ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾವ್ಯಾ ಕಡಮೆಯವರ ಧ್ಯಾನಕ್ಕೆ ತಾರೀಕಿನ ಹಂಗಿಲ್ಲ


ಎನ್ ಸುರೇಶ್ ನಾಗಲಮಡಿಕೆ

ಕಾವ್ಯಾಕಡಮೆ ಅವರು ಧ್ಯಾನಕೆ ತಾರೀಖಿನ ಹಂಗಿಲ್ಲ ಎಂಬ ಸಂಕಲನದಲ್ಲಿ ತಮ್ಮ ಭಾವನೆಗಳನ್ನು ಭಿನ್ನ ಆಯಾಮಗಳಲ್ಲಿ ಅಭಿವ್ಯಕ್ತಿಸಿದ್ದಾರೆ. ಮಹಿಳಾ ಕಾವ್ಯ ಮುಂಚೂಣಿಯಲ್ಲಿದೆ ಎಂಬುದನ್ನು ಬೇರೆ ಹೇಳಬೇಕಾಗಿಲ್ಲ. ಕಾವ್ಯ ಅವರು ತಮ್ಮ ದನಿಗಳನ್ನು ಯಾವ ಬಗೆಯಲ್ಲಿ ಕೇಳಿಸುತ್ತಿದ್ದಾರೆ ಎಂಬುದು ಮುಖ್ಯವಾದ ಸಂಗತಿ. ಇವರದು ರೂಪಕಗಳಿಂದ ನಿಬಿಡವಾದ ಕಾವ್ಯವಲ್ಲ. ಕವಿತೆಯ ಒಳಗಡೆ ಇರುವ ಅನುಭವವು ಕಥನದ ಮುಖೇನ ಅನಾವರಣಗೊಳ್ಳುವಾಗ ಆಲೋಚನಾ ಕ್ರಮ ಸಂಕೀರ್ಣತೆಯ ಚೌಕಟ್ಟಿನಲ್ಲಿ ಪಡೆದುಕೊಳ್ಳಬಹುದು. ಅಥವಾ ಅನುಭವವು ನೇರವಾಗಿ ತಾಕಲೂಬಹುದು. ಮೇಲುನೋಟಕ್ಕೆ ಕಾವ್ಯ ಅವರ ಕವಿತೆಗಳು ವಾಚ್ಯದಿಂದ ಗಂಭೀರತೆಯನ್ನು ಪಡೆದೊಕೊಳ್ಳುವುದಿಲ್ಲ ಎಂದು ಆನಿಸಬಹುದು. ಆದರೆ ಅವರು ತೆಗೆದುಕೊಳ್ಳುವ ತೀರ್ಮಾನಗಳಿಂದ ಕವಿತೆ ನಮ್ಮನ್ನು ಆಲೋಚಿಸುವಂತೆ ಮಾಡುತ್ತದೆ. ಹೇಳಿಕೆಯಾಗಿ ಓದುಗರಿಗೆ ಕೇಳಿಸಿದರೂ ತಾನು ಹೇಳುತ್ತಿರುವುದು ಹುಸಿಯಲ್ಲ ಎಂಬುದು ಪ್ರಧಾನವಾಗುತ್ತದೆ. ಇಲ್ಲಿನ ಬಹುಪಾಲು ಕವಿತೆಗಳು ಹೆಣ್ಣಾಗಿ ಪಕ್ವಗೊಂಡ ಮನಸ್ಸಿನಿಂದ ಹುಟ್ಟಿದವಲ್ಲ. ಆ ಹಾದಿಯಲ್ಲಿ ಸಾಗಬೇಕಾದ ಯಾನದ ಮಧ್ಯದಲ್ಲಿ ಉಧ್ಭವಗೊಂಡವು. ಹದಿಹರೆಯದ ಹೆಣ್ಣುಮಕ್ಕಳ ಮಾನಸಿಕ ಹೊಯ್ದಾಟಗಳನ್ನು ಇವರ ಕವಿತೆಗಳು ಬೇರೆ ಬೇರೆ ಕ್ರಮಗಳಲ್ಲಿ ನಿರ್ಮಿಸುತ್ತವೆ. ಈ ವಯಸ್ಸಿನಲ್ಲಿ ಪ್ರಾರಂಭದಲ್ಲಿ ಇರಬಹುದಾದ ಬಯಕೆಗಳು, ಅಸೂಯೆ, ಹೊಂದಾಣೆಕೆ ಎಲ್ಲವನ್ನು ಕಾವ್ಯ ಅವರು ಕೇಳಿಸುವ ರೀತಿ ಚೆನ್ನಾಗಿದೆ. ಅವರ ಮೊದಲ ಕವಿತೆ ರೂಮ್ ಮೇಟ್ನಲ್ಲೇ ಈ ವಿಧಾನಗಳು ಗರಿಗೆದರಿವೆ. ಪ್ರಾರಂಭದಲ್ಲಿ ಅವಳಿಯಾಗಿದ್ದ ಎರಡು ಮನಸ್ಸುಗಳು ಕಾಲಕ್ರಮೇಣ ಒಂದಾಗುವ ಕ್ರಮ ಹೆಣ್ಣಿನ ಮೂಲಭೂತ ಗುಣಗಳನ್ನು ಅನಾವರಣಗೊಳಿಸಿದೆ. ಸಂಬಂಧಗಳನ್ನು ಜೋಡಿಸುವ ಕ್ರಮ ಇದು.

ಮಂಚಕ್ಕೂ ಸೂಟ್ಕೇಸಿಗೂ ಬಿಗಿದ
ಸರಪಳಿ
ಸಡಿಲವಾಗುತ್ತಿದೆ ದಿನ ಕಳೆದಂತೆ
ಎಂದು ಹೇಳುವಾಗ ಹೆಣ್ಣಿನ ಬಗ್ಗೆ ಪರಂಪರೆಯಲ್ಲಿ ಇರುವ ಕೆಲವು ನಂಬಿಕೆಗಳನ್ನು ಬದಲಿಸುವ ಗುಣವೂ ಇದೆ.
ನನ್ನ ಗುಲಾಬಿ ಚೂಡಿದಾರಕ್ಕೆ
ಅವಳ ದಾವಣಿ
ಅವಳ ಬಿಳೀ ಸ್ಕರ್ಟ್ ಗೆ
ನನ್ನ ಕಪ್ಪು ಟಾಪ್
ಎಂಬ ಮಾತುಗಳಲ್ಲಿ ಹೊಂದಿಸಿಕೊಳ್ಳುವ ಗುಣ ಆ ಮುಖೇನ ಅದನ್ನೊಂದು ನಂಬಿಕೆಯಾಗಿ ಮುಂದುವರೆಸುವ ಕ್ರಮವೂ ಇದೆ. ಪ್ರತಿಭಾ ಅವರು ನಾವು ಹುಡುಗಿಯರೇ ಹೀಗೆ ಎಂದು ಹೇಳುವಾಗ ಅಲ್ಲಿನ ಧೈರ್ಯವನ್ನು ನಾವು ಗಂಭೀರವಾಗಿ ನೋಡಿದ್ದಾಗಿದೆ. ಭಾಷೆಯಲ್ಲಿ ಹುಡುಗಿಯರ ಕೆಲವು ಅಥವಾ ಧೈಹಿಕ ಭಾಷೆಯ ಏರಿಳಿತಗಳನ್ನು ಅಭಿವ್ಯಕ್ತಿಸುವಾಗ ಎದುರಿಸುವ ಸವಾಲುಗಳು ನಮ್ಮ ಮುಂದಿವೆ. ಹುಡುಗಿಯರಿಗೆ ದೇಹಕ್ಕೆ ಸಂಬಂಧಿಸಿದಂತೆ ಕೆಲವು ಶಬ್ದಗಳು ಮುಜುಗರ, ಅವಮಾನಕ್ಕೆ ಸಂಬಂಧಪಟ್ಟಾಗ ಅವರು ಆ ಶಬ್ದಗಳಿಗೆ ತಮ್ಮದೇ ಆದ ಹೆಣ್ಣು ಪರಿಭಾಷೆಯನ್ನು ರೂಪಿಸಿಕೊಳ್ಳುವುದುಂಟು.
ನಮ್ಮ ಗ್ರೂಪಲ್ಲಿ ಪೀರಿಯೆಡ್ಸ್ ದಿನಗಳಿಗೆ
ಹ್ಯಾಪಿ ಬರ್ಥ್ ಡೇ ಕೋಡ್ ವರ್ಡ್ಡ
ಅಂತ ಕಕ್ಕಿಗೆ ಗೊತ್ತಿಲ್ಲ
——————-
ಟಾಪ್ನ ಅಳತೆ ಚಿಕ್ಕದಾಗಿ ಟೀಶರ್ಟ್ ನೆಕ್ ಡೀಪ್ ಆಗುತ್ತ
ಹೋದ ಹಾಗೆ
ಜಾಕೆಟ್ ಹಾಕಿಕೊಂಡು ಹೋಗು ಮಗ
ಟ್ರೆಂಡಿಯಾಗಿ ಕಾಣಿಸುತ್ತೀ ಅಂತ ಅಮ್ಮ ಕಾಳಜಿ ಮಾತಾಡ್ತಾಳೆ.
ಆಧುನಿಕತೆ ಎಂದರೆ ಏನು? ಉಡುಪುಗಳು ಯಾವ ಬಗೆಯ ಸಂಸ್ಕೃತಿಯನ್ನು ಸೂಚಿಸುತ್ತವೆ. ಎಂಬ ಪ್ರಶ್ನೆಗಳನ್ನು ರಾಶಿಗಟ್ಟಲೆ ಕೇಳಿಕೊಂಡಿದ್ದೇವೆ. ಆದರೆ ಅದೇ ಉಡುಪುಗಳು ಕೆಲವೊಮ್ಮೆ ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತವೆ. ಕಾವ್ಯ ಅವರ ಅನೇಕ ಕವಿತೆಗಳುಈ ಉಡುಪುಗಳ ಸುತ್ತ ಇವೆ. ಹಾಗೆಯೇ ಅನೇಕ ಗಂಭೀರ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತವೆ. ‘ಇಸ್ತ್ರೀ’ ಎಂಬ ಕವಿತೆ ಕಾವ್ಯ ಅವರ ಈ ಸಂಕಲನದ ಉತ್ತಮ ಕವಿತೆ ಎನ್ನಬಹುದು. ಹೊಸಬಗೆಯಲ್ಲಿ ಪ್ರತಿಮೆಗಳನ್ನು ಬಳಸಿಕೊಳ್ಳುವ ಕ್ರಮ ಮತ್ತು ಪರಂಪರೆಯನ್ನು ಗೊತ್ತಿಲ್ಲದ ಹಾಗೆ ಅನುಸಂಧಾನ ಮಾಡುವುದು ಉಡುಪುಗಳ ಮುಖೇನವೇ ಹೆಣ್ಣಿನ ಅಂತರಂಗದ ಭಾಷೆಯನ್ನು ಒಳಗುಮಾಡಿಕೊಂಡಿರುವ ವಿಧಾನ ಚೆನ್ನಾಗಿ ಮೂಡಿಬಂದಿದೆ.

ನನ್ನ ಜೀನ್ಸ್ ಜುಬ್ಬಾ ಚೂಡಿದಾರ
ಟಾಪ್ ಲೆಗ್ಗಿನ್ಗಳು ನಿಶರಾತ್ರಿ ಎದ್ದು
ತಣ್ಣಗೆ ಕಾಯುತ್ತವೆ ಸರತಿಗಾಗಿ ಇಸ್ತ್ರೀ
ಅಂಗಡಿಯ ಮುಂದೆ ಸಾಲುಗಟ್ಟಿ ನಿಂತು
————————
ಉಡುಪಿನ ಸೂಕ್ಷ್ಮಗೆರೆಯ ಹುರಿಯಾಡುವ ಇಸ್ತ್ರೀವಾಲಾ
ಕೆಂಪಗೆ ಒಮ್ಮೆ ನಾಚಿ ಬೆವರಿದ ಕುರುಹಾಗಿ
ನನ್ನ ಬಿಳಿ ಚೂಡಿದಾರದ ಕಂಕುಳಲಿ ಕಡಿಯ
ಕಪ್ಪೊಂದು ಕುಳಿತೇ ಬಿಟ್ಟಿದೆ ಆರದ
ಕಲೆಯಾಗಿ
ಬಂಧನದಲ್ಲೂ ಸುಖವಿಲ್ಲ ಬಿಡುಗಡೆಯೂ
ಬೇಕಿಲ್ಲವಂತೆ ಅವಕ್ಕೆ
ನೇರವಾಗಿ ಪುರುಷ ಲೋಕವನ್ನು ಪ್ರಶ್ನಿಸುತ್ತಿಲ್ಲವಾದರೂ ಕೊನೆಯ ಸಾಲುಗಳ ವ್ಯಂಗ್ಯವನ್ನು ಗಮನಿಸಿದವರೇ ಹುಡುಗಿಯ ಸ್ವೇಚ್ಚೆಯನ್ನು ಕಾಣುವುದು. ಆದರೆ ಮಧ್ಯಭಾಗದಲ್ಲಿ ‘ಮುದ್ದೇಯಾಗಿ ಗೊಣಗದೆ ಹೊರಬರುತ್ತವೆ’ ಎಂಬ ಸಾಲು ಬರುತ್ತದೆ. ಅವು ಎಲ್ಲ ಕಾಲದ ಹೆಣ್ಣುಮಕ್ಕಳ ಆತಂಕದ ಸ್ಥಿತಿಯನ್ನೇ ಹೇಳುತ್ತವೆ.
ಉಡುಪಿನ ಸುಕ್ಕುಗಳ ಸರಿಪಡಿಸದೆ ಒಡಪಿನ
ಬಿಕ್ಕುಗಳ ತೊಳೆಯಲಾಗದಂತೆ
ಎಂಬ ಗಟ್ಟಿಯಾದ ದನಿ ಕಾವ್ಯ ಅವರ ಕವಿತ್ವದ ಪಕ್ವತೆಯ ಜೊತೆಗೆ ಮಹಿಳಾ ಜಗತ್ತನ್ನು ಅರ್ಥ ಮಾಡಿಕೊಂಡ ಬಗೆಯನ್ನು ತಿಳಿಸುತ್ತದೆ. ‘ನಸುಗತ್ತಲ ತಂತಿಯ ಮೇಲೆ’ ಎಂಬ ಕವಿತೆಯಲ್ಲೂ ಕೂಡ ಬಟ್ಟೆಗಳ ಬಗೆಗಿನ ಕೆಲವು ನಂಬಿಕೆಗಳನ್ನು ಪ್ರಶ್ನಿಸುತ್ತದೆ. ಕಾವ್ಯ ಅವರ ಕವಿತೆಗಳಲ್ಲಿ ಉಸಿರಾಡುವ ಪ್ರೇಮ ಯಾವುದೇ ಹಂಗಿನಿಂದ ಕೂಡಿದ್ದಲ್ಲ. ಅದು ನಿರಾಳವಾಗಿದೆ. ಗೆಳೆಯನನ್ನು ಅರಿಯುವುದಕ್ಕೆ ಇವರದೂ ದ್ವೈತಕ್ರಮವಲ್ಲ. ಈಚೆಗೆ ಜ.ನಾ. ತೇಜಶ್ರೀಯವರು ‘ಅವನರಿವಲ್ಲಿ’ ಎಂಬ ದೀರ್ಘ ಕವನಗಳಲ್ಲಿ ಇದನ್ನು ಸಾಕಷ್ಟು ಶೋಧಿಸಿದ್ದಾರೆ. ಜೀವಪ್ರೀತಿ / ಉಸಿರಿನ ಪ್ರೀತಿ/ ಹೆಣೆದು ಬಂದಿವೆ. ಕಾವ್ಯ ಅವರಲ್ಲಿ ಧ್ಯಾನ ಎಂಬುದು ಯವುದೇ ತತ್ವ ಪರಿಭಾಷೆಯ ಹಿನ್ನೆಲೆಯಿಂದ ಬಂದಿಲ್ಲ ಅಥವಾ ಅದೇ ಧ್ಯಾನ ಎಂಬುವ ನಕಾರಾತ್ಮಕ ಅರ್ಥವುಳ್ಳ ಯೋಚನೆಯ ಪರಿಧಿಗೂ ಸೇರುವುದಿಲ್ಲ, ಬದಲಾಗಿ ತನ್ನನ್ನು
ತನ್ನನ್ನೂ ಸೇರಬಯಸುವವನು ತನ್ನಂತೇ
ಗಡಿಯಾರದ ಹಂಗಿಲ್ಲದೆ
ಹಗಲಿದ್ದರೂ ರಾತ್ರಿಯಿದ್ದರೂ
ಒಂದೇ ಬಾರಿ ಕನಸ ಕಾಣಬಹುದು.
ಎಂಬ ನಿಲುವನ್ನು ಉಳ್ಳವಳು ಇದನ್ನು ‘ನೀನು ಪದ್ಯಗಳು’ ಮತ್ತಷ್ಟು ಸ್ಪಷ್ಟಪಡಿಸುತ್ತವೆ. ಇವರ ಧ್ಯಾನ
ರಾಕ್ಷಸ ಲೋಕದ ಜನರ ಸಿಹಿ ಅಸೂಯೆಗೆ
ನಾವು ಜವಾಬ್ದಾರರಲ್ಲ
ಮೈಗೆ ಆತುಕೊಳ್ಳುವುದು ಹೋಗಲಿ ಕೈಗೆ
ಕೈ ತಾಗಿ ಸದೆಯೂ ನಾವು ಬಹು
ದೂರ ನಡೆಯಬಲ್ಲೆವು ಜತೆಗೆ
ಎಂಬ ಧೈರ್ಯವನ್ನು ತಾಳಬಲ್ಲರು. ಹೀಗೆ ಹೇಳುವಾಗ ಇವರ ಕವಿತೆಗಳನ್ನು ಯಾವುದೇ ಸಿದ್ದ ಮಾದರಿಗಳ ಹಿನ್ನೆಲೆಯಲ್ಲಿ ನೋಡಿದರೆ ನಮಗೇನು ದಕ್ಕುವುದಿಲ್ಲ. ಕೆಲವು ಸಾಲುಗಳು ವಾಸ್ತವವನ್ನು ಪ್ರಶ್ನಿಸುವಂತೆ ಅನಿಸಬಹುದು. ಆದರೆ ಅದರ ಹಿಂದಿನ ನಂಬಿಕೆಯನ್ನು ಪ್ರಶ್ನಿಸುವಂತೆ ಸಾಧ್ಯವಾಗುವುದಿಲ್ಲ. ಏಕೆಂದರೆ ನಂಬಿಕೆಯನ್ನು ಜೀವಂತವಾಗಿ ಉಳಿಸಿಕೊಳ್ಳಬಹುದು ಧ್ಯಾನಕ್ಕೆ ತಾರೀಖನ ಹಂಗಿಲ್ಲ ಎಂಬುದು ಮೊದಲ ಸಂಕಲನವಾದ್ದರಿಂದ ಸಹಜವಾಗಿಯೇ ಕೆಲವು ಮಿತಿಗಳಿವೆ. ಪದ್ಯದ ಓಘಕ್ಕೆ ಅವರು ಸೇರಿಸುವ ಗದ್ಯ ಹೆಚ್ಚಾಗಿಯೇ ಇದೆ. ಕೆಲವೊಮ್ಮೆ ಕೆಲವು ಸಾಲುಗಳು ಭೋಧನೆಯ ಕ್ರಮದಂತೆ ಕಾಣಿಸುತ್ತವೆ.

‍ಲೇಖಕರು G

31 October, 2013

2 Comments

  1. bharathi b v

    Arre naanu odirlilla … eega odalebeku ansthide … thanks

  2. manjunatha B.R.

    ವಿಮರ್ಷೆ ಓದಿದಾಗ ಕವನ ಸಂಕಲನ ೋದಬೇಕೆನಿಸುತ್ತಿದೆ. ಓದಿ ಮತ್ತೆ ಪ್ರತಿಕ್ರಿಯೆ ಬರೆಯುವೆ. ‘ನನ್ನ ಜುಬ್ಬ……’ ಮತ್ತೆ ಮತ್ತೆ ಓದಬೇಕೆನಿಸುವಂತಿದೆ. ಅಭಿನಂದನೆಗಳು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading