ಲೋರ್ಕಾ ಎಂಬ ಒರತೆ
ಕನಕರಾಜ್ ಆರನಕಟ್ಟೆ
ಫೆಡೆರಿಕೊ ಗಾರ್ಸಿಯ ಲೋರ್ಕಾ ಸ್ಪಾನಿಶ್ ಭಾಷೆಯಲ್ಲಿ ಕಾವ್ಯ, ನಾಟಕಗಳನ್ನು ಬರೆದ ಜಾಗತಿಕ ಸಾಹಿತ್ಯ ವಲಯದಲ್ಲಿ ಇಂದಿಗೂ ಸಂಚಲನ ಮೂಡಿಸುವ ಬತ್ತದ ಒರತೆ. ಇಪ್ಪತ್ತನೆಯ ಶತಮಾನದ ಮುಖ್ಯ ಸಾಹಿತ್ಯ ಚಳುವಳಿಗಳಾದ ಸಿಂಬಲಿಸಮ್, ರ್ರಿಯಲಿಸಮ್ಗಳ ಹುಟ್ಟಿಗೆ ಕಾರಣರಾದವರಲ್ಲಿ ಮುಖ್ಯವಾದವನು.
ಸಮಾಜದಿಂದ ಬಹಿಷ್ಕೃತಗೊಂಡವರ, ಶ್ರಮಿಕ ವರ್ಗದ ಮತ್ತು ಜನಸಾಮಾನ್ಯರ ಬದುಕುಗಳನ್ನು ಚಿತ್ರಿಸಿದವನು; ಅವರ ಹಾಡು-ಪಾಡುಗಳನ್ನು ಮುಖ್ಯಧಾರೆಗೆ ತಂದವನು. ಜಿಪ್ಸಿಗಳ ಬಗ್ಗೆ ಅಗಾಧ ಪ್ರೀತಿಯನ್ನಿಟ್ಟುಕೊಂಡಿದ್ದ ಆತ ಅವರ ಸಂಗೀತ, ಹಾಡುಗಳನ್ನು ಜಗತ್ತಿಗೆ ಪರಿಚಯಿಸಿ ಕೊಂಡಾಡಿದವನು. ಸಮಾಜವಾದೀ, ಮಾರ್ಕ್ಸಿಸ್ಟ್ ಚಿಂತನೆಗಳಿಂದ ಪ್ರಭಾವಿತನಾಗಿ ಸ್ಪೈ ನ್ನ ಶ್ರಮಿಕ ವರ್ಗದ, ಬಡವರ ಉನ್ನತಿಗಾಗಿ ಕನಸಿದ ಇವನನ್ನು ೧೯೩೬ರಲ್ಲಿ ಸ್ಪೈನ್ನಲ್ಲಿ ನಡೆದ ಅಂತಃಕಲಹದಲ್ಲಿ ಅನಧಿಕೃತ ಫ್ಯಾಸಿಸ್ಟ್ ಸೇನೆ ಅವನನ್ನು ಗುಂಡಿಕ್ಕಿ ಕೊಂದಿತು.
೧೯೩೦ ರಲ್ಲಿ ಅಂತ್ಯವಾದ ಪ್ರೆಮೊದಾ ರೆವರಾನ ಸರ್ವಾಧಿಕಾರೀ ಆಡಳಿತ ಸ್ಪೇನ್ನಲ್ಲಿ ಚುನಾಯಿತ ರಾಜಕೀಯದ ಅಧ್ಯಾಯಕ್ಕೆ ಮುನ್ನುಡಿ ಬರೆಯಿತು. ಪ್ರಜಾಪ್ರಭುತ್ವದಡಿಯಲ್ಲಿ ಬಹುಮತದಿಂದ ಅಧಿಕಾರಕ್ಕೆ ಬಂದ ಸಮಾಜವಾದೀ, ಮಾರ್ಕ್ಸಿಸ್ಟ್ ಒಕ್ಕೂಟಗಳ ಸರ್ಕಾರ ದೇಶದ ತುಂಬಾ ಹಲವು ಬದಲಾವಣೆಗಳನ್ನು ಮಾಡುತ್ತಿತ್ತು. ಜನಪದ ಸಾಹಿತ್ಯ, ಸಂಗೀತ ರಂಗಭೂಮಿಗಳ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಲೋರ್ಕಾನನ್ನು ಯುವ ರಂಗಭೂಮಿ ಕೇಂದ್ರದ ನಿರ್ದೇಶಕನನ್ನಾಗಿ ಆ ಸರ್ಕಾರ ನೇಮಿಸಿತು.

ಹಳ್ಳಿಹಳ್ಳಿಗಳಿಗೆ ಸಂಚರಿಸಿ ರಂಗಭೂಮಿಯನ್ನು ಕಟ್ಟುತ್ತಾ ಜನಪದ ಸಂಗೀತಕ್ಕೆ ಹೊಸ ಸ್ಪರ್ಶ ನೀಡುತ್ತಿದ್ದ ಅವನು ಸಮಾಜವಾದೀ ನಿಲುವುಗಳನ್ನು ಹೋದ ಕಡೆಯೆಲ್ಲ ಮಾತನಾಡುತ್ತಾ ಜನರ ಪ್ರೀತಿಗೆ ಪಾತ್ರವಾಗುತ್ತಿದ್ದ. ಅಲ್ಲಿಯ ಬಲಪಂಥೀಯ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದ. ಚುನಾವಣೆಯ ಮೂಲಕ ಅಧಿಕಾರಕ್ಕೆ ಬಂದಿದ್ದ ಸಮಾಜವಾದೀ ಸರ್ಕಾರದ ವಿರುದ್ಧ ಆ ಸಂಘಟನೆಗಳು ಒಟ್ಟುಗೂಡಿ ದೇಶದ ತುಂಬಾ ಗಲಭೆಗಳನ್ನು ಸೃಷ್ಟಿಸಿ ಅಂತಃಕಲಹದ ಮೂಲಕ ಸರ್ಕಾರವನ್ನು ಪದಚ್ಯುತಗೊಳಿಸಿದವು. ಇದರ ಭಾಗವಾಗಿ ಮಾರ್ಕ್ಸಿಸ್ಟ್ ನಾಯಕರುಗಳನ್ನು, ಕಾರ್ಯಕರ್ತರುಗಳನ್ನು ಮತ್ತು ಮಾರ್ಕ್ಸಿಸ್ಟ್ ಒಲವುಳ್ಳ ಬರಹಗಾರರು, ಕಲಾವಿದರನ್ನು ಕೊಲ್ಲಲು ಶುರು ಮಾಡಿದವು.
೧೯೩೬ ರಲ್ಲಿ ಆರಂಭಗೊಂಡ ಈ ಹಲ್ಲೆ, ಕಗ್ಗೊಲೆಗಳನ್ನು ಮುನ್ನಡೆಸುತ್ತಿದ್ದ ಫ್ಯಾಸಿಸ್ಟ್ ಅನಧಿಕೃತ ಸೇನೆಯಾದ ‘ರಾ ಯ ಮಿಲಿಟರಿ ಪಡೆ’ ಯಾರ್ಯಾರನ್ನು ಕೊಲ್ಲಬೇಕೆಂದು ಪಟ್ಟಿ ಮಾಡಿತು. ಅದರಲ್ಲಿ ಮೊದಲ ಸಾಲಿನಲ್ಲಿದ್ದವನು ಗಾರ್ಸಿಯ ಲೋರ್ಕಾ. ಅವನ ಬರಹಗಳು ಕೀಳು ಅಭಿರುಚಿಯೊಂದಿವೆ ಎಂದೂ ಅವನೊಬ್ಬ ಹೋಮೊ ಸೆಕ್ಸುವಲ್ ಎಂದೂ ಆರೋಪಿಸಿ ಲೋರ್ಕಾನನ್ನು ಬಂಧಿಸಿ ಫುಯಂದೆ ಗ್ರಾಂದೆ ಎಂಬ ಬೆಟ್ಟದ ತಪ್ಪಲುಗಳ ನಡುವೆ ಎಳೆದುಕೊಂಡು ಹೋಗಿ ಸತತ ಎರಡು ದಿನ ಹಿಂಸೆ ನೀಡಿತು ಆ ಮಿಲಿಟರಿ ಪಡೆ.
ಲೋರ್ಕಾನೊಂದಿಗೆ ಮೂವರನ್ನು ಬಂಧಿಸಿ ಹಿಂಸಿಸಿ, ಅವರುಗಳಿಂದಲೇ ಗುಂಡಿ ತೋಡಿಸಿ ನಾಲ್ವರನ್ನೂ ಸಾಲಲ್ಲಿ ನಿಲ್ಲಿಸಿ ಅವರ ಹಣೆಗಳಿಗೆ ಗುಂಡಿಟ್ಟು ಕೊಂದು ಅದೇ ಗುಂಡಿಗಳಲ್ಲಿ ಮುಚ್ಚಲಾಯಿತು; ಹೀಗೆ ಮೂವತ್ತು ಸಾವಿರಕ್ಕೂ ಅಧಿಕ ಮಂದಿಯನ್ನು ಗುಂಡಿಟ್ಟು ಕೊಂದ ಆ ಅನಧಿಕೃತ ಸೇನಾ ಪಡೆ ಅಟ್ಟಹಾಸ ಮೆರೆದು ಪ್ರಭುತ್ವದ ದೌರ್ಜನ್ಯಕ್ಕೆ ಮುನ್ನುಡಿ ಬರೆಯಿತು. ಇಷ್ಟು ಮಾತ್ರವಲ್ಲದೆ ಲೋರ್ಕಾನ ಬರಹಗಳೆಲ್ಲವನ್ನೂ ಬಹಿರಂಗವಾಗಿ ಸುಟ್ಟು ಹಾಕಲಾಯಿತು.
೧೯೩೯ರಲ್ಲಿ ಅಧಿಕಾರಕ್ಕೇರಿದ Falangist ಎಂಬ ಬಲಪಂಥೀಯ ರಾಷ್ಟ್ರೀಯವಾದೀ ಅಮಲಿನ ಫ್ಯಾಸಿಸ್ಟ್ ಸರ್ಕಾರ ಗಾರ್ಸಿಯ ಲೋರ್ಕಾನ ಎಲ್ಲಾ ಬರಹಗಳನ್ನು ನಿಷೇಧಿಸಿತು. ದೈಹಿಕವಾಗಿ ಮಾತ್ರವಲ್ಲದೆ ಸಾಂಸ್ಕೃತಿಕವಾಗಿಯೂ ಲೋರ್ಕಾನನ್ನು ಕೊಂದು ಹಾಕಿದ ಆ ಸರ್ಕಾರ ೧೯೫೩ರ ಹೊತ್ತಿಗೆ ಕಳೆಗುಂದಿ ನಶಿಸತೊಡಗಿದಾಗ ಸ್ಪೇನ್ನ ರಾಜಕೀಯ ಸನ್ನಿವೇಶಗಳು ಮಹಾಯುದ್ಧಗಳ ನಂತರ ಬದಲಾಗಿ ಲೋರ್ಕಾ ಮರುಹುಟ್ಟು ಪಡೆದ. ಅವನ ಬರಹಗಳ ಮೇಲಿನ ನಿಷೇಧವನ್ನು ಹಿಂತೆಗೆದುಕೊಳ್ಳಲಾಯಿತು.

ಸಮಾಜದ ಅಂಚಿನಲ್ಲಿದ್ದವರ, ನಿರ್ಗತಿಕರ ಮತ್ತು ಅಸಹಾಯಕರ ಧ್ವನಿಯಾಗಲು ಬಯಸಿದ್ದ ಲೋರ್ಕಾ ಆ ಧ್ವನಿಗಳೊಳಗಿದ್ದ ಜ್ಞಾನವನ್ನು ಜಗತ್ತಿಗೆ ಪರಿಚಯಿಸುವ ಅವನ ಅಗಾಧ ಕನಸುಗಳಿಗೆ ಮತ್ತೆ ಜೀವ ಬಂದಿತು. ಸತ್ತರೂ ತನ್ನ ನಂಬಿಕೆಗಳಿಗೆ ದ್ರೋಹ ಬಗೆಯುವುದಿಲ್ಲ ಎಂದು ಧೃಡವಾಗಿದ್ದ ಲೋರ್ಕಾ ಫ್ಯಾಸಿಸ್ಟ್ ರ ಹಿಂಸೆಯಲ್ಲಿ ಬೆಂದು ಹೋದರೂ ಇಂದಿಗೂ ಅಸಂಖ್ಯಾತರ ಕಣ್ಣುಗಳಲ್ಲಿ ಅರಳುತ್ತಿದ್ದಾನೆ.
ಕಳೆದ ಶತಮಾನದಲ್ಲಿ ಯುರೋಪ್ನಲ್ಲಿ ನಡೆದ ಈ ಘಟನೆಯ ಮರುರೂಪವನ್ನು ನಮ್ಮ ತಲೆಮಾರು ಭಾರತವೂ ಸೇರಿದಂತೆ ಜಗತ್ತಿನ ಹಲವು ಕಡೆಗಳಲ್ಲಿ ನೋಡುತ್ತಿದ್ದೇವೆ. ಮೊನ್ನೆ ತಾನೇ ಆಫ್ಘಾನಿಸ್ಥಾನದಲ್ಲಿ ಕಲಾವಿದನೊಬ್ಬನನ್ನು ಬರ್ಬರವಾಗಿ ಕೊಲ್ಲಲಾಯಿತು. ಅಧಿಕಾರದ ಅಮಲೇರುವ ಬಲಪಂಥೀಯರಂತೆಯೇ ಅವರನ್ನು ವಿರೋಧಿಸುವ ಸ್ಪೇನ್ನ ಗಾರ್ಸಿಯ ಲೋರ್ಕಾ, ದಕ್ಷಿಣ ಅಮೆರಿಕಾದ ವಿಕ್ಟರ್ ಹಾರಾ ಅಂತಹ ಕಲಾವಿದರು ಇಲ್ಲಿ ಹುಟ್ಟುತ್ತಲೇ ಇರುತ್ತಾರೆ.
ಲೋರ್ಕಾನ ಒಂದು ಪದ್ಯ. ಇದು ಹೊರಡಿಸುವ ನಾದಗಳಿಗೆ ಅರ್ಥಗಳ ಹೆಣೆಯುವುದು ಓದುಗರಾದ ನಮಗೆ ಒಂದು ಸವಾಲು.
ಒಣಗಿದ ಕಿತ್ತಳೆ ಮರದ ಗೀತೆ
ಮರಕಟುಕನೇ,
ಕಡಿ ನೆರಳನ್ನು
ನನ್ನಿಂದ
ನೋವನ್ನು ದೂರ ಮಾಡು
ತಾಳೆನು ಈ ಫಲವಿಲ್ಲದ ಬದುಕನು.
ಕನ್ನಡಿಗಳ ನಡುವೆ ನಾನ್ಯಾಕೆ ಹುಟ್ಟಿದೆ?
ದಿನದ ಬೆಳಗು ನನ್ನ ಆವರಿಸುತ್ತದೆ
ನನ್ನ ನಕಲ ಮಾಡುತ್ತದೆ
ಹೊಳೆವ ಚುಕ್ಕಿಗಳೊಳಗೆ
ರಾತ್ರಿ.

ನನ್ನ ನೋಡದೆ ಬದುಕಬೇಕು ನಾನು.
ಎಲೆ ಕೀಟ ತೊಗಟೆ ಹಕ್ಕಿ
ಎಲ್ಲವ ನಾ ಕನಸಬೇಕು.
ಮರಕಟುಕನೇ,
ಕಡಿ ನೆರಳನ್ನು
ನನ್ನಿಂದ
ನೋವನ್ನು ದೂರ ಮಾಡು
ತಾಳೆನು ಈ ಫಲವಿಲ್ಲದ ಬದುಕನು.






0 Comments