ಅಹರ್ನಿಶಿ ಪ್ರಕಾಶನ ಕಥೆ ಹೇಳುವೆ ಎನ್ನುವ ಮಹತ್ವಾಕಾಂಕ್ಷೆಯ ಸಂಕಲನವನ್ನು ಹೊರತರುತ್ತಿದೆ
ಸುಕನ್ಯಾ ಕನಾರಳ್ಳಿ ಅನುವಾದಿಸಿರುವ ಜಗತ್ತಿನ ಶ್ರೇಷ್ಠ ಲೇಖಕಿಯರ ಕಥೆಗಳು ಸಧ್ಯದಲ್ಲೇ ನಿಮ್ಮ ಕೈ ಸೇರಲಿದೆ.
ಆ ಕೃತಿಯಿಂದ ಆಯ್ದ ಒಂದು ಕಥೆ ‘ಅವಧಿ’ ಓದುಗರಿಗಾಗಿ ಇಲ್ಲಿದೆ.
ಒಬ್ಬ ಗಂಡಸು. ಸ್ಮಶಾನಕ್ಕೆ ಬಂದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ ಮನೆಗೆ ಮರಳುತ್ತಿದ್ದವನು. ಅವನನ್ನು ಅಚ್ಚನ್ ಎಂದು ಕರೆಯಬಹುದು. ಯಾಕೆಂದರೆ ಇಡೀ ನಗರದಲ್ಲಿ ಅವನ ಬೆಲೆ ಅರಿತಿದ್ದವರು ಮೂವರು ಮಕ್ಕಳು ಮಾತ್ರ. ಅವರೆಲ್ಲರೂ ಅವನನ್ನು ಕರೆಯುತ್ತಿದ್ದುದು ಅಚ್ಚ ಅಂತಲೇ.
ಬಸ್ಸಿನ ತುಂಬವಿದ್ದ ಅಪರಿಚಿತರ ನಡುವೆ ಕುಳಿತು ಆ ದಿನ ನಡೆದಿದ್ದರ ಪ್ರತಿ ಗಳಿಗೆಯನ್ನೂ ಮೆಲುಕು ಹಾಕಿದ.
ಬೆಳಿಗ್ಗೆ ಕಣ್ಣು ತೆರೆದಿದ್ದೇ ಅವಳ ದನಿಗೆ. ‘ಉನ್ನೀ, ಗುಮ್ಮನೆ ಮುಸುಕು ಹಾಕಿಕೊಂಡು ಮಲಗಿರಬೇಡ. ಇವತ್ತು ಸೋಮವಾರ ಅಂತ ಗೊತ್ತು ತಾನೆ?’ ಉನ್ನಿ ಅವರ ಹಿರಿಯ ಮಗ. ನಂತರ ಏನು ನಡೆಯಿತು? ಬಿಳಿಯ ಸೀರೆಯ ಸುಕ್ಕುಗಳನ್ನು ಸರಿಪಡಿಸಿಕೊಳ್ಳುತ್ತ ಅಡಿಗೆ ಮನೆಯತ್ತ ನಡೆದಿದ್ದಳು. ಸ್ವಲ್ಪ ಹೊತ್ತಿನಲ್ಲಿ ದೊಡ್ಡ ಗ್ಲಾಸೊಂದರಲ್ಲಿ ಕಾಫಿಯನ್ನು ತಂದಿತ್ತಿದ್ದಳು. ಆಮೇಲೆ? ಆಮೇಲೇನಾಯಿತು? ಏನಾದರೂ ಹೇಳಿದಳೆ? ಹೇಳಿದ್ದನ್ನು ನಾನು ಮರೆತೆನೆ? ತಲೆ ಏನೆಲ್ಲ ತಿಪ್ಪರಲಾಗ ಹೊಡೆದರೂ ನೆನಪಿಗೆ ಬರಲಿಲ್ಲ. ‘ಗುಮ್ನನೆ ಮುಸುಕು ಹಾಕಿಕೊಂಡು ಮಲಗಿರಬೇಡ. ಇವತ್ತು ಸೋಮವಾರ ಅಂತ ಗೊತ್ತು ತಾನೆ?’ ನೆನಪಿನಲ್ಲಿ ಉಳಿದಿರುವುದು ಅದೊಂದೇ ಸಾಲು. ಮತ್ತೆ ಮತ್ತೆ ಅದನ್ನೇ ತಲೆ ಪಠಿಸಿತು. ದೇವರೆದುರು ಪಠಿಸುವ ಸ್ತೋತ್ರದಂತೆ. ಮರೆತರೆ ಮರಳಿ ಪಡೆಯುವುದು ಅಸಾಧ್ಯವೊ ಎಂಬಂತೆ.


ಕೆಲಸಕ್ಕೆ ಹೊರಟಾಗ ಮಕ್ಕಳೂ ಜೊತೆಗೇ ಹೊರಟಿದ್ದವು. ಸಣ್ಣ ಸಣ್ಣ ಅಲ್ಯೂಮಿನಿಯಂ ಡಬ್ಬಗಳಲ್ಲಿ ಊಟ ಕಟ್ಟಿ ಕೊಟ್ಟಿದ್ದಳು. ಡಬ್ಬಿ ಕೊಟ್ಟ ಬಲಗೈಯಲ್ಲಿ ಅರಿಶಿನ ಹಚ್ಚಿದ ಗುರುತಿತ್ತು.
ದಿನವಿಡೀ ಕೆಲಸದಲ್ಲಿ ಕಳೆದು ಹೋಗಿತ್ತು. ಅವಳ ನೆನಪೂ ಬಾರದಂತೆ. ಪರಿಚಯವಾದ ಒಂದೋ ಎರಡು ವರ್ಷಗಳ ನಂತರ ಮನೆಯವರು ಒಪ್ಪದಿದ್ದರೂ ಅವರ ಮದುವೆ ನಡೆದು ಹೋಗಿತ್ತು. ಮನೆಯವರ ನೆನಪೇನೂ ಕಾಡಿರಲಿಲ್ಲ. ತಾವೇನೋ ತಪ್ಪು ಮಾಡಿದ್ದೇವೆ ಅಂತಲೂ ಅನ್ನಿಸಿರಲಿಲ್ಲ. ದುಡ್ಡಿನ ಪಿರಿಪಿರಿ, ಮಕ್ಕಳ ಖಾಯಿಲೆ ಕಸಾಲೆ ಅಂತೆಲ್ಲಾ ಮನಸ್ಸು ಸೋತು ಸೊಪ್ಪಾಗುತ್ತಿದ್ದದ್ದು ನಿಜ. ತನ್ನ ರೂಪದ ಬಗ್ಗೆ, ತಾನು ಹೇಗೆ ಕಾಣುತ್ತಿದ್ದೇನೆ ಅನ್ನುವುದರ ಬಗ್ಗೆ ಅವಳಲ್ಲಿ ಉದಾಸೀನ ಹೆಚ್ಚಾಗುತ್ತಾ ಹೋಯಿತು. ಅವನಿಗೆ ನಗುವುದರ ನೆನಪೂ ಮರೆಯುತ್ತಾ ಹೋಯಿತು.
ಆದರೂ ಪರಸ್ಪರ ಪ್ರೀತಿಯಿತ್ತು. ಮಕ್ಕಳಿಗೂ ಅಪ್ಪಅಮ್ಮನಲ್ಲಿ ಪ್ರೀತಿಯಿತ್ತು. ಮೂವರೂ ಗಂಡು ಮಕ್ಕಳೇ. ಉನ್ನಿ ಹತ್ತು, ಬಾಲನ್ ಏಳು ಮತ್ತು ರಾಜನ್ ಐದು ವರುಷದವರಾಗಿದ್ದರು. ಯಾವಾಗಲೂ ಕೊಳೆ ತುಂಬಿರುತ್ತಿದ್ದ ಮುಖಗಳೇ. ರೂಪ, ಬುದ್ಧಿ ಎರಡೂ ಅಷ್ಟಕ್ಕಷ್ಟೆ. ಆದರೂ ಅವರ ಅಪ್ಪ ಅಮ್ಮ ಮಾತ್ರ ಆಗಾಗ್ಗೆ —
‘ಉನ್ನಿ ಯಾವಾಗಲೂ ಏನಾದರೂ ಕಟ್ಟುತ್ತಿರುತ್ತಾನಲ್ಲ? ಎಂಜಿನಿಯರಿಂಗ್ ಓದಲು ತಕ್ಕನಾದ ತಲೆ!’
‘ಅಗಲ ಹಣೆ ಇದ್ದವರು ಬುದ್ಧಿಶಾಲಿಗಳಂತೆ. ಬಾಲುನ ಡಾಕ್ಟರಿಗೆ ಓದಿಸಬೇಕು!’
‘ಕತ್ತಲೆಯ ಭಯವೇ ಇಲ್ಲವಲ್ಲ ಈ ರಾಜನ್ ಗೆ? ಸೈನ್ಯ ಸೇರಲು ಲಾಯಕ್ಕಾಗಿದಾನೆ!’ ಎಂದೆಲ್ಲಾ ಮಾತಾಡಿಕೊಳ್ಳುತ್ತಿದ್ದರು.
ಮಧ್ಯಮವರ್ಗದವರು ವಾಸಿಸುವ ಬಡಾವಣೆಯೊಂದರ ಕಿರಿದಾದ ಗಲ್ಲಿಯಲ್ಲಿ ಆ ಕುಟುಂಬ ಬದುಕುತ್ತಿತ್ತು. ಮೊದಲ ಅಂತಸ್ತಿನಲ್ಲಿದ್ದ ಮೂರು ಭಾಗದ ಮನೆ. ಇಬ್ಬರು ಮಾತ್ರ ನಿಲ್ಲಬಹುದಷ್ಟು ಅಗಲದ ವೆರಾಂಡಾ. ಅಮ್ಮ ಪುಟ್ಟ ಕುಂಡವೊಂದರಲ್ಲಿ ಪನಿನೀರನ್ನು ಬೆಳೆಯುತ್ತಿದ್ದಳು. ಅದಿನ್ನೂ ಹೂ ಬಿಟ್ಟಿಲ್ಲ.
ಅಡಿಗೆ ಮನೆಯಲ್ಲಿ ಗೋಡೆಗೆ ಹೊಡೆದಿದ್ದ ಕೊಂಡಿಗಳಿಂದ ಹಿತ್ತಾಳೆ ಸೌಟು ಸಲಕರಣೆಗಳು ತೂಗುತ್ತಿದ್ದವು. ಒಲೆಯ ಹತ್ತಿರ ಮಣೆಯೊಂದಿತ್ತು. ಅವನು ಕೆಲಸದಿಂದ ಹಿಂದಿರುಗುವ ಹೊತ್ತಿನಲ್ಲಿ ಸಾಮಾನ್ಯವಾಗಿ ಅವಳು ಆ ಮಣೆಯ ಮೇಲೆ ಕೂತು ಚಪಾತಿ ಲಟ್ಟಿಸುತ್ತಿರುತ್ತಿದ್ದಳು.
ಬಸ್ಸು ನಿಂತಾಗ ಅವನು ಇಳಿದ. ಮಂಡಿ ಯಾಕೋ ಕಳಕ್ಕೆಂದಿತು. ವಾತರೋಗ ಆಗಲೇ ‘ಇದೋ ಬಂದೆ’ ಎಂದು ಹೇಳುತ್ತಿರುವುದರ ಸೂಚನೆಯೇ ಇದು? ತಾನು ಹಾಸಿಗೆ ಹಿಡಿದರೆ ಮಕ್ಕಳ ಗತಿ? ಥಟ್ಟನೆ ಅವನ ಕಣ್ಣಿನ ತುಂಬ ನೀರು ತುಂಬಿಕೊಂಡಿತು. ಕೊಳಕು ಕರವಸ್ತ್ರದಿಂದ ಮುಖ ಉಜ್ಜಿಕೊಂಡು ಮನೆಯತ್ತ ಹೆಜ್ಜೆ ಹಾಕಿದ.
ಮಕ್ಕಳೇನಾದರೂ ಆಗಲೇ ಮಲಗಿಕೊಂಡಿವೆಯೆ? ಏನಾದರೂ ತಿಂದರೋ, ಅಥವಾ ಅತ್ತೂ ಅತ್ತೂ ನಿದ್ದೆಗೆ ಜಾರಿದರೋ! ಛೆ! ಇರಲಾರದು. ಇನ್ನೂ ಏನೂ ಅರ್ಥವಾಗದ ವಯಸ್ಸು. ಅವಳ ದೇಹವನ್ನೆತ್ತಿ ಟ್ಯಾಕ್ಸಿಯೊಳಗೆ ಸಾಗಿಸುವಾಗ ಉನ್ನಿ ಸುಮ್ಮನೆ ನಿಂತು ನೋಡುತ್ತಿದ್ದ. ಕೊನೆಯದು ಮಾತ್ರ ಹೋ ಎಂದು ಅಳಹತ್ತಿತ್ತು. ಪರಿಸ್ಥಿತಿಯ ಅರ್ಥವಾಗಿ ಅಲ್ಲ. ತಾನೂ ಟ್ಯಾಕ್ಸಿಯಲ್ಲಿ ಹೋಗಬೇಕೆಂದು. ಸಾವಿನ ಅರ್ಥ ಆ ಪುಟ್ಟ ಮಕ್ಕಳಿಗೆ ತಿಳಿಯಲು ಹೇಗೆ ತಾನೆ ಸಾಧ್ಯ?
ತನಗಾದರೂ ತಿಳಿದಿತ್ತೆ? ಒಂದು ಸಾಯಂಕಾಲ ಥಟ್ಟನೆ ಬಿದ್ದು ಸಾಯುತ್ತಾಳೆ, ಯಾರಿಗೂ ಹೇಳದೇ ಕೇಳದೇ ಹೊರಟೇ ಹೆೋಗುತ್ತಾಳೆ ಎಂದು ತಾನಾದರೂ ಕನಸು ಮನಸಿನಲ್ಲಿ ಊಹಿಸಿದ್ದೆನೆ?
ಎಂದಿನಂತೆ ಕೆಲಸದಿಂದ ಸಾಯಂಕಾಲ ಮನೆಗೆ ಮರಳಿದಾಗ ಅಡಿಗೆ ಮನೆಯ ಕಿಡಕಿಯಿಂದ ಹಣಿಕಿದ್ದ. ಅವಳು ಅಲ್ಲಿರಲಿಲ್ಲ.
ಮನೆಯ ಮುಂದಿನ ಅಂಗಳದಲ್ಲಿ ಮಕ್ಕಳು ಆಟವಾಡುತ್ತಿದ್ದದ್ದು ಕೇಳಿಸಿತ್ತು. ‘ಬೊಂಬಾಟ್ ಶಾಟ್ ಕಣೋ!’ ಅದು ಉನ್ನಿಯ ಧ್ವನಿ.
ತನ್ನ ಹತ್ತಿರವಿದ್ದ ಕೀಯಿಂದ ಮುಂದಿನ ಬಾಗಿಲನ್ನು ತೆರೆದು ಒಳಗೆ ಹೋಗಿದ್ದ. ಅವಳನ್ನು ನೋಡಿದ್ದು ಅಲ್ಲೇ. ನೆಲದ ಮೇಲೆ ಅನಾಥವಾಗಿ ಬಿದ್ದಿದ್ದಳು. ತುಟಿಗಳು ಬಿರಿದಿದ್ದವು. ಜಾರಿ ಬಿದ್ದಿದ್ದಾಳೆಂದು ಅಂದುಕೊಂಡಿದ್ದ. ಆದರೆ ಆಸ್ಪತ್ರೆಯ ಡಾಕ್ಟರು ‘ಸತ್ತು ಒಂದೂವಾರೆ ತಾಸಾಗಿದೆ. ಹಾರ್ಟ್ ಫೇಲ್ಯೂರ್,’ ಎಂದಿದ್ದರು.
ಅಪ್ಪಳಿಸಿದ ಆತಂಕ ಕಕವಕ ಹಿಡಿಸಿತ್ತು. ಕಾರಣವಿಲ್ಲದೇ ಅವಳ ಮೇಲೆ ಅಗಾಧ ಕೋಪವೂ ಬಂದಿತ್ತು. ಹೀಗೆ ಸುಳಿವೂ ಕೊಡದೇ, ಥಟ್ಟನೆ ಎಲ್ಲವನ್ನೂ ನನ್ನ ತಲೆಯ ಮೇಲೆ ಹೊರೆಸಿ ಹೋಗಬಹುದೇ?
‘ನನ್ನ ಹೆಂಡತಿ ಸತ್ತಿದ್ದಾಳೆ, ‘ ತನ್ನಲ್ಲೇ ಪಿಸುಗುಟ್ಟಿಕೊಂಡ. ‘ಈ ದಿನ ನನ್ನ ಹೆಂಡತಿ ಅಚಾನಕ್ಕಾಗಿ ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾಳೆ. ನನಗೆ ಎರಡು ದಿನಗಳ ರಜೆಯ ಅಗತ್ಯವಿದೆ.’
ಸಕಾರಣ ರಜಾ ಅರ್ಜಿ! ಹೆಂಡತಿಗೆ ಮೈಸರಿಯಿಲ್ಲದ್ದಕ್ಕೆ ರಜೆ ಕೋರಿ ಅಲ್ಲ. ಹೆಂಡತಿ ಸತ್ತಿರುವುದಕ್ಕೆ. ಮ್ಯಾನೆಜರ್ ಅವನನ್ನು ತನ್ನ ಕೊಠಡಿಗೆ ಕರೆಸಬಹುದು. ತನ್ನ ಸಂತಾಪವನ್ನು ಸೂಚಿಸಬಹುದು. ಅವನ ಸಂತಾಪ ಯಾರಿಗೆ ಬೇಕಾಗಿದೆ? ಅವನು ಅವಳನ್ನು ನೋಡಿರಲೂ ಇಲ್ಲ. ಅವಳ ಕೂದಲು ಕೊನೆಯಲ್ಲಿ ಗುಂಗುರಾಗಿ ಬಾಗುವುದು ಅವನಿಗೆ ಗೊತ್ತಿರಲು ಸಾಧ್ಯವೆ? ಅವಳ ಸೋತ ನಗು…? ಅವಳ ನಿಧಾನ ಹೆಜ್ಜೆ… ? ನಷ್ಟವೆಲ್ಲವೂ ತನ್ನದೇ.
ಬಾಗಿಲು ತೆರೆದಾಗ ಕಿರಿಯವನು ಹಾರಿ ಅಪ್ಪನ ಹತ್ತಿರ ಬಂದ. ‘ಅಮ್ಮ ಇನ್ನೂ ಬಂದಿಲ್ಲ ಅಚ್ಚ!’
ಇದೆಂತ ಮಗುವಿನ ಮರೆವೆಯೋ! ಟ್ಯಾಕ್ಸಿಯಲ್ಲಿ ಕೊಂಡೊಯ್ದ ಅಮ್ಮನ ದೇಹ ತನ್ನ ಪಾಡಿಗೆ ಇಳಿದು ನಡೆದು ಮರಳಿ ಬರುತ್ತದೆಯೆ? ಅವನನ್ನು ಎತ್ತಿಕೊಂಡು ಅಡಿಗೆ ಮನೆಗೆ ಬಂದ.
‘ಉನ್ನೀ’
‘ಏನು ಅಚ್ಚಾ?’
ಉನ್ನಿ ಅಡಿಗೆ ಮನೆಯೊಳಗೆ ಬಂದ.
‘ಬಾಲನ್ ನಿದ್ದೆ ಮಾಡಿಬಿಟ್ಟಿದಾನೆ ಅಚ್ಚಾ.’
‘ಹೌದಾ? ಸರಿ. ನೀವೆಲ್ಲಾ ಏನಾದರೂ ತಿಂದಿರಾ ಹೇಗೆ?’
‘ಇಲ್ಲ, ಏನೂ ತಿಂದಿಲ್ಲ.’
ಕಿಡಕಿಯ ತಳಕಂಡಿಯಲ್ಲಿದ್ದ ಪಾತ್ರೆಗಳ ಮುಚ್ಚಳಗಳನ್ನು ಒಂದೊಂದಾಗಿ ತೆರೆದು ನೋಡಿದ. ಚಪಾತಿ, ಅನ್ನ, ಆಲೂಗಡ್ಡೆ ಪಲ್ಯ, ನೆಂಚಿಕೊಳ್ಳಲು ಕುರುಕು, ಮೊಸರು, ಎಲ್ಲವನ್ನೂ ಮಾಡಿ ಜೋಡಿಸಿಟ್ಟಿದ್ದಳು. ಗಾಜಿನ ಬಟ್ಟಲಲ್ಲಿ ತುಪ್ಪದ ಪಾಯಸವಿತ್ತು. ಯಾವಾಗಲಾದರೊಮ್ಮೆ ಮಕ್ಕಳಿಗೆ ಮಾಡಿಕೊಡುತ್ತಿದ್ದ ತುಪ್ಪದ ಪಾಯಸ!
ಇದನ್ನು ಮಕ್ಕಳು ತಿನ್ನುವುದೆ? ಛೇ! ಅದರ ಮೇಲೆ ಸಾವಿನ ನೆರಳು ಕವಿಚಿರುವುದಿಲ್ಲವೆ?
‘ಎಲ್ಲ ಆರಿ ಅಕ್ಷತೆಯಾಗಿದೆ. ಸ್ವಲ್ಪ ತಡೀರಿ. ಬೇಗ ಉಪ್ಪುಮಾವು ಮಾಡಿ ಕೊಡುತ್ತೇನೆ.’
‘ಅಚ್ಚಾ…’ ಮತ್ತೆ ಉನ್ನಿಯ ಧ್ವನಿ.
‘ಮ್…’
‘ಅಮ್ಮ ಯಾವಾಗ ಬರುತ್ತಾಳೆ? ಇನ್ನೂ ಹುಶಾರಾಗಿಲ್ಲವಾ?’
ಮಕ್ಕಳಿಗೆ ಈ ರಾತ್ರಿಯೇ ಹೇಳಬೇಕೆ? ನಾಳೆಯ ತನಕ ಕಾದರಾಗದೆ?
‘ಅಮ್ಮ ಬರುತ್ತಾಳೆ, ಕಾಯಬೇಕು’ ಎಂದಷ್ಟೇ ಹೇಳಿದ.
ಎರಡು ಪಾತ್ರೆಗಳನ್ನು ಗಲಬರಿಸಿ ನೆಲದ ಮೇಲಿಟ್ಟ.
‘ಬಾಲನ್ ಮಲಗಿರಲಿ, ಎಬ್ಬಿಸಬೇಡಿ ಪಾಪ,’ ಎಂದ.
‘ಅಚ್ಚಾ, ನೋಡು! ನೆಯ್ಯಿ ಪಾಯಸಂ!’ ರಾಜನ್ ಸಂಭ್ರಮದಿಂದ ಕಿರುಚಿದ. ಒಂದು ಬೆರಳನ್ನು ಅದ್ದಿ ನೆಕ್ಕಿಯೂ ನೆಕ್ಕಿದ.
ಅವನಿಗಿನ್ನು ತಡೆಯಲಾಗಲಿಲ್ಲ. ಹೆಂಡತಿ ಕೂರುತ್ತಿದ್ದ ಮಣೆಯ ಮೇಲೆ ಕುಸಿದು ಕುಳಿತ.
‘ಉನ್ನೀ, ಬಡಿಸುತ್ತೀಯಾ ಮಗೂ? ಅಚ್ಚನ್ ಗೆ ಮೈ ಸರಿಯಿಲ್ಲ. ತುಂಬ ತಲೆನೋವು.’
ಪಾಪದ ಮಕ್ಕಳು. ತಿನ್ನಲಿ. ಅಮ್ಮನ ಕೈ ಅಡುಗೆಯನ್ನು ಮತ್ತೆ ತಿನ್ನುವ ಅದೃಷ್ಟವೆಲ್ಲಿ?
ಮಕ್ಕಳು ಪಾಯಸವನ್ನು ತೃಪ್ತಿಯಿಂದ ತಿನ್ನಲಾರಂಭಿಸಿದವು. ಅವರನ್ನೇ ನೋಡುತ್ತಾ ಕಲ್ಲಾಗಿ ಕೂತ.
‘ಅನ್ನ ಬೇಡವಾ ಉನ್ನಿ?’
‘ಬೇಡ ಅಚ್ಚಾ. ಬರೀ ಪಾಯಸ ಸಾಕು. ಏನು ಬೊಂಬಾಟಾಗಿದೆ ಗೊತ್ತಾ?’
‘ಹೂಂ… ಅಮ್ಮ ಸಖತ್ ಪಾಯಸ ಮಾಡಿದಾಳೆ,’ ರಾಜನ್ ಲೊಟ್ಟೆ ಹೊಡೆಯುತ್ತಾ ಹೇಳಿದ.
ಅವನು ಥಟ್ಟನೆ ಎದ್ದು ಬಚ್ಚಲ ಕಡೆಗೆ ಓಡಿದ.






ಒಂದು ಒಳ್ಳೆಯ ಕಥೆ ಓದಿಸಿದ್ದಕ್ಕೆ ಅವಧಿ ತಂಡಕ್ಕೆ ವಂದನೆಗಳು. ಅನುವಾದಗೊಂಡ ಕಥೆಗಳನ್ನು ನಾನು ಬಿಡದೇ ಓದುತ್ತೇನೆ. ಯಾಕೆಂದರೆ ತನ್ನ ಬಿಡುವಿಲ್ಲದ ಬದುಕಿನಲ್ಲಿ ಒಬ್ಬ ಲೇಖಕ(ಅಥವಾ ಲೇಖಕಿ) ಒಂದು ಕಥೆಯನ್ನು ಅನುವಾದಿಸಿದ್ದೇ ಆದರೆ ಅಲ್ಲೇನೋ ತಿರುಳು, ಸಂದೇಶವಿರುತ್ತದೆ ಎಂದು ಆಸಕ್ತಿಯಿಟ್ಟು ಓದುತ್ತೇನೆ. ಈ ನಿಟ್ಟಿನಲ್ಲಿ ನನಗೆ ಭರವಸೆ ಮೂಡಿಸಿದ್ದೆಂದರೆ ‘ತರಂಗ’ ವಾರ ಪತ್ರಿಕೆ. ಈ ಕಥೆ ಓದಿ ಖುಷಿಯಾಯಿತು… ಹಂಚಿಕೊಂಡಿರುವುದಕ್ಕೆ ವಂದನೆಗಳು. ಈ ಕಥಾ ಸಂಕಲನವನ್ನು ಕೊಂಡುಕೊಂಡು ಓದಿ ಅಭಿಪ್ರಾಯಿಸುವ ಆಸೆ ಮೂಡಿದೆ. 🙂
“ಪಾಪದ ಮಕ್ಕಳು. ತಿನ್ನಲಿ. ಅಮ್ಮನ ಕೈ ಅಡುಗೆಯನ್ನು ಮತ್ತೆ ತಿನ್ನುವ ಅದೃಷ್ಟವೆಲ್ಲಿ?”
“‘ಬೇಡ ಅಚ್ಚಾ. ಬರೀ ಪಾಯಸ ಸಾಕು. ಏನು ಬೊಂಬಾಟಾಗಿದೆ ಗೊತ್ತಾ?’”
ಈ ಎರಡು ಸಾಲುಗಳನ್ನು ಓದುವಾಗ ಕರುಳು ಕಿತ್ತು ಬಂತು. ಇನ್ನೇನನ್ನು ನಾ ಹೇಳಲಾರೆ. ಈ ಪುಸ್ತಕವನ್ನು ಕೊಂಡು ಓದಲೇಬೇಕೆನಿಸಿದೆ.
…enu heluvudu tiliyuttilla….