ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾಂಗ್ರೆಸ್-ಬಿಎಸ್ ಪಿ ಒಕ್ಕೂಟ ಸಾಧ್ಯವೆ?

gali.gif“ಗಾಳಿ ಬೆಳಕು”

ನಟರಾಜ್ ಹುಳಿಯಾರ್

ರ್ನಾಟಕದ ಕೆಲವು ಪ್ರಗತಿಪರರು ಹಾಗೂ ಸಾಮಾಜಿಕ ಸಂಘಟನೆಗಳ ನಾಯಕರು ಮೊನ್ನೆ ಮೈಸೂರಿನಲ್ಲಿ ಸಭೆ ಸೇರಿ ಒಂದು ಮನವಿ ಮಾಡಿದ್ದಾರೆ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ಬಹುಜನ ಸಮಾಜ ಪಕ್ಷದ ಮಾಯಾವತಿ ಈ ಇಬ್ಬರನ್ನೂ ಉದ್ದೇಶಿಸಿ ಮಾಡಲಾದ ಮನವಿಯಲ್ಲಿ, “ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಎಸ್ ಪಿ ಚುನಾವಣಾ ಹೊಂದಾಣಿಕೆ ಮಾಡಿಕೊಂಡು ಮತೀಯವಾದಿ ಶಕ್ತಿಗಳನ್ನು ಸೋಲಿಸಬೇಕು” ಎಂಬ ಕಾಳಜಿ ಎದ್ದು ಕಾಣುತ್ತಿದೆ.

ಈ ಮನವಿ ನಿಸ್ವಾರ್ಥದಿಂದ ಕೂಡಿದೆ ಹಾಗೂ ಕರ್ನಾಟಕದ ರಾಜಕಾರಣ ಮತ್ತು ಸಾಮಾಜಿಕ ಬದುಕಿನ ಆರೋಗ್ಯವನ್ನು ಕಾಯ್ದುಕೊಳ್ಳುವುದೇ ಈ ಮನವಿಯ ಮುಖ್ಯ ಉದ್ದೇಶವಾಗಿದೆ. ಆದರೆ, ಈ ಪ್ರಗತಿಪರರು ಈ ತನಕ ಈ ಬಗೆಯ ಒಕ್ಕೂಟಕ್ಕೆ ಯಾವುದೇ ಗಂಭೀರ ಚರ್ಚೆ ಹಾಗೂ ತಾತ್ವಿಕ ತಳಹದಿ ಸಿದ್ಧಪಡಿಸದೆ ಈಗ ದಿಢೀರನೆ ಇಂಥ ಮನವಿ ಮಾಡುತ್ತಿರುವುದರಿಂದ ಎರಡು ರಾಷ್ಟ್ರೀಯ ರಾಜಕೀಯ ಪಕ್ಷಗಳು ಇದನ್ನು ಗಂಭೀರವಾಗಿ ತೆಗೆದುಕೊಳ್ಳುತ್ತವೆಯೇ ಎಂಬುದು ನಮ್ಮ ಮುಂದಿರುವ ಪ್ರಶ್ನೆ. ಒಂದು ವಿಭಜಕ ಪ್ರವೃತ್ತಿಯ ಪಕ್ಷದ ಎದುರಿಗೆ ಬಲವಾದ ಒಕ್ಕೂಟವೊಂದನ್ನು ರೂಪಿಸುವ ಪ್ರಯತ್ನ ಈ ಮನವಿಯ ಹಿನ್ನೆಲೆಯಲ್ಲಿದೆ, ನಿಜ. ಆದರೆ ಕರ್ನಾಟಕದ ಅನೇಕ ಬುದ್ಧಿಜೀವಿಗಳು ಇಂದಿರಾಗಾಂಧಿಯವರ ಎಮರ್ಜೆನ್ಸಿ ಕಾಲದಿಂದಲೂ ಕಾಂಗ್ರೆಸ್ ವಿರೋಧಿಗಳು. ಅದಕ್ಕೂ ಮೊದಲು ಲೋಹಿಯಾ ಅವರ “ಕಾಂಗ್ರೆಸ್ ವಿರೋಧೀವಾದ” ಅಥವಾ “ಕಾಂಗ್ರೇಸ್ಸೇತರ ವಾದ”ದಿಂದ ಕೂಡ ಪ್ರೇರಣೆ ಪಡೆದವರು. ನೆಹರೂಯುಗದಲ್ಲಿ ಕಾಂಗ್ರೆಸ್ ವಿರುದ್ಧ ಒಕ್ಕೂಟ ರೂಪಿಸಿದ ಲೋಹಿಯಾ ಅವರು, ಸಮಾಜವಾದಿ ಪಕ್ಷ ಹಾಗೂ ಮತ್ತಿತರ ವಿರೋಧಪಕ್ಷಗಳ ಜೊತೆಗೆ ಜನಸಂಘವನ್ನೂ ಅದರೊಳಗೆ ಸೇರಿಸಿಕೊಂಡರು. ಆನಂತರ ಇಂದಿರಾಗಾಂಧಿಯವರನ್ನು ಎದುರಿಸಲು ಜಯಪ್ರಕಾಶ ನಾರಾಯಣರು ಜನತಾ ಪಕ್ಷ ರೂಪಿಸಿ ಅದರಡಿ ಜನಸಂಘವೂ ಸೇರಿದಂತೆ ಬಗೆಬಗೆಯ ವಿರೋಧಪಕ್ಷಗಳನ್ನು ಸೇರಿಸಿದರು. ಆಗ ಕಾಂಗ್ರೆಸ್ ಈ ಎಲ್ಲಾ ಪಕ್ಷಗಳ ಪ್ರಧಾನ ಶತ್ರುವಾಗಿತ್ತು. ಆದರೆ, ಈ ಬಗೆಯ ಕಾಂಗ್ರೆಸ್ ವಿರೋಧಿ ಒಕ್ಕೂಟದ ಬಲದಿಂದಾಗಿ ಕ್ರಮೇಣ ಮತೀಯ ಶಕ್ತಿಗಳಿಗೆ ರೆಕ್ಕೆಪುಕ್ಕ ಬಂತು. ಅದಕ್ಕೂ ಮುನ್ನ ನೆಹರೂ ಹಾಗೂ ಇಂದಿರಾ ತಂತಮ್ಮ ಕಾಲದಲ್ಲಿ ಮತೀಯ ಶಕ್ತಿಗಳ ತಲೆಯ ಮೇಲೆ ಮೊಟಕಿ ಅವು ತಲೆಯೆತ್ತದಂತೆ ನೋಡಿಕೊಂಡಿದ್ದರು. ಈ ಇಬ್ಬರನ್ನೂ ಅನೇಕ ಕಾರಣಗಳಿಗಾಗಿ ಇಷ್ಟಪಡದ ಬುದ್ಧಿಜೀವಿಗಳು ಕೂಡ ಮತೀಯ ಶಕ್ತಿಗಳ ವಿರುದ್ಧ ಅವರು ದಿಟ್ಟವಾಗಿ ನಿಂತದ್ದನ್ನು ಮೆಚ್ಚದಿರಲಾರರು.

ಆನಂತರ ಆದದ್ದು ಎಲ್ಲರಿಗೂ ಗೊತ್ತಿದೆ. ಉಳಿದೆಲ್ಲ ಪಕ್ಷಗಳೂ ಅಧಿಕಾರಕ್ಕಾಗಿ ಮತೀಯವಾದಿಗಳ ಜೊತೆ ಸರಸ ಶುರು ಮಾಡಿದ ಮೇಲೆ ಮತೀಯವಾದಿಗಳು ಮೇಲೇರತೊಡಗಿ, ತಮಗೆ ನೆರವಾದ ಪಕ್ಷಗಳನ್ನೇ ನಾಶ ಮಾಡತೊಡಗಿದರು. ಮತೀಯವಾದಿಗಳ ಧೃತರಾಷ್ಟ್ರಾಲಿಂಗನದಲ್ಲಿ ಜನತಾ ಪಕ್ಷದಂಥ ರಾಷ್ಟ್ರೀಯ ಪಕ್ಷವೇ ತುಂಡುತುಂಡಾಗಿ ಹೋಗಿ, ಬಿಹಾರ, ಕರ್ನಾಟಕಗಳಲ್ಲಿ ಒಂದೆರಡು ಮೂರು ತುಂಡುಗಳು ಹಾಗೂ ಹೀಗೂ ಬದುಕಿವೆ. ಆ ಸರಿಸುಮಾರಿನಲ್ಲೇ ಬೆಳೆದ ಬಿಎಸ್ ಪಿ ಅನೇಕ ಪಕ್ಷಗಳ ಜೊತೆಗೆ ಬಗೆಬಗೆಯ ಸರಸವಾಡಿದೆ; ಕೊನೆಗೂ ವಿವಿಧ ಜಾತಿ ಸಮೀಕರಣಗಳ ಮೂಲಕ ಕಾಂಗ್ರೆಸ್ ಹಾಗೂ ಬಿಜೆಪಿಗಳನ್ನು ಉತ್ತರಪ್ರದೇಶದಲ್ಲಿ ಕೊನೆಯ ಸ್ಥಾನಗಳಿಗೆ ದೂಡಿದೆ. ಆದರೆ, ಅದನ್ನೇ ಬೇರೆ ರಾಜ್ಯಗಳಲ್ಲೂ ಸಾಧಿಸುತ್ತೇನೆಂದು ಹೊರಟು, ಕಳೆದೆರಡು ಚುನಾವಣೆಗಳಲ್ಲಿ ಮಹಾರಾಷ್ಟ್ರ, ಗುಜರಾತ್, ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ಕರ್ನಾಟಕ ಮುಂತಾಗಿ ಅನೇಕ ಕಡೆ ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತಕ್ಷೇತ್ರಗಳಿಗೆ ಕತ್ತರಿ ಹಾಕುತ್ತಿದೆ. “ಇದರಿಂದ ಅಂತಿಮವಾಗಿ ಬಿಜೆಪಿಗೆ ಅನುಕೂಲವಾಗಲಿದೆ” ಎಂದು ಪ್ರಗತಿಪರರು ವಾದಿಸುತ್ತಿದ್ದಾರೆ. ಈ ವಾದ ಮೇಲ್ನೋಟಕ್ಕೆ ಸರಿಯಿರಬಹುದು. ಆದರೆ, ಕಳೆದ ಹತ್ತು, ಹದಿನೈದು ವರ್ಷಗಳಿಂದ ಕರ್ನಾಟಕದಲ್ಲಿ ಪ್ರಗತಿಪರ ಚಿಂತಕರು ಬಿಎಸ್ ಪಿಯನ್ನು ಗಂಭೀರವಾಗಿಯೇ ಪರಿಗಣಿಸದೆ ಹೋದದ್ದು ತಪ್ಪಾಯಿತು. ಅಂಬೇಡ್ಕರ್ ವಾದವನ್ನು ಮೇಲ್ಪದರದಲ್ಲಾದರೂ ಒಪ್ಪಿದ ಬಿಎಸ್ ಪಿಯ ಜೊತೆ ಈ ಪ್ರಗತಿಪರರಿಗೆ ಒಂದು ಮಟ್ಟದ ಅರ್ಥಪೂರ್ಣ ಡಯಲಾಗನ್ನಾದರೂ ಇಟ್ಟುಕೊಳ್ಳಲಾಗಲಿಲ್ಲ ಎಂಬುದನ್ನು ಇಲ್ಲಿ ಮರೆಯಬಾರದು. ಹಾಗೆಯೇ ಇಲ್ಲಿ ಬಿಎಸ್ ಪಿಯ ಸಹಜ ಸಂಗಾತಿಯಾಗಬೇಕಾಗಿದ್ದ ದಲಿತ ಚಳುವಳಿ ಬಿಎಸ್ ಪಿಯ ಆರಂಭದಲ್ಲಿ ಬಿಟ್ಟರೆ, ಆನಂತರ ಆ ಪಕ್ಷದ ಜೊತೆ ಗಾಢ ಸಂಬಂಧ ಇರಿಸಿಕೊಳ್ಳಲಾಗಲಿಲ್ಲ. ಇದಕ್ಕೆ ಮೇಲ್ಪದರದ ಕಾರಣಗಳು ಹೀಗಿರಬಹುದು: “ನಾವು ದಲಿತ ಚಳುವಳಿ ಕಟ್ಟಿದವರು; ಆದ್ದರಿಂದ ಬಿಎಸ್ ಪಿ ನಮ್ಮ ತಮ್ಮನಂತಿರಬೇಕಲ್ಲವೆ?” ಎಂಬುದು ದಲಿತ ಚಳುವಳಿಯ ಕೆಲವು ನಾಯಕರ ಒಳಧೋರಣೆ ಇದ್ದಂತಿದೆ. ಅತ್ತ “ನಮ್ಮದು ದಲಿತರ ಹಿತ ಕಾಯುವ ರಾಷ್ಟ್ರೀಯ ಪಕ್ಷ; ಆದ್ದರಿಂದ ದಲಿತ ಚಳುವಳಿಯ ನಾಯಕರು ಹಾಗೂ ಕಾರ್ಯಕರ್ತರು ನಮ್ಮ ಹಿಂದೆ ಬರಬೇಕಲ್ಲವೆ?” ಇದು ಪ್ರಾಯಶಃ ಬಿಎಸ್ ಪಿ ನಾಯಕರ ಧೋರಣೆ.

-ಇವೆಲ್ಲ ನಾನು ಅಲ್ಲಲ್ಲಿ ಕಂಡು, ಕೇಳಿ ಬರೆದಿರುವ ಮಾತುಗಳಾದ್ದರಿಂದ ಈ ತಿಳಿವಳಿಕೆಯಲ್ಲಿ ಅರ್ಧ ಸತ್ಯ ಮಾತ್ರ ಇರಬಹುದು. ಅದೇನೇ ಇರಲಿ, ಈ ಕಾರಣಗಳಿಂದಲೋ, ಇನ್ನಿತರ ಗಂಭೀರ ಕಾರಣಗಳಿಂದಲೋ ಅಥವಾ ಅಹಂಕಾರಿಗಳ ಕಾರಣದಿಂದಲೋ ಅಂತೂ ಬಿಎಸ್ ಪಿ ಹಾಗೂ ದಲಿತ ಸಂಘರ್ಷ ಸಮಿತಿಗಳ ಸಂಬಂಧ ಕರ್ನಾಟಕದಲ್ಲಿ ಅಷ್ಟು ಆತ್ಮೀಯವಾಗಿಲ್ಲ. ಅಂಬೇಡ್ಕರ್ ಬರೆದ “ಕಾಂಗ್ರೆಸ್ ಹಾಗೂ ಗಾಂಧಿ ಅಸ್ಪೃಶ್ಯರಿಗೆ ಮಾಡಿದ್ದೇನು?” ಎಂಬ ಪುಸ್ತಕದ ಆಕ್ಷೇಪಣೆಗಳನ್ನೂ ಕೂಡ ಅಸ್ತ್ರಗಳನ್ನಾಗಿ ಮಾಡಿಕೊಂಡು ಬೆಳೆದ ಬಿಎಸ್ ಪಿ ಕಾಂಗ್ರೆಸ್ ಪಕ್ಷವನ್ನು ತನ್ನ “ಎನಿಮಿ ನಂಬರ್ ಒನ್” ಎಂದು ಹೇಳುತ್ತಲೇ ಬಂದಿದೆ.

ಇಂಥ ಹಿನ್ನೆಲೆಯುಳ್ಳ ಸನ್ನಿವೇಶದಲ್ಲಿ, ಜಾತ್ಯತೀತ ಮತಗಳು ಹೋಳಾಗಬಾರದೆಂದು ಕರ್ನಾಟಕದ ಪ್ರಗತಿಪರರೆಲ್ಲ ಸೇರಿ ಕಾಂಗ್ರೆಸ್ ಹಾಗೂ ಬಿಎಸ್ ಪಿ ಒಟ್ಟಾಗಿ ಚುನಾವಣೆ ಎದುರಿಸಲಿ ಎಂದು ಕೇಳಿಕೊಳ್ಳುತ್ತಿದ್ದಾರೆ. ಆದರೆ, ಈ ಎರಡೂ ಪಕ್ಷಗಳು ಒಟ್ಟಿಗೆ ಬರುವಲ್ಲಿ ಕೇವಲ ಚುನಾವಣೆಯ ಉದ್ದೇಶ ಮಾತ್ರವಲ್ಲದೆ ನಿಜವಾದ ತಾತ್ವಿಕ ಭೂಮಿಕೆ ಹಾಗೂ ತಾತ್ವಿಕ ವಾದಗಳನ್ನು ರೂಪಿಸುವ ಹೊಣೆ ಕೂಡ ಪ್ರಗತಿಪರರ ಮೇಲೇ ಇದೆ. ಈ ಹೊಣೆಯನ್ನು ನಿರ್ವಹಿಸುವ ಮೂಲಕವೇ ಈ ಒಕ್ಕೂಟ ಸಾಧಿಸುವ ನಿಟ್ಟಿನಲ್ಲಿ ದೃಢ ಹೆಜ್ಜೆಗಳನ್ನಿಡಬಹುದೆಂದು ಕಾಣುತ್ತದೆ. ಹಾಗೆಯೇ, ಮತೀಯ ಶಕ್ತಿಗಳ ವಿರುದ್ಧ ಒಕ್ಕೂಟ ರೂಪಿಸುವ ವಿಶಾಲ ಉದ್ದೇಶವುಳ್ಳ ಪ್ರಗತಿಪರರು-ಎಸ್.ಪಿ, ಜೆಡಿಎಸ್, ಜೆಡಿಯು, ಸರ್ವೋದಯ ಕರ್ನಾಟಕ ಮುಂತಾದ ಯಾವ ಪಕ್ಷಗಳನ್ನೂ ಅಸ್ಪೃಶ್ಯವೆಂಬಂತೆ ಕಾಣದೆ, ವಿಶಾಲ ತಾತ್ವಿಕ ತಳಹದಿ ಹಾಗೂ ಪ್ರಾಕ್ಟಿಕಲ್ ದೃಷ್ಟಿಕೋನದಿಂದ ಚರ್ಚಿಸುವುದು ಈ ಸಂದರ್ಭದಲ್ಲಿ ಅತ್ಯಂತ ಉಪಯುಕ್ತ ಎನಿಸುತ್ತದೆ.

‍ಲೇಖಕರು avadhi

11 January, 2008

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading