ಹೆಣ…!
-ಎಸ್.ಜಿ.ಶಿವಶಂಕರ್
ಸಾವಿತ್ರಿ ಸೋತಿದ್ದಳು.
ಎಂತ ಪರಿಸ್ಥಿತಿಯಲ್ಲೂ ಸೋಲಬಾರದೆಂದುಕೊಂಡಿದ್ದವಳು ಸೋತಿದ್ದಳು!
ಅದು ಮತ್ತೆ ಕಾಣಿಸಿಕೊಂಡಿತ್ತು!
ತನ್ನೆಲ್ಲಾ ಬಲವನ್ನೂ ಒಗ್ಗೂಡಿಸಿಕೊಂಡು ಅದಮ್ಯ ಶಕ್ತಿಯಾಗಬೇಕೆಂದುಕೊಂಡಿದ್ದಳು ಸಾವಿತ್ರಿ. ಬದುಕಿನೊಂದಿಗೆ ಮುಖಾಮುಖಿಯಾಗುವ ಬಲವಾದ ಸಂಕಲ್ಪವನ್ನು ಮಾಡಿದ್ಡಳು. ಅಂತ ಹೋರಾಟಕ್ಕೆ ಸಜ್ಜಾಗಿದ್ದವಳು ಸೋತಿದ್ದಳು.
ನಿದ್ರೆಯಲ್ಲಿ ಮಗ್ಗಲು ಬದಲಿಸಿದಾಗ ಎಂತದೋ ಕೆಟ್ಟ ವಾಸನೆ .. ಏನೋ ಅನಿಷ್ಟ ಪಕ್ಕದಲ್ಲಿದ್ದಂತೆ…! ಕಣ್ಣು ಬಿಟ್ಟು ನೋಡಿದರೆ ಅದೇ ಹೆಣ .. ! ಹಲವಾರು ಸಲ ಕಂಡಿದ್ಡ ಹೆಣ… ಮತ್ತೊಮ್ಮೆ ಕನಸಿನಲ್ಲಿ ಹೊಸದಾಗಿ ಕಂಡಿತ್ತು!
ಸಾವಿತ್ರಿಯ ಮೈ ಬೆವರಿನಿಂದ ತೋಯ್ದಿತ್ತು. ಉಟ್ಟ ಬಟ್ಟೆ ಒದ್ದೆ-ಮುದ್ದೆಯಾಗಿತ್ತು . ಬಾಯಿ ಒಣಗಿತ್ತು ಕೈಗಳು ನಡುಗುತ್ತಿದ್ದವು. ಎದೆ ನಗಾರಿಯಂತೆ ಹೊಡೆದುಕ್ಕೊಳ್ಳುತ್ತಿತ್ತು!
ಅವಳು ಅದನ್ನು ನೋಡಿಬಿಟ್ಟಿದ್ದಳು; ತನ್ನ ಪಕ್ಕದಲ್ಲಿಯೇ .. ಮಲಗಿದ್ದ ಹೆಣವನ್ನು ! ಸತ್ತು ಬಹಳ ದಿನಗಳಾಗಿರಬೇಕು ! ಆಗಲೇ ಕೊಳೆಯಲು ಪ್ರಾರಂಭವಾಗಿತ್ತು….! ಹೆಣದ ಹಲವು ಭಾಗಗಳಿಂದ ದುವರ್ಾಸನೆ ಬೀರುವ ದ್ರವ ಸ್ರವಿಸುತ್ತಿತ್ತು! ಆ ಕೆಟ್ಟ ವಾಸನೆಗೆ ವಾಂತಿಯಾಗುವಂತೆ ಹೊಟ್ಟೆ ತೊಳಸುತ್ತಿತ್ತು ! ಅದು ತನ್ನ ಹಾಸಿಗೆಯ ಮೇಲೇ ಇತ್ತು .. ತನ್ನಷ್ಟಕ್ಕೆ ಮಲಗಿತ್ತು! ಬಹಳ ಹೊತ್ತಿನಿಂದ ತನ್ನ ಹಾಸಿಗೆಯನ್ನು ಹಂಚಿಕೊಂಡಿತ್ತು! ಅದರ ಬೆನ್ನು ತನ್ನ ಕಡೆಗಿದ್ದುದೇ ತನ್ನ ಪುಣ್ಯ ! ಅದೇನಾದರೂ ತನ್ನೆಡೆಗೆ ಮುಖ ಮಾಡಿ ಮಲಗಿದ್ಡಿದ್ದರೆ ತಾನಿದುವರೆವಿಗೂ ಬದುಕಿಯೇ ಇರುತ್ತಿಲಿಲ್ಲವೇನೋ ..?
ನಡುಗುವ ಕೈಗಳಿಂದ ದಿಂಬಿನಡಿಯಲ್ಲಿ ಕನ್ನಡಕಕ್ಕಾಗಿ ತಡಕಾಡಿದಳು! ಕನ್ನಡಕ ಸಿಕ್ಕಾಗ ಹಾರಿಹೋಗಿದ್ದ ಜೀವ ಮರಳಿ ಬಂದಂತಾಗಿತ್ತು! ಅದುರುವ ಕೈಗಳಿಂದ ಕನ್ನಡಕವನ್ನು ಮೂಗಿನ ಮೇಲೆ ಏರಿಸಿಕೊಂಡು ಅದು ಮಲಗಿದ್ದ ಕಡೆ ನೋಡಿದಳು.
ಪುಣ್ಯ! ಅಲ್ಲಿ ಆ ಹೆಣ ಇರಲಿಲ್ಲ! ವಾಸನೆಯೂ ಮಾಯವಾಗಿತ್ತು! ಅಲ್ಲಿ ಮಲಗಿದ್ದುದು ತನ್ನ ಗಂಡ ಸತ್ಯನಾಗಿದ್ಡ.
ಅಂದರೆ ತಾನು ಕಂಡಿದ್ದು ಕನಸು ! ಸಾವಿತ್ರಿ ದೊಡ್ಡದಾದ ನಿಟ್ಟುಸಿರನ್ನು ಶರೀರದಿಂದ ಹೊರಹಾಕಿದಳು.
ನಿಜ, ಸಾವಿತ್ರಿ ಮತ್ತೆ ಕನಸು ಕಂಡಿದ್ದಳು.
ಅದೇ ಕನಸು …. ಅದೇ ಹೆಣ .. ಅದೇ ಭಂಗಿ! ತನ್ನೊಂದಿಗೆ ಯಾವ ಮಾತನ್ನೂ ಆಡದೆ ತನ್ನಷ್ಟಕ್ಕೆ ತಾನು ನಿಲರ್ಿಪ್ತವಾಗಿ ಮಲಗಿದ್ದ ಹೆಣ …… ಕೆಟ್ಟ ವಾಸನೆಯನ್ನು ಬೀರುತ್ತಿದ್ದ ಹೆಣ…. ಚಲನೆ ಇಲ್ಲ .. ಶಬ್ದವೂ ಇಲ್ಲ! ಸಾವನ್ನು ನೆನಪಿಸುವ ಕೆಟ್ಟ ವಾಸನೆ ! ಸಾವಿತ್ರಿಯ ಬದುಕಿನ ರಾತ್ರಿಗಳಲ್ಲಿ ಮತ್ತೆ ಮತ್ತೆ ಅದೇ ಕನಸು ಬೀಳುತ್ತಲೇ ಇತ್ತು.
ಹಲವಾರು ತಿಂಗಳುಗಳಿಂದ ಅವಳಲ್ಲಿ ಭಯದ ತಿದಿಯನ್ನು ಒತ್ತುತ್ತಿದ್ದ ಕನಸು!
ಮೊದಲನೆಯ ಸಲ ಈ ಭಯಾನಕ ಕನಸನ್ನು ಕಂಡಾಗ ಸಾವಿತ್ರಿಯ ಜೀವ ಹಾರಿಹೋದಂತಾಗಿತ್ತು! ಅತೀವ ಭಯವಾಗಿತ್ತು! ಬಾಯಲ್ಲಿನ ಪಸೆ ಆರಿಹೋಗಿತ್ತು! ಕೂಗಬೇಕೆಂದರೂ ಕೂಗಲು ಸಾದ್ಯವಾಗಿರಲಿಲ್ಲ. ಮೈಯಲ್ಲಿನ ಶಕ್ತಿಯೆಲ್ಲಾ ಉಡುಗಿಹೋದಂತೆ…ಕೈಕಾಲನ್ನೂ ಅಲುಗಾಡಿಸಲಾರದಂತೆ..ಅರೆ ಸಾವಿನ ಸ್ಥಿತಿಯಂತೆ ಕಂಡಿತ್ತು … ಕಣ್ಣು ಬಿಟ್ಟು ನೋಡಿದಾಗ ಇನ್ನೊಂದು ರೀತಿಯ ಅನುಭವ..! ಕನಸಿನಲ್ಲಿ ಕಂಡಿದ್ದು ನನಸಿನಲ್ಲಿ ಕಂಡಂತಾಗಿ.. ಕನಸು ಇನ್ನೂ ಮುಗಿದಿಲ್ಲವೇನೋ ಎಂಬಂತಾಗಿತ್ತು! ಕಣ್ಣನ್ನು ತೆರೆದಿದ್ದರೂ .. ಕನಸು ಮುಗಿದು ತಾನೀಗ ಪ್ರಜ್ಞೆಯ ಅವಸ್ಥೆಯಲ್ಲಿರುವೆನೆಂಬ ಅರಿವಿದ್ದರೂ ಆ ಹೆಣ ಅಲ್ಲಿಯೇ ಇದೆಯೆನ್ನುವ ಭಯ! ಆ ಭಯಕ್ಕೆ ತಲೆಯೊಳಗೆ ಯಾರೋ ಸುತ್ತಿಗೆಯಿಂದ ಒಂದೇ ಸಮನೆ ಹೊಡೆಯುತ್ತಿರುವಂತೆ ಭಾಸವಾಗಿತ್ತು … ಇಡೀ ಮೈ ಬಾಂಬಿನಂತೆ ಸಿಡಿದು ಹೋಗುವುದೆಂಬ ಭಾವನೆ !
ಎಂತಹ ವಿಚಿತ್ರವಾದ ಕನಸು …? ತಾನು ಮಲಗಿರುವ ಹಾಸಿಗೆಯಲ್ಲಿ .. ತನ್ನ ಪಕ್ಕದಲ್ಲೇ ದುವರ್ಾಸನೆಯನ್ನು ಬೀರುವ ಒಂದು ಹೆಣ ಮಲಗಿದ್ದಂತೆ! ಆ ಹೆಣ ತನ್ನ ಹಾಸಿಗೆಯಲ್ಲೇ ಬಹಳ ಕಾಲದಿಂದಲೂ ಮಲಗಿದೆ ಎನ್ನುವಂತ ಭಾವನೆ ಬೇರೆ! ಅದೂ ಒಬ್ಬ ಪುರುಷನ ಹೆಣ! ಆದರೆ ಆ ಹೆಣ ತಾನು ಮಲಗಿದ್ಡ ವಿರುದ್ಧ ದಿಕ್ಕಿಗೆ ಮುಖಮಾಡಿದ್ದರಿಂದ ಅದು ಯಾರ ಹೆಣ ಎಂದು ತಿಳಿಯವ ಕುತೂಹಲವಾಗಿದ್ದರೂ ಅದನ್ನು ತಿಳಿಯಲಾರದಂತಾಗಿತ್ತು!
ದಶ ದಿಕ್ಕುಗಳಿಗೆ ಹರಡಿದ್ದ ಅದರ ಕೆಟ್ಟ ವಾಸನೆಗೆ ಶ್ವಾಸಕೋಶವೇ ಬಿರಿದು ಹೋಗುವುದೇನೋ ಎಂಬ ಭಾವನೆ ಮೂಡಿದ್ದಕ್ಕೆ ಸಾವಿತ್ರಿ ಬೆದರಿದ್ದಳು. ಬಾಯಿ ಒಣಗಿ, ನಾಲಗೆ ಬಾಯಿಯಿಂದ ಹೊರತಾದ ಯಾವುದೋ ಅಪರಿಚಿತ ವಸ್ತುವಿನಂತೆ ತೋರಿತ್ತು! ಯಾರನ್ನಾದರೂ ಕೂಗಬೇಕೆಂದರೆ ಬಾಯಿಯಿಂದ ಸ್ವರವೇ ಬರುತ್ತಿರಲಿಲ್ಲ … ಕೂಗಬೇಕೆಂದರೂ ಯಾರನ್ನು ? ಗಂಡನನ್ನು ? ಆದರೆ ಗಂಡನಿದ್ದ ಜಾಗದಲ್ಲೇ ಅದು ಮಲಗಿದೆಯಲ್ಲ ! ಹಾಗಾದರೆ ಸತ್ಯ ಎಲ್ಲಿ ? ಆ ಹೆಣದ ನೆನಪಿಗೆ ಸಾವಿತ್ರಿಗೆ ಮತ್ತೆ ಜ್ವರ ಬಂದಂತಾಯಿತು! ಆದರೆ ಅದನ್ನು ತಾನು ಕಂಡದ್ದು ಕನಸಿನಲ್ಲಿ ಅಲ್ಲವೇ ..? ಈಗ ತಾನು ಕನಸಿನಿಂದ ಎದ್ದಿರುವುದರಿಂದ ಅದು ಅಲ್ಲಿರುವ ಸಾಧ್ಯತೆಯಿಲ್ಲ! ಈ ಯೋಚನೆ ಅವಳಲ್ಲಿ ಮೂಡುವುದಕ್ಕೂ ಸತ್ಯ ಅಟ್ಯಾಚ್ಬಾತ್ರೂಮಿನಿಂದ ಈಚೆ ಬರುತ್ತಿರುವುದಕ್ಕೂ ತಾಳೆಯಾಗಿತ್ತು! ತನ್ನನ್ನು ನಂಬಿಸಿಕ್ಕೊಳ್ಳಲು ಸಾವಿತ್ರಿ ಅದು ಅಲ್ಲಿ ಇಲ್ಲ ಎಂದು ಹತ್ತಾರು ಸಲ ತನಗೆ ತಾನೇ ಹೇಳಿಕೊಂಡಳು.
ಹೆಣ ಅಲ್ಲಿಲ್ಲ ಎಂಬ ನಂಬಿಕೆ ಮೂಡಿದಾಗ ಸಾವಿತ್ರಿ ಧೀರ್ಘವಾದ ನಿಟ್ಟುಸಿರನ್ನು ಬಿಟ್ಟಳು. ‘ಇಂದಿಗೆ ಬಚಾವಾದೆ’ ಎಂದುಕೊಂಡಳು …. ಆದರೆ ನಾಳೆ ಎಷ್ವು ಬೇಗನೆ ಬಂದುಬಿಡುತ್ತದೆ! ಈ ಅನಿಷ್ಟ ಕನಸಿನಿಂದ ತನಗೆ ಮುಕ್ತಿಯಿಲ್ಲವೆ ? ಚಿಂತಿಸಿ ಸಾವಿತ್ರಿ ಹಣ್ಣಾಗಿದ್ದಳು.
ಸತ್ಯ ಹಾಸಿಗೆಯತ್ತ ಬಂದಾಗ ಸಾವಿತ್ರಿ ಅವನನ್ನು ಕೈ ಹಿಡಿದು ಹಾಸಿಗೆಯ ಮೇಲೆ ಕೂಡಿಸಿದಳು. ಗಾಢ ನಿದ್ರೆಯಿಂದ ಎದ್ದಿದ್ದ ಸತ್ಯನ ಕಣ್ಣುಗಳು ಕೆಂಡದುಂಡೆಗಳಂತಾಗಿದ್ದವು. ಅತೀವ ಅಸಹನೆಯಿಂದ ಕೇಳಿದ ಅವನು.
ಏನೇ ಅದು ?
ರೀ.. ಮತ್ತೆ ಅದು ಕಾಣಿಸಿಕ್ಕೊಳ್ತು!
ಅದಕ್ಕೆ ನನ್ನ ಜೀವ ಯಾತಕ್ಕೆ ತಿನ್ತೀಯ ! ಡಿಪ್ರೆಷನ್ ಮಾತ್ರೆ ತಗೊಂಡಿದ್ದೆಯಾ ..?
ಹೂ ತಗೊಂಡಿದ್ದೆ
ಮತ್ತೇನು ನಿನ್ನ ರಗಳೆ .. ಸುಮ್ಮನೆ ಮಲಕ್ಕೋ..
ಸತ್ಯ ಮುಸುಕೆಳೆದು ಮಲಗಿಬಿಟ್ಟ. ಸಾವಿತ್ರಿ ನಿಟ್ಟುಸಿರಿಟ್ಟಳು. ಕಣ್ಣಂಚಿನಲ್ಲಿ ನೀರು ತುಳುಕಿತು ! ತನ್ನ ಎಲ್ಲ ಸಮಸ್ಯೆಗಳಿಗೂ ಉತ್ತರ ಆ ಮಾತ್ರೆಯಲ್ಲಿದೆ ಎನ್ನುವಂತೆ ಮಾತಾಡಿದ್ದ. ಬದುಕಿನಲ್ಲಿ ಇಂತಹ ಎಷ್ಟು ರಾತ್ರಿಗಳು ಕಳೆದಿರುವೆ ? ಇನ್ನೆಷ್ಟು ರಾತ್ರಿಗಳು ತನಗಾಗಿ ಕಾದಿವೆಯೋ ? ಇದೆಂತಹ ಬದುಕು ? ಏತಕ್ಕಾಗಿ ಈ ಬದುಕು ?
ತಾನಿಂತಹ ಭಯದಲ್ಲಿರುವಾಗ ಎದೆಗಪ್ಪಿ, ತಲೆ ನೇವರಿಸಿ ಧೈರ್ಯ ನೀಡುವುದಿರಲಿ .. ಸಾಂತ್ವನದ ಒಂದು ಮಾತು ಹೇಳಲಾರದ ಗಂಡನ ಬಗ್ಗೆ ಸಾವಿತ್ರಿಗೆ ಅತೀವ ತಿರಸ್ಕಾರ ಮೂಡಿತು ! ಎದ್ದು ಹಾಲಿಗೆ ಬಂದಳು. ಡೈನಿಂಗ್ ಟೇಬಲ್ ಮೇಲಿದ್ದ ನೀರಿನ ಜಗ್ಗನ್ನು ಎತ್ತಿಕೊಂಡಳು; ಖಾಲಿಯಾಗಿತ್ತು. ವಾಟರ್ಫಿಲ್ಟರಿನಿಂದ ನೀರು ತುಂಬಿಸಿಕೊಂಡು ಗಟಗಟನೆ ಕುಡಿದಳು. ಮನಸ್ಸಿಗೆ ಸ್ವಲ್ಪ ಸಮಾಧಾನವಾದೆಂತಿನಿಸಿತು. ಮತ್ತೆ ವಾಪಸ್ಸು ರೂಮಿಗೆ ಮರಳುವ ಮನಸ್ಸಾಗಲಿಲ್ಲ. ಡ್ರಾಯಿಂಗ್ ರೂಮಿಗೆ ಬಂದಳು. ಸೋಫಾದ ಮೇಲೆ ಬಿದ್ದಿದ್ದ ದಿನಪತ್ರಿಕೆಯನ್ನು ಕೈಗೆತ್ತಿಕೊಂಡಳು. ಓದುವ ಮನಸ್ಸಿರಲಿಲ್ಲ. ನೆಪಕ್ಕೆ ಕೈಯಲ್ಲಿ ದಿನಪತ್ರಿಕೆಯನ್ನು ಹಿಡಿದುಕೊಂಡು ಮತ್ತೆ ಯೋಚನೆಗೆ ಜಾರಿದಳು.
ಕನಸಿನಲ್ಲಿ ಬಂದು ಕಾಡುವ ಹೆಣದ ಯೋಚನೆ ಸುಳಿಯಿತು! ಇದೆಂತಹ ಕನಸು ? ಇದುವರೆಗೂ ಸಾವಿರಾರು ಕನಸುಗಳನ್ನು ಕಂಡಿರಬಹುದಾದರೂ ಯಾವ ಕನಸೂ ಮತ್ತೆಮತ್ತೆ ಕಂಡಿರಲಿಲ್ಲ…. ಇದೊಂದೇ ಕನಸು ಎಡಬಿಡದೆ ಕಾಡುತ್ತಿರುವುದು.
ರಾತ್ರಿ ಹಗಲಾಗಿತ್ತು .. ನಿದ್ರೆ…. ದೂರ …. ಬಹು ದೂರ ಹೋಗಿತ್ತು!
ಈ ಕನಸೇಕೆ ತನ್ನನ್ನು ಕಾಡಬೇಕೆ ? ಇದು ಕನಸೋ ಇಲ್ಲಾ ಭೂತ ಚೇಷ್ಟೆಯೋ ? ಭೂತ, ದೆವ್ವ ಇವೆಲ್ಲಕ್ಕೂ ಅಸ್ತಿತ್ವ ಇದೆಯೇ ? ಕತೆ, ಕಾದಂಬರಿ, ಸಿನೀಮಾ ಮತ್ತು ಟಿವಿಯಲ್ಲಿ ಬಿಟ್ಟು ಬೇರಿನ್ನೆಲ್ಲೂ ಇಂತವನ್ನು ಕಂಡಿಲ್ಲ! ಇದು ಮನುಷ್ಯನ ಭಯದ ಕಲ್ಪನೆಯಲ್ಲದೆ ಇನ್ನೇನೂ ಅಲ್ಲವೆನಿಸುತ್ತದೆ… ಆದರೂ ಇಂತಹ ಭಯವೇಕೆ ?
ಈಗಾಗಲೇ ಅರೆ ಜೀವವಾಗಿರುವ ತನ್ನ ಉಳಿದ ಜೀವವನ್ನೂ ತಿನ್ನಲು ಈ ಕನಸು ಹಾತೊರೆಯುತ್ತಿರುವಂತಿದೆ! ವರ್ಷದಿಂದ ಎಡಬಿಡದೆ ತನ್ನ ಅನಿಷ್ಟ ಸೆಳೆತದಲ್ಲಿ ಹಿಡಿದಿದೆ! ಪದೇ ಪದೇ ಕಾಣಿಸುತ್ತಿರುವ ಈ ಕನಸಿಗೆ ಏನಾದರೂ ಅರ್ಥವಿದ್ದೀತೆ ? ಹಾಗೇನಾದರೂ ಇದ್ದರೆ ಅದು ಏನಾಗಿರಬಹುದು ? ಯಾರೊಂದಿಗೆ ಈ ವಿಷಯವನ್ನು ಮಾತಾಡಲಿ.. ? ತನ್ನವರು .. ಆತ್ಮೀಯರೆನ್ನುವವರನ್ನೆಲ್ಲಾ ಕಳೆದುಕೊಂಡಾಗಿದೆ ! ಸ್ನೇಹಿತರಿಲ್ಲ… ಬಂಧು-ಬಾಂಧವರಿಲ್ಲ.. ಗಂಡನೋ.. ? ಸಾವಿತ್ರಿ ಧೀರ್ಘವಾದ ನಿಟ್ಟುಸಿರುಬಿಟ್ಟಳು. ಆ ನಿಟ್ಟುಸಿರು ಅವಳ ಇಪ್ಪತ್ತು ವರ್ಷದ ದಾಂಪತ್ಯವನ್ನೂ, ಗಂಡ ಸತ್ಯನನ್ನು ಕುರಿತಾಗಿ ಸಹಸ್ರ ಪುಟಗಳಲ್ಲಿ ದಾಖಲಾಗಬಹುದಾಗಿರುವ ವಿಷಾದನೀಯವಾದ ಸಂಗತಿಗಳನ್ನು ಹೇಳುವಂತಿತ್ತು!
ಆಗಿನ್ನೂ ಹದಿನಾರು ವರ್ಷವಷ್ಟೆ ! ಕನಸು ಕಾಣುವ ವಯಸ್ಸು. ಎಂತೆಂತ ಸುಂದರ ಕನಸುಗಳನ್ನು ಹೆಣೆಯಲು ಮಗ್ಗವನ್ನು ಸಿದ್ಧಮಾಡಿಕೊಂಡಿದ್ದೆ ? ಇಡೀ ಬದುಕೆಲ್ಲಾ ಹಾಸಿಕ್ಕೊಳ್ಳುವಷ್ಟು ಕನಸಿನ ರತ್ನಗಂಬಳಿ! ಸುಂದರವಾದ ಬಣ್ಣಗಳು! ಮಕಮಲ್ಲಿನ ನೆನಪು ನೀಡುವಷ್ಟು ನವಿರಾದ ಎಳೆಗಳು… ಕನಸಿನಲ್ಲಿ ಕಾಣಿಸಿಕ್ಕೊಳ್ಳಲು ಯೋಗ್ಯನಾದ ರಾಜಕುಮಾರ ಇನ್ನೂ ರೂಪು ತಳೆದೇ ಇರಲಿಲ್ಲ .. ಅಗಷ್ಟೇ ತುಂತುರಾದ ಭಾವನೆಗಳಿನ್ನೂ ಘನವಾಗುತ್ತಿದ್ಡವು ! ಅಷ್ಟರಲ್ಲಿಯೇ ಎಲ್ಲ ಮುಗಿದೇ ಹೋಗಿತ್ತು! ತಾನು ಬೇಡವೆಂದು ಪ್ರತಿಭಟಿಸಿದರೂ ತನ್ನು ಯಾವುದೋ ಕ್ಷುದ್ರ ದೇವತೆಗೆ ಬಲಿ ನೀಡಲೆಂದು ಎಳೆದೊಯ್ಯುವ ಕುರಿಮರಿಯನ್ನು ಎಳೆದೊಯ್ಯುವಂತೆ ತನ್ನು ಎಳೆದೊಯ್ಡಿದ್ದರು! ಬಲಿಪಶುವಿನ ಕೊರಳಿಗೆ ಕೆಂಪು ಹೂವಿನ ಹಾರವನ್ನು ಹಾಕಿ ವಧಾಪೀಠಕ್ಕೆ ಒಯ್ಯುವಂತೆ ತನ್ನು ಮದುವೆ ಮಂಟಪದಲ್ಲಿ ಕುಳ್ಳಿರಿಸಿ ತನ್ನನ್ನು ಮದುವೆಗೆ ಬಲಿಗೊಟ್ಟಿದ್ದರು ಹೆತ್ತವರೆನ್ನಿಸಿಕೊಂಡವರು …. ಅವರಿಗೆ ಆಚೆ ಹೆಣ್ಣುಮಗಳನ್ನು ಅಟ್ಟುವುದೇ ಅನಿಷ್ಟವನ್ನು ಕಳೆದುಕೊಂಡು ನಿರಾಳವಾಗುವ ಧನ್ಯತೆಯ ಕ್ರಿಯೆಯಾಗಿತ್ತು …. ಅಕ್ಕನಿಗೂ ಹೀಗೇ ಮಾಡಿದ್ದರು …. ತನಗೂ ಅದೇ ಗತಿ ಒದಗಿತ್ತು! ಆಗೊಮ್ಮೆ ಚೀರಾಡಿದ್ದೆ ….’ನಿಮಗೆ ಹೆಣ್ಣು ಮಕ್ಕಳು ಏಕಾದರೂ ಬೇಕಿತ್ತು? ಹುಟ್ಟಿದ ಮಕ್ಕಳನ್ನು ಕತ್ತು ಹಿಸುಕಬಹುದಾಗಿತ್ತು .. ಇಲ್ಲ ತಿಪ್ಪೆಯಲ್ಲಿ ಬಿಸಾಡಬಹುದಾಗಿತ್ತು…’ ಎಂದು ಅತ್ತು ಗೋಳಾಡಿ ರಂಪ ಮಾಡಿದ್ದೆ ….. ಮೊದಲನೆಯ ಸಲ ತಾನು ಮನೆಯಲ್ಲಿ ಕೆನ್ನಾಲಿಗೆಯನ್ನು ಧರಿಸಿದ್ದೆ! ಅಲ್ಲಿಯವರೆಗೂ …. ಅಷ್ಟೂ ವರ್ಷ ಭಯದ ಮುದ್ದೆಯಾಗಿ … ನಯದ ಅವತಾರವಾಗಿ …. ಹೆಣ್ಣಾಗಿ ಹುಟ್ಟಿರುವುದೇ ಶಾಪವೆಂಬ ಪಾಪಪ್ರಜ್ಞೆಯಲ್ಲಿ ದಿನವೂ ದಹಿಸಿಕ್ಕೊಳ್ಳುತ್ತಿದ್ದೆ.
ಮದುವೆಯೆಂಬ ಕ್ರಿಯೆ ಮುಗಿದದ್ದು ಕೊಟ್ಟಿಗೆಯಿಂದ ಕಸಾಯಿಖಾನೆಗೆ ಬಂದಂತಾಗಿತ್ತು! ಕಾಡಿನಲ್ಲಿ ಯಾವ ಸಂಸ್ಕಾರವೂ ಇಲ್ಲದೆ ಬಿದ್ದಿದಂತಹ ಬಂಡೆ-ಸತ್ಯ! ಮೂರ್ಖತನವೋ ಭೂಮ್ಯಾಕಾಶವನ್ನು ವ್ಯಾಪಿಸುವಷ್ಟು . ತನ್ನಲ್ಲಿ ಕನಸುಗಳು ಅರಳುವ ಮುನ್ನವೇ ಹೆತ್ತವರು ಮೊಗ್ಗನ್ನು ಚಿವುಟಿ ಹಾಕಿದ್ದರೆ .. ಉಳಿದಿದ್ದ ಬೇರಿಗೂ ಆಸಿಡ್ ಸುರಿದ ಕೀತರ್ಿ ನಿಸ್ಸಂದೇಹವಾಗಿ ತನ್ನ ಪರಮ ಪಾತಕಿ ತನ್ನ ಗಂಡನೆನ್ನಿಸಿಕೊಂಡವನಿಗೆ ! ಇಂತದರಲ್ಲಿಯೇ ಎರಡು ಗಂಡು ಮಕ್ಕಳು .. ಈ ದೇಶದ ಬಲು ದೊಡ್ಡ ದುರಂತವೆಂದರೆ ಗಂಡ-ಹೆಂಡತಿಯರಲ್ಲಿ ಪರಸ್ಪರ ಪ್ರೀತಿಯಿಲ್ಲದಿದ್ದರೂ ಮಕ್ಕಳಾಗುವುದು ! ಈಗ ಆಶ್ಚರ್ಯವಾಗುತ್ತದೆ. ಆ ಅವಸ್ಥೆಗಳನ್ನೆಲ್ಲಾ ತಾನು ಹೇಗೆ ದಾಟಿ ಬಂದೆ ? ಸಾವಿತ್ರಿ ನಕ್ಕಳು .. ಎಂತಾ ನಗೆ ? ಹಾಲಾಹಲವನ್ನು ನುಂಗಿಯೂ ಅಮೃತ ಉಂಡೆನೆಂದು ತೋರಿಸುವ ನಗೆ !
ಡ್ರಾಯಿಂಗಿನ ಬಾಗಿಲಲ್ಲಿ ಗಂಡನ ಆಕೃತಿ ಕಂಡು ಸಾವಿತ್ರಿ ಅಚ್ಚರಿ! ಕಲ್ಲು ಕರಗುವುದೆ ? ಕೊರಡು ಕೊನರುವುದೆ ?
ಪ್ರೀತಿ ಪ್ರೇಮಗಳ ಹಸಿವಿನಲ್ಲೇ ಬೆಳೆದಿದ್ಡಳು ಸಾವಿತ್ರಿ! ಸಂಸ್ಕಾರಹೀನ, ಸ್ವಾರ್ಥ, ದ್ವೇಶ, ಅಸೂಯೆ ಮೆತ್ತಿಕೊಂಡ ಜನರ ಕಾಡಿನಲ್ಲಿ ಬೆಳೆದಿದ್ಡಳು ಸಾವಿತ್ರಿ!
ಯಾಕೆ ಹೀಗೆ ನನ್ನ ತಲೆ ತಿನ್ತೀಯ ?
ಗಂಡನ ಪ್ರೀತಿಯ ರೂಪ-ಸ್ವರೂಪ ಸಾವಿತ್ರಿಗೆ ಹೊಸದೇನಾಗಿರಲಿಲ್ಲ. ತಾನು ಅವನಿಂದ ಏನಾನ್ನಾದರೂ ಅಪೇಕ್ಷಿಸುವುದೇ ತಪ್ಪು ಎಂಬುದು ಇತ್ತೀಚೆಗಷ್ಟೆ ಅರಿವಾಗಿತ್ತು; ಬಹಳ ತಡವಾಗಿ..! ದೇಹ ಮನಸ್ಸುಗಳೆಲ್ಲಾ ದಗ್ಧವಾಗಿಹೋಗಿರುವಾಗ ಜ್ಞಾನ ಅರಳುವುದೆ ?
ಸಾವಿತ್ರಿಗೆ ಮಾತು ಕೂಡ ಅಸಹ್ಯವೆನಿಸಿತು. ಅತೀವ ಅಸಹ್ಯದಿಂದ ಗಂಡನತ್ತ ನೋಡಿದಳು. ಹೆದರಿ ಹಿಮ್ಮೆಟ್ಟುವ ಪ್ರಾಣಿಯಂತೆ ಸತ್ಯ ಹಿಂದಿರುಗಿದ. ಇದ್ಯಾವುದೂ ಅವಳಿಗೆ ಹೊಸದಾಗಿರಲಿಲ್ಲ. ಇಂತಹ ಅಸಂಖ್ಯ ರಾತ್ರಿಗಳು ಸಾವಿತ್ರಿಯ ಜೀವನದಲ್ಲಿ ಕಳೆದು ಹೋಗಿವೆ.
ಹೌದು ಗಂಡನಾಗಿ ಸತ್ಯ ತನಗೊಂದು ಉಪಕಾರವನ್ನು ಮಾಡಿದ್ದ. ಸುಮಾರು ಹತ್ತು ವರ್ಷಗಳ ಹಿಂದೆ ಇಂತದ್ದೇ ಒಂದು ರಾತ್ರಿ ನೋವಿನ ರಾಶಿಯಲ್ಲಿ ರೋಸಿದ ತಾನು ಅತ್ತು ರಂಪ ಮಾಡಿದ್ದೆ. ‘ಗಂಡನಾಗಿ ಪ್ರೀತಿಯನ್ನು ಕೊಟ್ಟಿಲ್ಲ .. ಪ್ರೇಮ ಎಂದರೇನೆಂದೇ ಅರಿಯದ ಕಾಡು ಮನುಷ್ಯ ನೀನು .. ಪ್ರಾಣಿಗಳಂತೆ ತಿನ್ನುತ್ತೀಯ .. ಪ್ರಾಣಿಗಳಂತೆ ಬದುಕುತ್ತೀಯ .. ಒಂದಿಷ್ಟೂ ಸಂಸ್ಕಾರ ಎಂದರೆ ಏನೆಂದೂ ತಿಳಿಯದ ನಿನ್ನನ್ನು ಒಪ್ಪಲಾರೆ.. ನಿನ್ನೊಂದಿಗಿನ ನನ್ನ ಬದುಕು ಇಲ್ಲಿಗೆ ಕೊನೆಯಾಗಲಿ!’ ವರ್ಷಗಳಿಂದ ಕೂಡಿಟ್ಟಿದ್ಡ ವಿಷವೆಲ್ಲಾ ಈಚೆ ಬಂದಿತ್ತು.
‘ನಾನು ನಿನಗೆ ತಾಳಿ ಕಟ್ಟಿದ ಗಂಡ. ನಿನ್ನ ಮೇಲೆ ನನಗೆ ಅಧಿಕಾರವಿದೆ .. ನಾನು ಹೇಳಿದಂತೆ ಕೇಳಿಕೊಂಡು ಮನೆಯಲ್ಲಿಬಿದ್ದಿರೋದು ಹೆಂಡತಿಯಾದ ನಿನ್ನ ಕರ್ತವ್ಯ’
ಸತ್ಯ ಜೋರು ಮಾಡಿದ್ದ.
‘ಈ ತಾಳಿಯನ್ನು ಕಟ್ಟಿದ್ದಕ್ಕೇ ನಿನಗೆ ಈ ಅಧಿಕಾರದ ಅಮಲಲ್ಲವೇ.. ತಗೋ ನಿನ್ನ ತಾಳಿ.. ಗಂಡನಾಗುವ ಯಾವುದೇ ಗುಣ ನಿನ್ನಲಿಲ್ಲದ ನಿನ್ನ ತಾಳಿಯ ಹಂಗು ನನಗೆ ಬೇಡ’
ತಾಳಿಯನ್ನು ಕಿತ್ತು ಅವನ ಮುಖದ ಮೇಲೆ ಎಸೆದಿದ್ಡೆ ! ಎಂದೂ ಬಾರದಿದ್ದ ಧೈರ್ಯ, ಅವೇಶ ಬಂದಿತ್ತು.
‘ನಾನು ಕಟ್ಟಿದ ತಾಳಿಯನ್ನು ತೆಗೆದ ಮೇಲೆ ಈ ಮನೆಯಲ್ಲಿರುವ ಅವಕಾಶ ನಿನಗಿಲ್ಲ’
‘ಈ ಮನೆಯಲ್ಲಿ ಇನ್ನೂ ಇರುವೆ ಎಂದು ತಿಳಿದಿದ್ದರೆ ನಿನ್ನಂತ ಮೂರ್ಖ ಜಗತ್ತಿನಲ್ಲಿಯೇ ಇಲ್ಲ! ನನಗೀಗ ಧೈರ್ಯ ಬಂದಿದೆ. ನಿನ್ನ ಹಂದಿತನ ಗೊತ್ತಾದ ತಕ್ಷಣ ನಾನು ಈ ಕೆಲಸ ಮಾಡಬೇಕಿತ್ತು ! ನನಗೆ ಇಷ್ಟವಾಗುವ ಒಬ್ಬ ಸಂಸ್ಕಾರವಂತನನ್ನು ಮದುವೆಯಾಗ್ತೀನಿ’
‘ನಿನ್ನೇನು ಹದಿನಾರು ವರ್ಷದ ಹುಡುಗಿ ಅಂತ ತಿಳಿದುಕೊಂಡಿದ್ದೀಯೇನು ? ನಲವತ್ತರ ಮುದಿಯನ್ನು ಯಾರಾದ್ರೂ ಮದುವೆಯಾಗ್ತಾರಾ ?’
ಸತ್ಯ ಗಹಗಹಿಸಿ ನಕ್ಕಿದ್ದ.
‘ಮದುವೆಯಾಗದಿದ್ಡರೆ ಬೇಡ .. ಹಸಿವಾದರೆ ಭಿಕ್ಷಾನ್ನವಿದೆ, ತೃಷೆಯಾದರೆ ಕೆರೆ-ಹಳ್ಳ-ಭಾವಿಗಳಿವೆ, ಮಾನ ಮುಚ್ಚೋಕೆ ಜನರು ಬಿಸಾಡಿದ ಅರಿವೆಗಳಿವೆ, ಶಯನಕ್ಕೆ ಹಾಳು ದೇಗುಲಗಳಿವೆ, ಆತ್ಮ-ಸಂಗಾತಕ್ಕೆ ದೇವರಿದ್ದಾನೆ !’
ಹಂಗಿನ ಬಟ್ಟೆಯನ್ನು ಕಿತ್ತೆಸೆದು, ಕೌಶಿಕನ ಸಂಬಂಧ ಹರಿದು ಕೇಶಾಂಬರಿಯಾಗಿ ಬೀದಿಗಿಳಿದಿದ್ದ ಅಕ್ಕಮಹಾದೇವಿಯ ಮಾತುಗಳು ತನ್ನ ಬಾಯಿಂದ ಮೊಳಗಿದ್ದವು! ಅದೆಷ್ಟು ಹೆಣ್ಣುಮಕ್ಕಳ ಬದುಕು ಸ್ವಾರ್ಥ ಸಮಾಜದ ಕೆಸರಲ್ಲಿ, ಕೌಶಿಕನಂತ ಕಾಮುಕರ ನೇಣಿನಲ್ಲಿ ಕೊನೆಯಾಗಿದೆಯೋ ? ಈ ಪರಿಸ್ಥಿತಿ ಎದುರಿಸುತ್ತಿರುವ ತಾನು ಮೊದಲನೆಯ ಹೆಣ್ಣೂ ಅಲ್ಲ ಕೊನೆಯವಳೂ ಅಲ್ಲ ಎನ್ನಿಸಿತ್ತು ಸಾವಿತ್ರಿಗೆ.
ದಿಕ್ಕು ತೋರದೆ ನೋಡುತ್ತಿದ್ದ ಸತ್ಯನನ್ನು ನೋಡಿ ನಕ್ಕಿದ್ಡೆ! ಮುಂದೆ ಹೇಳಿದ್ದೆ :
‘ಅದೂ ಆಗದಿದ್ದರೆ ಸರಿಯಾದ ಒಂದು ಆತ್ಮಹತ್ಯೆಯ ಪತ್ರವನ್ನು ಬರೆದಿಟ್ಟು ಸಾಯುತ್ತೇನೆ. ಈ ಬದುಕಿಗಿಂತಾ ಸಾವು ಎಷ್ಟೋ ಮೇಲು’
ಸತ್ಯ ಈ ಮಾತಿಗೆ ಹೆದರಿದ್ಡ! ಗೋಸುಂಬೆಯಂತೆ ಬಣ್ಣ ಬದಲಿಸಿ ತಪ್ಪಾಯಿತೆಂದು ಒಪ್ಪಿದ್ಡ.
ಮರುದಿನವೇ ತನ್ನನ್ನು ಮಾನಸಿಕ ವೈದ್ಯರ ಬಳಿ ಒಯ್ದಿದ್ದ ; ಹುಣ್ಣು ಆತನಲ್ಲಿ ಔಷಧಿ ತನಗೆ! ಇದಂತೂ ಒಂದು ರೀತಿಯಲ್ಲಿ ಒಳ್ಳೆಯದೇ ಅಯಿತು. ವೈದ್ಯರು ಕೊಟ್ಟ ಮಾನಸಿಕ ಖಿನ್ನತೆಯ ಮಾತ್ರೆಗಳು ತನಗೆ ತಾತ್ಕಾಲಿಕ ಉಪಶಮನವನ್ನೇನೋ ನೀಡಿದವು. ಆದರೆ ಈ ಕನಸು ಪ್ರಾರಂಭವಾಗಿತ್ತು!
ಕನಸಿನಲ್ಲಿ ಒಂದು ಹೆಣ ತನ್ನ ಪಕ್ಕದಲ್ಲಿ ಮಲಗಿರುತ್ತಿತ್ತು ! ದುವರ್ಾಸನೆಯನ್ನು ಬೀರುತ್ತಿತ್ತು. ಇಡೀ ಜಗತ್ತಿನಲ್ಲಿ ಅದಕ್ಕಿಂತ ಕೆಟ್ಟ ವಾಸನೆ ಬೇರೆ ಇರಲು ಸಾಧ್ಯವಿರಲಿಲ್ಲ.. ಅಂತ ಸಹಿಸಲಾರದ ವಾಸನೆ ! ಹೆಣದ ಮೈ ತುಂಬಾ ಜಿನಿಜಿನಿ ಎಂದು ಕಪ್ಪನೆಯ ದ್ರವ ಬೇರೆ ಒಸರುತ್ತಿತ್ತು! ಹೊಟ್ಟೆ ತೊಳಸಿ ವಾಂತಿ ಬರುವಂತಾಗುತ್ತಿತ್ತು ! ಕಣ್ಣು ತೆರೆದು ಅದು ಅಲ್ಲಿಲ್ಲ ಎಂದು ಖಾತ್ರಿ ಮಾಡಿಕ್ಕೊಳ್ಳುವವರೆಗೂ ಅದೆಂತಹ ಭಯ .. ಅದೆಷ್ಟು ಸತ್ಯವಾಗಿರುತ್ತಿತ್ತೆಂದರೆ ತಾನು ಬೆವರಿ ಬಸವಳಿಯುತ್ತಿದ್ದೆ .. ಆ ಹೆಣದೊಂದಿಗೆ ತಾನೂ ಹೆಣವಾಗಿಬಿಡುವೆನೇನೋ ಎಂಬ ಭಾವನೆ ! ಕಣ್ಣು ತೆರೆದಾಗಲಷ್ಟೆ ಕಂಡಿದ್ದು ಕನಸು ಎಂಬ ಅರಿವಾಗುತ್ತಿದ್ದುದು.
ಇದರಿಂದ ಮುಕ್ತಿ ಪಡೆಯಲು ತಾನು ಏನೆಲ್ಲಾ ಮಾಡಿದೆ ? ದೇವರುಗಳಿಗೆ ಹರಸಿಕೊಂಡಿದ್ದಾಗಿತ್ತು ! ದೇವರ ನಾಮವನ್ನು ಎಡಬಿಡದೆ ಜಪಿಸಿದ್ದಾಗಿತ್ತು. ಆದರೆ ಮುಕ್ತಿ ಮಾತ್ರ ಸಿಕ್ಕಿರಲಿಲ್ಲ… ಸಿಗುವಂತೆಯೂ ಇರಲಿಲ್ಲ. ಒಂದೆಡೆ ಕಾಡು ಮನುಷ್ಯನಂತ ಗಂಡ ಇನ್ನೊಂದೆಡೆ ಈ ಹೆಣ! ದಿನದಲ್ಲಿ ಎಚ್ಚರವಿರುವರೆಗೂ ಗಂಡನ ಕಾಟ ! ರಾತ್ರಿ ನಿದ್ರೆಯಲ್ಲಿ ಹೆಣದ ಭೀತಿ! ಇಂತ ಸ್ಥಿತಿಗಿಂತ ಸಾವು ಎಷ್ಟೋ ಮೇಲು ಎನಿಸಿ ಸಾವು ಬಯಸಿದ್ದೆ. ಆದರೆ ಸಾವು ಬರಬೇಕೆಲ್ಲ.. ? ಹೀಗೆ ಬೇಕೆಂದಾಗ ಸಾವೇನಾದರೂ ಬರುವಂತಿದ್ದರೆ ಭೂಮಿಯಲ್ಲಿ ಜನರೆಲ್ಲಿ ಉಳಿಯುತ್ತಿದ್ದರು ? ಸಾವಿತ್ರಿ ನಕ್ಕಳು. ಪ್ರತಿಯೊಬ್ಬ ಮನುಷ್ಯನೂ-ಹೆಂಗಸಿರಲಿ ಗಂಡಸಿರಲಿ-ಜೀವನದಲ್ಲಿ ಅನೇಕ ಬಾರಿ ಸಾವನ್ನು ಬಯಸಿರುತ್ತಾನೆ. ಹೀಗೆ ಬಯಸಿದಾಗೆಲ್ಲಾ ಸಾವು ಬಂದಿದ್ಡರೆ ಇಷ್ಟು ಹೊತ್ತಿನಲ್ಲಿ ಭೂಮಿ ಮನುಷ್ಯರಿಂದ ಮುಕ್ತವಾಗುತ್ತಿತ್ತು!
ಹತಾಶೆಯ ಪ್ರಪಾತದ ಕೊನೆಯ ಹಂತದಲ್ಲಿ ಸ್ವಾಭಿಮಾನ ಭುಗಿಲೆದ್ದಿತ್ತು. ಇಂತಾ ಒಂದು ಸಂದರ್ಭದಲ್ಲೇ ಅವಳಲ್ಲಿ ಹೋರಾಟದ ಸಂಕಲ್ಪ ಮೂಡಿದ್ದು. ತನ್ನನ್ನು ಘಾಸಿ ಮಾಡಿ, ಬದುಕಿನ ಎಲ್ಲಾ ಕ್ಷಣಗಳಲ್ಲೂ ನರಕ ದರ್ಶನ ಮಾಡಿಸಿದ ಎಲ್ಲಾ ವ್ಯಕ್ತಿಗಳನ್ನೂ ಮುಖಾಮುಖಿಯಾಗುವ, ಎಲ್ಲಾ ಶಕ್ತಿಗಳನ್ನೂ ಮಣಿಸುವ ಸಂಕಲ್ಪ ತೊಟ್ಟಿದ್ದಳು. ಹುಲ್ಲೆಯ ವೇಷ ತೊಡೆದು ಹುಲಿಯಾಗಲು ಅಣಿಯಾಗತೊಡಗಿದ್ದಳು.
ಮೊದಲಿಗೆ ಕನಸಿನಲ್ಲಿ ಕಾಣುವ ಹೆಣ .. ಅದೇನೆಂದು ತಿಳಿಯಬೇಕು! ಅದು ತನ್ನನ್ನೇಕೆ ಕಾಡಿಸುತ್ತಿದೆ ? ಅದು ಯಾರ ಹೆಣ ಎಂದು ತಿಳಿಯಲೇಬೇಕು. ಮತ್ತೆ ಕನಸು ಬಿದ್ದಾಗ ಹೆಣವನ್ನು ತನ್ನತ್ತ ತಿರುಗಿಸಿ ಅದರ ಮುಖವನ್ನು ನೋಡಬೇಕೆಂದು ಯೋಚನೆ ಮಾಡಿ ನಂತರ ತನ್ನಲ್ಲಿ ಮೂಡಿದ್ದ ಯೋಚನೆಗೆ ನಡುಗಿದ್ದಳು…!
ಕೊನೆಗೆ ಬದುಕಿನುದ್ದ ತನ್ನನ್ನು ಕಾಡಿದ ಯಾತನೆಗಳಿಗೆ, ಯೋಚನೆಗಳಿಗೆ – ಒಂದು ಕೊನೆ ಮುಟ್ಟಿಸಬೇಕೆಂದು ನಿಧರ್ಾರ ಮಾಡಿದಳು .. ತನ್ನ ಕನಸುಗಳಿಗೆ ಬೆಂಕಿ ಹಾಕಿದ ತಾಯಿ! ತನ್ನ ದೇಹ ಅರಳುವ ಮುನ್ನವೇ ಹಿಚುಕಿ ಹಣ್ಣು ಮಾಡಿದ ಗಂಡ. ತಾಯ್ತನದ ಮಾಧುರ್ಯವನ್ನೀಂಟುವ ಮುನ್ನ ಮಡಿಲು ತುಂಬಿ, ಬೆಳೆದಂತೆ ತನ್ನನ್ನು ಕೆಲಸದಾಳನ್ನಾಗಿ ಮಾಡಿಕೊಂಡಿರುವ ಮಕ್ಕಳು, ಸ್ವಾರ್ಥ ಮೆತ್ತಿಕೊಂಡು ಬದುಕಿನುದ್ದ ಚಾಚಿಕೊಂಡು, ಕಾಲದ ರಾತ್ರಿಯಲ್ಲಿ ಹಲಸಿನ ಅಂಟಿನಂತೆ ಮೆತ್ತಿಕೊಂಡುಬಿಡುವ ನೆಂಟರಿಸ್ಟರು. ಇನ್ನು ಸಾಧ್ಯವಿಲ್ಲ….. ಇವರೆಲ್ಲರಿಂದ ಮುಕ್ತಿ ಪಡೆಯಲೇಬೇಕು… ಇದೆಲ್ಲದರ ಅಂತ್ಯ ಕಾಣಲೇಬೇಕು… ಸತ್ಯ ಅನಾವರಣಗೊಳ್ಳಲೇಬೇಕು … ಮತ್ತೆ ಬದುಕಾದರೂ ಸರಿ ಇಲ್ಲವೆ ಬದುಕಿನ ಅಂತ್ಯವಾದರೂ ಸರಿ! ದಡವನ್ನು ಮುಟ್ಟಲೇಬೇಕು… ಈವರೆಗೆ ಈಜಿದ್ದು ಸಾಕು ಈಗ ನಿಲ್ಲಲು ಗಟ್ಟಿ ನೆಲದ ಅವಶ್ಯಕತೆಯಿದೆ.
ಹೀಗೆಲ್ಲಾ ಅಂದುಕೊಂಡರೂ ಸಹ ಅದರಂತೆ ಮಾಡಲಾರದೆ ಅಖಾಡದಲ್ಲಿ ಸೋತು ನೆಲಕಚ್ಚಿದ ಕುಸ್ತಿಪಟುವಿನಂತೆ, ಚಕ್ರವ್ಯೂಹ ಭೇಧಿಸಿಯೇಬಿಡುತ್ತೇನೆಂದು ಹೋಗಿ ಹತನಾದ ಅಭಿಮನ್ಯುವಿನಂತಾಗಿತ್ತು ಸಾವಿತ್ರಿಯ ಸ್ಥಿತಿ!
ಮತ್ತೆ ಮತ್ತೆ ಕನಸಿನಲ್ಲಿ ಕಾಣಿಸುತ್ತಿದ್ದ ಹೆಣ ಅವಳ ಧೈರ್ಯ ಉಡುಗಿಸಿತ್ತು. ಗಂಡನ ತಿರಸ್ಕಾರದ ಕಟು ವಾಕ್ಯಗಳ ಕೂರಂಬುಗಳಿಂದ ಅವಳ ಮನಸ್ಸು ರಣವಾತ್ತು! ಸಾವಿತ್ರಿ ಕುಸಿದು ಬಿದ್ದಿದ್ದಳು… ಸ್ವಾರ್ಥದ ಅಪರಾವತಾರದಂತಿದ್ದ ಇಬ್ಬರು ಗಂಡು ಮಕ್ಕಳು ಅವಳ ಸಂಕಲ್ಪ ಶಕ್ತಿಯನ್ನು ಕುಂದಿಸಿದ್ದರು!
‘ಇಲ್ಲ.. ತಾನು ಸೋಲಬಾರದು.. ಮತ್ತೆ ಹೋರಾಟ ಮಾಡುವೆ .. ಗೆಲುವು ನನ್ನದಾಗುತ್ತದೆ’
ಬಲವಾದ ನಿಧರ್ಾರ ಮಾಡಿ ಸೋಫಾದಿಂದ ಎದ್ದ ಸಾವಿತ್ರಿ ಆಚೆ ಬಾಗಿಲನ್ನು ತೆರೆದಳು.
ಹಿಂದೆಯೇ ಸತ್ಯ ಪ್ರತ್ಯಕ್ಷನಾದ. ಕೆಣಕುವಂತೆ ನುಡಿದ.
ತಲೆ ಕೆಟ್ಟಿದೆಯಾ ? ಇಷ್ಟೊತ್ತಿನಲ್ಲಿ ಯಾರಾದ್ರೂ ಆಚೆ ಹೋಗ್ತಾರಾ ?
ಸಾವಿತ್ರಿಯ ಕಣ್ಣುಗಳು ನಿಗಿನಿಗಿ ಉರಿದವು. ದಿಟ್ಟಿಸಿ ನೋಡಿದಳು. ಸತ್ಯ ಹಿಮ್ಮೆಟ್ಟಿದ.
ಒಳಗೆ ಸಾಯುವಂತ ಸೆಕೆ … ತಾರಸಿ ಮೇಲೆ ಹೋಗ್ತೀನಿ
ಎಂದವಳೇ ಸತ್ಯನ ಪ್ರತಿಕ್ರಿಯೆಗೆ ಕಾಯದೆ ಬಾಗಿಲಾಚೆ ಕಾಲಿಟ್ಟಳು.
ಸತ್ಯ ಅವಳ ಕೈಹಿಡಿದು ಬಲವಾಗಿ ನೋವಾಗುವಂತೆ ಒಳಗೆಳೆದ. ಅವನ ಕೈಝಾಡಿಸಿ ಸಾವಿತ್ರಿ ಅಚೆ ನಡೆದಳು.
ಹುಣ್ಣಿಮೆಯ ರಾತ್ರಿ ಕಳೆಯುತ್ತಾ ಮುಂಜಾವಿನತ್ತ ಕಾಲ ಸರಿಯುತ್ತಿತ್ತು. ಪೂರ್ಣ ವಿಕಸಿತ ಚಂದ್ರ ಮನೋಹರನಾಗಿದ್ದ . ತನ್ನ ತಣ್ಪನ್ನು ಎಲ್ಲೆಡೆ ಚೆಲ್ಲಿದ್ದ. ಆಕಾಶ ನಿರಭ್ರವಾಗಿತ್ತು. ಬಾನಿನಲ್ಲಿ ಒಂದೇ ಒಂದು ತುಣುಕು ಮೋಡವೂ ಇರಲಿಲ್ಲ. ತಂಗಾಳಿ ಜೋಗುಳ ಹಾಡುವಂತೆ ಸುಯ್ಲಿಡುತ್ತಿತ್ತು.
ತಾರಸಿಯ ಗಡಸನ್ನು ಲೆಕ್ಕಿಸದೆ ಸಾವಿತ್ರಿ ಮಲಗಿದಳು. ಕಣ್ಣು ತೆರೆದು ಚಂದ್ರನನ್ನೇ ನೋಡುತ್ತಾ ಸಮ್ಮೋಹನಕ್ಕೆ ಒಳಗಾದವಳಂತೆ ಮೆಲ್ಲಗೆ ಕಣ್ಣುಗಳನ್ನು ಮುಚ್ಚಿಕೊಂಡಳು.
ಭಯ, ಚಿಂತೆ, ಹತಾಶೆಗಳಿಂದ ಹಣ್ಣಾಗಿದ್ದ ಸಾವಿತ್ರಿಯನ್ನು ಮೆಲ್ಲನೆ ನಿದ್ರೆ ಆವರಿಸಿತು. ಅದ್ಭುತವಾದ ನಿದ್ರೆ. ಸಾವನ್ನು ನೆನಪಿಗೆ ತರುವಂತ ನಿದ್ರೆ! ಪ್ರಜ್ಞೆಯನ್ನು ಅಳಿಸಿ ಶಾಂತಿಯ ಸಾಗರದಾಳಕ್ಕೆ ಸೆಳೆದಿತ್ತು ನಿದ್ರೆ.
ಮನಸ್ಸು ನಿದ್ರೆಯ ಆಳ.. .. ಆಳಕ್ಕೆ ಜಾರಿತ್ತಲೇ ಇತ್ತು!
ಅದೆಷ್ಟು ಆಳ .. ? ನೂರಾರು.. ? ಅಲ್ಲಲ್ಲ.. ಸಾವಿರಾರು ಅಡಿಗಳ ನಿದ್ರೆಯ ಆಳ… ಆ.. ಆಳದಿಂದ ಯಾರೋ ತನ್ನನ್ನು ಮೇಲಕ್ಕೆ ಎಳೆಯುತ್ತಿರುವಂತೆ ಸಾವಿತ್ರಿಗನ್ನಿಸಿತು. ಶೂನ್ಯದಿಂದ ವಾಸ್ತವದ ವಲಯಕ್ಕೆ ಎಳೆದಂತೆ!
ಮೇಲೆಮೇಲೆ ತೇಲಿಬಂದಂತೆ ಅದೇ ದುವರ್ಾಸನೆ! ಸಾವಿನ ವಾಸನೆ.. ಹೆಣ ಇರುವ ಅರಿವು.. ಮತ್ತೆ ಕನಸೆ ? ಮತ್ತೆ ಆ ಹೆಣವೆ .. ?
ಸಾವಿತ್ರಿ ಮೆಲ್ಲಗೆ ಪಕ್ಕಕ್ಕೆ ತಿರುಗಿದಳು. ಹೌದು …. ಆದೇ ಹೆಣ ಅಲ್ಲಿತ್ತು! ತಾನಿರುವೆಡೆಯಿಂದಲೇ ದಶ ದಿಕ್ಕುಗಳಿಗೆ ದುವರ್ಾಸನೆ ಬೀರುತ್ತಿತ್ತು. ಸಾವಿತ್ರಿಗೆ ಬೆನ್ನು ಮಾಡಿತ್ತು ಹೆಣ. ಹಲವು ಭಾಗಗಳಿಂದ ದ್ರವವನ್ನು ನಿರಂತರವಾಗಿ ಒಸರುತ್ತಿತ್ತು ಹೆಣ.
ಸಾವಿತ್ರಿಯ ಪ್ರಜ್ಞೆ ಪ್ರಜ್ವಲಿಸಿತು .. ಹೋರಾಟದ ಅದಮ್ಯ ಚೇತನ ಚಿಮ್ಮಿತು. ಎಷ್ಟೇ ಅಸಹ್ಯವಾದರೂ .. ಭಯವಾದರೂ .. ತಾನಿದರ ರಹಸ್ಯ ತಿಳಿಯಲೇಬೇಕೆಂಬ ಸಂಕಲ್ಪ ಇನ್ನಷ್ಟು ದೃಢವಾಯಿತು. ಹೆಣದತ್ತ ಕೈಚಾಚಿದಳು.. ಕೈ ನಡುಗುತ್ತಿತ್ತು! ಮನಸ್ಸಿನ ಎಲ್ಲಾ ಮೂಲೆಗಳಿಂದಲೂ ಧೈರ್ಯವನ್ನು ಸೆಳೆದುಕೊಂಡು, ಎಂತವರೂ ಮುಟ್ಟಲು ಅಸಹ್ಯಪಡುವಂತಿದ್ದ ಆ ಹೆಣವನ್ನು ತನ್ನತ್ತ ತಿರುಗಿಸುವ ಪ್ರಯತ್ನ ಮಾಡಿದಳು..! ಅಂಟಂಟಾಗಿ ಹಸಿಹಸಿಯಾದುದನ್ನು ಮುಟ್ಟಿದ ಅನುಭವ ಸಾವಿತ್ರಿಗೆ. ಆ ಹೆಣ ಅಷ್ಟು ಸುಲಭದಲ್ಲಿ ತಿರುಗುವಂತೆ ಕಾಣಲಿಲ್ಲ… ಅದು ತುಂಬಾ ಭಾರವಿತ್ತು! ಎಷ್ಟು ಭಾರವೆಂದರೆ ಆನೆಯ ಭಾರವಿರುವಂತ ಅನುಭವ…! ಸಾವಿತ್ರಿಯಲ್ಲಿ ಧೈರ್ಯ ಇನ್ನಷ್ಟು ಹೆಚ್ಚಾಯಿತು. ಇನ್ನಷ್ಟು ಬಲದಿಂದ ಹೆಣವನ್ನು ತಿರುಗಿಸುವ ಪ್ರಯತ್ನ ಮಾಡಿದಳು…ಸಾಧ್ಯವಾಗಲಿಲ್ಲ! ಕೊನೆಗೆ ಎರಡೂ ಕೈಗಳಿಂದ ಅವಳು ಹೆಣವನ್ನು ಮಣಿಸುವ ಯತ್ನ ಮಾಡಿದಳು. ಅವಳ ಶಕ್ತಿಯ ಎದುರು ಹೆಣದ ಆಟ ನಡೆಯಲಿಲ್ಲ. ನಿಧಾನಕ್ಕೆ ಅದು ಇಂಚಿಂಚೇ ಹೊರಳತೊಡಗಿತು! ಸಾವಿತ್ರಿಯ ಎದೆ ಬಡಿತ, ಬಾಲ್ಯದ ದಿನಗಳಲ್ಲಿ ಈಶ್ವರ ದೇವಸ್ಥಾನದಲ್ಲಿ ಕೇಳಿದ, ಕಿವಿಯ ತಮಟೆ ಒಡೆದು ಹೋಗುವ ನಗಾರಿ ಬಡಿತದಂತೆ ಕೇಳಿತು! ಇಂಚಿಂಚೇ ಹೊರಳುತ್ತ ಕೊನೆಗೆ ಆ ಹೆಣ ಇಡಿಯಾಗಿ ಸಾವಿತ್ರಿಯ ಕಡೆಗೆ ತಿರುಗಿಬಿಟ್ಟಿತು!
ಅದರ ಕಣ್ಣು ಗುಡ್ಡೆಗಳು ಹೊರಗೆ ಚಾಚಿಕೊಂಡಿದ್ಡವು! ಬಾಯಿ ಗುಹೆಯಂತೆ ತೆರೆದುಕೊಂಡಿತ್ತು! ಹೆಣದ ಮುಖವನ್ನು ಫಕ್ಕನೆ ಗುರುತಿಸಿದ ಸಾವಿತ್ರಿ ಅದರ ಸ್ಥಿತಿ ಕಂಡು ಗಹಗಹಿಸಿ ನಕ್ಕಳು! ತಾನಿಷ್ಟಕ್ಕೇ ಇಷ್ಟೊಂದು ಹೆದರಿದೆನೆ ? ಇದು ತನ್ನನ್ನು ಹೆದರಿಸಿತೆ ?
ಯಾಕೆ ಹುಚ್ಚಿ ಥರಾ ಆಡ್ತಿದ್ದೀಯಾ ?
ಸಾವಿತ್ರಿ ಕಣ್ಣು ತೆರೆದಳು. ಕನಸು ಕರಗಿತ್ತು. ಅವಳಿಗೆ ತಾನು ತಾರಸಿಯ ಮೇಲೆ ಮಲಗಿರುವುದರ ಅರಿವಾಯಿತು! ತಾನು ಮಲಗಿದ್ದರೂ ಹೆಣ ಪಕ್ಕದಲ್ಲಿ ಇರಲಿಲ್ಲ!
ಆದರೆ ಹೆಣ ಎದುರು ನಿಂತಿತ್ತು! ಆದರದು ಜೀವಂತವಾಗಿತ್ತು! ಆ ಹೆಣ ತನ್ನ ಗಂಡ ಸತ್ಯನೇ ಆಗಿದ್ದ!
ಸತ್ಯದ ಅನಾವರಣವಾಗಿತ್ತು! ಪ್ರಜ್ಞೆಯಲ್ಲಿಯೂ ಸ್ವಪ್ನದಲ್ಲಿಯೂ ಕಾಡುತ್ತಿದ್ದ ಎಲ್ಲ ಸಮಸ್ಯೆಗಳ ಮೂಲ ಅವಳಿಗೆ ತಿಳಿದುಹೋಗಿತ್ತು !









ಸಾವಿತ್ರಿಯಂತಹ ನೂರಾರು ಹೆಣ್ಣುಗಳ ಕತೆಯಿದು ಎನ್ನಿಸುತ್ತದೆ. ಹೆಣದ ಪ್ರತಿಮೆ ತುಂಬಾ ಸಹಜವಾಗಿ ಉಪಯೋಗವಾಗಿದೆ. ತುಂಬಾ ಚೆನ್ನಾಗಿದೆ