ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾಸು ಕುಡಿಕೆ:’ಸಾಲಂಕೃತ ವಿದ್ಯಾ'. . .

ಕಾಸು ಕುಡಿಕೆ -25 -ಜಯದೇವ ಪ್ರಸಾದ ಮೊಳೆಯಾರ It is easy to get a loan, unless you need it. . . . . . . .   Norman Augustine. . ಸಾಲ ಪಡೆಯುವುದು ಅತಿಸುಲಭ, ನಿಮಗೆ ಅಗತ್ಯವಿಲ್ಲದವರೆಗೆ. . . . . ನಾರ್ಮನ್ ಅಗಸ್ಟಿನ್ ಸಾರ್, ನಮಸ್ಕಾರ ಗುರುಗುಂಟಿರಾಯರ ದನಿ ಫೋನ್‌ನಲ್ಲಿ ಸ್ಪಷ್ಟವಾದ ಮೊಳಗಿತು. ಈ ಬಾರಿ ಧ್ವನಿ ಒಣಗಿದ ಮಸಾಲೆ ದೋಸೆಯಂತೆ ಕುಗ್ಗಿರದೆ ಈಗ ತಾನೇ ಎಣ್ಣೆಯಲ್ಲಿ ಹುರಿದ ಅಂಬಡೆಯಂತೆ ಉಬ್ಬಿತ್ತು. ಲವಲವಿಕೆಯಿಂದ ಕೂಡಿತ್ತು. ಉತ್ಸಾಹ ಮತ್ತು ಆತ್ಮೀಯತೆ ಸ್ವರದಲ್ಲಿ ಪುನರ್‌ಪ್ರತಿಷ್ಟಾಪನೆಯಾಗಿತ್ತು. ಅಂದರೆ, ಮೊನ್ನೆ ನಾನು ಕೊಟ್ಟ ಸ್ಪಷ್ಟೀಕರಣ ಕೆಲಸ ಮಾಡಿತ್ತು. ನಮಸ್ಕಾರ ರಾಯರೆ, ಹೇಗಿದ್ದೀರಿ? ಇತ್ತೀಚೆಗೆ ಭಾರೀ ಅಪರೂಪ! ಏನು ಇಂಟರ್ವ್ಯೂ ಕೊಡೊದ್ರಲ್ಲೇ ಬಿಜೀನಾ? ಯಾವ್ದಕ್ಕೂ ಇರಲಿ ಅಂತ ಒಂದು ಡೋಸ್ ಚುಚ್ಚಿದೆ. ಅದೂ. . . ಹಾಗೇನಿಲ್ಲಾ ಸಾರ್, ಅದೇನೋ ಒಂದ್ಚೂರು. . . ಹೀಗೇ. . . ಹೇಳಿದ್ದೂ. . . ಹ್ಹ ಹ್ಹ ಹ್ಹ ಎಂದು ’ಹ್ಹ ಹ್ಹ ಹ್ಹ ಹಾಸ್ಯ ಸಂಘ’ದ ಆಜೀವ ಸದಸ್ಯರಂತೆ ನಕ್ಕರು. ಇರ್ಲಿ ಬಿಡಿ, ಪರ್ವಾಗಿಲ್ಲ! ಮತ್ತೇನು ವಿಶೇಷ? ದೋಸೆ-ಕಾಫಿ ಎಲ್ಲಾ ಬಿಟ್ಬಿಟ್ರಾ? ಈಗೆಲ್ಲಾ ಮೀನು-ಮಾಂಸ ಅಂತ ತಿರುಗಾಡ್ತಾ ಇರೋ ಹಾಗಿದೆ? ಅಂತ ಬೂಸ್ಟರ್ ಡೋಸ್ ಚುಚ್ಚಿದೆ. ಬೇಡ ಬಿಡಿ, ಮೊಳೆಯಾರ್ರೇ, ಅದು ಹೊಗ್ಲಿ. ಅದೆಲ್ಲಾ ಯಾಕೀಗ? ಏನೋ ಮಿಸ್ ಅಂಡರ್ಸ್ಟಾಂಡಿಂಗೂಊಊಊಊ ಎಂದು ಈ ಬಾರಿ ಟಿಪಿ-ಕಲ್ ಕೈಲಾಸಂ ಶೈಲಿಯಲ್ಲಿ ರಾಗವೆಳೆದು, ಈ ಬಾರಿ ಏನು ಬರೀತೀರಿ? ಅದು ಹೇಳಿ ಮೊದ್ಲು ಅಂತ ವಿಷಯಾಂತರಿಸಿದರು. ಓಕೆ ಸಾರ್, ಬಿಟ್ಬಿಡಿ ಅದನ್ನೆಲ್ಲ. ಕಳೆದ ಬಾರಿ Housing loan, ಈ ಬಾರಿ Education loan ಓಹ್, ಎಜುಕೇಶನ್ ಲೋನಾ? ಹಾಗೆ ಹೇಳಿ ಮತ್ತೆ, ನಾನೂ ಬರ್ತೀನಿ ಇರಿ.. ನನ್ನ ಅಣ್ಣನ ಮಗಳು ಇದ್ದಾಳೆ, ವಿದ್ಯಾ ಅಂತ.. ’ಸಾಲಂ’ಕೃತ ವಿದ್ಯಾ !!! – ವಿದ್ಯೆಗಾಗಿ ಸಾಲ ಮಾಡಿದ್ಲು. ಅದ್ಕೇ ಅವ್ಳನ್ನು ನಾವು ಹಾಗೆ ಕರೀತಿದ್ವಿ. ನಂಗೆ ಆ ಬಗ್ಗೆ ಸ್ವಲ್ಪ ಗೊತ್ತಿದೆ. ತಾಳಿ ನಾನು ಈಗ್ಲೇ ಬರ್ತೇನೆ. . ಅವರ ಉತ್ಸಾಹ ನೋಡಿದರೆ ಮಾತನಾಡುತ್ತಿದ್ದಂತೆಯೇ ಆ ಫೋನೊಳಕ್ಕೇ ತೂರಿ ನನ್ನೆದುರು ಬಂದು ಪ್ರತ್ಯಕ್ಷರಾಗುತ್ತಾರೋ ಎಂಬ ಶಂಕೆ ಮೂಡಿತು. ಇಲ್ಲ ಸಾರ್, ಇದು ವಿವೇಕಾನಂದ ಕಾಮತರು ಹೇಳಿ ಬರಿಯೋದು. ನೀವು ಮುಂದಿನ ಎಪಿಸೋಡಿಗೆ ಬನ್ನಿ. ಈ ಬಾರಿ ಬೇಡ. ಚೆನ್ನಾಗಿರೋದಿಲ್ಲ ಸಾಗಹಾಕಲು ಟ್ರೈ ಮಾಡಿದೆ. ಇಲ್ಲ ಇಲ್ಲ, ಕಾಮತರು ಬೇಡ. ಅವ್ರಿಗೆ excuse ಕೇಳಿ ನಮ್‌ಕಡೆಯಿಂದ. ನಾನೀಗ್ಲೇ ಬಂದೆ ಅಂತ ಹೇಳಿ ಫೋನ್ ಕಟ್ ಮಾಡಿದ ಗುರುಗುಂಟಿರಾಯರು ಕ್ಷಣಮಾತ್ರದಲ್ಲಿ ೬ ನೇ ಪುಟದ ಸಂಪುಟದಲ್ಲಿ ತಮ್ಮ ಹಕ್ಕು ಸ್ಥಾಪನಾರ್ಥಾಯ ’ಟಣ್’ ಎಂದು ಪ್ರತ್ಯಕ್ಷರಾದರು. ಸೋ,Here is ‘Education loan’ with Gurugunti. . . . . . ಕಾಲವೊಂದಿತ್ತಯ್ಯಾ. . , ವಿದ್ಯೆಯನ್ನು ಕೇವಲ ದಾನವಾಗಿ ನೀಡಲಾಗುತ್ತಿತ್ತು. ಅದಕ್ಕಾಗಿ ಹಣವನ್ನು ಪಡೆಯುವುದು ಮಹಾ ಪಾಪವೆಂದೇ ಪರಿಗಣಿಸಲ್ಪಟ್ಟ ಕಾಲವದು. ಎಲ್ಲವೂ ರಾಜಾಶ್ರಯದಲ್ಲೇ ನಡೆಯುತ್ತಿತ್ತು. ಭಾರತವೆಂಬ ರಿಪಬ್ಲಿಕ್ ಬಂದ ಮೆಲೆ ರಾಜರ ಎಲ್ಲಾ ಕೆಲಸಗಳನ್ನೂ ಬಹುತೇಕ ಸರಕಾರವೇ ಮಾಡತೊಡಗಿತು. ಅದರೆ, ಕ್ರಮೇಣ ಇತರ ಎಲ್ಲಾ ಸರಕುಗಳಂತೆ ವಿದ್ಯೆಯೂ ಕೂಡಾ ಖಾಸಗೀ ಕ್ಷೇತ್ರದ ಕೈವಶವಾಗಿ ಇಂದಿನ ತಾರೀಖಿನಲ್ಲಿ ಅದೊಂದು ಅತ್ಯಂತ ಪ್ರಾಫಿಟೇಬಲ್ ಬಿಸಿನೆಸ್ ಆಗಿ ನಮ್ಮ ಮುಂದೆ ಕಂಗೊಳಿಸುತ್ತಿದೆ. ಜನಸಾಮಾನ್ಯರ ಆರ್ಥಿಕ ಮಿತಿಯನ್ನು ಮೀರಿ ಬೆಳೆದ ಈ ವಿದ್ಯಾಸರಸ್ವತಿಯ ದೇಗುಲದಲ್ಲಿ ಇಂದು ಹೆಚ್ಚಿನೆಡೆ ವಿದ್ಯಾಲಕ್ಷ್ಮಿಯ ಪೂಜೆ ನಡೆಯುತ್ತಿದೆ. ವಿದ್ಯಾದಾನದ ಆ ಸುವರ್ಣ ಯುಗದಿಂದ ವಿದ್ಯಾಸಾಲದ ಈ ’ಸುವರ್ಣ ಯುಗ’ದವರೆಗೆ ಪಯಣಿಸಿ ಬಳಲಿದ್ದೇವೆ. ಇಂದು ಜನಸಾಮಾನ್ಯರಿಗೆ ವಿದ್ಯಾಸಾಲ ಅಥವ ಎಜುಕೇಶನ್ ಲೋನ್ ಇಲ್ಲದೆ ಉಚ್ಚ ಶಿಕ್ಷಣ ಸಾಧ್ಯವೇ ಇಲ್ಲ ಅನ್ನುವಂತಾಗಿದೆ. ಹಾಗೆಯೇ, ಸರಕಾರವು ಬ್ಯಾಂಕುಗಳ ಮೂಲಕ ಸಾಲ ಒದಗಿಸುವ ಅವಕಾಶ ಕಲ್ಪಿಸಿದೆ. ಇದೊಂದು ಬಹಳ ಉತ್ತಮ ಸೌಲಭ್ಯ. ಬ್ಯಾಂಕು, ವಿತ್ತೀಯ ಸಂಸ್ಥೆಗಳು ಇಂದು ವಿದ್ಯಾ ಸಾಲವನ್ನು ಸುಲಭವಾಗಿ ನೀಡುತ್ತಿದೆ. ಪೀಯೂಸಿ ಅಥವ ತತ್ಸಮ ವಿದ್ಯಾಭ್ಯಾಸ ಹೊಂದಿದ ಬಳಿಕದ ಹೆಚ್ಚು ಕಡಿಮೆ ಯಾವುದೇ ಡಿಗ್ರಿ, ಪಿ.ಜಿ ಕೋರ್ಸುಗಳಿಗೆ ಸಾಲ ದೊರೆಯುತ್ತದೆ. ಸಾಲಕ್ಕೆ ವಿದ್ಯಾರ್ಥಿಯ ವಯೋಮಿತಿ ೧೬-೩೫ ಆಗಿರಬೇಕು. ಸಾಲದ ಮೊತ್ತ ಸ್ವದೇಶಿ ಶಿಕ್ಷಣಕ್ಕೆ ರೂ ೧೦ ಲಕ್ಷ ವಾದರೆ ಪರ್ದೇಸೀ ಶಿಕ್ಷಣಕ್ಕೆ ರೂ ೨೦ ಲಕ್ಷ ಆಗಿದೆ. ಒಟ್ಟು ವೆಚ್ಚದ ೮೫-೧೦೦% ದವರೆಗೆ ಸಾಲ ಈ ಮಿತಿಯೊಳಗೆ ಲಭ್ಯ. ವೆಚ್ಚದಲ್ಲಿ ವಿದ್ಯಾಭ್ಯಾಸಕ್ಕೆ ಸಂಬಂಧಪಟ್ಟ ಎಲ್ಲಾ ವೆಚ್ಚಗಳನ್ನೂ – ಹಾಸ್ಟೆಲ್ ವೆಚ್ಚ ಸಹಿತ – ಸೇರಿಸಲಾಗಿದೆ. ಸಾಲದ ಮರು ಪಾವತಿ ಕೋರ್ಸ್ ಮುಗಿದ ೧ ವರ್ಷಕ್ಕೆ ಅಥವ ಕೆಲಸ ಸಿಕ್ಕ ೬ ತಿಂಗಳಿಗೆ ಆರಂಭವಾಗುತ್ತದೆ ಹಾಗೂ ಅವಧಿಯು, ಮರುಪಾವತಿ ಆರಂಭವಾದಂದಿನಿಂದ ೮ ವರ್ಷಗಳು. ವಿದ್ಯಾಸಾಲ ಬಹುತೇಕ Floating rate ಪದ್ಧತಿಯಲ್ಲೇ ಇದ್ದು ಬೇರೆ ಬೇರೆ ಬ್ಯಾಂಕುಗಳಲ್ಲಿ ಸಧ್ಯಕ್ಕೆ ಸುಮಾರು ೧೧-೧೩% ದಷ್ಟು ಇದೆ. Fixed rate ವಿದ್ಯಾಸಾಲಗಳು ಅಷ್ಟಾಗಿ ಕಾಣಬರುತ್ತಿಲ್ಲ. ಆದರೆ ಗೃಹ ಸಾಲದಂತೆಯೇ ಇದರಲ್ಲೂ ಆದಾಯ ಕರ ವಿನಾಯಿತಿ ಇದೆ. ಸೆಕ್ಷನ್ ೮೦ ಇ ಅನುಸಾರ ಕಟ್ಟುವ ಬಡ್ಡಿಯಂಶವನ್ನು ಯಾವುದೇ ಮಿತಿಯಿಲ್ಲದೆ ನೇರವಾಗಿ ಆ ವರ್ಷದ ತನ್ನ ಆದಾಯದಿಂದ ಕಳೆಯಬಹುದಾಗಿದೆ. ಹಾಗಾಗಿ ಪ್ರತಿಯೊಬ್ಬರಿಗೂ ತಮ್ಮ ಸ್ಲಾಬಾನುಸಾರ ರಿಯಾಯಿತಿ ದೊರಕೀತು. ಆದರೆ, ಇದರಲ್ಲಿ ಕಟ್ಟುವ ಅಸಲಿನ ಭಾಗಕ್ಕೆ ಯಾವುದೇ ಸೆಕ್ಷನ್‌ನಲ್ಲಿ ಯಾವುದೇ ತೆರಿಗೆ ವಿನಾಯಿತಿ ಇರುವುದಿಲ್ಲ. ವಿನಾಯಿತಿ ಸಿಗುವುದು ಬಡ್ಡಿಗೆ ಮಾತ್ರ. ಅಲ್ಲದೆ ಈ ಸೌಲಭ್ಯವನ್ನು ಜನಪ್ರಿಯ ಸೆಕ್ಷನ್ ೮೦ ಸಿ ಜೊತೆ ಕನ್‌ಫ್ಯೂಸ್ ಮಾಡಿಕೊಳ್ಳಬೇಡಿ. (೮೦ ಸಿ ಯಲ್ಲಿ ೧ ಲಕ್ಷದವರೆಗೆ ಹಲವು ಹೂಡಿಕೆಗಳಲ್ಲಿ ಹಾಕಿದ ಹಣವನ್ನು ಆದಾಯದಿಂದ ನೇರವಾಗಿ ಕಳೆಯಬಹುದಾಗಿದೆ. ಉದಾ, LIC, PPF, ELSS,  etc) ವಿದ್ಯಾ ಸಾಲದ ’೮೦ ಇ’, ಸೆಕ್ಷನ್ ’೮೦ ಸಿ’ ಸೆಕ್ಷನ್‌ನಿಂದ ಸಂಪೂರ್ಣವಾಗಿ ಹೊರತಾಗಿದೆ. ಇದು ಬೇರೆ ಅದು ಬೇರೆ, ಎರಡನ್ನೂ ಒಟ್ಟಿಗೇ ಪಡೆಯಬಹುದು. ಕರನೀತಿಯ ಪ್ರಕಾರ ಯಾರು ಈ ವಿನಾಯಿತಿಯನ್ನು ಪಡಕೊಳ್ಳಬಹುದು ಎಂಬುದಕ್ಕೆ ಅದರದ್ದೇ ಆದ ವ್ಯಾಖ್ಯೆ ಇದೆ. ಕರ ನೀತಿ ಪ್ರಕಾರ ಯಾರ ಹೆಸರಿನಲ್ಲಿ ಸಾಲವಿದೆಯೋ ಆ ವ್ಯಕ್ತಿ ಮಾತ್ರ ಆದಾಯ ಕರ ವಿನಾಯಿತಿಯನ್ನು ಪಡಕೊಳ್ಳಬಹುದು. ಬ್ಯಾಂಕುಗಳ ಕಾನೂನು ಪ್ರಕಾರ, ಒಬ್ಬ ವ್ಯಕ್ತಿ ತನ್ನ, ತನ್ನ spouse(ಇದರ ಕನ್ನಡಪದ ನನಗಿನ್ನೂ ಸಿಕ್ಕಿಲ್ಲ ಸ್ವಾಮೀ) ಅಥವ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮಾತ್ರ ಸಾಲ ಪಡೆಯಬಹುದಾಗಿದೆ. ಅಂದರೆ, ವಿದ್ಯಾರ್ಥಿ ಹಾಗೂ ಹೆತ್ತವರೊಳಗೆ ಮನೆಯಲ್ಲಿ ಯಾರಿಗೆ ಭವಿಷ್ಯತ್ತಿನಲ್ಲಿ ಆದಾಯ ವಿನಾಯಿತಿಯ ಅಗತ್ಯ ಬೀಳುವುದೋ ಆತನೇ ಸಾಲಕ್ಕೆ ಅರ್ಜಿ ಹಾಕುವುದು ಉತ್ತಮ. ಇದರ ಅರಿವಿಲ್ಲದೆ ಆ ಸಮಯಕ್ಕೆ ತೋಚಿದಂತೆ ಅರ್ಜಿ ಹಾಕಿ ಬಳಿಕ ಅಗತ್ಯವಿದ್ದವರಿಗೆ ತೆರಿಗೆ ವಿನಾಯಿತಿ ಪಡೆಯದೆ ತೊಂದರೆಗೀಡಾದವರು ಹಲವರಿದ್ದಾರೆ. ಬ್ಯಾಂಕು ನಿಮ್ಮನ್ನು ಶ್ಯೂರಿಟಿ, ಸಹ-ಅರ್ಜಿದಾರತ್ವ, Collateral, ಆದಾಯದ ಪುರಾವೆ, ಆಸ್ತಿವಿವರ, ವಿದ್ಯಾಭ್ಯಾಸದ ಖರ್ಚು-ವೆಚ್ಚಗಳ ವಿವರ, ಎಡ್‌ಮಿಶನ್ ಲೆಟರ್, ಭಾವಚಿತ್ರ ಇತ್ಯಾದಿ ಕಾಗದಪತ್ರಗಳನ್ನು ಬ್ಯಾಂಕು ಕೇಳೀತು. (ಅಂದ ಹಾಗೆ, ಯಾವುದೇ ಭಾವನೆಗಳಿಲ್ಲದ, ಯಾವತ್ತೂ ಯಥಾವತ್ತಾಗಿ ಬರದ, ರೈಲ್ವೇ ಸ್ಟೇಶನ್ ಮಾದರಿಯ ಈ ಮುಖ ಚಿತ್ರಗಳಿಗೆ ಭಾವಚಿತ್ರಗಳೆಂದು ಯಾಕೆ ಕರೆಯುತ್ತಾರೋ ನನಗಿನ್ನೂ ಅರ್ಥವಾಗಿಲ್ಲ !!) ಕಳೆದ ವಾರ ಹೇಳಿದಂತೆ ಕರ ನೀತಿ/ವಿನಾಯಿತಿಯ ವಿಚಾರ ಬಂದಾಗ ತಮ್ಮ ತಮ್ಮ ವ್ಯಕ್ತಿಗತ ವಿವರಗಳೊಂದಿಗೆ ನುರಿತ ಸಿ.ಎ ಯ ಬಳಿ ಕೂಲಂಕುಶವಾಗಿ ಚರ್ಚಿಸಿಯೇ ಮುಂದುವರಿಯಬೇಕಾಗಿ ವಿನಂತಿ. ಇಲ್ಲಿ ಕೆಲ ಆಸಕ್ತಿದಾಯಕ ವಿಚಾರಗಳನ್ನು ಸ್ಥೂಲವಾಗಿ ಚರ್ಚೆಗಾಗಿ ಮಾತ್ರ ಎತ್ತಿಕೊಳ್ಳಲಾಗಿದೆ. ಹಾಗೆಯೇ ಸಾಲದ ಬಗ್ಗೆ ಹೆಚ್ಚಿನ ವಿವರಗಳನ್ನು ಬ್ಯಾಂಕುಗಳಲ್ಲಿ ಕೇಳಿ ಪಡೆದುಕೊಳ್ಳಿ. ಬ್ಯಾಂಕುಗಳಿಂದ ಬ್ಯಾಂಕುಗಳಿಗೂ ಕೆಲವು ವ್ಯತ್ಯಾಸಗಳಿರುತ್ತವೆ.]]>

‍ಲೇಖಕರು avadhi

30 August, 2010

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading