ತಿರುಪತಿ ಭಂಗಿ
ಅಂದು ಮೈಯಲ್ಲಾ ಕೆಂಡವಾಗಿತ್ತು. ಗದಗದ ನಡಗುತಿದ್ದ. ಜ್ವರದ ಹೊಡಿತಕ್ಕೆ ಬೆನ್ನಪ್ಪ ಹಾಸಗಿಯಲ್ಲಿ ಏನೇನೋ ಬಡಬಡಿಸುತ್ತ ಇದ್ದ. ಹಾಕಿಕೊಂಡ ಬಟ್ಟೆಗಳೆಲ್ಲವೂ ವದ್ದೆಯಾಗಿದ್ದವು. ಅಲ್ಲದೆ ಮುಗಿನ ಹೊಳ್ಳೆಯಿಂದ ಬಿಸಿ ಉಸಿರು ಅಂದರ್- ಬಾಹರ್ ಆಟ ನಡಿಸಿತ್ತು.ಬೆನ್ನಪ್ಪನಿಗೆ ದಿನಾ ನದಿ ಸ್ನಾನಾ ಮಾಡದೆ ನಿವ್ರಾ ಇರ್ತಿರಲಿಲ್ಲ. ಮಡಿ ಬಟ್ಟೆಯಲ್ಲಿ ಪೂಜಾ ಮಾಡದಿದ್ರೆ ದೇವಿ ಮುನಿಸ್ಕೋತಾಳೆ ಅನ್ನುವ ಮನುಷ್ಯಭಯ ಅವನ ಕಾಡದೆ ಇರುತಿರಲಿಲ್ಲ. ಅಲ್ಲದೆ ಲಕ್ಮೀದೇವಿ ಪೂಜಾ ಮಾಡು ಚಾಕರಿ ಅವರ ಮನೆತನದವರಿಗೆ ತಲಾತಲಾಂತರದಿಂದ ಬಂದ ಸಂಪ್ರದಾಯವಾಗಿತ್ತು. ಹಿಂತಾ ದೊಡ್ಡ ದುನಿಯಾದಲ್ಲಿ ಅಂಗೈಯಷ್ಟ ಆಸ್ತಿ ತಾನಾಗಲಿ ತನ್ನ ಹಿರಿಕರಾಗಲಿ ಮಾಡಿರಲಿಲ್ಲ. ದೇವಿ ಪೂಜೆ ಒಂದೇ ಅವನ ಆಸ್ತಿ. ಅದನ್ನೇ ನಂಬಿ ಇಡೀ ಕುಟಂಬದ ನೊಗಾ ಅವನ ಹೆಗಲೇರಿತ್ತು. ಇರುವ ತನ್ನ ಒಬ್ಬನೇ ಮಗಾ ಸುಹಾಸನೂ ಇದೇ ಚಾಕರಿ ಮುಂದ ವರಸ್ಕೊಂಡ ಹೋಗಬೇಕೆಂದು ಅಂವನಿಗೆ ಹೆಚ್ಚು ಸಾಲಿ ಕಲಿಸಿರಲಿಲ್ಲ. ಬಾಳ ಸಾಲಿ ಕಲತು ನೌಕರಿ ಗಿಕರಿ ಅಂತ ಹಟಾ ಹಿಡದ್ರ ಕುಂತ್ರೆ ಹೇಗೆಂಬ ಭಯ ಅವನನ್ನು ಸಾಕಷ್ಟು ಕಾಡಿತ್ತು. ಚಿಕ್ಕವನಿದ್ದಾಗಲೇ ಅಪ್ಪನ ಪೂಜಾ ವಿಧಿ-ವಿಧಾನ ಸುಹಾಸ ತಕ್ಕಮಟ್ಟಿಗೆ ಅರತಿದ್ದ. ಮಂತ್ರ, ಸ್ಲೋಕಾ ಪಟಪಟನೇ ಮುತ್ತು ಉದರಿಸಿದಂತೆ ಹೇಳುತಿದ್ದ. ಮಗನ ಪಾಂಡಿತ್ಯಕ್ಕೆ ಬೆನ್ನಪ್ಪ ಬೆರಗಾಗಿ ಮನದೊಳಗೆ ಖುಷಿ ಅನುಭವಿಸುತಿದ್ದ.
ದೇವಿಯನ್ನೇ ನಂಬಿ ಬದುಕು ಸಾಗಿಸುವ ಅವನ ಆರೋಗ್ಯದಲ್ಲಿ ಅದೆಕೋ ಏರುಪೇರು ಕಾಣತೋಡಗಿತು. ಮಟ್ಟಿದರೆ ಮೈ ಕೆಂಡ ಹಿಡಿದ ಅನುಭವ. ಅದು ಬೇರೆ ರಾತ್ರಿ ಹೊತ್ತು. ಗಂಡನ ತ್ರಾಸ ನೋಡಲಾಗದೆ ಕಸ್ತೂರಿಯ ಕಣ್ಣು ವದ್ದೆಯಾಗಿದ್ದವು. ಸುಹಾಸ ಆಟ ಆಡಿ ದನಿದ ಕಾರಣಕ್ಕೋ ಏನೋ ನಿದ್ರೆಗೆ ಜಾರಿದ್ದ. ಅವ್ವನ ಕಣ್ಣೀರು, ಅಪ್ಪನ ಪ್ರಾಣ ಸಂಕಟ ಅವನ ಲೋಕದ ಹೊರಗಿದ್ದವರಂತೆ ಮಲಗಿದ್ದ.
ಜ್ವರಾ ಬಾಳ ಬಂದಾವ ರೀ, ಹಿಂತಾ ಜ್ವರಾ ನಿಮಗ ಬಂದದ್ದು ನಾ ಕಂಡಿರಲಿಲ್ಲ. ಆಗಾಗ ಹಿಂತಾ ಅಪರಾತ್ರ್ಯಾಗ ದವಾಖಾನ್ಯಾಗ ಯಾವ ದೆವ್ವನೂ ಇರುದಿಲ್ಲ. ನಮ್ಮ ಹನಿಬರಕ್ಕ ಹಿಂತಾ ಹೊತ್ತನ್ಯಾಗ ಬರಬೇಕಾ ಈ ಹಾಟ್ಯಾನ ಜ್ವರಾ, ಯಾವ ಜನ್ಮದಾಗ ಮಾಡಿದ ಕರ್ಮೋ, ಅಂತ ಕಣ್ಣೀರ ವರಸುತ್ತ, ನೀವ ಸಮಾದಾನಾ ತಗೊರೀ, ಗಾಬರಿ ಆಗಿ ನನ್ನೂ ಗಾಬರಿ ಮಾಡಬ್ಯಾಡರಿ. ಹೊತ್ತ ಏರಿದ ಮ್ಯಾಲ ಬೂದ್ಯಾಳ ಡಾಕ್ಟರ ಕಡೆ ಹೋಗಿ ತೋರಸ್ಕೊಂಡ ಬರೂನ ಅಂತ ಕಸ್ತೂರಿ ಗಂಡನ ಹನಿಗೆ ತನ್ನೀರ ಪಟ್ಟಿಹಾಕುತ್ತ ಚಿಕ್ಕಮಗುವಿಗೆ ಸಮಾದಾನಮಾಡಿದಂಗ ಗಂಡನಿಗೆ ಸಮಾದಾನದ ಮಾತ ಹೇಳತಾ ಅರಗಳಿಗಿಗೊಮ್ಮೆ ಹನಿಗೆ ತನ್ನೀರ ಪಟ್ಟಿ ಹಕ್ಕೋತ ಬೆಳಕ ಹರಸಿದಳು.
ಮೂಡಣದಾಗಿನ ಸೂರ್ಯಾ ಆಕಳಸ್ಕೋತ ಮುಗಲ ಮ್ಯಾಕ ಏರಿ ಬರುಹೋತ್ತಿಗೆ ಬೆನ್ನಪ್ಪನ ಜ್ವರಾನೂ ಅವನ ನೆತ್ತಿಗೆರಿತ್ತು. ಗಂಡ ತೇಲಗಣ್ಣ ಹಾಕೂದ ಗಮನಿಸಿದ ಕಸ್ತೂರಿ ಲಬೋ.. ಲಬೋ ಹೊಯ್ಕೊಂಡಾಗ, ಸುತ್ತ ಮುತ್ತ ಇದ್ದ ಮಂದಿ ಗಾಬರಿಗೆಟ್ಟ ಏನಾತ ಏನಾತ ಅಂತ ಧಡಾಯಿಸಿ ಬೆನ್ನಪ್ಪನ ಮನಿ ಮುಂದ ಕೂಡಿದರ. ಕುಲಕರ್ಣಿ ಅಪ್ಪಗೋಳ ಜೀಪ ಶರವೇಗದಲ್ಲಿ ಬಂದು ಮನಿಅಂಗಳದಾಗ ನಿಂತಾಗ, ಕೂಡಿದ ಮಂದಿ ಅಮಾತ ಬೆನ್ನಪ್ಪನ ಮ್ಯಾಲ ಎತ್ತಿ ಜೀಪನ್ಯಾಗ ಹಾಕಿ ಕಣ್ಣಿಗೆ ಕಾಣದಷ್ಟು ಸ್ಪೀಡಾಗಿ ಹೋದ್ರು ಪ್ರಯೋಜನಕ್ಕ ಬರಲಿಲ್ಲ. ಕಸ್ತೂರಿಗೆ ಗಂಡನ ಸಾವು ಕನ್ನಿಗೆ ಕಟ್ಟಿ ಇಡೀ ತನ್ನ ಬದುಕೇ ಕೊಚ್ಚಿ ಹೋಯಿತೆಂದು ಅಸಹಾಕಳಾಗಿ ಕಣ್ಣೀರಿಡುತ್ತ ಸಂಕಟದ ವೈಭವ ಅನುಭವಿಸಿದಳು.ದೇವಿಗೆ ಬೆನ್ನಪ್ಪನಿಂದ ಪೂಜಾ ಮಾಡಸ್ಕೊಳ್ಳುದ ಬೇಸರಾಗಿಯೋ, ಇಲ್ಲವೆ ಹೊಸಾ ಕುದರಿ ಸುಹಾಸನ ಹತ್ತು ಆಸೆಯಾಗಿಯೋ ದೇವಿ ತನ್ನ ಹಳೆ ಕುದರಿ ಕೈಬಿಟ್ಟಳು ಎಂದು ದೇವೂರ ಹಳ್ಳಿ ಮಂದಿ ತರ್ಕಿಸಿದರು.
***
ಅಪ್ಪನ ಸಾವು, ಅಮ್ಮನ ನೋವು ಅರಿತುಕೊಳ್ಳುವಷ್ಟು ತಿಳುವಳಿಕೆ ಬಾಲಕ ಸುಹಾಸನಿಗೆ ಇರವುದರಿಂದಲೇ ಅವನು ದೇವೂರ ಹಳ್ಳಿ ಮಂದಿ ಮನಸನ್ಯಾಗ ಗಚ್ಚಿಗೊಂಡಿದ್ದ. ಅಪ್ಪನಂತೆ ದೇವಿಗೆ ತಾನೂ ಪೂಜಾ ಪುನಸ್ಕಾರ ಮಾಡಿ ದೇವಿನೂ ಹೌದ ಹೌದ ಅನ್ನುವಂಗ ತನ್ನ ಚಾಕರಿ ನಿಭಾಯಿಸ್ತಿದ್ದ. ಅದ್ಯಾಕೋ ಏನೋ ಸುಹಾಸ ಪೂಜಾಮಾಡುವಾಗ ಭಕ್ತರು ಕಿಕ್ಕಿರಿದು ಗುಡಿತುಂಬುವಂಗ ಸೇರ್ತಿದ್ದರು.. ಸುಹಾಸ ದೇವಿ ಪೂಜಾ ಬಾಳ ಚಂದ ಮಾಡತಾನ ಅಂತ ಬಂದ ಭಕ್ತರ ಬಾಯಿಯಿಂದ ಮಾತು ಉದರ್ತಿದ್ದು. ಕಾಯ ಹೊಳಕಿ, ಚಿಲ್ಲರಾ ಒಂದು ಎರಡು ದೇವರಮುಂದ ಇಟ್ಟ ಹೋದ ದುಡ್ಡು, ಎಡಿ-ಬಾನ ಅಂತ ತಂದಿದ್ದ ಪ್ರಸಾದ ಅನ್ನಾ, ತುಪ್ಪಾ, ಎಲ್ಲವೂ ಸಾಕಾಗುವಂಗ ಸಿಗತಿತ್ತು. ಹಿಂಗಾಗಿ ತೊಂದರಿ ತಾಪತ್ತರಿ ಅನ್ನುದ ಗೊತ್ತಾಗದಂಗ ಅವನ ಬದಕು ಸಾಗತಿತ್ತು.
ಉಂಡು ಆಡು ವಯಸ್ಸನ್ಯಾಗ ಮಗಾ ತಮ್ಮ ಮನೆತನದ ತಲೆತಲಾತಂತರದಿಂದ ಬಂದ ಚಾಕರಿ ನಿಯತ್ತನಿಂದ ನಾಕ ಮಂದಿ ಮೆಚ್ಚುವಂಗ ಮಾಡೂದ ನೋಡಿ ಕಸ್ತೂರಿ ಹಿರಿ ಹಿರಿ ಹಿಗ್ಗಿದಳು. ಊರಮಂದಿ ಅವರಪ್ಪನ ಏಟೂ ಬಿಟ್ಟಿಲ್ಲ ನೋಡ ಈ ತುಂಟ ಅಂತ ಆಗಾಗ ಮಾತಾಡಿ ಸುಹಾಸನ ಬುದ್ದಿವಂತಿಕೆ ಗುಣಗಾಣ, ಅವನ ಪೂಜಾ ವಿಧಾನ ಯಾರಾದ್ರೂ ಪ್ರಶಂಶಿದರೆ ಕಸ್ತೂರಿಯ ಕಣ್ಣು ತುಂಬಿಕೊಳ್ಳುತಿದ್ದವು.ಆದ್ರೆ ದೇವಿಯ ಎಡವಟ್ಟಿನಿಂದ ಅವರ ಬದುಕೇ ಸುಡಗಾಡವಾಗುತ್ತದೆ ಅನ್ನುದು ಯಾರೂ ಅರಿತಿರಲಿಲ್ಲ. ಸೇವೆ ಮಾಡುವವರನ್ನೇ ದೇವಿ ಸಂಹರಿಸುವ ಕೃತ್ಯ ವಿಭಿನ್ನವಾಗಿತ್ತು.
ದೇವರ ಹಳ್ಳಿಯ ಜನರು ದ್ಯಾಮವ್ವ, ದುರ್ಗವ್ವ, ಹನಮಪ್ಪ ಈ ರೀತಿ ಅನೇಕ ದೇವಾನ ದೇವತಿಗೆ ಊರಾಗ ಆಶ್ರಯ ನೀಡಿದ್ದರು. ಈ ಎಲ್ಲ ದೇವತಿಗಿಂತ ಹೆಚ್ಚು ಪೇಮಸ್ ಆದವಳಂದರೆ ಲಕ್ಷ್ಮೀದೇವಿ. ಲಕ್ಷ್ಮೀ ಅನ್ನುವ ಬದಲಿಗೆ ದೇವೂರ ಜನರು ರೂಡಿಯಿಂದ ಲಕ್ಕವ್ವ ಅಂತ ಕರೆಯುತಿದ್ದರು.
ಹಳೆಯ ಕಾಲದ ಗುಡಿಯಾಗಿದ್ದರಿಂದ ಹೇಳಿಕೊಳ್ಳುವಷ್ಟೇನೂ ಸುಂದರವಗಿರಲಿಲ್ಲ. ಗುಡಿಯ ಸುತ್ತಲೂ ದೈತ್ಯಾಕಾರದ ಬೇವಿನ ಮರಗಳು, ಮರದಲ್ಲಿ ಅನೇಕ ಪಕ್ಷಿಗಳು ಗುಡುಕಟ್ಟಿ ಬದುಕು ನಡಿಸುತಿದ್ದವು. ಅವುಗಳು ಮಾಡುವ ನಿನಾದ ಕೇಳುತ್ತ ದೇವಿ ತಣ್ಣಗೆ ಗುಡಿಯಲ್ಲಿ ತೂಕಡಿಸುವಂತೆ ತೋರುತಿದ್ದಳು. ಮರದ ನೇರಳಲ್ಲಿ ಸಾಕಷ್ಟು ಬಾಲಕರು ಆಟ ಆಡುತ್ತ ಕೆ ಕೆ ಹಾಕುತಿದ್ದರು. ಬಾಲಕ ಸುಹಾಸನೂ ಹುಡುಗರೊಂದಿಗೆ ಆಟದಲ್ಲಿ ತಲ್ಲಿನನಾಗುತಿದ್ದ.
ಅದೊಂದು ದಿನ ಸೂರ್ಯಾ ಹುಟ್ಟು ಮೊದಲ ಎದ್ದ , ಹೊಳಿಗೆ ಹೋಗಿ, ಮಡಿ ಸ್ನಾನಾ ಮಾಡಿ, ದೇವಿ ಪೂಜಾಕ ಅಂತ ಒಂದ ತುಂಬಗೊಡಾ ತುಂಬಕೊಂಡ ಅಂವಸ್ರಾ ಮಾಡಿ ಹೊಳಿ ದಂಡಿ ಹತ್ತಿದ. ತುದಿಗೆ ಬಂದು ತಿರುಗಿ ಗಂಗಾದೇವಿಗೆ ಕೈಮುಗಿಯಬೇಕೆಂದು ಅನಸಿದಾಗ ಹೊಳೆಯತ್ತ ನೋಟ ಹರಿಬಿಟ್ಟ. ಅನೇಕ ಜೀವ ರಾಶಿಗಳ ಮಲಿನತೆ ತೊಳೆದು, ಮೂಢಜನರು ಮಾಡಿದ ಹೊಲಸು, ಕೊಳಕು ಹೊತ್ತು, ಗಂಗಾದೇವಿ ಶಾಂತವಾಗಿ ಮುನ್ನಡೆಯುತಿದ್ದಳು. ಎಂದಿನಂತೆ ಗಂಗಾದೇವಿಗೆ ನಮನ ಅಪರ್ಿಸಿ ದೇವಿಗುಡಿಗೆ ಬರುವಾಗದಾರಿಯಲ್ಲಿಯೇ ಇರುವ ಕುಲಕಣರ್ಿ ಅಪ್ಪಗೊಳ ತೋಟದಲ್ಲಿ ಘಮಗುಡುವ ಮಲ್ಲಿಗೆ, ಸೇವಂತಿಗೆ, ಹೂಗಳನ್ನು ದೇವಿಯ ಮುಡಿಗೇರಿಸಲು ತರೊದನ್ನು ಮರಿಯಲಿಲ್ಲ.ಅದೇ ಹೊತ್ತಿಗೆ ಮೂಡಣದ ಸೂರ್ಯಾ ಬೆಟ್ಟದ ತುದಿಯಲ್ಲಿ ಇನುಕಿದ.
ಸುಹಾಸ ಬರುವುದರೊಳಗಾಗಿ ಅವರವ್ವ ಕಸ್ತೂರಿ ಗುಡಿಯ ಸುತ್ತಮುತ್ತ ಕಸ ಗೂಡಿಸಿ ಅಂದಗೊಳಸಿ ಮನಿಗೆ ಮರಳಿದ್ದಳು. ನದಿ ಸ್ನಾನ ಮಾಡಿ ಮಡಿ ಉಟ್ಟು, ದೇವರ ಪೂಜೆಗೆಂದೇ ತಂದ ತುಂಬಿದಕೊಡಾ, ಹೂ ಬುಟ್ಟಿ ಕೆಳಗಿಟ್ಟು, ದೇವಿಯ ಗರ್ಭಗುಡಿ ಬಾಗಿಲನ್ನು ನಿದಾನಕ್ಕೆ ತಗೆದು, ಮಂತ್ರ ಪಟಿಸುತ್ತ ದೇವಿಯತ್ತ ಮುಕದೋರಿ ನಮಸ್ಕರಿಸಲು ಹೋದ ಬಾಲಕ ಸುಹಾಸ ದೇವಿಯ ಅವತಾರ ನೋಡಿ ಬೆರಗಾದ, ಲಕ್ಷ್ಮೀ ದೇವಿ ಎದೆಯಲ್ಲಿ ಸಾಕ್ಷಾತ: ಹನುಮಂತನ ರೂಪ ಮೂಡಿತ್ತು. ದೇವಿಯ ವಿಚಿತ್ರ ರೂಪ ಕಂಡು ಹೆದರಿ ನಿಂತ ಜಾಗದಲ್ಲಿಯೇ ಕುಷಿದು ಬಿದ್ದು ಮೂಛರ್ೆ ಹೋದ.
ದೇವೂರ ಗೌಡರ ಮಗಳು ಮಗುವಾಗಲೆಂದು ಲಕ್ಕಮ್ಮನಿಗೆ ಹರಕೆ ಹೊತ್ತುಕೊಂಡಿದ್ದಳು. ಹೀಗಾಗಿ ಪ್ರತಿ ದಿನಾ ಬೆಳಗಿನ ಹೊತ್ತು ಲಕ್ಕಮ್ಮನಿಗೆ ದರಶನಕೆಂದು ಊದಬತ್ತಿ, ಕಾಯಿ, ಕಪರ್ೂರಾ ಹಿಡಿದು ಕೊಂಡು ಮನದಲ್ಲಿ ದೇವಿಯನ್ನು ದ್ಯಾನಿಸುತ್ತ ಗುಡಿ ಮುಟ್ಟಿದಾಗ ದೇವಿಯ ರೂಪ, ಸುಹಾಸನ ಸ್ಥಿತಿ ಕಂಡು ಪರಮಾಶ್ಚರ್ಯಗೊಂಡು ಬಾಯಿ ಬಡಕೊಂಡಾಗ ಸುತ್ತ ಮುತ್ತಿದ್ದ ಮಂದಿ ಚಿಕ್ಕ ಪೂಜಾರಿ ಇಕಿಗೇನಾರಾ ಆವಾಂತರ ಮಾಡಿದನೆನೋ ಅಂತ ಲಗುಬಗೆಯಿಂದ ದಾವಿಸಿದರೇ ಅವರಿಗೂ ಒಂದು ರೀತಿ ಬೆರಗು.
ದೇವಿಯ ಪವಾಡಕ್ಕೇ ಇಡೀ ಊರಿಗೆ ಊರೆ ಬಾಯ್ ಮೇಲೆ ಕೈ ಇಟ್ಟುಕೊಂಡಿತು. ಸುತ್ತಮುತ್ತಲಿನ ಹಳ್ಳಿಗಳಿಗೂ ಈ ವಿಷಯ ಗೋತ್ತಾಗಿ ‘ಜನ ಮರಳೊ ಜ್ಯಾತ್ರೆ ಮರಳೊ’ ಅನ್ನುಹಾಗೆ ಆಯಿತು. ಸುದ್ದಿ ತಿಳದ ಪತ್ರಿಕೆ ಮಾದ್ಯಮದವರು, ಟಿ ವ್ಹಿ ಚನಲದವರು ಎದ್ದು ಬಿದ್ದು ಓಡಿ ಬಂದು ಸಾಕಾಗುವಷ್ಡು ಉಪ್ಪು ಕಾರ ಸವರಿ ವಿಷಯವನ್ನು ಹಿಗ್ಗಿಸಿ ಕುಗ್ಗಿಸಿ ವಾರನೂಗಟ್ಟಲೇ ರಂಪಾಟ ಮಾಡಿದಾಗ ಈ ಸುದ್ದಿ ಮೆಲ್ಲಕ ಸರಕಾರದ ಕಿವಿ ಹೊಕ್ಕು ಹೊಸಾ ರೂಪವೇ ಪಡೆಯಿತು.
ದೇವಿಯನ್ನು ಕೆತ್ತನೆ ಮಾಡಿ ಮೂರ್ತ ರೂಪ ಕೊಟ್ಟ ಶಿಲ್ಪಿ ತನ್ನ ಕೈ ಚಳಕದಿಂದ ಸೂಕ್ಷಮವಾಗಿ ಹೊಸಬಗೆಯ ಆಕಾರ ಕೊಟ್ಟ ಕಾರಣ, ದಿನಾಲೂ ನೀರು, ಎಣ್ಣೆ, ತುಪ್ಪ ಹಚ್ಚಿ ದೇವಿಯನ್ನು ತೊಳೆಯುದರಿಂದ ಶಿಲ್ಪಿಯ ನಾಜೂಕು ಸ್ಪಷ್ಟವಾಗಿ ಕಂಡದ್ದು ಯಾರಿಗೂ ಅರ್ಥವೇ ಆಗಲಿಲ್ಲ. ದೊಡ್ಡ ಚಚರ್ೆ, ತಕರಾರಕ್ಕೆ ಒಳಗಾದ ಆ ಗುಡಿಯನ್ನು ಸರಕಾರ ವಶಪಡಿಸಿಕೊಂಡು, ಅದಕ್ಕೆ ಸರಕಾರದಿಂದ ನೇಮಕಗೊಂಡ ಪ್ರತಿಷ್ಟಿತ ಪೂಜಾರಿಯನ್ನು ನೇಮಿಸಿ, ಗುಡಿಯ ಕಾವಲಿಗೆ ಪೋಲಿಸ ಪಡೆಯ ರಕ್ಷಣೆ ಸದಾಕಾಲ ಮಂಜೂರ ಮಾಡಿತು.
ದೇವಿಯ ಮಹಿಮೆ ನಾಡಿನ ತುಂಬಾ ಮನೆಮಾತಾಗಿ, ದೇವಿಯ ಹೆಸರಲ್ಲಿ ಅನೇಕ ಲೇಖಕರು ಸಂಸೋಧನೆಯ ಪುಸ್ತಕ ಬರೆದು ಮಂಡಿಸಿ ದುಡ್ಡುಮಾಡಿಕೊಂಡರು. ಸರಕಾರ ತನ್ನ ಕಜಾನೇ ತುಂಬಿ ಕೊಂಡಿತು. ಬರಬರುತ್ತ ದೇವಿಗಿಂತ ದೇವಿಯ ಎದೆಯಲ್ಲಿ ಅರಳಿದ ಹನುಮಂತನ ಮಹಿಮೆ ಹೆಚ್ಚಾಗುತ್ತಾ ಹೋಯಿತು. ವರ್ಷಕ್ಕೆ ದೊಡ್ಡ ಪ್ರಮಾಣದಲ್ಲಿ ಉತ್ಸವ ನಡೆಯುತಿತ್ತು. ನಾಡಿನ ಮೂಲೆ ಮೂಲೆಯಿಂದ ಬರುತಿದ್ದ ಹೆಸರಾಂತ ರಾಜಕಾರಣಿಗಳು, ನಟ-ನಟಿಯರು, ಪರಮಪೂಜ್ಯರು ಬಂದಾಗಂತು ಪೋಲಿಸರು ಹುಚ್ಚು ನಾಯಿಯಂತೆ ಅಲೆಯುತಿದ್ದರು, ಎಲ್ಲಂದರಲ್ಲಿ ಬೆಳಕಿನ ಬುಡ್ಡಿ ಹಿಡಿದು ವಿಡಿಯೋ ಮಾಡುತಿದ್ದ ಟಿ. ವ್ಹಿ ಚನಲ್ಲದವರು, ಕೈಯಲ್ಲೊಂದು ಕಾಗದ ಪೆನ್ನು ಹಿಡಿದು ಬಂದ ಕುಳಗಳನ್ನು ಅದು ಇದು ವಿಷಯ ಕೆದರಿ ಗಬ್ಬು ಹಿಡಿಸುವ ಪತ್ತರಿಕೆಯವರ ಹಾವಳಿ ಹೇಳತಿರದು. ಹೀಗಾಗಿ ದೇವೂರ ಹಳ್ಳಿ ದಿನಾಲೂ ಒಂದಿಲ್ಲ ಒಂದು ನೆವಾ ಮಾಡಿ ಪತ್ರಿಕೆಯಲ್ಲಿ ಸುದ್ದಿಯಾಗುವ ಸಂಭಯ ಹೆಚ್ಚಿಗಿರುತಿತ್ತು.
***
ತಲೆತಲಾಂತರದಿಂದ ದೇವಿ ಪೂಜೆ ಮಾಡುತ್ತ ಬಂದಿದ್ದ ಬಾಲಕ ಸುಹಾನಿಗೆ ಊರಿನವರಾಗಲಿ, ಸರಕಾರದವರಾಗಲಿ, ಗೆನುದ್ದ ಇದ್ದ ವಿಷಯ ಮಾರುದ್ದ ಮಾಡುವ ಪತ್ರ ಕರ್ತರಾಗಲಿ, ಅಂಗೈ ವಿಷಯವನ್ನು ಮುಂಗೈ ವರೆಗೆ ಎಳೆಯುವ ಟಿ. ವ್ಹಿ ಮಾದ್ಯಮದವರಾಗಲಿ ಗಮನಕ್ಕೆ ತಗಿದು ಕೊಳ್ಳದೆ ತಮ್ಮದೇ ಬಡಿಯಾರದಲ್ಲಿ ಮುಳಗಿದ್ದರು. ಗುಡಿಯಲ್ಲಿ ಕುಳಿತು ಪವಾಡು ಹುಟ್ಟು ಹಾಕಿದ ಸಾಕ್ಷಾತ: ದೇವಿವೇ ಕ್ಯಾರೆ ಅನ್ನದೇ ತನ್ನ ವೈಭವದಲ್ಲಿ ಭೀಗುತಿದ್ದಳು.
ಬಾಲಕ ಸುಹಾಸ ತನ್ನ ತಾಯಿವಡಗೂಡಿ ಆ ಇಳಿ ಸಂಜೆ ದೇವೂರಿನಿಂದ ಹೋಗವುವಾಗ ದೇವಿಗುಡಿಯ ಮೇಲಿನ ಮೈಕು ಕೇ ಕೇ ಹಾಕಿ ನಗುತಿತ್ತು. ಅದರ ದನಿ ಕೇಳುತ್ತ ಜನರೇಲ್ಲರೂ ಮೈಮರತಿದ್ದರು.
***







0 Comments