ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾವೇರಿ ಬರೆದ ಸಣ್ಣ ಕಥೆ ’ಲಚ್ಚಿ’

ಕಾವೇರಿ ಎಸ್ ಎಸ್

ಚಳಿಗೆ ಹಾಸಿದ ಹಾಸಿಗೆಯನ್ನೂ ಎಳೆದುಕೊಂಡು ಬಟ್ಟೆಯ ಗಂಟಿನಂತೆ ಮುದುಡಿಕೊಂಡು ಮಲಗಿದ್ದ ಲಚ್ಚಿಗೆ ‘ಲಚ್ಚಿ… ಲಚ್ಚಿ… ಎದ್ಹೇಳೆ’ ಅಂತ ನಾಗಮ್ಮ ಕೂಗಿದ್ದು ಕನಸಲ್ಲಿರಬೇಕೆಂದು ಮತ್ತೆ ಸುರುಳಿಕೊಂಡು ಮಗ್ಗಲು ಬದಲಾಯಿಸಿದಳು. ನಾಗಮ್ಮ ಸಿಟ್ಟಿನಿಂದ, ‘ಎದ್ದಾಳ್ತಿಯೋ ಇಲ್ವೋ? ಬತ್ತೀನಿ ತಡಿ’ ಅಂತ ಅಂದ ಕೂಡ್ಲೆ, ‘ಅಯ್ಯೋ ಅದ್ಯಾಕಂಗಾಡ್ತಿ ಇರು ಬಂದೆ’ ಎಂದು ಕಣ್ಣುಜ್ಜುತ್ತ ಬೈದುಕೊಳ್ಳುತ್ತಲೇ ಎದ್ದು, ಅಟ್ಟದ ಏಣಿಗೆ ತಲೆ ಕೊಟ್ಟು ಮತ್ತೆ ತೂಕಡಿಸುತ್ತಾ ಕೂತಿದ್ದಳು. ಮತ್ತೆ ನಾಗಮ್ಮ ಕೂಗುವ ಸದ್ದು ಕೇಳಿ, ಇಲ್ಲೇ ಕೂತಿದ್ದರೆ ಬೆಳಿಗ್ಗೆನೇ ಮಂಗಳಾರತಿ ಶುರುವಾಗುತ್ತದೆಂದು ದಡಕ್ಕನೆದ್ದು ಬಂದಳು.
ಅಷ್ಟೊತ್ತಿಗಾಗಲೇ ರಾಮಣ್ಣ ಕೊಟ್ಟಿಗೆಯ ಕಸವನ್ನು ಕುಕ್ಕೆಗೆ ತುಂಬಿಸಿಟ್ಟಿದ್ದ. ಲಚ್ಚಿ ಆಕಳಿಸುತ್ತಲೇ ಬಂದು, ತುಂಬಿಟ್ಟಿದ್ದ ಕಸವನ್ನು ತಲೆ ಮೇಲೆ ಹೊತ್ಕೊಂಡು ಅರ್ಧ ಮೈಲಿ ದೂರವಿದ್ದ ತಿಪ್ಪೆಗೆ ಹಾಕಿದಳು.
ರಾಮಣ್ಣ ಮುಂದೆ ಮುಂದೆ ನಡೆದರೆ, ತಲೆ ಮೇಲೆ ಕಸದ ಕುಕ್ಕೆಯನ್ನಿಟ್ಟುಕೊಂಡು ಅತ್ತಿಂದಿತ್ತ ಹಾಡೇಳಿಕೊಂಡು ನೆಗೆದಾಡುತ್ತಾ ಬರುತ್ತಿದ್ದಳು ಲಚ್ಚಿ. ಎಂದಿನಂತೆ ಅವಳು ಹೋಗುವ ದಾರಿಯಲ್ಲಿರುವ ಮಾವಿನ ಮರ ಬಂದೊಡನೆ ಲಚ್ಚಿಯ ಕಾಲು ಮುಂದುವರೆಯಲಿಲ್ಲ.
‘ಅಪ್ಪಯ್ಯಾ… ನೀ ಹೋಯ್ತಿರು, ನಾ ಬಂದೆ…’ ಎನ್ನುತ್ತಾ, ಗಾಳಿಯ ರಭಸಕ್ಕೆ ಬಿದ್ದ ಮಾವಿನ ಹಣ್ಣುಗಳನ್ನು ತನ್ನ ಲಂಗದ ತುಂಬ ತುಂಬಿಸಿಕೊಂಡಳು. ಒಂದು ಕೈಲಿ ಕುಕ್ಕೆ ಹಿಡಿದು, ಇನ್ನೊಂದು ಕೈಯಲ್ಲಿ ಲಂಗವನ್ನು ಮುದುರಿಡಿದು ಅಪ್ಪಯ್ಯ ಎಲ್ಲಿ ಬೈದಾನೆಂದು ಅಡ್ಡಕಾಲಾಕಿಕೊಂಡು ಓಡಿದಳು ಲಚ್ಚಿ.
ಹೊತ್ತಾಯ್ತೆಂದು ಒಂದೇ ಉಸಿರಿಗೆ ನಡೆಯುತ್ತಿದ್ದ ರಾಮಣ್ಣನಿಗೆ, ‘ಅಪ್ಪಯ್ಯಾ… ಅಲ್ಲೇ ನಿಂತ್ಕಳೋ ನಾನು ಬತ್ತೀನಿ. ನೀ ಹಂಗೆ ಒಂದೇ ಸಮನೆ ಹೋದ್ರೆ ನಾ ಹೆಂಗ್ ಬಲರ್ಿ…’ ಅಂತೇಳಿ ಕೋಪಗೊಂಡಳು.
ಲಚ್ಚಿಯನ್ನು ಹಿಂತಿರುಗಿ ನೋಡದೆ ರಾಮಣ್ಣ, ‘ಬಾ ಮಗಾ… ಬೇಗ್ಬೇಗ. ತೋಟುಕ್ಕೋಗ್ಬೇಕು ಹೊತ್ತಾಯ್ತದೆ’ ಅಂದ.
ಮನೆಗೆ ಬಂದವಳೇ ಕುಕ್ಕೆಯನ್ನು ಹಟ್ಟಿಯಲ್ಲಿ ಬಿಸಾಕಿ ಕೋಣೆಯ ಒಳಗೆ ಹೋಗಿ ಮಡಿಲಲ್ಲಿದ್ದ ಮಾವಿನಹಣ್ಣುಗಳನ್ನು ಸುರಿದು, ‘ಅವ್ವ… ನಾ ಲೆಕ್ಕ ಹಾಕಿನೇ. ನನ್ನ ಕೇಳಿ ತಗಳ್ಳಿ. ಇಲ್ಲಾ ಅಂದ್ರೆ ನಾ ಸುಮ್ಕಿರಕ್ಕಿಲ್ಲ ತಿಳೀತಾ’ ಎಂದು ಅಲ್ಲಿಂದಲೇ ಕೂಗಿದಳು.
ಒಲೆಯ ಮುಂದೆ ಕೂತು ರೊಟ್ಟಿ ಹಾಕುತ್ತಿದ್ದ ಲಚ್ಚಿಯ ಅವ್ವ ನಾಗಮ್ಮ, ‘ಇವ್ಳುದೊಂದು ಕಾಟ, ದಿನಾ ಇದೇ ರಾಗಾಯ್ತು’ ಅಂತ ಹಂಚಿನ ಮೇಲಿದ್ದ ರೊಟ್ಟಿಯನ್ನು ಹಿರಿದ ಕೆಂಡದ ಮೇಲಿಟ್ಟಳು.
ಲಚ್ಚಿ ಸ್ಕೂಲಿನ ಮೆಟ್ಟಿಲು ಹತ್ತಿರಲಿಲ್ಲ. ತಲೆಗೆ ಹತ್ತದ ವಿದ್ಯೆಯ ಬಗ್ಗೆ ಅವಳಿಗೆ ಅಸಮಾಧಾನ. ಸ್ಕೂಲಿಗೆ ಹೋಗು ಅಂದ್ರೆ ಸಾಕು ಉರಿದು ಬೀಳುತ್ತಿದ್ದಳು. ಮನೆಯ ಕೆಲಸ ಕಾರ್ಯಗಳಲ್ಲಿ ಅಪ್ಪ-ಅಮ್ಮನಿಗೆ ಕೈ ಜೋಡಿಸುತ್ತಾ ಬೆಳೆಯುತ್ತಿದ್ದಳು. ರಾಮಣ್ಣನಿಗೆ ಮೂರು ಮಕ್ಕಳು. ಮೂವರಲ್ಲಿ ಲಚ್ಚಿ ಕೊನೆಯ ಕೂಸು.
ಅಕ್ಕಂದಿರಿಗಿಂತ ಬುದ್ಧಿಯಲ್ಲಿ ಚುರುಕಿದ್ದ ಲಚ್ಚಿ ಕಂಡರೆ ಮನೆ ಮಂದಿ, ಸಂಬಂಧಿಕರಿಗಷ್ಟೇ ಅಲ್ಲದೇ ಊರಿನ ಮಕ್ಕಳಿಗೆಲ್ಲ ಪ್ರೀತಿ.

ಲಚ್ಚಿಗೆ ಹನ್ನೆರಡು ವರ್ಷ ತುಂಬಿತು. ನಾಗಮ್ಮ, ಮಗಳು ದೊಡ್ಡವಳಾದಳು. ಎಲ್ಲಾದರೂ ಸಂಬಂಧ ಹುಡುಕಬೇಕೆಂದು ರಾಮಣ್ಣನಿಗೆ ಹೇಳಿದಳು. ರಾಮಣ್ಣ ‘ಆ ಕೂಸಿಗೇಕೆ ಈಟ್ಬೇಗ ಮದ್ವೆಗಿದ್ವೆ. ಇನ್ನೆಲ್ಡು ವರ್ಸ ಹೋಗ್ಲಿ ಬಿಡು’ ಅಂದಿದ್ದ. ಆದರೆ ನಾಗಮ್ಮನ ಕಾಟ ತಾಳಲಾರದೆ ನಿನ್ನಿಷ್ಟ ಎಂದಷ್ಟೇ ಹೇಳಿ ಸುಮ್ಮನಾಗಿದ್ದ. ನಾಗಮ್ಮ ಮಾತ್ರ ತನ್ನ ಅಣ್ಣಂದಿರಿಗೆ ಹುಡುಗನನ್ನು ಕರೆದುಕೊಂಡು ಬರಲು ಹೇಳಿಯಾಗಿತ್ತು. ಇದ್ಯಾವುದರ ಅರಿವಿಲ್ಲದ ಲಚ್ಚಿ ತನ್ನಪಾಡಿಗೆ ತಾನು ಎಲ್ಲರ ಜೊತೆ ನಗುತ್ತಾ ಹಟ್ಟಿಯಲ್ಲಿ ಆಟವಾಡುತ್ತಿದ್ದಳು.
ಒಂದು ದಿನ ಲಚ್ಚಿ ಮಾವ, ತಂಗಿಯ ಮನೆಗೆ ತನ್ನ ಸಂಬಂಧಿಕರ ಹುಡುಗನನ್ನು ಕರೆ ತಂದ. ಎಂದಿನಂತೆ ಲಚ್ಚಿ ಹಟ್ಟಿಯಲ್ಲಿ ಆಡುತ್ತಿದ್ದಳು. ಮನೆಗೆ ಯಾರೋ ಬಂದಿರುವುದನ್ನು ಗಮನಿಸಿದ ಅವಳು ಒಳಗೋಡಿದಳು.
‘ಮಾವ ಯಾವಾಗ ಬಂದಿ, ಎಲ್ರೂ ಚಂದಗಾರ?’ ಎನ್ನುವಾಗ ಅವಳ ಕಣ್ಣು ಮಾವನ ಪಕ್ಕದಲ್ಲಿ ಕುಳಿತಿದ್ದ ಹುಡುಗನ ಕಡೆ ಹರಿಯಿತು.
‘ಇದ್ಯಾರ್ಲೆ?’
‘ನಿಂಗ್ಯಾಕೆ ಅದೆಲ್ಲ’ ಅಂದ ಲಚ್ಚಿ ಮಾವ.
ಲಚ್ಚಿಯನ್ನೇ ನೋಡುತ್ತಿದ್ದ ಅವನನ್ನು ಗುರ್ರಾಯಿಸಿಕೊಂಡು ನೋಡಿ, ‘ಅವ್ವಾ ನೀನಾದ್ರೂ ಹೇಳೆ?’ ಅಂತ ಕೈ ಹಿಡಿದು ಕೇಳಿದಳು. ನಾಗಮ್ಮ ‘ಸ್ವಲ್ಪ ಹೊತ್ತು ಸುಮ್ಕಿರು’ ಅಂತೇಳಿ ತನ್ನ ಅಣ್ಣನ ಜೊತೆ ಮಾತಿಗಿಳಿದಳು.
ಲಚ್ಚಿಗೆ ಕೋಪ ಉಕ್ಕಿ ಬಂದಿತ್ತು. ಅಷ್ಟರಲ್ಲಿ ಹೊರಗೆ ದನ ಕಟ್ಟುತ್ತಿದ್ದ ರಾಮಣ್ಣ ಕಾಣಿಸಿದ. ಒಂದೇ ನೆಗೆತಕ್ಕೆ ರಾಮಣ್ಣನ ಹತ್ತಿರ ಜಿಗಿದ ಲಚ್ಚಿ, ‘ಅಪ್ಪಯ್ಯಾ… ನಮ್ಮನೆಗೆ ಯಾರೋ ಬಂದವ್ನೆ. ಯಾರೂ ಸರಿಯಾಗಿ ಹೇಳ್ತಿಲ್ಲ’ ಅಂತ ರಂಪಾಟ ಮಾಡಿದಳು.
ರಾಮಣ್ಣ ಮಗಳನ್ನು ಸಮಾಧಾನಿಸುತ್ತಾ, ‘ಮಗಾ… ನಾ ಈಗ್ತಾನೇ ಬಂದಿವ್ನಿ. ನಂಗೇನ್ ಗೊತ್ತವ್ವ? ಇರು ಕೇಳ್ತೀನಿ’ ಅಂತ ಒಳ ಹೋದ.
ರಾಮಣ್ಣನ ಜೊತೆ ಬಂದ ಲಚ್ಚಿಯ ಕಾಲು ಅಲ್ಲೂ ನಿಲ್ಲುತ್ತಿರಲಿಲ್ಲ. ಅವನ ಹಿಂದೆ ನಿಂತು ಅದು ಇದು ಕೀಟಲೆ ಮಾಡುತ್ತಾ, ಓರೆಗಣ್ಣಿನಿಂದ ಆ ಹುಡುಗನನ್ನು ನೋಡಿದಳು. ಅವನು ಲಚ್ಚಿಯನ್ನೇ ಗಮನಿಸುತ್ತಿದ್ದುದನ್ನು ನೋಡಿ, ‘ಇವ್ನಾವನು ನನ್ನೇ ತಿನ್ನರಂಗೆ ನೋಡ್ತನೆ. ಇವ್ನು ಯಾರಾದ್ರೆ ನಂಗೇನು’ ಅಂತ ಗತ್ತಿನಿಂದ ಅವನನ್ನೇ ನೋಡಿ ಮುಖ ಸಿಂಡರಿಸಿಕೊಂಡಳು.
ಅವನು ಲಚ್ಚಿಯನ್ನು ನೋಡಿ ಮುಗುಳ್ನಕ್ಕ. ಅಷ್ಟರಲ್ಲಿ ಲಚ್ಚಿಯ ಸ್ನೇಹಿತೆಯರು ಹಿತ್ತಲಿನ ಕಡೆ ಕೂಗು ಹಾಕುತ್ತಿರುವುದು ಕೇಳಿತು. ಅದನ್ನು ಕೇಳಿ ಅಂಗಳಕ್ಕೆ ಹೋದಳು ಲಚ್ಚಿ. ಅವರೆಲ್ಲಾ ಸೇರಿ ಅವತ್ತಿನ ತಯಾರಿ ಶುರು ಮಾಡಲು ತಯಾರಾದರು. ಪ್ರತಿಯೊಬ್ಬರಿಗೂ ಲಚ್ಚಿ ಒಂದೊಂದು ಕೆಲ್ಸ ವಹಿಸಿ, ಎಲ್ರೂ ಐದು ನಿಮಿಷದಲ್ಲಿರಬೇಕೆಂದು ತಾಕೀತು ಮಾಡಿದಳು.
ಇತ್ತ ತನ್ನ ಮದುವೆಯ ಮಾತುಕತೆಯ ಅರಿವಿಲ್ಲದ ಲಚ್ಚಿ, ಸೀದಾ ಅವರ ಮುಂದೆನೇ ಕುಣಿಯುತ್ತಾ ಕೋಣೆ ಹೊಕ್ಕಿ, ರಾಮಣ್ಣನ ಶಲ್ಯ, ಪಂಚೆ, ಶಟರ್ು ಎಲ್ಲವನ್ನೂ ಕೈಯಲ್ಲಿ ಮುದುರಿಕೊಂಡು ಮನೆಯ ಮುಂದಿದ್ದ ಹಳೆ ಮನೆಗೆ ಹೊತ್ತೊಯ್ದಳು. ಅಷ್ಟರಲ್ಲಿ ಅವಳ ಹಿಂಬಾಲಕರು ಬಂದು ಲಚ್ಚಿಯನ್ನು ಸೇರಿಕೊಂಡರು.
ಇವರ ಆಟಕ್ಕೆ ಬೇಕಾದ ಸಿದ್ಧತೆ ಬಲು ಜೋರಾಗಿಯೇ ನಡೆಯತೊಡಗಿತು. ಲಚ್ಚಿಯ ಸ್ನೇಹಿತೆಯರು ಸೇರಿ ಮದುವೆಯ ಔತಣಕ್ಕೆ ಬೇಕಾದ ತರಕಾರಿ, ಕಾಳುಕಡ್ಡಿ ಎಲ್ಲವನ್ನೂ ತಂದು ಲಚ್ಚಿಯ ಮುಂದೆ ಸುರಿದರು. ಮೂಲೆಯಲ್ಲಿ ಕಲ್ಲಿನ ಒಲೆ ಹಾಕಿ ದೊಡ್ಡ ದೊಡ್ಡ ತಪ್ಪಲಿಗಳಲ್ಲಿ ಪಾಯಸ, ಅನ್ನ-ಸಾರು, ಪಲ್ಯ ರೆಡಿಯಾಗುತ್ತಿತ್ತು. ಇತ್ತ ಮೂರ್ನಾಲ್ಕು ಮಂದಿ ಹೆಣ್ಣಿಗೆ ಶೃಂಗಾರ ಮಾಡಲು ತೊಡಗಿದರೆ, ಲಚ್ಚಿ ಶಲ್ಯ, ಪಂಚೆ, ಶರ್ಟನ್ನು ಲಂಗದ ಮೇಲೆಯೇ ಹಾಕಿಕೊಂಡು ಮಧುಮಗನ ವೇಷದಲ್ಲಿ ಗತ್ತು ಪ್ರದಶರ್ಿಸತೊಡಗಿದಳು. ಕೆಲವರು ತಟ್ಟೆಯನ್ನು ಬಡಿದು ಮಂಗಳವಾದ್ಯ ನುಡಿಸುತ್ತಿದ್ದರು. ಮತ್ತೆ ಕೆಲವರು ಮದುವೆ ಮನೆಯಲ್ಲಿ ಓಡಾಡುವ ಹಾಗೆ ಅತ್ತಿಂದಿತ್ತ ಇತ್ತಿಂದತ್ತ ಅದು ಕೊಡಿ, ಇದು ಕೊಡಿ ಅಂತ ಕೂಗಾಡುತ್ತಿದ್ದರು. ಮಧುಮಗನ ವೇಷದಲ್ಲಿದ್ದ ಲಚ್ಚಿ, ಮದುವೆ ಮಂಟಪದಲ್ಲಿ ಆಸೀನಳಾದಳು. ಶೃಂಗಾರಗೊಂಡ ಮದುವಣಗಿತ್ತಿ ನಾಚುತ್ತಾ ಬಂದು ಲಚ್ಚಿಯ ಪಕ್ಕ ಹಸೆಮಣೆಯಲ್ಲಿ ಕುಳಿತಳು. ಪುರೋಹಿತೆ ಗೊತ್ತಿಲ್ಲದ, ಗೊತ್ತಿರುವ ಅರ್ಧಂಬರ್ಧ ಮಂತ್ರ ಉಚ್ಛಾರಣೆ ಶುರುವಿಟ್ಟುಕೊಂಡಳು. ಲಚ್ಚಿ ತಾಳಿ ಕಟ್ಟುವುದೊಂದೇ ಬಾಕಿ. ಶಾಸ್ತ್ರೋಕ್ತಗಳು ನಡೆಯುತ್ತಿದ್ದಂತೆ ಲಚ್ಚಿಯ ಕಣ್ಣು ಹಳೆ ಮನೆಯ ಎದುರಿಗಿದ್ದ ಮಾವನ ಮನೆ ಕಡೆ ಹರಿಯಿತು.
ಕ್ಷಣದಲ್ಲಿ ಲಚ್ಚಿಯ ಎದೆ ಧಸಕ್ ಎಂದಿತು. ಮಾವನ ಮನೆ ಜಗುಲಿಯ ಮೇಲೆ ಮನೆಗೆ ಬಂದಿದ್ದ ಹುಡುಗ ಇವರ ನಾಟಕವನ್ನೆಲ್ಲಾ ನೋಡಿ ನಗು ತಡೆಯಲಾರದೆ ಬಾಯಿಗೆ ಬಟ್ಟೆ ತುರುಕಿಕೊಂಡು ನಗುತ್ತಿದ್ದ.
ಒಲೆಯ ಮೇಲೆ ಕುದಿಯುತ್ತಿದ್ದ ಪಾಯಸದಂತೆ ಅವಳ ಮನದಲ್ಲಿ ತಲ್ಲಣ ಶುರುವಾಯಿತು. ಬೆವರುತ್ತಾ ನಾಚಿಕೆಯಿಂದ ತಲೆ ತಗ್ಗಿಸಿದ ಲಚ್ಚಿ, ‘ನೋಡ್ರೆ ನಾ ಆಟಕ್ಕೆ ಬರಕ್ಕಿಲ್ಲ. ನೀವೇ ಆಟ್ಕೊಳ್ಳಿ. ನಾ ಮನಿಗೋಯ್ತಿನಿ’ ಅಂದಳು. ಅದಕ್ಕೆ ಮದುವಣಗಿತ್ತಿ ಗೆಟಪ್ನಲ್ಲಿದ್ದವಳು, ‘ಯಾಕೆ ಹಿಂಗಂತೀಯ? ಅಡಿಗೆಲ್ಲ ಆಗೈತಿ, ಎಲ್ಲಾ ಒಟ್ಟಿಗೆ ಊಟ ಮಾಡ್ಕೊಂಡು ಹೋಗೋಣ ಇರು’ ಅಂದಿದ್ದಕ್ಕೆ ಲಚ್ಚಿ, ‘ಅಲ್ನೋಡ್ರೆ ನಮ್ಮನೆಗೆ ಬಂದಿದ್ನಲ್ಲ ಆ ಹುಡ್ಗ ನಮ್ಮುನ್ನ ನೋಡ್ತಾ ನಗ್ತಾವ್ನೆ. ನೀವೇನಾದ್ರೂ ಮಾಡ್ಕೊಳ್ಳಿ. ನಾ ಮಾತ್ರ ಇರಕ್ಕಿಲ್ಲ’ ಅಂತ ಯಾರ ಮಾತನ್ನೂ ಕೇಳ್ದೆ ಒಂದೇ ಉಸಿರಿಗೆ ಹಳೆ ಮನೆಯ ಅರ್ಧ ಗೋಡೆ ನೆಗೆದು ಮನೆ ಹೊಕ್ಕಳು.
ಆ ಹುಡುಗನಿಗೆ ಶಾಪ ಹಾಕುತ್ತಾ ಲಚ್ಚಿಯ ಸಮಾಧಾನಗೊಳಿಸಲು ಸ್ನೇಹಿತರೆಲ್ಲ ಬಂದು ಕೇಳಿಕೊಂಡರೂ ಲಚ್ಚಿ ಹೊರಗೆ ಬರಲಿಲ್ಲ. ‘ನೀವೇ ಎಲ್ಲಾ ತಿಂದ್ಕೊಂಡೋಗಿ. ನಂಗೇನೂ ಬೇಡ’ ಅಂತ ಬಾಗಿಲ ಸಂಧಿಯಲ್ಲಿ ನಿಂತಿದ್ದಳು. ಇಲ್ಲೇ ಎಲ್ರೂ ಊಟ ಮಾಡನ ಅಂತ ಅವರೆಲ್ಲ ತೀಮರ್ಾನಿಸಿ, ಒಂದನ್ನೂ ಬಿಡದ ಹಾಗೆ ಮದುವೆಯ ಭರ್ಜರಿ ಔತಣ ಲಚ್ಚಿಯ ಮನೆಗೆ ಬಂತು. ಲಚ್ಚಿಗೆ ಊಟ ಮಾಡಲು ಮನಸ್ಸಿಲ್ಲದೆ ಸ್ನೇಹಿತರಿಗೆಲ್ಲ ಬಡಿಸಿ, ಉಳಿದದ್ದನ್ನೂ ನೀವೇ ತುಂಬ್ಕೊಂಡೋಗಿ ಅಂತ ಕೊಟ್ಟಿ ಕಳುಹಿಸಿದಳು. ಆದರೂ ಇನ್ನೂ ಊಟ ಮಿಕ್ಕಿತ್ತು.
ಇವರ ದೈನಂದಿನ ಆಟೋಟಗಳನ್ನು ಅರಿತಿದ್ದ ನಾಗಮ್ಮ, ರಾಮಣ್ಣ ಹಾಗು ಲಚ್ಚಿಯ ಮಾವ ನಗುತ್ತಾ, ‘ಲೇ ಲಚ್ಚಿ ಹೊಟ್ಟೆ ಹಸಿತೈತೆ ಏನೈತೆ ಉಣ್ಣಕ್ಕಾಕು’ ಅಂದರು.
ಲಚ್ಚಿ ‘ಬೇಕಾದ್ರೆ ನೀವೇ ಹಾಕ್ಕೊಂಡು ತಿನ್ನಿ. ನಾನಂತೂ ಇಕ್ಕಾಕಿಲ್ಲ’ ಅಂತ ಬಾಗಿಲ ಸಂಧಿ ನಿಂತೇ ಹೇಳಿದಳು.
ನಾಗಮ್ಮ ಗಂಡ, ಅಣ್ಣನಿಗೆ ಬಡಿಸಿದಳು. ಊಟ ಮಾಡುತ್ತಿದ್ದ ಲಚ್ಚಿಯ ಮಾವ, ‘ಅಲ್ಲ ಕಣ್ಮಗಾ ಈಟೊಂದು ಉಳ್ದೈತೆ. ಏನ್ ಮನೆ ಹಾಳು ಮಾಡ್ಬೇಕು ಅಂತಿದ್ದೀರಾ?’ ಅಂದಿದ್ದಕ್ಕೆ ಲಚ್ಚಿ, ‘ಹ್ಞೂಂ ತಪ್ಲಿ ತುಂಬಾ ಪಾಯಸ ಮಾಡಿವಿ ತಿಂದ್ಕಂಡು ತೆಪ್ಪಗೋಗು ಬೈಸ್ಕಬ್ಯಾಡ’ ಅಂತ ಅವರಪ್ಪನ ಹಿಂಬದಿ ಹೋಗಿ ನಿಂತಳು.

ಲಚ್ಚಿ ಮಾವ ಕರೆದುಕೊಂಡು ಬಂದಿದ್ದ ಹುಡುಗ, ಲಚ್ಚಿಯ ನಡವಳಿಕೆ ಇಷ್ಟಪಟ್ಟು ಒಪ್ಪಿಗೆ ಸೂಚಿಸಿದ್ದ. ಲಚ್ಚಿ ಅವನಿಗೆ ಮನಸ್ಸಲ್ಲೇ ಶಪಿಸುತ್ತಾ ಹಸೆಮಣೆ ಏರಿದಳು.
 

‍ಲೇಖಕರು G

17 July, 2014

4 Comments

  1. srujan

    ಕಥೆ ಚೆನ್ನಾಗಿದೆ. ಸರಳ ಮತ್ತು ನೇರ ನಿರೂಪಣೆಯಿಂದ ಗಮನ ಸೆಳೆಯುತ್ತದೆ

  2. Prashanth

    I liked to attempt to take simple topic. I appreciate the attempt of writer. I apologize if I am hurting your feelings.
    However my request would be to take little bit more meaningful topic. Don’t write story just for the sake of writing something. The people who are reading stories/novels/poems should walk out with some experience and ripple of thoughts in their mind.

  3. shrihari dhupad

    kathe shudaravagi odisikondu hoguttade i like this

  4. Rudranna

    uttama nirupane

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading