ಪತ್ರಕರ್ತೆ, ಲೇಖಕಿ ಭಾರತಿ ಹೆಗಡೆ ಅವರ ಕಾದಂಬರಿ ‘ಉಪ್ಪಾಗೆ ಹರಳು’
‘ಬಹುರೂಪಿ’ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ.
ಈ ಕಾದಂಬರಿಯ ಕುರಿತು ಡಾ ಶ್ವೇತಾರಾಣಿ ಹೆಚ್ ಅವರ ವಿಮರ್ಶೆ ಇಲ್ಲಿದೆ.
–ಡಾ ಶ್ವೇತಾರಾಣಿ ಹೆಚ್
ಪತ್ರಕರ್ತೆ, ಲೇಖಕಿ ಭಾರತಿ ಹೆಗಡೆ ಬರೆದಿರುವ “ಉಪ್ಪಾಗೆ ಹರಳು” ಎಂಬ ಕಾದಂಬರಿ ಉಪ್ಪಾಗೆ ಹಣ್ಣು, ಅದರ ಉಪ ಉತ್ಪನ್ನದ ಜೊತೆಗೆ ಆ ಪ್ರದೇಶದ ಜನಜೀವನದ ಬಗ್ಗೆಯೂ ಬೆಳಕು ಚೆಲ್ಲುತ್ತದೆ. “ಉಪ್ಪಾಗೆ ಹರಳು” ಈ ಹೆಸರು ಬಯಲು ಸೀಮೆಯವರಿಗೆ ಅಪರಿಚಿತ ಹಾಗೂ ವಿಚಿತ್ರವೆನಿಸುತ್ತದೆ. ಏಕೆಂದರೆ, ಹರಳು (ಔಡಲ), ಹೊಂಗೆ, ಹಿಪ್ಪೆ ಬೀಜಗಳಿಂದ ಎಣ್ಣೆ ತೆಗೆದು ಗೊತ್ತಿರುವ ಇವರಿಗೆ ಉಪ್ಪಾಗೆ ಹಣ್ಣು ಎಂಬುದು ಅಪರಿಚಿತ. ಅಪರಿಚಿತವಾದ ಹಣ್ಣಿನಿಂದ ತುಪ್ಪಾ ತೆಗೆಯುತ್ತಾರೆ ಎಂಬುದು ಎಲ್ಲಿಂದ ತಿಳಿಯಬೇಕು. ಇನ್ನು ತುಪ್ಪವನ್ನು ಅಡುಗೆಗೆ ಬಳಸುತ್ತಾರೆ ಮತ್ತು ತಿನ್ನುತ್ತಾರೆ ಎಂಬುದು ಸೋಜಿಗದ ಸಂಗತಿ. ಬೆಂಗಳೂರಿನಲ್ಲಿ ಪುಸ್ತಕ ಬಿಡುಗಡೆಯಾದಾಗ ಸ್ವತಃ ಲೇಖಕಿ ಕೂಡ ಈ ಉಪ್ಪಾಗೆ ಬಗ್ಗೆ ಅನೇಕ ಪ್ರಶ್ನೆಗಳನ್ನು ಎದುರಿಸಿದ್ದಾರೆ. ಇದು ಹೊಸವಿಷಯ ಮತ್ತು ಅಪರಿಚಿತ ಹಣ್ಣುಕೂಡ ಹೌದು. ಉಪ್ಪಾಗೆ ಎಂದರೆ ಗಾರ್ಸಿನಿಯಾ ಗುಮ್ಮಿ ಗುಟ್ಟಾ ಅದರ ಸಸ್ಯ ವೈಜ್ಞಾನಿಕ ಹೆಸರು. ಇದೆ ಪ್ರಜಾತಿಗೆ ಸೇರಿದ ಜಾವಣಿಗೆ, ಮುರುಗಲು, ಎಂಬ ಹಣ್ಣು ಕೂಡ ಇದ್ದಾವೆ. ಆದರೆ ಈ ಉಪ್ಪಾಗೆಗೆ ವಾಣಿಜ್ಯವಾಗಿ ಮಾನ್ಯತೆ ದೊರೆತಿದೆ. ಇದರ ಅನೇಕ ಉಪಉತ್ಪನ್ನಗಳು ಮಾರುಕಟ್ಟೆಯಲ್ಲಿ ಕಾಣಸಿಗುತ್ತವೆ. ಕರ್ನಾಟಕದ ಉತ್ತರ ಕನ್ನಡ, ದಕ್ಷಿಣ ಕನ್ನಡ ಸೇರಿದಂತೆ ಪಶ್ಚಿಮಘಟ್ಟದ ಅನೇಕ ಪ್ರದೇಶದಲ್ಲಿ ಬೆಳೆಯುವ ಅನೇಕ ಗಿಡ, ಮರ, ಹಣ್ಣುಗಳ ಪರಿಚಯ ಹೊರ ಜಗತ್ತಿಗೆ ಆಗಬೇಕಿದೆ. ಅದರ ಜೊತೆಗೆ ಉಪ್ಪಾಗೆ ಮರಗಳ ಸಂರಕ್ಷಣೆ ಕೂಡ ಆಗಬೇಕಿದೆ. ಕಳೆದ ಮೂರು ವರ್ಷದಲ್ಲಿ ಕರ್ನಾಟಕದಲ್ಲಿ 2836 ಚ.ಕಿ.ಮೀ (ಶೇ೧.೬%) ಅರಣ್ಯನಾಶವಾಗಿದೆ ಎಂದು ವರದಿಗಳು ತಿಳಿಸುತ್ತವೆ.
ಉಪ್ಪಾಗೆ ಹರಳು ಎಂಬ ಈ ಕಾದಂಬರಿಯಲ್ಲಿ ಒಂದು ತಲೆಮಾರಿನ ಸಾಂಸ್ಕೃತಿಕ ಸ್ಥಿತ್ಯಂತರಗಳೊಂದಿಗೆ ಪ್ರಾಕೃತಿಕ ಸ್ಥಿತ್ಯಂತರಗಳು ಅನಾವರಣಗೊಂಡಿವೆ. ಈ ಕಾದಂಬರಿ, ಕೇವಲ ಉಪ್ಪಾಗೆ ಹಣ್ಣಿನ ಬಗ್ಗೆ ಮಾತನಾಡುವುದಿಲ್ಲ. ಅದರೊಂದಿಗೆ ಅಂಟುಕೊಂಡಿರುವ ಮಹಿಳಾ ಲೋಕ ಒಂದನ್ನು ತೆರೆದಿಡುತ್ತದೆ. ಅರಣ್ಯ ಕೇವಲ ಅರಣ್ಯವಲ್ಲ ಅನೇಕರ ನಂಬಿಕೆ, ಆಚರಣೆ ಜೊತೆಗೆ ಜೀವನಾಡಿಯೂ ಕೂಡ ಹೌದು. ಅನೇಕರ ಹೊಟ್ಟೆ-ಬಟ್ಟೆಗೆ ಆಶ್ರಯದಾತೆ ಈ ಪ್ರಕೃತಿಮಾತೆ. ಕಾಡು ನಾಶವಾಗುವಾಗ ಅಸಹಾಯಕರ ಹತಾಶೆಯ ಧ್ವನಿ, ಬಡತನದ ಬದುಕು ಹಸನಾಗುತ್ತದೆ ಎಂಬ ಭರವಸೆ ಕಮರಿದ ಜೀವನ ಸಂಗತಿಗಳ ಮೇಲೆ ಬೆಳಕು ಚೆಲ್ಲುತ್ತದೆ. ಉಪ್ಪಾಗೆ ಬೆಳೆಯುವ ಪರಿಸರ ಬೇರೆಲ್ಲೊ ಇಲ್ಲ ಅದು ನಮ್ಮ ಕರ್ನಾಟಕದಲ್ಲೇ ಉತ್ತರ ಕನ್ನಡ ಜಿಲ್ಲೆಯಲ್ಲಿದೆ. ಕಾದಂಬರಿಯಲ್ಲಿ ಆ ಊರಿನ ಹೆಸರು ಉಪ್ಗಿ ಎಂಬುದಾಗಿದೆ. ಜಾಗತೀಕರಣದ ಪ್ರಭಾವ ನಮ್ಮ ಹಳ್ಳಿಗಳಮೇಲೆ ಉಂಟಾಗಿರುವುದನ್ನು ಈ ಹಳ್ಳಿಯಲ್ಲಿ ಉಂಟಾಗುವ ಬದಲಾವಣೆಗಳು ಪ್ರತಿನಿಧಿಸುತ್ತವೆ. ಪ್ರಕೃತಿ ಸಹಜ ಸೌಂದರ್ಯದಿಂದ ಸಂಪದ್ಬರಿತವಾಗಿದ್ದ ಕಾನನ ಮನುಷ್ಯನ ದುರಾಸೆಯ ದಾಳಿಗೆ ನೆಲಸಮವಾಗಿ ಅವನ ಸ್ವಾರ್ಥದ ಪ್ರತೀಕವಾಗಿ ನಿಂತಿದೆ.
ಮನುಷ್ಯನ ಈರ್ಷ್ಯೆ, ದ್ವೇಷ, ತ್ಯಾಗ, ಅಸಹಾಯಕತೆ, ಕರುಣೆ, ಪ್ರೀತಿಯೂ ಕೂಡ ಈ ಕಾದಂಬರಿಯಲ್ಲಿ ಹಾಸುಹೊಕ್ಕಿವೆ. ಆಧುನಿಕತೆ ಕಾಲಿರಿಸಿದಂತೆಲ್ಲ ಹಳ್ಳಿಗಳ ಮೇಲೆ ಉಂಟಾಗುವ ಪರಿಣಾಮ, ಬದಲಾವಣೆಗಳು, ಜೀವನ ಮುಖ್ಯ ಅದರೊಂದಿಗೆ ಪ್ರಕೃತಿ ಅಷ್ಟೇ ಮುಖ್ಯ ಎಂಬುದನ್ನು ಸ್ಪಷ್ಟಪಡಿಸುತ್ತದೆ.
ಕಾದಂಬರಿಯ ಜಾನಕಿ, ಬಂಗಾರಮ್ಮ, ತಿಪ್ಪಾ, ಪತ್ರೆ ಪರಮಣ್ಣ (ಕಾಡಿನಲ್ಲಿ ಪತ್ರೆಗಳನ್ನು ಸಂಗ್ರಹಿಸಿ ಪೇಟೆಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಿದ್ದ ಆದ್ದರಿಂದ ಪತ್ರೆ ಅವನ ಹೆಸರಿಗೆ ಅನ್ವರ್ಥವಾಗಿತ್ತು) ಹರಿಭಟ್ಟ (ಹ್ಯಾರಿಸ್ ಹಳ್ಳಿಗರ ಬಾಯಲ್ಲಿ ಹರಿಭಟ್ಟನಾಗಿದ್ದ) ಯಮುನೆ, ನಾಣು, ಪ್ರಭಾಕರ ಇನ್ನೂ ಮುಂತಾದ ಪಾತ್ರಗಳು ಕೇವಲ ಉಪ್ಗಿಯನ್ನು ಪ್ರತಿನಿಧಿಸುವುದಿಲ್ಲ. ಸಾಮಾನ್ಯವಾಗಿ ಅಂತಹ ಹಳ್ಳಿಗಳಲ್ಲಿ ಇರಬಹುದಾದ ಪಾತ್ರಗಳನ್ನು ಪ್ರತಿನಿಧಿಸುತ್ತವೆ. ಜಾಗತೀಕರಣದ ಪ್ರಭಾವಕ್ಕೆ ಒಳಗಾದ ಹಳ್ಳಿಗಳ ಮೇಲೆ ಉಂಟಾಗಬಹುದಾದ ಅನುಕೂಲ, ಪ್ರತಿಕೂಲ ಪರಿಣಾಮಗಳನ್ನು ಈ ಕಾದಂಬರಿ ತೆರೆದಿಡುತ್ತದೆ.

ಕಾದಂಬರಿಯ ಪ್ರಾರಂಭದಲ್ಲಿ ಉಪ್ಪಾಗೆ ಹಣ್ಣನ್ನು ಹೆಕ್ಕಲು ಹೋಗುವ ಮಹಿಳೆಯರ ಚಿತ್ರಣ ಬರುತ್ತದೆ. ಮಲೆನಾಡಿನ ಮಳೆಗೆ ಹೊಂದಿಕೊಂಡ ಅವರ ಬದುಕು, ಆಹಾರ ಪದ್ದತಿ, ಬುಟ್ಟಿ ಹಿಡಿದು ಹಣ್ಣು ತರುವುದು ಆ ಕಾಡಿನೊಂದಿಗೆ ಅವರಿಗೆ ಒಂದು ಅವಿನಾಭಾವ ಬಂಧ ಬೆಸೆದಿದೆ. ನಾಯಕಿ ಜಾನಕಿಯ ಬಡತನದ ಬದುಕಿನೊಂದಿಗೆ ಅಪ್ಪನ ಅನಾದಾರ, ತಮ್ಮಂದಿರ, ತಂಗಿಯ ಜವಾಬ್ದಾರಿ ಹೊತ್ತ ಆ ಹೆಣ್ಣುಮಗಳು ದುಸ್ತರವಾದ ಬದುಕಿನ ಬಂಡಿಯನ್ನು ಸಾಗಿಸುತ್ತಿದ್ದಾಳೆ. ”ಹೂ ಎಂಗ ಹೋಗಿಯಿದ್ದು ಕತ್ಲೆಕಾನಿಗೆ, ಸ್ವಲ್ಪಾ ಹಣ್ಣಲ್ಲೆ ಅಲ್ಲಿ. ನಮಗೆ ಈ ವರ್ಷ ಪೂರ್ತಿ ತುಪ್ಪಕ್ಕೆ ತೊಂದ್ರಿಲ್ಲೆʼ ಎಂದು ಹೇಳಿ ಕಂಬಳಿ ಕೊಪ್ಪೆಯನ್ನು ಹೊರಗಡೆ ಕಟ್ಟೆಯ ಮೇಲಿನ ಬಿದಿರಿನಗಳಕ್ಕೆ ನೇತು ಹಾಕಿ,”( ಪು ಸಂ ೨೯ ಉಪ್ಪಾಗೆ ಹರಳು) ಯಾವುದೇ ಆದಾಯವಿಲ್ಲದೆ ಹೊತ್ತು ಹೊತ್ತಿನ ತುತ್ತಿನ ಚೀಲವನ್ನು ತುಂಬಿಸಲು, ಹಬ್ಬವನ್ನು ಆಚರಿಸಲು, ಸರೀಕರಂತೆ ಬದುಕಲು, ಜಾನಕಿ ಮಳೆಯಲ್ಲಿ ಉಪ್ಪಾಗೆ ಹಣ್ಣನ್ನು ಹೆಕ್ಕಲು ಹೋದದ್ದು. ಏಕೆಂದರೆ ಅಡುಗೆಗೆ ಎಣ್ಣೆತರಲು ಅವಳ ಬಳಿ ಹಣವಿಲ್ಲ. ಉಪ್ಪಾಗೆ ತುಪ್ಪ ತಯಾರಿಸಿ ಚೌತಿ ಹಬ್ಬ, ದೀಪಾವಳಿ ಹಬ್ಬಕ್ಕೆ ಅಡುಗೆ ಮಾಡಲು ಉಪ್ಪಾಗೆ ತುಪ್ಪದ ಅಗತ್ಯವಿದೆ. ಆಗಾಗಿ ಕಾಡಲ್ಲಿ ಉಪ್ಪಾಗೆ ಹಣ್ಣು ಆಯ್ದು ತರಲು ಹೋಗುತ್ತಾಳೆ. ಇವಳಂತೆ ಹೊರಟ ಇತರ ಮಹಿಳೆಯರೊಂದಿಗೆ. ಜಾನಕಿಗೆ ಕಾಡಿನಲ್ಲಿರುವ ಉಪ್ಪಾಗೆ ಮರ ಅಮ್ಮನಂತೆ ಭಾಸವಾಗುತ್ತದೆ. ಕತ್ತಲೆ ಕಾನಲ್ಲಿ ಬಂಗಾರತ್ತೆ ಹೇಳಿದ ಉಪ್ಪಾಗೆ ಮರ ಸಿಗುತ್ತದೆ. ಆ ಮರ ಅವಳ ಅಮ್ಮನೊಂದಿಗೆ ಮಾತನಾಡಿದಂತೆ ಒಂದು ಆತ್ಮೀಯ ಭಾವವಲ್ಲಿ ಏರ್ಪಡುತ್ತದೆ. “ಆ ಸಾಲುಮರಗಳ ನಡುವೆ ಇರುವ ದೊಡ್ಡ ಮರವೊಂದರ ಬುಡವನ್ನೇ ನೋಡುತ್ತಾ ನಿಂತವಳಿಗೆ ಆ ಮರದ ಕಾಂಡದಿಂದ ಅವಳ ಅಮ್ಮ ಒಡಮೂಡಿ ಅವಳೆದುರಿಗೆ ನಿಂತು ಅವಳ ಕೈ ಹಿಡಿದು ನಡೆಯುವಷ್ಟರಲ್ಲಿ ಆ ಇಡೀ ಮರವೇ ದೊಪ್ಪನೆ ಬಿದ್ದಂತೆನಿಸಿ ಅಮ್ಮಾ… ಎಂದು ಕೂಗಿ ಎದ್ದು ಕುಳಿತಳು.”( ಪು ಸಂ ೨೯) ಇಲ್ಲಿ ಕಾಡು. ಕಾಡಿನಲ್ಲಿರುವ ಮರಗಳು ಕೆಲವರಿಗೆ ಕ್ರಯಮಾಡುವ ವಸ್ತುವಿನಂತೆ ಕಂಡರೆ, ಜಾನಕಿ, ಬಂಗಾರಮ್ಮರಿಗೆ ಅದು ಜೀವವಿರುವ ಆತ್ಮೀಯರಂತೆ ಗೋಚರಿಸುತ್ತದೆ. ಕಾದಂಬರಿಯ ಕೊನೆಯಲ್ಲಿ ನಾಶವಾದ ಕಾಡನ್ನು ಪುನಃ ಬೆಳೆಸಲು ಮುಂದಾಗುವ ಶರ್ವಾಣಿ ತನ್ನ ತಂದೆಯ ತಪ್ಪನ್ನು ಸರಿಪಡಿಸಲು ನಿಂತ ಮೂರ್ತರೂಪವಾಗಿ ಕಾಣುತ್ತಾಳೆ. ಅಳಿದ ಭವ್ಯ ಪರಂಪರೆಯನ್ನು ಮುಂದುವರೆಸುವ ಗಟ್ಟಿಗಿತ್ತಿಯಂತೆ ಭಾಸವಾಗುತ್ತಾಳೆ. ಬಂಗಾರತ್ತೆ ಕೂಡ ಪ್ರಕೃತಿಯ ಮಡಿಲಲ್ಲಿ ಉಪ್ಪಾಗೆ ಮರದ ಬುಡದಲ್ಲಿ ಚಿರನಿದ್ರೆಗೆ ಜಾರುತ್ತಾಳೆ. ಬೆಳೆದಿದ್ದ ಮರಗಳನ್ನು ಕಡಿಯುವುದು ಸುಲಭ ಆದರೆ ಮತ್ತೆ ಅದೇ ರೀತಿ ಕಾಡನ್ನು ಬೆಳಸುವುದು ಎಷ್ಟು ತ್ರಾಸ. ಕಾಡನ್ನು ಬೆಳಸುವ ಶರ್ವಾಣಿಯ ನಿರ್ಧಾರ ಇಂದಿನ ಯುವಜನತೆಗೆ ಅಗತ್ಯವಾಗಿ ಇರಬೇಕಾದ ಪ್ರಾಕೃತಿಕ ಕಾಳಜಿಯನ್ನು ಈ ಪಾತ್ರದ ಮೂಲಕ ಅನಾವರಣಗೊಳಿಸಿದ್ದಾರೆ. ನಾಶವಾದ ಮರದ ಬುಡದಲ್ಲಿ ನಿಂತ ಜಾನಕಿಗೆ, “ನನ್ನಿಂದ ಇಷ್ಟೆಲ್ಲ ತಿಂದ ನೀನು ಏನು ಕೊಟ್ಟೆನನಗೆ ಎಂದು ಕೇಳಿದಂತೆ ಭಾಸವಾಗಿ ಬೆಚ್ಚಿಬಿದ್ದಳು” ( ಪು ಸಂ ೨೬೧) ಜಾನಕಿಗೆ ಅಷ್ಟೇ ಅಲ್ಲ ಆ ಊರಿನ ಮಹಿಳೆಯರಿಗೆ ಕಾಡು ನಾಶವಾದದ್ದರ ಬಗ್ಗೆ ವಿಷಾದವಿದೆ. ಮರಗಳ ನಾಶದಿಂದ ಮಳೆ ಹಾಗೂ ಪರಿಸರದ ಮೇಲಿನ ವ್ಯತಿರಿಕ್ತ ಪರಿಣಾಮದ ಬಗ್ಗೆ ಶರ್ವಾಣಿ ತಿಳಿಸಿ ಗಿಡ ನೆಡುವ ಪರಿಹಾರ ಹೇಳಿದಾಗ ಊರಿನ ಗಂಡಸರು ಆ ಕೆಲಸಕ್ಕೆ ಬರಲ್ಲ ಎಂದಾಗ ಮುಂದೆ ಬಂದವರೆ ಹಾಲಿ,ಗಂಗಿ,ನಾಗಿ,ಮಾದೇವಕ್ಕ, ರತ್ನಕ್ಕ, ಶಾರಕ್ಕಯ್ಯ, ಸಾತಕ್ಕಯ್ಯ ಇವರೇ ಮೊದಲಾದವರು. ಅನಾದಿಕಾಲದಿಂದಲೂ ಮರಗಿಡಗಳ ಬೆಳೆಸುವಲ್ಲಿ ಮಹಿಳೆಯರ ಪಾತ್ರವೇ ಹೆಚ್ಚು.
ಜಾನಕಿಗೆ ಬಂಗಾರತ್ತೆಯನ್ನು ಕಂಡರೆ ಒಂದು ರೀತಿಯ ಆತ್ಮೀಯತೆ, ತಾಯಿ ಇಲ್ಲದ ಅವಳಿಗೆ ಪೋಷಕಳು ಅವಳೆ ಮಾರ್ಗದರ್ಶಕಳು. ನಾಟಿ ಔಷಧಿ ನೀಡುವ ಬಂಗಾರತ್ತೆ ಎಲ್ಲರಿಗೂ ಬೇಕಾದವಳು. ಅಸಹಾಯಕರಿಗೆ ಸದಾ ಸಹಾಯ ಹಸ್ತ ಚಾಚುವ ಬಂಗಾರಮ್ಮ ಮಗ ನಾಣುವನ್ನು ಮಾತ್ರ ಸರಿಯಾದ ಮಾರ್ಗದಲ್ಲಿ ನಡೆಸಲಾಗದೆ ಸೋತವಳು. ಮಗ ಸೊಸೆಯ ಅತಿಯಾಸೆಗೆ ಬಲಿಯದವಳು. ಮನೆಯಿಂದ ಹೊರಗೆ ಗುಡಿಸಲಿನಲ್ಲಿ ಕೈದಿಯಂತೆ ಜೀವನ ನಡೆಸಬೇಕಾಗಿ ಬಂದಾಗಲೂ ಬಂಗಾರಮ್ಮ ದೃತಿಗೆಡಲಿಲ್ಲ. ಅನಂತ ಹೆಗಡೆಯವರು ಬದುಕಿದ್ದಾಗ ಬಂಗಾರಮ್ಮನ ಕುಟುಂಬ ಸುತ್ತ ಹತ್ತು ಹಳ್ಳಿಗೆ ಹೆಸರಾದ ಕುಟುಂಬ ಆದರೆ ಮಗ ನಾಣುವಿನ ಕಾಲಕ್ಕೆ ಹಣದ ಹಿಂದೆ ಬಿದ್ದು ಕಾಡನ್ನು ಲೂಟಿ ಮಾಡಿ, ಕೊಲೆಯೂ ಮಾಡಿ ಜೈಲು ಪಾಲಾದ. ನಂತರದಲ್ಲಿ ಬಂಗಾರಮ್ಮನನ್ನು ಪೋಲೀಸಿನವರು ಹಗರದಬ್ಬೆ ಗುಡಿಸಲಿನಿಂದ ಬಿಡಿಸಿ ಅವಳ ಮನೆಗೆ ತಂದು ಬಿಟ್ಟು ಹೋಗುತ್ತಾರೆ. ಜಾನಕಿಯೂ ಪ್ರಭಾಕರನನ್ನು ಮದುವೆಮಾಡಿಕೊಂಡು ಉಪ್ಗಿಯಿಂದ ಹೊರಟು ಹೋಗುತ್ತಾಳೆ. ಆದರೆ ಪ್ರಭಾಕರ ನಾಣುವಿನ ಜೊತೆ ಕೈಜೋಡಿಸಿ ಕಳ್ಳ ನಾಟ ಸಾಗಣಿಕೆಯಲ್ಲಿ ಅವನು ಕೂಡ ಪೋಲೀಸನ ಕೊಲೆಯಲ್ಲಿ ಶಾಮೀಲಾಗಿ ಕೊನೆಗೆ ಸತ್ತು ಹೋಗುತ್ತಾನೆ. ನ್ಯಾಯಮಾರ್ಗದಲ್ಲಿ ನಡೆದರೆ ಮಾತ್ರ ಬದುಕು ಸರಿಯಾಗಿ ಸಾಗುತ್ತದೆ. ತಪ್ಪು ಮಾಡಿದವರಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ ಎಂಬುದಕ್ಕೆ ನಾಣು, ಪ್ರಭಾಕರನ ಪಾತ್ರಗಳು ನಿದರ್ಶನ ವಾಗಿವೆ.
ಜಾತಿಗೂ ಮೀರಿ ಮಾನವೀಯತೆಯೇ ಬದುಕಿಗೆ ಮುಖ್ಯ ಎಂಬ ಧೋರಣೆಯನ್ನು ಈ ಕಾದಂಬರಿಯಲ್ಲಿ ಕಾಣಬಹುದು. ತಿಪ್ಪನ ಮಗಳ ಸಾವಿಗೆ ಬಂಗಾರತ್ತೆಯ ಮಗ ನಾಣುನೇ ಕಾರಣ ಎಂದು ಗೊತ್ತಿದ್ದರೂ ತಿಪ್ಪ ನೋವುಂಡು ಸುಮ್ಮನಾಗುತ್ತಾನೆ. ಅದೇ ನಾಣು ತನ್ನ ತಾಯಿ ಎಂಬ ಕಿಂಚಿತ್ತೂ ಕರುಣೆಯೂ ಇಲ್ಲದೆ ಮಡದಿಯೊಂದಿಗೆ ತನ್ನ ತಾಯಿಯನ್ನು ಹಗರದಬ್ಬೆ ಗುಡಿಸಲಲ್ಲಿ ಕೈ ಕಾಲು ಕಟ್ಟಿ ಕೂಡಿ ಹಾಕಿದಾಗಲೂ ಸಹಾಯಕ್ಕೆ ನಿಲ್ಲುವವನು ತಿಪ್ಪನೆ, ಸರಿ ಸುಮಾರು ಹದಿನೈದು ವರ್ಷ ಅವಳಿಗೆ ದಿನ ನಿತ್ಯ ಊಟ ಸರಬರಾಜು ಮಾಡಿದ ತಿಪ್ಪನಿಗೆ ಊರವರು ಜಾತಿ ಕುರಿತು ನಿಂದಿಸಿದಾಗ, ಬಂಗಾರತ್ತೆಯ ನಿಲುವ ಪ್ರಗತಿಶೀಲವಾಗಿದೆ. “ಅಲ್ಲ ಬಂಗಾರತ್ತೆ. ಹೋಗೀ ಹೋಗೀ ಹಸ್ಲರ ಪೈಕ್ಯವ ಅವ. ಅವನಿಂದೆಂತ ಸಹಾಯ ಆಯ್ತು ನಿಂಗೆ.. ಎಂಗ ಎಲ್ಲ ನಿನ್ನ ತಮ್ಮಂದಿರ ಹಂಗೇಯ. ಎಂಗ ಇಪ್ಪಕಾರೆ ಅವಂತಕ್ಕೆ ಬೇಕು. ಅವೆಂತ ಮನೆಯೊಳಗೆ ಬಪ್ಪಲಾಗ್ತಾ…? ದೇವ್ರ ಮನೆಯೊಳಗೆ ಕರ್ಕಂಬ್ಲಾಗ್ತಾ. ಅಥವಾ ಅಡುಗೆ ಮನೇಲಿ ನಮ್ ಪಕ್ಕ ಅವಂಗೆ ಊಟ ಹಾಕತ್ವ ನಾವು..? ಏನೋ… ತೋಟ ಗೀಟದ ಕೆಲ್ಸ ಮಾಡಕ್ಯಂಡು ಹೋಗ್ಲಿ ಲಾಯಕ್ಕಪ್ಪ ಅವ’ ಎಂದುಬಿಟ್ಟ, ಆ ಮಾತು ಕೇಳಿ ಎಲ್ಲಿತ್ತೋ ಸಿಟ್ಟು, ಬಂಗಾರತ್ತೆ ನೆಟ್ಟಗೆ ಕುಳಿತು, ‘ರಾಮಣ್ಣ…. ಈ ಮನೆಯಿಂದ ಎನ್ನ ದರದರನೆ ದನ ಎಳ್ಕಂಡು ಹೋಪಕಾರೆ ಬಿಡ್ತಲೆ ಯಾರೂ ಬೈಂದ್ವಿಲ್ಲೆ… ಅಲ್ಲಿ ಹಗರದಬ್ಬೆ ತಟ್ಟಿ ಮನೇಲಿ ಎನ್ನ ಕೂಡಿ ಹಾಕಿದಾಗೂ ಯಾರಂದ್ರ ಯಾರೂ ಬೈಂದ್ದಿಲ್ಲೆ. ಆಗ ಜೊತಿಗಿದ್ದಂವ ಇದೇ ತಿಪ್ಪ. ಸ್ವಂತ ತಮ್ಮನಿಗಿಂತ, ಸ್ವಂತ ಮಗನಿಗಿಂತ, ಅಥವಾ ಹೆತ್ತಮ್ಮನ ಹಾಗೆ ಎನ್ನ ನೋಡಕ್ಯಂಡಿದ್ದ. ಆರೈಕೆ ಮಾಡ್ಡವ ಇದೇ ಜಾತಿಯಲ್ಲದ ಜಾತಿಯವ ತಿಪ್ಪ. ಈಗ ಜಾತಿ ಹೆಸ್ರು ಹೇಳಕ್ಯಂಡು ಬತ್ರಾ ನಿಂಗ. ಸುಮ್ಮಂಗೆ ಹೋಗಿ ಎಲ್ಲವಾ… ಇನ್ನೂ ಒಂದು ವಿಷ್ಯ ತಿಳ್ಕಳಿ. ಇನ್ಮುಂದೆ ಈ ತಿಪ್ಪ ಎಮ್ಮನೇಲೇ ಇರ್ತ. ಅದೆಂತದೋ ಹೇಳಿದ್ಯಲ ನೀನು, ಅಡುಗೆ ಮನೆ, ದೇವ್ರ ಮನೆ ಹೇಳಿ. ಅಲ್ಲಿಗೂ ಬತ್ತ, ಎಂಗ್ಲ ಜೊತಿಗೇ ಊಟನೂ ಮಾಡ್ತ ಅದೇನ್ ಮಾಡ ನಿಂಗ ಮಾಡಕ್ಕಳಿ ಹೋಗಿ…’ ಎಂದು ಆವೇಶ ಬಂದಂತೆ ಹೇಳಿ ಅಲ್ಲಿಂದ ಎದ್ದು ಒಳ ನಡೆದಳು. ಅವಳ ಆ ಮಾತು ಕೇಳಿ ಅಲ್ಲಿ ಬಂದಿದ್ದವರೆಲ್ಲ ಅವಾಕ್ಕಾಗಿ ನಿಂತು ನೋಡಿದರು. ಒಬ್ಬರಿಗೂ ಮಾತೇ ಹೊರಡಲಿಲ್ಲ. ಈ ಮಾತು ಕೇಳಿ ತಿಪ್ಪನಿಗೂ ಒಮ್ಮೆ ಆಶ್ಚರ್ಯವಾಗಿ ಅವನೂ ಮಾತಿಲ್ಲದೆ ನಿಂತ. ಒಬ್ಬರಿಗೊಬ್ಬರು ಮುಖ ನೋಡಿಕೊಂಡು ಎಲ್ಲರೂ ಹೊರನಡೆದರು”. (ಪು ಸಂ ೨೧೦) ಕಷ್ಟಕ್ಕೆ ಇಲ್ಲದ ಜಾತಿ, ಸಂಬಂಧ ಹಣ, ಅಧಿಕಾರ ಎಂದ ಕೂಡಲೇ ಬಂದಾಗ ಬಂಗಾರತ್ತೆ ಸಮುದಾಯವನ್ನೆ ಧಿಕ್ಕರಿಸಿದ ದಿಟ್ಟತನವಿಲ್ಲಿದೆ. ಅಲ್ಲದೆ ಜಾನಕಿ ಬೇರೆ ಜಾತಿಯ ಪ್ರಭಾಕರನನ್ನು ಪ್ರೀತಿಸಿದಾಗ ಕೂಡ ಮದುವೆಯಾಗಲು ಅನುಮತಿಯನ್ನು ಈ ಬಂಗಾರತ್ತೆ ನೀಡುವ ಮೂಲಕ ಬದುಕು ಮುಖ್ಯ ಜಾತಿಯಲ್ಲ ಎಂಬ ನಿಲುವನ್ನು ಬಲಪಡಿಸುತ್ತಾಳೆ. ಅವಳ ಅಂತ್ಯ ಸಂಸ್ಕಾರವನ್ನು ತಿಪ್ಪನೆ ಮಾಡಬೇಕೆಂದು ವಿಲ್ ಕೂಡ ಬರೆದಿರುತ್ತಾಳೆ. ಅವಳ ಈ ನಿರ್ಧಾರ ಮಾತ್ರ ಉಪ್ಗಿಯ ಮೇಲ್ಜಾತಿಯವರಿಗೆ ಸಹಿಸಲು ಅಸಾಧ್ಯವಾದದಾಗಿತ್ತು. ಹ್ಯಾರಿಸ್ ಪತ್ರೆ ಪರಮಣ್ಣನ ಮಗಳು ಗೌರಿಯನ್ನು ಮದುವೆಯಾಗುತ್ತಾನೆ ಅದು ಪರಮಣ್ಣನ ಸಂಪೂರ್ಣ ಒಪ್ಪಿಗೆಯ ಮೇರೆಗೆ.
ಉಪ್ಪಾಗೆಗೆ ಹೆಚ್ಚು ಬೆಲೆ ಸಿಕ್ಕಿದ್ದರಿಂದ ಪರಮಣ್ಣ ಎಲ್ಲವನ್ನು ಸಂಗ್ರಹಿಸಿ ಮಾರತ್ತಿದ್ದನಾದ್ದರಿಂದ ಪಕ್ಕದ ಊರಿನ ಈರನಾಯ್ಕನ ದ್ವೇಷದ ಕಣ್ಣಗೆ ಗುರಿಯಾಗುತ್ತಾಣೆ. ಸಮಯ ಕಾಯ್ದು ಈರನಾಯ್ಕ ಇವನ ಮೂಳೆ ಮುರಿಯುವ ಹಾಗೆ ತಳ್ಳಿದ್ದರಿಂದ ಮೂಳೆ ಮುರಿದು ಬಿದ್ದಿದ್ದ ಪರಮಣ್ಣ ಗುಣಮುಖವಾಗುವವರೆಗೂ ಅವನ ಸೇವೆ ಮಾಡಿದ್ದು ಇದೇ ಹರಿಭಟ್ಟ ಅಲಿಯಾಸ್ ಹ್ಯಾರಿಸ್ ಜಾತಿಗಿಂತ ಮನುಷ್ಯತ್ವ ಮುಖ್ಯ ಎಂದು ಅರಿವಾಗಿ ಪರಮಣ್ಣ ತನ್ನ ಮಗಳೊಂದಿಗೆ ಹರಿಭಟ್ಟನ ಮದುವೆ ಮಾಡಿಸುತ್ತಾನೆ. ಇದು ಸಾಮಾಜಿಕ ಸ್ಥಿಂತ್ಯಂತರದ ಕುರುಹಾಗಿ ನಿಲ್ಲುತ್ತದೆ.
ಉಪ್ಪಾಗೆ ಹಣ್ಣು ಹೆಚ್ಚಾಗೆ ಬೆಳೆಯುತ್ತಿದ್ದ ಕಾರಣಕ್ಕೆ ಉಪ್ಗಿ ಎಂಬ ಹೆಸರು ಆ ಊರಿಗೆ ಬಂದಿತ್ತು. ಆ ಊರಿನ ಕಾನನದ ತುಂಬಾ ಉಪ್ಪಾಗೆ ಮರಗಳಿದ್ದವು. ಆ ಊರಿಗೆ ಹ್ಯಾರಿಸ್ ಬರುವ ಮೊದಲು ಉಪ್ಪಾಗೆಯ ಉಪಯೋಗಗಳು ಅಲ್ಲಿನ ಜನರಿಗೆ ತಿಳಿದಿರಲಿಲ್ಲ. ಹ್ಯಾರಿಸ್ ಉಪ್ಪಾಗೆಯ ಬಗ್ಗೆ ಆಸಕ್ತಿದಾಯಕ ವಿಚಾರಗಳನ್ನು, ಹಣ್ಣಿನ ಸಿಪ್ಪೆಯ ಉಪಯೋಗವನ್ನು ತಿಳಿಸಿದನು. ಅಷ್ಟೇ ಅಲ್ಲದೆ ಕೇರಳದಲ್ಲಿ ಅದನ್ನು ಅಡುಗೆಗೆ ಬಳಸುವುದನ್ನು ಹ್ಯಾರಿಸ್ ಮತ್ತು ಫಾಗುಮಾಮನೂ ಹೋಗಿ ನೋಡಿಕೊಂಡು ಬಂದರು. ತೂಕ ನಷ್ಟಮಾಡಲು ಈ ಉಪ್ಪಾಗೆ ಸಿಪ್ಪೆ ಉಪಯುಕ್ತ ಎಂಬ ವಿಷಯ ಹ್ಯಾರಿಸ್ ನಿಂದ ತಿಳಿಯಿತು. ಅವರ ಬದುಕಿನ ಒಂದು ಭಾಗವೇ ಆಗಿರುವ ಉಪ್ಪಾಗೆ ಬಗ್ಗೆ ಮಹತ್ವದ ವಿಚಾರ ತಿಳಿದಾಗ “ ಇದ್ನ ತಿಂದ್ರೆ ದಪ್ಪಾಗುದಿಲ್ಲೇ.. ಇದ್ನ ಹೆಂಗೆ ತಿನ್ನಾದು..? ಒಣಗಿದ ಉಪ್ಪಾಗೆ ಸಿಪ್ಪೆಯನ್ನು ಕೈಯ್ಯಲ್ಲಿ ಹಿಡಿದುಕೊಂಡು ತಿರುಗೀ ಮುರುಗೀ ನೋಡ್ತಾ ನಾಗಿ ಕೇಳಿದಳು. ‘ಏ…ಅಂಗಲ್ಲ ಅದು… ದಪ್ಪಾಗಿದ್ದೋರು ಇನ್ನ ತಿಂದ್ರೆ ಸಣ್ಣಾಕುತಾರಂತೆ…’ ಎಂದ ದುಗ್ಗ… “ಓ…ಹಂಗಾ ಇದು…ಅದ್ದೆಂಗೆ ಸಣ್ಣಾಕೈತಾರೆ…ಇದ್ದ ತಿಂದುಬುಟ್ರೇ…’ ಉಪ್ಪಾಗೆ ಸಿಪ್ಪೆನೆ ತಿರುಗೀ ಮುರುಗೀ ಕೇಳಿದಳು ಮತ್ತೆ ನಾಗಿ ‘ಇನ್ನ ಅಂಗಂಗೇ ತಿನ್ನೂದಲ್ಲ ಮಾರಾಯ್ತಿ…ಇದ_ ಪುಡಿ ಮಾಡ್ತಾರಂತೆ, ಅನ್ನ ತಿನ್ನಕಂತೆ…’ಎಂದು ರಾಗವಾಗಿ ಹೇಳಿದಳು ಹಾಲಿ. ‘ಹೌದಾ…ಹಂಗಾದ ಇದ್ರ ಪುಡಿ ಮಾಡ್ಕಂಡು ತಿನ್ದಿಟ್ರೆ ದಪ್ಪಾಗಕಲ್ಲೇ… “ಅಯ್ಯ…ನಿಂಗ್ಯಾರು ಹೇಳೋರು…ನಿನ್ನೆ ಅವ್ರು ಹೇಳಿದ್ರು ಕೇಣಸ್ಕಳ್ಳಿಲ್ಲನೇ…ಅದ್ರ ಜೊತಿಗೇ ಇನ್ನೂ ಏನೇನೋ ಸೇರಸ್ಕತಾರಂತೆ…ಹೂ…’ ( ಪು ಸಂ ೧೦೧) ಹೀಗೆ ಅನೇಕ ಕೌತುಕ ವಿಚಾರಗಳು ಹ್ಯಾರಿಸ್ ನಿಂದ ತಿಳಿದುಕೊಂಡರು. ಉಪ್ಪಾಗೆಗೆ ಜಾಗತೀಕ ಮಟ್ಟದಲ್ಲಿ ಬೇಡಿಕೆ ಇದೆ ಎಂಬುದು ಅವನಿಂದ ತಿಳಿಯಿತು. ಅಷ್ಟಕ್ಕೆ ಸುಮ್ಮನಾಗದೆ ಹ್ಯಾರಿಸ್ ಫಾಗುಮಾನನ್ನು ಕರೆದುಕೊಂಡು ಮುಂಬೈಯಲ್ಲಿ ಇದರ ಬಳಕೆಯನ್ನು ತೋರಿಸಿಕೊಂಡು ಬಂದ “ಮ್ಯಾಜಿಕ್ ಸಿಟ್ರಿಮ್ಯಾಕ್ಸ್” ಕಂಪನಿಯವರು ಆ ಹಳ್ಳಿಗೆ ಬಂದರು. ಉಪ್ಪಾಗೆ ಅಲ್ಲಿ ಹೆಚ್ಚು ಬೆಳೆಯುತ್ತಾರೆ ಎಂದು ತಿಳಿದು ಅದನ್ನು ಕೊಳ್ಳಲು ವ್ಯಾಪಾರಿಗಳು ಬಂದರು, ಅದನ್ನು ಸಂಗ್ರಹಿಸಿ ಮಾರಾಟ ಮಾಡುವ ದಲ್ಲಾಳಿಗಳು ಸೃಷ್ಟಿಯಾದರು. ಹಳ್ಳಿಯವರು ಹಣ್ಣನ್ನು ಆಯ್ದು ತರಲು ಮರಗಳನ್ನೆ ವಿಭಾಗ ಮಾಡಿಕೊಂಡರು. ಹಣ್ಣನ್ನು ಸಂಗ್ರಹಿಸಲು ಅವರವರಲ್ಲೇ ಒಳಜಗಳ, ಒಡೆದಾಟ ಪ್ರಾರಂಭವಾಯಿತು. ಪತ್ರೆ ಪರಮಣ್ಣನಿಗೆ ಈರನಾಯ್ಕ ಬೆನ್ನು ಮೂಳೆ ಮುರಿಯುವ ಹಾಗೆ ಒಡೆದಿರುತ್ತಾನೆ. ಇದೇ ಕಾರಣವಾಗಿ ಊರುಗಳ ನಡುವೆ ಜಗಳಗಳು ಪ್ರಾರಂಭವಾದವು. ಮತ್ತೊಂದೆಡೆ ಮರಗಳು ನೆಲಕ್ಕೆ ಉರುಳಿದವು. ಉಪ್ಪಾಗೆಯ ಬೇಡಿಕೆ ಕಡಿಮೆಯಾಯಿತು. ಉಪ್ಪಾಗೆ ಮರಗಳು ನಾಶವಾಗಿದ್ದವು. ಹಳ್ಳಿಯು ಸಾಕಷ್ಟು ಬದಲಾಗಿತ್ತು. ಓದು ಬರಹ ಕಂಡ ಹಳ್ಳಿಯ ಮಕ್ಕಳು ನೌಕರಿ ಪಡೆದು ಹಳ್ಳಿ ತೊರೆದರು. ಅವರ ಓದಿನ ಕರ್ಚಿಗೆ ನೆರವಾಗಿದ್ದ ಉಪ್ಪಾಗೆ ಮರಗಳು ಮಾತ್ರ ಮನುಷ್ಯನ ಸ್ವಾರ್ಥಕ್ಕೆ ಸದ್ದಿಲ್ಲದೆ ನಾಶವಾಗಿದ್ದವು, ಅದರ ಕುರುಹಾಗಿ ಬೊಡ್ಡಗಳು ಬಯಲಲ್ಲಿ ಬಿದ್ದಿದ್ದವು. ಇಂತಹ ಒಂದು ಪ್ರಕೃತಿ ದತ್ತವಾದ ಸಂಪತ್ತು ಉಪ್ಪಾಗೆಯ ಮೌಲ್ಯ ಕೂಡ ಕುಸಿಯಿತು.
ಇಂದಿಗೂ ಕೂಡ ದಕ್ಷಿಣ ಕನ್ನಡ, ಉತ್ತರ ಕನ್ನಡ ಸೇರಿದಂತೆ ಪಶ್ಚಿಮಘಟ್ಟ ಪ್ರದೇಶದ ಹಲವು ಜಿಲ್ಲೆಯ ಕಾಡುಗಳಲ್ಲಿ ಅಲ್ಲಿನ ಹಳ್ಳಿಗರು ಉಪ್ಪಾಗೆ ಸಿಪ್ಪೆಯನ್ನು ಸಂಗ್ರಹಿಸುತ್ತಾರೆ. ಕೇವಲ ೬೦ ರೂಪಾಯಿ ಕೆಜಿಗೆ ನೀಡಿ ಸ್ಥಳೀಯ ಅರಣ್ಯ ಇಲಾಖೆಯಿಂದ ಗುತ್ತಿಗೆ ಪಡೆದ ಗುತ್ತಿದಾರರು ಅದನ್ನು ಸಂಗ್ರಹಿಸುತ್ತಾರೆ. ರೈತರು ಮತ್ತು ರೈತ ಕೂಲಿ ಕಾರ್ಮಿಕರು ವ್ಯಾಪಕ ಪ್ರಮಾಣದಲ್ಲಿ ಅದನ್ನು ಸಂಗ್ರಹಿಸುತ್ತಾರೆ. ಸರ್ಕಾರ ಇದನ್ನು ಅರಣ್ಯೇತರ ಉತ್ಪನ್ನವಾಗಿ ಪರಿಗಣಿಸಿದೆ. (non timbred forest product) ಹೊರದೇಶಗಳಲ್ಲಿ ಇದಕ್ಕೆ ಬೇಡಿಕೆ ಇದ್ದರು ಇದನ್ನು ರೈತಾಪಿ ವರ್ಗದವರು ರಫ್ತು ಮಾಡಲು ಸಾಧ್ಯವಾಗುತ್ತಿಲ್ಲ. ಒಂದು ವೇಳೆ ಇದು ತೋಟಗಾರಿಕೆ ಬೆಳೆಯಾಗಿ ಮಾರ್ಪಾಡಾಗಿದ್ದರೆ ಈ ಒಂದು ಬೆಳೆಗೆ ಮೌಲ್ಯ ದೊರೆಯುತ್ತಿತ್ತು. ತೋಟಗಾರಿಕೆ ಇಲಾಖೆಯಾಗಲಿ, ಕೃಷಿ ಇಲಾಖೆಯಾಗಲಿ ತಮ್ಮ ವ್ಪಾಪ್ತಿಗೆ ಅದನ್ನು ತೆಗೆದುಕೊಂಡು ತೋಟಗಾರಿಕೆ ಬೆಳೆಯಾಗಿ ಇದನ್ನು ಮಾರ್ಪಡಿಸುವ ಅವಕಾಶವಿದ್ದರೂ ನಿರ್ಲಕ್ಷಿಸಲಾಗಿದೆ. ಈಗ ಇದು ಕೇವಲ ಕೈಗಾರಿಕ ಉತ್ಪನ್ನವಾಗಿ ರಫ್ತಾಗುತ್ತಿದೆ. ಈ ಬೆಳೆಗೆ ಪ್ರಾದೇಶಿಕ ಗುರುತಿಸುವಿಕೆ ಕೂಡ ಲಭ್ಯವಿಲ್ಲದೆ ಅದು ನಿರ್ಲಕ್ಷಕ್ಕೆ ಒಳಗಾಗಿದೆ ಎಂಬುದು ಅಲ್ಲಿನ ಸ್ಥಳಿಯರ ನೋವು ಉಪ್ಪಾಗೆಯಲ್ಲಿ ಅನೇಕ ಔಷಧಿಯ ಗುಣಗಳಿವೆ ಇದರ ಬಗ್ಗೆ ವ್ಯಾಪಕ ಸಂಶೋಧನೆ ಕೈಗೊಂಡು, ಟಿಷ್ಯೂ ಕಲ್ಚರ್ ಮೂಲಕ ತಳಿಯನ್ನು ಅಭಿವೃದ್ಧಿಪಡಿಸಿ, ತೋಟಗಾರಿಕಾ ಬೆಳೆಯನ್ನಾಗಿ ಮಾರ್ಪಡಿಸಬೇಕೆಂಬುದು ಸ್ಥಳೀಯರ ಅಭಿಲಾಷೆಯಾಗಿದೆ. ಒಟ್ಟಾರೆ ಈ ಕಾದಂಬರಿ ಉಪ್ಪಾಗೆ ಹಣ್ಣಿನ, ಅಲ್ಲಿನ ಜನಜೀವನದ ಮೇಲೆ ಬೆಳಕು ಚೆಲ್ಲಿದೆ. ಅಂಚಿಗೆ ಸರಿದಿದ್ದ ಒಂದು ಬೆಳೆಯ ಔಷಧೀಯ ಮಹತ್ವವನ್ನು ಮನಗಾಣಿಸಿದೆ. ಇನ್ನಾದರೂ ಆಡಳಿತ ವ್ಯವಸ್ಥೆ ಹೆಚ್ಚೆತ್ತುಕೊಂಡು ಉಪ್ಪಾಗೆ ಬೆಳೆಗೆ ಮತ್ತು ಅದನ್ನು ಸಂಗ್ರಹಿಸುವ ಕೃಷಿಕರಿಗೆ ಸಲ್ಲಬೇಕಾದ ನ್ಯಾಯವನ್ನು ಸಲ್ಲಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಾರಾ ನೋಡಬೇಕಿದೆ.
ಕೃತಿ: ‘ಉಪ್ಪಾಗೆ ಹರಳು’
ಲೇಖಕಿ : ಭಾರತಿ ಹೆಗಡೆ
ಪ್ರಕಾಶಕರು: ಬಹುರೂಪಿ
ಬೆಲೆ : 300.ರೂ
ಕೊಳ್ಳಲು ಸಂಪರ್ಕಿಸಿ : 70191 82729
ಆನ್ ಲೈನ್ ಕೊಳ್ಳಲು ಇಲ್ಲಿ ಕ್ಲಿಕ್ಕಿಸಿ – BAHUROOPI.IN






0 Comments