ಕವಿ, ನಾಟಕಕಾರ, ರಂಗನಿರ್ದೇಶಕ ರಘುನಂದನ ಅವರ ಕವನ ಸಂಕಲನ ನಾನು ಸತ್ತಮೇಲೆ (ಪ್ರ: ಚಾರುಮತಿ ಪ್ರಕಾಶನ) ಮತ್ತು ಕಾವ್ಯ ಮತ್ತು ಲೋಕಮೀಮಾಂಸೆಯ ಪುಸ್ತಕ ‘ತುಯ್ತವೆಲ್ಲ ನವ್ಯದತ್ತ : ಅಂದತ್ತರ ಉಯ್ಯಾಲೆ… ಮತ್ತು ಅದರ ಸುತ್ತ ‘ (ಪ್ರ: ಥಿಯೇಟರ್ ತತ್ಕಾಲ್ ಬುಕ್ಸ್), ಈ ಎರಡು ಪುಸ್ತಕಗಳು ಮೇ 12ರಂದು ಸುಚಿತ್ರ ಸಭಾಂಗಣದಲ್ಲಿ ಬಿಡುಗಡೆಗೊಳ್ಳುತ್ತಿವೆ.
‘ನಾನು ಸತ್ತಮೇಲೆ ‘ಕವನ ಸಂಕಲನದ ಒಂದು ಪದ್ಯಸಮ ಗದ್ಯಭಾಗವನ್ನು ಈಕೆಳಗೆ ಕೊಟ್ಟಿದೆ.
**
ಕವಿತೆ, ಏಕಾಂತ, ಲೋಕಾಂತ
**
… poetry makes nothing happen
… … … … … … …; it survives,
A way of happening, a mouth.
… … ಕವಿತೆಯಿಂದ ಏನೂ ಆಗುವುದಿಲ್ಲ, ಅದರಿಂ
ದೇನೂ ಹುಟ್ಟುವುದಿಲ್ಲ… … ಬದುಕುಳಿದು ಅದು
ಹೇಗೊ ಬಾಳಿಕೊಂಡಿರುತ್ತೆ. ಆಗುತ್ತ ಇರುವೊಂದು
ಬಗೆ ತಾನು ಎಂಬಂತೆ; ನಾಲಿಗೆ, ಬಾಯೆಂಬಂತೆ.
–ಇನ್ ಮೊಮೊರಿ ಆಫ್ ಡಬ್ಲ್ಯು.ಬಿ. ಯೇಟ್ಸ್, ಡಬ್ಲ್ಯು.ಎಚ್. ಆಡೆನ್
**
ಕವಿತೆಯಿಂದ ಏನೂ ಆಗದಿರಬಹುದು. ಆದರೂ ಇರುತ್ತದೆ ಅದು, ಆಗುತ್ತಿರುತ್ತದೆ. ಬೇಕು ಕವಿತೆ, ಆಗುತ್ತಿರಬೇಕು.
ಏನೂ ಹುಟ್ಟದಿರಬಹುದು ಅದರಿಂದ. ಆದರೆ ಅದಕ್ಕೊಂದು ಹುಟ್ಟಿರುತ್ತದೆ. ಆ ಹುಟ್ಟು ಎಲ್ಲಿಂದ? ಯಾವುದರಿಂದ?
ಕವಿ ಬದುಕುವುದು, ಎಲ್ಲರಂತೆ: ಲೋಕಾಂತವಾಗಿ. ಕವಿತೆ ಹುಟ್ಟುವುದು ಕವಿಯ ಮನಸ್ಸಿನ ಏಕಾಂತದ ಯಾವುದೋ ಮೂಲೆಯಲ್ಲಿ. ಏಕಾಂತದಲ್ಲಿ; ಏಕಾಂತದಿಂದ ಅಲ್ಲ.
ಆ ಏಕಾಂತ, ತಾನು ಸಲ್ಲಬೇಕಾದಲ್ಲಿ, ಲೋಕಾಂತಕಾಂತತೆಯಿಂದ ವಿದ್ಯುತ್ ಜಾಗರಗೊಂಡ ಏಕಾಂತವಾಗಬೇಕು.
ಏಕಾಂತ ಜಾಗೃತಗೊಳ್ಳಲು ಹವಣಿಸುವ ಪ್ರಜ್ಞೆ, ತಾಮ್ರದ ತಂತಿಯ ಸುರುಳಿ; ಲೋಕಾಂತ ಅದನ್ನು ಸುತ್ತುಗಟ್ಟಿರುವ ಅಯಸ್ಕಾಂತದ ಕೊಳವೆ.
ಅಥವಾ, ಲೋಕಾಂತದ ಅಯಸ್ಕಾಂತವು ಜಡವಾಗಿದ್ದರೆ, ಏಕಾಂತ ತಾನು ಅಂಥ ಲೋಕಾಂತವನ್ನು ಸುತ್ತುವರಿದಿರುವ, ವಿದ್ಯುತ್ ಜಾಗರಗೊಂಡ ತಂತಿಸುರುಳಿ. ತನ್ನಲ್ಲಿನ ವಿದ್ಯುತ್ತಿನಿಂದ ಆ ಅಯಸ್ಕಾಂತವನ್ನು ಎಚ್ಚರಿಸಿ, ವಾಪಸು ಅದರಿಂದಲೆ ಬಲಪಡೆದುಕೊಳ್ಳಬೇಕು ಅದು; ಗರ್ರನೆ ತಿರುಗಲು, ಆಡಲು ತೊಡಗಬೇಕು. ಭಕ್ತನು, ತನ್ನ ಭಕ್ತಿಯ ಬಲದಿಂದ, ಯೋಗನಿದ್ರೆಯಲ್ಲಿರುವ ಭಗವಂತನನ್ನು ಎಚ್ಚರಿಸಿ, ಮರಳಿ ಆ ಭಗವಂತನಿಂದಲೆ ಸ್ಪಂದಶಕ್ತಿ ಪಡೆದುಕೊಂಡಂತೆ, ಅದು.
ಆ ಎರಡೂ ಆಗುಹೋಗಿನಲ್ಲಿ, ಭಕ್ತ-ಏಕಾಂತ ಎಂಬ ಸುರುಳಿತಂತಿ ಭಗವಂತ-ಲೋಕಾಂತ ಎಂಬ ಅಯಸ್ಕಾಂತದಿಂದ ಸ್ಪಂದಶಕ್ತಿ ಪಡೆಯುವುದು ತನಗಾಗಿ ಅಲ್ಲ. ಬದಲು, ಆ ಸ್ಪಂದಶಕ್ತಿಯನ್ನು ಲೋಕದ ಒಳಿತಿಗೆ, ವಿಶ್ವ-ಬ್ರಹ್ಮಾಂಡದ ಒಳಿತಿಗೆ ವ್ಯಯಮಾಡಲೆಂದು, ಲೋಕಾಂತಕ್ಕೇ ಮರಳಿ ನೀಡಲೆಂದು – ಕೆರೆಯ ನೀರನ್ನು ಕೆರೆಗೆ ಚೆಲ್ಲುವಂತೆ.
ಕವಿತೆ ಹುಟ್ಟುವುದು ಏಕಾಂತಲೋಕಾಂತಗಳ ಮೈಥುನದ ಅಂಥ ವಿದ್ಯುಜ್ಜಾಗರದಿಂದ.
ಅಂಥ ಜಾಗರ ಮತ್ತು ಲೋಕಾಂತಭಕ್ತಿಯಿಲ್ಲದ ಆತ್ಮಲೀನಏಕಾಂತವು ಪಾತಕ, ಸಾವಿಗೆ ಸಮ.
0 Comments