ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾಸಿದ್ರೂ ಕೈ ಲಾಸಾ?!!

ಶಿಕ್ಷಣ ಕ್ಷೇತ್ರ ಒಂದು ವರ್ಷದಲ್ಲಿ ಉತ್ಪಾದಿಸುವ ಕಪ್ಪುಹಣ ಎಷ್ಟು ಗೊತ್ತೆ: ಅಂದಾಜು 48,400 ಕೋಟಿ ರೂಪಾಯಿಗಳು.

ಇತ್ತೀಚೆಗೆ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅವರು 8/11 ನೋಟು ರದ್ಧತಿಯನ್ನು ಟೀಕಿಸುತ್ತಾ, 2017ರ ಮೇ-ಜೂನ್ ತಿಂಗಳು ಬರಲಿ. ಆಗ ಹೆತ್ತವರು ಕ್ಯಾಪಿಟೇಷನ್ ಶುಲ್ಕ ಇಲ್ಲದೆ ತಮ್ಮ ಮಕ್ಕಳನ್ನು ಶಿಕ್ಷಣ ಸಂಸ್ಥೆಗಳಿಗೆ ಸೇರಿಸಲು ಸಾಧ್ಯ ಎಂಬ ಭರವಸೆ ನೀಡುತ್ತೀರಾ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಸವಾಲೆಸೆದಿದ್ದರು. ಅದಕ್ಕೆ ಇಲ್ಲಿಯ ತನಕ ಸರಕಾರದ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಂತಿಲ್ಲ.

ಭಾರತದಲ್ಲಿಂದು ಸುಮಾರಿಗೆ 14  ಲಕ್ಷ ಶಾಲೆಗಳು ಮತ್ತು 36,000 ಉನ್ನತ ಶಿಕ್ಷಣ ಸಂಸ್ಥೆಗಳಿದ್ದು, ಅವುಗಳಲ್ಲಿ ಒಟ್ಟು ಅಂದಾಜು 22.7 ಕೋಟಿ ವಿದ್ಯಾರ್ಥಿಗಳು ಪ್ರತೀವರ್ಷ ಶಿಕ್ಷಣ ಪಡೆಯುತ್ತಿದ್ದಾರೆ. ಅವರು ತಮ್ಮ ಶಾಲಾ ಸೇರ್ಪಡೆ, ಟ್ಯೂಷನ್ ಫೀ ಇತ್ಯಾದಿಗಳನ್ನು ಅಧಿಕ್ರತವಾಗಿ ಚೆಕ್/RTGS/NEFT ಇತ್ಯಾದಿಗಳ ಮೂಲಕವೇ ತುಂಬುತ್ತಾರಾದರೂ, ಕ್ಯಾಪಿಟೇಷನ್ ರೂಪದಲ್ಲಿ ಕೊಡುವ ಮೊತ್ತಕ್ಕೆ ನಗದೇ ಗತಿ. ಇದು ಬಹಿರಂಗ ಗುಟ್ಟು.

ಈ ಕ್ಯಾಪಿಟೇಷನ್ ಫೀ ಎರಡು ಹಂತಗಳಲ್ಲಿ ದೊಡ್ಡ ಪ್ರಮಾಣದಲ್ಲಿದೆಯಂತೆ. ಮೊದಲನೆಯದು ನಗರಗಳ ನರ್ಸರಿ ಶಾಲೆಗಳಲ್ಲಿ (35-60ಸಾವಿರ). ಎರಡನೆಯದು ಉನ್ನತ ವೃತ್ತಿಪರ ಶಿಕ್ಷಣದ ಮ್ಯಾನೇಜ್ ಮೆಂಟ್ ಕೋಟಾಗಳಲ್ಲಿ.  ಇಂಜಿನಿಯರಿಂಗ್ ಕೋರ್ಸ್ ಗಳಿಗೆ 2-10 ಲಕ್ಷದಷ್ಟಿರುವ ಕ್ಯಾಪಿಟೇಶನ್ ಶುಲ್ಕ, ವೈದ್ಯಕೀಯ ಕೋರ್ಸಿಗೆ 40-60 ಲಕ್ಷದಷ್ಟಿರುತ್ತದೆ; ವೈದ್ಯಕೀಯ ಸ್ನಾತಕೋತ್ತರ ಪದವಿಗಳಿಗೆ 1.5-2 ಕೋಟಿಯ ತನಕವೂ ಏರುತ್ತದೆಯಂತೆ.

ಈ ನಡುವೆ 2016 ಮೇ ಮೊದಲವಾರ  ದೇಶದ ಸುಪ್ರೀಂ ಕೋರ್ಟಿನ ಪಂಚಸದಸ್ಯ ಪೀಠವು ಕ್ಯಾಪಿಟೇಶನ್ ಶುಲ್ಕ ವಸೂಲಿ ಕಾನೂನು ಬಾಹಿರ ಎಂದು ತೀರ್ಪು ನೀಡಿದೆ. ಸಂವಿಧಾನದಲ್ಲಿ ಶಿಕ್ಷಣವು ದೇಶದ ಪ್ರಜೆಗಳ ಮೂಲಭೂತ ಹಕ್ಕುಗಳಲ್ಲೊಂದು ಎಂದು ಹೇಳಲಾಗಿರುವುದನ್ನು  ಖಚಿತಪಡಿಸಿದೆ.

ಈಗ ನೋಟು ರದ್ದತಿಯ ಪರಿಣಾಮ ಶಿಕ್ಷಣ ಸಂಸ್ಥೆಗಳ ಮೇಲೆ ಯಾವ ರೀತಿಯಾಗಿ ಆಗಲಿದೆ ಎಂದು ಅರಸುತ್ತಾ ಹೊರಟಾಗ ಹೊರನೋಟಕ್ಕೆ ಕಾಣಿಸುತ್ತಿರುವ ಎರಡು ಹಾದಿಗಳು ಹೀಗಿವೆ.

1. ಶಿಕ್ಷಣ ಸಂಸ್ಥೆಗಳು ತಮ್ಮ ವೆಚ್ಚವನ್ನು ಭರಿಸುವುದಕ್ಕಾಗಿ ಶೈಕ್ಷಣಿಕ ಫೀಸನ್ನು ಸಿಕ್ಕಾಪಟ್ಟೆ ಏರಿಸಬೇಕಾಗಬಹುದು ಮತ್ತು ಅದಕ್ಕಾಗಿ ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹೇರಬಹುದು (ಬಹುತೇಕ ರಾಜಕಾರಣಿಗಳೇ ಈ ಶಿಕ್ಷಣ ಸಂಸ್ಥೆಗಳ ಮಾಲಕರೂ ಹೌದು)

2. ಕೇಂದ್ರ ಸರಕಾರ ನೋಟು ರದ್ಧತಿಯ ಬಳಿಕ ಪೂರಕ ಕ್ರಮವಾಗಿ ನಗದು ವ್ಯವಹಾರದ ಮೇಲೆ ನಿರ್ಬಂಧಗಳನ್ನು ಇನ್ನೂ ಹೇರದಿರುವುದರಿಂದ, ಮುಂದಿನ ವರ್ಷ ತಮ್ಮ ಮಕ್ಕಳನ್ನು ಕ್ಯಾಪಿಟೇಶನ್ ಸ್ವೀಕರಿಸುವ ಕಾಲೇಜುಗಳಿಗೆ ಸೇರಿಸುವ ಇರಾದೆ ಇರುವ ಹೆತ್ತವರು, ಆ ನಿಟ್ಟಿನಲ್ಲಿ ಈಗಾಗಲೇ ನಗದು ಸಂಗ್ರಹ ಆರಂಭಿಸಿರಬಹುದು.

ಇವುಗಳಲ್ಲಿ ಎರಡನೆಯ ಹಾದಿ ತೆರೆದುಕೊಂಡಿದೆಯೆಂದರೆ, ಇಡಿಯ ನೋಟುರದ್ಧತಿ ಪ್ರಕ್ರಿಯೆ ನೀರ ಮೇಲಿಟ್ಟ ಹೋಮ ಎಂಬುದು ಖಚಿತವಾದಂತೆ. ಮೊದಲನೆಯ ಹಾದಿ ತೆರೆದುಕೊಂಡರೆ, ಸಶಕ್ತರ ಭಾರತಕ್ಕೇನೂ ತೊಂದರೆ ಆಗದು. ಆದರೆ ಅಶಕ್ತ ಭಾರತಕ್ಕೆ ಇನ್ನೊಂದು ಹೊಡೆತ ಬೀಳಲಿದ್ದು, ಅವರು ಶಿಕ್ಷಣದ ಅವಕಾಶಗಳಿಂದ ವಂಚಿತರಾಗಲಿದ್ದಾರೆ.

ಇವೆರಡೂ ಹಾದಿಗಳನ್ನು ಬಿಟ್ಟು ಬೇರೆ ಮುಸುಕಿನ ಹಾದಿಗಳೇನಾದರೂ ತೆರೆದಿವೆಯೇ ಎಂಬುದನ್ನು ಶಿಕ್ಷಣ ವ್ಯವಹಾರಸ್ಥರೇ ಬಲ್ಲರು.

ಶಿಕ್ಷಣದ ಕಪ್ಪುಹಣ ಎಲ್ಲಿ – ಎಷ್ಟು?

ಶಿಕ್ಷಣದ ಮಾರುಕಟ್ಟೆಯೂ ಕುತೂಹಲಕರ. ಒಂದು ಉನ್ನತ ಶಿಕ್ಷಣ ಸಂಸ್ಥೆಯ ದರ್ಜೆ ಮಾರುಕಟ್ಟೆಯಲ್ಲಿ ನಿರ್ಧಾರ ಆಗುವುದು, ಅದರಲ್ಲಿ ಕಲಿತರೆ ಉದ್ಯೋಗ ಸಿಗುವ ಸಾಧ್ಯತೆಗಳ ಶೇಕಡಾವಾರು ಪ್ರಮಾಣ ಆಧರಿಸಿ. ಅಂದರೆ, ದೊಡ್ಡ ಕಂಪನಿಗಳ ಕ್ಯಾಂಪಸ್ ಇಂಟರ್ವ್ಯೂ, 100% ಪ್ಲೇಸ್ ಮೆಂಟ್ ಅವಕಾಶ ಇರುವ ಶಿಕ್ಷಣ ಸಂಸ್ಥೆಗಳಿಗೆ ಹೆಚ್ಚಿನ ಬೇಡಿಕೆ/ದರ. ಇನ್ನು ನರ್ಸರಿ, ಪ್ರಾಥಮಿಕ ಶಿಕ್ಷಣದಲ್ಲೂ ಕೂಡ, ಇಂತಹ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸುಲಭವಾಗಿ ಪ್ರವೇಶ ಗಿಟ್ಟಿಸಿಕೊಡಬಲ್ಲ ತಾಕತ್ತಿರುವ ಪ್ರಾಥಮಿಕ ಶಿಕ್ಷಣ ಸಂಸ್ಥೆಗಳಿಗೇ ಡಿಮಾಂಡು ಜಾಸ್ತಿ. ಒಟ್ಟಿನಲ್ಲಿ ಇದೊಂದು ಮಾಫಿಯಾ ವಿಷವರ್ತುಲ.

ಅಧ್ಯಯನವೊಂದರಲ್ಲಿ ಕಂಡುಕೊಳ್ಳಲಾಗಿರುವಂತೆ, ಈ ವಿವಿಧ ಹಂತದ ಶಿಕ್ಷಣಗಳು ಭಾರತದಲ್ಲಿ ಉತ್ಪಾದಿಸುತ್ತಿರುವ ಕಪ್ಪುಹಣದ ಪ್ರಮಾಣದ ಅಂದಾಜು ಈ ಕೆಳಗಿನಂತಿದೆ:

ಜೂನಿಯರ್ ಕೆ. ಜಿ. : 15,000 ಕೋಟಿ ರೂ.

ಎಸ್ಸೆಸೆಲ್ಸಿ: 10,000 ಕೋಟಿ ರೂ.

ಎಂಬಿಬಿಎಸ್: 9000 ಕೋಟಿ ರೂ.

ಬಿಇ/ಬಿಟೆಕ್: 9000 ಕೋಟಿ ರೂ.

ಮ್ಯಾನೇಜ್ಮೆಂಟ್: 600 ಕೋಟಿ ರೂ.

ವೈದ್ಯಕೀಯ ಸ್ನಾತಕೋತ್ತರ: 2800 ಕೋಟಿ ರೂ.

ಮ್ಯಾನೇಜ್ಮೆಂಟ್ ಸ್ನಾತಕೋತ್ತರ:2800 ಕೋಟಿ ರೂ.

ಗಮನಿಸಬೇಕಾದ ಸಂಗತಿ ಎಂದರೆ, ಈ 48,400  ಕೋಟಿ ರೂಪಾಯಿ ಎಂಬುದು, ದೇಶದ GDP ಯ 0.8% ದಷ್ಟಾಗುತ್ತದೆ; ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ವಾರ್ಷಿಕ ಬಜೆಟ್ಟಿನ ಅಂದಾಜು 73.5% ದಷ್ಟಾಗುತ್ತದೆ. (ಇಲ್ಲಿ ಇನ್ನೂ ಬೇರೆ ಪಾರಾ ಮೆಡಿಕಲ್ ಕೋರ್ಸ್ ಗಳು, ಕಾನೂನು ಮತ್ತಿತರ ಹೆಚ್ಚು ಬೇಡಿಕೆ ಇರದ ಕೋರ್ಸುಗಳನ್ನು ಪರಿಗಣಿಸಲಾಗಿಲ್ಲ!)

 

‍ಲೇಖಕರು admin

19 January, 2017

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading