ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾಡುವ ನೆನಪು ಜಿ ಎಚ್ ನಾಯಕ..

ಇವತ್ತು ನನ್ನ ವಿದ್ಯಾಗುರುಗಳಾದ ಜಿ.ಎಚ್.ನಾಯಕರ ಜನ್ಮದಿನ..

ಗುರುಗಳಾದ ನಾಯಕರು

ನಾನು ಎಂ.ಎ. ಮಾಡಲು ಮಾನಸಗಂಗೋತ್ರಿಗೆ ಹೋಗಲು ಇದ್ದ ಆಕರ್ಷಣೆಯೆಂದರೆ, ಅಲ್ಲಿನ ಪ್ರಸಿದ್ಧ ವಿದ್ವಾಂಸರಲ್ಲಿ ಕಲಿಯಬಹುದು ಎಂಬುದೂ ಒಂದು. ಆಗ ಜಿ.ಎಚ್.ನಾಯಕರದು ಸಾಹಿತ್ಯ ವಿಮರ್ಶೆ ಕ್ಷೇತ್ರದಲ್ಲಿ ದೊಡ್ಡ ಹೆಸರು. ಅವರು ಗೌರವರ್ಣದ ಎತ್ತರದಾಳು; ನಲವತ್ತೈದು ದಾಟಿದ ಪ್ರಾಯ; ಎಣ್ಣೆ ಹಾಕಿ ಹಿಂಬಾಚಿದ ಹೊಳೆವ ತಲೆಗೂದಲು; ತೀಕ್ಷ್ಣವಾದ ಕಂಗಳು; ಚಂದದ ದಂತಪಂಕ್ತಿ ಕಾಣಿಸುವ ಮೃದುಹಾಸ; ರಸಪ್ರಸಂಗ ಹೇಳುತ್ತ ಸ್ವತಃ ಕೆಂಪಾಗುವ ಮುಖ. ತಮ್ಮ ಆಳ್ತನ, ಡ್ರೆಸ್ಸೆನ್ಸ್, ವಿದ್ವತ್ತು, ವೈಚಾರಿಕತೆ, ಹಾಸ್ಯಪ್ರಜ್ಞೆ, ವಿಶ್ವಾಸಪೂರ್ವಕ ನಡವಳಿಕೆಗಳಿಂದ ಅವರು ಬೇಗನೇ ನಮ್ಮ ಹೀರೊ ಆಗಿಬಿಟ್ಟರು.

ತರಗತಿಗಳಲ್ಲಿ ನಾಯಕರು ಮತ್ತೆಮತ್ತೆ ಕೊಡುತ್ತಿದ್ದ ನಿದರ್ಶನ ಪಂಪ, ಬೇಂದ್ರೆ, ಅಡಿಗ, ಕಾರಂತರದು. ಇವರು ಅವರ ಪ್ರಿಯ ಲೇಖಕರೂ ಆಗಿದ್ದರು. ನಾಯಕರು ನಮಗೆ ಮೊದಲ ವರ್ಷ ಟಿ.ಎಸ್. ಎಲಿಯಟ್ನ `ಟ್ರೆಡಿಶನ್ ಅಂಡ್ ಇಂಡಿವಿಜ್ಯುವಲ್ ಟೆಲೆಂಟ್’ ಪ್ರಬಂಧವನ್ನೂ ಎರಡನೇ ವರ್ಷ ಕಾರಂತರ ಕಾದಂಬರಿಗಳನ್ನೂ ಕಲಿಸಿದರು. ಅವರನ್ನು ಕನ್ನಡದ ಲಿವೀಸ್ ಎಂದು ಕರೆಯುತ್ತಿದ್ದರು. ಆದರೆ ಎಲಿಯಟ್ ಅವರನ್ನು ಪ್ರಭಾವಿಸಿದ ಸಾಹಿತ್ಯ ಚಿಂತಕನಾಗಿದ್ದ. ಲೇಖಕರಿಗೆ ಸಾಹಿತ್ಯ ಪರಂಪರೆಯಲ್ಲಿರುವ ಸತ್ವವು ಆನುವಂಶಿಕವಾಗಿ ಬರುವುದಿಲ್ಲವೆಂದೂ, ಅದನ್ನು ಶ್ರಮ-ಶ್ರದ್ಧೆಗಳಿಂದ ಅನುಸಂಧಾನಿಸುತ್ತ ಗಳಿಸಿಕೊಳ್ಳಬೇಕೆಂದೂ, ಅದು ವ್ಯಕ್ತಿಪ್ರತಿಭೆಯ ಸೃಜನಶೀಲ ಕುಲುಮೆಯಲ್ಲಿ ಮರುಸೃಷ್ಟಿಗೊಂಡು ಹೊಸತನ್ನು ಸೃಷ್ಟಿಸುತ್ತದೆಯೆಂದೂ ಎಲಿಯಟ್ ಪ್ರತಿಪಾದಿಸುತ್ತಾನೆ. ನಾಯಕರು ಅವನ ಪ್ರತಿಯೊಂದು ಸಾಲನ್ನೂ ಓದುತ್ತ, ಅಲ್ಲಿರುವ ಸಾಹಿತ್ಯತತ್ವವನ್ನು ಪಂಪ ಬೇಂದ್ರೆ ಅಡಿಗರ ಕಾವ್ಯ ನಿದರ್ಶನಗಳ ಮೂಲಕ ವಿಶ್ಲೇಷಿಸುತ್ತ, ಕರ್ನಾಟಕದ ವಿದ್ಯಮಾನಗಳನ್ನು ಲಗತ್ತಿಸುತ್ತ ಪಾಠ ಮಾಡಿದರು. ಅವರ ಉಪನ್ಯಾಸವೆಂದರೆ ಹಲಸಿನ ಹಣ್ಣನ್ನು ಹುಶಾರಾಗಿ ಕೊಯ್ದು ತೊಳೆಯನ್ನು ಬಿಡಿಸಿ ತಿನ್ನಿಸುವಂತೆ; ರಭಸವಿಲ್ಲದೆ ಗುಡ್ಡಗಳ ನಡುವೆ ವಿರಾಮಭಾವದಲ್ಲಿ ಹರಿದು ಕಡಲನ್ನು ಕೂಡುವ ಅಘನಾಶಿನಿ ಹೊಳೆಯಂತೆ. ಮಾತುಕತೆಯಂತೆ ಪಾಠವೂ ಸಾವಧಾನ, ಅಚ್ಚುಕಟ್ಟು, ತರ್ಕಬದ್ಧ ಮತ್ತು ತುಸು ಶುಷ್ಕ. ಮೂಲಭೂತ ತಳಹದಿಯಿಂದಲೇ ಪ್ರತಿ ವಿಷಯವನ್ನು ವಿವರಿಸುವ ಪದ್ಧತಿಯು ಕೆಲವೊಮ್ಮೆ ಬೋರು ಹಿಡಿಸುತ್ತಿತ್ತು.

ನಾಯಕರ ವಿದ್ವತ್ ವ್ಯಕ್ತಿತ್ವಕ್ಕೆ ಇನ್ನೊಂದು ಪ್ರಭಾವಳಿಯ ಗರಿಯಿತ್ತು. ಅದು, ಯೂನಿವರ್ಸಿಟಿ ರಾಜಕಾರಣದಲ್ಲಿ, ಜಾತಿ ಮತ್ತು ವಶೀಲಿಯ ಮೂಲಕ ಮೇಲೇರುವ ಒಳಮಾರ್ಗ ತೊರೆದು, ದಿಟ್ಟತನದಿಂದ ಅಧಿಕಾರಸ್ಥರನ್ನು ಎದುರು ಹಾಕಿಕೊಂಡು, ನ್ಯಾಯವಾಗಿ ಸಿಗಬೇಕಾದ ಬಡ್ತಿಯನ್ನು ಕಳೆದುಕೊಂಡು, ವಿದ್ಯಾರ್ಥಿಗಳಿಗೆ ಪ್ರಿಯ ಪ್ರಾಧ್ಯಾಪಕನಾಗುವ ಮಾದರಿಯೊಂದನ್ನು ನಿರ್ಮಿಸಿದ್ದು. ವಿಶ್ವವಿದ್ಯಾಲಯಗಳಲ್ಲಿ ಸ್ವತಂತ್ರ ನಿರ್ಭೀತ ವಿಚಾರ ವ್ಯಕ್ತಪಡಿಸುವುದರಿಂದ ಕೆಲವು ಕಷ್ಟಗಳು ಎದುರಾಗಬಹುದು. ಕೆಲವು ಸ್ಥಾನಮಾನ ವಂಚಿತವಾಗಬಹುದು. ಅಂತಹ ಸಣ್ಣಪುಟ್ಟ ಸೆಳೆತ ಬಿಟ್ಟುಕೊಟ್ಟರೆ ನೈತಿಕವಾಗಿ ಘನತೆಯಿಂದ ಇರಬಹುದು ಎಂಬುದಕ್ಕೆ ಅವರೂ ಚನ್ನಯ್ಯನವರೂ ಪ್ರಭುಶಂಕರರೂ ನಿದರ್ಶನಗಳಾಗಿದ್ದರು.

ನಾಯಕರು ಗೋಪಾಲಕೃಷ್ಣ ಅಡಿಗರಿಂದ ವಿಮರ್ಶೆಯ ತತ್ವಗಳನ್ನು ಕಲಿತವರು. ಲೇಖಕರನ್ನು ಮೆಚ್ಚುತ್ತಲೇ ನಿಷ್ಠುರವಾಗಿ ಮಿತಿಯನ್ನು ಹೇಳುವುದು ಹೇಗೆಂಬ ಸಮತೋಲನ ಪ್ರಜ್ಞೆ, ಎಚ್ಚರ, ಸೂಕ್ಷ್ಮತೆಗಳನ್ನು ಅವರು ನಮಗೆ ದಾಟಿಸಿದರು. ಅವರ ವಿಮರ್ಶೆ ಚಿನ್ನ ತೂಗಿದಂತೆ. ವಾಕ್ಯಚಿಹ್ನೆ ಇಡುವ ವಿಷಯದಲ್ಲಿ ಕೂಡ ನೂರು ಸಲ ಆಲೋಚನೆ. ವಿಮರ್ಶೆಯಲ್ಲಿ ತಲಸ್ಪರ್ಶಿ ಅಧ್ಯಯನ ಮತ್ತು ಜಾಗರೂಕ ಪ್ರಜ್ಞೆಯ ಮೌಲ್ಯಮಾಪನ ಇರುತ್ತಿದ್ದವು. ಸಾಹಿತ್ಯ ಮತ್ತು ಸಾಹಿತ್ಯ ತತ್ವಗಳ ಬಗ್ಗೆ ಚರ್ಚಿಸಿದರೂ, ವಿಮರ್ಶೆ ಸಮಾಜದ ಮತ್ತು ಮನುಷ್ಯರ ಬಾಳನ್ನು ಕುರಿತ ಲೋಕದೃಷ್ಟಿಯ ಭಾಗವಾಗಿ ಹೊರಳುತ್ತಿತ್ತು. ಬೇಂದ್ರೆ ನಮ್ಮ ದೊಡ್ಡ ಕವಿಯಾದರೂ ಸಾಂಸ್ಕೃತಿಕವಾಗಿ ಹೇಗೆ ಕುವೆಂಪು ಅವರಷ್ಟು ಮಹತ್ವದ ಲೇಖಕರಲ್ಲ ಎಂದವರು ವಿವರಿಸುತ್ತಿದ್ದರು; ಪಾಠದ ಜತೆಯಲ್ಲಿ ಮನಸ್ಸನ್ನು ರೂಪಿಸಲು ಸಾಹಿತ್ಯ ಅಧ್ಯಾಪಕರಿಗೆ ಸಿಗುವ ವಿಶೇಷ ಅವಕಾಶ ಬಳಸಿಕೊಂಡು, ವಿದ್ಯಾರ್ಥಿಗಳ ಸಾಹಿತ್ಯಕ-ಸಾಮಾಜಿಕ ಸಂವೇದನೆಯನ್ನು ರೂಪುಗೊಳಿಸುತ್ತಿದ್ದರು. ವೈಚಾರಿಕತೆ ವಿಷಯದಲ್ಲಿ ಕಠಿಣತೆಯನ್ನೂ ಮನುಷ್ಯ ಸಂಬಂಧಗಳ ವಿಷಯದಲ್ಲಿ ನಮ್ಯತೆಯನ್ನೂ ಅವರ ವ್ಯಕ್ತಿತ್ವ ಒಳಗೊಂಡಿತ್ತು. ಈ ಎರಡೂ ಆಯಾಮಗಳು, ಸಾಹಿತ್ಯ ವಿಮರ್ಶೆಗೂ ವ್ಯಕ್ತಿಬಾಳಿಗೂ ಏಕಕಾಲಕ್ಕೆ ಅನ್ವಯವಾಗುವಂತೆ ಅವರ `ವಿನಯ’ದ ಪರಿಕಲ್ಪನೆಯಲ್ಲಿ ಮಿಳಿತವಾಗಿದ್ದವು. ಎಲಿಯಟ್ ಚಿಂತನೆಯಲ್ಲಿರುವ ವೈಯಕ್ತಿಕತೆ, ನವ್ಯದವರಿಗೆ ದೊಡ್ಡ ಮೌಲ್ಯಾದರ್ಶ. ತೇಜಸ್ವಿಯವರಂತೆ ನಾಯಕರು ಕೂಡ ವ್ಯಕ್ತಿ ಸ್ವಾತಂತ್ರ್ಯ ಮತ್ತು ಸೃಜನಶೀಲ ಸೀಮೋಲ್ಲಂಘನೆಗಳ ಪ್ರಶ್ನೆಯನ್ನು, ಸಮಾಜವನ್ನು ಪ್ರಭಾವಿಸುವ ಬೌದ್ಧಿಕ ಹೊಣೆಗಾರಿಕೆಯನ್ನಾಗಿ ವಿಸ್ತರಿಸಿದರು. ಸಾಹಿತ್ಯವನ್ನು ಪೂರ್ವಗ್ರಹ ಮತ್ತು ಮಮಕಾರಗಳಿಲ್ಲದೆ ಮುಖಾಮುಖಿಯಾಗುವ ವಿಧಾನವನ್ನು ತಿಳಿಸಿಕೊಡುವ ಹೊತ್ತಲ್ಲೇ, ಲೋಕವನ್ನು ನಿಷ್ಠುರ ವಿಮರ್ಶನ ಪ್ರಜ್ಞೆಯಿಂದ ನೋಡುವ, ವೈಯಕ್ತಿಕವಾಗಿ ಪ್ರಾಮಾಣಿಕವಾಗಿ ಬದುಕುವ ಅಗತ್ಯವನ್ನು ಜೋಡಿಸುತ್ತಿದ್ದರು. ಅವರ ಸಾಹಿತ್ಯಬೋಧನೆ, ತತ್ವಚಿಂತನೆ, ಆಕ್ಟಿವಿಸಂ ಮತ್ತು ನೈತಿಕ ಬದುಕುಗಳ ನಡುವೆ ಬಿರುಕಿಲ್ಲದ ಜೈವಿಕ ನಂಟಿತ್ತು. ಅವರ ವ್ಯಕ್ತಿತ್ವವು, ವೈಚಾರಿಕ ಮಾನವತಾವಾದ, ಜಾತ್ಯತೀತತೆ, ಸೃಜನಶೀಲ ಕಲಾಸಂವೇದನೆ, ವಿಮರ್ಶನ ನಿಷ್ಠುರತೆಗಳ ಅಪೂರ್ವ ಸಂಗಮ. ಅವರೊಬ್ಬ ಸಂವಿಧಾನ ಪ್ರಜ್ಞೆಯ ಚಿಂತಕರಾಗಿದ್ದರು.

ನಾಯಕರು ಅಧ್ಯಾಪಕರಾಗಿ ವಿಮರ್ಶಕರಾಗಿ ಸಾಹಿತ್ಯದ ಗಂಭೀರ ಓದುಗರಾಗಿದ್ದರು. ಅವರು ಕನ್ನಡ ಸಾಹಿತ್ಯ ವಿಮರ್ಶೆಗೆ ಒಂದು ಶಿಸ್ತನ್ನೂ ನಿಶಿತತೆಯನ್ನೂ ತಂದರು. ಶಿಷ್ಯರಾಗಿ ನಾವು ಅವರ ಕೃತಿನಿಷ್ಠ ವಿಮರ್ಶೆಯ ಮಾದರಿಯಿಂದ ಪ್ರಭಾವಿತವಾದೆವು. ಆದರೆ ಜಿ.ರಾಜಶೇಖರ- ಡಿ.ಆರ್.ನಾಗರಾಜ್ ವಿಮರ್ಶೆಯ ರುಚಿ ಹತ್ತಿದ ಬಳಿಕ, ನಾಯಕರ ಮಾದರಿಯಲ್ಲಿದ್ದ ಆಸಕ್ತಿ ಕ್ಷೀಣಿಸಿತು. ಅವರ ವಿಮರ್ಶೆಯು ನಿಷ್ಪಕ್ಷಪಾತವಾದ ಸಮತೋಲನದ ಮೌಲ್ಯಮಾಪನ ಪ್ರಜ್ಞೆಯ ಅತಿಯೆಚ್ಚರದಲ್ಲಿ, ಸಾಹಿತ್ಯದ ಖುಶಿಯನ್ನು ಮತ್ತು ಸಾಮಾಜಿಕ ರಾಜಕೀಯ ಚಿಂತನೆಯ ಆಯಾಮವನ್ನು ಹ್ರಸ್ವಗೊಳಿಸಿಕೊಂಡಿದೆ; ಪಂಪ ರನ್ನ ಬೇಂದ್ರೆ ಕಾರಂತ ಅಡಿಗ ತೇಜಸ್ವಿ ಅನಂತಮೂರ್ತಿ ಮೊದಲಾದ ಕೆಲವೇ `ಮೇಜರ್’ ಲೇಖಕರ ಸುತ್ತ ಸುಳಿದಾಡುತ್ತಿದೆ; ಅಭಿಜಾತವಾದಿ ಪ್ರಜ್ಞೆಯಿಂದ ಹುಟ್ಟಿದ ಎಲಿಯಟ್ನ ಮೇಜರ್-ಮೈನರ್ ಎಂಬ ವಿಭಜಕ ಪರಿಕಲ್ಪನೆಗಳ ಮೂಲಕ, ಕನ್ನಡದ ವಿಶಾಲ ವಾಙ್ಮಯ ಸೃಷ್ಟಿಸಿರುವ ಮಂಟೆಸ್ವಾಮಿ ಕಾವ್ಯ, ದೇವಚಂದ್ರನ `ರಾಜಾವಳಿ ಕಥಾಸಾರ’ದಂತಹ ಸಾಂಸ್ಕೃತಿಕ ಪಠ್ಯಗಳನ್ನು ವಿವರಿಸುವುದಕ್ಕೆ ಸಾಧ್ಯವಿಲ್ಲ ಅನಿಸತೊಡಗಿತು. ಶ್ರೇಷ್ಠಸಾಹಿತ್ಯದ ಹುಡುಕಾಟದಲ್ಲಿ ಅವರು ಬರೆದ ವಿಮರ್ಶೆಯನ್ನು, ಹಿಂದಿನ ಉತ್ಸಾಹದಲ್ಲಿ ಓದುವುದು ಕಷ್ಟವಾಗತೊಡಗಿತು. ನಾಸ್ತಿಕವಾದಿ ಪಾಶ್ಚಿಮಾತ್ಯ ವೈಚಾರಿಕತೆಯಿಂದ ರೂಪುಗೊಂಡ ಚೌಕಟ್ಟುಗಳಿಗೆ ಸಿಗದೆ ಕರ್ನಾಟಕದ ಅನೇಕ ಸಾಂಸ್ಕೃತಿಕ ಲೋಕಗಳು ಹೊರಗೆ ಉಳಿದುಬಿಡುತ್ತವೆ. ಬುದ್ಧಿವಾದಿಗಳಾದ ಕುವೆಂಪು ಲಂಕೇಶ್ ದೇವನೂರು ತೇಜಸ್ವಿ, ಈ ಕೊರತೆಯನ್ನು ತಮ್ಮ ಕಲಾಕೃತಿಗಳ ಮೂಲಕ ದಾಟಿದರು. ವಿಮರ್ಶೆ-ವಿಚಾರ ಪ್ರಕಾರಗಳಲ್ಲಷ್ಟೆ ಕೆಲಸ ಮಾಡುವವರಿಗೆ ಈ ಅವಕಾಶ ಸಿಗುವುದಿಲ್ಲ. ನಾಯಕರ ವಿಮರ್ಶೆ, ಈ ಸಾಮುದಾಯಿಕ ಸಂಸ್ಕೃತಿಯನ್ನು ಒಳಗೊಳ್ಳುವ ಆಯಾಮ ಬಿಟ್ಟುಕೊಟ್ಟಿದೆ ಎಂದು ಭಾಸವಾಗತೊಡಗಿತು.

ಆದರೆ ವ್ಯಕ್ತಿಯಾಗಿ ನಾಯಕರ ಸಾರ್ವಜನಿಕ ವ್ಯಕ್ತಿತ್ವವು, ಅವರ ಸಾಹಿತ್ಯ ವಿಮರ್ಶೆಯಲ್ಲಿ ಇರುವುದಕ್ಕಿಂತ ಹೆಚ್ಚು ಬಹುಮುಖಿಯಾಗಿತ್ತು. ಅವರೊಬ್ಬ ಕನ್ನಡ ಚಳುವಳಿಗಾರ ಆಗಿದ್ದರು; ವಿಚಾರವಾದಿ ಚಳುವಳಿಯ ಪ್ರಮುಖ ಚಿಂತಕರಾಗಿದ್ದರು; ಎಷ್ಟೇ ಆಪ್ತರಿದ್ದರೂ ವೈಭವದ ಮತ್ತು ಸಂಪ್ರದಾಯಸ್ಥ ಮದುವೆಗಳಿಗೆ ಹೋಗುತ್ತಿರಲಿಲ್ಲ; ಮಂತ್ರಮಾಂಗಲ್ಯಗಳಿಗೆ ನೈತಿಕವಾಗಿ ಬೆಂಬಲಿಸುತ್ತಿದ್ದರು. ತಬ್ಬಲಿಗಳನ್ನು ಸಾಮಾಜಿಕ ಹಿಂಸೆಯಿಂದ ರಕ್ಷಿಸುವ ಮೈಸೂರಿನ `ಒಡನಾಡಿ’ ಸಂಸ್ಥೆ ಜತೆಗೆ ಅವರಿಗೆ ಲಗತ್ತಿತ್ತು; `ದ್ವೇಷಬಿಟ್ಟು ದೇಶಕಟ್ಟು’ ಮೊದಲಾದ ಚಳುವಳಿಗಳಲ್ಲಿ ಗುರುತಿಸಿಕೊಂಡರು. ಕುವೆಂಪು ಸಾಹಿತ್ಯದ ಮೇಲೆ ನಿಷ್ಠುರ ವಿಮರ್ಶೆ ಮಾಡಿದ್ದಕ್ಕೆ ಅವರನ್ನು ಕುವೆಂಪು ವಿರೋಧಿ ಮತ್ತು ಅಡಿಗರ ಬಣದವರು ಎಂದು ಬ್ರಾಂಡ್ ಮಾಡಲಾಗಿತ್ತು. ಆದರೆ ಅವರು ಕುವೆಂಪುರವರ ನಿರಂಕುಶಮತಿ ಮೌಲ್ಯಗಳನ್ನು, ಮೈಸೂರಿನಲ್ಲಿದ್ದ ಕುವೆಂಪು ಅವರ ಕೆಲವು ಪಟ್ಟಶಿಷ್ಯರಿಗಿಂತ ಚೆನ್ನಾಗಿ ಬದುಕಿದರು. ಅವರ ಕೊನೆಯ ದಿನಗಳಲ್ಲಿ ಸಾಹಿತ್ಯ ವಿಮರ್ಶೆ ಕಡಿಮೆಯಾಗಿ, ಸಾಮಾಜಿಕ ರಾಜಕೀಯ ವಿಶ್ಲೇಷಣೆಗಳು ಹೆಚ್ಚಿದವು. ಆರಂಭದ ವರ್ಷಗಳಲ್ಲಿ ಆವರಿಸಿದ್ದ ಅಡಿಗ-ಅನಂತಮೂರ್ತಿ ಪ್ರಭಾವದಿಂದ ಬಿಡಿಸಿಕೊಂಡು, ಅಂಬೇಡ್ಕರ್ ಮತ್ತು ದಲಿತ ಚಳುವಳಿಯಲ್ಲಿ ತೊಡಗಿಕೊಂಡರು. ಆರೋಗ್ಯಕರ ನಾಗರಿಕ ಸಮಾಜ ರೂಪಿಸಲು ಮತ್ತು ಮೈಸೂರಿನ ಸಾಂಸ್ಕೃತಿಕ ಹದುಳ ಕಾಪಾಡಲು ನಡೆದ ಬಹುತೇಕ ಸಭೆ-ಧರಣಿ-ಮುಷ್ಕರಗಳಲ್ಲಿ ಅವರ ಹಾಜರಾತಿ ಇರುತ್ತಿತ್ತು. ತಮ್ಮ ತಾತ್ವಿಕ ನಂಬಿಕೆಗಳ ವಿಷಯದಲ್ಲಿ ಕಠೋರ ನಿಷ್ಠುರತೆ ಹೊಂದಿದ್ದರು. ಮೈಸೂರ ದಸರೆಯಲ್ಲಿ ನಿರ್ದಿಷ್ಟ ಮತಧರ್ಮಕ್ಕೆ ಸೇರಿದ ದೇವತೆಯ ಮೆರವಣಿಗೆ ತೆಗೆಯುವುದು ಸಂವಿಧಾನದ ಧರ್ಮನಿರಪೇಕ್ಷತೆಗೆ ವಿರುದ್ಧ. ಇದು ಸರ್ಕಾರ ಮಾಡಬೇಕಾದ ಕೆಲಸವಲ್ಲ ಎಂದು ಟೀಕಿಸುತ್ತಿದ್ದರು. ಇದಕ್ಕಾಗಿ ಬಲಪಂಥೀಯರಿಂದ ಕೆಟ್ಟನಿಂದೆಯನ್ನು ಕೇಳಬೇಕಾಗುತ್ತಿತ್ತು.

ನಾಯಕರ ಮನೆ ‘ಪ್ರೀತಿ’, ಅನುಭವ ಮಂಟಪದಂತೆ ಮೈಸೂರಿನ ಆಂದೋಲನಕಾರರ ಸಮಾಲೋಚನ ವೇದಿಕೆ. ಅವರ ಬಹುತೇಕ ಸಾರ್ವಜನಿಕ ಚಟುವಟಿಕೆಗಳಲ್ಲಿ ಜೀವನ ಸಂಗಾತಿ ಮೀರಕ್ಕ ಜತೆಯಲ್ಲಿ ಇರುತ್ತಿದ್ದರು. ನಾಯಕರ ಗಂಭೀರ ವ್ಯಕ್ತಿತ್ವದಷ್ಟೇ ಮೀರಕ್ಕನವರ ಸರಳತೆ ಆಕರ್ಷಕವಾಗಿತ್ತು. ದಂಪತಿಗಳು ಜಾತೀಯತೆಯ ಲವಲೇಶವಿಲ್ಲದ ಆಂದೋಲನಕಾರರಾಗಿದ್ದರು. ಮೀರಕ್ಕ ನಾಯಕರ ವಿದ್ಯಾರ್ಥಿಗಳನ್ನು ಮಕ್ಕಳಂತೆ ಹಚ್ಚಿಕೊಂಡವರು; ಆದರ್ಶಕ್ಕಾಗಿ ಹಠಮಾರಿಯಾಗುವ ನಾಯಕರನ್ನು ಸಂಭಾಳಿಸುತ್ತ ಮಾಗಿದವರು.

ನಾವು ವಿದ್ಯಾರ್ಥಿಗಳಾಗಿದ್ದಾಗ ನಾಯಕರ ಮನೆಗೆ ಹೋಗುವ ಅವಕಾಶಗಳು ಹೆಚ್ಚು ಬರಲಿಲ್ಲ. ತಮ್ಮ ಕೃತಿ ವಿಮರ್ಶೆಯ ವಿಧಾನದಂತೆ, ವಿದ್ಯಾರ್ಥಿಗಳ ಜತೆ ಅವರು ತೀರ ಸಲಿಗೆಯಲ್ಲದ ದೂರವೂ ಅಲ್ಲದ ಸಮದೂರ ಕಾದುಕೊಂಡಿದ್ದರು. ಮೈಸೂರನ್ನು ಬಿಟ್ಟು ಶಿವಮೊಗ್ಗೆಯನ್ನು ಸೇರಿ ನೌಕರಿಗೆ ಸೇರಿದ ಬಳಿಕ, ಮೇಷ್ಟರ ಪಾಠ ಮತ್ತು ವ್ಯಕ್ತಿತ್ವಗಳು ಕಾಡತೊಡಗಿದವು. ನಿಜವಾದ ಗುರುಗಳು ತಮ್ಮ ವ್ಯಕ್ತಿತ್ವ ಚಿಂತನೆಯ ಮೂಲಕ ತರಗತಿಯಾಚೆಯೇ ಹೆಚ್ಚು ಕಲಿಸುತ್ತಾರೆ. ಅಲ್ಲಿ ಅಂಕಗಳಿಕೆಯ ಹಂಗಿರುವುದಿಲ್ಲ; ಭಯಭಕ್ತಿಯ ಅಗತ್ಯವೂ ಇರುವುದಿಲ್ಲ. ಮೈಸೂರಿಗೆ ಹೋದಾಗಲೆಲ್ಲ `ಪ್ರೀತಿ’ಗೆ ಹೋಗುತ್ತಿದ್ದೆ. ಅಲ್ಲಿಗೆ ಹೋಗುವುದೆಂದರೆ, ನಾಯಕರ ಹರಟೆಯನ್ನೂ ಮೀರಕ್ಕ ತಯಾರಿಸುತ್ತಿದ್ದ ಉತ್ತರ ಕನ್ನಡ ಶೈಲಿಯ ಮೀನೂಟವನ್ನೂ ಸವಿವ ಅವಕಾಶವೂ ಆಗಿತ್ತು. ನಾಯಕರು ಒಳ್ಳೆಯ ಹಾಡುಗಾರರೂ ತಾಳಮದ್ದಲೆಯ ಕಲಾವಿದರೂ ಹೌದು. ಊಟವಾದ ಬಳಿಕ ಮೂಡು ಬಂದರೆ ಬೇಂದ್ರೆ ಕವನಗಳನ್ನು ಹಾಡುವರು. ಯಾರದ್ದೊ ಕಾಲೆಳೆಯುತ್ತ ತಮಾಶೆಯ ಪ್ರಸಂಗ ಹೇಳುವರು. ನಾನೊಮ್ಮೆ ಅವರ ಸುದೀರ್ಘ ಸಂದರ್ಶನ ಮಾಡಿದೆ. ಅವರು ಕರಡಿನ ಪ್ರತಿಯೊಂದು ಪದವನ್ನು ಆಭರಣದಲ್ಲಿ ಹರಳನ್ನು ಕೂರಿಸಲು ಚಿನಿವಾರರು ತೋರುವ ಎಚ್ಚರದಲ್ಲಿ ತಿದ್ದಿಕೊಟ್ಟರು. ಖಚಿತತೆಗೆ ಇಷ್ಟೊಂದು ರಿಸ್ಕ್ ತೆಗೆದುಕೊಳ್ಳುವುದುಂಟೇ?

ನಾಯಕರು ತಮ್ಮ ಸಂದರ್ಶನದಲ್ಲಿ ಬಾಲ್ಯಕಾಲದ ಅನೇಕ ಸಂಗತಿಗಳನ್ನು ನೆನೆದಿರುವುದುಂಟು. ವೈಚಾರಿಕ ಬಂಡುಕೋರತನದಿಂದ ವಿಶ್ವವಿದ್ಯಾಲಯದ ರಾಜಕಾರಣದಲ್ಲಿ ಹಳೆಯ ಹುಲಿಗಳಾದ ಜವರೇಗೌಡ ಮತ್ತು ಹಾ.ಮಾ.ನಾಯಕ ಅವರನ್ನು ಎದುರು ಹಾಕಿಕೊಂಡು ವೃತ್ತಿ ಜೀವನದಲ್ಲಿ ಅವರು ಕಷ್ಟಪಟ್ಟಿದ್ದರು. ದೊಡ್ಡ ಬರೆಹಗಾರರು ಸಾರ್ವಜನಿಕ ಜೀವನದಲ್ಲಿ ಹೇಳುವ ಮೌಲ್ಯಗಳಿಗೂ ವೈಯಕ್ತಿಕ ಜೀವನದಲ್ಲಿ ವರ್ತಿಸುವುದಕ್ಕೂ ನಡುವೆ ಇರುವ ವ್ಯತ್ಯಾಸವು, ಅವರ ಕಟುಟೀಕೆಗೆ ಒಳಗಾಗುತ್ತಿತ್ತು. ಅವರ ಆತ್ಮಕಥೆಯೂ ಈ ಬಗೆಯ ಹಿಪಾಕ್ರಸಿಯ ವ್ಯಕ್ತಿತ್ವಗಳನ್ನು ಬಯಲು ಮಾಡಿದೆ. ನಾಯಕರು ಕೇವಲ ಸಾಹಿತ್ಯ ವಿಮರ್ಶಕರಲ್ಲ, ಸಾರ್ವಜನಿಕ ವ್ಯಕ್ತಿಗಳ ವಿಮರ್ಶಕರೂ ಆಗಿದ್ದರು.

ಒಮ್ಮೆ ನಾಯಕರಿಗೆ ಫೋನು ಮಾಡದೆ ಮನೆಗೆ ಹೋದೆ. ಆಪರೇಶನ್ ಆಗಿ, ಆಸ್ಪತ್ರೆಯಿಂದ ಮರಳಿ ಮನೆಗೆ ಬಂದಿದ್ದರು. ನೀಳವಾಗಿ ಕಾಲುಚಾಚಿ ಹಾಲಿನ ಮೂಲೆಯಲ್ಲಿ ಕೂತಿದ್ದರು. ಮುಖಕ್ಷೌರವಿಲ್ಲದ ಅವರನ್ನು ನೋಡಿದ್ದು ಅದೇ ಮೊದಲು. ಶರಶಯ್ಯೆಯಲ್ಲಿ ಮಲಗಿದ ಭೀಷ್ಮನಂತೆ ಮುಖದಲ್ಲಿ ನೋವಿತ್ತು. ಮಾತಾಡಲಾಗದಷ್ಟು ನಿತ್ರಾಣ. ಈ ಅವಸ್ಥೆಯನ್ನು ನೋಡಿ ಜೀವ ಮಮ್ಮಲ ಮರುಗಿತು. ಅವರಿಗೆ ಶಿಷ್ಯರಾಗಿ ಹೇಗೆ ಸಹಾಯ ಮಾಡಬಹುದು ಎಂಬ ತುಡಿತವನ್ನು ಅವರ ಆಪ್ತರಾಗಿದ್ದ ಪಂಡಿತಾರಾಧ್ಯರಲ್ಲಿ ಹೇಳಿಕೊಂಡೆ. ಅವರು ಯಾರ ಸಹಾಯವನ್ನೂ ನಿರೀಕ್ಷಿಸುವುದಿಲ್ಲ. ಅದರ ಅಗತ್ಯವೂ ಇಲ್ಲ. ಸ್ವಾಭಿಮಾನಿಯಾದ ಅವರಿಗೆ ವಿದ್ಯಾರ್ಥಿಗಳ ನೆರವು ಹರ್ಟ್ ಮಾಡಬಹುದು ಎಂದು ಆರಾಧ್ಯರು ನುಡಿದರು.

ಇನ್ನೊಮ್ಮೆ ಭೇಟಿಗೆಂದು ಹೋದಾಗ ನಾಯಕರಿಗೆ ತುಸು ತ್ರಾಣ ಬಂದಿತ್ತು. ಅವರು ನಾನು ಮೈಸೂರು ವಿಶ್ವವಿದ್ಯಾಲಯದ ಅಧ್ಯಾಪಕರಿಗೆ ಕೊಡಲಿರುವ ಉಪನ್ಯಾಸಕ್ಕೆ ಬಂದು ಕುಳಿತುಕೊಳ್ಳುತ್ತೇನೆ ಎಂದರು. ಉಪನ್ಯಾಸದ ಏರ್ಪಾಟು ಮಾಡಿದ್ದ ಪ್ರೊ. ಪಂಡಿತಾರಾಧ್ಯರು ಈ ನೆಪದಲ್ಲಾದರೂ ನಾಯಕರು ಮನೆಬಿಟ್ಟು ಹೊರಬರಲಿ ಎಂಬ ಆಶಯದಲ್ಲಿ `ಬನ್ನಿ’ ಎಂದರು. ನಾಯಕರು ಬರುತ್ತಾರೆಂದು ನನಗೆ ಗಾಬರಿಯಾಯಿತು. ನಾಯಕರು ಬಂದರು. ಆದರೆ ನನ್ನ ಉಪನ್ಯಾಸ ಅವರಿಗೆ ಶ್ರಮಣ ಸಮಸ್ಯೆಯಿಂದ ಸಂವಹನವಾಗಲಿಲ್ಲ. ನಿರ್ಭಾವುಕವಾಗಿ ಕೂತಿದ್ದರು. ನಾನು ನಿರ್ಭಯವಾಗಿ ಮಾತಾಡಿದೆ. ಆದರೆ ಕೇಳುವಿಕೆಯನ್ನೇ ಕಳೆದುಕೊಂಡ ಮೇಷ್ಟರ ಬಗ್ಗೆ ದುಃಖವಾಯಿತು.

ನಾಯಕರು ಮತ್ತಷ್ಟು ಗುಣವಾದ ಬಳಿಕ ಬಾನು ಜತೆ ಹೋದೆ. ಹೋಗಬಾರದಿತ್ತು ಅನಿಸಿತು. ಸ್ಫುರದ್ರೂಪಿ ನಾಯಕರು ತೀರಾ ಸೊರಗಿದ್ದರು. ಸ್ಮೃತಿನಷ್ಟವಾಗಿತ್ತು. ಮಗಳು ಕೀರ್ತಿ ‘ಅಪ್ಪ, ರಹಮತ್ ಬಂದಿದ್ದಾರೆ’ ಎಂದರು. ‘ರಾಮತ್ ಬಂದಿದಾರಾ? ನಾನೇನು ಮಾಡಬೇಕು?’ ಎಂದು ತೊದಲುತ್ತ ಹಾಲಿಗೆ ಬಂದು ಕೂತರು. ಇದ್ದಷ್ಟೂ ಹೊತ್ತು ನನ್ನತ್ತ ನೋಡಲೇ ಇಲ್ಲ. ಒಳಜೀವ ಧಗಧಗಿಸುತ್ತಿದೆ ಎಂಬಂತೆ, ಮುನಿಸಿಕೊಂಡ ಮಗುವಿನಂತೆ, ಎದುರಿದ್ದ ಗೋಡೆಯನ್ನು ದುರದುರನೆ ದಿಟ್ಟಿಸುತ್ತ ಕೂತರು. ಹೋಗಿ ಬರುತ್ತೇನೆಂದರೂ ಸ್ಪಂದನೆಯಿಲ್ಲ. ಹಾಲಿನ ಮೂಲೆಯ ಸೋಫಾದಲ್ಲಿ ಅವರು ಯಾವಾಗಲೂ ದೇಹವನ್ನು ಚೆಲ್ಲಿಕೊಂಡಂತೆ ಕೂರುವವರು. ಅದಕ್ಕೆ ಸಮೀಪ ಇನ್ನೊಂದು ಮೂಲೆಯಲ್ಲಿದ್ದ ಬೆತ್ತದ ಕುರ್ಚಿಯಲ್ಲಿ ನನ್ನಂತಹ ಸಾವಿರಾರು ಜನ ಕೂತು ಅವರನ್ನು ಕೇಳಿಸಿಕೊಳ್ಳುತ್ತಿದ್ದೆವು. ಈ ಜಾಗದಲ್ಲಿ ಎಷ್ಟೊಂದು ಚರ್ಚೆ ಹರಟೆ ಹಾಡು ಹಾಸ್ಯಪ್ರಸಂಗ ಜರುಗಿವೆ! ಈಗ ಅದೇ ಜಾಗದಲ್ಲಿ ಕೂತು ಪಟ ತೆಗೆಸಿಕೊಂಡೆವು. ಅದು ಹಗಲಿನ `ಮುಗಿಲಾಗ ತೇಲಿಬಂದಿತೊ ಚಂದಿರನ ಹೆಣ’ದಂತೆ ಕಳಾಹೀನವಾಯಿತು.

ನಾನು-ಬಾನು ಅಮೆರಿಕೆಯಲ್ಲಿ ಇರುವಾಗ್ಯೆ, ನಾಯಕರು ತೀರಿಕೊಂಡ ಸುದ್ದಿ ಸಿಕ್ಕಿತು. ಊರಲ್ಲಿದ್ದಿದ್ದರೆ ಕೊನೆಯ ಮುಖದರ್ಶನವಾದರೂ ಮಾಡಲು ಹೋಗಬಹುದಿತ್ತು. ಸೊರಗಿದ ಮೀರಕ್ಕನವರ ಕೈಹಿಡಿದು ಕೂರಬಹುದಿತ್ತು ಎಂದು ಚಡಪಡಿಸಿದೆ. ಅರ್ಧ ಶತಮಾನದಷ್ಟು ಕಾಲ ಪಾಂಡಿತ್ಯ ಮತ್ತು ಶ್ರದ್ಧೆಯಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಕಲಿಸಿದ ಒಬ್ಬ ಮೇಷ್ಟ್ರು, ಅತಿಶಿಸ್ತಿನಿಂದ ಬರವಣಿಗೆ ಮಾಡಿದ ಲೇಖಕ, ಜೀವನ ಪ್ರೀತಿಯಿಂದ ಪ್ರಾಮಾಣಿಕತೆಯಿಂದ ಬದುಕಿದ ಕುಟುಂಬಸ್ಥ, ಚಳುವಳಿಗಳಲ್ಲಿ ಭಾಗವಹಿಸಿದ ಸಾರ್ವಜನಿಕ ವ್ಯಕ್ತಿ, ಹಲವರ ಬಾಳಿಗೆ ನೈತಿಕ ಬೆಂಬಲ ಒದಗಿಸಿದ ನಿಜದನಿ, ಈಗ ಕಣ್ಮರೆಯಾಯಿತು ಎಂದುಕೊಂಡೆ. ‘ನಿಜದನಿ’ ನಾಯಕರ ಒಂದು ಪುಸ್ತಕದ ಹೆಸರೂ ಹೌದು. ಅವರ `ವಿನಯ ವಿಮರ್ಶೆ’ ಎಂಬ ಪುಟ್ಟ ಲೇಖನವನ್ನು ತೆಗೆದು ಓದತೊಡಗಿದೆ. ಅದು ಬರೆಹ-ಬದುಕು ಹೇಗಿರಬೇಕೆಂದು ವ್ಯಕ್ತಿಯೊಬ್ಬ ರಚಿಸಿಕೊಂಡ ಸಂವಿಧಾನದಂತಿದೆ; ಕಲಾಸಂವೇದನೆ ಪ್ರಜಾಪ್ರಭುತ್ವವಾದಿ ವಿಚಾರವಾದಿ ಜಾತ್ಯತೀತ ಮೌಲ್ಯಗಳ ಪ್ರಣಾಳಿಕೆಯಂತಿದೆ; ನಡೆ-ನುಡಿಗಳ ನಡುವೆ ಬಿರುಕಾಗದಂತೆ ಬದುಕಲು ಬೆಲೆ ತೆತ್ತಿರುವ ಆದರ್ಶವಾದಿಯ ಉಯಿಲಿನಂತಿದೆ ಅನಿಸಿತು.

‍ಲೇಖಕರು Admin

18 September, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading