ಅತಿಸೃಷ್ಟಿ – ಪ್ರತಿದೃಷ್ಟಿ
-ಡಾ. ದೇವದಾಸ ಕಳಸದ
ಧಾರವಾಡದ ಹೆಮ್ಮೆಯ ಪ್ರತೀಕ ‘ಕರ್ನಾಟಕ ವಿದ್ಯಾವರ್ಧಕ ಸಂಘ’. ಅದು ಇತ್ತೀಚಲಾಗಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಸಹಯೋಗದಲ್ಲಿ ನಾಟಕೋತ್ಸವವನ್ನು ಹಮ್ಮಿಕೊಂಡಿತ್ತು. ಆ ಸಂದರ್ಭದಲ್ಲಿ ಡಾ. ಕಲಬುರ್ಗಿಯವರ ‘ಖರೇಖರೆ ಸಂಗ್ಯಾಬಾಳ್ಯಾ’ ನಾಟಕ ಪ್ರದರ್ಶಿಸಲ್ಪಟ್ಟಿತು. ಧಾರವಾಡದ ‘ರಂಗಪರಿಸರ’ ತಂಡ ಇದನ್ನು ಅಚ್ಚುಕಟ್ಟಾಗಿಯೂ ಪ್ರಯೋಗಿಸಿತು.
1850 ರ ಆಸುಪಾಸಿನಲ್ಲಿ ‘ಬೈಲಹೊಂಗಲ’ ಒಂದು ಹಳ್ಳಿ. ಅಲ್ಲಿಯ ಒಂದು ಮನೆತನದ ಘಟನೆಯನ್ನೇ ಆಧರಿಸಿ ಪತ್ತಾರ ಮಾಸ್ತರ ಎಂಬವರು ‘ಸಂಗ್ಯಾಬಾಳ್ಯಾ’ ಎಂಬ ಆಟವನ್ನು ಸೃಷ್ಟಿಸಿ ಆಡಿಸಿದರು ಎಂಬುದು ಕೇಳಿದ-ಓದಿದ ಸುದ್ದಿ. ಅದು ನಾಡಿನಾದ್ಯಂತ ಸಹಸ್ರಾರು ಪ್ರದರ್ಶನ ಕಂಡಿದೆ-ಕಾಣುತ್ತಿದೆ.
ಅದರಲ್ಲಿ – ಗಂಗಿಯ ಗಂಡ ಈರಪ್ಪ. ಆತನ ಗೆಳೆಯ ಸಂಗ್ಯಾ ಗಂಗಿಯ ರೂಪಕ್ಕೆ ಮರುಳಾಗುತ್ತಾನೆ. ಅವಳನ್ನು ಒಲಿಸಿಕೊಳ್ಳಲು ತನ್ನ ಇನ್ನೋರ್ವ ಮಿತ್ರ ಬಾಳ್ಯಾನಲ್ಲಿ ಗೋಗರೆಯುತ್ತಾನೆ. ಒಡನಾಟಕ್ಕೆ ಸಿಕ್ಕ ಪರಮ್ಮನೆಂಬವಳ ಸಹಾಯವೂ ದೊರೆಯುತ್ತದೆ. ಅಂತೂ ಪರಸ್ಪರ ಆಕ್ರಮ ಅನುರಕ್ತರಾಗುತ್ತಾರೆ. ಈ ಸಂಬಂಧ ತಿಳಿದು ಕಂಗೆಟ್ಟ ಈರಪ್ಪ ಗಂಗಿಯನ್ನು ಧಿಕ್ಕರಿಸಿ ತವರಿಗಟ್ಟುತ್ತಾನೆ. ತಮ್ಮಂದಿರಾದ ವಿರೂಪಾಕ್ಷ-ಬಸವಂತರಿಂದ ಸಂಗ್ಯಾನ ಕೊಲೆಯಾಗುತ್ತದೆ. ಇದು ಸಾಮಾಜಿಕರಿಗೊಂದು ನೀತಿಯ ಅರಿವು ಮೂಡಿಸುವ ಹಾಗೂ ನೀತಿಬಾಹೀರರಿಗೆ ಎಂಥ ಶಿಕ್ಷೆ ಕಾದಿರುತ್ತದೆ ಎನ್ನುವಲ್ಲಿ ‘ಎಚ್ಚರಿಕೆಪ್ರಧಾನ’. ಇದನ್ನು ಇಡೀ ಉತ್ತರ ಕನರ್ಾಟಕವೇ ಒಪ್ಪಿಕೊಂಡ ಕಥೆ.
ಇನ್ನು, ‘ಖರೇ ಖರೆ ಸಂಗ್ಯಾ-ಬಾಳ್ಯಾ’ ದಲ್ಲಿ- ಪತ್ತಾರನ ಪಾತ್ರಸೃಷ್ಟಿ ವಿಶೇಷ. ಈತನೇ ಗಂಗಾಳಲ್ಲಿ ಮನಸ್ಸು ಮಾಡುತ್ತಾನೆ. ಪರಮ್ಮನ ಸಹಾಯದಿಂದಲೂ ಅವಳು ತನಗೆ ದಕ್ಕದಿದ್ದಾಗ, ಸಂಗಣ್ಣನ ಜೊತೆ ಅವಳ ಸಂಬಂಧ ಕಲ್ಪಿಸಿ ಸುದ್ದಿ ಮಾಡುತ್ತಾನೆ. ಇದನ್ನು ನಂಬಿದ ಈರಪ್ಪ ಕಂಗಾಲಾಗುತ್ತಾನೆ. ಗಂಗಾಳ ತಾಳಿ ಹರಿದು ತವರಿಗಟ್ಟುತ್ತಾನೆ. ತಮ್ಮಂದಿರೊಂದಿಗೆ ಗೆಳೆಯ ಸಂಗಣ್ಣನ ಕೊಲೆಗೈಯುತ್ತಾನೆ. ಇದರಲ್ಲೂ ನೀತಿಯುಂಟು. ಅದುವೇ – ಪತ್ತಾರನಂಥ ನೀತಿ ಬಾಹೀರರನ್ನೂ ಸಮಾಜದಲ್ಲಿ ನಿರುಂಬಳವಾಗಿ ಬದುಕಬಿಡುವಿಕೆ ಹಾಗೂ ಸಂಗಣ್ಣನಂಥ ಅಮಾಯಕರ ಕೊಲೆ ಮತ್ತು ಈರಪ್ಪನಂಥವರ ಗೆಳೆತನವೇ ಗಂಡಾಂತರದ ಅಪರಾಧ ಎಂಬುದೇ ‘ನೀತಿಪ್ರಧಾನ’ !
ಇಲ್ಲಿ, ಮೂಲ ಕಥಾವಸ್ತು ಸುಳ್ಳಿನಿಂದ ಕೂಡಿದ್ದೆಂಬುದು ಪ್ರಸ್ತುತ ಲೇಖಕರ ಸ್ಪಷ್ಟ ನಿಲುವು. ಅಂತೆಲೇ ಅದರ ಐತಿಹ್ಯವನ್ನೇ ತಿರುವುಮರುವು ಮಾಡಿ ‘ಖರೇ ಖರೆ ಸಂಗ್ಯಾ-ಬಾಳ್ಯಾ’ ಸೃಷ್ಟಿಗೊಂಡದ್ದೂ ಸ್ಪಷ್ಟ. ಆದರೆ, ಆಗಿನ ಹಳ್ಳಿಯ ವಾತಾವರಣದ ಮನೆ-ಮನೆಯ ಗೋಡೆಗೂ ಕಿವಿ ಇರುತ್ತಿದ್ದವೆಂಬುದು ಲೋಕಾನುಭವ. ಹೀಗಿದ್ದಾಗ್ಯೂ ಸತ್ಯ ಮರೆಮಾಚಲು ಸಾಧ್ಯವೆ? ಎಂಬುದು ಯಕ್ಷ ಪ್ರಶ್ನೆ! ಒಟ್ಟಾರೆ, ಈ ಸೃಷ್ಟಿಯ ಒಳ ಹಿಕಮತ್ತೇನು? ಎಂಬುದು ಮೂಲಭೂತ ಪ್ರಶ್ನೆಯಾಗಿ ಕಾಡಿದ್ದೂ ಒಂದು ಇತಿಹಾಸ! ಅಲ್ಲಿ; ನಾಟಕಕಾರ ಪತ್ತಾರ ಮಾಸ್ತರರ ಕಾರಣದಿಂದ ಒಂದು ಕುಟುಂಬಕ್ಕೆ ಅಪಚಾರವಾಗಿದೆ ಎಂದೇ ಇಟ್ಟುಕೊಂಡರೂ, ಇಲ್ಲಿ; ಅದೇ ಪತ್ತಾರನ ಸಮಾಜಕ್ಕಾಗುವ ಪರ್ಯಾಯಾಘಾತವನ್ನು ಸೌಜನ್ಯಾಲೋಚನೆಗೆ ಒಳಪಡಿಸದೆ ಮುಂದುವರೆದ ಇಂಥ ಗೊಂದಲದ ಸಾಹಿತ್ಯಸೃಷ್ಟಿ ಬೇಕಿತ್ತೆ? ಅನ್ನಿಸದಿರದು.
ಬೆಕ್ಕಿಗೆ ನೆಲುವಿನ ಮೇಲಿದ್ದ ಹಾಲನ್ನು ಸುಲಭವಾಗಿ ಕುಡಿಯಲು ಬಾರದೇ ಇದ್ದಾಗ ಅದನ್ನು ಉಳ್ಳಿಸಿಯಾದರೂ ಹಾಳುಮಾಡುವ ದುಬರ್ುದ್ಧಿಯ ಕಾರಣದಿಂದಾಗಿ, ಪತ್ತಾರನೆಂಬುವವನ ಶೇಡಿನ ಪ್ರತಿಫಲದ ‘ಸಂಗ್ಯಾ ಬಾಳ್ಯಾ’ ಗೆ ಪ್ರತಿಯಾಗಿ ‘ಖರೆ ಖರೆ ಸಂಗ್ಯಾಬಾಳ್ಯಾ’ ಹುಟ್ಟಿಕೊಳ್ಳುವಲ್ಲಿ ಸುಮಾರು ನೂರೈವತ್ತು ವರ್ಷಗಳು ಬೇಕಾಯಿತೆ? ಇಲ್ಲಿಯವರೆಗೂ ಗಂಗೆಯ ಶೀಲವನ್ನು ವೈಭವೀಕರಿಸಿ ಪೋಷಿಸುವ-ಘೋಷಿಸುವ ಅವಳ ವಂಶಸ್ತನಾಗಲೀ, ಇತಿಹಾಸಕಾರನಾಗಲೀ, ಸಾಹಿತಿಯಾಗಲೀ, ನಾಟಕಕಾರನಾಗಲೀ ಒಬ್ಬನೂ ಹುಟ್ಟದೇ ಇದ್ದುದು ಆಶ್ಚರ್ಯವಲ್ಲವೇ? ಎಂಬ ಸಂದೇಹ ಸಹಜವೆ.
ಇಲ್ಲಿ; ಗರತಿಯ ಪಟ್ಟಕಟ್ಟಿಸಿಕೊಂಡ ಗಂಗಾಳ ಭಾವದಲ್ಲಿ ಶೀಲನಿಷ್ಠ ಎದೆಗಾರಿಕೆ ಬೇಡವೆ? ಕಂಠದವರೆಗೆ ಸಂಕಟ ಬಂದಾಗ್ಯೂ ಪತ್ತಾರನ ವಿಷಯ ಲಂಪಟತನವನ್ನೂ, ಪರಮ್ಮನ ಕುಂಟಲಗಿತ್ತೆತನವನ್ನೂ ಬಯಲುಮಾಡದೆ ಸಹೋದರ ಸಮಾನ ಸಂಗಣ್ಣನ ಕೊಲೆಗೆ ನೇರ ಕಾರಣವಾದ ಇವಳೂ ಒಬ್ಬ ಪತಿವೃತೆಯೆ? ಹೀಗಿದ್ದಾಗ, ಅವಳ ಗಡಸುತನಶೂನ್ಯ ಗರತಿಯತ್ವದ ಉದ್ದೇಶ ಯಕ್ಷಪ್ರಶ್ನೆಯಾಗಿ ನಿಲ್ಲದೆ? ಏನೇ ಆಗಲಿ, ಸಿದ್ಧ ಕಥೆಯ ಮರುಸೃಷ್ಟಿ ಸ್ವಾತಂತ್ರ್ಯವನ್ನು ಸಮರ್ಥವಾಗಿಯೇ ಬಳಸಿಕೊಂಡ ಲೇಖಕರು ಸಮಾಜಕ್ಕೆ ನೀಡಿದ ಈ ವಿಲಕ್ಷಣ ಕೊಡುಗೆ ಹತ್ತು ಹಲವು ಪ್ರಶ್ನಾಸಂಕೀರ್ಣತೆಗೆ ಒಳಪಡುವದು ಸಹಜ. ಅತಿಸೃಷ್ಟಿಗೆ ಪ್ರತಿದೃಷ್ಟಿ ಇನ್ನೂ ಸಹಜ.
ಧಾರವಾಡ ‘ರಂಗಪರಿಸರ’ ತಂಡದ ಅಧ್ಯಕ್ಷ ವಿಠ್ಠಲ ಕೊಪ್ಪದವರು ಸಂಗಣ್ಣನ ಪಾತ್ರವಹಿಸಿ; ಅಷ್ಟೇ ಸಮರ್ಥವಾಗಿ ನಾಟಕವನ್ನು ನಿರ್ದೇಶಿಸಿದ್ದಾರೆ. ಆರಂಭದ ಜಾನಪದ ಶೈಲಿಯ ಆಂಗಿಕಾಭಿನಯದಲ್ಲಿ ಕೊಂಚ ಕುಂದು ಕಾಣಿಸಿತು. ಇನ್ನು – ಬಾಳಣ್ಣನಾಗಿ ಸೂರ್ಯಕಾಂತ ಪೂಜಾರ, ಚಂದ್ರಶೇಖರ ಜಿಗಜಿನ್ನಿ ಈರಪ್ಪನಾಗಿ, ವಿರುಪಾಕ್ಷಿಯ ಪಾತ್ರದಲ್ಲಿ ಗಂಗಾಧರ, ಜಗದೀಶ ರೊಟ್ಟಿಮಠ ಬಸವಂತನ ಪಾತ್ರಕ್ಕೆ ಸರಿದೂಗಿದರೆ… ವೀಣಾ ಮೋಡಕ ಗಂಗಾನ ಪಾತ್ರದಲ್ಲಿ, ಕ್ಷಮಾ ಹೊಸಕೇರಿ ಪರಮ್ಮನಾಗಿ ಅಭಿನಯಿಸಿದ್ದಾರೆ. ಪತ್ತಾರನ ಪಾತ್ರದಲ್ಲಿ ಕಲಾವಿದ ಮಕಬುಲ್ ಹುಣಶೀಕಟ್ಟಿಯವರ ಅಭಿನಯ ವೈಶಿಷ್ಟ್ಯಪೂರ್ಣವಾಗಿತ್ತು.
ಮೂಲ ಸಂಗ್ಯಾ ಬಾಳ್ಯಾನಾಟದ ಹಾಡುಗಳನ್ನೆ ಸಂಯೋಜಿಸುವಲ್ಲಿ ವಿರೂಪಾಕ್ಷಪ್ಪ ಅಂಗಡಿ, ಅನಿಲ ಮೈತ್ರಿ ಹಾಗೂ ಸುನಂದಾ ನಿಂಬನಗೌಡರ ಶ್ರಮವಹಿಸಿದ್ದರೆ. ಪ್ರಭು ಹಂಚಿನಾಳ ನೆಳಲು-ಬೆಳಕನ್ನು ವ್ಯವಸ್ಥಿಸಿದ್ದರು. ಪ್ರಸಾಧನ; ಸಂತೋಷ ಮಹಾಲೆಯವರ ಕಸರತ್ತಾಗಿತ್ತು. ಸನ್ನಿವೇಶೋಪಕರಣಗಳ ಅನೌಚಿತ್ಯ ಉಪಯೋಗದ ಜೊತೆ ರಂಗರೂಢಿಗಳ ಬಳಕೆ ರಂಗಕ್ಕೆ ಅಭಾಸವೆನಿಸಿದ್ದೂ ಉಂಟು. ಧ್ವನಿವ್ಯವಸ್ಥೆಯಿಂದ ಮಾತ್ರ ರಂಗಸಜ್ಜಿಕೆ ವಂಚಿತವಾಗದೇ ಇದ್ದಿದ್ದರೆ ನಾಟಕ ನಿಜಕ್ಕೂ ಒಂದು ಯಶಸ್ವಿ ಪ್ರದರ್ಶನವಾಗುತ್ತಿತ್ತು.








ಮುನ್ನೂರು ರಾಮಾಯಣಗಳು ಇರಬಹುದಾದರೆ, ಸ೦ಗ್ಯಾ-ಬಾಳ್ಯಾದ ಇನ್ನೊ೦ದು ರೂಪ ಇದ್ದರೇನ೦ತೆ? ಆದರು ಅದೊ೦ದು ಹೊಸ ನೋಟ, ಹೊಸ ಪ್ರಯತ್ನ ಅಲ್ಲವೆ? ನನ್ನ ಪ್ರಶ್ನೆ, ಗ೦ಗಿಯ ಆಗಿನ ನಡವಳಿಕೆಗೆ, ನಾವು ಈಗಿನ ಮಾನದ೦ಡವಗಳನ್ನಿಟ್ಟು ವಿಶ್ಲೇಷಿಸುವುದು ಎಷ್ಟು ಸರಿ?