ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಕಾಡುವ ಕೀರಂ…' – ಪ್ರದೀಪ್ ಮಾಲ್ಗುಡಿ

ಪ್ರದೀಪ್ ಮಾಲ್ಗುಡಿ

ಸಮಕಾಲೀನ ವಾಗ್ವಾದಗಳನ್ನು ಸದಾ ಹೊಸ ದಿಗಂತಗಳಿಗೆ ವಿಸ್ತರಿಸುತ್ತಿದ್ದ ಪ್ರೊ.ಕಿ.ರಂ.ನಾಗರಾಜ ಅವರು ಕನ್ನಡ ಸಂವೇದನೆಯ ಭಾಗವಾಗಿದ್ದಾರೆ. ಅವರು ಕವಿ ಸಂವೇದನೆಯ ವಿವಿಧ ಮಜಲುಗಳನ್ನು ವಿದ್ಯಾರ್ಥಿ, ಕೇಳುಗ ವರ್ಗಕ್ಕೆ ಸದಾ ಹೊಸದಾಗಿ ಮನಮುಟ್ಟುವಂತೆ ವ್ಯಾಖ್ಯಾನಿಸುತ್ತಿದ್ದ ಪರಿ ಅನನ್ಯ. ಕಲೆ, ಸಾಹಿತ್ಯ, ರಂಗಭೂಮಿ, ವಿಮರ್ಶೆ, ಭಾಷಾವಿಜ್ಞಾನ, ಸಂಸ್ಕೃತಿ ಚಿಂತನೆ, ಮೀಮಾಂಸೆ ಮೊದಲಾದ ಜ್ಞಾನಶಿಸ್ತುಗಳಲ್ಲಿ ಅಪಾರವಾದ ಪಾಂಡಿತ್ಯವಿದ್ದ ಕಿ.ರಂ. ಕನ್ನಡ ಭಾಷೆಯಲ್ಲಿ ಹೊಸಚಿಂತನೆಗಳಿಗೆ ಗರಿ ಮೂಡಿಸಿದವರು.
ಕನ್ನಡದ ಜ್ಞಾನಪರಂಪರೆಯ ಕೊಂಡಿಯಾಗಿದ್ದರೂ ಅದರ ಜತೆಗೆ ಪೂರ್ವ-ಪಶ್ಚಿಮದ ಅನುಸಂಧಾನದ ಸಾಧ್ಯತೆಗಳನ್ನು ಸದಾ ಶೋಧಿಸುತ್ತಿದ್ದ ರೀತಿ ವಿನೂತನವಾಗಿರುತ್ತಿತ್ತು. ಪಶ್ಚಿಮದಿಂದ ಬಂದ ಜ್ಞಾನವೆಲ್ಲವನ್ನೂ ಕನ್ನಡದ ಮೂಲಕ ಮುಖಾಮುಖಿಯಾಗುವ ಅವರ ಪ್ರಯತ್ನ ಅವರಿಗೆ ಮಾತ್ರ ವಿಶಿಷ್ಟವಾಗಿತ್ತು. ಇಂತಹ ಅನೇಕ ಅನ್ವೇಷಣೆಗಳು ಅವರ ಪ್ರತಿ ಸಂವಾದದಲ್ಲೂ ಇರುತ್ತಿದ್ದವು. ಈ ಮೂಲಕ ಕನ್ನಡದಲ್ಲಿ ಹೊಸ ಚಿಂತನೆಗಳು ಮೂಡಲು ಅವರು ಅನೇಕ ಬಗೆಯಲ್ಲಿ ಕಾರಣರಾಗಿದ್ದಾರೆ.
ಬಹುತೇಕ ವಿಮರ್ಶಕರು, ವಿದ್ವಾಂಸರು ತಮ್ಮ ಪಾಂಡಿತ್ಯವನ್ನು ಪ್ರದಶರ್ಿಸಲು ಕೃತಿಯೊಂದನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ ಕಿ.ರಂ. ಕೃತಿಯ ಬಹುಮುಖಿ ಓದಿನ ಸಾಧ್ಯತೆಗಳನ್ನು ತೆರೆದಿಡುತ್ತಿದ್ದರು. ಕೃತಿಯ ಕೇಂದ್ರ, ಉದ್ದೇಶ, ವಸ್ತುಗಳನ್ನು ಸೀಳಿ ವಿವರಿಸುವುದಕ್ಕಿಂತ ಅವುಗಳ ಏಕೀಕೃತ ರೂಪವನ್ನು ಕೇಳುಗರಿಗೆ ದಾಟಿಸುತ್ತಿದ್ದ ಪರಿ ಕೇಳುಗರಲ್ಲಿ ಹೊಸ ಚಿಂತನೆಗಳು ಮೂಡಲು ಕಾರಣರಾಗುತ್ತಿದ್ದರು.
ನಾಟಕ ಪ್ರದರ್ಶನವೊಂದನ್ನು ನೋಡಿ ಹೊರಬಂದ ಪ್ರೇಕ್ಷಕ, ಮತ್ತೆಮತ್ತೆ ಆ ಪ್ರದರ್ಶನದ ರಸಗಳಿಗೆಗಳನ್ನು ಮೆಲುಕುಹಾಕುವಂತೆ ಕಿ.ರಂ.ರ ಮಾತುಗಳು ಬಹುಕಾಲ ಕೇಳುಗರ ಮನಸಿನಲ್ಲಿ ಗುಂಯ್ಗುಡುತ್ತಿದ್ದವು. ಅಂತಹ ಮೋಡಿ ಅವರ ಮಾತುಗಳಲ್ಲಿರುತ್ತಿತ್ತು. ಮೀಮಾಂಸೆ, ವಿಮರ್ಶೆಗಳೆರಡೂ ಮಿಳಿತವಾಗಿದ್ದ ಅವರ ವಾಕ್ಪ್ರವಾಹ ನಿಧಾನ ಶೃತಿಯಂತೆ. ಆರಂಭದಲ್ಲಿ ಗೊರಗೊರ ಸದ್ದಿನೊಂದಿಗೆ ಎಲ್ಲೋ ಯಾರೋ ಮಾತನಾಡುವಂತೆ ಕೇಳುತ್ತಿದ್ದದ್ದು, ಕೆಲವೇ ಕ್ಷಣಗಳಲ್ಲಿ ಕೇಳುಗರ ಕಿವಿ ನಿಮಿರಿಸುತ್ತಿತ್ತು.

ಅವರ ಜತೆಗಿನ ದಿನಗಟ್ಟಲೇ ನಡೆಸಿದ ಒಡನಾಟಗಳಲ್ಲಿ ಪ್ರಾಚೀನ ಕನ್ನಡ ಕಾವ್ಯದಿಂದ ಆಧುನಿಕ ಕನ್ನಡದ ವಿವಿಧ ಸಾಹಿತ್ಯ ಪ್ರಕಾರಗಳವರೆಗೆ, ಪಾಶ್ಚಾತ್ಯ-ಭಾರತೀಯ ಕಾವ್ಯ, ಮೀಮಾಂಸೆ, ಆಧುನಿಕ ವಿಮರ್ಶೆಯ ವಿವಿಧ ಪ್ರಸ್ಥಾನಗಳು, ಭಾಷಾವಿಜ್ಞಾನದ ವಿವಿಧ ಸ್ಕೂಲ್ಗಳು, ಸಾಹಿತ್ಯಕ ಪ್ರಕಾರಗಳ ಮಾದರಿಗಳು ಮೊದಲಾದದವುಗಳನ್ನು ಕುರಿತು ಮಾತನಾಡುತ್ತಿದ್ದರು. ಅದರಲ್ಲಿ ಕಲೆ, ಸಾಹಿತ್ಯ, ರಂಗಭೂಮಿ, ರಂಗಸಂಗೀತ, ಶಾಸ್ತ್ರೀಯ ಸಂಗೀತ, ಸಿನಿಮಾ, ಎಲೆಕ್ಟ್ರಾನಿಕ್ ಸಮೂಹ ಮಾಧ್ಯಮಗಳು ಬಂದು ಹೋಗುತ್ತಿದ್ದವು. ಅದರ ನಡುವೆ ಅಪರೂಪಕ್ಕೆ ಮೇಷ್ಟ್ರು ಮಾಡಿ ಕೊಡುತ್ತಿದ್ದ ಕಾಫಿ, ಅವರೇ ಹಾಕಿದ ಉಪ್ಪಿನಕಾಯಿಯ ರುಚಿಗಳೂ ಕೂಡ ಅವರ ಮಾತಿನಂತೆಯೇ ರಸವತ್ತಾಗಿರುತ್ತಿದ್ದವು.
ಸಾಹಿತ್ಯದ ವಿರುದ್ಧ ಯಾರು ಮಾತನಾಡಿದರೂ ಅದನ್ನವರು ಸಹಿಸುತ್ತಿರಲಿಲ್ಲ. ಅನೇಕ ಸಂದರ್ಭದಲ್ಲಿ ಸಾಹಿತ್ಯ ಕುರಿತು ಯಾರಾದರೂ ಮಾತನಾಡುತ್ತಿದ್ದಾಗ ಕಿ.ರಂ. ಅವರು ಮಾತನಾಡುವ ಮೊದಲೇ ಸಾಹಿತ್ಯದ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಊಹಿಸಿ, ವ್ಯಗ್ರವಾಗಿ ಪ್ರತಿಕ್ರಿಯಿಸುತ್ತಿದ್ದರು. ಇದರ ಬಿಸಿ ನನಗೂ ಒಮ್ಮೆ ತಟ್ಟಿತ್ತು. ಎಂ.ಫಿಲ್., ವೈವಾದಲ್ಲಿ ನಾನು ಕನ್ನಡ ಸಾಹಿತ್ಯವನ್ನು ಓದುವ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ವಾದ… ಎಂದು ಇನ್ನೂ ಮಾತನಾಡುವುದರಲ್ಲಿದ್ದೆ. ಅಷ್ಟರಲ್ಲೇ ಕಿ.ರಂ. ಕೆರಳಿ ಕೆಂಡಾಮಂಡಲರಾಗಿ ಯಾವನ್ರೀ ಹೇಳಿದ್ದು. ಇವತ್ತು ಸರ್ಕಾರಿ, ಖಾಸಗಿ ಶಾಲೆಗಳಲ್ಲಿ ಕನ್ನಡ ಪಠ್ಯಗಳನ್ನು ಲಕ್ಷಾಂತರ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಪಿಯೂಸಿ, ಡಿಗ್ರೀ, ಮಾಸ್ಟರ್ ಡಿಗ್ರೀಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಕನ್ನಡ ಸಾಹಿತ್ಯ ಓದ್ತಿಲ್ವೇನ್ರೀ? ಟಿವಿ ಸೀರಿಯಲ್ಗಳಲ್ಲಿ ಬಳಕೆಯಾಗ್ತಿರೋದು ಸಾಹಿತ್ಯವಲ್ಲವಾ? ಸಿನಿಮಾಗಳಲ್ಲಿ ಬಳಕೆಯಾಗ್ತಿರೋದು ಸಾಹಿತ್ಯವಲ್ಲವಾ? ಕ್ಯಾಸೆಟ್, ಸೀಡಿಗಳಲ್ಲಿ, ಮೊಬೈಲ್ಗಳಲ್ಲಿ ಜನ ಸಾಹಿತ್ಯ ಕೇಳ್ತಿಲ್ವಾ? ರೇಡಿಯೋಗಳಲ್ಲಿ ಇಪ್ಪತ್ತನಾಲ್ಕು ಗಂಟೆ ಜನ ಹಾಡು ಕೇಳ್ತಾರಲ್ಲವೇನ್ರೀ?… ಎಂದು ಇನ್ನೂ ರೇಗುತ್ತಲೇ ಇದ್ದರು. ನಾನು ತಬ್ಬಿಬ್ಬಾದೆ. ಮುಂದೆ ಏನು ಮಾತನಾಡಬೇಕೆಂದೇ ಮರೆತು ಹೋಯಿತು.
ಈ ಹೊತ್ತಿಗಾಗಲೇ ನಾನು ಕಿ.ರಂ. ಅವರ ಜತೆ ಸಾಕಷ್ಟು ದಿನಗಳನ್ನು ಕಳೆದಿದ್ದೆ. ಆದರೂ ಅವರು ನನ್ನ ಮಾತಿಗೆ ಕ್ಷಮೆಯ ವಿನಾಯಿತಿ ಕೊಟ್ಟಿರಲಿಲ್ಲ. ಅಂದಿನ ಮಾತಿನ ನನ್ನ ಮುಂದಿನ ಮಾತುಗಳು ’…ವಿದೆ. ಆದರೆ ಅದು ತಪ್ಪುಗ್ರಹಿಕೆ. ಅದರ ಕುರಿತು ಎಂ.ಫಿಲ್., ಸಂಶೋಧನೆಯ ವಿಷಯವನ್ನಾಗಿಸಿಕೊಳ್ಳಬೇಕೆಂದಿದ್ದೇನೆ’ ಎಂದು ಹೇಳಬೇಕೆಂದುಕೊಂಡಿದ್ದೆ. ಆದರೆ ಅಂದು ವೈವಾದಲ್ಲಿ ಸಬ್ಜೆಕ್ಟ್ ಎಕ್ಸ್ಪಟರ್್ ಆಗಿ ಇದ್ದವರು ರಾಮಲಿಂಗಪ್ಪ ಟಿ ಬೇಗೂರು, ವೆಂಕಟೇಶ್ ಮೂರ್ತಿ ಮತ್ತು ನಟರಾಜ್ ಹುಳಿಯಾರ್ ಅವರೂ ಕೂಡ ಇದ್ದರು. ಕೊನೆಗೆ ಕಿ.ರಂ. ಅವರ ಉದ್ವೇಗವನ್ನು ನಿಯಂತ್ರಿಸಲು ಹುಳಿಯಾರ್ ಅವರು ಪ್ರದೀಪ್ ‘ಕನ್ನಡ ಸಾಹಿತ್ಯ ತಲುಪುತ್ತಿರುವ ವಿವಿಧ ಬಗೆಗೆಳು’ ಅನ್ನೋ ಹೆಸರಲ್ಲಿ ನೀವು ಎಂ.ಫಿಲ್., ಥೀಸೀಸ್ ಮಾಡ್ರೀ ಎಂದು ಅವರ ಮಾತುಗಳಿಗೆ ಬ್ರೇಕ್ ಹಾಕಿದ್ದರು. ಕಿ.ರಂ. ಎಂದರೆ ಸಾಹಿತ್ಯವನ್ನೇ ಉಸಿರಾಡುತ್ತಿದ್ದ ಕಾವ್ಯಜೀವಿ. ಅವರ ಮನೆ ಹಾಗೂ ಸಂಸ್ಥೆಗೆ ಅವರಿಟ್ಟ ಹೆಸರು ‘ಕಾವ್ಯಮಂಡಲ’. ಅವರ ಜತೆಗಿನ ಒಡನಾಟದಲ್ಲಿ ಸಾಹಿತ್ಯದಿಂದ ಹೊರತು ಪಡಿಸಿದ ವಿಷಯಗಳು ಆಗೀಗ ಬಂದರೂ ಮತ್ತೆ ಅವರು ಸಾಹಿತ್ಯಕ್ಕೆ ಯಾವಾಗಲೋ ಗೊತ್ತಿಲ್ಲದೆ ಹೊರಳಿಕೊಂಡುಬಿಡುತ್ತಿದ್ದರು.
ನೋಡ್ರೀ ನಾನು ಪಂಪನ್ನ ಅರಬ್ಬೀ ಭಾಷೆ ತರ ಎಡಗಡೆಯಿಂದ ಕೂಡ ಓದ್ತೀನಿ ಎಂದು ಚಾಲೆಂಜ್ ಮಾಡುವ ಶೈಲಿಯಲ್ಲಿ ಹೇಳಿ ಒಂದು ದಮ್ ಎಳೆದು ಇಡೀ ವಾತಾವರಣವನ್ನು ಧೂಮಲೀಲೆಯಿಂದ ಕಾವ್ಯಲೀಲೆಗೆ ವಿಸ್ತರಿಸುತ್ತಿದ್ದರು. ಅದೊಂದು ಯಕ್ಷ ಲೋಕ. ಆ ಲೋಕದಲ್ಲಿ ಕಾವ್ಯಮೋಹಿಗಳನ್ನು ಹೊರತುಪಡಿಸಿ ಮತ್ತಾರಿಗೂ ಅವಕಾಶವಿರುತ್ತಿರಲಿಲ್ಲ. ಅನೇಕರು ಅವರಿಂದ ಕ್ಷಣಿಕ ಆಕರ್ಷಣೆಗಳಿಗೆ ಒಳಗಾಗಿ ಸುತ್ತುತ್ತಿದ್ದರೂ ಅವರಲ್ಲನೇಕರಿಗೆ ಶಾಶ್ವತವಾಗಿ ಅವರಿಗೆ ಸದಸ್ಯತ್ವ ಸಿಗುತ್ತಿರಲಿಲ್ಲ. ಇನ್ನು ಕೆಲವರಿಗೆ ಸದಸ್ಯತ್ವದ ನವೀಕರಣಕ್ಕೆ ಬೇಕಾದ ಸಿದ್ಧತೆಗಳಿರುತ್ತಿರಲಿಲ್ಲ. ಜತೆಗೆ ಕಿ.ರಂ. ಅವರು ಯಾವಾಗ ಬೇಕಾದರೂ ಯಾವುದೋ ಲೇಖನವನ್ನೋ, ಕವಿತೆಯನ್ನೋ, ಕೃತಿಯನ್ನೋ ಓದಿದ್ದೀರೇನ್ರೀ? ಎಂದು ಕೇಳಿ ತಬ್ಬಿಬ್ಬುಗೊಳಿಸಿಬಿಡುತ್ತಿದ್ದರು. ಓದದಿದ್ದರೆ ಏನ್ರೀ ನೀವು ಅದನ್ನ ಇನ್ನೂ ಓದಿಲ್ಲಾಂದ್ರೆ ಕನ್ನಡ ಸಾಹಿತ್ಯದ ವಿದ್ಯಾಥರ್ಿ ಹೇಗ್ರೀ ಆಗ್ತೀರಾ? ಎಂದು ಮುಖಾಮುಲಾಜಿಲ್ಲದೆ ಜಾಡಿಸಿಬಿಡುತ್ತಿದ್ದರು. ಇಂತಹ ಅನೇಕ ಸನ್ನಿವೇಶಗಳಿಗೆ ಸಿಕ್ಕು ನುಗ್ಗಾಗಿ ಹೋದ ಅನೇಕರನ್ನು ನಾನು ಅವರ ಮನೆಯಲ್ಲಿ ಮತ್ತೆ ಕಂಡಿಲ್ಲ.
ಲಂಕೇಶ್ ತಮ್ಮ ಕಡೆಯ ದಿನಗಳಲ್ಲಿ ಡಿ.ಎನ್.ಶಂಕರ ಬಟ್ಟರು ಕನ್ನಡದಲ್ಲಿ ನಡೆಸುತ್ತಿರುವ ಭಾಷಿಕ ಬಿಡುಗಡೆಯ ಹೊಸ ಪ್ರಯತ್ನಗಳೆಡೆಗೆ ಆಕಷರ್ಿತರಾಗಿದ್ದರಂತೆ. ಲಂಕೇಶ್ ಅವರು ತಮ್ಮ ಕಡೆಯ ಕ್ಷಣಗಳಲ್ಲಿ ಅವರ ಕೃತಿಗಳನ್ನು ಓದುತ್ತಿದ್ದರು. ಕಿ.ರಂ. ಕೂಡ ‘ಇನ್ಮುಂದೆ ಶಂಕರಬಟ್ಟರ ಕನ್ನಡದಲ್ಲಿ ಬರೆಯುವ ಅಭ್ಯಾಸವನ್ನು ಮಾಡ್ಕೋಬೇಕ್ರೀ. ನನಗೆ ಸ್ವಲ್ಪ ವಯಸ್ಸಾಯ್ತು ನೋಡೀ, ನಾನೂ ಪ್ರಯತ್ನ ಪಡ್ತೀನೀ’ ಎಂದು ನಮ್ಮ ಓರಗೆಯವರೊಡನೆ ಹೇಳುತ್ತಿದ್ದರು. ಹೀಗೆ ಸದಾ ಅವರು ಹೊಸ ಚಿಂತನೆಗಳಿಗೂ ಸ್ಪಂದಿಸುವ ಸಮಕಾಲೀನತೆಗೆ ತಮ್ಮನ್ನು ತೆರೆದುಕೊಳ್ಳುವಷ್ಟು ಅಪ್ಡೇಟ್ ಆಗುತ್ತಿದ್ದರು. ಇವೆಲ್ಲ ಅವರು ಯುವಜನಾಂಗವನ್ನೂ ಕಾಡುವ ಕೀರಂ ಆಗಲು ಕಾರಣವಾಗಿವೆಯೆನಿಸುತ್ತದೆ.
 

‍ಲೇಖಕರು G

7 August, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading