
ಗುಂಡಣ್ಣ ಚಿಕ್ಕಮಗಳೂರು
ಚಿತ್ರಗಳು: ಫೋಕಸ್
‘ನಾಟಕ ಬೆಂಗ್ಳೂರ್ -12’ ಕ್ಕೆ ‘ಸಂಚಾರಿ’ ರಂಗ ತಂಡವು ಹೆಚ್. ನಾಗವೇಣಿ ಅವರ ಒಂದು ಸಣ್ಣ ಕತೆ ಆಧಾರಿತ ನಾಟಕ ‘ಒಡವೆ’ ಯನ್ನು ಪ್ರಸ್ತುತಪಡಿಸಿತು.
ಈ ನಾಟಕದ ನಿರ್ದೇಶನದ ಮುಖಾಂತರ, ಬೆಂಗಳೂರು ಮತ್ತು ರಾಜ್ಯದ ಮಹಿಳಾ ನಿರ್ದೇಶಕಿಯರ ಪಟ್ಟಿಗೆ ಮತ್ತೊಂದು ಸಶಕ್ತ ಹೆಸರು ಸೇರ್ಪಡೆಯಾಗಿದೆ… ನಿಶಾ ಯಶ್ ರಾಮ್.
ನಿಶಾ ರಾಮ್ ಅವರು ಇದುವರೆವಿಗೂ ಸಂಚಾರಿ ರಂಗ ತಂಡದ ಒಟ್ಟಿಗೆ ಗುರುತಿಸಿಕೊಂಡು ನಟನೆ ಮತ್ತು ನೇಪಥ್ಯದ ಎಲ್ಲಾ ಪ್ರಕಾರಗಳಲ್ಲೂ ಕೆಲಸ ಮಾಡಿರುವ ಅನುಭವಿ ರಂಗಕರ್ಮಿ.
ನೇರವಾಗಿ, ವಿಧ್ಯುಕ್ತವಾಗಿ ಅವರು ಈ ನಾಟಕದಿಂದ ನಿರ್ದೇಶಕಿ ಪಟ್ಟಕ್ಕೆ ಏರಿದ್ದಾರೆ
ಪ್ರಥಮ ಪ್ರಯತ್ನದಲ್ಲೇ ಒಂದು ಉತ್ತಮ ಪ್ರಬಲ ಸ್ತ್ರೀ ಧ್ವನಿಯ ಕಥೆಯನ್ನು ನಾಟಕದ ಪ್ರಯೋಗಕ್ಕೆ ಆಯ್ಕೆ ಮಾಡಿಕೊಂಡ ನಿಶಾ ರಾಮ್ ಅವರಿಗೆ ಗೌರವಯುತ ಅಭಿನಂದನೆಗಳು ಸಲ್ಲಬೇಕು.
ಪ್ರಯೋಗವನ್ನು ಲವಲವಿಕೆಯಿಂದಲೂ, ಸಂದರ್ಭದ ಅವಶ್ಯಕತೆಗೆ ತೀಕ್ಷ್ಣವಾಗಿಯೂ ಇರುವ ಹಾಗೆ ಪ್ರಸ್ತುತಪಡಿಸುವುದು ಸವಾಲಿನ ಕಾರ್ಯವೇ ಹೌದು. ಅದನ್ನು ಸಮರ್ಥ ವಾಗಿ ನಿಭಾಯಿಸಿದ್ದಾರೆ.
ರಂಗ ಸಜ್ಜಿಕೆಯಲ್ಲಿ ಮತ್ತು ಬೆಳಕಿನ ವಿನ್ಯಾಸದಲ್ಲಿ, ಅನುಭವಿ ನಟ ಮತ್ತು ಚಿತ್ರ ನಿರ್ದೇಶಕ ಅರವಿಂದ್ ಕುಪ್ಲಿಕರ್ ಅವರ ಕ್ರಿಯಾಶೀಲ ನೆರವು ನಿರ್ದೇಶಕಿಗೆ ದೊರಕಿದೆ. ಸಂಗೀತದಲ್ಲಿ ರಂಗಭೂಮಿಯ ಬಿಡುವಿಲ್ಲದ ಮತ್ತು ಜನಪ್ರಿಯ ನಿರ್ದೇಶಕ ಗಜಾನನ ನಾಯ್ಕರ ಸಾಥ್ ದೊರಕಿದೆ.

ನಾಗವೇಣಿಯವರ ಕಥೆ ಒಡವೆ ಗಂಭೀರ ಚಿಂತನೆಗೆ ಹಚ್ಚುವ ಕಥೆ. ಹೆಣ್ಣಿನ ಭೌತಿಕ (materialistic) ಒಡವೆ ಮತ್ತು ದೈಹಿಕ ( physical) ಒಡವೆ ಇವೆರಡರ ನಡವೆ ತಾತ್ವಿಕ ವಾದವನ್ನು ಹುಟ್ಟುಹಾಕಿ, ದೈಹಿಕ ಬೆಳವಣಿಗೆಯ ಕೀಳರಿಮೆಯನ್ನು ಮೆಟ್ಟಿ ನಿಲ್ಲುವುದು ಹೆಣ್ಣಿಗೆ ಸಾಧ್ಯ ಎಂದು ಮತ್ತು ಅದೇ ಸಂದರ್ಭದಲ್ಲಿ ಸ್ವಾರ್ಥ ಗಂಡು;, ತನ್ನ ದೈಹಿಕ ವೈಪಲತ್ಯೆಗಳನ್ನು ಬಚ್ಚಿಟ್ಟುಕೊಂಡು , ಹೆಣ್ಣನ್ನು ಸ್ವಂತ ಆಸ್ತಿಯೆಂದು ಭಾವಿಸುವ ಗಂಡು; ಅವಳ ಬಂಡವಾಳದಿಂದ ಬೆಳೆಯುವ ಕುಬ್ಜ ಮನಸ್ಸಿನವನು ಎಂದು ಪ್ರತಿಬಿಂಬಿಸುವ ಒಂದು ಸಣ್ಣ ಕಥೆ.
ಕ್ರೂರ ಸಮಾಜ, ಇಂದಿಗೂ ಸಹ, ಹೆಣ್ಣಿನ ಅಪಕ್ವ ಬೆಳವಣಿಗೆಯನ್ನು ಹೆಚ್ಚು ಕಂಡುಕೊಳ್ಳುತ್ತದೆಯೆ ಹೊರತು, ಗಂಡಿನ ಅಸಮತೋಲನದ, ಅಪಕ್ವ ಬೆಳವಣಿಗೆಯನ್ನಲ್ಲ. ಅದು ಸಮಾಜದ ಕಣ್ಣುಗಳಿಗೆ ಅಗೋಚರವಾಗಿಯೇ ಉಳಿಯುತ್ತದೆ. ಗಂಡಿನ ವಿಚಾರದಲ್ಲಿ, ಮದುವೆಯ ಸಂದರ್ಭಗಳಲ್ಲಿ ಎಲ್ಲವನ್ನೂ ಬಚ್ಚಿಟ್ಟು ಪೂರೈಸುವ ಈ “ಆರೋಗ್ಯವಂತ” ಸಮಾಜ, ಹೆಣ್ಣಿನ ವಿಚಾರದಲ್ಲಿ, ಅಷ್ಟೇ ಮುಕ್ತವಾಗಿರುವುದಿಲ್ಲ.
ಈ ತುಲನಾತ್ಮಕ ವಿಷ್ಲೇಷಣೆಗಳು ಈ ಒಂದು ಚಿಕ್ಕ ಕಥೆಯಲ್ಲಿ ಸ್ಪಷ್ಟವಾಗಿ ಅಡಕವಾಗಿರುವುದು ಸಂತೋಷದ ಸಂಗತಿ.
ಸ್ವಾತಂತ್ರ್ಯ ಹೋರಾಟಕ್ಕೆ, ಗಾಂಧಿ ಕರೆಯ ಮೇರೆಗೆ, ಚಿನ್ನದ ಒಡವೆಗಳನ್ನು ದಾನ ಮಾಡಲು ಮುಂದೆ ಹೋಗುವ ಕಥಾ/ನಾಟಕದ ನಾಯಕ ಮಾರಪ್ಪ, ತನ್ನ ಹೆಂಡತಿ ದಾರುವಿನ ಒಡವೆಗಳನ್ನು ಬಲವಂತವಾಗಿ ಪಡೆದು, ದೇಶಕ್ಕಾಗಿ ದಾನ ಮಾಡಿ, ಗಾಂಧಿ ಚಳುವಳಿಯಲ್ಲಿ ತಾನು ಪ್ರಬಲವಾಗಿ ಗುರುತಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ಆದರೆ ಆ ಒಡವೆಗಳ ಮೇಲೆ, ಇವನಿಗೆ ಯಾವ ಹಕ್ಕೂ ಇಲ್ಲ, ಯಾಕೆಂದರೆ ಅದು ಅವಳ ತವರು ಮನೆಯ ಬಳುವಳಿ. ತಾನು ಬಯಸಿದ ಭೌತಿಕ ಒಡವೆಗಳು ಸಿಗದಿದ್ದಾಗ, ಅತೃಪ್ತಿ ಯನ್ನು ಹೊರಹಾಕಲು, ಇಡೀ ಪಟ್ಟಣಕ್ಕೇ ಗೊತ್ತಿರುವ, ಗೊತ್ತಿದ್ದೂ ಮದುವೆಯಾಗಿರುವ ಅವಳಿಗೆ ಇಲ್ಲದ “ದೈಹಿಕ ಒಡವೆ” ಯ ಬಗ್ಗೆ ಚುಚ್ಚಿ ಮಾತಾಡಿ, ಘಾಸಿಗೊಳಿಸುತ್ತಾನೆ.

ಆದರೆ, ಪುಟಿದು ನಿಲ್ಲುವ ದಾರು, ತನ್ನೆಲ್ಲ ಚಿನ್ನದ ಒಡವೆಗಳನ್ನೂ ದಾನ ಮಾಡಿ, ಅವನ ದೈಹಿಕ ಅಸಮರ್ಪಕ, ಅಪಕ್ವ ಬೆಳವಣಿಗೆಯ ಬಗ್ಗೆಯೂ ಮಾಹಿತಿ ನೀಡಿ, ಅವನು ಕಟ್ಟಿದ ಮಾಂಗಲ್ಯವನ್ನೂ ಕಿತ್ತೆಸೆದು, ಮದುವೆಯ ಬಂಧನದಿಂದ ಆಚೆ ಬರುತ್ತಾಳೆ. ಗಾಂಧೀ ಚಳುವಳಿಯಲ್ಲಿ ತೊಡಗಿಸಿಕೊಳ್ಳುತ್ತಾಳೆ. ಸ್ವಪ್ರೇರಣೆಯಿಂದ ತನ್ನ ತವರಿನ ಎಲ್ಲ ಒಡವೆಗಳನ್ನೂ ಸ್ವಾರ್ಥ, ಷಂಡ ಗಂಡನಿಗೆ ಕೊಟ್ಟು ಅವನಿಗಿಂತ ಶ್ರೇಷ್ಠ ಗಾಂಧಿ ಚಳುವಳಿಯ ಸೇವಕಿ ಎನ್ನಿಸಿಕೊಳ್ಳುತ್ತಾಳೆ.
ತನ್ನ ಮದುವೆ ಒಬ್ಬ ಗಾಂಧಿವಾದಿಯ ಜೊತೆಗೆ ಆದ ಮೇಲೆ, ಗಾಂಧಿಯ ಪರಿಚಯಕ್ಕೆ ಬರುವ ದಾರು, ಶತಮಾನಗಳಿಂದ ಗಾಂಧಿವಾದಿಯಾಗಿರುವ ಮಾರಪ್ಪನಿಗಿಂತ ಶ್ರೇಷ್ಠ ಎನ್ನಿಸಿಕೊಳ್ಳುತ್ತಾಳೆ.
ದಾರುವಿನ ಬಾಲ್ಯ ಮತ್ತು ಯೌವನದ ಪರಿಚಯವನ್ನು ವಿಭಿನ್ನವಾಗಿ, ಲವಲವಿಕೆಯ ಮಕ್ಕಳಾಟಗಳ ಕ್ರಿಯೆಗಳಿಂದ ಮಾಡಿಸುತ್ತಾರೆ, ನಿಶಾ ರಾಮ್. ನಂತರದಲ್ಲಿ, ಮಾರಪ್ಪ- ದಾರು ಬಿರುಕಿನ ಸಂದರ್ಭಗಳನ್ನೂ ಸಹ ಅವಶ್ಯವಾದ ಗಂಭೀರತೆಯಲ್ಲಿ ರಂಗದ ಮೇಲೆ ತಂದಿದ್ದಾರೆ. ನಾಟಕದ ಪ್ರಸ್ತುತಿಯಲ್ಲಿ ಈ ಕಪ್ಪು- ಬಿಳುಪಿನ ಸನ್ನಿವೇಶಗಳು ಸೊಗಸಾಗಿಯೂ, ತೀಕ್ಷ್ಣ ಸಂಭಾಷಣೆಗಳಿಂದಲೂ ಗಾಢ ಪರಿಣಾಮವನ್ನು ಮೂಡಿಸುತ್ತದೆ.
ತಂಡಕ್ಕಾಗಿ, ತನ್ನೆಲ್ಲಾ ಹಿರಿಮೆಗಳನ್ನು ಬಿಟ್ಟು, ಹೊಸ ನಿರ್ದೇಶಕರ ನಿರ್ದೇಶನದಲ್ಲಿ ಪಾತ್ರ ಮಾಡಿರುವ ಹಿರಿಯ, ಅನುಭವಸ್ಥ ನಟಿ ಎನ್. ಮಂಗಳಾ ಅವರನ್ನು ನಾವು ಮೆಚ್ಚಲೇ ಬೇಕು.
ರಂಗಕ್ಕೆ ತಮ್ಮ ಪ್ರವೇಶದಿಂದಲೇ, ಎಲ್ಲರನ್ನೂ ವಿಸ್ಮಯಗೊಳಿಸುವ ಅಭಿನಯದಿಂದ ಪ್ರಯೋಗಕ್ಕೆ ಜೀವ ತುಂಬಿದ್ದಾರೆ ಮಂಗಳಾ ಅವರು.

ನಾಟಕದ ಪ್ರಾರಂಭದ ದಾರುವಿನ ಪಾತ್ರ ಪರಿಚಯದ ದೃಶ್ಯಗಳು, ಮದುವೆ ಮನೆಯ ದೃಶ್ಯಗಳು, ಕೊನೇರಿ ವೈದ್ಯನ ಆವರಣ, ಮದುವೆ ಮಂಟಪದ ಸಜ್ಜಿಕೆ, ಮಾರಪ್ಪನ ತಾಯಿಯ ದ.ಕ. ಜನರ ಸಹಜ ಸಂಭಾಷಣೆಯಿಂದ ಉತ್ತಮ ಅಭಿನಯದ ಮಂಗಳ, ದಾರು ಪಾತ್ರದ ನಟಿಯ ಅವಶ್ಯ , ಗಂಭೀರ ನಟನೆ, ಹಿತವಾದ ಬೆಳಕು ವಿನ್ಯಾಸ ಇವು ನಾಟಕದ ವಿಶೇಷ….
ಸಂಗೀತ ಇನ್ನಷ್ಟು ಸಾಧ್ಯತೆಗಳನ್ನು ಕಂಡುಕೊಳ್ಳಬಹುದಿತ್ತೇನೋ. ಸಂಗೀತ ಹೆಚ್ಚು ಗಧ್ಯವಾಯಿತು; ಪಠ್ಯವಾಯಿತು. ಧ್ವನಿ ತುಸು ಅಬ್ಬರವಾಯಿತು.
ಒಂದು ಒಳ್ಳೆಯ ಸಾಮಾಜಿಕ ಚಿಂತನೆಯ, ಸಶಕ್ತ ಸ್ತ್ರೀ ವಾದದ ನಾಟಕದ ಪ್ರಸ್ತುತತೆಗೆ, ಸಂಚಾರಿ ತಂಡಕ್ಕೆ, ರುವಾರಿ ಮಂಗಳಾ ಅವರಿಗೆ, ನಾಟಕ ನಿರ್ದೇಶಕಿ ನಿಶಾ ರಾಮ್ ಅವರಿಗೆ ಅಭಿನಂದನೆಗಳು.
ಹೆಚ್ಚು ತಾಲೀಮು ಮತ್ತು ಪ್ರದರ್ಶನ ಗಳಿಂದ ನಾಟಕ ಇನ್ನಷ್ಟು ಗಟ್ಟಿಯಾಗುವ ಸಾಧ್ಯತೆಗಳಿವೆ.








ನಾಟಕವನ್ನು ನೋಡಬೇಕೆನಿಸಿತು.