ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾಡುವ ಕಸ್ತೂರಬಾ ಏಕ ವ್ಯಕ್ತಿ ಪ್ರದರ್ಶನ ನಾಟಕ

 

ಡಾ ಎನ್  ಜಗದಿಶ್ ಕೊಪ್ಪ

ದಿನಾಂಕ 4-8-14 ರ ಸೋಮವಾರ ಬೆಂಗಳೂರಿನ ರವಿಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನ ತಗೊಂಡ ಕಸ್ತೂರ ಬಾ ಏಕ ವ್ಯಕ್ತಿ ಪ್ರದರ್ಶನ ಪ್ರಯೋಗವು ಮೈಸೂರು ರಂಗಾಯಣದ ಪ್ರಬುದ್ಧ ಕಲಾವಿದೆ ಶಶಿಕಲಾ ಅವರಿಂದ ಸಮರ್ಥವಾಗಿ ಅನಾವರಣಗೊಳ್ಳುವುದರ ಮೂಲಕ ಪ್ರೇಕ್ಷಕರ ಮನದೊಳಗೆ ಬಿರುಗಾಳಿಯ ಅಲೆಯನ್ನೆಬ್ಬಿಸಿತು.

ಯಾವುದೇ ಒಬ್ಬ ರಂಗ ನಟ ಅಥವಾ ನಟಿಗೆ ಏಕ ವ್ಯಕ್ತಿ ಪ್ರದರ್ಶನವೆಂಬುದು ಪ್ರತಿಭೆಗೆ ಸವಾಲೊಡ್ಡುವ ಕ್ರಿಯೆ ಕೂಡ ಹೌದು. ಪ್ರದರ್ಶನದುದ್ದಕ್ಕೂ ಅಭಿನಯದಲ್ಲಿ ತೊಡಗಿಸಿಕೊಳ್ಳುವುದರ ಜೊತೆ ಜೊತೆಗೆ ಸನ್ನಿವೇಶಕ್ಕೆ ತಕ್ಕಂತೆ ಹಲವು ಭಾವಗಳನ್ನು ಅಭಿವ್ಯಕ್ತಿಗೊಳಿಸುತ್ತಾ ಪ್ರೇಕ್ಷಕರನ್ನು ಏಕಾಗ್ರತೆಯ ಮನಸ್ಸಿನಲ್ಲಿ ಹಿಡಿದಿಟ್ಟುಕೊಳ್ಳುವುದು ಅವರ ಪಾಲಿಗೆ ಅಗ್ನಿ ಪರೀಕ್ಷೆ ಎನ್ನಬಹುದು. ಈ ನಿಟ್ಟಿನಲ್ಲಿ ಮಹಾತ್ಮ ಗಾಂಧಿಯವರ ಪತ್ನಿ ಕಸ್ತೂರಬಾರವರ ಅಂತರಂಗದ ತುಮಲ, ತಲ್ಲಣ ಮತ್ತು ತಳಮಳಗಳನ್ನು ಅಚ್ಚುಕಟ್ಟಾಗಿ ಮತ್ತು ಪರಿಣಾಮಕಾರಿಯಾಗಿ ಪ್ರೇಕ್ಷಕರ ಎದೆಗೆ ದಾಟಿಸುವಲ್ಲಿ ಶಶಿಕಲಾ ಯಶಸ್ವಿಯಾದರು.
ಕನ್ನಡ ರಂಗಭೂಮಿಗೆ ಏಕವ್ಯಕ್ತಿ ಪ್ರದರ್ಶನ ಪ್ರಕಾರ ಹೊಸದೇನಲ್ಲ. ಆದರೆ ಯಶಸ್ವಿಯಾದ ನಾಟಕಗಳು ಮಾತ್ರ ತೀರಾ ವಿರಳ ಎನ್ನಬಹುದು. ಬಹುಮುಖ ಪ್ರತಿಭೆಯ ಕನ್ನಡ ರಂಗಭೂಮಿಯ ಹಿರಿಯ ಕಲಾವಿದ ಹಾಗೂ ನಟ ದಿ. ಸಿಂಹ ರವರು ಎರಡು ದಶಕದ ಹಿಂದೆ ಟಿಪಿಕಲ್ ಕೈಲಾಸಂ’ ಎಂಬ ಏಕ ವ್ಯಕ್ತಿ ಪ್ರಯೋಗದ ಮೂಲಕ ನಾಂದಿ ಹಾಡಿದ ಈ ನಾಟಕ ಪ್ರಕಾರಕ್ಕೆ ಆರಂಭದಲ್ಲಿ ಒಳ್ಳೆಯ ಪ್ರತಿಕ್ರಿಯೆ ಕೂಡ ಲಭ್ಯವಾಯಿತು. ಅನಂತರ ಸಿಂಹರವರು ಕುವೆಂಪು ಕುರಿತ ನಾಟಕವನ್ನು ಕೂಡ ಪ್ರಯೋಗ ಮಾಡಿದರು. ಸಿ.ಆರ್. ಸಿಂಹ ರವರಿಂದ ಪ್ರೇರೆಣೆಗೊಂಡ ಅನೇಕ ರಂಗ ಕಲಾವಿದರು ನಮ್ಮ ಪೌರಾಣಿಕ ಕಥೆಗಳ ಹಲವು ನಾಯಕ/ ನಾಯಕಿಯರ ಕುರಿತಾದ ಏಕ ವ್ಯಕ್ತಿ ಪ್ರದರ್ಶನ ನೀಡತೊಡಗಿದ್ದಾರೆ. ಮಹಿಳಾ ಕಲಾವಿದೆಯರಲ್ಲಿ ಶ್ರೀಮತಿ ಲಕ್ಷ್ಮಿ ಚಂದ್ರಶೇಖರ್ ಈಗಾಗಲೆ ಗಮನ ಸೆಳೆಯುವಂತಹ ಹಲವು ಪ್ರಯೋಗಳನ್ನು ರಾಜ್ಯಾದ್ಯಂತ ಪ್ರದರ್ಶಿಸಿದ್ದಾರೆ.

ಇದೀಗ ಕಳೆದ ಒಂದು ವರ್ಷದಿಂದ ಇಂತಹ ಪ್ರಯೋಗಗಳಲ್ಲಿ ತೊಡಗಿಸಿಕೊಂಡಿರುವ ಮೈಸೂರು ರಂಗಾಯಣದ ಕಲಾವಿದೆ ಶಶಿಕಲಾ ತಮ್ಮ ಪ್ರಬುದ್ಧ ಅಭಿನಯದ ಮೂಲಕ ಗಮನ ಸೆಳೆಯುತ್ತಿದ್ದಾರೆ. ಯಾವುದೇ ಒಂದು ಪ್ರಯೋಗಕ್ಕೆ ಕಲಾವಿದನ ಅಥವಾ ಕಲಾವಿದೆಯ ಅಭಿನಯ ಎಷ್ಟು ಮುಖ್ಯವೊ, ಗಟ್ಟಿಯಾದ ಕಥೆಯ ಹಂದರ ಮತ್ತು ಸಂಭಾಷಣೆ ಕೂಡ ಅಷ್ಟೇ ಮುಖ್ಯವಾದವು. ಈ ನಿಟ್ಟಿನಲ್ಲಿ ಕಸ್ತೂರ ಬಾ ಯಶಸ್ವಿ ಪ್ರಯೋಗ ಎಂದು ಹೇಳಬಹುದು.
ಈ ಏಕ ವ್ಯಕ್ತಿ ಪ್ರದರ್ಶನದ ಪ್ರಯೋಗಕ್ಕೆ ಕಥೆ ಮತ್ತು ಸಂಭಾಷಣೆ ಬರೆದಿರುವ ಮೈಸೂರು ರಂಗಾಯಣದ ಎಸ್. ರಾಮನಾಥ್ ತಾನೋರ್ವ ಕಲಾವಿದ ಮಾತ್ರವಲ್ಲ, ಅತ್ಯುತ್ತಮ ಬರಹಗಾರ ಎಂಬುದನ್ನು ಈ ನಾಟಕದಲ್ಲಿ ಸಾಬೀತು ಪಡಿಸಿದ್ದಾರೆ. ಮೈಸೂರು ರಂಗಾಯಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ರಾಮನಾಥ್ ಎಂ.ಎಸ್ಸಿ. ಪದವಿಧರರಾಗಿದ್ದು ರಂಗ ಶಿಕ್ಷಣ ಕುರಿತಂತೆ ಇಂಗ್ಲೀಷ್ ಮತ್ತು ಕನ್ನಡ ಭಾಷೆಯಲ್ಲಿ ಕೃತಿಯನ್ನೂ ಸಹ ರಚಿಸಿದ್ದಾರೆ.

ಮಹಾತ್ಮ ಗಾಂಧಿಜಿಯವರನ್ನು ಬಲ್ಲವರಿಗೆ ಅಥವಾ ಓದಿಕೊಂಡವರಿಗೆ ಅವರ ಖಾಸಾಗಿ ಬದುಕಿನ ಬವಣೆಗಳಾಗಲಿ, ದುರಂತಗಳಾಗಲಿ ಅಪರಿಚಿತವಾಗಿ ಉಳಿದಿಲ್ಲ. ಏಕೆಂದರೆ, ಸ್ವತಃ ಗಾಂಧೀಜಿಯವರೆ ಜಗತ್ತನ್ನು ಬೆಚ್ಚಿ ಬೀಳಿಸುವಂತೆ ತಮ್ಮ ಖಾಸಾಗಿ ಬದುಕಿನ ವಿವರಗಳನ್ನು, ದೌರ್ಬಲ್ಯಗಳನ್ನು ತಮ್ಮ ಆತ್ಮ ಚರಿತ್ರೆಯಲ್ಲಿ ಸವಿವರವಾಗಿ ದಾಖಲಿಸಿದ್ದಾರೆ. ಈ ಕಾರಣಕ್ಕಾಗಿ ಅವರ ಆತ್ಮ ಕಥನ ಅತ್ಯಂತ ಪಾರದರ್ಶಕವಾದ ಆತ್ಮಕಥೆ ಎಂದು ಹೆಸರುವಾಸಿಯಾಗಿ ಜಗತ್ತಿನ ಹಲವಾರು ಭಾಷೆಗಳಿಗೆ ಅನುವಾದಗೊಂಡು ಇಂದಿಗೂ ಸಹ ಅತ್ಯಂತ ಹೆಚ್ಚು ಮಾರಾಟವಾಗುವ ಕೃತಿಗಳಲ್ಲಿ ಒಂದಾಗಿದೆ. ಗಾಂಧೀಜಿಯವರ ಬದುಕಿನ ದುರಂತ ಮತ್ತು ವ್ಯಂಗ್ಯವೆಂದರೆ, ನಾವೆಲ್ಲಾ ಅವರನ್ನು ‘ರಾಷ್ಟ್ರಪಿತ ಎಂದು ಕರೆದೆವು. ವಾಸ್ತವವಾಗಿ ಅವರು ತಮ್ಮ ಮಕ್ಕಳಿಗೆ ಒಳ್ಳೆಯ ತಂದೆಯಾಗಲು ಸಾಧ್ಯವಾಗಲೇ ಇಲ್ಲ. ತನ್ನ ಪತ್ನಿ ಕಸ್ತೂರ ಬಾ ಅವರ ಬೇಕು ಬೇಡಗಳಿಗೆ ಕಿವಿಗೊಟ್ಟು ಒಳ್ಳೆಯ ಪತಿಯಾಗಲಿಲ್ಲ. ಗಾಂಧೀಜಿಯವರ ಸ್ವಾತಂತ್ರ್ಯ ಹೊರಾಟ ಮತ್ತು ಅವರ ಕುಟುಂಬದ ಖಾಸಾಗಿ ಬದುಕಿನ ನೋವು ಹಾಗೂ ದುರಂತಗಳನ್ನು, ರೂಪಕದ ಭಾಷೆಯಲ್ಲಿ ವರ್ಣಿಸುವುದಾದರೆ, ‘ವ್ಯಕ್ತಿಯೊಬ್ಬ ತನ್ನ ತನ್ನ ಗುಡಿಸಲಿಗೆ ಬೆಂಕಿ ಹಚ್ಚಿ ಊರಿಗೆ ಬೆಳಕಾಗುವ ಪರಿ ಎಂದು ಬಣ್ಣಿಸಬಹುದು.
ಹದಿನೈದು ವರ್ಷಗಳ ಹಿಂದೆ ಮರಾಠಿ ರಂಗಭೂಮಿಯಲ್ಲಿ ಯಶಸ್ವಿಯಾದ ಗಾಂಧಿ ವಿರುದ್ಧ ಗಾಂಧಿ ಎಂಬ ನಾಟಕವನ್ನು ಬೆಳಗಾವಿಯ ಗೆಳೆಯ ಡಿ.ಎಸ್.ಚೌಗುಲೆ ಕನ್ನಡಕ್ಕೆ ತಂದಿದ್ದರು. ಈ ನಾಟಕ ರಾಜ್ಯಾದ್ಯಂತ ನೂರಾರು ಪ್ರಯೋಗಗಳನ್ನು ಕಂಡು ಅತ್ಯಂತ ಯಶಸ್ವಿ ನಾಟಕಗಳಲ್ಲಿ ಒಂದಾಗಿದೆ. ಈ ನಾಟಕದಲ್ಲಿ ಗಾಂಧೀಜಿ ಮತ್ತು ಅವರ ಹಿರಿಯ ಪುತ್ರ ಹರಿಲಾಲ್ ಗಾಂಧಿ ನಡುವಿನ ಸಂಘರ್ಷದ ಚಿತ್ರಣವಿದೆ.
ಕನ್ನಡದಲ್ಲಿ ರಚಿತವಾಗಿರುವ ಕಸ್ತೂರಬಾ ನಾಟಕದಲ್ಲಿ ಹರೆಯಕ್ಕೆ ಕಾಲಿಡುವ ಮುನ್ನವೇ ಗಾಂಧೀಜಿಯವರ ಪತ್ನಿಯಾಗಿ, ಅವರ ಮಕ್ಕಳಿಗೆ ತಾಯಿಯಾಗಿ ಕಸ್ತೂರಬಾ ಅನುಭವಿಸಿದ ದುಃಖ ದುಮ್ಮಾನಗಳಿವೆ. ಒಂದೆಡೆ ನಾಟಕದಲ್ಲಿ ಕಸ್ತೂರಬಾ ಹೇಳುವ ನಾನು ಮಹಾತ್ಮನಿಗೆ ಪತ್ನಿಯಾಗಿದ್ದೆ, ಮೋಹನ ಕರಮಚಂದ ಗಾಂಧಿಗೆ ಪತ್ನಿಯಾಗಲು ಸಾಧ್ಯವಾಗಲೇ ಇಲ್ಲ ಎನ್ನುವಂತಹ ಮಾತುಗಳು ಅರ್ಥಗರ್ಭಿತವಾಗಿದ್ದು, ಈ ಮಾತುಗಳು ಇಡೀ ಕಸ್ತೂರಬಾ ಬದುಕಿನ ಪ್ರತಿಬಿಂಬಗಳಂತೆ ಗೋಚರವಾಗುತ್ತವೆ. ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಹಿಂತಿರುಗುವ ವೇಳೆ ಅಲ್ಲಿನ ಜನತೆ ಪ್ರೀತಿಯಿಂದ ಕೊಟ್ಟ ಹಣ, ಚಿನ್ನ, ಉಡುಗೊರೆ ಇತ್ಯಾದಿಗಳನ್ನು ಮಕ್ಕಳ ಭವಿಷ್ಯದ ದೃಷ್ಟಿಯಲ್ಲಿ ತಮ್ಮ ಕುಟುಂಬಕ್ಕೆ ಇಟ್ಟುಕೊಳ್ಳುವುದಕ್ಕೆ ಬದಲಾಗಿ ಅಲ್ಲಿನ ಟ್ರಸ್ಟ್ ದಾನ ಮಾಡುವ ಗಾಂಧೀಜಿಯವರ ನಿಧರ್ಾರ ಮತ್ತು ದಕ್ಷಿಣ ಆಫ್ರಿಕಾದಲ್ಲಿ ವಿದ್ಯಾಭ್ಯಾಸ ಮುಂದುವರಿಸುವ ಕುರಿತು ಗಾಂಧಿ ಮತ್ತು ಹರಿಲಾಲ್ ನಡುವೆ ಉಧ್ಬವಿಸುವ ಭಿನ್ನಾಭಿಪ್ರಾಯ ಎಲ್ಲವೂ ನಾಟಕದಲ್ಲಿ ಪರಿಣಾಮಕಾರಿಯಾಗಿ ಮೂಡಿ ಬಂದಿವೆ. ಶಶಿಕಲಾ ಅವರು ಕಸ್ತೂರಬಾ ಅವರ ನೋವು ಸಂಕಟಗಳನ್ನು ತಮ್ಮ ಎದೆಯೊಳಕ್ಕೆ ಇಳಿಸಿಕೊಂಡು ಕಸ್ತೂರಬಾ ಪಾತ್ರದಲ್ಲಿ ಅಭಿನಯಿಸುವುದರ ಬದಲು ಸ್ವತಃ ಅನುಭವಿಸಿದ್ದಾರೆ. ಹಾಗಾಗಿ ಪ್ರತಿಯೊಂದು ಮಾತು, ದೃಶ್ಯ ಹಾಗೂ ಘಟನಾವಳಿಗಳ ಮೆಲುಕು ಇವೆಲ್ಲವೂ ನೆನಪಿನಲ್ಲಿ ಉಳಿಯುತ್ತವೆ.
ಕೊನೆಯ ಭಾಗದಲ್ಲಿ ಕಸ್ತೂರಬಾ 1942 ರಲ್ಲಿ ಗಾಂಧೀಜಿಯವರ ಜೊತೆ ಬಂಧನಕ್ಕೊಳಗಾಗಿ ಪುಣೆಯ ಆಗಾಖಾನ್ ಅರಮನೆಯಲ್ಲಿ ಬಂಧನದಲ್ಲಿದ್ದಾಗ, ತಾವು ಸಾಯುವ ಕೆಲವೇ ದಿನಗಳ ಮುಂಚೆ ಮನೆ ಬಿಟ್ಟು ಹೋಗಿದ್ದ ತಮ್ಮ ಹಿರಿಯ ಮಗ ಹರಿಲಾಲ್ ನನ್ನು ನೊಡುವ ಆಸೆಯಾಗಿ ಪೊಲೀಸರಲ್ಲಿ ವಿನಂತಿಸಿಕೊಳ್ಳುತ್ತಾರೆ. ಆ ಘಟನೆಯನ್ನು ಕಸ್ತೂರ ಬಾ ವಿವರಿಸುವುದು ಹೀಗೆ ಅಂದು ಆಗ ಖಾನ್ ಅರಮನೆಯ ಮುಂದೆ ಸಾವಿರಾರು ಜನ ನೆರೆದು ಮಹಾತ್ಮ ಗಾಂಧೀಜಿಕಿ ಜೈ ಎಂದು ಘೋಷಣೆ ಕೂಗುತ್ತಿದ್ದರು. ಈ ಘೋಷಣೆಗಳ ನಡುವೆ ಗಟ್ಟಿಯಾದ ದ್ವನಿಯಲ್ಲಿ ‘ ಮಾತಾ ಕಸ್ತೂರ ಬಾ ಕಿ ಜೈ ಎಂಬ ಘೋಷಣೆ ಕೂಗುತ್ತಾ , ಮಾಸಿದ ಉಡುಪು, ಕೆದರಿದ ತಲೆಗೂದಲಿನ ವ್ಯಕ್ತಿಯೊಬ್ಬ ನನ್ನ ಹತ್ತಿರ ಬಂದ. ಅವನು ನನ್ನ ಮಗ ಹರಿಲಾಲನಾಗಿದ್ದ, ಅವನ ಬಾಯಿಂದ ಮದ್ಯದ ವಾಸನೆ ಬರುತ್ತಿತ್ತು. ಅವನನ್ನು ನೋಡುವ ಆಸೆಯಾಗಿ ಕರೆತರುವಂತೆ ನಾನೇ ಪೊಲೀಸರಿಗೆ ತಿಳಿಸಿದ್ದೆ. ಹತ್ತಿರ ಬಂದ ಹರಿಲಾಲ್, ನನ್ನ ಪಕ್ಕ ಇದ್ದ ತನ್ನ ತಂದೆ ಬಾಪುವಿನತ್ತ ತಿರುಗಿಯೂ ನೋಡಲಿಲ್ಲ. ಬಾಪು ತಲೆ ತಗ್ಗಿಸಿಕುಳಿತ್ತಿದ್ದರು. ಪೊಲಿಸರು ಮತ್ತೇ ಅವನ ತೋಳು ಹಿಡಿದು ಕರೆದೊಯ್ಯುವಾಗ ನನ್ನತ್ತ ತಿರುಗಿ ನೋಡುತ್ತಾ ಮಾತಾ ಕಸ್ತೂರ ಬಾ ಕಿ ಜೈ’ ಎಂದು ಗಟ್ಟಿಯಾಗಿ ಘೋಷಣೆ ಕೂಗುತ್ತಾ ಜನ ಜಂಗುಳಿಯಲ್ಲಿ ಮರೆಯಾದ. ಅವನ ಘೊಷಣೆಯ ದನಿಯಲ್ಲಿ ಬಾಪು ವಿರುದ್ಧ ಸಿಟ್ಟು, ಆಕ್ರೋಶ ಎಲ್ಲವೂ ಪ್ರತಿಧ್ವನಿಸುತ್ತಿದ್ದವು
ಈ ಸಂಭಾಷಣೆಯನ್ನು ಕಸ್ತೂರ ಬಾ ಪಾತ್ರಧಾರಿಯಾಗಿ ನೆಲದ ಮೇಲಿನ ಹಾಸಿಗೆಯಲ್ಲಿ ಅಂಗಾತ ಮಲಗಿ ಶಶಿಕಲಾ ಅವರು ಕರುಳು ಬಗೆದಂತೆ ಸಂಭಾಷಣೆಯನ್ನು ಒಪ್ಪಿಸುತ್ತಿದ್ದಾಗ ಪ್ರೇಕ್ಷಕರ ಕಣ್ಣುಗಳು ಹನಿಗೂಡಿದ್ದವು.
ವರ್ತಮಾನದ ಜಗತ್ತಿನಲ್ಲಿ ಭಾರತದ ಬಹುತೇಕ ನಾಯಕರು ಒಂದೊಂದು ಸಮುದಾಯದ ಭಾಗವಾಗಿ ಪ್ರತಿಮೆ ರೂಪದಲ್ಲಿ ಬಂಧಿಯಾಗಿರುವಾಗ, ಅವರ ಬದುಕಿನ ಕುರಿತಾಗಲಿ, ಅವರ ವಿಚಾರ ಧಾರೆಗಳ ಕುರಿತಾಗಲಿ ಮರು ವಿಮರ್ಶೆ, ಸಾಧ್ಯವಾಗದ ಸ್ಥಿತಿ ಸೃಷ್ಟಿಯಾಗಿದೆ. ಗಾಂಧೀಜಿಯೊಬ್ಬರು ಮಾತ್ರ ಆಯಾ ಕಾಲಘಟ್ಟಕ್ಕೆ ತಕ್ಕಮತೆ ವಿಮರ್ಶೆ ಯ ಒರೆಗಲ್ಲಿಗೆ ಸಿಲುಕಿ ನಮಗೆ ಮತ್ತಷ್ಟು ಸ್ಪೃಷ್ಟವಾಗುತ್ತಿದ್ದಾರೆ ಜೊತೆಗೆ ಹತ್ತಿರವಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಗಾಂಧಿ ವಿರುದ್ಧ ಗಾಂಧಿ ಮತ್ತು ಕಸ್ತೂರ ಬಾ ನಾಟಕಗಳು ನಮಗೆ ಪೂರಕವಾಗಿವೆ. ಈ ಕಾರಣಕ್ಕಾಗಿ ಕಸ್ತೂರ ಬಾ ನಾಟಕ ರಚಿಸಿದ ಎಸ್.ರಾಮನಾಥ್, ನಿರ್ದೇಶನ ಮಾಡಿದ ಶಶಿಧರ್ ಭಾರಿಘಾಟ್ ಮತ್ತು ಅಭಿನಯಿಸಿದ ಕಲಾವಿದೆ ಶಶಿಕಲಾ ಇವರು ನಿಜಕ್ಕೂ ಅಭಿನಂದಾರ್ಹರು.

‍ಲೇಖಕರು G

9 August, 2014

ನಿಮಗೆ ಇವೂ ಇಷ್ಟವಾಗಬಹುದು…

7 Comments

  1. Prabhakar M. Nimbargi

    ಗಾಂಧೀಜಿಯವರ ಸ್ವಾತಂತ್ರ್ಯ ಹೊರಾಟ ಮತ್ತು ಅವರ ಕುಟುಂಬದ ಖಾಸಾಗಿ ಬದುಕಿನ ನೋವು ಹಾಗೂ ದುರಂತಗಳನ್ನು, ರೂಪಕದ ಭಾಷೆಯಲ್ಲಿ ವರ್ಣಿಸುವುದಾದರೆ, ‘ವ್ಯಕ್ತಿಯೊಬ್ಬ ತನ್ನ ತನ್ನ ಗುಡಿಸಲಿಗೆ ಬೆಂಕಿ ಹಚ್ಚಿ ಊರಿಗೆ ಬೆಳಕಾಗುವ ಪರಿ ಎಂದು ಬಣ್ಣಿಸಬಹುದು. This is true of the Mahatma Gandhi. It was Kasturba who had to silently suffer the whims & fancies of her husband. Probably she has been the least understood part of Gandhi’s life. She was the first experimental animal in his career. She needs to be explore exhaustively.

  2. Anonymous

    ಅನುಪಮಾ ಪ್ರಸಾದ್.
    ಇದೇ ಏಕವ್ಯಕ್ತಿ ಪ್ರದರ್ಶನ ಎರಡು ವರ್ಷದ ಹಿಂದೆ ಮಂಗಳೂರಿನ ಕೊಣಾಜೆಯಲ್ಲಿ (ಯುನಿವರ್ಸಿಟಿ)ನಡೆದಿತ್ತು. ನಿಮ್ಮ ಲೇಖನ ಓದುತ್ತಿದ್ದಂತೆ ಕಸ್ತೂರ್ಬಾ ಅಂತರಂಗದ ನೋವುಗಳನ್ನು ಶಶಿಕಲಾ ಸಮರ್ಥವಾಗಿ ಅಭಿವ್ಯಕ್ತಿಸಿದ ಚಿತ್ರಣ ಕಣ್ಣಿಗೆ ಕಟ್ಟಿ ಗಂಟಲುಬ್ಬಿತು. ಇಲ್ಲಿ ಶಶಿಕಲಾ ಕಸ್ತೂರ್ಬಾಳೇ ಆದ ಪರಿ ನೋಡುಗರನ್ನು ಕಸ್ತೂರ್ಬಾರ ಅಂತರಂಗದ ಮೌನ ಸಂಕಟಗಳನ್ನು ತಾವೇ ಅನುಭವಿಸುವಂತೆ ಮಾಡಿತ್ತು. ಈ ಪ್ರದರ್ಶನ ನೋಡಿದ ಮೆಲೆ ಕೆಲವರಿಗಾದರೂ ಕಸ್ತೂರ್ಬಾ ದಿನವೂ ಹೃದಯ ಕಲಕುವ ಜೀವವಾಗುತ್ತಾಳೆ.

  3. ನಾಗೇಂದ್ರ ಶಾ

    ಹೌದು ತುಂಬಾ ಇಷ್ಟವಾದ ನಾಟಕ. ನಾನು ಮೂರು ಬಾರಿ ನೋಡಿದೆ.

    • jagadishkoppa@gmail.com

      ನಾಗೇಂದ್ರ ಶಾ ನಮಸ್ಕಾರ. ಆದಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ವಚನ ಗಾಯನ ಕಾರ್ಯಕ್ರಮದಲ್ಲಿ ನಿಮ್ಮನ್ನು ನಿಮ್ಮ ಶಿಷ್ಯ (ರವಿಕಿರಣ್?) ವೇದಿಕೆಗೆ ಕರೆದು ಗೌರವಿಸಿದಾಗ ನಾನೂ ಕೂಡ ಇದ್ದೆ..

  4. asha

    gandhi hagu kasturaba higiddudarindale avaru mahatmragiddare avaru ella samanyarante eddiddare namagelli dakkuttiddaru e mahan vyaktigalu

  5. asha

    mundina pradarshna ellide anta sadhyavadre tilisi please

    • jagadishkoppa@gmail.com

      ಆಶಾ ಮೇಡಂ, ಇದು ಶಶಿಕಲಾ ಅವರ ಮೊಬೈಲ್ ನಂಬರ್-9448253490. ಒಮ್ಮೆ ಅವರನ್ನು ಸಂಪರ್ಕಿಸಿ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading