ಅಕ್ಷತಾ ರವಿ
ದಿನಾ ಕಾಲೇಜಿಗೆ ಅಂತಾ ನೀನು ಬರ್ತಿದ್ದೆ ……. ಕೆಲ್ಸಕ್ಕೆ ಅಂತಾ ನಾನು…… ನಮ್ಮಿಬ್ಬರ ನಡುವೆ ಬಸ್ಸಿನಲ್ಲಿದ್ದ ನೂರಾರು ಜನರು. ಈ ಜನರೇ ನಮ್ಮಿಬ್ಬರ ಸಂಬಂಧಕ್ಕೆ ಸಾಕ್ಷಿ ಅಲ್ವೇನೇ? ಅದಕ್ಕೆ ಸಾಕ್ಷಿ ಬೇರೆ ಬೇಕೇನೋ ಮುಟ್ಹಾಳ ಅಂತಿಯೇನೋ. ನಿಜ ಕಣೆ ನಿನ್ನ ತಕರಾರನ್ನ ನಾನು ಒಪ್ತೀನಿ. ಸಾಕ್ಷಿ ಹೇಳೋ ಸಂಬಂಧಗಳು ಬಾಳ ದಿನ ಬದಕಲ್ಲ. ಹೋಗ್ಲಿ ಬಿಡು ವಿಷಯಕ್ಕೆ ಬರ್ತೀನಿ. ಅಷ್ಟೊಂದು ಜನರ ನಡುವೆಯು ನಾನು ಬಂದು ನಿನ್ನೆದುರಿನಲ್ಲೇ ನಿಲ್ತಿದ್ದೆ…. ನಿನ್ನನ್ನ ನೋಡೋದಕ್ಕೆ ಅಂತ. ಇಡೀ ಒಂದು ಗಂಟೆಯ ಜರ್ನಿಯಲ್ಲಿ ಅದೆಷ್ಟು ಸಲ ನಿನ್ನನ್ನ ನೋಡ್ತಿದ್ನೋ ಆ ದೇವ್ರೆ ಬಲ್ಲ. ನೀನು ನನ್ನಷ್ಟು ಅಲ್ದೆ ಇದ್ರು ಆಗೊಮ್ಮೆ ಈಗೊಮ್ಮೆ ನನ್ನ ಕಡೆ ಕಣ್ಣು ಹಾಯಿಸ್ತಿದ್ದೆ. ತಿಂಗ್ಳಾನುಗಟ್ಟಲೆ ನಾವಿಬ್ರು ಒಬ್ಬರನ್ನೊಬ್ರನ್ನ ನೋಡ್ಕೊಂಡೇ ಕಾಲ ಕಳೆದ್ವಿ. ಈ ಮೌನಾನೇ ಹಾಗೆ ಮಾತುಗಳನ್ನ ಮರೆಸಿ ಮನಸ್ಸಿನ ಭಾವನೆಗಳನ್ನ ಒಬ್ಬರಿಂದೊಬ್ಬರಿಗೆ ತಲುಪಿಸೋ ಸಂವಹನ. ನೋಟ ನಗು ಆಗೋಕೆ ಗ್ರೀನ್ ಸಿಗ್ನಲ್ಲು…… ನಗು ಮಾತಾಗೋಕೆ ಗ್ರೀನ್ ಸಿಗ್ನಲ್ಲು. ನಮ್ಮಿಬ್ಬರ ವಿಷಯದಲ್ಲಾಗಿದ್ದು ಅದೇ ಅಲ್ವೇನೇ?. ಏನಿತ್ತು ಆ ನಿನ್ನ ನೋಟದಲ್ಲಿ? ಬರೀ ಖಾಲಿ ಪೇಜಾ? ಅಥವಾ ನನಗರ್ಥವಾಗದಿರೋ ಭಾಷೆನಲ್ಲಿ ನೀನು ಏನಾದ್ರು ಬರ್ದಿದ್ಯಾ? ನೀನು ಹೇಳ್ಬಹುದು ಒಂದು ಹುಡುಗ ಒಂದು ಹುಡುಗಿನ ನೋಡೋದು…. ಒಂದು ಹುಡುಗಿ ಒಂದು ಹುಡುಗನ ನೋಡೋದು ಸಹಜ ಅಂತಾ. ಆದ್ರೆ ನಾನು ಹಾಗೆ ಹೇಳಲ್ವೇ. ಯಾಕಂದ್ರೆ ನಾನು ನೋಡ್ತಿದ್ದುದ್ದು ನಿನ್ನೊಬ್ಬಳನ್ನೇ ಕಣೆ. ನೀನು ಒಂದು ದಿನ ನಿನ್ನ ಮಾಮುಲಿ ಸೀಟಲ್ಲಿ ಕಾಣಿಸ್ಲಿಲ್ಲ ಅಂದ್ರೆ, ನಾನು ಇಡೀ ಬಸ್ಸನ್ನೇ ಹುಡುಕ್ತಾ ಇದ್ದೆ. ಆ ನಿನ್ನ ನೋಟಕ್ಕೆ ನನಗಿಷ್ಟವಾದ ಅರ್ಥನಾ ಕಲ್ಪಿಸ್ಕೊಂಡು ಆಕಾಶದಲ್ಲೇ ತೇಲಾಡ್ತಾ ಇದ್ದೆ. ಆದ್ರೆ ನೀನು ಅದಕ್ಕೂ ಕಲ್ಲು ಹಾಕ್ಬಿಟ್ಟೆ.
ಒಂದು ಸ್ವಲ್ಪ ದಿನ ಹೀಗೆ ಇರೋದಕ್ಕೆ ಅದೇನ್ ಬಂದಿತ್ತೋ ನಿನ್ಗೆ ರೋಗ. ಒಂದು ಚಿಕ್ಕದಾಗಿ ಸ್ಮೈಲ್ ಕೊಟ್ಟು ನಮ್ಮ ನೋಟಕ್ಕೊಂದು ತೆರೆ ಎಳೆದೆ. ಹೌದೇ ನೀನೇ ಕಣೆ ಮೊದಲು ಸ್ಮೈಲ್ ಕೊಟ್ಟಿದ್ದು. ನಗು ಮಾತಾಗೋಕೆ ಎಷ್ಟೊತ್ತು ಬೇಕು ಅಲ್ವಾ? ಒಂದೆರೆಡೇ ದಿನ ಸಾಕಾಯ್ತು. ಆವತ್ತು ಬಸ್ಸಿನಲ್ಲಿ ನಿನ್ನ ಪಕ್ಕದ ಸೀಟು ಖಾಲಿ ಇತ್ತು. ಯಾವ ಅಂಜಿಕೆನು ಇಲ್ದೆ ನಾನು ಬಂದು ನಿನ್ನ ಪಕ್ಕ ಕೂತ್ಕೊಂಡೆ. ಎಂಥ ಹುಂಬ ಅಲ್ವೇನೇ ನಾನು. ಹಾಯ್ ಅಂತ ಮಾತು ಶುರು ಮಾಡಿದ್ದು ನೀನೆ ಕಣೆ. ಹುಡುಗೀರು ಎಲ್ಲದ್ರಲ್ಲು ಮುಂದು ಅನ್ನೋದಕ್ಕೆ ಮತ್ತೊಂದು ಉದಾಹರಣೆ ಸಿಕ್ತು ನಂಗೆ. ‘ನಗು’ ನಮ್ಮಿಬ್ಬರ ನಡುವೆ ಒಂದು ಸೇತುವೆನಾ ನಿರ್ಮಿಸಿ ಆಗಿತ್ತು. ಹಾಗಾಗಿ ಮಾತು ಕಷ್ಟ ಅನ್ನಿಸ್ಲಿಲ್ಲ. ಆ ಸೇತುವೆಗೆ ಏನಂತ ಹೆಸರಿಡ್ಬೇಕೋ ನನಗಂತು ಗೊತ್ತಿಲ್ಲ. ನಿನ್ನ ಪ್ರಕಾರ ಆದ್ರೆ ಸ್ನೇಹದ ಸೇತುವೆ ಅಂತ ಇಡ್ಬಹುದೇನೋ. ಆದ್ರೆ ಹೆಸರಿಡೋ ವಿಷಯದಲ್ಲಿ ನಾನಿನ್ನು ಗೊಂದಲದಲ್ಲೇ ಇದ್ದೆ. ಶ್ರೀಮಂತರ ಮನೆ ಹುಡುಗಿ ನೀನು…..ಕಾಲೇಜಿಗೆ ಹೋಗೋಳು……ಆದ್ರೆ ಹಳ್ಳಿ ಭಾಷೆನಾ ಇನ್ನು ಬಿಟ್ಟಿರ್ಲಿಲ್ಲ. ‘ಎಲ್ ಕೆಲ್ಸ ಮಾಡ್ತೀರಾ’? ‘ಹೋಟೇಲಲ್ಲಿ’ ಯಾವ ಮುಚ್ಜು ಮರೆನು ಇಲೆ,್ದ ಯಾವ ಮುಲಾಜು ಇಲ್ದೆ ನೀನು ಕೇಳಿದ ಪ್ರಶ್ನೆಗೆ ನನ್ನಿಂದ ಉತ್ತರ ಬಂತು. ಏನ್ ಕೆಲ್ಸ ಅಂತ ನೀನು ಮರು ಪ್ರಶ್ನೆ ಮಾಡ್ಲಿಲ್ಲ. ನಿನ್ಗೆ ಅರ್ಥ ಆಯ್ತೇನೋ ಅಥವಾ ಅದರ ಅವಶ್ಯಕತೆ ನಿನ್ಗೆ ಇರ್ಲಿಲ್ವೇನೋ. ಒಟ್ನಲ್ಲಿ ಮೊದಲ ಮೀಟಿಂಗ್ ಇಂಟ್ರುಡಕ್ಷನ್ನಲ್ಲೇ ಕೊನೆಗೊಳ್ತು.
ದಿನಾ ಬಸ್ಸಲ್ಲಿ ಒಟ್ಟಿಗೆ ಕೂರೋದು…. ಮಾತಾಡೋದು…..ಅದೇನ್ ಮಾತಾಡ್ತಿದ್ವೋ ಆ ದೇವ್ರೆ ಬಲ್ಲ. ಬೇಕಾದ್ದು ಬೇಡ ಆಗಿದ್ದು ಎಲ್ಲಾ. ನಮ್ಮ ಪಕ್ಕದ ಸೀಟಲ್ಲಿ ಕುಳಿತವರು ನಮ್ಮ ಮಾತು ಕೇಳಿ ಅದೇನ್ ಅಂದ್ಕೋತಿದ್ರೋ….ಒಟ್ನಲ್ಲಿ ನಮ್ಮ ಮಾತು ಕಥೆ ಜೋರಾಗೇ ಸಾಗ್ತಿತ್ತು. ಆವತ್ತಿಂದ ಒಂದು ದಿನಾನು ನಾನು ಹೋಟೇಲಿಗೆ ರಜೆ ಹಾಕ್ಲಿಲ್ಲ. ರಜೆ ಹಾಕೋದಕ್ಕೆ ಮನಸೇ ಬರ್ತಿರಲಿಲ್ಲ ಅನ್ನು. ಒಂದು ಗಂಟೆಯ ಜರ್ನಿ ಆವತ್ತಿಂದ ಹತ್ತೇ ನಿಮಿಷ ಅನ್ಸೋದಕ್ಕೆ ಶುರುವಾಯ್ತು. ಪೇಟೆ ಇನ್ನು ಸ್ವಲ್ಪ ದೂರ ಇರ್ಬಾರ್ದಾಗಿತ್ತಾ ಅನ್ನಿಸ್ತಿತ್ತು.

ಆವತ್ತು ವ್ಯಾಲೆಂಟೈನ್ಸ್ ಡೇ. ನೀನಂದ್ರೆ ನನ್ಗೆ ಇಷ್ಟ ಕಣೆ ಅಂತ ಹೇಳ್ಬೇಕು ಅನ್ನೋ ಆಸೆ. ಆದ್ರೆ ಗೊಂದಲದಲ್ಲಿದ್ದೆ. ಯಾವತ್ತೂ ಮುಖಕ್ಕೆ ಏನನ್ನೂ ಹಚ್ಚದೇ ಇದ್ದವನು ನಿನ್ನ ಪರಿಚಯ ಆದಾಗಿನಿಂದ ಫೇರ್ ಅಂಡ್ ಲವ್ಲಿ ಹಚ್ಚೋದಕ್ಕೆ ಶುರು ಮಾಡಿದ್ದೆ. ಆವತ್ತು ಸ್ವಲ್ಪ ಜಾಸ್ತೀನೇ ಹಚ್ಕೊಂಡು ಬಂದಿದ್ದೆ. ಆದ್ರೆ ನನ್ನಾಸೆ ಈಡೇರ್ಲಿಲ್ಲ. ನಿಮ್ಮೂರಿನ ಹುಡುಗ ಬಂದು ನೀನು ಅವಳನ್ನ ಪ್ರೀತಿಸ್ತಿದ್ದೀಯ ಅಂದ. ನಾನು ಯಾಕೆ ಅಂತ ಕೇಳಿದ್ದಕ್ಕೆ ನಾನು ಪ್ರೀತಿಸ್ತಿದ್ದೀನಿ ಪ್ರಪೋಸ್ ಮಾಡ್ಬೇಕಿತ್ತು ಅಂದ. ನನ್ಗೆ ಏನ್ ಹೇಳ್ಬೇಕು ಅನ್ತ ಗೊತ್ತಾಗ್ಲಿಲ್ಲ. ಅವನು ಕೇಳಿದ್ದಕ್ಕೆ ‘ಇಲ್ಲ’ ಅಂದೆ. ಆಮೇಲೆ ಅವನಿಗೆ ಧೈರ್ಯ ಬರ್ಲಿಲ್ವೇನೋ ನಿನ್ಗೆ ಪ್ರಪೋಸ್ ಮಾಡ್ಲಿಲ್ಲ. ಅಲ್ಲಿಗೆ ನನ್ನ ಮೂಡು ಹಾಳಾಯ್ತು. ಅದೇ ಕೊನೆ. ಆಮೇಲೆ ಯಾವತ್ತೂ ನಿನ್ಗೆ ನನ್ನ ಪ್ರೀತಿ ವಿಷಯನ ಹೇಳ್ಬೇಕು ಅಂತ ಅನ್ನಿಸ್ಲೇ ಇಲ್ಲ. ಆವತ್ತು ನೀನು ಎಷ್ಟು ಚೆನ್ನಾಗಿ ಕಾಣಿಸ್ತಿದ್ದೆ ಗೊತ್ತಾ? ನಿನ್ನನ್ನ ನೋಡೋದೇ ನನಗೊಂದು ಸಂಭ್ರಮ ಆಗಿತ್ತು. ರೆಡ್ ಡ್ರೆಸ್ ಬೇರೆ…. ಬಳೆ ಕಾಣದ ಬಲಗೈ…. ಎಡಗೈಲಿ ಟೈಮ್ ನೋಡೋಕೆ ಅನಿವಾರ್ಯದಂತಿದ್ದ ವಾಚು…. ಖಾಲಿ ಕುತ್ತಿಗೆ…. ಕಿವಿಗೆ ಬೇಕೋ ಬೇಡ್ವೋ ಅನ್ನೋ ಹಾಗೆ ಸಿಕ್ಕಿಸ್ಕೊಂಡ ಓಲೆ…. ನತ್ತು ಇರದ ಮೂಗು…. ಹಣೆಯಲ್ಲಿ ಐಲೆನರ್ನಿಂದ ಇಟ್ಟ ಸಣ್ಣ ಬೊಟ್ಟು….. ಕೆನ್ನೆ ಮೇಲೆ ಎರಡು ಪಿಂಪಲ್ಲು….. ನಿರಾಭರಣ ಸುಂದರಿ. ಎಷ್ಟು ಸಿಂಪಲ್ಲೇ ನೀನು…. ಆವತ್ತು ಮಾತ್ರ ಅಲ್ಲ ನೀನು ಯಾವಾಗ್ಲೂ ಬರ್ತಿದ್ದಿದ್ದೇ ಹಾಗೆ. ಒಂದು ದಿನಾನು ಸ್ಪೆಷಲ್ ಡೇ ಅಂತಾ ಸೆಲೆಬ್ರೇಟ್ ಮಾಡ್ದವಳಲ್ಲ. ಎಲ್ಲಾ ದಿನವನ್ನು, ಎಲ್ಲಾ ಮನುಷ್ಯರನ್ನು ಸಮನಾಗಿ ನೋಡ್ತಿದ್ದೆ. ಅದಕ್ಕೆ ಉದಾಹರಣೆಯಾಗಿ ನಾನೇ ಇಲ್ವೇನೇ?
ಆವತ್ತು ನನ್ನ ಫ್ರೆಂಡ್ ಮದುವೆನಲ್ಲಿ ನೀನು ಸಿಕ್ಕಿದ್ದು ಎಷ್ಟು ಆಶ್ಚರ್ಯ ಅನ್ನಿಸಿತ್ತು ಗೊತ್ತಾ? ‘ಮದುಮಗಳು ನಮ್ಮ ನೆಂಟರು ಮಾರಾಯ’ ಅಂದೆ. ಆವತ್ತು ಇಡೀ ದಿನಾ ನನ್ನ ಖುಷಿಗೆ ಎಲ್ಲೇನೆ ಇರ್ಲಿಲ್ಲ. ಮದುವೆ ಗಂಡು ನಾನಾಗಿ, ಹೆಣ್ಣು ನೀನಾಗಿ ಕಲ್ಪಿಸಿಕೊಳ್ಳೋ ಅಷ್ಟರ ಮಟ್ಟಿಗೆ ನನ್ನ ಮನಸ್ಸು ಹಾಳಾಗಿಬಿಟ್ಟಿತ್ತು. ನನ್ನ ಜೊತೆ ಅದೆಷ್ಟು ಹರಟೆ ಹೊಡೀತಿದ್ಯೇ ನೀನು. ನಾನು ಅಷ್ಟೆ ಪ್ರಪಂಚಾನೆ ಮರೆತು ಮಾತಲ್ಲಿ ಮುಳುಗಿರ್ತಿದ್ದೆ. ಎಲ್ಲಾ ವಿಷಯನು ಮಾತಾಡ್ತಿದ್ವಿ. ಬಸ್ಸಲ್ಲಿ ಕುಳಿತ ಹುಡುಗ ಹುಡುಗಿಯರ ಬಗ್ಗೆ…. ನಮ್ಮೂರಿನ ಹುಡುಗ ನಿಮ್ಮೂರಿನ ಹುಡುಗಿ ಪ್ರೀತಿಸಿ ಓಡಿ ಹೋದ ಬಗ್ಗೆ ಹೀಗೆ ಎಲ್ಲಾ… ಆದ್ರೆ ನಮ್ಮ ಪ್ರೀತಿ ವಿಚಾರ ಬಂದಾಗ ಮಾತ್ರ ನಾನು ಮೌನಿ. ನನ್ನ ಮೌನಾನ ಮಾತಾಗಿಸೋ ಕಲೆ ನಿನ್ನಲ್ಲಿತ್ತು. ಆದ್ರೆ ನೀನು ಪ್ರಯತ್ನಿಸ್ಲಿಲ್ಲ. ಆ ಉತ್ಸಾಹ ನಿನಗಿಲರ್ಿಲ್ವೋ….. ಉದಾಸೀನತೆಯೋ….. ಅಥವಾ ಗೊತ್ತು ಗೊತ್ತಿಲ್ಲದವರ ಹಾಗೆ ಇದ್ದು ಬಿಡೋ ಜಾಣ್ಮೆಯೋ ನನಗೊತ್ತಿಲ್ವೇ. ಯಾಕಂದ್ರೆ ನಾನು ನಿನ್ನಷ್ಟು ಜಾಣ ಅಲ್ಲ. ಮಾತಿನಲ್ಲೇ ಸೌಧಾನ ಕಟ್ಟಿ ನಿನ್ನ ನಗುವಿನ ಬೆಳಕಿನಲ್ಲಿ ಕತ್ತಲೆಯನ್ನು ಮರೆತ ಮೂರ್ಖ ನಾನು. ಹೌದು ಕಣೆ. ಎಷ್ಟೋ ಸಾರಿ ರಾತ್ರಿ ಹೇಳಿತ್ತು ನನ್ಗೆ. ಬೆಳಕಿನಲ್ಲಿ ಇದ್ದೇನಂತ ಬೀಗಬೇಡ…. ನನ್ನ ಸರದಿ ಬಂದಾಗ ನಾನು ಬಂದೇ ಬತರ್ೀನಿ ಅಂತ. ಅದಕ್ಕೆ ನಾನಂದಿದ್ದೆ ನನ್ನ ಬದುಕಲ್ಲಿ ನೀನು ಇದ್ರೂ ಇಲ್ಲದಂತೆ ಅಂತ. ಈಗ ರಾತ್ರಿ ನನ್ನೆದುರು ನಿಂತು ನಕ್ಕು ಕಿಚಾಯಿಸುತ್ತೆ ಕಣೆ. ಆದ್ರೂ ನಾನು ರಾತ್ರಿಗೆ ಸೆಡ್ಡು ಹೊಡೆದು ಹೇಳ್ತೇನೆ ರಾತ್ರಿಯಲ್ಲಿ ಬೆಳಕನ್ನು ಸೃಷ್ಟಿಸಿ ಕನಸುಗಳಿಗೆ ಬಣ್ಣ ಬಳಿಯುವ ಕಲೆ ನಂಗೆ ಗೊತ್ತೆಂದು. ಎಂತಾ ಹುಚ್ಚ ಅಲ್ವೇನೇ ನಾನು. ಹೌದೇ ನನ್ನ ಮನಸ್ಸಲ್ಲಿ ಆಶಾಗೋಪುರನೇ ಕಟ್ಟಿಬಿಟ್ಟಿದ್ದೆ. ನಿನ್ನ ಒಪ್ಪಿಗೆ ಇಲ್ದೆ. ಅಪ್ಪ ಸತ್ತಾಗ ಅಮ್ಮನ ಸೆರಗಿನಲ್ಲಿ ಅವಿತು ಅತ್ತಿದ್ದು ನೆನಪಾಯ್ತು. ಈಗ ಅಮ್ಮನು ಇಲ್ಲ. ನಿನ್ನ ಎದೆಗೊಮ್ಮೆ ಒರಗಿ ಕಣ್ಣೀರು ಹಾಕ್ಬೇಕು ಅನ್ನುಸ್ತು. ಹಾಗೇ ಮಾಡ್ದೆ ಕೂಡ. ಇದೂ ಸಹ ನಿನ್ನ ಒಪ್ಪಿಗೆಯಿಲ್ಲದೆ ನನ್ನ ಕಲ್ಪನೆಯಲ್ಲಿ. ಕ್ಷಮಿಸ್ತೀಯ ಅಲ್ವೇನೆ ನನ್ನ?
ನನ್ನನ್ನ ನೀನು ಏನಂತ ಸ್ವೀಕರಿಸಿದ್ಯೋ ನನಗಂತು ಗೊತ್ತಿಲ್ಲ. ಒಬ್ಬ ಸ್ನೇಹಿತ ಅಂತಾನಾ? ದಿನಾ ಒಂದು ಗಂಟೆ ಸಿಗೋ ಎಂಟರ್ಟೈನ್ನ್ಮೆಂಟ್ ಅಂತಾನಾ? ನೀನು ಹೇಗಾದ್ರು ಅಂದ್ಕೋ ನನಗೇನ್ ಬೇಜಾರಿಲ್ಲ. ಆದ್ರೆ ನನ್ನ ಮಾತಲ್ಲಿ ಯಾವತ್ತು ನಿನ್ಗೆ ಪ್ರೀತಿ ಕಾಣಿಸ್ಲಿಲ್ವೇನೇ? ಅಥವಾ ಅದನ್ನ ಬರೀ ಸ್ನೇಹ ಅಂತ ಅಂದ್ಕೊಂಡ್ಯಾ? ಇದೆರಡೂ ಆಗಿರದೆ, ಗೊತ್ತಿದ್ದೂ ಗೊತ್ತಿಲ್ಲದವರ ಹಾಗೆ ಇದ್ದು ಬಿಟ್ಯಾ? ನಿಗೂಢ ಕಣೆ ನೀನು.
ಪ್ರೀತಿಸ್ತೀನಿ ಅಂತ ಮತ್ಯಾವತ್ತೂ ಹೇಳ್ಬೇಕು ಅಂತ ಅಂದ್ಕೊಂಡಿರಲಿಲ್ವೆ…..ಹೇಳ್ತಾನು ಇಲರ್ಿಲ್ಲ. ನೀನಾಗೆ ಹೇಳ್ಲಿ ಅಂತ ಕಾಯ್ತಾನು ಇಲರ್ಿಲ್ಲ. ಒಂದ್ವೇಳೆ ನಿನ್ಗೆ ಇಷ್ಟ ಇದ್ರೂನು ನನ್ಗೆ ಹೇಳ್ದೆ ಇಲರ್ಿ ಅಂತ ದೇವರಲ್ಲಿ ಕೇಳ್ಕೊಳ್ತಾ ಇದ್ದೆ. ಆಶ್ಚರ್ಯ ಆಗ್ತಿದ್ಯಾ? ಎಲ್ಲಾ ಪ್ರೇಮಿಗಳು ಪ್ರೀತಿ ವಿಷಯನ ಹೇಳೋದು ಹೇಗೆ ಅಂತ ಒದ್ದಾಡ್ತಾ ಇದ್ರೆ, ನಾನು ಮಾತ್ರ ಮನಸ್ಸಲ್ಲಿರೋ ವಿಷಯ ಆಚೆ ಬಂದು ಮನಸ್ಸು ಹಾಳಾಗ್ದೆ ಇರ್ಲಿ ಅಂತ ಬೇಡ್ಕೋತಾ ಇದ್ದೆ. ಯಾಕ್ ಹೇಳು ನೀನು ನನ್ನಿಂದ ದೂರಾಗ್ತೀಯೇನೋ ಅನ್ನೋ ಭಯಕ್ಕಲ್ಲ ಕಣೆ. ನನ್ನ ಪ್ರೀತಿಯ ಬೆಂಕಿಯಲ್ಲಿ ಬಿದ್ದು, ಎಲ್ಲಿ ಬೆಂದು ಹೋಗ್ತೀಯೇನೋ ಅನ್ನೋ ಆತಂಕಕ್ಕೆ. ಒಂದ್ವೇಳೆ ದೇವ್ರು ಏನಾದ್ರು ಪ್ರತ್ಯಕ್ಷ ಆಗಿ ನೀನು ಮುಂದಿನ ಜನ್ಮದಲ್ಲಿ ನನ್ನ ಹೆಂಡ್ತಿ ಆಗ್ತೀಯ ಅಂದ್ರೆ ಇವತ್ತು ರಾತ್ರೀನೇ ನಾನು ಸತ್ತು ಹೋಗ್ತೀನೀ ಕಣೆ. ಆದ್ರೆ ಈ ಜನ್ಮದಲ್ಲಿ ನೀನು ನನ್ಗೆ ಬೇಡ್ವೇ. ನಿನ್ನ ಪ್ರೀತಿಗೆ ಪಾತ್ರನಾಗ್ದೆ ಇರೋ ನಾನು ನತದೃಷ್ಟ ಅನ್ತಾ ಹೇಳಲ್ವೇ. ಯಾಕಂದ್ರೆ ನನ್ನ ನಗುವಿಗೆ ನಗುವಾಗಿ, ನನ್ನ ಮೌನಕ್ಕೆ ಮಾತಾಗಿ, ನನ್ನ ಕನಸುಗಳಿಗೆ ಕಾರಣಳಾಗಿ ಇಷ್ಟು ದಿನ ನನ್ನ ಜೊತೆ ಇದ್ಯಲ್ಲ ಅದೇ ನನ್ನ ಅದೃಷ್ಟ ಕಣೆ. ಆಸೆಗು ಒಂದು ಮಿತಿ ಇರ್ಬೇಕು ಅಲ್ವೇನೆ? ಇದಕ್ಕಿಂತ ಹೆಚ್ಚು ನೀನು ನನ್ಗೆ ಬೇಕು ಅಂದ್ರೆ ಅದು ದುರಾಸೆ ಆಗುತ್ಯೆ. ಪ್ರೀತಿ ಅಂದ್ರೆ ಆಸೆಗಳ ಅಡಿಯಲ್ಲಿ ಹಾಸಿಗೆಗೆ ಮರೆಯಾಗಿ ನೆನಪುಗಳ ನಡುವೆ ಉಗುಳು ನುಂಗ್ತಾ ಕಣ್ಮುಚ್ಚೋ ರಾತ್ರಿಯಾಗ್ಬೇಕು. ಪ್ರೀತಿ ಅಂದ್ರೆ ನೋವಲ್ಲೂ ಸುಖ ಕಾಣೋ ನೆನಪಾಗ್ಬೇಕು ಅಲ್ವೇನೆ.
ನೀನು ಸಾಯೋ ಅಷ್ಟು ನೋವು ಕೊಟ್ಟು ಹೋದೆ ಅಂತ ಸುಳ್ಳು ಹೇಳಲ್ವೇ ನಾನು…. ಸಿಹಿಯಾದ ಅನುಭವನಾ ಕೊಟ್ಟು ಸಾಯದೇ ಇರೋ ಹಾಗೆ ಮಾಡಿದ್ದೀಯ ಅಂತ ಸತ್ಯ ಹೇಳ್ತಿದ್ದೀನಿ. ಯಾವ ಸ್ವಾರ್ಥಾನು ಇಲ್ದೆ……ಯಾವ ಆಸೆನು ಇಲ್ದೆ ….. ಅಸಹ್ಯ ಪಡದೆ ಈ ಹೋಟೇಲ್ ಹುಡುಗನ ಜೊತೆ ಫ್ರೆಂಡ್ಶಿಪ್ ಬೆಳೆಸಿದ್ಯಲ್ಲ ಅದೇ ನೀನು ನನ್ಗೆ ಕೊಟ್ಟಿರೋ ಪ್ರೀತಿ ಕಣೆ.






0 Comments