ಡಾ ಹನುಮಂತರಾವ್ ದೊಡ್ಡಮನಿ ಅವರ ‘ಶಾರಿ ಶಾಣ್ಯಾ ಆದಾಗ’
‘ಶಾಂತಕುಮಾರ ಪ್ರಕಾಶನ’ ಈ ಕೃತಿಯನ್ನು ಪ್ರಕಟಿಸಿದೆ.
ಡಿ ಎಂ ನದಾಫ್ ಅವರ ಈ ಕೃತಿಯ ಅನಿಸಿಕೆ ಇಲ್ಲಿದೆ.
ಕಲ್ಯಾಣ ಕರ್ನಾಟಕ ಭಾಗ ಕರುನಾಡಿನ ಉತ್ತರದಲ್ಲಿದ್ದು ತನ್ನ ವಿಶಿಷ್ಟ ಸಂಸ್ಕೃತಿ ಮತ್ತು ಇತಿಹಾಸದಿಂದಾಗಿ ಇತರ ಪ್ರದೇಶಗಳಿಗಿಂತ ಭಿನ್ನವಾಗಿದೆ.
ಈ ಭಿನ್ನತೆಯು ಈ ಭಾಗವನ್ನು ಭೌಗೋಳಿಕ, ಐತಿಹಾಸಿಕ ಮತ್ತು ದೈನಂದಿನ ಜೀವನ ಶೈಲಿಯ ದೃಷ್ಟಿಯಿಂದ ಪ್ರತ್ಯೇಕಗೊಳಿಸಿದಂತೆ ಕಂಡುಬಂದರೂ ಭಾಷೆ ಮತ್ತು ಸಂಸ್ಕೃತಿಯಿಂದ ಕರ್ನಾಟಕದೊo ದಿಗೆ ಘನಿಷ್ಠ ಸಂಬಂಧ ಹೊಂದಿದೆ ಎಂಬುದಕ್ಕೆ ಭಾಷಿಕ ರಚನೆಗಳಲ್ಲಿ ಹಲವಾರು ಪುರಾವೆಗಳು ಸಿಗುತ್ತವೆ.
ಈ ಭಾಗದಲ್ಲಿ ಸಾಮಾಜಿಕ, ಅನ್ಯಾಯಕ್ಕೊಳಗಾಗಿ ವ್ಯವಸ್ಥೆಯ ಅಂಚಿಗೆ ತಳ್ಳಲ್ಪಟ್ಟ ಸಮುದಾಯಗಳ ಶೋಷಿತ ಬದುಕಿನ ಬವಣೆಗಳು ದಕ್ಷಿಣ ಆಫ್ರಿಕಾದ ಕಪ್ಪು ಜನ ಮತ್ತು ಅಮೆರಿಕಾದ ನಿಗ್ರೋಗಳಿಗಿಂತ ಯಾವ ದೃಷ್ಟಿಯಿಂದಲೂ ಕಡಿಮೆ ಇಲ್ಲ.
೧೯೪೭ರ ಸ್ವಾತಂತ್ರ್ಯ ಈ ಭಾಗಕ್ಕೆ ವರದಾನವಾಗೇನು ಬರಲಿಲ್ಲ. ಸ್ವಾತಂತ್ರ್ಯ ನಂತರವೂ ಹಲವಾರು ದಶಕಗಳವರೆಗೆ ವಿದ್ಯುತ್ ಕಾಣದೆ ಕತ್ತಲಲ್ಲಿ ಮಿಣುಕು ದೀಪದ ಬೆಳಕಿನಲ್ಲಿಯೇ ಬದುಕಿದ್ದ, ಸಾವಿರಾರು ಜೋಪಡಿಗಳಲ್ಲಿ ವಾಸವಾಗಿದ್ದ ಜನ, ಶುದ್ಧ ಕುಡಿಯುವ ನೀರು ಕೂಡ ಕಾಣದೆ ಹಲವಾರು ಸ್ವಾತಂತ್ರ್ಯ ದಿನಾಚರಣೆಗಳನ್ನು ಆಚರಿಸಿದ್ದಾರೆ. ಇಂಥ ಸಂದರ್ಭದಲ್ಲಿ ಆರ್ಥಿಕನ್ಯಾಯ, ಸಾಮಾಜಿಕ ನ್ಯಾಯಗಳಿಂದ ವಂಚಿತ ಸಮುದಾಯಗಳಿಗೆ ಹೊಟ್ಟೆ ತುಂಬ ಅನ್ನ, ಬಾಯಿ ತುಂಬಾ ಅಕ್ಷರ ದೊರೆತದ್ದು ತೀರಾ ಇತ್ತೀಚಿಗೆ. ಇವುಗಳ ಹೊರತಾಗಿ ರಾಜಕೀಯ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಈ ಸಮುದಾಯಗಳು ಈಗಲೂ ಹೋರಾಟ ನಡೆಸಬೇಕಾಗಿದೆ.

ಇಂಥ ಸಾಮಾಜಿಕ ನ್ಯಾಯ ವಂಚಿತ, ಅಕ್ಷರವಂಚಿತ ಸಮುದಾಯದಲ್ಲಿ ಜನಿಸಿ, ಸಾಕ್ಷರತೆ ಪಡೆದ ಮೊದಲ ತಲೆಮಾರಿನ ಯುವಜನರು ತಮ್ಮ ಪಾರಂಪರಿಕ ನೋವನ್ನು ಸಾಹಿತ್ಯದಲ್ಲಿ ದಾಖಲಿಸಿದ್ದು ಒಂದು ಸಾಹಸವೇ ಸರಿ. ಇಂತಹ ಸಾಹಸದ ಎಲ್ಲ ಪ್ರಯತ್ನಗಳು ಡಾ.ಹನುಮಂತ ರಾವ್ ಬಿ. ದೊಡ್ಡಮನಿ ಅವರ “ಶಾರಿ ಶಾಣ್ಯಾ ಆದಾಗ” ಕೃತಿಯಲ್ಲಿ ಕಾಣುತ್ತೇವೆ.
ಡಾ. ಹನುಮಂತರಾವ್ ದೊಡ್ಡಮನಿಯವರು ವಿದ್ಯಾರ್ಥಿ ದೆಸೆಯಿಂದಲೇ ದಲಿತ ಸಂಘರ್ಷ ಸಮಿತಿಯ ಹಲವಾರು ಹಂತದ ಚಳುವಳಿಯಲ್ಲಿ ಸಕ್ರಿಯ ಕಾರ್ಯಕರ್ತರಾಗಿದ್ದವರು. ದಲಿತ ಚಳವಳಿಯ ನಡುಮನೆಗಳಾಗಿದ್ದ ಹಾಸ್ಟೆಲ್ (ವಸತಿ ನಿಲಯ)ಗಳ ವಾಸ ಅವರಿಗೆ ಕರ್ನಾಟಕದಾದ್ಯoತ ಓಡಾಡಿ ಚಳವಳಿ ಕಟ್ಟಿದ ಅನುಭವ ನೀಡಿತ್ತು. ಈ ಓಡಾಟ ಸಾಹಿತ್ಯ ರಚನೆಗೆ ಮೂಲದ್ರವ್ಯ ಮತ್ತು ಪಕ್ವವಾದ ವೈಚಾರಿಕತೆಯ ಅಡಿಪಾಯವನ್ನು ಅವರಿಗೆ ಒದಗಿಸಿತು.
ಅನಕ್ಷರಸ್ಥನಾದ ದಲಿತನ ಮತ್ತು ಸಾಕ್ಷರ ದಲಿತನ ಪ್ರಾಥಮಿಕ ಅನುಭವಗಳಲ್ಲಿ ಅಂತಹ ವ್ಯತ್ಯಾಸವೇನು ಇರದ ಕಾಲವೊಂದು ಇತ್ತು. ಅದೇ ಅವಮಾನ, ಅದೇ ಅಸ್ಪೃಶ್ಯತೆಯ ಅಪಮಾನ, ಸಾಮಾಜಿಕ ಅಸಮಾನತೆಗಳು ಇಡುಕಿರಿದು ಅಂದು ವಂಚಿತ ಜನಾಂಗವನ್ನು ಆವರಿಸಿದ್ದವು. ಮತ್ತು ಇಂದಿಗೂ ಅಲ್ಲಲ್ಲಿ ಇಂಥ ದಬ್ಬಾಳಿಕೆಗಳು ಘಟಿ ಸುತ್ತಲೇ ಇವೆ. ಇವುಗಳನ್ನು ವಿರೋಧಿಸುವ ಶಕ್ತಿ ಅನಕ್ಷರಸ್ಥರಿಗೆ ಇರುವುದಿಲ್ಲ.
ಆದರೆ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರು ಕರುಣಿಸಿದ ‘ಅಕ್ಷರ’ದಿoದ ಇಡೀ ಜಗತ್ತನ್ನು ನೋಡುವ ಒಳಗಣ್ಣನ್ನು ಅಕ್ಷಸ್ಥರು ಪಡೆಯುತ್ತಾರೆ. ಬಾಬಾ ಸಾಹೇಬರು ಕೊಟ್ಟ ಪ್ರಜ್ಞೆ ಇದು. ಈ ಪ್ರಜ್ಞೆಯೇ ದಲಿತರ ಅನುಭವಗಳನ್ನು ಅಕ್ಷರ ರೂಪಕ್ಕೆ ಇಳಿಸುವ ಕಥೆ, ಕಾದಂಬರಿ, ಕಾವ್ಯ ಇನ್ನೇನೋ “ಆಗಿ”ಸುವ ಕಲೆಯ ಸ್ವರೂಪ ಕೊಡಲು ಕಾರಣವಾಗುತ್ತದೆ.
ಈ ಎಲ್ಲಾ ಪ್ರಸ್ತಾವನೆಗೆ ಕಾರಣ”ಶಾರಿ ಶಾಣ್ಯಾ ಆದಾಗ” ಕೃತಿಯಲ್ಲಿ ಕಂಡು ಬಂದ ದಲಿತ ಕಥನ ಮತ್ತು ದಲಿತತ್ವದ ಅನುಭವಲೋಕ. ಇಲ್ಲಿನ ಕಥೆಗಳ ಲೋಕ ಕೇವಲ ದಲಿತಾನುಭವ ಮಾತ್ರವಾಗಿಲ್ಲ. ಮತ್ತು ಲಿಂಗಭೇದ – ಜಾತಿಭೇದದ ಸಂಗತಿಗಳ ಸುತ್ತ ಲಷ್ಟೇ ಇಲ್ಲಿಯ ಪಾತ್ರಗಳು ಸುಳಿ ದಾಡುವದಿಲ್ಲ. ಪುರುಷ – ಮಹಿಳೆ ಮೀರಿ ತೃತೀಯ ಲಿಂಗಿಗಳು ಅನುಭವಿಸುವ ಅಮಾನುಷ ಆಚಾರ – ವಿಚಾರಗಳನ್ನು ಸಹ ಇಲ್ಲಿನ ಪಾತ್ರಗಳು ಪ್ರತಿನಿಧಿಸುತ್ತವೆ. ಇಡೀ ಕಥೆಗಳ ದೃಷ್ಟಿಕೋನ ಮಹಿಳಾ ಕೇಂದ್ರಿತವಾಗಿದೆ. ಪ್ರತಿಯೊಂದು ಕಥೆಯ ಆಗುವಿಕೆಯಲ್ಲಿ ಮಹಿಳಾ ಪಾತ್ರಗಳದ್ದೇ ಪ್ರಧಾನ ಭೂಮಿಕೆ. ಒಂದೆಡೆ “ಗೌಡ”ನ ವಿಚಾರಗಳನ್ನು ಖಂಡಿಸುವ ಉದಾರವಾದಿ ಗುಣದ ಮೇಲ್ಜಾತಿಯ “ಗೌಡ್ತಿ” , “ಮುತ್ತು ಕಟ್ಟುವ” ಪದ್ಧತಿಯನ್ನು ತೀವ್ರವಾಗಿ ಖಂಡಿಸುವ,ಶೋಷಣೆಯನ್ನು ಧಿಕ್ಕರಿಸುವ “ನಾಗವ್ವ” ನಂತಹ ಪಾತ್ರಗಳು ಆದರ್ಶ ಮಹಿಳಾ ಮಣಿಗಳಾಗಿ ಕಂಗೊಳಿಸಿದರೆ “ಮುತ್ತುಕಟ್ಟುವ” ಪದ್ಧತಿಯನ್ನು ಆಚಾರದ ಹೆಸರಲ್ಲಿ ಜೀವಂತ ಇಡುವ ಇರಾದೆಯನ್ನು ತೋರಿಸುವ “ಆದವ್ವ”ನಂತಹ ಪಾತ್ರಗಳು ಇಲ್ಲಿ ಚಿತ್ರತವಾಗಿವೆ. ಹೀಗೆ ಒಳಿತು – ಕೆಡಕು, ಸರಿ – ತಪ್ಪು, ಸದ್ಗುಣ – ದುರ್ಗುಣಗಳನ್ನು ಎದುರುಬದುರಾಗಿರುವ ಸ್ತ್ರೀ ಪಾತ್ರಗಳ ದೊಡ್ಡ ಗುಂಪನ್ನೇ ಇಲ್ಲಿನ ಕಥೆಗಳಿಂದ ಹೆಕ್ಕಿ ತೆಗೆಯಬಹುದಾಗಿದೆ. “ಚಂಪಿ ಕನಸು” ಕಥೆಯ ಚೆoಪಾ ಆಗಲಿ,
“ಅನುಮಾನದ ಆಪತ್ತು” ಕಥೆಯ ಸಂಗವ್ವ, ಒಬ್ಬಾಕಿ, ಮತ್ತೊಬ್ಬಾಕಿ “ಒಂದಾದ ಮನ ಕಥೆಯ” ದೊಡ್ಡ ಗೌಡತಿ ಎಲ್ಲರೂ ಸದ್ಗುಣ – ದುರ್ಗುಣಗಳ ವಾರಸುದಾರರೇ ಆದರೂ ಲೇಖಕರು ಸ್ತ್ರೀ ಪ್ರಧಾನ ಪಾತ್ರಗಳನ್ನೇ ಬಹುತೇಕ ಎಲ್ಲಾ ಕಥೆಗಳ ಕೇಂದ್ರವಾಗಿಸಿದ್ದು ಅವರ ಅನುಭವ ಲೋಕದ ವ್ಯಾಪಕತೆಯನ್ನು ಬಿಂಬಿಸುತ್ತದೆ.
ಇಲ್ಲಿಯ ಕಥೆಗಳು ಜಾನಪದ ಲೋಕದ ಭರ್ತಿ ಕಣಜಗಳಂತೆ ರಾರಾಜಿಸುತ್ತವೆ. ಕಲ್ಯಾಣ ಕರ್ನಾಟಕದ ಮೌಖಿಕ ಪರಂಪರೆಯ ಹಾಡು, ಒಗಟು, ಗಾದೆ, ನುಡಿಗಟ್ಟುಗಳಿಂದ ಸಮೃದ್ಧವಾಗಿರುವ ಈ ಭಾಗದ ಜನರ ಬಾಯಲ್ಲಿ ಮಾತು – ಮಾತಿಗೂ ಜಾನಪದ ಸಾಹಿತ್ಯ ವಿಜೃಂಭಿಸುತ್ತದೆ. ಈ ಕಥೆಗಳಲ್ಲಿ ಬರುವ ಪ್ರಾದೇಶಿಕ ಪದಗಳ ಲಾಲಿತ್ಯ ಇತರೆ ಭಾಗದ ಕನ್ನಡಿಗರಿಗೆ ತಲುಪಬೇಕಾದರೆ ಶಬ್ದಕೋಶವೇ ಬೇಕಾಗಬಹುದೇನೋ.
ಈ ಕೃತಿಯಲ್ಲಿನ ೧೧ ಕಥೆಗಳಲ್ಲಿ ಗುರುತಿಸುತ್ತಾ ಹೋದಂತೆ ನೂರಾರು ಪ್ರಾದೇಶಿಕ ಪದಗಳು ಸಿಗುತ್ತವೆ. ಅದರಲ್ಲೂ ಜಾನಪದ ಪ್ರದರ್ಶನ ಕಲೆಗಳಾದ ಹಂತಿ ಹೊಡೆಯುವುದು, ಕಂಕಿ ತೆಗೆಯುವುದು, ಕಣ ಮಾಡುವುದು, (ಜೋಳದ) ತೆನೆ ಮುರಿಯುವುದು, ಇಂತಹ ಹಲವಾರು ಶ್ರಮದಾಯಕ ಕೆಲಸಗಳ ನಡುವೆ ವ್ಯಕ್ತವಾಗುವ ಈ ಪದಗಳು ಈಗ ಮಾಯವಾಗಿವೆ. ಆ ಎಲ್ಲ ಪದಗಳು ಇವರ ಕಥೆಗಳಲ್ಲಿ ದಾಖಲಾಗಿವೆ. ಉದಾಹರಣೆಗೆ ಸೂಡು, ತಳಕ, ಝಂಗ, ವಕಾರ, ಗೋಂಗಡಿ, ಕಣ್ಣೀ, ಜೂಲಾ, ಮುಂತಾದ ಪದಗಳು ಈಗ ಸವಕಲಾಗಿದ್ದರೂ ಅವುಗಳ ಬಳಕೆಯಾದಾಗ ಹಿಂದೆ ಆ ಪದ ಬಳಸಿದವರು ರೋಮಾಂಚತರಾಗಿ ಕೇಳಿ ಸಂತಸ ಪಡುತ್ತಾರೆ.
“ಶಾರಿ ಶಾಣ್ಯಾ ಆದಾಗ” ಎಂಬ ತಲೆಬರಹವೇ ಒಂದು ರೂಪಕದಂತಿದೆ. ಕಲ್ಯಾಣ ಕರ್ನಾಟಕದಲ್ಲಿ ಹುಡುಗಿ ಒಬ್ಬಳು ಋತುಮತಿಯಾಗುವ ಸಂಗತಿಗೆ ಹಲವಾರು ಸಮಾನಾರ್ಥಕ ಪದಗಳಿವೆ. ಮೈನೆರೆಯುವುದು, ದೊಡ್ಡವಳಾಗುವುದು, ಶ್ಯಾಣ್ಯಾ ಆಗುವುದು ಮುಂತಾಗಿ. ಈ ಕಥೆಯ ಶಾರಿ ಮೈನೆರೆಯುವದರ ಜೊತೆಗೆ ಸಾಲಿ ಕಲ್ತು ಕೂಡ ಶ್ಯಾಣ್ಯಾ ಆಗಿದ್ದಾಳೆ. ಅಂತೆಯೇ ಅವಳು “ಮುತ್ತು ಕಟ್ಟಿಸಿಕೊಳ್ಳು”ವುದನ್ನು ವಿರೋಧಿಸಿ ಮದುವೆ ಮಾಡಿಕೊಂಡು “ಒಬ್ಬ” ಗಂಡನ ಜೊತೆಗೆ ಬಾಳ್ವೆ ಮಾಡಲು ನಿರ್ಧರಿಸಿದ್ದಾಳೆ.
ಇಂಥ ರೂಪಕದಂತಹ ಕಥೆಗೆ ಕತೆಗಾರರು ಎಲ್ಲಿಯೂ ಕಲ್ಪನೆಯ ಚೌಕಟ್ಟು ತೊಡಿಸದೆ ಸಹಜ ಓದಿಗೆ ದಕ್ಕುವಂತೆ ನಿರೂಪಿಸಿದ್ದಾರೆ. ಇಡೀ ಕೃತಿಯ ಪ್ರಾತಿನಿಧಿಕ ಕಥೆಯಾದ
‘ಶಾರಿ ಶಾಣ್ಯಾ ಆದಾಗ’ ಕಲ್ಯಾಣ ಕರ್ನಾಟಕದ ದೈನಂದಿನ ಸಹಜ ಮತ್ತು ಎಲ್ಲಾ ಊರುಗಳ ಮನೆಗಳಲ್ಲಿ ನಡೆಯುವ ಘಟನೆಯನ್ನು ಆಧರಿಸಿದೆ.
ಇಲ್ಲಿ ಬರುವ ವೈವಿಧ್ಯಮಯ ವಸ್ತು ವಿಷಯಗಳ ಜೊತೆಗೆ ವಿಶಿಷ್ಟ ವಸ್ತುವುಳ್ಳ ಮತ್ತೊಂದು ಕಥೆ “ಒಂದಾದ ಮನ”. ಇಲ್ಲಿನ ಕಥಾಹಂದರ ಮಲ್ಲಾಬಾದ ಊರಿನ ಗೌಡರ ಮನೆತನದ ಘನತೆಯ ವಿಷಯವನ್ನು ಹೊಂದಿದೆ. ಒಡೆದು ಮೂರಾಬಟ್ಟೆಯಾದ ಕೂಡು ಕುಟುಂಬ ಒಂದು ಮರಳಿ ಒಂದಾಗುವ ಬಗೆ ಕಥೆಯಲ್ಲಿ ನಿರೂಪಿತವಾಗಿದೆ. ಒಂದು ಮನೆತನದ ಮಾರಕ ಗಳಿಕಗೆಯನ್ನು ಲೇಖಕ ದೂರ ನಿಂತು ನೋಡಿದರೂ ಇಡೀ ಘಟನೆಯ ವಿವರಗಳನ್ನು ಸ್ಪತಃ ಮನೆ ಮಗನಂತೆ ವಿಸ್ತರಿಸುವುದು ಕಂಡಾಗ ಲೇಖಕರು ಆ ಮನೆಯೊಂದಿಗೆ ಹೊಂದಿದ ಭಾವನಾತ್ಮಕ ಸಂಬಂಧವನ್ನು ಸೂಚಿಸುತ್ತದೆ.
“ಶಾರಿ ಶಾಣ್ಯಾ ಆದಾಗ” ಕಥಾ ಸಂಕಲನ ಚೆನ್ನಣ್ಣ ವಾಲಿಕಾರ್, ಜಿ. ಗೀತಾ ನಾಗಭೂಷಣ ಅವರ ಬರಹಗಳನ್ನು ಓದಿದಂತಹ ಅನುಭವ ಕೊಡುತ್ತದೆ.






0 Comments