ಕಾಯ್ಕಿಣಿ ಕಿಟಕಿ

ಪಾರ್ಲರ್ ಕಿಟಕಿಯ ಒಳ ಹೊರಗೂ…

shridhara prabhu

‘ಶ್ರೀ’ ತಲಗೇರಿ

ಬಂದ ಕ್ಷಣದಿಂದ ಬರೀ ಕುತ್ಕೊಂಡ್ ಕಾಯೋದೇ ಆಗೋಯ್ತು, ಅಂದ್ಕೊಳ್ತಾ ಇದ್ದೆ ಮನಸ್ಸಿನಲ್ಲಿ! ಕಾಯುವಿಕೆಯಲ್ಲೂ ಖುಷಿ ಇದೆಯಂತೆ, ಜೊತೆ ಕೊಡೋ ಜೀವ ಇದ್ರೆ.. ! ಕನ್ನಡಿಯತ್ತ ನೋಡ್ದೆ;ಅದೇನು ಆಸೆಗಳೋ ನಮಗೆ..ಕಣ್ಣ ಹುಬ್ಬನ್ನ ತೀಡಬೇಕಂತೆ, ಗುಲಾಬಿಯ ಎಸಳುಗಳಂತೆ ಕದಪು ರಂಗೇರಬೇಕಂತೆ.. ಚರ್ಮಕ್ಕೂ ಕಾಂತಿ ಹಚ್ಚಬೇಕಂತೆ… ಸುತ್ತಮುತ್ತಲೂ ಕಾಣುವ ಕನ್ನಡಿಗಳಲ್ಲಿ ಒಂದೊಂದಕ್ಕೆ ಒಂದೊಂದು ತರದ ಫ್ರೇಮ್ ! ಎಲ್ಲದರಲ್ಲೂ ಬಂಧಿ ನಮ್ಮ ಪ್ರತಿಬಿಂಬ… ಅಲ್ಲಲ್ಲಿ ಹರಡಿರುವ ಬ್ರಶ್ಗಳು, ಹಾಗೇ ಸಣ್ಣದಾಗಿ ಅಣಕಿಸುವ ಬಣ್ಣದ ಕಲೆಗಳು… ಅದಾಗ್ಲೇ ಸಂಜೆ ಆಗ್ತಾ ಬಂತು, ಇನ್ನೂ ಎಷ್ಟೊತ್ತು ಅಂತ ಕಾಯುವುದು! ಅಂತ ಯೋಚಿಸ್ತಾ ಪಾರ್ಲರಿನ ಕಿಟಕಿಯಲ್ಲಿ ಇಣುಕಿದೆ.

parlour1ಹವಾಮಾನಕ್ಕೆ ಸಂಜೆಯ ಪರಿಮಳ ಸೋಕಿತ್ತು. ನೀಲಿ ನೀಲಿ ಪೆಟ್ಟಿಗೆಗಳ ಕೈ ಗಾಡಿಗಳು ರಸ್ತೆಗಿಳಿದಿದ್ದವು. ಕಾದ ಬಂಡಿಯ ಎಣ್ಣೆಯಲ್ಲಿ ಮುಳುಗೇಳುವ ಬೋಂಡಾ ಭಜ್ಜಿಗಳು, ದೊಡ್ಡ ದೊಡ್ಡ ಬಾಣಲೆಗಳಲ್ಲಿ ಬಣ್ಣ ಬಣ್ಣದ ಮಸಾಲೆ ಸವರಿಕೊಂಡು ಕುಳಿತ ಅನ್ನದಗುಳುಗಳು.. ನಾನಾ ವಿಧದ ವೇಷ ತೊಡಲು ಸಜ್ಜಾಗುತ್ತಿರುವ ಪುರಿಗಳು.. ಇದೇ ಮೊದಲ ಬಾರಿ ಎಂಬಂತೆ ಚಪ್ಪರಿಸಿ ತಿನ್ನುತ್ತಿರುವ ಇನ್ಯಾರ್ಯಾರೋ.. ! ರಸ್ತೆಯ ಇಕ್ಕೆಲಗಳಲ್ಲಿ ನಿನ್ನೆ ಇಂದು ನಾಳೆಗಳನ್ನ ತಮ್ಮ ತಮ್ಮದೇ ಧಾಟಿಯಲ್ಲಿ ಅನುಭವಿಸುತ್ತಿರುವ ಜನ ಸಮೂಹ.

ಒಂದು ಕೈಯಲ್ಲಿ ಕೋಲು, ಇನ್ನೊಂದು ಕೈಯಲ್ಲಿ ಮೊಮ್ಮಗಳ ಕೈ ಹಿಡಿದು ಬರುತ್ತಿರುವ ತಾತ, ಅಪ್ಪನ ಹೆಗಲ ಮೇಲೆ ಕುಳಿತ ರಾಜ ಠೀವಿಯ ಮಗ, ಪಾಪುವಿನ ಕೆನ್ನೆ ಹಿಂಡುತ್ತ ಮುದ್ದಿಸುತ್ತಿರುವ ಅಮ್ಮ, ಗೆಳೆತಿಯನ್ನ ಸೈಕಲ್ ಮೇಲೆ ಕೂರಿಸ್ಕೊಂಡು ಜಗತ್ತನೇ ಗೆದ್ದ ಸಂಭ್ರಮದ ಕಣ್ಣ ಹೊಳಪಿನ ಗೆಳೆಯ, ಮೋಡ ಕವಿದ ಆ ಮಳೆಗಾಲದ ಸಂಜೆಯಲ್ಲಿ ತಮ್ಮ ತಮ್ಮ ಗೂಡುಗಳಲ್ಲಿ ಬೆಚ್ಚನೆ ಮಲಗಿಸಿಟ್ಟು ಬಂದ ಮರಿಗಳಿಗಾಗಿ ತುತ್ತು ಕೊಂಡೊಯ್ಯುತ್ತಿರುವ ಹಕ್ಕಿ ಸಾಲು.. ಒಂದು ಕಡೆ ತಮ್ಮದೇ ಲೋಕಗಳಲ್ಲಿ ಮುಳುಗಿರುವ ಜನರ ಗಿಜಿಗಿಜಿ; ಇನ್ನೊಂದೆಡೆ ಪ್ರತ್ಯೇಕ ಜಗತ್ತನ್ನೇ ಕಟ್ಟಿಕೊಡುವ ಪ್ರಕೃತಿಯ ಕಲರವ.ಈ ಕ್ಷಣವನ್ನ ಹೀಗೆ ನಿಲ್ಸೋ ಹಾಗಿದ್ದಿದ್ರೆ ಎಷ್ಟು ಚೆಂದ ಅಲ್ವಾ!.. ನಮ್ಮ ಕಣ್ಣುಗಳಲ್ಲಿ ಸೆರೆಯಾಗೋ ಅದೆಷ್ಟೋ ಕ್ಷಣಗಳಿಗಿರುವ ಮೌಲ್ಯ, ಕ್ಯಾಮೆರಾಗಳಲ್ಲಿ ನಾವು ಸೆರೆಹಿಡಿಯೋ ಅದೆಷ್ಟೋ ಚಿತ್ರಗಳಿಗೆ ಇಲ್ಲ ಅನಿಸುತ್ತದೆ, ಯಾಕೆ ಗೊತ್ತಾ, ನಾವು ಕಣ್ಣುಗಳಲ್ಲಿ ಸೆರೆಹಿಡಿಯೋ ಚಿತ್ರ ಭಾವಗಳೊಂದಿಗೆ ಬೆಸೆದುಕೊಂಡಿರುತ್ತದೆ, ಅದನ್ನ ಅನುಭವಿಸಿದ ಕ್ಷಣದ ಮಜವೇ ಬೇರೆ!..

ಅಷ್ಟರಲ್ಲಿ ರಸ್ತೆಯ ಆ ತುದಿಯಿಂದ ಯಾರೊ ಒಬ್ಬ ಹುಡುಗ ಬಲೂನುಗಳನ್ನು ಹಿಡಿದುಕೊಂಡು ಬಂದ. ಹಾಕಿಕೊಂಡ ಬಟ್ಟೆಗಳು ಕೊಳೆಯಾಗಿದ್ದರೂ ಮುಖದಲ್ಲಿನ ಮಂದಹಾಸ ಎಂಥವರನ್ನೂ ಒಂದು ಕ್ಷಣ ಸೆಳೆದುಬಿಡುವಂತಿತ್ತು.. ಮೊಮ್ಮಗಳ ಜೊತೆ ಬಂದಿದ್ದ ತಾತ ಅಲ್ಲೇ ಹತ್ತಿರದ ಬೇಕರಿಯಲ್ಲಿ ಬ್ರೆಡ್ ತೆಗೆದುಕೊಳ್ತಾ ಇದ್ರು. ಈ ಹುಡುಗ ಬಂದು ಅಲ್ಲೇ ಎದುರಲ್ಲಿ ನಿಂತ; ತಾತನ ಜೊತೆ ಬಂದಿದ್ದ ಪುಟ್ಟ ಹುಡುಗಿಯ ಕೈಲಿದ್ದ ಬ್ರೆಡ್ಡನ್ನೇ ನೋಡುತ್ತಾ.. ಅದನ್ನು ನೋಡಿದ ಅಂಗಡಿಯವನು, ಇಲ್ಲ್ಯಾರಿಗೂ ಬಲೂನು ಬೇಕಾಗಿಲ್ಲ, ಹೋಗು ಹೋಗು ಅಂತ ದಬಾಯಿಸತೊಡಗಿದ.

ಆದರೆ ಆ ಹುಡುಗ ಮಾತ್ರ ಅವಳ ಕೈಲಿದ್ದ ಬ್ರೆಡ್ಡನ್ನೇ ನೋಡುತ್ತಾ ನಿಂತಿದ್ದ. ಅದನ್ನು ಗಮನಿಸಿದ ತಾತ, ಒಂದೆರಡು ಬ್ರೆಡ್ ತೆಗೆದು ಆ ಹುಡುಗನಿಗೆ ಕೊಟ್ರು. ಮೊದಲು ಸಂಕೋಚಪಟ್ಟುಕೊಂಡ ಹುಡುಗ, ತಾತ, ಪರವಾಗಿಲ್ಲ ತಗೋ ಅಂತ ಹೇಳಿದ ಕೂಡಲೇ ಖುಷಿಯಿಂದ ತೆಗೆದುಕೊಂಡು ತಿನ್ನತೊಡಗಿದ. ಹಸಿವಾದಾಗ ಸಿಕ್ಕಂತಹ ಆ ಬ್ರೆಡ್ಡಿನ ರುಚಿ ಎಷ್ಟಿರಬಹುದು!..ಹಾಗೇ ಒಂದಷ್ಟು ಬಲೂನುಗಳನ್ನು ತೆಗೆದು ಆ ಪುಟಾಣಿ ಹುಡುಗಿಯ ಕೈಯಲ್ಲಿಟ್ಟ ಹುಡುಗ, ತಾತನೆಡೆಗೆ ಒಂದು ವಿಶಿಷ್ಟ ನೋಟ ಬೀರಿ, ಮುಂದೆ ನಡೆದ.

makeupಇವೆಲ್ಲವನ್ನೂ ಕಿಟಕಿಯಿಂದ ನೋಡುತ್ತಿದ್ದ ನನಗೆ “ಅಬ್ಬಾ!” ಅನಿಸಿತು. ಹುಡುಗನ ಹಸಿವನ್ನು ಅರ್ಥ ಮಾಡಿಕೊಂಡ ತಾತ, ಕೃತಜ್ಞತೆಯನ್ನು ಬಣ್ಣ ಬಣ್ಣದ ಬಲೂನುಗಳ ಮೂಲಕ ಸಲ್ಲಿಸಿದ ಆ ಬಾಲಕ, ಬದುಕು ಅದೆಷ್ಟು ಚೆಂದ ಅಲ್ವಾ!.. ಕೆಲವೊಂದು ಸಲ ನಾವು ನಮ್ಮ ಸುತ್ತಮುತ್ತಲೂ ಏನು ನಡೀತಾ ಇದೆ ಅನ್ನೋದನ್ನೇ ಗಮನಿಸೋದಿಲ್ಲ. ಖುಷಿ, ಎಲ್ಲೋ ಇರುವ ವಸ್ತು ಅಲ್ಲ; ನಾವು ಸೃಷ್ಟಿಸಿಕೊಳ್ಳಬೇಕಾದದ್ದು ಅನ್ನಿಸ್ತು. ಪಾರ್ಲರ್ ಒಳಗಿನ ಕನ್ನಡಿ ನನ್ನನ್ನ ನೋಡಿ ಗಹಗಹಿಸಿದಂತೆ ಕಂಡಿತು.

ಪಾರ್ಲರ್ ಒಳಗೆ ಕೂರಲು ಮನಸ್ಸಾಗಲಿಲ್ಲ; ಹೊರಗೆ ಕಾಲಿಟ್ಟೆ. ಮಳೆ ಜಿನುಗುವುದಕ್ಕೆ ಶುರು ಆಯ್ತು. ಅಲ್ಲೇ ಪಕ್ಕದಲ್ಲಿದ್ದ ಪೆಟ್ಟಿಗೆ ಅಂಗಡಿಯಲ್ಲಿ ಒಂದು ಕಪ್ ಚಹಾ ಕೇಳಿ ಪಡೆದು, ಅದನ್ನು ಹೀರುತ್ತಾ ನಿಂತೆ. ಮಳೆ ಹನಿಗಳು ಪ್ರೀತಿಯಿಂದ ಭೂಮಿಯನ್ನು ಸ್ಪರ್ಶಿಸ್ತಾ ಇದ್ವು.. ಮತ್ತೆ ಪಾರ್ಲರಿನ ಕಿಟಕಿಯ ನೆನಪಾಯ್ತು. ಮತ್ತ್ಯಾರಾದರೂ ಬಂದು ಕೂತಿರಬಹುದು. ಅವರ ಫ಼್ರೇಮಿನಲ್ಲಿ ನಾನೂ ಒಂದು ಚೆಂದ ಚಿತ್ರ ಆಗ್ಲಿ ಅಂದ್ಕೊಳ್ತಾ ಮುಗುಳ್ನಗತೊಡಗಿದೆ. ಏನ್ ಮ್ಯಾಡಮ್! ಟೀ ಚೆನ್ನಾಗಿದ್ಯಾ? ಅಂದ ಅಂಗಡಿಯವ. ಈ ಮಳೇಲಿ ನೀವು ಕೊಟ್ಟಿರೋ ಚಹಾದ ಪರಿಮಳಕ್ಕೆ ಮತ್ತೊಂದಿಷ್ಟು ಹೊತ್ತು ಮಳೆ ಸುರೀತಾನೇ ಇರ್ಲಿ ಅನ್ನಿಸ್ತಿದೆ ಅಂದೆ. ಅರೆರೆ! ಅಂಗಡಿಯವನ ಕಣ್ಣುಗಳಲ್ಲಿ ಅದೆಂಥದೋ ಹೊಳಪು, ಏನನ್ನೋ ಸಾಧಿಸಿದ ಸಂತೃಪ್ತ ಭಾವ.. !

ಇಷ್ಟೇ ಅಲ್ವಾ ಬದುಕು, ಖುಷಿ ಅನ್ನುವುದು ನಾವು ಸೃಷ್ಟಿಸಿಕೊಳ್ಳಬೇಕಾದ ಸರಕು…

 

‍ಲೇಖಕರು Admin

May 21, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಬಸ್ಸು ನಿಲ್ದಾಣ…

ಬಸ್ಸು ನಿಲ್ದಾಣ…

ಎನ್ ಶೈಲಜಾ ಹಾಸನ ಬಸ್ಸು ನಿಲ್ದಾಣ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ. ಪ್ರತಿಯೊಬ್ಬರ ಜೀವನದಲ್ಲೂ ಈ ಬಸ್ಸು ನಿಲ್ದಾಣ...

21 ಪ್ರತಿಕ್ರಿಯೆಗಳು

  1. Shama, Nandibetta

    ಒಂದೊಂದು ವಾಕ್ಯಕ್ಕೂ ಒಂದೊಂದು ಕಾಮೆಂಟ್ ಹಾಕಲಾ ಅನ್ನೋ ಥರ ಬರೆದಿದ್ದೀಯಲ್ಲೋ ಶ್ರೀ.

    “ಇಷ್ಟೇ ಅಲ್ವಾ ಬದುಕು, ಖುಷಿ ಅನ್ನುವುದು ನಾವು ಸೃಷ್ಟಿಸಿಕೊಳ್ಳಬೇಕಾದ ಸರಕು…”

    ಇಂವ ನನ್ ತಮ್ಮ ಅಂತ ಹೇಳ್ಕೊಳ್ಳೋದೇ ಹೆಮ್ಮೆ .. ಹೀಗೇ ಬರೀತಿರು

    ಪ್ರತಿಕ್ರಿಯೆ
    • Shree Talageri

      ತುಂಬು ಮನದ ಧನ್ಯವಾದಗಳು ಶಮಕ್ಕಾ, ಈ ಪ್ರೀತಿಗೆ… 🙂 🙂 🙂

      ಪ್ರತಿಕ್ರಿಯೆ
  2. Sanjana

    “Imagination is the soil that brings dreams to life”
    Hatsoff to people who give us the opportunity to read their imagination through their articles

    ಪ್ರತಿಕ್ರಿಯೆ
  3. Soumya Bhat

    ಓದ್ತಾ ಓದ್ತಾ ನೀನು ಪದಗಳಿ0ದ ಸೃಷ್ಠಿಸಿದ ಪ್ರಪ0ಚದಲ್ಲೇ ಇದ್ದಾ0ಗಾತು….ತು0ಬಾ ಚೆನ್ನಾಗಿದ್ದು …

    ಪ್ರತಿಕ್ರಿಯೆ
    • ‘ಶ್ರೀ’ ತಲಗೇರಿ

      ತುಂಬು ಮನದ ಧನ್ಯವಾದಗಳು ಸೌಮ್ಯಾ ನಿನ್ನ ಪ್ರತಿಕ್ರಿಯೆಗೆ… 🙂 🙂 🙂

      ಪ್ರತಿಕ್ರಿಯೆ
  4. Nagesha Mysore

    ಹೊರಗೆ ಯಾವ ಪಾರ್ಲರಿನ ಬಣ್ಣದ ಜಗವೆ ಜಗಮಗಿಸುತ್ತಿದ್ದರೂ ಅದರಡಿಯ ಮೂಲ ಅಗತ್ಯಗಳು – ಹಸಿವು, ಆಸೆ, ಮಾನವೀಯತೆ ಇತ್ಯಾದಿ, ಎಂದೆಂದಿಗು ಪ್ರಸ್ತುತ ಅಂತ ಚೆನ್ನಾಗಿ ಬಿಂಬಿಸಿದ ಬರಹ .. ಲವ್ಲಿ

    ಪ್ರತಿಕ್ರಿಯೆ
    • ‘ಶ್ರೀ’ ತಲಗೇರಿ

      ನಾಗೇಶ ಜೀ 🙂 🙂 🙂 ತಮ್ಮ ಪ್ರತಿಕ್ರಿಯೆ ಓದಿ ಖುಷಿಯಾಯ್ತು 🙂 🙂 🙂 ಧನ್ಯವಾದ 🙂 🙂 🙂

      ಪ್ರತಿಕ್ರಿಯೆ
    • ‘ಶ್ರೀ’ ತಲಗೇರಿ

      ವತ್ಸಣ್ಣಾ.. 🙂 🙂 🙂 ಈ ಅಕ್ಕರೆಯಿಂದ ಭಾವಲೋಕಕೆ ರೆಕ್ಕೆ ಬಂದಿಹುದು ಸುಳ್ಳಲ್ಲ… 🙂 🙂 🙂 ಧನ್ಯವಾದ 🙂 🙂 🙂

      ಪ್ರತಿಕ್ರಿಯೆ
  5. ಎಸ್ ಎಸ್ ಸಜ್ಜನ್

    ಖುಷಿ ಆಯಿತು ಇಂದು ….ಆ ಕಿಟಕಿಯಲ್ಲಿ ನನ್ನ ಕಣ್ಣ ಹನಿ ಜಾರಿತ್ತು

    ಪ್ರತಿಕ್ರಿಯೆ
    • ‘ಶ್ರೀ’ ತಲಗೇರಿ

      ಹೃದಯಪೂರ್ವಕ ಧನ್ಯವಾದಗಳು ಸಂಗಮ್ ಬ್ರೋ… 🙂 🙂 🙂

      ಪ್ರತಿಕ್ರಿಯೆ
  6. Sunitha

    ಮನದ ಭಾವನೆಗಳನ್ನೂ ಸಂಜೆ ವಾತಾವರಣದ ಸೊಬಗನ್ನು ಎಷ್ಟೊಂದು ಸುಂದರವಾಗಿ ವ್ಯಕ್ತಪಡಿಸಿದ್ದೀರ 🙂 ನಿಮ್ಮ ಅಪ್ರತಿಮ ಬರಹಕ್ಕೆ ನೂರು ನಮನ 🙂 🙂

    ಪ್ರತಿಕ್ರಿಯೆ
    • ‘ಶ್ರೀ’ ತಲಗೇರಿ

      ತುಂಬು ಮನಸಿನ ಧನ್ಯವಾದ ಸುನೀತಾ ಜೀ… 🙂 🙂 🙂

      ಪ್ರತಿಕ್ರಿಯೆ
    • ‘ಶ್ರೀ’ ತಲಗೇರಿ

      ಧನ್ಯವಾದಗಳು ಅನಾಮಿಕ 🙂 🙂 🙂

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This