ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾಡಿತು ‘ಈಹೊತ್ತಿಗೆ’ಯ ಕಥಾ ಕಮ್ಮಟ

ಸಂತೋಷ ತಾಮ್ರಪರ್ಣಿ

—–

ಶಾಸನಬದ್ಧ ಎಚ್ಚರಿಕೆ: ಇದು ನನ್ನ ವೈಯಕ್ತಿಕ ಅಭಿಪ್ರಾಯವಷ್ಟೇ, ಇದೇ ಸತ್ಯವಾಗಿರಬೇಕಿಲ್ಲ.

– ಗಟ್ಟಿ ಕಥೆ, ಒಳ್ಳೆಯ ಕಥೆ ಯಾವುದು ಮತ್ತು ಅದನ್ನು ಬರೆಯುವುದು ಹೇಗೆ?

ಇದು ಅಲ್ಲಿ ಬಂದಿರುವ ಶಿಬಿರಾರ್ಥಿಗಳಿಗೆಲ್ಲ ಇರುವ ಪ್ರಶ್ನೆ ಮತ್ತು ಅದನ್ನು ಶಿಬಿರದಲ್ಲಿ ಪಡೆದುಕೊಳ್ಳಬಹುದೇ ಅನ್ನುವ ನಿರೀಕ್ಷೆ ಇದ್ದದ್ದು ಸುಳ್ಳಲ್ಲ. ಎಲ್ಲರಿಗೂ ಗೊತ್ತಿರುವಂತೆ ಕಥೆ ಬರೆಯುವುದನ್ನು ಕಮ್ಮಟದಲ್ಲಿ ಹೇಳಿ ಕೊಡಲು ಸಾಧ್ಯವಿಲ್ಲ. ಹಾಗೇನಾದರೂ ಸಾಧ್ಯವಿದ್ದಲ್ಲಿ ಸಾವಿರಾರು ಕಥೆಗಾರರು ಇವತ್ತು ನಮ್ಮಲ್ಲಿರುತ್ತಿದ್ದರು. ಇದನ್ನು ಬಹುಶಃ ಅಲ್ಲಿ ಬಂದಿರುವ ಶಿಬಿರಾರ್ಥಿಗಳೂ ಒಪ್ಪುತ್ತಾರೆಂದು ಭಾವಿಸುವೆ. ಆದಾಗ್ಯೂ, ಕಥೆ ಬರೆಯುವ ಕೆಲವು ಸಾಧ್ಯತೆಗಳನ್ನು ಖಂಡಿತ ಹೇಳಿಕೊಡಲು ಸಾಧ್ಯವಿದೆ. ಶೈಲಿ, ತಂತ್ರ, ಭಾಷೆ, ಕಥಾವಸ್ತು, ನಿರ್ವಹಣೆ, ಧಾಟಿ, ಕಥಾ ಶೀರ್ಷಿಕೆ ಮತ್ತು ಕಥೆಯ ಜೊತೆಗಿನ ಅದರ ಸಂಬಂಧ, ಇತ್ಯಾದಿ, ಇತ್ಯಾದಿ. ಕಮ್ಮಟದಲ್ಲಿ ಇವುಗಳನ್ನು ಚರ್ಚಿಸಲೇ ಇಲ್ಲವೆಂದಲ್ಲ. ಆದರೆ, ಇದರ ಬಗೆಗಿನ ಚರ್ಚೆ ಇನ್ನೂ ಹೆಚ್ಚು ಕಾಲ, ಪರಿಣಾಮಕಾರಿಯಾಗಿ ಗಹನವಾಗಿ ಮಾಡಬೇಕೆಂದು ಶಿಬಿರಾರ್ಥಿಗಳ ಅಪೇಕ್ಷೆ ಇತ್ತು.

ಈಜುವುದನ್ನು, ಸೈಕಲ್ ಮೇಲೆ ಬ್ಯಾಲೆನ್ಸ್ ಮಾಡುವುದನ್ನು ಥೆರಾಟಿಕಲ್ ಆಗಿ ಕಲಿಸಿ ಕೊಡಲಾಗುವುದಿಲ್ಲ ಎಂಬುದು ನಿಜವಾದರೂ ಇವಕ್ಕೆ ತರಬೇತುದಾರರು ಇದ್ದು, ಕಲಿಸುತ್ತಾರೆ ಅನ್ನುವುದೂ ಅಷ್ಟೇ ನಿಜ. ಕೆಲವು ಹೊಳಹುಗಳನ್ನು ಉದಾಹರಣೆಗೆ ಕೈ-ಕಾಲು ಹೊಡೆಯುವುದು, ಉಸಿರಾಟದ ಮೇಲಿನ ನಿಯಂತ್ರಣ, ಮುಖದ ಚಲನೆ, ಗಾಳಿ ಎಳೆದುಕೊಳ್ಳುವಿಕೆ ಇಂತಹ ಕೆಲವನ್ನಾದರೂ ಹೇಳಲು ಸಾಧ್ಯವಿದೆ. ಇಷ್ಟೆಲ್ಲಾ ಹೇಳಿದ ಮಾತ್ರಕ್ಕೆ ಈಜು ಬರುತ್ತದೆ ಅನ್ನುವ ಏನೂ ಗ್ಯಾರಂಟಿ ಇಲ್ಲ. ಆದರೂ, ಇವು ಖಂಡಿತವಾಗಿ ಈಜು ಕಲಿಯಲು ಉಪಯೋಗಕ್ಕಂತೂ ಬರುತ್ತವೆ. ಇಂಥ ಕೆಲವು ತಂತ್ರಗಳನ್ನೇ ಇದಿರು ನೋಡಿದ್ದು.

ಒಂದೇ ತೆರನಾದ (ಕ್ವಾoಟಿಟಿ ಮತ್ತು ಕ್ವಾಲಿಟಿ) ಪದಾರ್ಥಗಳನ್ನು ಕೊಟ್ಟರೂ ಇಬ್ಬರು ಮಾಡಿದ ಸಾಂಬಾರು ಹೇಗೆ ಬೇರೆ ಯಾಗಿರುತ್ತದೆಯೋ, ಒಂದೇ ಕಥಾವಸ್ತುಗಳನ್ನು ಇಟ್ಟುಕೊಂಡ ಕಥೆಗಳೂ ಬೇರೆಯಾಗಿರುತ್ತವೆ. ಈ ಸಾಂಬಾರು ಏಕೆ ಮತ್ತು ಹೇಗೆ ರುಚಿಕಟ್ಟಾಗಿದೆ ಅಂತಾ ಕರಾರುವಾಕ್ಕಾಗಿ ಹೇಳಲು ಆಗುವುದಿಲ್ಲವೋ, ಇಂಥವರು ಬರೆದ ಕಥೆ ಏಕೆ ಗಟ್ಟಿ ಮತ್ತು ಗಟ್ಟಿಯಲ್ಲ ಅನ್ನುವುದನ್ನು ಇದಮಿತ್ಥ೦ ಅಂತಾ ಹೇಳಲು ಬರುವುದಿಲ್ಲ. ಆದರೆ, ಕನಿಷ್ಠ ಪಕ್ಷ ಇದರಲ್ಲಿ, ಹುಳಿ , ಖಾರ, ಉಪ್ಪುಗಳ ಮಿಶ್ರಣದ ಬಗ್ಗೆ, ಅವುಗಳನ್ನು ಹಾಕಿ ಕುದಿಸಿದ್ದರ ಬಗ್ಗೆ ಹೇಳಲು ಸಾಧ್ಯವಿದೆ.

ಅಷ್ಟಕ್ಕೂ ಕಥೆ, ಪುಸ್ತಕ, ಸಿನೆಮಾ, ತಿಂಡಿ, ಹುಡುಗ ಅಥವಾ ಹುಡುಗಿ ಯಾರಿಗೆ ಏಕೆ ಇಷ್ಟ ಅನ್ನುವುದನ್ನು ಹೇಳುವುದಕ್ಕೆ ಸಾಧ್ಯವಿಲ್ಲ.

– ಕೊಟ್ಟಿರುವ ಕಥೆಗಳ ಓದು ಮತ್ತು ಸಂವಾದ

ಕಥೆಗಳ ಕುರಿತ ಸಂವಾದ ತುಂಬಾ ಅರ್ಥಪೂರ್ಣವಾಗಿತ್ತು ಅನ್ನುವುದರ ಬಗ್ಗೆ ಎರಡು ಮಾತಿಲ್ಲ. ಅಲ್ಲಿ ಹೆಚ್ಚಿನದನ್ನು ಪಡೆದುಕೊಳ್ಳಲು ಸಾಧ್ಯವಾಯಿತು. ಅದು ಸ್ವಲ್ಪ ಕ್ಲಾಸ್ ರೂಮಿನ ಚೌಕಟ್ಟಿನ ಆಚೆ ಇದ್ದುದರಿಂದ ಹೆಚ್ಚಿನ ಜನರ ಭಾಗವಹಿಸುವಿಕೆ ಸಾಧ್ಯವಾಯಿತು. ಆದರೆ, ಸಮಯದ ಅಭಾವದಿಂದಲೋ, ವರುಣನ ಭಯದಿಂದಲೋ, ಉದರದ ಚಿಂತೆಯಿಂದಲೋ ಅದು ಹೆಚ್ಚು ಹೊತ್ತು ನಡೆಯಲಿಲ್ಲ ಅನ್ನುವುದು ಖೇದಕರ.

ಇಲ್ಲೂ ಸಹ ಎಲ್ಲರೂ ಎಲ್ಲ ಕಥೆಗಳನ್ನೂ ಓದಿರಲಿಲ್ಲ ವಾದುದರಿಂದ, ಹೆಚ್ಚಿನ ಜನ ಸಂವಾದದಲ್ಲಿ ಭಾಗವಹಿಸಲಿಲ್ಲ. ಸಾಮಾನ್ಯವಾಗಿ, ಕಮ್ಮಟಗಳಿಗೆ ಹೋಗುವಾಗ ವಿಧೇಯ ವಿದ್ಯಾರ್ಥಿಯಂತೆ ಹೋಂ ವರ್ಕ್ ಮಾಡಿಕೊಂಡು ಹೋಗುವುದು ಒಳಿತು. ನಾನಂತೂ ಖಾಲಿ ಸ್ಪಂಜು ತೆಗೆದುಕೊಂಡು ಹೋಗಿ, ಎಷ್ಟು ಸಾಧ್ಯವೋ ಅಷ್ಟು ನೀರನ್ನು ಹೀರಿಕೊಳ್ಳಲು ಪ್ರಯತ್ನಿಸುತ್ತೇನೆ. ಕೆಲವರು ಒಂದೋ ಕಥೆಗಳನ್ನು ಓದಿರಲಿಲ್ಲ ಅಥವಾ ಓದಿದ್ದರೂ ಎಲ್ಲಾ ಕಥೆಗಳನ್ನು ಓದಿರಲಿಲ್ಲ. ಟಿಪ್ಪಣಿ ಮಾಡಲು ಆಗದಿದ್ದರೂ ಚೆನ್ನಾಗಿ ಓದಿದ್ದರೂ ಸಂವಾದದಲ್ಲಿ ಭಾಗವಹಿಸುವಿಕೆ ಇನ್ನೂ ಚೆನ್ನಾಗಿ ಬರಬಹುದಿತ್ತು. ಸಂವಾದಕ್ಕೆ ಎರಡೂ ದಿನ ಸಮಯವನ್ನು ಮೀಸಲಿಟ್ಟಿದ್ದರೂ, ಅದು ಹಾಗೆ ಆಗದೆ ಹೋಯಿತು.

– ಕಮ್ಮಟದಲ್ಲಿ ಚರ್ಚೆಯಾದ ವಿಷಯಗಳು

ಇಲ್ಲಿ ಚರ್ಚಿತವಾದ ಎಲ್ಲ ವಿಷಯಗಳೂ ಅರ್ಥಪೂರ್ಣ ಮತ್ತು ಅವಶ್ಯಕ. ಜಯಲಕ್ಷ್ಮಿ ಮೇಡಂ ತಮ್ಮ ಭಾಷಣದಲ್ಲಿ ಹೇಳಿದ ಹಾಗೆ, ಎಷ್ಟೋ ಬೇರೆ ಭಾಷೆಯ ಲೇಖಕರ ಹೆಸರು ಮತ್ತು ಅವರ ಸ್ಥೂಲ ಪರಿಚಯ ನಮ್ಮಲ್ಲಿನ ಸಾಕಷ್ಟು ಜನರಿಗೆ ಸಿಕ್ಕಿದ್ದು ಸುಳ್ಳಲ್ಲ. ಊಟದ ತಟ್ಟೆಯಲ್ಲಿರುವ ಎಲ್ಲಾ ಪದಾರ್ಥಗಳೂ, ಎಲ್ಲರಿಗೂ ಏಕಕಾಲದಲ್ಲಿ ರುಚಿಸಲು ಹೇಗೆ ಸಾಧ್ಯವಿಲ್ಲವೋ, ಹಾಗೆಯೇ ಕೆಲವರಿಗೆ ಕೆಲವು ವಿಷಯಗಳು ಅಷ್ಟು ಸಮಂಜಸ ಅನ್ನಿಸದಿರಬಹುದು. ಅದು ವೈಯಕ್ತಿಕ, ಸಾರ್ವತ್ರಿಕವಲ್ಲ.

– ಸಂಪನ್ಮೂಲ ವ್ಯಕ್ತಿಗಳು, ನಿರ್ದೇಶಕರು ಉದ್ಘಾಟಕರು

ಇವರ ಬಗ್ಗೆ ಹೇಳುವಷ್ಟು ಪ್ರಬುದ್ಧತೆಯಾಗಲಿ, ಪಾಂಡಿತ್ಯವಾಗಲಿ ನನ್ನಲ್ಲಿಲ್ಲ. ಇಂಥವರು ಸಿಕ್ಕಿದ್ದು ನಮ್ಮಂತಹ ಬರಹಗಾರರ ಅದೃಷ್ಟ ಅಂತ ಮಾತ್ರ ಖಂಡಿತವಾಗಿ ಹೇಳಬಲ್ಲೆ.

– ಆಯೋಜಕರು

ಹೊರುವವನ ಭಾರ ನೋಡುವವನಿಗೆ ತಿಳಿಯದು. ಅವರು ಪಟ್ಟ ಕಷ್ಟ ಅವರಿಗೇ ಗೊತ್ತು. ಆದರೆ, ಯಾವುದಕ್ಕೂ ಕಡಿಮೆಯಾಗದಂತೆ ತೂಗಿಸಿಕೊಂಡು ಹೋದದ್ದಿದೆಯಲ್ಲ ಅದು ಎಲ್ಲರಿಗೂ ಒಲಿಯುವುದಿಲ್ಲ. ಅವರ ಸಂಘಟನಾ ಶಕ್ತಿಗೆ ಬೇರಗಾದವರು ನಾವು.

– ಅಂತರ ಉಳಿಸಿಕೊಂಡವರು

‘ತಿಂಗಳಾನುಗಟ್ಟಲೆ ಇದೇ ಗುಂಪಿನಲ್ಲಿದ್ದೂ, ಎರಡು ದಿನಗಳ ಕಾಲ ಒಂದೇ ಸೂರಿನಡಿಯಲ್ಲಿದ್ದೂ ಶಿಬಿರಾರ್ಥಿಗಳು ಹೆಣ್ಣು ಮತ್ತು ಗಂಡು ಅನ್ನುವ ಅಂತರ ಉಳಿಸಿಕೊಂಡೇ, ಅಪರಿಚಿತರಾಗೇ ಮರಳಿದರಲ್ಲ ಯಾಕೆ? ಇದು ಈಗಲೂ ಹೀಗೆ ಮುಂದುವರೆಯುತ್ತಿರುವುದು ಯಾಕೆ?’ ಅನ್ನುವ ಪ್ರಶ್ನೆಯನ್ನು ಜಯಲಕ್ಷ್ಮಿ ಮೇಡಂ ಎತ್ತಿದ್ದರು. ನಾವೆಲ್ಲಾ ಕಿಲಾಡಿಗಳು, ಅದಕ್ಕೆ ಉತ್ತರಿಸುವ ಗೋಜಿಗೇ ಹೋಗಲಿಲ್ಲ.

ನನಗೆ ತಿಳಿದ ಹಾಗೆ, ಎರಡು ದಿನಗಳಲ್ಲಿ, ಉಪಹಾರ, ಕ್ಲಾಸು, ಊಟ, ಸಂವಾದ, ಕ್ಷೇತ್ರ ಅಧ್ಯಯನ ಹೀಗೆ ನಾನಾ ವಿಷಯಗಳಲ್ಲಿ ಬಿಡುವಿಲ್ಲದೆ ತೊಡಗಿಕೊಂಡಿದ್ದರಿಂದ ಅದು ಸಾಧ್ಯವಾಗದೆ ಹೋಗಿರಬಹುದು. ಉಳಿದವರ ಬಗ್ಗೆ ಗೊತ್ತಿಲ್ಲ; ಆದರೆ, ವೈಯಕ್ತಿಕವಾಗಿ ನಾನು ಮಹಿಳೆಯರ ಜೊತೆ ಸಾಧ್ಯವಾದಷ್ಟು ಒಡನಾಡಿದೆ. ಮುಖ್ಯವಾಗಿ ಜಯಶ್ರೀ ಮೇಡಂ, ಅನುಪಮಾ ಮೇಡಂ ಮತ್ತು ಅಕ್ಷತಾ ಮೇಡಂ, ಲತಾ ಮೇಡಂ ಜೊತೆ ಸಾಕಷ್ಟು ಮಾತನಾಡಿದ್ದೇನೆ. ಅವರೂ, ನಾನೂ ವಿಷಯಗಳನ್ನು ಹಂಚಿಕೊಂಡಿದ್ದೇವೆ. ಅವರೆಲ್ಲ ‘ಸುಪರಿಚಿತ’ ಆಗದಿದ್ದರೂ ‘ಅಪರಿಚಿತ’ ರಾಗಿಯಂತೂ ಉಳಿದಿಲ್ಲ ಅಂದುಕೊಳ್ಳುತ್ತೇನೆ. ಉಳಿದ ಮಹಿಳಾ ಶಿಬಿರಾರ್ಥಿಗಳ ಜೊತೆ ಹೆಚ್ಚು ಸಮಯ ಕಳೆಯಲಾಗಲಿಲ್ಲ.

– ಭಾರ ಹೊರದ ಗಂಡಸರು

ಲಂಬಾಣಿ ಡ್ರೆಸ್ಸುಗಳನ್ನು ಅಷ್ಟು ಆಸ್ಥೆಯಿಂದ, ಕುತೂಹಲದಿಂದ ಮಹಿಳೆಯರು ತೊಟ್ಟು, ಬೆರಗಿನಿಂದ ನೋಡಬೇಕಾದರೆ, ಗಂಡಸರಿಗೇಕೆ ಅವು ಬೆರಗು ಹುಟ್ಟಿಸಲಿಲ್ಲ, ಅವರೇಕೆ ಆ ಭಾರದ ಉಡುಪುಗಳನ್ನು ತೊಡಲಿಲ್ಲ ಅನ್ನುವ ಪ್ರಶ್ನೆ.

ಇದಕ್ಕೂ ನಮ್ಮದು ಜಾಣ ಕುರುಡು, ಕಿವುಡು.

ಮೊದಲನೆಯದಾಗಿ, ಇದಕ್ಕೆ ಕಾರಣ ಅಲ್ಲಿ ಒಂದೋ ಗಂಡಸರು ತೊಡುವ ಲಂಬಾಣಿ ಬಟ್ಟೆಗಳು ಇಲ್ಲದಿರುವುದು ಅಥವಾ ಇದ್ದಿದ್ದರೂ ಅದು ಗಂಡಸರ ಗಮನಕ್ಕೆ ಬಾರದೆ ಹೋಗಿರುವುದು. ನನಗಂತೂ ನಿಜವಾಗಿಯೂ ಅಲ್ಲಿ ಗಂಡಸರು ತೊಡುವ ಬಟ್ಟೆ ಇದೆ ಎಂದು ಗೊತ್ತಿರಲಿಲ್ಲ. ಹಾಗೇನಾದರೂ ಇದ್ದಿದ್ದರೆ, ತೊಟ್ಟೇ ಸಿದ್ಧ ಎಂದು ಎದೆ ಮುಟ್ಟಿ ಹೇಳಲಾರೆ, ಆ ಮಾತು ಬೇರೆ! ಆವಾಗಿನ ನನ್ನ ರಿಯಾಕ್ಷನ್ ಹೇಗಿರುತ್ತಿತ್ತೋ ಗೊತ್ತಿಲ್ಲ.

ಹೆಣ್ಣಿಗೆ ಸಹಜವಾಗಿ ಇರುವ (ಎಲ್ಲರಿಗೂ ಅಲ್ಲ) ಬಟ್ಟೆಯನ್ನು ತೊಡುವ, ತೊಟ್ಟು ಆನಂದಿಸುವ, ನಲಿಯುವ ಗುಣ ಅಷ್ಟಾಗಿ ಗಂಡಸರಲ್ಲಿ ಕಾಣದು. ಹೆಣ್ಣಿಗೆ ಚಿಕ್ಕದ್ದನ್ನೂ ಹಬ್ಬವಾಗಿಸುವ ಶಕ್ತಿ ಏನಿದೆಯೋ ಅದು ಗಂಡಿಗೆ (ಎಲ್ಲರಲ್ಲೂ ಅಲ್ಲ) ಇನ್ನೂ ಸಿದ್ಧಿಸಿಲ್ಲ.

-ರಿಸ್ಕು ತೆಗೆದುಕೊಂಡವರು

ನನ್ನ ಪುಸ್ತಕ ಕೊಂಡು ಕೊಂಡ ಓದುಗರು….. ನಾವೇನೋ ಬರೆದು ಬಿಡುತ್ತೇವೆ, ಅದನ್ನು ರಿಸ್ಕು ತೆಗೆದುಕೊಂಡು ಪ್ರಕಟಣೆ ಮಾಡುವವರು ಪ್ರಕಾಶಕರು. ಇನ್ನೂ ಹೆಚ್ಚು ರಿಸ್ಕು ತಗೊಂಡುಕೊಂಡು ಓದುವವರು ನಿಮ್ಮಂತಹ ಓದುಗರು. ಅವರೆಲ್ಲರಿಗೂ ನಾನು ಆಭಾರಿ. ಕೊಂಡು ಪ್ರೋತ್ಸಾಹ ನೀಡಿದ್ದೀರಿ…. ಧನ್ಯವಾದ. ಓದಿ, ಅಭಿಪ್ರಾಯ ಹಂಚಿ ಕೊಳ್ಳಿ.

Jayalaxmi Patil ನಿಮಗೆ ವಿಶೇಷ ಧನ್ಯವಾದ…

‍ಲೇಖಕರು avadhi

25 September, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading