ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಯ್ಯಾರರ ನೆನಪಿನಲ್ಲಿ ಒಂದು ಬರಹ

ಕಯ್ಯಾರ ಕಿಞ್ಞಣ್ಣ ರೈ ಇನ್ನಿಲ್ಲ. ಅವರ ನೆನಪಿನಲ್ಲಿ ಈ ಹಿಂದೆ ’ಅವಧಿ’ಯಲ್ಲಿ ಪ್ರಕಟವಾಗಿದ್ದ ಬರಹ ನಿಮ್ಮ ಓದಿಗಾಗಿ :

– ಮಹೇಶ್ವರಿ ಯು

ಫೋಟೋ ಕೃಪೆ : ಯಜ್ಞ

ಕವಿ ಕಯ್ಯಾರರ ಒಂದು ಗೀತೆ.
1
ನವಭಾವ-ನವಜೀವ ನವಶಕ್ತಿ ತುಂಬಿಸುವ
ಹಾಡೊಮ್ಮೆ ಹಾಡಬೇಕು;
ಧೀರತರ ಗಂಭೀರ ಭಾವನೆಯ ತೆರೆಮಸಗಿ
ವೀರಧ್ವನಿಯೇರಬೇಕು;
ಜಾತಿ-ಕುಲ-ಮತ-ಧರ್ಮ ಪಾಶಗಳ ಕಡಿದೊಗೆದು
ಎದೆಹಿಗ್ಗಿ ಹಾಡಬೇಕು;
ಯುಗಯುಗಳಾಚೆಯಲಿ ಲೋಕಲೋಕಾಂತದಲಿ
ಆ ಹಾಡು ಗುಡುಗಬೇಕು;
2
ಉನ್ನತೋನ್ನತ ಘನಹಿಮಾದ್ರಿಶಿಖರವನೇರಿ
ಹಾಡಲ್ಲಿ ಹಾಡಬೇಕು;
ಹಾಡು ನುಡಿಗುಂಡುಗಳು ಹಾರಿದಶದಿಕ್ಕಿನಲಿ
ಭಯವ ಬೆನ್ನಟ್ಟಬೇಕು;
ಗಂಡೆದೆಯ ಘರ್ಜನೆಗೆ ಮೂಹತ್ತುಮೂರ್ಕೋಟಿ
ಕಲಕಂಠ ಬೆರೆಸಬೇಕು;
ಭೂಮ್ಯಂತರಾಳದಲಿ ನಭಚಕ್ರಗೋಳದಲಿ-
ಮಾರ್ದನಿಗಳೇಳಬೇಕು.
3
ಜಡನಿದ್ರೆ ಸಿಡಿದೆದ್ದ ವೀರಾಟ್ಟಹಾಸದಲಿ
ಬಾನುಭುವಿ ಬೆಳಗಬೇಕು;
ನಡೆನುಡಿಗಳೆಡೆಯಲ್ಲಿ, ಪದತಾಳಗತಿಯಲ್ಲಿ
ಕ್ರಾಂತಿಕಿಡಿ ಕೆರಳಬೇಕು;
 
 
ಅಳಿದುಳಿದ ಭವ್ಯತೆಯ ರುದ್ರಶಿಖಿಯುಜ್ವಲಿಸೆ
ಹಾಡು ತಿದಿಯೊತ್ತಬೇಕು;
ದಿವಸದಿವಸಗಳಿಂದ ಮನದಿ ಮರುಗುತಲಿದ್ದೆ
ಹಾಡಿಂತು ಹಾಡಬೇಕು.
4
ಎನ್ನ ಪಾಡಿಗೆ ದು:ಖ ತಾಯಿಗಿದು ಹಿರಿಮರುಕ
ನಾನಿದನು ಸಹಿಸಲೆಂತು?
ಎನ್ನ ಕೃತಿಯಪಮಾನ ದೇವಿಗಿದೆ ದುಮ್ಮಾನ
ನಾನಿದನು ನೋಡಲೆಂತು?
ಜಯಜನನಿ! ಶಿರವೆತ್ತಿ ವೀರ ಭರವಸೆಯಿಂದ
ಹೊಸ ಹಾಡ ಕೇಳಿನೋಡು!
ಇದೊ ಮೊದಲು, ಮುನ್ನಿಲ್ಲ- ಮುಗಿದುದಂದಿನ ಪಾಡು
ಹೊಸತಿಂದು ಹೊಸತು ಹಾಡು!

ಫೋಟೋ ಕೃಪೆ : ಯಜ್ಞ

ನೂರುವರುಷ ತುಂಬಿದ ಸಂಭ್ರಮದಲ್ಲಿರುವ ನಾಡೋಜ ಕಯ್ಯಾರ ಕಿಞ್ಞಣ್ಣರೈಯವರ ‘ಹೊಸ ಹಾಡು ಎಂಬ ಈ ಪದ್ಯವನ್ನು ಕುರಿತು ಒಂದೆರಡು ಸಾಲುಗಳನ್ನು ಬರೆಯುವ ಮನಸ್ಸಾಗುತ್ತದೆ.ಸ್ವಾತಂತ್ರ್ಯ ಹೋರಾಟದ ಸ್ಫೂತರ್ಿಯನ್ನೂ ಕಣರ್ಾಟಕ ಏಕೀಕರಣದ ಕನಸು ಹಂಬಲಗಳನ್ನೂ ಪ್ರತ್ಯಕ್ಷ ಅನುಭವಿಸಿ ಬದುಕಿನ ಓಟದಲ್ಲಿ ಶತಮಾನವನ್ನು ಕಂಡ ಹಿರಿಜೀವ ಕಯ್ಯಾರರದು ಕನ್ನಡ ನವೋದಯದ ಆದರ್ಶ ಆವೇಶಗಳನ್ನು ಮೈದುಂಬಿಕೊಂಡ ಬರವಣಿಗೆ.ಒಂದು ಹಾಡಿನ ಹುಟ್ಟಿಗೆ ಕಾಲದೇಶಗಳ ಒಂದು ಆವರಣ ಇರುತ್ತದೆ.ಕವಿತೆಯ ಮುಹೂರ್ತ ಆ ಆವರಣಕ್ಕೆ ಬದ್ಧವಾಗಿರುತ್ತದೆ. ಆದರೆ ಆ ಬಳಿಕ ಆ ಆವರಣವನ್ನು ಮೀರಿದಾಗಲೇ ಕವಿತೆ ಸಾರ್ಥಕವಾಗುತ್ತದೆ.ನಾಡುನುಡಿಯ ಪಾರತಂತ್ರ್ಯ ಕವಿಗಳನ್ನು ಕಂಗೆಡಿಸಿದ್ದು, ಕನ್ನಡ ಸಾಹಿತ್ಯದ ಇತಿಹಾಸದಲ್ಲಿ ಈಗಾಗಲೇ ದಾಖಲಾಗಿದೆ. ‘ಕನಸಿನೊಳಗೊಂದು ಕಣಸು’ ಕಂಡ ಕವಿಬೇಂದ್ರೆ’ ಗಂಡುಸಾದರೆ ನಿನ್ನ ಬಲಿಗೊಡುವೆಯೇನು’ ಎಂಬ ತಾಯಿಯ ಪ್ರಶ್ನೆಗೆ ರೋಮಾಂಚಿತರಾದದ್ದರ ಅಕ್ಷರಸ್ಮಾರಕ ನಮಗೆ ದಕ್ಕಿದೆ.ಹೀಗೆ ತಾಯಿ-ಮಗ ಎಂಬ ಪರಿಭಾಷೆಯಲ್ಲಿ ತಮ್ಮ ಕಾಲದ ಅಸಹನೀಯತೆಗೆ ಕಯ್ಯಾರರು ಸ್ಪಂದಿಸಿದ ಬಗೆ ಈ ಹಾಡಿನಲ್ಲಿದೆ.
ಆಮೂಲಾಗ್ರ ಪರಿವರ್ತನೆಯನ್ನು ತರಬಲ್ಲ ಕ್ರಾಂತಿಗೀತೆಯೊಂದನ್ನು ಹಾಡಲು ಕವಿ ಹಂಬಲಿಸುತ್ತಾನೆ. ಹಿಂದೆಂದೂ ಇಲ್ಲದ ಹೊಸಭಾವ, ಹೊಸ ಚೈತನ್ಯ,ಹೊಸ ಶಕ್ತಿ -ಹೀಗೆ ಎಲ್ಲವಿಧದಲ್ಲೂ ನವೋನವವಾಗಿರುವ ಹಾಡಾಗಿ ಅದರ ಸಾಗರೋಪಮ ಗಾಂಭೀರ್ಯದ ಅಲೆ ತೀವ್ರತರವಾಗಿ ವ್ಯಾಪಿಸಿ ವೀರಧ್ವನಿಯಾಗಿ ಪಡಿದನಿಗೊಳ್ಳುವುದನ್ನು ಕವಿ ಬಯಸುತ್ತಾನೆ. ಹೊಚ್ಚಹೊಸದಾದ ಈ ಹಾಡು ಜಾತಿಮತ ಕುಲಧರ್ಮಗಳ ಕಟ್ಟುಗಳನ್ನು ಕಡಿದೊಗೆದು ಬಿಡುಗಡೆಯ ಹಿಗ್ಗಿನ ಹಾಡಾಗಿ ಹೊಮ್ಮುವುದನ್ನು ಹಾರೈಸುತ್ತಾನೆ. ಈ ಹಾಡಿನ ಪರಿಣಾಮ ಎಷ್ಟು ಶಕ್ತಿಯುತವಾಗಿರಬೇಕೆಂದರೆ ಅದು ಎಲ್ಲ ಎಲ್ಲೆಗಳನ್ನೂ ಮೀರಿ ಗುಡುಗಬೇಕು. ಅಂತಹ ಹಾಡನ್ನು ಹಾಡಬೇಕಾದಾದ್ದರೂ ಎಲ್ಲಿ? ಔನ್ನತ್ಯದಲ್ಲಿ ಸಾಟಿಯಿಲ್ಲದ ಹಿಮಾದ್ರಿ ಶಿಖರವನ್ನು ಏರಿ ಅಲ್ಲಿ ಈ ಹಾಡನ್ನು ಹಾಡುವ ಬಯಕೆ ಕವಿಯದು. ಆ ಹಾಡಿನ ನುಡಿಗಳೇ ಗುಂಡುಗಳಾಗಿ ದಶದಿಕ್ಕುಗಳಿಗೂ ಹಾರಿ ಎಲ್ಲ ದೇಶವಾಸಿಗಳ ಭಯವನ್ನು ನಿವಾರಿಸಬೇಕು. ಪೌರುಷದ ಘರ್ಜನೆ ಆ ಹಾಡಿನಲ್ಲಿದ್ದು ಅದಕ್ಕೆ ಮೂವತ್ಮೂರು ಕೋಟಿ ದಿವ್ಯಧ್ವನಿಗಳು ಬೆರೆಯಬೇಕು. ಮಾತ್ರವಲ್ಲ ಭೂಮಿಯ ಅಂತರಂಗದಲ್ಲೆಂತೋ ಅಂತೆಯೇ ಆಕಾಶದ ಸೌರ ಮಾರ್ಗದಲ್ಲೂ ಅದರ ಮಾರ್ದನಿ ಮೊಳಗಬೇಕು.ಕವಿಯ ಹಂಬಲ ಮತ್ತೆ ಮುಂದುವರಿಯುತ್ತದೆ. ಹಾಗೆಮೊಳಗಿದ ಈ ಹಾಡಿಗೆ , ಸರ್ವತ್ರ ವ್ಯಾಪಿಸಿದ ಜಡನಿದ್ರೆ ಒಡೆದು ಹೊಮ್ಮುವ ವೀರ ಘರ್ಜನೆಗೆ ಆಗಸ ಭೂಮಿಗಳು ತೇಜೋಮಯವಾಗ ಬೇಕು. ಮಾತಿನಲ್ಲಿ, ಕ್ರಿಯೆಯಲ್ಲಿ, ಇಡುವ ಒಂದೊಂದು ಹೆಜ್ಜೆಯಲ್ಲಿ- ಸರ್ವತ್ರ ಕ್ರಾಂತಿಯ ಕಿಡಿ ಉನ್ಮೇಷಗೊಳ್ಳಬೇಕು.ಪಾರತಂತ್ರ್ಯದ ಮುಸುಕಿನಲ್ಲಿ ಅಳಿದುಳಿದ ಅಭಿಮಾನದ ಕಿಡಿ / ಸ್ವಾಭಿಮಾನದ ಜ್ವಾಲೆ ಪ್ರಜ್ವಲಿಸುವಂತೆ ಈ ಹಾಡು ಕಮ್ಮಾರನ ತಿದಿಯೋಪಾದಿ ಕಾರ್ಯಾಚರಿಸಬೇಕು.
ಗುಲಾಮಗಿರಿಯ ಸಂಕಟ ಅವಮಾನಗಳು, ಬದುಕಿನ ಕ್ಲೇಶ ಬಂಧನಗಳು – ಇವುಗಳಿಂದೆಲ್ಲ ಪಾರಾಗುವ ಈ ಹಾಡನ್ನು ಹಾಡುವ ಹಂಬಲ ಎಷ್ಟೋ ದಿವಸಗಳಿಂದ ಕವಿಯನ್ನು ಕಾಡಿರುವಂಥದ್ದು; ಮನದ ಮರುಕವಾಗಿ ಕೊರೆದಿರುವಂಥದ್ದು.
ಕವನದ ಕೊನೆಯಲ್ಲಿ ಕವಿ ಹೇಳುವಂತೆ ಕವಿಯದು ಈ ಪಾಡಾದರೆ ತಾಯಿಗಾದರೋ ಅದನ್ನು ಮೀರಿದ ಅಳಲು.ಇಂತಹ ಸ್ಥಿತಿಯನ್ನು ಇನ್ನು ಸಹಿಸಲು ಸಾಧ್ಯವಿಲ್ಲ ಎಂಬ ಪರಾಕಾಷ್ಠೆಗೆ ತಲಪಿದ್ದಾಗಿದೆ.ಮಗನ ಅವಮಾನ ಸಂಕಟಗಳು ತಾಯಿಗೆ ದುಮ್ಮಾನವನ್ನು ತಾರದಿರುತ್ತವೆಯೇ?ಮಗನಿಗಂತೂ ಸ್ವಂತ ದು:ಖವನ್ನಾದರೂ ಸಹಿಸಿಕೊಳ್ಳಬಹುದು. ಆದರೆ ತಾಯಿಯ ದು:ಖವನ್ನು ನೋಡಿ ಸುಮ್ಮನಿರುವುದು ಹೇಗೆ? ಆದ್ದರಿಂದಲೇ ಕವಿ ತಾಯಿಗೆ ಹೀಗೆ ಹರಕೆಯನ್ನು ನುಡಿಯುತ್ತಾನೆ: ಸಂಕಟಪಡಬೇಡ,ನಿನ್ನ ಮಕ್ಕಳ ಈ ವೀರಗೀತೆಯನ್ನು ತಲೆಯೆತ್ತಿ ಭರವಸೆಯಿಂದ ಕೇಳಿ ಸಮಾಧಾನವನ್ನು ತಾಳು. ಇದು ಶುಭಾರಂಭ. ಇದುವರೆಗಿನ ಅಳಲು ಸಂಕಟಗಳಿಗೆಲ್ಲ ಕೊನೆ ಬಂತು. ಇದು ಹೊಸಯುಗದ ಹುಟ್ಟನ್ನು ಸಾರುವ ಹೊಸ ಹಾಡು.
ಈ ಪದ್ಯದ ರಾಚನಿಕ ಸ್ವರೂಪದ ವಿಶ್ಲೇಷಣೆಗೆ ಈಗ ನಾನು ತೊಡಗಿಕೊಳ್ಳಲಾರೆ.
ಗಡಿನಾಡು ಕಾಸರಗೋಡಿನಲ್ಲಿದ್ದು ಪರಕೀಯರ ಆಳ್ವಿಕೆಯಿಂದ ಮುಕ್ತವಾದ ನೆಲದ ಪ್ರಜೆಗಳಾಗಿದ್ದೂ ಪರಕೀಯ ಪ್ರಜ್ಞೆಯನ್ನು ಗಳಿಗೆಗಳಿಗೆಗೆ ಅನುಭವಿಸುವ ಈ ಹೊತ್ತಿನಲ್ಲಿ ಈ ರಚನೆ ನನ್ನಲ್ಲಿ ಆಳವಾದ ವಿಷಾದದ ಶ್ರುತಿಯನ್ನು ಮೀಟುತ್ತಿದೆ.ಹಳಹಳಿಕೆ ಹಳವಂಡಗಳ ಕೂಪದಿಂದ ಮೇಲಕ್ಕೆತ್ತಲು, ಭಯವ ಬೆನ್ನಟ್ಟಲು ನಮ್ಮ ಕಾಲದ ಹೊಸ ಹಾಡಿನ ಆವಿಷ್ಕಾರವಿನ್ನೆಲ್ಲಿ ಎಂಬ ಪರಿತಾಪ ಒಂದೆಡೆಯಾದರೆ ನೂರು ತುಂಬಿದ ಈ ಹಿರಿಯಜ್ಜನಿಗೆ ನಮ್ಮ ಕಾಲದ ಯಾವ ಭರವಸೆಯನ್ನು ನೀಡಲಿ ಎಂಬ ಆತಂಕ ಇನ್ನೊಂದೆಡೆ. ಈ ಆತಂಕ, ಪರಿತಾಪ, ಹಳಹಳಿಕೆ ಹಳವಂಡಗಳನ್ನೆಲ್ಲ ಮೀರಿ ಈ ಹಾಡು ನನ್ನ ಕಿವಿಯಲ್ಲಿ ಸಾವನಕ ಮೊಳಗುತ್ತಿರಲಿ ಎಂದು ಹಾರೈಸುತ್ತೇನೆ.
 

‍ಲೇಖಕರು G

10 August, 2015

3 Comments

  1. MANJULA NARAYANARAO

    Hadu mattu nimma anisike Tumba chennagi moodide

  2. Kiran

    Fills my chest with pride and hope..

  3. Ganesh Shenoy

    Thumba Channagide. Dhanyavad Maheshwari avarige!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading