ಅಹಲ್ಯಾ ಬಲ್ಲಾಳ್
ಇತ್ತೀಚೆಗೆ ನಮ್ಮ ಸುತ್ತಮುತ್ತ ಹಾಸಲುಂಟು ಹೊದೆಯಲುಂಟು ಎಂಬಷ್ಟು ದುಃಖ, ಸಾವು ನೋವುಗಳೇ. ಜೊತೆಗೆ ಅಷ್ಟೇ ಸಲೀಸು ಭಯ, ಕೋಪ, ಹತಾಶೆಗೆ ಸುಲಭವಾಗಿ ಜಾರಿಬಿಡಲು ಪ್ರಚೋದನೆಯೂ. ಇಂದಿನ ಈ ಸವಾಲುಗಳ ಸಮ್ಮುಖದಲ್ಲೇ ಮಾನವೀಯ ಕರುಣೆ ಎಂಬ ಧ್ರುವ ತಾರೆ ಅಲ್ಲೆಲ್ಲೋ ದೂರದಲ್ಲಿ ಮಿಣುಕುಮಿಣುಕೆನ್ನುತ್ತ ನಮ್ಮನ್ನು ಅದರತ್ತ ನೋಡುವಂತೆ ಒತ್ತಾಯಿಸುವುದು. ಲೇಖಕಿ ನೆಯೋಮಿ ಶಿಹಾಬ್ ನೈ ನಲವತ್ತು ವರ್ಷಗಳ ಹಿಂದೆ ಬರೆದ ‘Kindness’ ಕವನ ಇದನ್ನು ಸೂಚಿಸುತ್ತ ಇಂದಿಗೂ ನಮ್ಮೊಳಗನ್ನು ಮೃದುಗೊಳಿಸುತ್ತದೆ.
ಪ್ಯಾಲೆಸ್ಟೀನಿಯನ್ ತಂದೆ, ಅಮೇರಿಕನ್ ತಾಯಿಗೆ ಜನಿಸಿದ ನೆಯೋಮಿ ಶಿಹಾಬ್ ನೈ ಕವನ, ಹಾಡು, ಕಾದಂಬರಿಗಳನ್ನು ಬರೆದಿದ್ದಾಳೆ. ತನ್ನನ್ನು ‘ಅಲೆದಾಡುವ ಕವಿ’ ಎಂದೇ ಗುರುತಿಸಿಕೊಳ್ಳುತ್ತಾಳೆ. ಸಂಸ್ಕೃತಿಗಳ ನಡುವಿನ ಸಾಮ್ಯ ಮತ್ತು ವ್ಯತ್ಯಾಸಗಳನ್ನು ಶೋಧಿಸುವುದು ಅವಳ ನಿಡುಗಾಲದ ಆಸಕ್ತಿ.
ಅವಳ ಬಹುತೇಕ ಕವನಗಳು ನಿತ್ಯ ಜೀವನದ ಸಂಗತಿಗಳನ್ನು ಹೇಳುತ್ತವೆ ಮತ್ತು ಮಾನವೀಯತೆಯ ಭದ್ರ ಬುನಾದಿಯ ಮೇಲೆ ನಿಂತಿವೆ. ಅಮೇರಿಕಾದ ಪೊಯೆಟ್ರಿ ಫೌಂಡೇಶನ್ 2019-2021 ಅವಧಿಗಾಗಿ ನೆಯೋಮಿಯನ್ನು Young People’s Poet Laureate ಎಂದು ನೇಮಕ ಮಾಡಿದೆ. ಅವಳ ಜನಪ್ರಿಯ ಕವನ ‘Kindness’ ಮೊದಲು ಬೆಳಕು ಕಂಡದ್ದು 1980ರ ‘Different Ways To Pray’ ಎಂಬ ಹೆಸರಿನ ಪ್ರಥಮ ಸಂಕಲನದಲ್ಲಿ. ಈ ಕವನ ಹುಟ್ಟಿದ ಹಿನ್ನೆಲೆಯನ್ನು ಆಕೆ ಸಂದರ್ಶನವೊಂದರಲ್ಲಿ ಹೀಗೆ ಹೇಳಿಕೊಂಡಿದ್ದಾಳೆ:
ನನ್ನ ಎಲ್ಲ ಕವನಗಳಲ್ಲಿ ಈ ಕವನ ನನಗೆ ನಿಜವಾಗಿ ದತ್ತವಾಗಿತ್ತೆಂದೇ ಅನಿಸುತ್ತದೆ. ಅದರ ಕಾರ್ಯದರ್ಶಿಯಂತೆ ನಾನು ಅದನ್ನು ಬರೆದುಕೊಂಡೆ, ಅಷ್ಟೇ . ದಕ್ಷಿಣ ಅಮೇರಿಕಾದ ಕೊಲಂಬಿಯಾದ ವ್ಯಾಪಾರ ಮಳಿಗೆಯೊಂದರಲ್ಲಿ ಎಲ್ಲಿಂದಲೋ ತೇಲಿ ಬಂದ ಸ್ತ್ರೀ ಧ್ವನಿಯೊಂದು ಅದನ್ನು ನನಗೆ ಹೇಳಿತು ಎಂದು ಸತ್ಯವಾಗಿ ಅನಿಸ್ತದೆ. ನನ್ನ ಗಂಡ ಮತ್ತು ನಾನು ಮಧುಚಂದ್ರಕ್ಕೆ ಹೋಗಿದ್ದೆವು.
ಅಮೇರಿಕಾದ ಟೆಕ್ಸಸ್ ನಲ್ಲಿ ಒಂದು ವಾರದ ಹಿಂದೆಯಷ್ಟೇ ನಮ್ಮ ಮದುವೆಯಾಗಿತ್ತು. ಮೂರು ತಿಂಗಳು ದಕ್ಷಿಣ ಅಮೆರಿಕಾದಲ್ಲಿ ಸುತ್ತಾಡುವ ಯೋಜನೆ ಹಾಕಿಕೊಂಡಿದ್ದೆವು . ಮೊದಲ ವಾರದ ಕೊನೆಯಲ್ಲಿ ನಮ್ಮ ಬಳಿ ಇದ್ದ ಎಲ್ಲವೂ ಕಳ್ಳತನವಾಯಿತು. ಬಸ್ ನಲ್ಲಿ ನಮ್ಮ ಸಹಪ್ರಯಾಣಿಕರೊಬ್ಬರನ್ನು ಕೊಂದೇ ಹಾಕಿದರು; ಕವನದಲ್ಲಿ ಬರುವ ಬಿಳಿ ನಿಲುವಂಗಿಯ ಇಂಡಿಯನ್ ಅವರೇ.
ಅದೊಂದು ಧೃತಿಗೆಡಿಸುವ ಅನುಭವ. ಏನು ಮಾಡಬೇಕಿತ್ತು ನಾವು ಆಗ? ನಮ್ಮ ಬಳಿ ಪಾಸ್ಪೋರ್ಟ್ ಇಲ್ಲ, ಹಣ ಇಲ್ಲ, ಏನೂ ಉಳಿದಿರಲಿಲ್ಲ. ಅಷ್ಟರಲ್ಲಿ ರಸ್ತೆಯಲ್ಲಿ ಹೋಗುತ್ತಿದ್ದ ಒಬ್ಬ ನಮ್ಮ ಬಳಿ ಬಂದು ಸುಮ್ಮನೆ ಕರುಣೆಯಿಂದ ನಮ್ಮನ್ನು ನೋಡಿದ . ನಮ್ಮ ಮುಖದಲ್ಲಿದ್ದ ಆತಂಕ ನೋಡಿ ಸ್ಪಾನಿಶ್ ಭಾಷೆಯಲ್ಲಿ “ಏನಾಯ್ತು ನಿಮಗೆ?” ಎಂದ. ನಾವು ಹೇಳಲು ಪ್ರಯತ್ನಿಸಿದೆವು.
ನಮ್ಮ ಮಾತನ್ನು ಕೇಳಿಸಿಕೊಂಡ ಅವನ ಮುಖದಲ್ಲಿ ಇನ್ನಿಲ್ಲದ ಬೇಸರ ಕಾಣಿಸಿತು. “ಅಯ್ಯೋ ಹೀಗಾಗಿದ್ದು ತುಂಬಾ ದುಃಖಕರ ” ಎಂದು ಸ್ಪಾನಿಶ್ ನಲ್ಲಿ ಹೇಳಿದ ಮತ್ತು ತೆರಳಿದ. ಆಮೇಲೆ ನಾವು ಒಂದು ಪುಟ್ಟ ಪ್ಲಾಜಾಕ್ಕೆ ಹೋದೆವು. ನನ್ನ ಬಳಿ ಹಿಂದಿನ ಜೇಬಿನಲ್ಲಿ ಇದ್ದದ್ದು ಒಂದು ಪುಟ್ಟ ನೋಟ್ ಬುಕ್ ಮತ್ತು ಪೆನ್ ಮಾತ್ರ.
ನನ್ನ ಗಂಡ ಲಿಫ್ಟ್ ಪಡೆದು ಕ್ಯಾಲಿ ಎಂಬ ಊರಿಗೆ ಹೋಗಿ ಅಲ್ಲಿ ಟ್ರಾವೆಲರ್ಸ್ ಚೆಕ್ ವ್ಯವಸ್ಥೆ ಮಾಡಲು ಹೊರಟಿದ್ದ. ರಾತ್ರಿಯಾಗುತ್ತ ಬಂತು. ಮುಂದೇನು ಮಾಡಲಿ ಅನ್ನುವ ದಿಗಿಲಿನಿಂದ ನಾನು ಒಬ್ಬಳೇ ಕೂತಿದ್ದೆ. ಅಷ್ಟರಲ್ಲಿ ಒಂದು ಧ್ವನಿ ತೇಲಿ ಬಂದು ಈ ಕವನವನ್ನು ಉಸುರಿತು. ನಾನು ಅದನ್ನು ಬರೆದುಕೊಂಡೆ.
ಕರುಣೆ
ಕರುಣೆ ಎಂದರೇನು ನಿಜಕ್ಕೂ ತಿಳಿಯುವ ಮುನ್ನ
ನೀನು ವಸ್ತುಗಳನ್ನು ಕಳೆದುಕೊಳ್ಳಬೇಕು,
ತಿಳಿ ಗಂಜಿಯಲ್ಲಿ ಉಪ್ಪಿನ ಹಾಗೆ
ಕ್ಷಣದಲ್ಲಿ ಭವಿಷ್ಯ ಕರಗುವುದನ್ನು ಅನುಭವಿಸಬೇಕು.
ಕರುಣೆಯ ಪ್ರದೇಶಗಳ ನಡುವಿನ ಭೂವ್ಯಾಪ್ತಿ
ಎಷ್ಟು ನಿರ್ಜನವಾಗಬಹುದು ಎಂಬುದು ನಿನಗೆ ಮನದಟ್ಟಾಗಲು
ನಿನ್ನ ಬೊಗಸೆಯಲ್ಲಿ ಏನಿತ್ತೋ,
ಯಾವುದನ್ನು ನೀನು ಲೆಕ್ಕ ಮಾಡಿ ಎಚ್ಚರಿಕೆಯಿಂದ ಉಳಿಸಿದೆಯೋ
ಅದೆಲ್ಲವೂ ಹೋಗಲೇಬೇಕು.
ನೀ ಸವಾರಿ ಮಾಡುವ ಬಸ್ ನಿಲ್ಲುವುದೇ ಇಲ್ಲವೇನೋ
ಎನ್ನುವಂತೆ ನೀನು ಸಾಗುತ್ತಲೇ ಇರುತ್ತೀಯ,
ಜೋಳ ಮತ್ತು ಕೋಳಿಮರಿಯನ್ನು ತಿನ್ನುವ
ಪ್ರಯಾಣಿಕರು ಸದಾ ಹೊರಗೆ ನೋಡುತ್ತಲೇ ಇರುತ್ತಾರೆ.
ಕರುಣೆಯ ಕೋಮಲ ತೀವ್ರತೆಯನ್ನು ಅರಿಯುವ ಮುನ್ನ
ಬಿಳಿ ನಿಲುವಂಗಿಯ ಆ ಇಂಡಿಯನ್
ರಸ್ತೆ ಬದಿಯಲ್ಲಿ ಸತ್ತಿರುವಲ್ಲಿಗೆ ನೀನು ಹೋಗಿರಬೇಕು.
ಆತ ನೀನೇ ಆಗಿರಬಹುದು ಎಂಬುದನು ನೀನು ಕಾಣಬೇಕು;
ತನ್ನನ್ನು ಜೀವಂತವಾಗಿರಿಸಿದ ಸರಳ ಉಸಿರಿನೊಡನೆ
ಯೋಜನೆಗಳನ್ನು ಹಾಕುತ್ತಾ
ಆತನೂ ರಾತ್ರಿಯೆಲ್ಲ ಪಯಣಿಸಿದವನೇ.
ಜೀವದಾಳದಲ್ಲಿರುವ ವಸ್ತುವೇ ಕರುಣೆ ಎಂಬುದನ್ನರಿಯುವ ಮುನ್ನ ,
ಅದೇ ಆಳದಲ್ಲಿರುವ ದುಃಖ ಎಂಬ ಇನ್ನೊಂದನು ತಿಳಿಯಬೇಕು ನೀನು.
ದುಃಖದೊಂದಿಗೆ ನೀನು ಎದ್ದೇಳಬೇಕು.
ನಿನ್ನ ದನಿ ಎಲ್ಲ ದುಃಖಗಳ ಎಳೆಯನು ಹಿಡಿದು
ನಿನಗೆ ಬಟ್ಟೆಯ ಉದ್ದಗಲ ಕಾಣಿಸುವವರೆಗೆ
ದುಃಖದೊಂದಿಗೆ ಮಾತನಾಡಬೇಕು ನೀನು.
ಆಗಲೇ ಕರುಣೆಯೊಂದೇ ಅರ್ಥಪೂರ್ಣವೆನಿಸುವುದು.
ಕರುಣೆಯೊಂದೇ ನಿನಗೆ ಶೂಗಳನ್ನು ತೊಡಿಸಿ,
ಪತ್ರಗಳನ್ನು ಅಂಚೆಗೆ ಹಾಕು ಮತ್ತು ಬ್ರೆಡ್ಡು ತಾ ಎಂದು ನಿನ್ನನ್ನು ಕಳುಹಿಸುವುದು;
ಜಗದ ಸಂದಣಿಯಲ್ಲಿ ತಲೆಯೆತ್ತಿ,
‘ನೀನು ಹುಡುಕುತ್ತಿದ್ದದ್ದು ನನ್ನನ್ನೇ’ ಎನ್ನುತ್ತಾ
ನಿನ್ನೊಡನೆ ನೆರಳಿನಂತೆ ಅಥವಾ ಗೆಳೆಯನಂತೆ
ಎಲ್ಲೆಡೆ ಬರುವುದು
ಕರುಣೆಯೊಂದೇ.
ಅಹಲ್ಯಾ ಬಲ್ಲಾಳ್: ಮುಂಬೈ ನಿವಾಸಿಯಾದ ಅಹಲ್ಯಾ ಬಲ್ಲಾಳ್ ಅಕ್ಷರಗಳ ತಡಕಾಟದಲ್ಲಿರುವವರು.
ಕಾಡುವ ಕವನ, ನಾಟಕ, ಸಿನೆಮಾಗಳ ಬಗ್ಗೆ ಪ್ರೀತಿಯಿಂದ ಅಕ್ಷರ ಜೋಡಿಸುವವರು.
Thank you, Avadhi. Thank you , dear Sudha!