ತಾ ಡಿಸ್ಕಸ್ ಮಾಡೋಣ” ಅಂದೆ. “ಏನು? ನನ್ನ ಪರಿಚಯಾನಾ? ಬೇಡಪ್ಪಾ. ನಾನು ಹೀಗೆ ಮರೆಯಲ್ಲಿ ಇದ್ರೇನೇ ಚಂದ. ನನ್ನ ಪರಿಚಯ ಬೇಡಪ್ಪಾ.” ಅಂತ ಸ್ಪಷ್ಟವಾಗಿ ಮುಖ ಕಿವುಚಿದರು. “ಯಾಕೆ?, ಯಾಕೆ ಬೇಡ? ನಿಮಗೆ ಬೇಡದಿದ್ರೂ ನಮಗೆ ಬೇಕು ಮಾರಾಯ್ರೇ. ಬನ್ನಿ. .  ಬನ್ನಿ. . “ ಅಂತ ಹಾಗೆಯೇ ಅವರ ಕೈಹಿಡಿದು ವಾಪಾಸು ಡಯಾನದೊಳಕ್ಕೆ ಎಳೆದುಕೊಂಡು ಹೋಗಿ ನನ್ನ ಎದುರು ಕೂರಿಸಿದೆ. Now is Coffee with Bhalluk !! * * * ಭಲ್ಲೂಕರಾಯರೇ ಹೀಗೆ! ಗುರುಗುಂಟಿರಾಯರು ಗುಟುರು ಹಾಕುತ್ತಾ ಅಗಾಗ್ಗೆ ಕುಟುಕುತ್ತಾ ಇದ್ದರೆ, ಗೂಳಿತ್ತಾಯರು ಅಸುರರಂತೆ ಅಟ್ಟಹಾಸಗೈಯುತ್ತಾ ತಿರುಗುತ್ತಿದ್ದರೆ, ಭಲ್ಲೂಕರಾಯರು ಮಾತ್ರ ಯಾರ ಕಣ್ಣಿಗೂ ಬೀಳದೆ ಮಾಯವಾದದ್ದರಲ್ಲಿ ಆಶ್ಚರ್ಯವೇನಿಲ್ಲ. ಭಲ್ಲೂಕರಾಯರಂತಹ ಕರಡಿಗಳ ಸ್ವಭಾವವೇ ಅಂತಹದ್ದು. ಅವರಿದ್ದಾರೆ ಅಂತಲೂ ಯಾರಿಗೂ ಗೋಚರಿಸದು. ಅವರ ಕಾರ್ಯವೈಖರಿಗೆ ಅದು  ಮುಖ್ಯ. ಸದ್ದಿಲ್ಲದೆ ತಣ್ಣನೆ ಅಪ್ಪಳಿಸಿ ಇಡೀ ಮಾರುಕಟ್ಟೆಯನ್ನೇ ಧ್ವಂಸ ಮಾಡುವ ಜಾಯಮಾನ ಅವರದ್ದು. ಯಾರು ಜಾಸ್ತಿ ಗೌಜಿ ಗದ್ದಲ ಮಾಡಿ ಗಲಾಟೆ ಎಬ್ಬಿಸುತ್ತಾರೋ ಅವರನ್ನು ಜನ ಗಮನಿಸುತ್ತಾರೆ. ತಣ್ಣಗೆ ಕುಳಿತಿದ್ದಲ್ಲಿಗೇ ಬಂದು ಕತ್ತು ಕುಯ್ದು ಮಾಯವಾಗುವವರನ್ನು ಯಾರೂ ಗಮನಿಸುವುದೇ ಇಲ್ಲ. ಮನುಷ್ಯ ಸ್ವಭಾವವೇ ಹಾಗೆ. ಭಲ್ಲೂಕರು ಈ ರೀತಿ ತಣ್ಣಗೆ ಕತ್ತು ಕುಯ್ಯುವವರ ಪಂಥಕ್ಕೆ ಸೇರಿದವರು. ಗೂಳಿತ್ತಾಯರಂತವರು ಶೇರು ಬೆಲೆಗಳನ್ನು ಏರಿಸುತ್ತಾ ಹೋಗುತ್ತಿದ್ದರೆ ಸಮಯಸಾಧಕರಾದ ಭಲ್ಲೂಕರಾಯರಂತವರು ಹೊಂಚುಹಾಕಿ ಒಳ್ಳೆಯ ಸಮಯ ನೋಡಿ ಅದೇ ಶೇರುಗಳನ್ನು ಅನಿರೀಕ್ಷಿತವಾಗಿ ಕೆಳಕ್ಕೆ ದಬ್ಬಿ ನೆಲಗಚ್ಚಿಸುತ್ತಾರೆ. ಭಾರೀ ಬೆಲೆಗೆ ಕೊಂಡು ಇನ್ನೂ ಮೇಲೆ ಮೇಲೆ ಹೋಗಿ ಆಕಾಶ ಮುಟ್ಟುತ್ತದೆ ಎಂದು ಬಾಯಿ ಬಿಟ್ಟು ಕಾಯುತ್ತಿರುವವರೆಲ್ಲ ಅನಿರೀಕ್ಷಿತ ಮಾರ್ಕೆಟ್ ಕ್ರಾಶ್‌ನಿಂದಾಗಿ ದುಡ್ಡು ಕಳೆದುಕೊಂಡು ಕೈ ಸುಟ್ಟುಕೊಳ್ಳುತ್ತಾರೆ. ವಾಸ್ತವದಲ್ಲಿ ಇವರು ಮಾಡುವಷ್ಟು ಅನಾಹುತ ಬೇರೆ ಯಾರೂ ಮಾಡಲಾರರು. ಆದರೂ ಇವರ ಬಗ್ಗೆ ಹೆಚ್ಚಿನವರಿಗೆ ಅರಿವಿಲ್ಲ ಹಾಗೂ ಅರಿವಿಟ್ಟುಕೊಳ್ಳದೆ ಶೇರುಗಳಲ್ಲಿ ವ್ಯವಹರಿಸಿ ತೊಂದರೆಗೆ ಸಿಲುಕಿಹಾಕಿಕೊಳ್ಳುತ್ತಾರೆ. ಆದರೆ, ಯಾಕೆ ಇವರು ಹೀಗೆ ಮಾಡುತ್ತಾರೆ? ಭಲ್ಲೂಕರಾಯರಿಗೇನು ತಲೆಗಿಲೆ ಕೆಟ್ಟಿದೆಯೆ? ಏರುತ್ತಿರುವ ಬೆಲೆಯನ್ನು ಕೆಳಕ್ಕೆ ದಬ್ಬಿ ನೆಲಕಚ್ಚಿಸುವುದು ಎಂದರೇನು? ಈ ರೀತಿ ಬೆಲೆ ಇಳಿಸುವುದರಿಂದ ಅವರಿಗೇನು ಪ್ರಯೋಜನ? ಅವರೇನು ವಿಘ್ನ ಸಂತೋಷಿಗಳೇ? ಇದು ಕೆಲವರು ಕೇಳುವ ಪ್ರಶ್ನೆ. ಗುರುಗುಂಟಿರಾಯರಂತೂ “ಅಲ್ಲ ಮಾರಾಯ್ರೇ, ಅವರಿಗೆ ‘ಮಂಡೆಸಮ’ ಉಂಟಾ ಇಲ್ವಾ?” ಎಂದೊಮ್ಮೆ ನನ್ನತ್ರ ಗುಡುಗಿದ್ದರು. ಬಹು ಜನರು ಮಿಸ್ ಮಾಡುವ ಪಾಯಿಂಟ್ ಏನೆಂದರೆ ಶೇರುಬೆಲೆ ಮೇಲೇರುವಾಗ ದುಡ್ಡು ಮಾಡುವಂತೆಯೇ ಶೇರು ಕೆಳಗಿಳಿಯುವಾಗಲೂ ದುಡ್ಡು ಮಾಡಲು ಬರುತ್ತದೆ. ಅರ್ಥಾತ್ ದುಡ್ಡು ಮಾಡಲು ಶೇರು ಬೆಲೆಗಳು ಮೇಲೇರಲೇಬೇಕು ಎಂದೇನೂ ಇಲ್ಲ. ಕೆಳಕ್ಕೆ ಇಳಿಯುವಾಗಲೂ ದುಡ್ಡು ದೋಚಬಹುದು. ಅದಕ್ಕೇ ಅಲ್ಲವೇ ಅದನ್ನು ಕೆಳಕ್ಕೆ ಇಳಿಸುವುದು. ಕೆಳಕ್ಕೆ ಇಳಿಯುವಾಗ ಯಾರು ಯಾರೋ ಮನೆಮಠ ಕಳಕೊಂಡರೆ ಇನ್ನಾರೋ ಲಾಭ ಕೊಳ್ಳೆಹೊಡೆಯುತ್ತಾರೆ. ಯಾರ್ದೋ ದುಡ್ಡು; ಯಲ್ಲಮ್ಮನ ಜಾತ್ರೆ. ಅದೇ ಈ ಹಾವೇಣಿಯಾಟದ ಮರ್ಮ. ಆದರೆ, ಈ ರೀತಿ ಇಳಿಕೆಯಲ್ಲೂ ದುಡ್ಡು ಮಾಡುವುದು ಹೇಗೆ ಎಂದಿರಾ? ಸಿಂಪಲ್ ! actually very simple! Sell first and buy later! ಶೇರನ್ನು ಮೊದಲು ಕೊಡು, ಆಮೇಲೆ ಕೊಳ್ಳು. ಅಂದರೆ, ಮೊದಲು ಶೇರನ್ನು ಮಾರಿ ಅದರ ಬೆಲೆ ಇಳಿದಾಗ ಕಡಿಮೆ ಬೆಲೆಗೆ ವಾಪಾಸು ಕೊಳ್ಳುವುದು. ಇಳಿಕೆಯ ಮಾರುಕಟ್ಟೆಯಲ್ಲಿ ಹೀಗೆ ಮಾಡುವುದು ಸಾಧ್ಯ ಹಾಗೂ ಭಲ್ಲೂಕರಾಯರಂತಹ ಕರಡಿಗಳು ಮಾಡುವುದು ಇದನ್ನೇ. ಉದಾಹರಣೆಗೆ, ನಿಮ್ಮಲ್ಲಿ ೧೦೦ ರಿಲಾಯನ್ಸ್ ಶೇರು ಇದೆ ಅಂತಿಟ್ಟುಕೊಳ್ಳಿ. ಇವತ್ತು ನಿಮ್ಮಲ್ಲಿದ್ದ ರಿಲಾಯನ್ಸ್ ಅನ್ನು ಇಂದಿನ ಮಾರುಕಟ್ಟೆ ಬೆಲೆಯಾದ ೧೦೫೦ ರೂಗೆ ಕೊಟ್ಟು ನಾಳೆ ೯೦೦ ರೂಗೆ ಖರೀದಿಸಿದರೆ ೧೦೫೦-೯೦೦=೧೫೦ ರೂ ನಿಮಗೆ ಲಾಭವೆಂದೇ ಲೆಕ್ಕ ಅಲ್ಲವೇ? ಇದು ನಾವೆಲ್ಲರೂ ತಿಳಿದಿರುವ ‘ಮೊದಲು ಕೊಂಡು ನಂತರ ಕೊಡುವ’ ಸ್ವಾಭಾವಿಕ ಪ್ರಕ್ರಿಯೆಯ ತದ್ವಿರುದ್ಧ. ಆದರೂ, ಈ ರೀತಿ ಮಾಡಿದರೆ ಇದರಲ್ಲಿ ಲಾಭ ಖಂಡಿತಾ ಇದೆ. ಇನ್ನೊಂದು ಮಜೇದಾರ್ ಬಾತ್ ಏನೆಂದರೆ, ಈ ರೀತಿ ಮೊದಲು ಕೊಡಲು ಕೈಯಲ್ಲಿ ಶೇರು ಇರಲೇ ಬೇಕೆಂದೇನೂ ಇಲ್ಲ. ಇಲ್ಲದ ಶೇರನ್ನು ಕೊಟ್ಟು ಅಥವ ಶಾರ್ಟ್ ಸೆಲ್ (ಕಾಕು-೧೫,೧೬ ನೋಡಿ) ಮಾಡಿ ಬಳಿಕ ಕೊಳ್ಳಲೂ ಬಹುದು. ಮಾರುಕಟ್ಟೆಯಲ್ಲಿ ಪಳಗಿದ ಹೊಂಚುಕೋರರು ಸಮಯ ನೋಡಿ ಸಾಧಿಸುವುದು ಇದನ್ನೇ. ಯಾವುದೇ ಅನಾಹುತ ಸಂಭವಿಸಿದಾಗಲೋ ಅಥವ ಆರ್ಥಿಕ, ವಿತ್ತೀಯ ಕಾರಣಕ್ಕಾಗಿಯೋ ಯಾವುದೇ ಒಂದು ಕಂಪೆನಿಯ ಶೇರು ಇನ್ನು ಮೇಲೇರಲಾರದು ಅಂತ ಅನಿಸುತ್ತಲೇ ಭಲ್ಲೂಕರಾಯರು ಮತ್ತು ಬಳಗದವರು ಆ ಶೇರು ಕೈಯಲ್ಲಿ ಇರಲಿ, ಇಲ್ಲದೆ ಇರಲಿ ಅದನ್ನು ಭಾರೀ ಪ್ರಮಾಣದಲ್ಲಿ ಮಾರಿ ಬೆಲೆ ಇಳಿಸುತ್ತಾರೆ. ಹಾಗೆ ಇಳಿಕೆಯಾದ ಕೂಡಲೇ ವಾಪಾಸು ಕೊಂಡು ಲಾಭವನ್ನು ಕಿಸೆಗೇರಿಸುತ್ತಾರೆ. ಇದೇ ಕರಡಿ ಅಥವ ಬೇರ್ ಆಪರೇಶನ್! ಶೇರು ಬೆಲೆಗಳು ಉಯ್ಯಾಲೆಯಂತೆ ಏರಿಳಿಯಲು ಇದೇ ಕಾರಣ. ಬೆಲೆ ಮೇಲೇರುವ ಸಂದರ್ಭದಲ್ಲಿ ಎಲ್ಲಾ ಬುಲ್‌ಗಳೂ ಅದಕ್ಕೆ ಮುಗಿ ಬಿದ್ದು ಇನ್ನಷ್ಟು ಬೆಲೆ ಮೇಲೇರಿಸುತ್ತಾರೆ. ಬುಲ್‌ಗಳಿಗೆ ಬೆಲೆ ಮೇಲೇರಿದಷ್ಟೂ ಲಾಭ ಜಾಸ್ತಿ. ಹಾಗಿ ಬುಲ್ ಪಾರ್ಟಿ ನಡೆಯುತ್ತಿರಬೇಕಾದರೆ ಬೇರ್‌ಗಳೆಲ್ಲಾ ಸೇರಿ ಶಿವ ಪೂಜೆಯಲ್ಲಿ ಕರಡಿ ನುಗ್ಗಿದಂತೆ ಬೆಲೆಯನ್ನು ಇನ್ನಷ್ಟು ಕೆಳಕ್ಕೆ ತಳ್ಳುತ್ತಾರೆ. ಇದೇ ಶೇರುಯ್ಯಾಲೆಯ ಒಳಗುಟ್ಟು. ಇದೇ ಬುಲ್ ಮತ್ತು ಬೇರ್‌ಗಳ ಸಂಘರ್ಷ. ಗೂಳಿತ್ತಾಯರ ಮತ್ತು ಭಲ್ಲೂಕರಾಯರ ಕಾಳಗ. ಇಬ್ಬರೂ ಆಜನ್ಮಶತ್ರುಗಳಂತೆ ಮಾರುಕಟ್ಟೆಯಲ್ಲಿ ದುಡ್ಡಿಗಾಗಿ ಕಚ್ಚಾಡುತ್ತಾರೆ. — ವಗ್ಗರಣೆ: ರಿವರ್ಸ್ ಮಾರ್ಗೇಜ್ ಬಗ್ಗೆ ಬರೆದ ಕಳೆದ ವಾರದ ಕಾಕು-೧೬ ಹಲವು ಜನರ ಗಮನ ಸೆಳೆದಂತಿದೆ. ‘ ಈ ವಿಷಯ ನಮಗೆ ಗೊತ್ತೇ ಇರಲಿಲ್ಲ. ವಿವರಿಸಿ ತಿಳಿಸಿದ್ದಕ್ಕೆ ಧನ್ಯವಾದಗಳು’ ಎಂಬ ಧಾಟಿಯ ಪ್ರತಿಕ್ರಿಯೆಯೇ ಬಹಳ. ‘ಇಂತಹ ಉಪಯುಕ್ತ ಮಾಹಿತಿಗಳ ಬಗ್ಗೆ ಇನ್ನಷ್ಟು ಬರೆಯಿತ್ತಾ ಇರಿ’ ಎಂದು ಹಾರೈಸಿದವರು ಜನಪ್ರಿಯ ಸಾಹಿತಿ ಅನು ಬೆಳ್ಳೆಯವರು. ಮಣಿಪಾಲದ ರಮೇಶ ಅಡಿಗರು ಈ ಮೈಲ್ ಮೂಲಕ ‘spouse’ ಎಂಬ ಆಂಗ್ಲ ಪದಕ್ಕೆ ಕನ್ನಡದಲ್ಲಿ ಪರ್ಯಾಯವನ್ನು ಸೂಚಿಸಲು ಪ್ರಯತ್ನಿಸಿದ್ದಾರೆ. ಹಾಸನದ ನವೀನ್ ಎಂಬವರು ಮಾತ್ರ ‘ಮೊನ್ನೆ ತಾನೇ ಪ್ರಕಟವಾದ ರಿಸರ್ವ್ ಬ್ಯಾಂಕಿನ ಕ್ರೆಡಿಟ್ ಪಾಲಿಸಿಯ ಬಗ್ಗೆ ಓದುಗರಿಗೆ ಯಾಕೆ ವಿವರಿಸಿಲ್ಲ?’ ಅಂತ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವೆಲ್, ಮೊತ್ತ ಮೊದಲನೆಯದಾಗಿ, ಕ್ರೆಡಿಟ್ ಪಾಲಿಸಿ ಪ್ರಕಟವಾಗುವಾಗ ನನ್ನ ಮಾರ್ಗೇಜ್ ಬಗ್ಗೆಗಿನ ಲೇಖನವನ್ನು ಉದಯವಾಣಿಗೆ ಕಳುಹಿಸಿ ಕೊಟ್ಟಾಗಿತ್ತು. In any case, ಕ್ರೆಡಿಟ್ ಪಾಲಿಸಿ ಮತ್ತು ಬಡ್ಡಿ ದರಗಳ ಬಗ್ಗೆ ನಾನು ಈಗಾಗಲೇ ಸಾಕಷ್ಟು ಬಾರಿ ಕಾಕುವಿನಲ್ಲಿ ಚರ್ಚಿಸಿದ್ದೇನೆ. R.B.I ಈ ಬಾರಿ ೦.೨೫% ದಷ್ಟು ರಿಪೋ ಮತ್ತು ರಿವರ್ಸ್ ರಿಪೋ ದರಗಳನ್ನು ಏರಿಸಿದ್ದಾರೆ. ಅದು ಮುಂದಕ್ಕೆ ಹಂತ ಹಂತವಾಗಿ ಇನ್ನೂ ೦.೫%-೦.೭೫% ರಷ್ಟು ಏರಲಿದೆ. ಹೀಗೆ ಏರಲಿರುವ ಬಡ್ಡಿ ದರಗಳ ಬಗ್ಗೆ ಈಗಾಗಲೇ ಬರೆದಿದ್ದೇನೆ ಹಾಗೂ ಸಾಲ ಪಡೆಯುವವರಿಗೆ ಇದು ಸಕಾಲ ಎಂದೂ ಸೂಚಿಸಿದ್ದೇನೆ. ಸಾಲಕ್ಕೆ ಕನಿಷ್ಟ ಬಡ್ಡಿ ದರದ ಅವಕಾಶ ಈಗಲೂ ಇದೆ. ಬ್ಯಾಂಕುಗಳು ಇನ್ನೂ ಬಡ್ಡಿ ದರ ಏರಿಸಿಲ್ಲ. ಬೆಲೆಯೇರಿಕೆಯ ವಿರುದ್ಧ R.B.I ಮಾತ್ರ ಏಕಾಂಗಿಯಾಗಿ ಹೋರಾಡುವುದು ದುರಾದೃಷ್ಟಕರ. ಈ ಬಡ್ಡಿ ದರ ಏರಿಕೆಯಿಂದ ಬೆಲೆ ನಿಯಂತ್ರಣವಾಗುವುದೆಂದು ನಂಬುವುದು ಕಷ್ಟ. ಬೆಲೆ ನಿಯಂತ್ರಣಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಬ್ಬರೂ ದುಡಿಯಬೇಕಾದದ್ದು ಬಹಳ ಮುಖ್ಯ. ಸರಕಾರದ ಸಹಕಾರದ ವಿನಃ ಏನೂ ನಡೆಯಲಾರದು. ಆದ್ರೆ, ಈ ನಿಟ್ಟಿನಲ್ಲಿ ಈವರೆಗೆ ಅವರುಗಳು ಏನೂ ಮಾಡಿದಂತಿಲ್ಲ. ಈ ಬಾರಿಯ ಬಜೆಟ್ ಅಂತೂ ಬೆಲೆಯೇರಿಕೆಯ ಅಗ್ನಿಗೆ ತುಪ್ಪ ಸುರಿಯುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದೆ. ]]>

‍ಲೇಖಕರು avadhi

27 June, 2010

2 Comments

  1. ಮುರಳೀಧರ ಸಜ್ಜನ.

    ಮಾರುಕಟ್ಟೆಯಲ್ಲಿ ಹೀಗೆಲ್ಲಾ ಇದೆಯಾ ? ಓ ಗಾಡ್…… ಕಾಕುವಿಗೆ ದನ್ಯವಾದಗಳು.

  2. Muralidhar bhat

    well done sir keep informing us …

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading