ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಥೆ – 'ಸವೆದುಹೋದ ಯಂತ್ರ'

-ಟಿ.ತಿಮ್ಮಪ್ಪ

ಮೊಬೈಲಿನಲ್ಲಿ ಅಲಾರಾಂ ಒಂದೇ ಸಮ ಕಿರುಚತೊಡಗಿದಾಗ ಇನ್ನೂ ನನ್ನ ನಿದ್ರೆ ಆರಿರಲಿಲ್ಲ. ಈ ಬೆಳಿಗ್ಗೆ ಅನ್ನೋದು ಎಷ್ಟು ಬೇಗ ಬಂದುಬಿಡುತ್ತಪ್ಪ ಥತ್ ಎಂದು ಮನದಲ್ಲಿಯೇ ಗೊಣಗಿಕೊಂಡು ಎದ್ದು ಟವೆಲ್ ಹಿಡಿದು ಬಾತ್ ರೂಮಿಗೆ ಹೋದೆ. ಗಡ್ಡ ಕೆರೆದುಕೊಂಡು ಬ್ರಷ್ ಮಾಡಿ ಮೈಮೇಲೆ ಷವರ್ನಿಂದ ನೀರು ಎರೆದುಕೊಂಡು ಹೊರಗೆ ಬರುವ ಹೊತ್ತಿಗೆ ಆಗಲೇ ಸುಮಿ ಎದ್ದು ಕಿಚನ್ನಲ್ಲಿ ಬ್ರೇಕ್ಫಾಸ್ಟ್ ಸಿದ್ಧಪಡಿಸುತ್ತಿದ್ದಳು. ಭಾನುವಾರ ಒಂದು ದಿನ ಬಿಟ್ಟರೆ ಇನ್ನುಳಿದಂತೆ ಇದು ಪ್ರತಿದಿನದ ದಿನಚರಿ. ಐದು ನಿಮಿಷ ಹಾಸಿಗೆಯಿಂದ ಏಳುವುದು ತಡವಾದರೆ ಎಲ್ಲಾ ಅಲ್ಲೋಲಕಲ್ಲೋಲ. ಏಳು ಗಂಟೆಗೆ ಹತ್ತಿರದಲ್ಲಿದ್ದ ಬಸ್ಸ್ಟಾಪ್ನಿಂದ ಹೊರಡುವ ಸಿಟಿಬಸ್ ಮಾಯವಾಗಿರುತ್ತದೆ. ಮತ್ತೆ ಹದಿನೈದು ನಿಮಿಷ ಮುಂದಿನ ಬಸ್ಗಾಗಿ ಕಾಯ್ದು ಆತಂಕಪಟ್ಟುಕೊಂಡು ಪ್ರಯಾಣಿಸಿ ತರಾತುರಿಯಲ್ಲಿ ಇಳಿದು ಫ್ಯಾಕ್ಟರಿಯ ಒಳಗೆ ಓಡಿಹೋಗಬೇಕು. ಎಷ್ಟೋ ಬಾರಿ ಇದೆಲ್ಲಾ ಪಾಡುಪಟ್ಟು ಅನುಭವಿಸಿ ಸಾಕಾಗಿ ನಾನು ದಿನವೂ ತಪ್ಪದೇ ಅಲಾರಾಂ ಸದ್ದಿನೊಂದಿಗೆ ಎದ್ದುಬಿಡುತ್ತೇನೆ. ರಾತ್ರಿ ಮಲಗುವಾಗ ಮೊಬೈಲ್ನಲ್ಲಿ ಅಲಾರಾಂ ಸರಿಯಾಗಿ ಇಟ್ಟಿದ್ದೇನೋ ಇಲ್ಲವೋ ಎಂದುಕೊಂಡು ದಿಗಿಲಾಗಿ ಎರೆಡೆರಡು ಬಾರಿ ಪರೀಕ್ಷಿಸಿ ದೃಢಪಡಿಸಿಕೊಂಡು ಮಲಗುತ್ತೇನೆ. ಅಲಾರಾಂ ಹೊಡೆಯದೇ ಹೋದರೆ ಎಲ್ಲಿ ಹಾಸಿಗೆಯಲ್ಲಿ ಪರ್ಮನೆಂಟಾಗಿ ಮಲಗಿಬಿಡುತ್ತೇನೋ ಎನ್ನುವ ಭಯ ನನ್ನದು.
ಟವೆಲ್ ಸುತ್ತಿಕೊಂಡು ಬಾತ್ರೂಮಿನಿಂದ ಹೊರಗೆ ಬಂದು ಕನ್ನಡಿಯ ಮುಂದೆ ನಿಂತರೆ ಸಣ್ಣದಾಗಿ ಗಾಳಿ ಹೊಡೆದ ಬಲೂನಿನಂತೆ ನನ್ನ ಹೊಟ್ಟೆ ಮುಂದಕ್ಕೆ ಬಂದಿರುವುದು ಕಾಣಿಸುತ್ತದೆ. ವಯಸ್ಸಿನ ಪರಿಣಾಮವೋ ಅಥವಾ ಪ್ರತಿ ಭಾನುವಾರ ಹೊಟ್ಟೆಗೆ ಇಳಿಯುತ್ತಿದ್ದ ಎರಡು ಪೆಗ್ ವ್ಹಿಸ್ಕಿಯ ಪ್ರಭಾವವೋ ತಿಳಿದಿಲ್ಲ. ತುಂಬಿದ ಸಿಟಿಬಸ್ಸಿನಲ್ಲಿ ನಿಂತುಕೊಂಡು ಕೆಲವೊಮ್ಮೆ ತೇಲಾಡಿಕೊಂಡು ವಾಪಸ್ ಬರುವಾಗ ಬೆವರಿನಿಂದ ಮೈಯೆಲ್ಲಾ ಒದ್ದೆಯಾಗಿ ನನ್ನ ಬೆವರನ್ನೇ ಅಲ್ಲದೆ ಸುತ್ತಲಿನವರ ಬೆವರಿನ ಸುವಾಸನೆಯನ್ನು ಆಘ್ರಾಣಿಸುವುದು ಇದ್ದದ್ದೇ, ಬೆಳಿಗ್ಗೆಯಾದರೂ ಫ್ರೆಷ್ ಆಗಿ ಇರೋಣವೆಂದು ಬಾಡಿಸ್ಪ್ರೇ ಸಿಂಪಡಿಸಿಕೊಂಡು ಸುಮಿ ಇಸ್ತ್ರಿ ಮಾಡಿಸಿಟ್ಟಿದ್ದ ನನ್ನ ಫ್ಯಾಕ್ಟರಿಯ ಯೂನಿಫಾರ್ಮ ಧರಿಸಿ ಟೀವಿ ಸ್ಟಾಂಡಿನ ಮೇಲಿದ್ದ ಹಾಲಿನ ಕೂಪನ್ ತೆಗೆದುಕೊಂಡು ಹವಾಯಿ ಚಪ್ಪಲಿ ಮೆಟ್ಟಿಕೊಂಡು ಬಾಗಿಲನ್ನು ಮುಂದಕ್ಕೆಳೆದುಕೊಂಡು ಗೇಟು ದಾಟಿ ರಸ್ತೆಗಿಳಿದೆ.
ಪಕ್ಕದ ಮನೆಯ ಹೊರಗೆ ವೃದ್ಧರೊಬ್ಬರು ಗೇಟಿನ ಮೇಲೆ ಎರಡೂ ಮೊಣಕೈ ಊರಿಕೊಂಡು ನಿಂತಿದ್ದರು. ನೀಟಾಗಿ ಬಾಚಿದ ಬಿಳಿ ತಲೆಕೂದಲು, ಬಿಳಿಯ ಶಟರ್ು ಮತ್ತು ಬಿಳಿಯ ಪಂಚೆ ಧರಿಸಿ ಕಣ್ಣುಗಳಿಗೆ ಗೋಲ್ಡ್ ಫ್ರೇಮಿನ ಕನ್ನಡಕ ಹಾಕಿದ್ದು ಕಂಡು ಯಾರೋ ಶ್ರೀಮಂತ ವೃದ್ಧರು ಪಕ್ಕದ ಮನೆಗೆ ಇದೀಗ ಬಾಡಿಗೆಗೆ ಬಂದಿರಬಹುದು ಎಂದು ಮನಸ್ಸಿನಲ್ಲಿಯೇ ಅಂದುಕೊಂಡು ರಸ್ತೆಯಲ್ಲಿ ಹವಾಯಿ ಚಪ್ಪಲಿಯನ್ನು ಎಳೆದುಕೊಂಡು ಸರಸರ ಸದ್ದು ಮಾಡುತ್ತಾ ಮುಂದೆ ನಡೆದೆ. ಆ ವೃದ್ಧರು ನನ್ನನ್ನೇ ನೋಡಿ ಮುಗುಳ್ನಕ್ಕಿದ್ದು ಕಾಣಿಸಿತು. ಅಯ್ಯಯ್ಯೋ! ಯಾರೋ ಏನೋ..? ಐದು ನಿಮಿಷ ಮಾತನಾಡುತ್ತಾ ನಿಂತರೆ ನನ್ನ ವೇಳಾಪಟ್ಟಿಯೇ ಬದಲಾಗಿ ಏಳು ಗಂಟೆಯ ಸಿಟಿಬಸ್ಸು ತಪ್ಪಿಹೋಗಿ ಪರದಾಡಬೇಕು ಎಂದುಕೊಂಡು ಅವರ ಕಡೆ ಕಣ್ಣೆತ್ತಿಯೂ ನೋಡದಂತೆ ಮುಂದಕ್ಕೆ ಹೋದೆ. ಹಾಲಿನ ಬೂತ್ನ ಬಳಿ ಹೋಗಿ ಹಾಲಿನ ಪ್ಯಾಕೆಟ್ಟು ಹಿಡಿದು ವಾಪಸ್ ಬರುವಾಗ ಪಕ್ಕದ ಮನೆಯ ಗೇಟಿನ ಕಡೆ ಕಿರುಗಣ್ಣಿನಲ್ಲಿಯೇ ದೃಷ್ಟಿ ಹಾಯಿಸಿದೆ. ಸದ್ಯ ಅವರು ಅಲ್ಲಿರಲಿಲ್ಲ.
ನಮ್ಮ ಮನೆಯ ಗೇಟನ್ನು ತಳ್ಳಿಕೊಂಡು ಒಳಗೆ ಹೋಗಿ ಹಾಲಿನ ಪ್ಯಾಕೆಟ್ಟನ್ನು ಕಿಚನ್ನಲ್ಲಿಟ್ಟಾಗ ಸುಮಿ ಆಗಲೇ ಬಿಸಿ ಬಿಸಿ ಉಪ್ಪಿಟ್ಟನ್ನು ತಟ್ಟೆಯಲ್ಲಿ ಹಾಕಿ ಡೈನಿಂಗ್ ಟೇಬಲ್ಲಿನ ಮೇಲಿಟ್ಟು ಆರಲೆಂದು ಫ್ಯಾನ್ ಹಾಕಿದ್ದು ಕಾಣಿಸಿತು. ಉಪ್ಪಿಟ್ಟು ತಿಂದು ಮುಗಿಸುವಷ್ಟರಲ್ಲಿ ಸುಮಿ ಕಾಫಿಲೋಟವನ್ನು ಡೈನಿಂಗ್ ಟೇಬಲ್ ಮೇಲಿಟ್ಟು ಮಗಳ ರೂಮಿಗೆ ಹೋಗಿ ಇನ್ನೂ ಮಲಗಿದ್ದ ಮಗಳನ್ನು ‘ಎದ್ದೋಳೇ ಕಾಲೇಜಿಗೆ ಲೇಟಾಗುತ್ತದೆ’ ಎಂದು ಕೂಗಿದ್ದು ಕೇಳಿಸಿತು. ತಿಂಡಿ ತಿಂದು ಕಾಫಿ ಲೋಟ ಹಿಡಿದು ಹಾಲ್ಗೆ ಬಂದು ಕುಳಿತಾಗ ಸುಮಿ ಅವತ್ತಿನ ನ್ಯೂಸ್ಪೇಪರಿನ ಮೇಲೆ ಕಣ್ಣಾಡಿಸುತ್ತಿದ್ದಳು. ‘ಪಕ್ಕದ್ ಮನೆಗೆ ಯಾರೋ ಬಾಡಿಗೆಗೆ ಬಂದಿರೋ ಆಗಿದೆ ಕಣೆ’ ಎಂದೆ. ಅವಳಿಗೆ ಕೇಳಿಸಲಿಲ್ಲವೆಂಬಂತೆ ಪೇಪರನ್ನು ಮುಖಕ್ಕೆ ಅಡ್ಡವಾಗಿಟ್ಟುಕೊಂಡು ‘ರೀ ಇವತ್ತಾದ್ರೂ ಬರ್ಬೇಕಾದ್ರೆ ಟೀವಿದು ಕರೆನ್ಸಿ ಹಾಕ್ಸಿ, ಎರ್ಡು ದಿವ್ಸ ಆಯ್ತು.. ನನಗೂ ಹೇಳಿ ಹೇಳಿ ಸಾಕಾಯ್ತು’ ಎಂದು ಗೊಣಗಿದಾಗ ನನಗೆ ನನ್ನ ತಪ್ಪಿನ ಅರಿವಾಗಿತ್ತು. ಎರಡು ದಿನದಿಂದ ಬೆಳಿಗ್ಗೆ ಹೋಗುವಾಗ ಜ್ಞಾಪಕದಲ್ಲಿಟ್ಟುಕೊಂಡು ಹೋದರೆ ಸಂಜೆ ಬರುವಾಗ ಮರೆತುಹೋಗುತ್ತಿತ್ತು. ‘ರೀ, ಮರೀಚಿಕೆ ಅಂತ ಹೊಸ ಧಾರಾವಾಹಿ ಶುರುವಾಗಿದೆ ಕಣ್ರೀ..ತುಂಬಾ ಇಂಟೆರೆಸ್ಟಿಂಗಾಗಿದೆ’ ಎಂದು ಮೊನ್ನೆ ರಾತ್ರಿ ಸುಮಿ ಹೇಳಿದ್ದು ನೆನಪಿಗೆ ಬಂದು ಅಮ್ಮಾವ್ರ ಬಿಗುಮಾನದ ಗುಟ್ಟು ತಿಳಿಯಿತು. ‘ಮರ್ತೇ ಹೋಯ್ತು ಕಣೇ.. ಇವತ್ತು ಬರುವಾಗ ಗ್ಯಾರಂಟಿ ಹಾಕಿಸ್ತೀನಿ’ ಎಂದೆ. ಸುಮಿ ಮನೆಗೆ ರೇಷನ್ ತರೋದ್ರಿಂದ ಹಿಡಿದು ಲೈಟು ಬಿಲ್ಲು ಕಟ್ಟೋದು, ತರಕಾರಿ ತರೋದು, ಗ್ಯಾಸ್ ಸಿಲಿಂಡರ್ ತರಿಸೋದು ಎಲ್ಲವನ್ನೂ ಅವಳೇ ಮಾಡುತ್ತಿದ್ದಳು. ಈ ಟೀವಿ ಕರೆನ್ಸಿ ಹಾಕಿಸೋದಿಕ್ಕೆ ಮುಖ್ಯರಸ್ತೆಯಲ್ಲಿ ಬಸ್ನಿಲ್ದಾಣದಿಂದ ಸ್ವಲ್ಪ ದೂರ ಹೋಗಬೇಕಿತ್ತು. ಅದರಿಂದಾಗಿ ಆ ಕೆಲಸ ನನ್ನ ಪಾಲಿಗೆ ಬಂದಿತ್ತು.
ಕಾಫಿ ಕುಡಿದು ಮುಗಿಸುವಷ್ಟರಲ್ಲಿ ಕೈಯಲ್ಲಿ ಮೊಬೈಲಿಡಿದು ಮೈಮುರಿದುಕೊಂಡು ಎದ್ದು ಬಂದ ನನ್ನ ಮುದ್ದಿನ ಮಗಳು ಪ್ರಕೃತಿ ‘ಪಪ್ಪಾ, ನಂಗೊಂದು ಹೊಸ ಮೊಬೈಲ್ ಕೊಡ್ಸು ಪಪ್ಪಾ.. ನನ್ ಫ್ರೆಂಡ್ಸೆಲ್ಲಾ ಎಂತೆಂಥಾ ಮೊಬೈಲ್ ಇಟ್ಕೊಂಡಿದಾರೆ ಗೊತ್ತಾ.. ಇದರಲ್ಲಿ ಇಂಟರ್ನೆಟ್, ಫೇಸ್ಬುಕ್ ಓಪನ್ ಮಾಡೋದಿಕ್ಕೆ ಒಂದ್ ಗಂಟೆ ಆಗುತ್ತೆ.. ಡಬ್ಬಾ ಸೆಟ್’ ಎಂದಾಗ ‘ಆಯ್ತು ಚಿನ್ನು..ಈ ಮಂತ್ ಸ್ಯಾಲರಿ ಬಂದ ಮೇಲೆ ಕೊಡಿಸ್ತೀನಿ’ ಎಂದೆ. ಮೊದಲನೇ ವರ್ಷದ ಎಂಜನಿಯರಿಂಗ್ ಓದುತ್ತಿದ್ದ ಮಗಳಿಗೆ ಪಿಯೂಸಿಯಲ್ಲಿ ತೆಗೆದುಕೊಟ್ಟಿದ್ದ ಮೊಬೈಲ್ ಡಬ್ಬಾ ಸೆಟ್ ಆಗಿತ್ತು. ಈ ಮೊಬೈಲ್ ಕಂಪೆನಿಯವ್ರು ದಿನಕ್ಕೊಂದು ಹೊಸ ಮಾಡೆಲ್ ಮಾರ್ಕೆಟ್ಟಿಗೆ ಬಿಟ್ಟು ಜನ್ರು ತಲೆ ಕೆಡಿಸ್ತಿದಾರೆ ಎಂದು ಮನಸಿನಲ್ಲಿಯೇ ಬೈದುಕೊಂಡು ಟೀಪಾಯಿಯ ಮೇಲಿದ್ದ ಇಂಗ್ಲೀಷ್ ಪೇಪರಿನ ಮೇಲೆ ಕಣ್ಣಾಡಿಸಿದೆ. ಅಷ್ಟರಲ್ಲಿ ಪ್ರಕೃತಿ ಹೊರಗೆ ಯಾರ ಬಳಿಯಲ್ಲಿಯೋ ಮಾತನಾಡುವುದು ಕೇಳಿಸಿತು. ಒಳಬಂದವಳನ್ನು ‘ಯಾರತ್ರ ಮಾತಾಡ್ತಿದ್ದೆ ಚಿನ್ನು’ ಎಂದು ಕೇಳಿದೆ. ‘ಪಕ್ಕದ್ ಮನೆಗೆ ಯಾರೋ ಹೊಸದಾಗಿ ಬಂದಿದಾರಂತೆ.. ತಾತ ಹಾಲು ಎಲ್ಲಿ ಸಿಗುತ್ತೆ ಅಂತ ಕೇಳಿದ್ರು, ಹೇಳ್ದೆ’ ಅಂದಾಗ ಯಾರೋ ಏನೋ ಈಗಿನ ಕಾಲದಲ್ಲಿ ಯಾರನ್ನೂ ನಂಬುವಂತಿಲ್ಲ ಅನಿಸಿ ‘ಸರಿ ಮತ್ತೆ ಆ ತಾತನ ಹತ್ರ ಮಾತಾಡೋಕೆ ಹೋಗ್ಬೇಡ’ ಅಂದೆ. ಯಾಕ್ ಪಪ್ಪಾ ಎಂದವಳನ್ನು ನಿಂಗೆ ಅವೆಲ್ಲಾ ಗೊತ್ತಾಗೋದಿಲ್ಲ ಎಂದು ಸುಮ್ಮನಿರಿಸಿದೆ.
ಶೂ ಧರಿಸಿಕೊಂಡು ಸಿದ್ಧನಾಗಿ ‘ಬರ್ತೀನಿ’ ಎಂದು ಹೇಳಿ ಗೇಟು ತೆರೆದು ಹೊರನಡೆದಾಗ ಅಮ್ಮ-ಮಗಳಿಬ್ಬರೂ ಮನೆಯ ಪೋಟರ್ಿಕೊದಲ್ಲಿ ನಿಂತಿದ್ದರು. ಅವರನ್ನೊಮ್ಮೆ ಹಿಂತಿರುಗಿ ನೋಡಿ ಕಣ್ಣಿನಲ್ಲಿಯೇ ‘ಬೈ’ ಎಂದು ಹೇಳಿ ಪಕ್ಕದ ಮನೆಯತ್ತ ಒಮ್ಮೆ ಕಣ್ಣಾಯಿಸಿದೆ. ಬಾಗಿಲು ಮುಚ್ಚಿತ್ತು. ಬಹುಷಃ ಯಾರೂ ಇಲ್ಲವೇನೊ.. ಎಂದುಕೊಂಡು ಬಸ್ಸ್ಟಾಪಿಗೆ ಬಂದಾಗ ಏಳುಗಂಟೆಯ ಬಸ್ ಸಿದ್ಧವಾಗಿ ನಿಂತಿತ್ತು. ಬಸ್ಸು ಹತ್ತಿ ಕಿಟಕಿ ಪಕ್ಕದ ಸೀಟಿನಲ್ಲಿ ಕುಳಿತೆ. ಮುಖಪರಿಚಯವಿದ್ದ ದಿನನಿತ್ಯದ ಪ್ರಯಾಣಿಕರು ಒಬ್ಬೊಬ್ಬರೇ ಬಂದು ಸೀಟು ಹುಡುಕಿಕೊಂಡು ಕುಳಿತುಕೊಳ್ಳತೊಡಗಿದರು. ಬಸ್ಸು ಹೊರಟ ಮೇಲೆ ಕಣ್ಣುಮುಚ್ಚಿ ನಿದ್ರೆ ಮಾಡುವುದು ನನಗೆ ನಿತ್ಯದ ಅಭ್ಯಾಸ. ಮನೆಯಲ್ಲಿ ಕಡಿಮೆಯಾಗಿದ್ದ ನಿದ್ರೆಯನ್ನು ಸರಿದೂಗಿಸುವುದು ಒಂದು ಉದ್ದೇಶವಾದರೆ ಪರಿಚಯದವರ್ಯಾರಾದರೂ ಸಿಕ್ಕಿ ಬೆಳ್ಳಂಬೆಳಿಗ್ಗೆಯೇ ತಲೆ ತಿನ್ನಲು ಶುರುಮಾಡುತ್ತಾರೆ ಎಂಬ ಆತಂಕವೂ ಕಾರಣವಾಗಿತ್ತು. ನಿದ್ರೆ ಬಾರದಿದ್ದರೂ ಇದೇ ರೀತಿಯಾಗಿ ಕಳ್ಳನಿದ್ರೆ ಮಾಡುವುದು ದಿನವೂ ಪ್ರಯಾಣಿಸುವ ನನಗೆ ಪರಿಪಾಠವಾಗಿತ್ತು.
ನನ್ನ ಹೆಂಡತಿ ಸುಮಿ ಈಗ್ಗೆ ಹತ್ತು ವರ್ಷದ ಹಿಂದೆ ಮಗಳು ಚಿಕ್ಕವಳಿರುವಾಗಲೇ ಒಂದು ಸೈಟು ತಗೋಳಾಣಾರೀ ಎಂದು ನನ್ನನ್ನು ಕಾಡಿಸಿ ಪೀಡಿಸಿ ಯಾವುದೋ ಗೃಹನಿಮರ್ಾಣ ಸಂಘಕ್ಕೆ ನನ್ನನ್ನು ಸದಸ್ಯನನ್ನಾಗಿಸಿ ನಿವೇಶನ ಖರೀದಿಸಿರದಿದ್ದರೆ ನಾನೂ ಇಂದೂ ಕೂಡ ಬಾಡಿಗೆಮನೆ ನಿವಾಸಿಯಾಗಿಯೇ ಇರಬೇಕಾಗಿತ್ತು. ಪ್ರತಿ ತಿಂಗಳೂ ನನ್ನ ಸ್ವಂತದ ಖಚರ್ಿಗೆಂದು ಕೈಯ್ಯಲ್ಲಿ ಸ್ವಲ್ಪ ಹಣ ಉಳಿಸಿಕೊಂಡು ಉಳಿದೆಲ್ಲಾ ಸಂಬಳದ ಹಣವನ್ನು ನನ್ನ ಹೆಂಡತಿಯ ಕೈಯಲ್ಲಿಡುವುದು ನನಗೆ ರೂಡಿಯಾಗಿಬಿಟ್ಟಿದೆ. ಇದರ ಹಿಂದೆ ಮನೆಯ ಎಲ್ಲಾ ಕೆಲಸಗಳನ್ನೂ ನನ್ನ ಹೆಂಡತಿಯ ತಲೆಗೆ ಕಟ್ಟುವ ಎಸ್ಕೇಪಿಸಮ್ ಇದ್ದರೂ ಇರಬಹುದು. ಹೇಗೋ ನನ್ನ ಸುಮಿ ಕಾಸಿಗೆ ಕಾಸು ಕೂಡಿಸಿ ಆಗಾಗ್ಗೆ ಕಂತು ಕಟ್ಟಿ ಅಡಿಗೆ ಮೂರುನೂರು ರೂಪಾಯಿಯಂತೆ ಮೂವತ್ತು ನಲವತ್ತು ಚದರಡಿಯ ನಿವೇಶನವನ್ನು ಖರೀದಿಸುವಲ್ಲಿ ಯಶಸ್ವಿಯಾಗಿದ್ದಳು. ಮೊದಲು ನಿವೇಶನವಿದ್ದ ಜಾಗ ನೋಡಿ ಇಲ್ಲಿ ಮನೆ ಕಟ್ಟಲು ನನ್ನ ಮೊಮ್ಮಕ್ಕಳೇ ಬರಬೇಕು ಎಂದು ಸುಮಿಯ ಮೇಲೆ ರೇಗಿದ್ದೆ. ನೋಡುನೋಡುತ್ತಲೇ ಮೂರ್ನಾಲ್ಕು ವರ್ಷಗಳಲ್ಲಿ ಪ್ರತಿಷ್ಠಿತ ಬಡಾವಣೆಯಾಗಿತ್ತು. ಇಂದಿನ ಬೆಲೆಯನ್ನು ಲೆಕ್ಕ ಹಾಕಿದರೆ ನನ್ನ ಜೀವಮಾನದ ಸಂಬಳವನ್ನೆಲ್ಲಾ ಉಳಿಸಿದ್ದರೂ ಸೈಟು ತೆಗೆದುಕೊಳ್ಳಲು ನಮ್ಮಿಂದಾಗುತ್ತಿರಲಿಲ್ಲ. ನಮ್ಮ ಬಡಾವಣೆಯಲ್ಲಿ ಎಲ್ಲರೂ ಮನೆ ಕಟ್ಟಿಕೊಂಡರೂ ಖಾಲಿ ಉಳಿದಿದ್ದುದು ನಮ್ಮದೊಂದೇ ನಿವೇಶನ. ಸುಮಿ ‘ರೀ ಈ ಬಾಡಿಗೆ ಮನೆ ತೊಳ್ದು ಬಳ್ದು ಸಾಕಾಗಿದೇರಿ.. ಮನೆ ಕಟ್ಟಿ ಬಿಡೋಣ.. ಚಿನ್ನು ಬೆಳೀತಾ ಇದಾಳೆ, ಅವಳ ಮದುವೆ ಹೊತ್ತಿಗೆ ಸ್ವಂತ ಮನೇಲಿರ್ಬೇಕು. ಬಾಡಿಗೆ ಮನೇಲಿದ್ರೆ ಬರೋ ಗಂಡಿನ ಕಡೆಯವ್ರು ಬಾಡಿಗೆ ಮನೇನಾ ಅಂದ್ಕೊತಾರೆ’ ಎಂದಾಗ ಮೂರು ವರ್ಷದ ಹಿಂದೆ ಬ್ಯಾಂಕಿನಲ್ಲಿ ಸಾಲ ತೆಗೆದು ಮನೆಕಟ್ಟಲು ಪ್ರಾರಂಭಿಸಿದೆ. ಸುಮಿಯೇ ಓಡಾಡಿ ಪ್ಲಾನ್ ಮಾಡಿಸಿ ದಿನವೂ ನಿವೇಶನದ ಬಳಿ ನಿಂತುಕೊಂಡು ಮನೆ ಕಟ್ಟಿಸಿದಳು. ಸ್ವಂತ ಮನೆಗೆ ಬಂದಾಗ ನೋಡಬೇಕಿತ್ತು ಅವಳ ಖುಷಿ! ಶಬ್ದಗಳಿಂದ ವರ್ಣಿಸಲು ಆಗುವುದಿಲ್ಲ.
ಹೊಸ ಮನೆಗೆ ಬಂದ ಒಂದು ವರ್ಷದೊಳಗೆ ಎರಡು ಸುತ್ತು ದಪ್ಪಗಾಗಿದ್ದ ಸುಮಿಯನ್ನು ಕೈಯಿಂದ ಬಳಸುವಾಗ ‘ಎಷ್ಟೊಂದು ಉಬ್ಬಿಹೋಗಿದೀಯೆ’ ಎಂದು ತಮಾಷೆಗೆ ಅಂದಿದನ್ನು ಸೀರಿಯಸ್ಸಾಗಿ ತೆಗೆದುಕೊಂಡು ‘ಅಷ್ಟೊಂದು ದಪ್ಪಗಾಗಿದೀನೇನ್ರೀ.. ಅಷ್ಟೊಂದು ದಪ್ಪಗಾಗಿದೀನೇನ್ರೀ..’ ಎಂದು ಕಳವಳಗೊಂಡು ಒಂದು ವಾರ ರಾತ್ರಿಯ ಊಟ ಬಿಟ್ಟಿದ್ದಳು. ‘ಅಷ್ಟೇನೂ ಇಲ್ಲಾ ಕಣೆ ಸುಮ್ಮನೆ ತಮಾಷೆಗೆ ಹೇಳ್ದೆ’ ಎಂದು ಅವಳ ಆತಂಕವನ್ನು ಹೋಗಲಾಡಿಸುವಷ್ಟರಲ್ಲಿ ನನಗೆ ಸಾಕುಸಾಕಾಗಿತ್ತು. ನಮಗಿಂತ ಮೊದಲೇ ಕಟ್ಟಿದ್ದ ನಮ್ಮ ಪಕ್ಕದ ಮನೆಯ ಮಾಲೀಕರೊಂದು ಬಾರಿ ಯಾವಾಗಲೋ ಬಂದು ‘ವಿಧಾನಸೌಧದಲ್ಲಿ ಕೆಲ್ಸ ಮಾಡ್ತಾ ಇದೀನಿ ಸಾರ್.. ಈ ಮನೆ ಬಾಡಿಗೆಗೆ ಕೊಟ್ಟಿದ್ದೀನಿ ಸ್ವಲ್ಪ ನೋಡಿಕೊಳ್ಳಿ’ ಎಂದು ಹೇಳಿ ಹೋಗಿದ್ದರು. ಈಗ ನನಗೆ ಅವರ ಮುಖದ ಚಿತ್ರವೂ ಮರೆತುಹೋಗಿತ್ತು.
ಬಸ್ಸಿನ ಕಂಡಕ್ಟರ್ ‘ಯಾರ್ರೀ ಪೀಣ್ಯ ಫೋರ್ತ ಸ್ಟೇಜ್’ ಎಂದೊಡನೆ ಕಣ್ಣುಬಿಟ್ಟು ದಡಬಡನೆ ಎದ್ದು ತುಂಬಿ ತುಳುಕುತ್ತಿದ್ದ ಬಸ್ಸಿನಲ್ಲಿ ಬಲವಂತವಾಗಿ ದಾರಿ ಮಾಡಿಕೊಂಡು ನುಸುಳಿ ಕೆಳಗಿಳಿದು ನಡೆದು ಫ್ಯಾಕ್ಟರಿಯೊಳಗೆ ಹೋಗಿ ಕಾಡರ್್ ಪಂಚ್ ಮಾಡಿ ನನ್ನ ಸೀಟಿನಲ್ಲಿ ಆಸೀನನಾದೊಡನೆ ಇಂಟರ್ಕಾಮ್ ರಿಂಗಾಗತೊಡಗಿ ಅತ್ತ ಕಡೆಯಿಂದ ‘ಪ್ರಕಾಶ್ ಬನ್ರೀ.. ನಿಮ್ಮ ಮೆಷಿನ್ ನೈಟ್ಶಿಪ್ಟನಲ್ಲಿ ಬ್ರೇಕ್ಡೌನ್ ಆಗಿದೆ’ ಎಂದು ನಮ್ಮ ಪ್ರೊಡಕ್ಷನ್ ಮ್ಯಾನೇಜರ್ ಕೃಷ್ಣನ್ ಫೋನಾಯಿಸಿದ್ದರು. ನಮ್ಮ ಫ್ಯಾಕ್ಟರಿಯಲ್ಲಿ ನನಗೆ ತುಂಬಾ ಇಷ್ಟವಾದ ಒಂದು ಜಿಗ್ ಬೋರಿಂಗ್ ಮೆಷಿನ್ ಇದೆ. ಅದನ್ನು ಕಂಡರೆ ನನಗೆ ಏನೋ ಒಂದು ತರಹದ ಪ್ರೀತಿ, ಅಟ್ಯಾಚ್ಮೆಂಟ್. ಏಕೆಂದರೆ ಅದರ ಸಲುವಾಗಿ ನನಗೆ ವಿದೇಶದಲ್ಲಿ ಮೂರು ತಿಂಗಳ ತರಬೇತಿಯ ಯೋಗ ಸಿಕ್ಕಿತ್ತು. ಅದು ಸುಮಾರು ಎರಡು ಕೋಟಿ ರೂಪಾಯಿಗಳ ಯಂತ್ರ. ಈಗ್ಗೆ ಹತ್ತು ವರ್ಷಗಳ ಹಿಂದೆ ಅದನ್ನು ವಿದೇಶದಿಂದ ತರಿಸಿ ಇನಸ್ಟಾಲೆಷನ್ ಮಾಡಿದ ದಿನದಿಂದ ಅದರ ಪ್ರತಿ ಭಾಗದಲ್ಲಿಯೂ ನಾನು ಬೆರೆತು ಹೋಗಿದ್ದೇನೆ. ಆಗ ಮೆಯಿಂಟೆನೆನ್ಸ ಎಂಜಿನಿಯರಾಗಿದ್ದವನು ಈಗ ಮೆಯಿಂಟೆನೆನ್ಸ ಮ್ಯಾನೇಜರನಾದ ಮೇಲೂ ಅದು ನನಗೆ ಅತ್ಯಂತ ಪ್ರೀತಿಯ ಯಂತ್ರವಾಗಿದೆ. ಒಂದು ವೃತ್ತದ ಪರಿಧಿಯ ಸುತ್ತ ಸಮಾನಾಂತರ ದೂರದಲ್ಲಿ ನಿಖರವಾಗಿ ತೂತುಗಳನ್ನು ಕೊರೆಯುವ ಅದರ ವಿನ್ಯಾಸಕ್ಕೆ ನಾನು ಮರುಳಾಗಿದ್ದೇನೆ. ಅದು ತೂತುಗಳನ್ನು ಕೊರೆದು ತಯಾರಿಸುತ್ತಿದ್ದ ಕಾಂಪೋನೆಂಟ್ ನಮ್ಮ ಫ್ಯಾಕ್ಟರಿಯಲ್ಲಿ ತಯಾರಾಗುತ್ತಿದ್ದ ಪ್ರಾಡಕ್ಟಿನ ಜೀವಾಳವಾಗಿದೆ. ನನಗೆ ಅದರ ಮೇಲಿನ ಅತೀವ ಆಸಕ್ತಿ ಕಂಡು ಫ್ಯಾಕ್ಟರಿಯಲ್ಲಿ ಎಲ್ಲರೂ ಅದನ್ನು ‘ಪ್ರಕಾಶ್ ಮೆಷಿನ್’ ಎಂದೇ ಕರೆಯುತ್ತಾರೆ.
ತಕ್ಷಣವೇ ನಮ್ಮ ಮೆಯಿಂಟೆನೆನ್ಸ ಎಂಜಿನಿಯರ್ ಮತ್ತು ಇಬ್ಬರು ಟೆಕ್ನೀಷಿಯನ್ಗಳನ್ನು ಕರೆದುಕೊಂಡು ಪ್ರೊಡಕ್ಷನ್ ಶಾಪಿಗೆ ತೆರಳಿದೆ. ಆ ಯಂತ್ರವನ್ನು ಬಹಳಷ್ಟು ಸಾರಿ ರಿಪೇರಿ ಮಾಡಿದ್ದ ನನಗೆ ಅದರ ಬಿಡಿಭಾಗವೊಂದರ ತೊಂದರೆ ತಿಳಿದಿತ್ತು. ಅದಕ್ಕಾಗಿ ಹೊಸ ಬಿಡಿಭಾಗವನ್ನು ಖರೀದಿಸುವಂತೆ ನನ್ನ ಸ್ನೇಹಿತ ಪರ್ಚೇಸ್ ಮ್ಯಾನೇಜರ್ ಸುರೇಶನಿಗೆ ತಿಳಿಸಿದ್ದೆ. ಯಂತ್ರದ ಅದೇ ಬಿಡಿಭಾಗ ಮತ್ತೆ ಈ ಬಾರಿಯೂ ಕೈಕೊಟ್ಟಿತ್ತು. ಸುರೇಶನಿಗೆ ಫೋನಾಯಿಸಿದೆ. ‘ಸ್ವಲ್ಪ ಅಡ್ಜಸ್ಟ್ ಮಾಡ್ಕೋ ಗುರು, ಪರ್ಚೇಸ್ ಆರ್ಡರ್ ಪ್ಲೇಸ್ ಮಾಡಿದೀನಿ ಇನ್ನೊಂದ್ ವಾರದಲ್ಲಿ ಶಿಪ್ಪಿಂಗ್ ಆಗಿ ಬಂದ್ ಬಿಡುತ್ತೆ.. ಪ್ರೊಡಕ್ಷನೋರು ಇದೇ ನೆಪ ಮಾಡ್ಕೋಂಡು ರಿವ್ಯೂ ಮೀಟಿಂಗ್ನಲ್ಲಿ ನನ್ ತಲೆ ಮೇಲೆ ಕೂತುಬಿಡ್ತಾರೆ’ ಎಂದು ಅಲವತ್ತುಕೊಂಡಾಗ ನಾನು ನನ್ನ ಬುದ್ಧಿಶಕ್ತಿಯನ್ನೆಲ್ಲಾ ಉಪಯೋಗಿಸಿ ಹೇಗೋ ಮಾಡಿ ಅದೇ ಬಿಡಿಭಾಗವನ್ನು ರಿಪೇರಿ ಮಾಡಿಸಿ ಅಳವಡಿಸಿ ಮೆಷಿನನ್ನು ಸಿದ್ಧಪಡಿಸಿದಾಗ ಸಂಜೆ ಏಳು ಗಂಟೆಯಾಗಿತ್ತು. ವಿಪರೀತ ಮಾನಸಿಕ ಒತ್ತಡ ಮತ್ತು ದೈಹಿಕ ಆಯಾಸದಿಂದಾಗಿ ತಲೆ ಧಿಮ್ಮೆನ್ನುತಿತ್ತು. ಸಿಟಿಬಸ್ಸು ಹಿಡಿದು ವಾಪಸ್ಸು ಬರುವಾಗ ಟೀವಿಯ ಕರೆನ್ಸಿಯ ವಿಷಯ ಹೇಗೊ ನೆನಪಿಗೆ ಬಂದು ಬಸ್ಸಿನಿಂದ ಇಳಿದ ತಕ್ಷಣ ಡೀಲರ್ನ ಬಳಿ ಹೋಗಿ ಕರೆನ್ಸಿ ತುಂಬಿಸಿ ಅಲ್ಲೇ ಎದುರಿಗಿದ್ದ ಬೀಡಾ ಅಂಗಡಿಯಲ್ಲಿ ನಿರಾಳವಾಗಿ ಒಂದು ಸಿಗರೇಟು ಸೇದಿ ಮನೆಯ ಕಡೆ ನಡೆದೆ. ಪಕ್ಕದ ಮನೆಯ ವೃದ್ಧರು ಗೇಟು ತೆರೆದು ಒಳಹೋಗುತ್ತಿದ್ದವರು ನನ್ನನ್ನೊಮ್ಮೆ ನೋಡಿ ಮುಗುಳ್ನಕ್ಕರು. ನೋಡದವನಂತೆ ಒಳಗೆ ಬಂದವನಿಗೆ ಇವರ್ಯಾರಪ್ಪಾ ಒಂಟಿಯಾಗಿ ಭೂತದಂತೆ ಬಂದು ಪಕ್ಕದಲ್ಲಿ ಸೇರ್ಕೊಂಡಿದಾರೆ.. ಹೆಂಡ್ತಿ ಮಕ್ಕಳು ಯಾರೂ ಇಲ್ಲವೇನೋ ಎನಿಸಿತು.
ಒಳಗೆ ಬಂದವನಿಗೆ ಸುಮಿ ಎಷ್ಟೋ ದಿನಗಳಿಂದ ಟೀವಿಯನ್ನೇ ನೋಡಿಲ್ಲವೇನೋ ಎಂಬಂತೆ ಟೀವಿಯಲ್ಲಿ ಕಣ್ಣು ತೂರಿಸಿ ಕುಳಿತಿದ್ದು ಕಾಣಿಸಿತು. ನನ್ನ ಆಗಮನವನ್ನು ಕಂಡವಳೇ ‘ರೀ ಒಂದ್ನಿಮಿಷಾರೀ.. ತುಂಬಾ ಇಂಟರೆಸ್ಟಿಂಗ್ ಎಪಿಸೋಡು’ ಎಂದವಳಿಗೆ ಚಿನ್ನು ಏನ್ಮಾಡ್ತಾ ಇದಾಳೆ ಎಂದು ಕೇಳಿದೆ. ಟೀವಿಯ ಪರದೆಯಿಂದ ಕಣ್ಣು ಕೀಳದೆ ‘ಕಂಪ್ಯೂಟರ್ನಲ್ಲಿ ಫೇಸ್ ಬುಕ್ ನೋಡ್ತಿರ್ಬೇಕು’ ಎಂದು ಹೇಳಿ ಅಡ್ವರ್ಟೈಸ್ಮೆಂಟ್ ಬಂದ ಮೇಲೆ ಮಿಂಚಿನ ವೇಗದಲ್ಲಿ ಅಡುಗೆ ಮನೆ ತಲುಪಿ ಟೀ ಬಿಸಿಮಾಡಿ ತಂದುಕೊಟ್ಟು ಮತ್ತೆ ಟೀವಿಯ ಪರದೆಯೊಳಗೆ ಕಣ್ಣು ತೂರಿಸಿದಳು. ಯಾವುದೋ ಅತ್ತೆ-ಸೊಸೆಯರು ಉದ್ದುದ್ದ ಸಂಭಾಷಣೆ ಹೇಳಿಕೊಂಡು ಕಿತ್ತಾಡುತ್ತಿದ್ದ ಸನ್ನಿವೇಶ. ಟೀ ಹೀರುತ್ತಾ ಬೆಳಿಗ್ಗೆ ನೋಡಿದ್ದ ನ್ಯೂಸ್ ಪೇಪರಿನ ಮೇಲೆ ಕಣ್ಣಾಡಿಸುತ್ತಿದ್ದವನಿಗೆ ಮೊಬೈಲ್ ರಿಂಗಾಗತೊಡಗಿದಾಗ ಜೇಬಿನಿಂದ ತೆಗೆದು ‘ಹಲೋ’ ಎಂದೆ. ನಮ್ಮ ಹಳ್ಳಿಯಿಂದ ಅಮ್ಮ ಫೋನು ಮಾಡಿದ್ದರು. ‘ಉಗಾದಿ ಹಬ್ಬಕ್ಕೂ ಬರ್ಲಿಲ್ಲ.. ಪಟ್ಟಲದಮ್ಮನ ಹಬ್ಬಕ್ಕೆ ಬಂದು ಮೂರು ವರ್ಷ ಅಯ್ತು.. ಮುಂದಿನ ಶುಕ್ರವಾರ ಹಬ್ಬ, ಪಾಪೂನ್ನೂ ಸುಮನ್ನೂ ಕರಕೊಂಡು ಬಂದೋಗೋ’ ಎಂದವರಿಗೆ ಪುರುಸೊತ್ತು ಎಲ್ಲಿದೆಯಮ್ಮ ಅಂದೆ. ‘ಹಂಗಂದ್ರೆ ಹೆಂಗೊ.. ಮನೆಗೆ ಹಿರೀಮಗ ವರ್ಷಕ್ಕೊಂದು ಹಬ್ಬಕ್ಕೆ ಬರ್ದೇ ಹೋದ್ರೆ ಜನ ಏನಂತಾರೋ.. ಒಂದ್ ಹೆಜ್ಜೆ ಬಂದೋಗೊ.’. ಎಂದವರಿಗೆ ಫ್ಯಾಕ್ಟರಿಯಲ್ಲಿ ಕೆಲ್ಸ ಜಾಸ್ತಿ ನೋಡೋಣ ಅಂದೆ. ಅಪ್ಪ ಫೋನು ತೆಗೆದುಕೊಂಡು ‘ಹೆಂಗೂ ಕಾರಿಟ್ಟಿದೀಯಾ ಒಂದ್ ಗಂಟೆ ಬಂದು ಊಟ ಮಾಡ್ಕಂಡ್ ಸಾಯಂಕಾಲಕ್ಕೆ ವಾಪಸ್ ಹೋಗೋ’ ಎಂದರು. ನೋಡೋಣ ಎಂದು ಹೇಳಿ ಕರೆ ಬಂದ್ ಮಾಡಿದೆ.
ನನ್ನ ಸ್ನೇಹಿತರೋ ಸಹೋದ್ಯೋಗಿಗಳೋ ಇವನ ಬಳಿ ಕಾರು ಇಲ್ಲ ಎನ್ನುತ್ತಾರೆ ಎಂದುಕೊಂಡು ನಾನು ಸಾಲ ಮಾಡಿ ಕಾರು ಕೊಂಡಿರುವುದು ನನ್ನ ಅಪ್ಪನಿಗೇನು ತಿಳಿಯಬೇಕು ಎಂದು ಮನದಲ್ಲಿಯೆ ನಗು ಬಂದಿತು. ಈಗಿನ ಪೆಟ್ರೋಲಿನ ಬೆಲೆಯಲ್ಲಿ ಕಾರನ್ನು ಪೋರ್ಟಿಕೊದಿಂದ ತಿಂಗಳಿಗೊಮ್ಮೆ ಹೊರಗೆ ತೆಗೆದರೆ ಸಾಕು ಎನಿಸಿತ್ತು. ಇತ್ತೀಚೆಗೆ ನನಗೆ ಯಾವುದೋ ಹಬ್ಬ, ಸಮಾರಂಭ ಎಂದರೆ ಯಾವುದೋ ಮೆಷಿನ್ ಕೈಕೊಟ್ಟಿದೆಯಂತಲೋ ಇಂಪಾರ್ಟೆಂಟ್ ಮೀಟಿಂಗ್ ಇದೆ ಅಂತಲೋ ತಪ್ಪಿಸಿಕೊಳ್ಳಲು ಸಾಕಷ್ಟು ಕಾರಣಗಳು ಮನಸಿನಲ್ಲಿ ಹುಟ್ಟಿಕೊಳ್ಳುತ್ತಿದ್ದವು.
ನಾನು ಮಾತನಾಡುವುದು ಕೇಳಿಸಿ ತನ್ನ ರೂಮಿನಿಂದ ಮೊಬೈಲ್ನಲ್ಲಿ ಮೆಸೆಜು ಬಿಡುತ್ತಲೇ ಹೊರಗೆ ಬಂದ ನನ್ನ ಮುದ್ದಿನ ಮಗಳು ‘ಹಾಯ್ ಪಪ್ಪಾ’ ಎಂದು ಹೇಳಿ ಪಕ್ಕದ ಖುರ್ಚಿಯಲ್ಲಿ ಕುಳಿತಳು. ‘ಚಿನ್ನು, ಮುಂದಿನ ಶುಕ್ರವಾರ ಮಮ್ಮಿ ಜೊತೆ ಊರಿಗೆ ಹಬ್ಬಕ್ಕೆ ಹೋಗಿ ಬಾ..ತಾತ ಅಜ್ಜಿ ಫೋನ್ ಮಾಡಿದ್ರು.. ನಂಗೆ ಫ್ಯಾಕ್ಟರಿಯಲ್ಲಿ ತುಂಬಾ ಕೆಲ್ಸ ಇದೆ’ ಅಂದೆ. ‘ಹೋಗ್ ಪಪ್ಪಾ ನಮ್ ಕಾಲೇಜ್ ಫೆಸ್ಟ್ ಇದೆ. ನಾನಂತೂ ಹೋಗಕ್ಕಾಗಲ್ಲ’ ಎಂದಳು. ಈ ವರ್ಷವೂ ಹಬ್ಬದ ಕತೆ ಮುಗೀತು ಎಂದು ಸುಮ್ಮನಾದೆ. ‘ ಪಪ್ಪಾ.. ಕಾಲೇಜ್ ಫೆಸ್ಟನಲ್ಲಿ ನಾನು ನನ್ ಫ್ರೆಂಡ್ ಎಥ್ನಿಕ್ ಡ್ರೆಸ್ ಹಾಕ್ತಾ ಇದೀವಿ.. ಟ್ರೈಬಲ್ ಪೀಪಲ್ದು.. ಅದಕ್ಕೆ ಒಂದ್ ಸಾವಿರ ರೂಪಾಯಿ ಬೇಕು’ ಎಂದು ಮಗಳು ಮೆಲ್ಲಗೆ ನುಡಿದಳು. ‘ಊರಲ್ಲಿರೋ ಜನಾನೇ ಸರಿಯಾಗಿ ನೋಡಿಲ್ಲ ನೀನು.. ಕಾಡಲ್ಲಿ ಇರೋರ್ನ ನೀನೆಲ್ಲಿ ನೋಡಿದೀಯ’ ಎಂದು ಮುಗುಳ್ನಕ್ಕೆ. ‘ನಾನು ಅದನ್ನೆಲ್ಲಾ ಇಂಟರ್ನೆಟ್ನಲ್ಲಿ ನೋಡಿದೀನಿ’ ಎಂದು ನುಡಿದಾಗ ಇನ್ನೊಂದು ಸ್ವಲ್ಪ ದಿವಸ ಕಳೆದರೆ ಟೊಮ್ಯಾಟೋ ಹಣ್ಣು ಗಿಡದಲ್ಲಿ ಬಿಡುತ್ತದೋ ಮರದಲ್ಲಿ ಬಿಡುತ್ತದೋ ಅಂತ ಮಕ್ಕಳಿಗೆ ಗೊಂದಲವಾಗಿ ಇಂಟರ್ನೆಟ್ನಲ್ಲಿಯೇ ತಿಳಿದುಕೊಳ್ಳಬೇಕಾಗುತ್ತದೇನೋ ಅನಿಸಿ ‘ಸರಿ..ಮಮ್ಮಿ ಹತ್ರ ಇಸ್ಕೊ’ ಎಂದು ಹಣ ಮಂಜೂರು ಮಾಡಿ ನಮ್ಮ ಖಜಾಂಚಿ ಸುಮಿಗೆ ಆರ್ಡರ್ ಪಾಸು ಮಾಡಿದೆ. ಅವಳು ಟೀವಿಯಿಂದ ಕಣ್ಣು ಕೀಳದೆ ಹ್ಞೂಂ..ಹ್ಞೂಂ..ಹ್ಞೂಂ.. ಎಂದು ಹೇಳಿ ಧಾರಾವಾಹಿಯ ಯಾವುದೋ ಸನ್ನಿವೇಶವನ್ನು ನೋಡಿ ಸ್ಪಂದಿಸುತ್ತಾ ಮುಗುಳ್ನಗುತ್ತಿದ್ದಳು. ಸುಮಿ ಸುಲಭವಾಗಿ ಯಾವುದಕ್ಕೂ ದುಡ್ಡು ಬಿಚ್ಚುತ್ತಿರಲಿಲ್ಲವಾದ್ದರಿಂದ ಇಂತಹ ಹಣಕಾಸಿನ ವಿಷಯಗಳನ್ನು ನನ್ನ ಮಗಳು ನನ್ನ ಉಪಸ್ಥಿತಿಯಲ್ಲಿ ಪ್ರಸ್ತಾಪಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದಳು.
ಅಷ್ಟರಲ್ಲಿ ಯಾರೋ ಗೇಟನ್ನು ಬಡಿಯುವ ಸದ್ದು ಕೇಳಿಸಿ ಪ್ರಕೃತಿ ಖುರ್ಚಿಯಿಂದೆದ್ದು ಕಿಟಿಕಿಯ ಪರದೆ ಸರಿಸಿ ನೋಡಿ ‘ಪಕ್ಕದ್ ಮನೆ ತಾತ’ ಅಂದಳು. ‘ನನ್ನನ್ನ ಕೇಳಿದ್ರೆ ಇಲ್ಲ ಅಂದು ಬಿಡು’ ಎಂದು ಹೊರಗಿನಿಂದ ಕಾಣಿಸದಂತೆ ಕಿಟಿಕಿಯ ಪರದೆಯ ಪಕ್ಕಕ್ಕೆ ಸರಿದುಕೊಂಡೆ. ಪ್ರಕೃತಿ ಬಾಗಿಲು ತೆಗೆದು ಹೊರಹೋಗಿ ಖಾಲಿ ಪ್ಲಾಸ್ಟಿಕ್ ಬಾಟಲೊಂದನ್ನು ತಂದು ಕುಡಿಯೋದಿಕ್ಕೆ ನೀರು ಬೇಕಂತೆ ಎಂದು ನೀರು ತುಂಬಿಕೊಂಡು ಕೊಟ್ಟುಬಂದಳು. ಬೆಳಿಗ್ಗೆಯಿಂದ ನನ್ನ ಪ್ರೀತಿಯ ಯಂತ್ರವನ್ನು ರಿಪೇರಿ ಮಾಡುವ ಕಾಯಕದಲ್ಲಿ ತೊಡಗಿದ್ದರಿಂದ ತುಸು ಆಯಾಸವಾಗಿತ್ತು. ‘ಸುಮಿ ಊಟಕ್ಕಿಡು ಯಾಕೋ ನಿದ್ರೆ ಬರ್ತಾ ಇದೆ’ ಎಂದಾಗ ‘ನೀನೂ ಬಾರೆ ಒಂದೇ ಸರ್ತಿ ಊಟ ಮಾಡು’ ಎಂದು ಮಗಳಿಗೆ ಹೇಳಿದ ಸುಮಿ ಅಡುಗೆ ಮನೆಗೆ ಹೋದಳು. ಹಾಲ್ನಲ್ಲಿಯೇ ಟೀವಿ ಮುಂದೆ ಕುಳಿತು ಎಲ್ಲರೂ ಊಟ ಮಾಡಿದೆವು. ಮನೆಯ ಮುಂದಿನ ಗೇಟಿಗೆ ಬೀಗ ಹಾಕಿ ಬಾಗಿಲಿಗಿದ್ದ ಕಬ್ಬಿಣದ ಶಟರ್ ಎಳೆದು ಅದಕ್ಕೂ ಬೀಗ ಜಡಿದು ಬಾಗಿಲು ಮುಚ್ಚಿ ಬೋಲ್ಟ್ ಹಾಕಿದೆ. ಬೆಂಗಳೂರಿನಲ್ಲಿ ಹಗಲು ಹೊತ್ತಿನಲ್ಲಿಯೇ ನಡೆಯುತ್ತಿದ್ದ ಕಳ್ಳತನದ ಪ್ರಕರಣಗಳನ್ನು ಪತ್ರಿಕೆಗಳಲ್ಲಿ ಓದಿ ಓದಿ ನನಗೆ ಬಾಗಿಲುಗಳನ್ನು ಹಾಕಿದರೂ ಮತ್ತೆ ಮತ್ತೆ ಪರೀಕ್ಷಿಸುವ ಗೀಳು ಹತ್ತಿದೆ. ಹಾಗೆ ಎರಡು ಮೂರು ಬಾರಿ ಅತ್ತಿಂದಿತ್ತ ಓಡಾಡಿ ಬಾಗಿಲುಗಳನ್ನು ಪರೀಕ್ಷಿಸಿ ರೂಮಿಗೆ ಬಂದು ಸೊಳ್ಳೆ ಪರದೆ ಕಟ್ಟಿಕೊಂಡು ಮೊಬೈಲ್ನಲ್ಲಿ ಅಲಾರಾಂ ಇಟ್ಟು ಹಾಸಿಗೆಯಲ್ಲಿ ಮೈಚಾಚಿದೆ. ಪಾತ್ರೆ ತೊಳೆದಿಟ್ಟು ಬಂದು ಸುಮಿ ಮತ್ತೆ ಟೀವಿಯ ಮುಂದೆ ಆಸೀನಳಾಗಿದ್ದಳು. ‘ಟೀವಿ ಆಫ್ ಮಾಡಿ ಬಾರೇ ಮಲುಕ್ಕೊಳೋಣ’ ಎಂದು ಕೂಗಿದೆ. ‘ಒಂದೈದು ನಿಮಿಷ ಬಂದೆ.. ಮಲುಕೊಂಡಿರ್ರಿ’ ಎಂದಾಗ ನನಗೆ ಯಾವಾಗ ನಿದ್ರೆ ಹತ್ತಿತೋ ತಿಳಿಯಲಿಲ್ಲ.
ಮರುದಿನ ಎದ್ದು ಸ್ನಾನ ಮಾಡಿ ಸಿದ್ಧವಾಗಿ ಗೇಟು ತೆರೆದು ಹಾಲು ತರಲು ಹೊರಟಾಗ ಪಕ್ಕದ ಮನೆಯ ವೃದ್ಧರು ಬಾಗಿಲು ತೆಗೆದು ಹೊರಬಂದಿದ್ದು ಕಾಣಿಸಿತು. ರಸ್ತೆಯಲ್ಲಿ ಹೋಗುತ್ತಿದ್ದವನು ನೋಡಲೋ ಬೇಡವೋ ಎಂದುಕೊಂಡು ಒಮ್ಮೆ ಹಿಂತಿರುಗಿ ನೋಡಿದೆ. ಹಿಂದೆ ಬರುತ್ತಿದ್ದ ವೃದ್ಧರು ಕೈಯೆತ್ತಿ ವಿಷ್ ಮಾಡಿ ಮುಗುಳ್ನಕ್ಕಿದ್ದು ಕಾಣಿಸಿ ಬಲೇ ಘಾಟಿ ಮನುಷ್ಯ ಎನಿಸಿತು. ನೆನ್ನೆಯಿಂದ ಅವರೆಡೆಗೆ ಕಣ್ಣೆತ್ತಿ ನೋಡದಿದ್ದರೂ ಮತ್ತೆ ವಿಷ್ ಮಾಡಿದರಲ್ಲಾ ಎಂದು ಮನಸ್ಸಿಗೆ ಮುಜುಗರವಾಗಿ ತಿರುಗಿ ನೋಡದೆ ಬೇಗ ಬೇಗ ನಡೆದು ಹಾಲಿನ ಬೂತ್ಗೆ ಬಂದೆ. ಅವರೂ ಅತ್ತಲೇ ಬರುತ್ತಿರುವುದು ಕಾಣಿಸಿತು. ಎಲ್ಲಿ ತಗುಲಿಕೊಂಡುಬಿಡುತ್ತಾರೋ ಎನಿಸಿ ಹಾಲಿನ ಪ್ಯಾಕೆಟ್ಟು ತೆಗೆದುಕೊಂಡು ಅವರನ್ನು ನೋಡದವನಂತೆ ನಟಿಸಿ ಹಿಂದಿನ ಇನ್ನೊಂದು ರಸ್ತೆಯಲ್ಲಿ ನಡೆದು ಮನೆಗೆ ಬಂದು ಸೇರಿಕೊಂಡೆ.
ಎಂದಿನಂತೆ ಫ್ಯಾಕ್ಡರಿಗೆ ಹೋಗಿ ದೈನಂದಿನ ಮೆಯಿಂಟೆನೆನ್ಸ್ ಶೆಡ್ಯೂಲ್ ಚಾರ್ಟಿನ ಮೇಲೆ ಕಣ್ಣಾಡಿಸಿದೆ. ಮೆಯಿಂಟೆನೆನ್ಸ್ ಎಂಜನಿಯರ್ ಮತ್ತು ಟೆಕ್ನೀಷಿಯನ್ಗಳಿಗೆ ಅಂದಿನ ಕೆಲಸಗಳನ್ನು ಒಪ್ಪಿಸಿ ವಿವಿಧ ಪ್ರೊಡಕ್ಷನ್ ಶಾಪ್ಗಳಿಗೆ ಭೇಟಿ ನೀಡಿ ಬಂದು ಸರಿಯಾಗಿ ಖುರ್ಚಿಯಲ್ಲಿ ಕುಳಿತುಕೊಳ್ಳುವ ಹೊತ್ತಿಗೆ ಮಧ್ಯಾಹ್ನವಾಗಿತ್ತು. ಎಕ್ಸಿಕ್ಯುಟೀವ್ ಕ್ಯಾಂಟೀನಿನಲ್ಲಿ ಸುರೇಶನ ಜೊತೆ ಲಂಚ್ ಮುಗಿಸಿ ಬರುವಷ್ಟರಲ್ಲಿ ಮತ್ತೆ ನನ್ನ ಪ್ರೀತಿಯ ಯಂತ್ರಕ್ಕೆ ತೊಂದರೆಯಾಗಿ ನಿಂತುಹೋಗಿದೆಯೆಂದು ಕೃಷ್ಣನ್ರ ಕರೆ ಬಂದಿತ್ತು. ಇಬ್ಬರು ಟೆಕ್ನೀಷಿಯನ್ಗಳ ಜೊತೆ ಆತುರಾತುರವಾಗಿ ಹೋದೆ. ಮತ್ತೆ ಅದೇ ಬಿಡಿಭಾಗದ ತೊಂದರೆಯಿಂದ ಯಂತ್ರ ಕೆಟ್ಟು ನಿಂತಿತ್ತು. ಅದನ್ನು ಬಿಚ್ಚಿಸಿ ರಿಪೇರಿ ಮಾಡತೊಡಗಿದಾಗ ಯಂತ್ರದ ಸವೆದುಹೋದ ಬಿಡಿಭಾಗಗಳನ್ನು ಕಂಡು ನನಗೆ ತೀವ್ರ ಕನಿಕರವಾಯಿತು. ಹತ್ತು ವರ್ಷಗಳಿಂದ ಹಗಲು ಇರುಳೆನ್ನದೆ ಒಂದೇ ಸಮನಾಗಿ ದುಡಿಯುತ್ತಿದ್ದ ಯಂತ್ರದ ಬಗ್ಗೆ ಹೆಮ್ಮೆಯೆನಿಸಿದರೂ ಅದನ್ನು ಓವರ್ ಲೋಡ್ ಮಾಡಿ ಅದರ ಸಾಮಥ್ರ್ಯಕ್ಕಿಂತ ಹೆಚ್ಚಿನ ಕೆಲಸ ತೆಗೆಯುತ್ತಿದ್ದ ಪ್ರೊಡಕ್ಷನ್ ಶಾಪಿನವರ ಮೇಲೆ ಇದ್ದಕ್ಕಿದ್ದಂತೆಯೇ ಸಿಟ್ಟು ಬಂದಿತು. ಹೇಗೋ ಮಾಡಿ ಅದೇ ಬಿಡಿಭಾಗವನ್ನು ರಿಪೇರಿ ಮಾಡಿಸಿ ಯಂತ್ರಕ್ಕೆ ಜೋಡಿಸಿ ಕೆಲಸ ಮಾಡುವಂತೆ ಮಾಡಿ ಮನೆಗೆ ಬರುವಷ್ಟರಲ್ಲಿ ರಾತ್ರಿ ಹತ್ತುಗಂಟೆಯಾಗಿತ್ತು.
ಸದ್ಯ ಹೇಗೋ ಶನಿವಾರದ ಹೊತ್ತಿಗೆ ಯಂತ್ರದ ಹೊಸ ಬಿಡಿಭಾಗ ಬಂದು ಅದನ್ನು ಯಂತ್ರಕ್ಕೆ ಜೋಡಿಸಿದಾಗ ನನಗಿದ್ದ ಆತಂಕ ಕಡಿಮೆಯಾಗಿ ಮನಸ್ಸು ನಿರಾಳವಾಗಿತ್ತು. ಇತ್ತ ಮನೆಯ ಕಡೆ ಪಕ್ಕದ ಮನೆಯ ವೃದ್ಧರು ನನಗೆ ಮತ್ತೆ ಕಾಣಿಸಿಯೇ ಇರಲಿಲ್ಲ.
ಭಾನುವಾರವೆಂದರೆ ನನಗೆ ಖುಷಿಯೋ ಖುಷಿ. ಬೆಳಿಗ್ಗೆ ತಡವಾಗಿ ಎದ್ದು ಕಾಫಿ ಕುಡಿದು ಪತ್ರಿಕೆಗಳನ್ನೆಲ್ಲಾ ಒಂದೂ ಬಿಡದೆ ಓದಿ ಹತ್ತು ಗಂಟೆಗೆ ಸ್ನಾನ ಮಾಡಿ ತಿಂಡಿ ತಿಂದು ಎಲ್ಲೂ ಹೋಗದೆ ವಿರಮಿಸುವುದು ನನಗೆ ರೂಢಿಯಾಗಿತ್ತು. ಹಾಗೆಯೇ ಈ ಭಾನುವಾರವೂ ತಡವಾಗಿ ಎದ್ದು ಸುಮಿ ಕೊಟ್ಟ ಬಿಸಿಬಿಸಿ ಕಾಫಿ ಕುಡಿದು ದಿನಪತ್ರಿಕೆಯ ಮೇಲೆ ಕಣ್ಣಾಡಿಸುತ್ತಿದ್ದವನಿಗೆ ಒಳಪುಟವೊಂದರಲ್ಲಿ ಕಾಲು ಜಾರಿ ನದಿಗೆ ಬಿದ್ದು ವೃದ್ಧನ ಸಾವು ಎಂಬ ತಲೆಬರಹ ನೋಡಿ ಸುದ್ದಿಯನ್ನು ವಿವರವಾಗಿ ಓದಿದೆ.
‘ಶ್ರೀರಂಗಪಟ್ಟಣದ ಬಳಿಯ ಸಂಗಮದಲ್ಲಿ ಸ್ನಾನ ಮಾಡಲು ಇಳಿದಿದ್ದ ಸುಮಾರು ಎಪ್ಪತ್ತು ವರ್ಷದ ವೃದ್ಧರೊಬ್ಬರು ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಕೊಚ್ಚಿಹೋಗಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಶವವನ್ನು ಸಕರ್ಾರಿ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ. ಮೃತರ ಅಂಗಿಯ ಜೇಬಿನಲ್ಲಿ ಬೆಂಗಳೂರಿನ ವಿಳಾಸ ದೊರೆತಿದ್ದು ಪೋಲೀಸರು ಪ್ರಕರಣ ದಾಖಲಿಸಿಕೊಂಡು ವಾರಸುದಾರರಿಗಾಗಿ ಹುಡುಕಾಟ ನಡೆಸಿದ್ದಾರೆ.’ ಸುದ್ದಿ ಓದಿ ವಯಸ್ಸಾದ ಮೇಲೆ ಯಾಕೆ ಹೀಗೆ ಒಬ್ಬೊಬ್ಬರೇ ಓಡಾಡುತ್ತಾರೋ ಎನಿಸಿ ಪಕ್ಕದ ಮನೆಯ ವೃದ್ಧರ ನೆನಪಾಯಿತು.
ಸೋಮವಾರ ಬೆಳಿಗ್ಗೆ ಎದ್ದು ಪ್ಯಾಕ್ಟರಿಗೆ ಹೋಗಲು ಸಿದ್ಧವಾಗಿ ಕಾಫಿ ಕುಡಿಯುತ್ತಾ ಕುಳಿತ್ತಿದ್ದೆ. ಯಾರೋ ಗೇಟಿನ್ನು ಬಡಿದಿದ್ದು ಕೇಳಿಸಿ ಕಿಟಕಿಯಲ್ಲಿ ನೋಡಿದೆ. ಗೇಟಿನ ಬಳಿ ನಿಂತಿದ್ದ ಯುವಕ ಪೋಲೀಸು ಪೇದೆಯನ್ನು ನೋಡಿ ಬೆಳಿಗ್ಗೆಯೇ ಏನು ಗ್ರಹಚಾರವಪ್ಪ ಎಂದುಕೊಂಡು ಬಾಗಿಲು ತೆರೆದು ಹೊರಗೆ ಹೋದೆ. ‘ನಮಸ್ಕಾರ ಸಾರ್..ನಿಮ್ಮನೆ ನಂಬರ್ ನೂರಾ ಐದಾ ಸಾರ್..? ಎಂದವನಿಗೆ ಹೂನಪ್ಪ ಏನ್ ಸಮಾಚಾರ ಅಂದೆ. ‘ಪಕ್ಕದ್ ಮನೆ ನಂಬರ್ ನೂರಾ ಆರು ಅಲ್ವಾ ಸಾರ್?’ ಪೇದೆ ಕೇಳಿದ. ಮತ್ತೆ ಹೂಂಗುಟ್ಟಿದೆ. ಪಕ್ಕದ್ ಮನೇಲಿ ಈ ವಯಸ್ಸಾದವ್ರು ಇದ್ರಾ ಸಾರ್.. ಮೊನ್ನೆ ನದೀನಲ್ಲಿ ಮುಳುಗಿ ಸತ್ತುಹೋಗಿದಾರೆ. ಅವ್ರು ಜೇಬಲ್ಲಿ ಈ ಅಡ್ರೆಸ್ ಇತ್ತಂತೆ.. ನಮ್ ಸಾಹೇಬ್ರು ವಿಚಾರಿಸ್ಕಂಡ್ ಬಾ ಅಂತ ಹೇಳಿದಾರೆ’ ಎಂದು ಪಾಸ್ಪೋರ್ಟ ಸೈಜಿನ ಫೋಟೋವೊಂದನ್ನು ತೋರಿಸಿದಾಗ ಅದನ್ನು ನೋಡಿ ದಿಗಿಲಾಯಿತು. ಹಿಂದೆ ಬಂದು ನಿಂತಿದ್ದ ನನ್ನ ಮಗಳು ‘ಅದು ಪಕ್ಕದ ಮನೆ ತಾತಂದೇ ಫೋಟೋ.. ಪಾಪಚ್ಚಿ..’ ಎಂದಾಗ ನನಗೆ ಉಸಿರೇ ಹೊರಡದೇ ಹೂನಪ್ಪಾ ಇವ್ರು ಪಕ್ಕದ ಮನೆಲೀದ್ರು. ನಾನೂ ನೆನ್ನೆ ಇದೇ ವಿಷಯ ಪೇಪರಲ್ಲಿ ಓದಿದೆ..ಅವ್ರೇ ಅಂತ ಗೊತ್ತಾಗಲಿಲ್ಲ ಅಂದೆ. ‘ಏನ್ ಸಾರ್ ಪಕ್ಕದ್ ಮನೆಯವ್ರು ಸತ್ತು ಹೋಗಿದ್ದನ್ನ ಪೇಪರ್ನಲ್ಲಿ ಓದೋ ಕಾಲ ಬಂದೋಯ್ತಲ್ಲ ಸಾರ್’ ಎಂದು ಮುಗುಳ್ನಕ್ಕ ಪೇದೆಗೆ ಏನು ಹೇಳಬೇಕೆಂದು ತಿಳಿಯಲಿಲ್ಲ. ಪಕ್ಕದ ಮನೆ ಓನರ್ ಫೋನು ನಂಬರಿದ್ರೆ ಕೊಡಿ ಸಾರ್ ಎಂದವನಿಗೆ ಯಾವತ್ತೋ ಡೈರಿಯಲ್ಲಿ ಬರೆದುಕೊಂಡಿದ್ದ ನಂಬರ್ ನೀಡಿದೆ. ನನಗೆ ಸಿಟಿಬಸ್ಸಿಗೆ ಲೇಟಾಗುತ್ತಿತ್ತು. ಸದ್ಯ ಜಾಸ್ತಿ ಪ್ರಶ್ನೆ ಕೇಳದೆ ಹೊರಟು ಹೋದರೆ ಸಾಕೆನಿಸಿತ್ತು.
‘ನಿಮಗೊತ್ತಾ ಸಾರ್., ಸತ್ತುಹೋಗಿರೋ ಮನುಷ್ಯ ಬಹಳ ಶ್ರೀಮಂತ ಸಾರ್.. ಚಿಕ್ಕಪೇಟೆನಲ್ಲಿ ಎರಡು ಜ್ಯೂವೆಲ್ಲರಿ ಶಾಪು.. ಜಯನಗರದಲ್ಲೊಂದು ಮಲ್ಲೇಶ್ವರಂನಲ್ಲೊಂದು ಬಂಗ್ಲೆ ಇದಾವಂತೆ. ಏನಿದ್ರೂ ಏನ್ ಸುಖಾ ಸಾರ್.. ಇಬ್ರೂ ಗಂಡು ಮಕ್ಕಳಿಗೆ ಆಸ್ತಿ ಭಾಗ ಮಾಡೋವಾಗ ವಿಪರೀತ ಜಗಳ ಆಗಿ ಒಬ್ಬನೇ ಯಾರಿಗೂ ಗೊತ್ತಾಗದಂಗೆ ಬಂದು ಇಲ್ಲಿದ್ದನಂತೆ.. ನಮ್ಮಪ್ಪಂದು ಆಕಸ್ಮಿಕ ಸಾವಲ್ಲ ಆತ್ಮಹತ್ಯೆ, ಇದಕ್ಕೇ ನಮ್ಮ ಅಣ್ಣಾನೇ ಕಾರಣ ಅಂತ ಚಿಕ್ಕಮಗ ಕಂಪ್ಲೇಂಟು ಕೊಟ್ಟಿದಾನೆ ಸಾರ್..’ ಎಂದು ಹೇಳಿ ಹೊರಟ ಪೇದೆಯ ಮಾತುಗಳು ನನಗೆ ಸರಿಯಾಗಿ ಕೇಳಿಸಲಿಲ್ಲ. ನನಗೆ ಫ್ಯಾಕ್ಟರಿಗೆ ಹೋಗುವ ಸಿಟಿಬಸ್ಸು ಎಲ್ಲಿ ಮಿಸ್ ಆಗಿ ಬಿಡ್ತದೋ ಅನ್ನುವ ಆತಂಕ ಶುರುವಾಗಿ ಬಸ್ಸ್ಟಾಪಿನ ಕಡೆ ಓಡಿಹೋದೆ.
 

‍ಲೇಖಕರು avadhi

24 July, 2013

3 Comments

  1. Anonymous

    ನಗರದಲ್ಲಿ ಸವೆದುಹೋಗುವ ಸಂಬಂಧಗಳ ಯಾಂತ್ರಿಕತೆಯ ಕುರಿತು ಬರೆದ ಕಥೆ ಚೆನ್ನಾಗಿದೆ. ಸವೆದು ಹೋದ ಯಂತ್ರದ ಬಿಡಿ ಭಾಗಗಳನ್ನು ಮತ್ತೆ ಮತ್ತೆ ರಿಪೇರಿ ಮಾಡುವ ಅಗತ್ಯಗಳ ಕುರಿತು ಆ ರಿಪೇರಿಯಲ್ಲಿರುವ ಆಸಕ್ತಿ, ಮನುಷ್ಯರ ಸಂಬಂಧಗಳ ರಿಪೇರಿಯಲ್ಲಿ ಇಲ್ಲದಾಗಿ ಆಧುನಿಕ ಮನುಷ್ಯ ಹೃದಯವಿಲ್ಲದ ಬರಿ ಯಂತ್ರವಾಗಿದ್ದಾನೆ ಎಂಬ ವಿಷಾದ ಇಲ್ಲಿ ಸಾಂಕೇತಿಕವಾಗಿ ಅಭಿವ್ಯಕ್ತಿಸಲ್ಪಟ್ಟಿದೆ.ಉದಯಕುಮಾರ ಹಬ್ಬು, ಕಿನ್ನಿಗೋಳಿ

    • ಟಿ,ತಿಮ್ಮಪ್ಪ

      ಕಥೆಯನ್ನು ಮೆಚ್ಚಿರುವ ಶ್ರೀ ಉದಯಕುಮಾರ್ ಹಬ್ಬುರವರಿಗೆ ಮತ್ತು ಪ್ರಕಟಿಸಿದ ಅವಧಿಯ ಸಂಪಾದಕರಿಗೂ ಧನ್ಯವಾದಗಳು..

  2. ಉದಯಕುಮಾರ್ ಹಬ್ಬು

    ಈ ಕಥೆಯು ಇಂದಿನ ಯಾಂತ್ರಿಕ ಬದುಕಿನ ಬಗ್ಗೆ ಕ್ಷಕಿರಣ ಬೀರುವ ಪರಿಣಾಮಕಾರಿಯಾಗಿ ಮೂಡಿಬಂದ ಕತೆಯಾಗಿದೆ. ಸವೆದ ಯಂತ್ರದ ಬಿಡಿ ಭಾಗಗಳನ್ನು ರಿಪೇರಿ ಮಾಡುವಲ್ಲಿನ ಆಸಕ್ತಿ ಮನುಷ್ಯರ ಸಂಬಂಧಗಳನ್ನು ರಿಪೇರಿ ಮಾಡುವುದರಲಿಲ್ಲವಾಗಿದೆ. ಹೆಂಡತಿಗೆ ತನ್ನವರ ಸಂಬಂಧಗಳಿಗಿಂತ ಟಿ ವಿ ಧಾರವಾಹಿಯೇ ಮಹತ್ವದ್ದಾಗಿದೆ. ಮಗಳಿಗೆ ಮೊಬೈಲ್ಫ್ ಹುಚ್ಚೆ ಹೆಚ್ಚು ಇಂಪಾರ್ಟೆಂಟ್ ಆಗಿದೆ. ನೆರೆಯ ಮುದುಕನ ಬಗ್ಗೆ ಕ್ರೂರ ನಿರ್ಲಕ್ಷ, ತನ್ನ ಕುರಿತೇ ಆಸಕ್ತಿ, ಹೀಗೊಂದು ಯಾಂತ್ರಿಕ ಬದುಕಿನ ವಿಷಾದವನ್ನು ಸವೆದ ಯಂತ್ರಗಳ ರಿಪೇರಿ ಸಂಕೇತಿಕವಾಗಿ ಮೂಡಿಬಂದಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading