ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕರುವಿನ 'ಅಂಬಾ' ದನಿಯಂತೆ ನನ್ನ ಊರು

ಹೋಗುವೆನು ನಾ.. ಹೋಗುವೆನು ನಾ..
ಎನ್ನುವ ಕವಿತೆಯ ಸಾಲುಗಳನ್ನೇ ಹಿಡಿದು ಇತ್ತೀಚೆಗೆ ಕವಯತ್ರಿ ಎಂ ಆರ್ ಕಮಲ ತಮ್ಮ ಊರಿಗೆ ಹೋಗಿಬಂದರು.
ತಾವು ಬೆಳೆದ ಮನೆ, ಆಟ ಆಡಿದ ಬೀದಿ, ಓದಿದ ಶಾಲೆ, ಸೈಕಲ್ ಕಲಿಸಿದ ಗುರು, ನೀರು ಸೇದಿದ ಭಾವಿ ಎಲ್ಲವನ್ನೂ ಮಾತಾಡಿಸಿಕೊಂಡೇ ಬಂದಿದ್ದರು.
ಅದು ಇಲ್ಲಿದೆ.
ಯಾವುದೇ ಸಾಹಿತಿಯ ಒಳಗಿರುವ ಈ ಊರ ವಾಸನೆ ಅವರ ಸೃಜನಶೀಲತೆಯ ಬಹುಮುಖ್ಯ ಆಸ್ತಿ
ಹಾಗಾಗಿ ನೀವು ನಿಮ್ಮ ಊರಿನ ನೆನಪುಗಳಿದ್ದರೆ ‘ಅವಧಿ’ಗೆ ಕಳಿಸಿಕೊಡಿ.. ಎಂದು ಕೇಳಿದ್ದೆವು.
ಈಗ ಎಸ್ ಪಿ ವಿಜಯಲಕ್ಷ್ಮಿ ತಮ್ಮ ಊರಿನ ನೆನಪುಗಳನ್ನು ಕಟ್ಟಿಕೊಟ್ಟಿದ್ದಾರೆ.
ನೀವೂ ನಿಮ್ಮ ಅನುಭವಗಳನ್ನು ಕಳಿಸಿಕೊಡಿ 
avadhimag@gmail.com
 
ಎಸ್.ಪಿ. ವಿಜಯಲಕ್ಷ್ಮಿ 
ಹೋಗುವೆನು ನಾ ಹೋಗುವೆನು ನಾ…
`ನನ್ನ ಒಲುಮೆಯ ಗೂಡಿಗೆ…. ಮಲೆಯ ನಾಡಿಗೆ…ಮಳೆಯ ಬೀಡಿಗೆ…’
೬೮ ವರ್ಷಗಳ ಹಿಂದೆ ಆ ನೆಲದಲ್ಲಿ ಹುಟ್ಟಿ, ೨೩ ವರ್ಷ ಬೆಳೆದು, ಇಂದು ಬೆಂಗಳೂರನ್ನೇ ನನ್ನ ಊರೆಂದು ಬದುಕುವ ಅನಿವಾರ್ಯತೆಯಲ್ಲಿದ್ದರೂ, ನನ್ನೂರು, ನರಸಿಂಹರಾಜಪುರ, ಅಪ್ಪಟ ಮಲೆನಾಡು, ಇದರ ಸೆಳೆತ ಹಸುವಿಗೆ ಕರುವಿನ `ಅಂಬಾ’ ಎನ್ನುವ ದನಿಯಲ್ಲಿನ ಎಳೆತದಷ್ಟೇ ಬಿಗಿಯಾದದ್ದು, ಪ್ರಿಯವಾದದ್ದು.
ಅಲ್ಲೀಗ ಎಲ್ಲವೂ ನೆನಪೇ…
ಅಪ್ಪನಿಲ್ಲ, ಇರುವವರು ಎಲ್ಲೆಲ್ಲೋ, ಮನೆ ಯಾರದ್ದೋ ಸ್ವತ್ತು, ಜೀವ ಕಳೆದ ದುರ್ಭರತೆ, ಗೋಡೆ ಮಸಿಯಾಗಿದೆ, ನೆಲ ಒಣಗಿದೆ, ನೀರು ಹಾಕಿ ರಂಗೋಲಿ ಬಿಡಿಸುತ್ತಿದ್ದ ಕಾಂಕ್ರೀಟ್ ಒಡೆದುಹೋಗಿದೆ, ಹರಟೆಯ ಆಪ್ತ ಸಂಗಾತಿಯಾಗಿದ್ದ ಚಿಟ್ಟೆ ಅಥವಾ ಕಟ್ಟೆ ನಾವಿಲ್ಲದೆ ಅತ್ತು ಸೊರಗಿರುವಂತೆ ಒಡೆದುಕೂತಿದೆ…
ಆಡಾಡಿ ಕುಣಿದ ಅಂಗುಲಂಗುಲದ ನೆನಪು… ಹನಿ ಕಡಿಯದಂತೆ ಸುರಿವ ಮಳೆಯಲ್ಲಿ ತೋಯ್ದು ಕುಣಿದ ನೆನಪು…. ಹಸುಕರು, ಕೊಟ್ಟಿಗೆ, ಬಾವಿ, ಮಾವು, ಮಲ್ಲೆ, ಮನೆ ತುಂಬ ಕಾಪಿಡುವ ನನ್ನದೇ ದೈವದಂತಿದ್ದ ನನ್ನವರು…. ಕಾಲನ ಆಣತಿಯಲ್ಲಿ `ಬೆಳೆಯುತ್ತ ಬಾಲ್ಯವನ್ನು ಕಳೆದುಕೊಂಡವರು….’
ಊರಿಗೊಂದೇ ಹೋಟೆಲ್, ಇಲ್ಲಿನ ಮಸಾಲೆದೋಸೆಗೆ ಅದೆಂಥ ರುಚಿಯೋ ಕಾಣೆ, ಇಂದೂ ಅದೇ ಹದ ಮಾಡುವ ಕೈ ಬೇರೆಯಾದರೂ, ಇಲ್ಲಿರುವಂತೆ ಎಲ್ಲಿಯೂ ಸಿಗದು… ಸಂಪ್ರದಾಯದ ಊರಲ್ಲಿ ಹೆಣ್ಣುಮಕ್ಕಳು ಹೋಟೆಲ್ ಬಳಿ ಸುಳಿಯುವಂತಿಲ್ಲ, ಒಂದುಸಲವೂ ಒಳಹೊಕ್ಕಿಲ್ಲ… ಇಂದು ಆರಾಮವಾಗಿ ಒಳ ಕೂತು, ದೋಸೆ ತಿಂದ ತೃಪ್ತಿ…
ಹತ್ತಿರದ ಕಾಡು, ದೇಗುಲ, ಭದ್ರೆಯ ಬ್ಯಾಕ್ ವಾಟರ್ ಸುತ್ತ ಸುತ್ತಿ ಒಂದಷ್ಟು ಹಗುರಾದರೂ, `ಮನೆ’ ಮನಸ್ಸನ್ನು ನೆನಪಿಗದ್ದಿ ಅದ್ದಿ ಮುಖವರಳಿಸಿದ ಬೆನ್ನ ಹಿಂದೇ ಇಂದಿನ ಜೀರ್ಣಸ್ಥಿತಿ ಕಾಡಿ ನೋಯಿಸಿದ್ದೂ ಸುಳ್ಳಲ್ಲ, “ಎಲ್ಲಕ್ಕೂ ಅಂತ್ಯವಿದೆ…” ಒಳಗು ಗೊಣಗಿತೋ, ಅತ್ತಿತೋ, ಸಂಕಟಪಟ್ಟಿತೋ… ಹೆಚ್ಚು ನಿಲ್ಲಲಿಲ್ಲ…!!!




 

‍ಲೇಖಕರು avadhi

17 February, 2020

3 Comments

  1. maagimalleS.P.Vijayalakshmi

    Dhanyavaadagalu Avadhi, Nannoorina nenapannu illi prakatisi khushi kottiddakke..

  2. T S SHRAVANA KUMARI

    ಆತ್ಮೀಯವಾದ ನೆನಪು

  3. S.P.Vijayalakshmi

    ಶ್ರವಣ ಕುಮಾರಿ, ಧನ್ಯವಾದಗಳು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading