ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಥೆ – ’ದೇವರು ಬಂತವ್ವ ದೇವರು’!

ಡಾ. ಎಸ್.ಬಿ.ಜೋಗುರ

ಬೆಳ್ಳಬೆಳತನಕ ಒಂದು ಕೊಡಾ ನೀರಿಗಾಗಿ ಪಾಳಿ ಹಚ್ಕೊಂಡು ಕೂಡೋ ಆ ದಿನಗಳನ್ನ ಮರಿಯೂದಾದರೂ ಹ್ಯಾಂಗ..? ದೇವೂರಿನ ರಾಜಪ್ಪಂತೂ ಮರತಿರಲಿಲ್ಲ. ನೀರ ಬಿಡವನು ರಾತ್ರಿ ಹನ್ನೊಂದರ ಮಟ ಬೋರ್ ಸುರು ಮಾಡಂವಲ್ಲ. ಅಲ್ಲೀಮಟ ಮನ್ಯಾಗಿನ ಮಂದೆಲ್ಲಾ ಒಬ್ಬೊಬ್ಬರಾಗಿ ತಾಸಿಗೊಮ್ಮ ತಮ್ಮ ಕೊಡ ಇದ್ದ ಜಾಗದೊಳಗೇ ಐತೊ.. ಇಲ್ಲೋ… ಅಂತ ನೋಡಿ ಬರತಿದ್ದರು. ಮನಿಯೊಳಗ ಸಣ್ಣ ಚುಕ್ಕೊಳು ಇದ್ದರ ಅವು ‘ಆಟಾ ಗೀಟಾ ಡಂಗರೋ’ ಅಂತ ಹೇಳಿ ಆಡೂದನ್ನ ಅಲ್ಲೇ ಬಿಟ್ಟು ನಳದ ಮ್ಯಾಲ ಪಾಳಿಯೊಳಗಿರೋ ತಮ್ಮ ಕೊಡಾ ಕಾಯ್ಕೊಂತ ಕೂಡಬೇಕಿತ್ತು. ಒಬ್ಬೊಬ್ಬರು ಮೂರು ಮೂರು.. ನಾಕು ನಾಕು ಕೊಡಾ ಪಾಳಿಗಿ ಹಚ್ಚತಿದ್ದರು. ಗಟ್ಟೂಳವರು ಟ್ಯಾಂಕ್ ಮ್ಯಾಲ ಹತ್ತಿ ತುಂಬಕೋತಿದ್ದರು. ಮೂರ್ನಾಲ್ಕು ಜನ ಬೊಕ್ಕ ಬೋರಲಾಗಿ ಬಿದ್ದು ಕೈ-ಕಾಲು ಮುರಕೊಂಡಿದ್ದಿತ್ತು. ವಾರಣೆಸ್ ಲಿಂದ ತಮ್ಮ ಕಬ್ಬಿಣ ಕೊಡದ ಮ್ಯಾಲ ಶಾರ್ಟ್ ಆಗಿ ಹೆಸರ ಬರದಿರದ್ದರು. ಇಲ್ಲಾಂದ್ರ ಕೊಡದ ಬುಡಕ ಮುಕುಳಿ ಮ್ಯಾಲ, ವಾರಣೇಸದಿಂದ ಗುಂಡಕನ ಗುರತು ಮಾಡತಿದ್ದರು.

ಹಿಂಗೆಲ್ಲಾ ಮಾಡದ ಮ್ಯಾಲೂ ಬ್ಯಾಸಗಿ ಮುಗಿಯೂದರೊಳಗ ಹತ್ತಿಪ್ಪತ್ತು ಕೊಡಾ ಅಲ್ಲಿಂದ ಗಾಯಬ್ ಆಗತಿದ್ವು. ಜನಾಂದ್ರ ಜನ, ಅಂಥಾ ಗದ್ದಲದೊಳಗೂ ಕೊಡಾ ಹಾರಸವರು ಎಟ್ಟು ಚಾಲಾಕಿ ಇರಬೇಕಾಯ್ತು ಅನ್ನೂದು ಮ್ಯಾಲಿನ ಮಾತು. ಹಂಗ ಕೊಡಾ ಹಾರಸೋ ಬೆರಕೀ ಕುರಸಾಲ್ಯಾಗೋಳು, ತಪ್ಪೀನೂ ಕಬ್ಬಿಣ ಕೊಡ, ಪ್ಲಾಸ್ಟಿಕ್ ಕೊಡಾ ಹಾರಸತಿರಲಿಲ್ಲ. ಏನಿದ್ದರೂ ತಾಮ್ರದ ಕೊಡಾನೆ ಗಾಯಬ್ ಆಗತಿದ್ವು. ಪಾಳಿ ಕೈಯ್ಕೋಂತ ಕುಂತಿರೋ ಚುಕ್ಕೋಳ ಕಣ್ಣ ತಪ್ಪಿಸಿ, ದೊಡ್ದವರು ಕೊಡಾನ್ನ ಹಿಂದ ಮುಂದ ಮಾಡಿದ್ದೇ ಆ ಚುಕ್ಕೋಳ ಅವ್ವದೇರು ಬಂದು, ಪಾಳಿಗಿರೋ ತಮ್ಮ ಕೊಡದ ಜಾಗಾ ಫéರಕ್ ಆಗಿದ್ದು ನೋಡಿ, ತಮ್ಮ ಹುಡುಗರ ನೆತ್ತಿಗಿ ಒಂದೇಟು ಕುಕ್ಕಿ, ಕವಕವ ಅಂತ ಬೈದಾಡತಿದ್ದರು.

‘ಯಾವ ಬುಬಣವ್ವಗ ಗೊತೈತಿ.. ನೋಡಿ ಮಾತಾಡಬೇಕು ಸುಮ್ಮೇ ಮಾತಾಡಬಾರದು’ ಅಂತ ಕೊಡ ಸರಸದಕ್ಕಿ ಬಾಳ ಸಾಜೋಗ ಇದ್ದಂಗ ಅಂದ ಮ್ಯಾಲೂ ಜಾಗ ಫéರಕ್ ಆದಕ್ಕಿ ಸುಮ್ಮ ಇರತಿರಲಿಲ್ಲ. ಅಂಥಾ ರಂಡೆರು..ಇಂಥಾ ಸೂಳೆರು, ಹಾದರಗಿತ್ತೇರು ಅಂತೆಲ್ಲಾ ಬಾಯ್ತುಂಬಾ.. ಹೊಟ್ತುಂಬಾ ಬೈದು ಹಗರಾಗತಿದ್ದಳು. ನೀರ ಬಿಡೋ ಯಮನಪ್ಪನ ಕತಿಯಂತೂ ದೇವರೇ ಬಲ್ಲ. ಅಂಥಾ ಹಾಂಟಪ್ಪ, ಇಂಥಾ ಪಡಸಂಟ..ಕೊಳಕ ಹಳಾ ಕೊಳಕ.. ‘ಬೀಳಸಪ್ಪನಾಯಿಯಂಥಾದು, ರಾತ್ರಿ ನೀರು ಬಿಡ್ತಾನ ಹಾಟ್ಯಾ.. ಹಳಾ ಹಾಟ್ಯಾ ಹಗಲತ್ತ ಬಿಡ್ಲಾಕ ಇವನಿಗೇನು ಧಾಡಿ..?ಅದರ ಬಾಯಾಗ ಮಣ್ಣ ಹಾಕಲಿ’ ಹಿಂಗೆಲ್ಲಾ ಬೈಯೂದು ಅವನ ಕಿವಿಗಿ ಬಿದ್ದ ಮ್ಯಾಲೂ ಅಂವಾ ತಾನು ಕಿವುಡ ಯಮನಪ್ಪ ಅನ್ನೂವಂಗ ಅಪರಾತ್ರಿಯೊಳಗೇ ನೀರ ಬೀಡವನು.

ದೇವೂರೊಳಗ ಆ ವರ್ಷ ಕೆಟ್ಟ ಬರಗಾಲ ಬಿದ್ದಿದ್ದು ರಾಜಪ್ಪನಿಗೆ ಈಗಲೂ ಪಕ್ಕಾ ನೆನಪೈತಿ. ಅವನಾಗ ಮೆಟ್ರಿಕ್ ಲ್ಲಿದ್ದ. ಮುಂಜಾನೆದ್ದು ತಂಬಗಿ ತಗೊಂಡು ಬೈಲಕಡಿಗಿ ಹೊಂಟಾಗ ಅವನಜ್ಜಿ ‘ಬೆಳತಾನ ತಿರುಗಾಡಿ ನೀಲಮ್ಮ ಒಂದು ಕೊಡಾ ನೀರ ತಂದಾಳ. ನೀವು ಗೂಳಿಗಳಂಗ ತಿಂದ್ಕೊಂಡು ಹಿಂಗೇ ತಿರಗತೀರಿ, ಹಂಡೆದಂಥಾ ಕುಂಡಿ ಬಿಟ್ಗೊಂಡು ಸಂಡಾಸಕ ಕೊಡಗಟ್ಟಲೆ ನೀರ ತಗೊಂಡು ಹೋಗಬ್ಯಾಡ್ರಿ. ಆ ಸಣ್ಣ ತಂಬಗಿ ತಗೊಂಡು ಹೋಗರಿ’ ಅಂತ ತಾಕೀತ್ ಮಾಡೂದು ನೆನಪಾಗಿ ರಾಜಪ್ಪ ತಾನಕ್ಕ ತಾನೇ ನಗತಿದ್ದ. ಅಂವಾ ಹಂಗ ನಗೂದು ನೋಡಿ ಅವನ ಹೆಂಡತಿ ಚಂದ್ರಿಕಾ ‘ಅದ್ಯಾಕ ಹಂಗ ಒಬ್ಬರೇ ನಗ್ತೀರಿ..’ ಅಂದಾಗ ರಾಜಪ್ಪ ‘ಅದನ್ನ ನಿನ್ನ ಮುಂದ ಹೇಳಾಕ ಆಗೂದಿಲ್ಲ’ ಅಂದಿದ್ದ.

ರಾಜಪ್ಪನ ಇಬ್ಬರೂ ತಂಗಿದೇರು ಬೆಳ್ಳ ಬೆಳತನ ಸುತ್ತಾಡಿ ಎರಡು ಕೊಡಾ ನೀರ ತರವರು. ರಾಜಪ್ಪ ಆಗಲೀ… ಅವನಣ್ಣ ಗೊಲ್ಲಾಳ ಆಗಲೀ ಒಂದೇ ಒಂದಿನ ಕೈಯಾಗ ಕೊಡ ಹಿಡದವರಲ್ಲ. ನಳದ ಮ್ಯಾಲಿನ ಜಗಳ, ಹೆಂಗಸರ -ಹೆಂಗಸೂರ ನಡುವಿನ ಫೈಟಿಂಗ್ ನೋಡೇ ರಾಜಪ್ಪ ಮತ್ತ ಗೊಲ್ಲಾಳ ಸುಸ್ತ ಆಗತಿದ್ದರು. ಅವು ಎಂಥಿಂಥಾ ಬೈಗುಳ.. ನೆನಪ ಮಾಡಿಕೊಂಡರ ಮೈ ಜುಮ್ ಅಂತೈತಿ. ಆಕಿ ಕೂದಲ ಇಕಿ, ಇಕಿ ಕೂದಲ ಆಕಿ ಹಿಡದು ಜಗ್ಗಾಡೂದು, ಬೈದಾಡೂದು ನೋಡಿ ಊರಾಗಿನ ಯಾವ ಗಂಡಸೂರೂ ನಳದ ಸನ್ಯಾಕ ಹೈತಿರಲಿಲ್ಲ. ಈಗ ಹಂಗಲ್ಲ, ಮನಿಯೊಳಗೇ ಮನ್ಸೀಪಾಲಟಿ ನೀರ ತಾಸಗಟ್ಟಲೇ ಹರೀತೈತಿ. ಹಂಗ ಹರೀಯೊದು, ಗಟಾರ ಸೇರೂದು ಕಂಡೇ ರಾಜಪ್ಪಗ ಬರಗಾಲದ ದಿನ ನೆನಪಾದವು. ದಬ ದಬ್ ಅಂತ ನೀರು ಹರದು ಹೋಗೂದು ಕಂಡು ರಾಜಪ್ಪ ಸಿಟ್ಟೀಲೇ ‘ನೀರ ರೊಕ್ಕಕ್ಕಿಂತಲೂ ಹೆಚ್ಚ, ಐತೆಂತ ಹ್ಯಾಂಗ ಬೇಕು ಹಂಗ ಚಲ್ಲಬಾರದು’ ಅಂತ ಅಣ್ಣನ ಹೆಂಡತಿಗಿ ಹೇಳಿದ್ದ. ಆಕಿಗಿ ಒಂದು ಕೊಡ ನೀರಿಗಾಗಿ ಹಾಂಗ ಬೆಳ್ಳ ಬೆಳತನ ತಿರಗಿರೋ ಅನುಭವ ಇರಲಿಲ್ಲ.

ದೇವೂರು ಮಲ್ಲಯ್ಯನ ಗುಡಿ ಹಿಂದಿರೋ ಕಲ್ಲನಗೌಡ ಪಾಟೀಲರ ಎರಡನೇ ಮಗ ಈ ರಾಜಪ್ಪ. ಅವನ ಬೆನ್ನ ಮ್ಯಾಲ ನೀಲಮ್ಮ ಮತ್ತ ಶಂಕ್ರವ್ವ ಅನ್ನೋ ಇಬ್ಬರು ಹೆಣ್ಣು ಹುಡಗೇರು. ರಾಜಪ್ಪನಿಗಿಂತಾ ದೊಡ್ಡಂವ ಗೊಲ್ಲಾಳಪ್ಪ ಅಲ್ಲೇ ದೇವೂರೊಳಗ ಪೋಸ್ಟ್ ಆಫೀಸಿನೊಳಗ ಕೆಲಸಾ ಮಾಡತಿದ್ದ. ರಾಜಪ್ಪ ಬಿ.ಎಡ್.ಮುಗಸಿ ಬಾಗಲಕೋಟದೊಳಗ ಹೈಸ್ಕೂಲ್ ಮಾಸ್ತರಕಿ ಮಾಡತಿದ್ದ. ಅದಕ್ಕಿಂತ ಮೊದಲ ಬಿಜಾಪುರದೊಳಗೇ ಇದ್ದ. ಈ ಗುಡಿ ಹಿಂದಿನ ಪಾಟೀಲರ ಮನಿತನದೊಳಗ ಇವನೇ ಮೊದಲ ನೌಕರಿ ಸೇರದಂವ. ಅದೂ ಸರಕಾರಿ ನೌಕರಿ. ಇವನ ಚಿಕ್ಕಪ್ಪನ ಮಗಾ ಒಬ್ಬಂವ ಅಲ್ಲೆ ದೇವೂರೊಳಗ ಅನುದಾನ ಇಲ್ಲದಿರೋ ಸಾಲಿಯೊಳಗ ಮಾಸ್ತರಕಿ ಮಾಡತಿದ್ದ. ಅವನ ದೊಡ್ದಪ್ಪನ ಮಗ ಒಬ್ಬಂವ ಕೋ-ಆಪರೇಟಿವ್ ಬ್ಯಾಂಕಿನೊಳಗ ಕ್ಲಾರ್ಕ್  ಆಗಿದ್ದ. ಇವರ ಚಿಕ್ಕಪ್ಪ, ದೊಡ್ಡಪ್ಪಗೋಳ ಎಲ್ಲ ಮಕ್ಕಳು ಸೇರದರ ಬಾಳ ದೊಡ್ಡ ಬಡ್ಡಿ ಇರೋ ಮನಿತನ.

ಒಕ್ಕಲುತನ ಬಿಟ್ಟರ ಇವರ ಅಪ್ಪದೇರಿಗಿ ಬ್ಯಾರೇ ಕಸಬೇ ಗೊತ್ತಿರಲಿಲ್ಲ. ಅವರ ದೊಡ್ಡಪ್ಪ ಭೀಮಣ್ಣ ಮಾತ್ರ ಬಿಡುವು ಸಿಕ್ಕಾಗ ಹಗ್ಗಾ ಹೊಸೀತಿದ್ದ. ಅಷ್ಟು ಬಿಟ್ಟರ ಒಕ್ಕಲುತನನೇ ಎಲ್ಲರಿಗೂ ಗತಿಯಾಗಿತ್ತು. ರಾಜಪ್ಪ ಡಿಗ್ರಿ ಓದೂ ಮುಂದ ಸೈತ ಹೊಲದೊಳಗ ಕೆಲಸಾ ಮಾಡ್ಕೊಂತ, ಬಾಂದಾ ದಂಡಿಗಿ ಆಕಳ ಮೈಸ್ಕೊಂತ ಓದಿದ್ದೈತಿ. ಎಡಿ ಹೊಡಿಯೂದು, ಬಲರಾಮ ಹೊಡಿಯೂದು, ನೇಗಿಲು, ಕುಂಟಿ ಎಲ್ಲಾ ಅವನಿಗಿ ಈಗಲೂ ನೆನಪಿತ್ತು. ಹಂಗಾಗೇ ದಾವಣಿಯೊಳಗಿರೋ ದಿಂಡ, ನೊಗ ನೋಡಿ ತಾನೂ ಎಡಿ ಹೊಡದಿರೋ ದಿನಗಳನ್ನ ನೆನಪ ಮಾಡ್ಕೊತಿದ್ದ.

ರಾಜಪ್ಪನ ಅವ್ವ, ಅಪ್ಪ ತೀರಿದ ಮ್ಯಾಲ ಒಕ್ಕಲುತನ ಮುರದಂಗ ಆಗಿತ್ತು. ಹಂಗಾಗೇ ದಿಂಡ, ನೊಗ, ಬಲರಾಮ ಒಂದರ ಮ್ಯಾಲೊಂದು ಗದ್ದಾ ಹೇರಕೊಂಡು ದನದ ಕೊಟಗಿಯೊಳಗ ಬಿದ್ಕೊಂಡಿದ್ದವು. ರಾಜಪ್ಪ ಬಿಜಾಪುರದೊಳಗ ಇದ್ದಾಗ ತಿಂಗಳಿಗೊಮ್ಮ ಬಂದು ಹೋಗತಿದ್ದ. ಈಗ ಬಾಗಲಕೋಟದೊಳಗ ಇರೋದರಿಂದ ಬ್ಯಾಸಗಿ ಸೂಟಿಗಿ ಮಾತ್ರ ಬಂದು ಹೋಗುವಂಗ ಆಗಿತ್ತು. ಆಸ್ತಿ ಇನ್ನೂ ಪಾಲು ಆಗಿರಲಿಲ್ಲ. ಅದಕ್ಕ ಕಾರಣನೂ ಇತ್ತು. ಸೋಲಾಪುರದಲ್ಲಿರೋ ತಂಗಿ ನೀಲಮ್ಮನ ಗಂಡ ಶಿವರುದ್ರಪ್ಪ ‘ನಿಮ್ಮಪ್ಪನ ಆಸ್ತಿಯೊಳಗ ನಿನಗೂ ಪಾಲು ಬರಬೇಕು’ ಅಂತ ತನ್ನ ಹೆಂಡ್ತ್ತಿಗಿ ಹೇಳಿಕಳಿಸಿದ್ದ. ಇನ್ನೊಬ್ಬಳು ತಂಗಿ ಶಂಕ್ರವ್ವನ್ನ ಬಸವನ ಬಾಗೇವಾಡಿಗಿ ಕೊಟ್ಟಿದ್ದರು.

ಆಕಿಗಿ ಬೇಕಾದಷ್ಟು ಗಂಡನ ಆಸ್ತಿ ಇತ್ತು. ಹಿಂಗಾಗಿ ತಂದೇ ತನಗ ತಿಲ್ಲಾರದಂಗ ಇರೋವಾಗ, ಅಣ್ಣತಮ್ಮದೇರದು ತಗೊಂಡು ಏನು ಮಾಡೂದೈತಿ ಅನ್ನೋ ಮಾತು ಶಂಕ್ರವ್ವಳದಾಗಿತ್ತು. ಖರೆ ಹೇಳಬೇಕಂದ್ರ ನೀಲಮ್ಮಗೂ ಅಣ್ಣದೇರ ಆಸ್ತಿಯೊಳಗ ಪಾಲು ಬೇಕಿರಲಿಲ್ಲ. ಆದರ ಆಕಿ ಗಂಡ ಶಿವರುದ್ರಪ್ಪ್ರ ತುಸು ಬೆರಕಿ ಇದ್ದ. ಅದೂ ಅಲ್ಲದೇ ಇಸ್ಪೀಟ ಆಡೂ ಚಟಕ್ಕ ಅಂಟಕೊಂಡಿದ್ದ. ಊರಮುಂದಿನ ತಂದೇ ಎರಡೆಕರೆ ಜಮೀನನ್ನ ಚಟಕ್ಕ ರೊಕ್ಕ ಕಡಿಮಿ ಬಿದ್ದು ತಗದಿದ್ದ. ಈಗ ಹೆಂಡತಿ ಕಡಿ ಬಂದಷ್ಟು ಬರಲಿ ಅಂತ ಬೆನ್ನ ಹತ್ತಿದ್ದ. ಅಪ್ಪ ಸಾಯೂದಕ್ಕಿಂತ ಎಂಟತ್ತು ವರ್ಷ ಮೊದಲೇ ಅವ್ವ ತೀರಿಕೊಂಡಿದ್ದಳು. ರಾಜಪ್ಪಗ ತನ್ನ ಅವ್ವಳ ಸಾವು ಇನ್ನೂ ಕಣ್ಮುಂದೇ ಕಟ್ಟದಂಗಿತ್ತು. ಆವಾಗಿನ್ನೂ ಇಬ್ಬರೂ ತಂಗಿದೇರದು ಲಗ್ನ ಆಗಿರಲಿಲ್ಲ.

ಅಪ್ಪ-ಅವ್ವ ಇದ್ದರ ಅದು ಏನರೇ ಆಗ್ತಿತ್ತು. ಈಗ ಅವರೇ ಇಲ್ಲಾಂದ್ರ ಅಲ್ಲಿ ಹೋಗಿ ಅವರ ಜೋಡಿ ಜಗಳ ತಗದು ಆಸ್ತಿಯೊಳಗ ಪಾಲು ಕೊಡ್ರಿ ಅಂತ ಕೇಳೂದರೇ ಹ್ಯಾಂಗ ಅನ್ನೂದು ನೀಲಮ್ಮಗ ಬಿರಿ ಬಂದಿತ್ತು. ‘ನಿನಗ ಆಗಲಿಲ್ಲಂದ್ರ ನನ್ನ ಜೋಡಿ ಬಾ, ನಾ ಮಾತಾಡ್ತೀನಿ’ ಅನ್ನೂದು ಆಕಿ ಗಂಡ ಶಿವರುದ್ರಪ್ಪನ ಮಾತು. ‘ದುಡಿಲಿಕ್ಕ ಆಗಲಾರದವ್ರಿಗೆ ಎಟ್ಟು ಆಸ್ತಿ ಕೊಟ್ಟರೂ ಸಾಲೂದಿಲ್ಲ, ನುಂಗಿ ನೀರು ಕುಡಿಯವರೇ ನಾ ಕೇಳೂದಿಲ್ಲ’ ಅಂತ ನೀಲಮ್ಮ. ಹಿಂಗಾಗಿ ಆ ಆಸ್ತಿ ಪಾಲು ಮಾಡೂದೇ ಬ್ಯಾಡಂತ ಹಂಗೇ ಇಟ್ಟಿದ್ದರು. ಬರೋ ಇಳುವರಿಯೊಳಗ ಆಕಿಗೂ ಕಾಳು ಕಡಿ ಮುಟ್ಟ್ತಸತಿದ್ದರು.

ರಾಜಪ್ಪನ ಅವ್ವ ಸಾವಿತ್ರಿ ಯಾವತ್ತೂ ಕೆಲಸದೊಳಗ ಇರುವಕ್ಕಿ. ಆಕಿ ಒಂದೇ ಗಳಗಿ ಮಲಗಿದ್ದಾಗಲೀ.. ಬ್ಯಾಸರ ಐತು ಅಂತ ಕುಂತಿದ್ದಾಗಲೀ ಅಂವಾ ನೋಡಿರಲಿಲ್ಲ. ಹೆಂಡತಿ ಚಂದ್ರಿಕಾಳ ಮುಂದ ದಿನಕ್ಕೊಮ್ಮೆರೆ ‘ನಮ್ಮ ಅವ್ವನ ದಗದಾ ನೋಡಬೇಕು. ಎಟ್ಟು ಮಾಡದರೂ ಒಂದೇ ಒಂದಿನ ಉಶ್..ಯಪಾ ಅಂತಿರಲಿಲ್ಲ. ಹಂಗ ಕೆಲಸಾ ಮಾಡೊ ಹೆಣಮಕ್ಕಳನ್ನೇ ತಾನು ನೋಡಿಲ್ಲ’ ಅಂತಿದ್ದ. ದೇವರ ಕೋಲಿಯೊಳಗ ರಾಜಪ್ಪ ಮಗ ರಮೇಶ ಮತ್ತ ಹೆಂಡತಿ ಚಂದ್ರಿಕಾ ಹೀಗೇ ಊಟಾ ಮಾಡಿ ಮಲಗಿದ್ದರು. ಮ್ಯಾಲ ಗೂಟದ ಮ್ಯಾಲ ಒಂದೆರಡು ಕಟಗಿ ಪಳಿ ಇದ್ವು. ‘ಅವು ಏನು..? ಅಲ್ಯಾಕ ಇಟ್ಟಾರ..?’ ಅಂತ ಕೇಳಿದ್ದೇ ರಾಜಪ್ಪ ತನ್ನ ಬಾಲ್ಯದ ದಿನಗಳನ್ನ ನೆನಪು ಮಾಡಿಕೊಂಡ.

ಅವನಪ್ಪ ಐತವಾರ ಸಂತೀ ದಿನ ಇಡೀ ಬಾಜಾರ ತುಂಬಾ ತಿರುಗಾಡಿ, ಚುಲೋ ಶಾವಗಿ ಗೋಧಿ ಹುಡಕತಿದ್ದ. ಒಂದು ಹಿಡಿ ಗೋಧಿ ತಗೊಂಡು, ತನ್ನ ದೋತರ ಪದರೊಳಗ ಹಾಕೊಂಡು ಮತ್ತ ಮಾರವರ ಬುಟ್ಟೀಯೊಳಗೇ ಅದನ್ನ ಝಾಡಸತಿದ್ದ. ಅಟ್ಟೂ ಕಾಳ ಕೆಳಗ ಜಾರದರ ಅದು ಶಾವಗಿ ಗೋಧಿ ಅಲ್ಲಂತ ಲೆಕ್ಕ. ಅದೇ ಒಂದೊಮ್ಮ ಒಂದಷ್ಟು ಕಾಳು ಆ ದೋತರಕ್ಕ ಹತ್ತಿದರ ಅವು ಚುಲೋ ಗೋಧಿ ಅಂತ ತಗೊಂಡು ಬಂದು ಅವ್ವಳ ಕೈಯಾಗ ಕೊಡತಿದ್ದ. ಅವ್ವ ಆ ಗೋಧಿಗಿ ನೀರ ಹಚ್ಚಿ ನೆನಸಿ, ಮನ್ಯಾಗೇ ಬೀಸೂಕಲ್ಲೊಳಗ ಬೀಸಿ ಹಿಟ್ಟ ಮಾಡತಿದ್ದಳು. ಬ್ಯಾಸಗಿ ಬಂತಂದ್ರ ಸಾಕು ಯಾರೂ ಸುಮ್ಮ ಕೂಡತಿರಲಿಲ್ಲ.

ಒಣ್ಯಾಗಿನ ಎಲ್ಲಾರೂ ಸವಡಿಯಂಗ ಸೇರಿ ಉಗರತ್ತ, ಪರಡಿ, ಗೌಲಿ, ಸೌತೀ ಬೀಜ, ಹಪ್ಪಳ, ಸಂಡಗಿ ಹೀಂಗ ತರಾವರಿ ದೀನಸ ತಯಾರ ಮಾಡತಿದ್ದರು. ಮದುವಿಯಾಗೋ ಹುಡಿಗಿಯರಂತೂ ಸುರಗೀ ಸಾಮಾನಂತ ಬಣ್ಣ ಹಾಕಿ ಹಪ್ಪಳ, ಸಂಡಗಿ, ಕುರಡಗಿ ಮಾಡತಿದ್ದರು. ರಾಜಪ್ಪನ ಅವ್ವ ಸಾವಿತ್ರಿ ಮಾತ್ರ ಇಂಥಾ ದೀನಸು ಮಾಡಾಕ ಬಾಳ ಚಮಕ್ ಇದ್ದಳು. ಆಕಿ ಕುಂತಳಂದ್ರ ಒಬ್ಬಳೇ ಎರಡು ಸೊಲಗಿ ಶಾವಗಿ ಹೊಸೀತಾಳ ಅನ್ನೋ ಮಾತಿತ್ತು. ಕೆಲಸಕ್ಕ ಆಕಿ ಎಂದೂ ಹೈಗೈ ಮಾಡದಕ್ಕಿ ಅಲ್ಲ. ಕುಂತು ಕೆಡಬಾರದು ಅನ್ನೋ ಗುಣದಕ್ಕಿ.

ಸವಡಿಯಂಗ ಶಾವಗಿ ಮಾಡೂದು ಅಂದ್ರ ಏನಂತ ಆವಾಗ ರಾಜಪ್ಪಗಿನ್ನೂ ಗೊತ್ತಿರಲಿಲ್ಲ. ಬರೀ ಸವಡಿಯಂಗ ಆಕಿ ಜೋಡಿ ಮಾಡ್ತೀವಿ ಅನ್ನೂ ಮಾತು ಕಿವಿಗಿ ಬೀಳತಿತ್ತು ಆದರ ಹಂಗಂದರೇನು ಅನ್ನೂದು ಗೊತ್ತಿರಲಿಲ್ಲ. ಕಲ್ಲವ್ವ -ಮಲ್ಲವ್ವ ಸವಡೀಯಂಗ ಶಾವಿಗಿ ಮಾಡ್ತಾರಾಂದ್ರ ಅದರರ್ಥ ಮೊದಲ ಇಬ್ಬರೂ ಕೂಡಿ ಕಲ್ಲವ್ವಳ ಮನೀದು ಶಾವಿಗಿ ಮುಗಸ್ತಾರ, ಆಮ್ಯಾಗ ಮಲ್ಲವ್ವಳ ಮನೀದು. ಹೀಂಗ ಒಬ್ಬರಿಗೊಬ್ಬರು ಕೈ ಕೈಯಾಗ ಆಸರಾಗೊದನ್ನೇ ಸವಡೀ ಅಂತ ಕರೀತಾರ ಅನ್ನೂದು ಆಮ್ಯಾಗ ರಾಜಪ್ಪಗ ಗೊತ್ತಾಗಿತ್ತು. ಶಾವಗಿ ಹಿಟ್ಟ ಕಲಸೂದರೊಳಗೂ ಒಂದು ಹದ ಇರತೈತಿ.

ಹ್ಯಾಂಗ ಬೇಕಾದಂಗ ಕಲಸ್ತೀನಿ ಅಂದ್ರ ನಡಿಯೂದಿಲ್ಲ. ಕೋಲು ಮ್ಯಾಲಿನ ಶಾವಗಿ ಇಳಿಯಾಕ ಶುರು ಮಾಡ್ತಾವ. ಹಂಗಾಗಿ ಅದನ್ನ ಒಂದು ಅಳತಿ ಮ್ಯಾಲ ನಾದಬೇಕು. ಸುಗ್ಗಿ ಮುಗಿಸಿದ ಮ್ಯಾಲ ಬ್ಯಾಸಗಿಯೊಳಗ ಓಣ್ಯಾಗಿನ ಎಲ್ಲಾರೂ ಗೋಧಿಗಿ ನೀರ ಹಚ್ಚವರೇ.. ಹಂಗಾಗಿ ಶಾವಗಿ ಮಣಿಗಿ ಸಿಕ್ಕಾಪಟ್ಟೆ ಡಿಮ್ಯಾಂಡು. ಅದರೊಳಗೂ ಯಂಕಂಚಿಯವರ ಶಾವಗಿ ಮಣಿ ಚುಲೋ ಐತಿ, ಮಣೂರವರ ಮಣಿ ಸವದೈತಿ, ಮಂಟೂರವರ ಮಣಿ ಬಿರಸೈತಿ, ಕೋಳೂರವರ ಮಣಿ ಹರಕಾಬುರಕೈತಿ ಅಂತ ಮಾತು ಬ್ಯಾರೆ. ತಮ್ಮ ಮನ್ಯಾಗಿರೋ ಮಣಿ ಶಾವಗಿ ಮಾಡೊ ಸೀಜನ್ ಮುಗಿಯೂಮಟ ಒಂದಿನಾನೂ ಖಾಲಿ ಇರತಿರಲಿಲ್ಲ. ಹೊತ್ತು ಹೊಂಡಿದ್ದೇ ತಡ ‘ಅಕ್ಕಾರ, ತುಸು ಶಾವಗಿ ಮಣಿ ಬೇಕಿತ್ತಲ್ಲರೀ..’ ಅಂತ ಒಬ್ಬರಿಲ್ಲಾ ಒಬ್ಬರು ಕೂಗುದು ಕೇಳಸತಿತ್ತು.

ಯುಗಾದಿಯಷ್ಟಿಗೆ ಹೊಸ ಶಾವಿಗಿ ಊರಾಗ ಎಲ್ಲಾರ ಮನಿಯೊಳಗೂ ರೆಡಿ ಆಗಬೇಕಿತ್ತು. ದೇವೂರಿನ ಮಲ್ಲಯ್ಯಗ ಯುಗಾದಿ ಹಬ್ಬದ ದಿವಸ ಶಾವಗಿನೇ ಎಡಿ ಕೊಡಬೇಕು ಅನ್ನೋ ರಿವಾಜಿತ್ತು. ಅದೂ ಹಿಂದಿನ ವರ್ಷದ್ದಲ್ಲ. ಯುಗಾದಿ ಸಲಾಗೇ ಮಾಡಿರೋ ಹೊಸ ಶಾವಿಗಿ. ಶಾವಗಿ ಹೊಸಿಯೂದು ಮತ್ತ ಹಿಡಿಯೂದು ಎರಡೂ ಎಲ್ಲರ ಕೈಲೂ ನೀಗೂ ಮಾತಲ್ಲ. ಅದಕ್ಕೊಂದು ಹಿಕ್ಮತ್ ಇರತೈತಿ. ರಾಜಪ್ಪನ ತಂಗಿದೇರು ಇಬ್ಬರೂ ನೀರಿಗಿ ಹೋದರ, ರಾಜಪ್ಪ ಮನ್ಯಾಗ ಕುಂತು ಶಾವಗಿ ಹಿಡೀತಿದ್ದ. ಅವನಪ್ಪ ಅದನ್ನೋಡಿ ‘ಹೆಂಗಸರಂತಾ ಕುರಸಾಲ್ಯಾ’ ಅಂತಿದ್ದ. ಅವ್ವ ಸಾವಿತ್ರಿ ಮಾತ್ರ ರಾಜಪ್ಪ ತನ್ನ ಹೆಣ್ಣಮಕ್ಕಳಿಗಿಂತಲೂ ಬಾಳ ಹುಷಾರಿ ಅದಾನ ಅಂವಾ ಶಾವಿಗಿ ಹಿಡದಂಗ ಮತ್ಯಾರಿಗೂ ಬರೂದಿಲ್ಲ ಅಂತ ಹೇಳಿ ಶಾವಿಗಿ ಮಾಡೂದು ಮುಗದ ಮ್ಯಾಲ ಚಾರಾಣೆ ರೊಕ್ಕಾ ಕೊಡ್ತೀನಿ ಅಂತ ಆಸೆ ಹಚ್ಚಿ ಕೆಲಸಾ ಮಾಡಸತಿದ್ದಳು.

ಒಣ್ಯಾಗಿನ ಬಾಳ ಮಂದಿ ಶಾವಿಗಿ ಹೊಸಿಯಾಕ ಕಲ್ಲನಗೌಡನ ಮನಿನೇ ಪಸಂದ್ ಮಾಡತಿದ್ದರು. ಯಾಕಂದರ ಅಂಗಳದಾಗ ಎದುರಿಗಿ ಕುಂತರ ಚುಲೋ ಗಾಳಿ ಬಡೀತಿತ್ತು. ಶಾವಿಗಿನೂ ಇಳೀತಿರಲಿಲ್ಲ. ಖುದಿಗಿ ಒಮ್ಮೊಮ್ಮ ಕೋಲ ಮ್ಯಾಲಿನ ಶಾವಿಗಿ ನೆಲದ ಮ್ಯಾಲ ಇಳದು, ಹಿಟ್ಟಿನ ಗುಂತಿ ಆಗತಿದ್ವು. ಅದಕ್ಕೇ ಚಲೋ ಗಾಳಿ ಬೆಳಕ ಇರೋ ರಾಜಪ್ಪನ ಮನ್ಯಾಗ ಕುಂತೇ ಶಾವಗಿ ಮಾಡೂದು ಹೆಚ್ಚಿತ್ತು. ರಾಜಪ್ಪನ ಅಪ್ಪ ಕಲ್ಲಪ್ಪಗ ಅವರು ಶಾವಗಿ ಮಾಡೂದಕ್ಕಿಂತ ವಡ ವಡ ಅಂತ ಮಾತಾಡೂದೇ ದೊಡ್ದ ಕಿರಕಿರಿ ಅನಸತಿತ್ತು. ಮಧ್ಯಾಹ್ನದೊಳಗ ಸ್ವಲ್ಪ ಹೊತ್ತ ಅಡ್ಡಾಗಬೇಕಂದ್ರ ಆಗತಿರಲಿಲ್ಲ. ಹಿಂಗಾಗಿ ಅಂವಾ ಯಾವಾಗ ಇವರ ಶಾವಗಿ ಮಾಡೂದು ಮುಗದಿತ್ತು ಅಂತ ಕಾಯತಿದ್ದ. ಹೆಂಡತಿ ಸಾವಿತ್ರಿಗೆ ‘ಒಣ್ಯಾಗಿನ ಎಲ್ಲಾರ ಜೋಡಿ ಸವಡೀ ಕೂಡಬ್ಯಾಡ ನಮಗ ಎಷ್ಟು ಬೇಕು ಅಷ್ಟು ಮಾಡು ಸಾಕು.’ ಅಂತಿದ್ದ.

ಶಾವಿಗಿ ಮಾಡೂದು ಮುಗದಿಂದ ಮಣಿ ಬೆನ್ನ ಮ್ಯಾಲ ಮೆತ್ತಿರೋ ಹಿಟ್ಟ ಸ್ವಚ್ಚ ಮಾಡೊ ಕೆಲಸ ತಳವಾರ ಸತ್ತೆವ್ವಳದು. ಆಕಿ ಶಾವಿಗಿ ಮಾಡೂದು ಶುರು ಆದಿಂದ ಹಿಡಿದು, ಮುಗಿಯೋಮಟ ಅಲ್ಲೇ ರಾಜಪ್ಪನ ಮನ್ಯಾಗೇ ಟೆಂಟ್ ಹಾಕುವಕ್ಕಿ. ಸತ್ತೆವ್ವ ಕೆಲಸಕ್ಕ ಬಾಳ ಗಟ್ಟೂಳಕ್ಕಿ. ಗಂಡಮಕ್ಕಳಗಿ ನೀಗಲಾರದ್ದನ್ನ ಮಾಡಿ ತೋರಸೂವಕ್ಕಿ. ಆಕಿ ಗಂಡ ತುಳಜಪ್ಪ ಬೆಳಕ ಹರದಿದ್ದೇ ತಡ, ದಾರೂ ಅಂಗಡಿ ಮುಂದ ಕೂಡಂವ. ಸತ್ತೆವ್ವ ಎಟ್ಟು ಹೇಳದರೂ ಕೇಳವನಲ್ಲ. ಅವನಿಗೂ ಬಾಗೇವಾಡಿ ದಾರಿಯೊಳಗ ನಾಕು ಎಕರೆ ಮಡ್ದಿ ಜಮೀನ ಇತ್ತು. ಮಳಿ ಬರೊಬ್ಬರಿ ಆದರ ನಾಕೈದು ಚೀಲ ಕಾಳು ಕಡಿ ಮನಿಗಿ ಬರತಿತ್ತು. ಇಂವಾ ಮಾಡವಲ್ಲ, ಮಟ್ಟವನಲ್ಲ. ಮತ್ತ ಸತ್ತೆವ್ವಳೇ ಬಾಡಿಗಿ ಗೆಳೆ ತಗೊಂಡು ರಾಬ್ ಮಾಡಿ ಉತ್ತಿ, ಬಿತ್ತಬೇಕು.

ಆವತ್ತೊಂದಿನ ಅಲ್ಲಿ ಹೊಲದಾಗ ಜೋಳದ ತೆನಿ ಚಂಡೆ ಆಡಿಸಿ, ಖಣದಾಗ ಸುರುವಿ ಇಂವಾ ಊರಾಗ ಕುಡದು ಪಂಟ ಹೊಡಕೊಂತ ಕುಂತಿದ್ದ. ಸತ್ತೆವ್ವ ರಾತ್ರೋರಾತ್ರಿ ಹೊಲಕ್ಕ ಹೋಗಿ, ಕಣದಾಗ ಮಲಗಿ ತೆನಿ ಕಾಯ್ದಿದ್ದಳು. ಬಾಜೂ ಹೊಲದ ದರೆಪ್ಪನ ಎತ್ತಗೊಳ ಕಡಾ ತಗೊಂಡು ಆ ರಾಶಿನೂ ತುಳಸಿದ್ದಳು. ಅಂಥಾ ಸತ್ತೆವ್ವ ಮೊದಲಿಂದಲೂ ಕಲ್ಲಪ್ಪಗೌಡನ ಮನಿಯೊಳಗ ತಿಕ್ಕೂದು, ತೊಳಿಯೂದು ಇದ್ರ ಆಕಿನೇ ಮಾಡೂವಕ್ಕಿ. ಲಗ್ನ, ಕುಬಸ ಅಂತ ಇದ್ದರ ವಾರಗಟ್ಟಲೆ ಕೆಲಸಾ ಮಾಡಕ್ಕಿ. ಗೌಡ ಆಕಿಗಿ ಎಲ್ಲಾ ಮುಗದಿಂದ ಬಟ್ಟೆ ಆಯೇರಿ ಮಾಡತಿದ್ದ. ಆಕಿ ಗಂಡ ಕುಡದು ಚೀರಾಡಕೋಂತ ಸೀದಾ ಕಲ್ಲಪ್ಪಗೌಡನ ಮನಿಗೇ ಬರತಿದ್ದ. ನಶೆದೊಳಗ ಏನೆನೋ ಮಳ್ಳ ಮಳ್ಳ ಮಾತಾಡಿ, ಅವರಿಗೂ ಕಿರಕಿರಿ ಅನಸತಿದ್ದ. ಅವನ ಕೈ ಹಿಡಕೊಂಡು, ಎಳಕೊಂಡು ಹೋಗಿ ಮನಿ ಮುಟ್ಟಸಿ ಬರತಿದ್ದಳು. ಆಕಿ ಕಲ್ಲಪ್ಪಗೌಡನ ಮನಿ ಮುಟ್ಟೂ ಪುರಸತ್ತಿಲ್ಲದೇ ಅಂವಾ ಆಕಿ ಹಿಂದಿಂದೇ ಬಂದು ಬಿಡತಿದ್ದ.

ಸಾವಿತ್ರಮ್ಮ ಶಾವಗಿ ಮಾಡೂ ದಿನ ಈ ಸತ್ತೆವ್ವ ಪಡಸಾಲೆಯೊಳಗಿನ ಕಸಾ ಹೊಡದು, ಅಲ್ಲಿರೋ ಜೋಳದ ಚೀಲಾನ್ನ ಗೊಲ್ಲಾಳನ್ನ ಕರಕೊಂಡು ಒಂದರ ಮ್ಯಾಲ ಒಂದು ತೇಪೆ ಹಚ್ಚಿ, ಅದರ ಮ್ಯಾಲ ಶಾವಗಿ ಮಣಿ ಇಟ್ಟು, ಮಣಿ ಮ್ಯಾಲ ಹಾಸಗಿ, ದಿಂಬ ಹೇರಿ ಕುತಗೊಳಾಕ ಗಾಂವ್ ಆಗೂವಂಗ ರೆಡಿ ಮಾಡಿಡತಿದ್ದಳು. ಹಂಗ ಮಣಿ ಏರಮ್ಯಾಲ ಆದಷ್ಟು ಶಾವಿಗಿ ಇಳಿಯೂದಿಲ್ಲ ಅಂತ ಹಂಗ ಮಾಡತಿದ್ದರು. ಆ ಸತ್ತೆವ್ವಗ ಬರೀ ಕಸ ಹೊಡಿಯೂದು, ಹಾಸಗಿ ತಗಿಯೂದು, ಕೊಟಗಿ ಬಳಿಯೂದು ಇಂಥದೇ ಹಚ್ಚತಿದ್ದರು. ಆಕಿ ಕೈ ಸ್ವಚ್ಚ ಇಲ್ಲ. ಆಕಿ ನೋಡಾಕ ಒಂಥರಾ ಅದಾಳ ಅಂತ ಇದೇ ರಾಜಪ್ಪ ಆಕಿಗಿ ಶಾವಗಿ ಮಾಡೂಮುಂದ ಸನ್ಯಾಕ ಬರಸಗೊಡತಿರಲಿಲ್ಲ. ಸುಳ್ಳೇ ಆಕಿ ತಲ್ಯಾಗ ಹೇನು ತುಂಬ್ಯಾವಂತ ಕಾಡಸತಿದ್ದರು.

ಹಂಗ ನೋಡದರ ಸತ್ತೆವ್ವ ಅಲ್ಲಿರೋ ಒಣ್ಯಾಗಿನ ಹೆಣ್ಣಮಕ್ಕಳಿಗಿಂತಾ ಬಾಳ ಸ್ವಚ್ಚ ಇದ್ದಳು. ಆದರ ಆಕಿ ತಲಿ ಬಾಚಗೋಳೂದು ಮಾತ್ರ ವಾರಕ್ಕ ಒಮ್ಮೇ ಅನ್ನೂವಂಗ ಇರತಿತ್ತು. ರಾಜಪ್ಪನ ಅವ್ವ ಎಟ್ಟು ಹೇಳದರೂ ಆಕಿ ಕೇಳತಿರಲಿಲ್ಲ. ‘ಯವ್ವಾ, ತಲಿ ಹಿಕ್ಕೊಂಡು ನಾ ಎಲ್ಲಿ ಹೋಗೂದೈತಿ.. ಮನ್ಯಾಗ ಗಂಡ ನೋಡದರ ಅಂಥದು, ಮಕ್ಕಳು ನೋಡದರ ಇಂಥವು’ ಅಂತ ಕಣ್ಣೀರ ಸುರಸತಿದ್ದಳು. ಸತ್ತೆವ್ವಗ ಇದ್ದಿದ್ದೇ ಎರಡು ಗಂಡು ಹುಡುಗರು. ಇಬ್ಬರೂ ಸೋಟತನದೊಳಗ ಹೆಸರು ಮಾಡದವರು. ಒಬ್ಬಂತೂ ಬರೀ ಮಟಕಾ ಆಡವನು. ಬ್ಯಾಡ ಅಂದಿದ್ದಕ್ಕ ಅವರ ಅವ್ವನ್ನೇ ಹೊಡೀಲಿಕ್ಕ ಏರಿ ಬಂದಿದ್ದ. ಇಂಥಾ ಮಕ್ಕಳನ್ನ ಗಂಡನ್ನ ಕಟಗೊಂಡು ಏನು ಮಾಡಬೇಕು ಅನ್ನೂದು ಆಕಿ ಚಿಂತಿ ಆಗಿತ್ತು. ಯಾರು ಏನು ಅಡಸ್ಯಾಡಿದರೂ ಆಕಿಗಿ ಬೇಸರ ಅನಸತಿರಲಿಲ್ಲ. ಒಂದು ವಾರದಮಟ ಆ ಗೌಡನ ಮನ್ಯಾಗ ಕೆಲಸ ಮಾಡಿ, ಓಣ್ಯಾಗಿನ ಎಲ್ಲಾ ಮಂದೀದು ಶಾವಗಿ ಮುಗದ ಮ್ಯಾಲ ಸತ್ತೆವ್ವಗ ಸಾವಿತ್ರಮ್ಮ ಮೂರ್ನಾಲ್ಕು ಹಲಪಿ ಶಾವಗಿ ಕೊಡತಿದ್ದಳು. ಅದರಲ್ಲಿ ಒಂದೇ ಒಂದು ಹಲಪಿನೂ ಆಕಿ ತಿನ್ನವಳಲ್ಲ. ಎಲ್ಲಾ ಯುಗಾದಿ ಹಬ್ಬದೊಳಗ ಮಲ್ಲಯ್ಯಗ ಎಡಿ ಕೊಡಾಕಂತ ಕಾಯ್ದು ತಗದು ಇಡತಿದ್ದಳು.

ಸತ್ತೆವ್ವಗ ಎಲ್ಲಾ ಬರತಿತ್ತು. ಆದರ ಶಾವಗಿ ಹೊಸಿಯಾಕ ಬರತಿರಲಿಲ್ಲ. ಆಕಾಡಿ ರಾಜಪ್ಪನ ಅವ್ವ ಸಾವಿತ್ರಿ ಶಾವಗಿ ಹೊಸಿಯಾಕ ಕುಂತಿದ್ದೇ ಇಕಾಡಿ ಸತ್ತೆವ್ವ ದೇವೂರಾಗ ಕಿರಾಣಿ ಅಂಗಡಿಗಳಿಗೆಲ್ಲಾ ಹೋಗಿ ‘ಕಲ್ಲಪ್ಪಗೌಡರು ಖಾಲಿ ರಟ್ಟಿನ ಡಬ್ಬಿ ಇಲ್ಲಾ ಚಾಪುಡಿ ಖೋಕಾ ಇದ್ದರ ಇಸಗೊಂಡು ಬಾ ಅಂತ ಹೇಳಿ ಕಳಸ್ಯಾರ’ ಅಂತ ಹೇಳಿ ಡಬ್ಬಿ ತಗೊಂಡು ಬರಕ್ಕಿ. ಸಂಜೀ ಮುಂದ ಸಾವಿತ್ರಿ ಹಗೂರಕ ಕೋಲಿನ ಮ್ಯಾಲ ಹಾಕಿರೋ ಶಾವಗಿ ಬಿಡಸಿ ಖೋಕಾದೊಳಗ ಇಲ್ಲಾ ಡಬ್ಬಿಯೊಳಗ ತುಂಬತಿದ್ದಳು. ಸತ್ತೆವ್ವ ಒಂದೇ ಒಂದು ದಿನ ತನಗೂ ಒಂದಷ್ಟು ಶಾವಗಿ ಕೊಡ್ರಿ ಅಂತ ಬಾಯ್ಬಿಟ್ಟು ಕೇಳದಕ್ಕಿ ಅಲ್ಲ. ಎಲ್ಲಾ ಡಬ್ಬಿಗಿ ತುಂಬದ ಮ್ಯಾಲ ಕಡಿಗಿ ತನ್ನ ಪಾಲು ಬಂದೇ ಬರತೈತಿ ಅನ್ನೊ ಭರೋಸಾ ಅವಳಿಗಿ ಇರತಿತ್ತು. ಸತ್ತೆವ್ವಗ ತಾನೂ ಗೋಧಿ ತಂದು, ತೊಳದು, ನೆನಸಿ ಹಿಟ್ಟ ಮಾಡಿ ಶಾವಗಿ ಮಾಡಕೊಬೇಕಂತ ಬಾಳ ಆಸೆ ಇತ್ತು. ಅದರ ಆ ಆಸೆ ಕೈಗೂಡಲಿಲ್ಲ.

ಆ ವರ್ಷ ಸತ್ತೆವ್ವ ಶಾವಗಿ ಮಾಡಾಕಂತ ಅಂಗಳದೊಳಗ ಜೋಳದ ಚೀಲ ತೇಪೆ ಹಚ್ಚಿ ಅದರ ಮ್ಯಾಲ ಶ್ಯಾವಗಿ ಮಣಿ ಇಟ್ಟು ಎಲ್ಲಾ ಸಜ್ಜ ಮಾಡಿದ್ದಳು. ಸಾವಿತ್ರಿ ಮ್ಯಾಲ ಕುಂತು ಶಾವಿಗಿ ಹೊಸೀತಿದ್ದಳು. ಬಿಸಿಲ ಬಾಳ ಜೋರ್ ಇತ್ತು. ಇದ್ದಕ್ಕಿದ್ದಂಗ ಸಾವಿತ್ರಿಗಿ ತಲಿ ಸುತ್ತದಂಗಾಗಿ ಅಲ್ಲಿಂದೇ ಕೆಳಗ ಬಿದ್ದಳು. ಪಕ್ಕದೊಳಗ ಬೀಸೋಕಲ್ಲಿತ್ತು, ಅದರ ಅಂಚು ತಲಿಗಿ ಜೋರಾಗಿ ಬಡದು ಮುಂದ ವರ್ಷದೊಳಗ ಅದೇ ನೆಪದೊಳಗ ಆಕಿ ತೀರಿಕೊಂಡದ್ದು ನೆನಪಾಗಿ, ಕೋಲಿಯೊಳಗ ಮಲಿಗಿರೋ ರಾಜಪ್ಪ ದೊಡ್ದದಾದ ನಿಟ್ಟುಸಿರು ಬಿಟ್ಟ. ಹೆಂಡತಿ ಚಂದ್ರಿಕಾ ‘ಅದೇನು ಹಂಗ ಯೋಚ್ನೆ ಮಾಡಾಕತ್ತೀರಿ..?’ ‘ಅಲ್ಲಿ ಕಾಣತೈತಿಲ್ಲೋ.. ಕೆಳಗ, ಅದೇ ಶಾವಿಗಿ ಮಣಿ, ನಮ್ಮ ಅವ್ವನ್ನ ನುಂಗಿದ್ದು.’ ಅಂತ ಹೆಂಡತಿ ಮುಂದ ಆ ಕತಿ ಹೇಳದ. ಹೆಂಡತಿ ಸುಮ್ಮ ಕುತೂಹಲಕ್ಕ ‘ಆ ಸತ್ತೆವ್ವಳ ಕತಿ ಏನಾಯ್ತು..?’ ಅಂತ ಕೇಳದಳು.

‘ಆಗೋದೇನು, ಎಲ್ಲಾ ಆಕಿದೇ ತಪ್ಪು ಅನ್ನೂವಂಗ ಓಣ್ಯಾಗಿನ ಮಂದಿ ಮಾತಾಡಿದ್ದೇ ಆಕಿ ಆವತ್ತಿನಿಂದ ಇಲ್ಲೀಮಟ ನಮ್ಮ ಮನಿ ಕಡಿ ಹೈದಿದ್ದಿಲ್ಲ.’

‘ ಆಕಿ ಇನ್ನೂ ಜೀವಂತ ಅದಾಳಾ..?’

‘ ಅದಾಳ. ಪಾಪ ವಯಸ್ಸಾಗೈತಿ..’ ಅಂತ ಮಗ್ಗಲು ಹೊರಳಿಸಿದ. ಸತ್ತೆವ್ವಳ ಬಗ್ಗೆ ಯೋಚನೆ ಮಾಡತಾ ಉಳದ.

ಸಾವಿತ್ರಿ ತೀರಿಕೊಂಡ ಮ್ಯಾಲ ಸತ್ತೆವ್ವ ಹುಚ್ಚಿ ಆದಂಗ ಆಗಿದ್ದಳು. ವರ್ಷ, ಎರಡು ವರ್ಷ ಎಲ್ಲೂ ಹೊರಗ ಕಾಣಿಸಿಕೊಂಡಿರಲಿಲ್ಲ. ತಾ ದರಾಸಾರತಿ ಶಾವಿಗಿ ಮಾಡೂಮುಂದ ಅದು ಹ್ಯಾಂಗ ಮಣಿ ಇಡತಿದ್ದೆ ಆ ವರ್ಷನೂ ಹಂಗೇ ಇಟ್ಟಿದ್ದೆ. ಅದ್ಯಾಂಗ ಅವ್ವೋರು ಬಿದ್ದರೋ ಏನೋ.. ಅಂತ ಗೇನಸಕೊಂತ ಕೂಡತಿದ್ದಳು. ಕೆ.ಇ.ಬಿ.ಯೊಳಗ ಕೆಲಸಾ ಮಾಡೊ ಆಕಿ ಮಗಾ ಒಬ್ಬ ಶಾಕ್ ಹೊಡದು ಸತ್ತ ಮ್ಯಾಲಂತೂ ಆಕಿ ಇನ್ನಷ್ಟು ಮೆತ್ತಗ ಆಗಿದ್ದಳು. ಮಲ್ಲಯ್ಯಗ ಯುಗಾದಿ ಮುಂದ ಶಾವಗಿ ಎಡಿ ಕೊಡಲಾರದೇ ಹತ್ತು ವರ್ಷ ಆಗಿತ್ತು. ಅದಕ್ಕೇ ತನ್ನ ಮಗನ್ನ ಕಿತ್ಗೊಂಡ ಅಂತ ಮನಿಸಿನೊಳಗ ಕಟಿಯಾಕತ್ತತು. ಸತ್ತೆವ್ವಳ ಕಣ್ಣ ಮಂಜ ಆಗಿದ್ವು. ಯಾರರೇ ಸತ್ತೆವ್ವಜ್ಜಿ ಅಂತ ಕರದರ ಸಾಕು, ‘ಯಾರ್ರೀ ಯಪ್ಪಾ’ ಅಂತ ಹಣಿಗಿ ಕೈ ಹಿಡಕೊಂಡು ನೋಡತಿದ್ದಳು.

ಆಕಿ ದೇವರಿಗಿ ಯುಗಾದಿ ಮುಂದ ಎಡಿ ಕೊಡೂದು ಬಿಡ್ತಿರಲಿಲ್ಲ. ಆಕಿ ಬಿಡೂದಕ್ಕೂ ಕಾರಣ ಐತಿ. ಆಕಿ ಶಾವಗಿ ಬಸದು ಅದರ ಮ್ಯಾಲ ಬೆಲ್ಲದ ಕಣ್ಣಿ ಇಟಗೊಂಡು ಮಲ್ಲಯ್ಯನ ಗುಡಿಗಿ ಬಂದರ, ಅಲ್ಲಿರೋ ಪೂಜಾರಿ ಚಂಡ್ರಯ್ಯ ಆಕಿ ಶಾವಗಿನ್ನ ತಗೋತಿರಲಿಲ್ಲ. ಊರ ಹೊರಗಿರೋ ಲಕ್ಕಮ್ಮನ ಗುಡಿ ಪೂಜಾರಿ ದ್ಯಾಮಪ್ಪಗ ಕೊಡು ಅಂತ ಹೇಳಿ ಕಳಸತಿದ್ದ. ಆಕಿ ಅಟ್ಟೆಲ್ಲಾ ಕಟಿಬಿಟಿ ಮಾಡಿ ಶಾವಗಿ ಎಡಿ ತಂದರ ಅಲ್ಲಿ ತನ್ನ ಜಾತಿ ಮುಂದ ಮಾಡಿ, ಅದನ್ನ ತಗೊಂಡು ಲಕ್ಕಮ್ಮನ ಗುಡಿಗಿ ಒಯ್ದು ಕೊಡು ಅನ್ನೂದು ಸತ್ತೆವ್ವಗ ಬಾಳ ಚುಚ್ಚದಂಗ ಆಗತಿತ್ತು. ದೇವರು ಅನ್ನವನು ಹಿಂಗ ಮನುಷರೊಳಗೇ ತಾರತಮ್ಯ ಮಾಡಬಾರದು. ಇಂಥಾ ದೇವರನ್ನ ಪೂಜೆ ಮಾಡೂದಕ್ಕಿಂತಲೂ ಮಾಡದೇ ಇರೋದು ಚುಲೊ ಅಂತ ಹೇಳಿ ಆ ತೀರ್ಮಾನಕ್ಕ ಬಂದಿದ್ದಳು. ಆದರ ಮುಪ್ಪಿನ ಕಾಲಕ್ಕ ಮತ್ತ ಮಲ್ಲಯ್ಯನ ಸೇವಾ ಮಾಡಬೇಕು, ಅವನಿಗಿ ಎಡಿ ಕೊಡಬೇಕು ಅಂತ ಆಕಿಗಿ ಅನಿಸಿತ್ತು. ತನಗ ನೋಡದರ ಶಾವಗಿ ಮಾಡಾಕ ಬರೂದಿಲ್ಲ. ಹ್ಯಾಂಗ ಮಾಡೂದು ಅಂತ ತಿಂಗಳಾನುಗಟ್ಟಲೆ ಯೋಚನೆ ಮಾಡಿ, ಹ್ಯಾಂಗ ಆದಂಗ ಐತು ಶಾವಗಿ ಮಾಡೂದೇ ಅಂತ ನಿರ್ಧಾರ ಮಾಡಿದ್ದಳು.

ಆವತ್ತ ಐತವಾರ. ಸಂತಿಯೊಳಗ ಅಳಗಾಡ್ಕೊಂತ ತಿರುಗಾಡಿ, ಗೋಧಿ ತಂದಳು, ಅದನ್ನ ನೀರ ಹಚ್ಚಿ ಬೀಸದಳು. ಓಣ್ಯಾಗ ಆಕಿ ಹಂಗ ಬೀಸೂದು ನೋಡಿ, ‘ಮುದುಕಿ ಇನ್ನೂ ಬಾಳ ಗಟ್ಟಿ ಐತಿ’ ಅಂತಿದ್ದರು. ಕಣ್ಣ ಸರಿ ಮಾಡಿ ಕಾಣ್ತಿರಲಿಲ್ಲ. ಹಿಂಗಾಗಿ ಹಿಟ್ಟ ಯಾಕೋ ಕರ್ರಗ ಆದಂಗ ಆಯ್ತು. ದೇವರಿಗಿ ಎಡಿ ಅಂತ ಮಾಡೂಮುಂದ ಹೆಸರ ಇಡೂದು ಪಾಡಲ್ಲಂತ ಹೇಳಿ, ಮನಿಯೊಳಗಿರೋ ಊಟಕ್ಕ ಕೂಡೊ ಮಣಿ ನಿಲ್ಲಸಿ, ಅದರ ಮ್ಯಾಲೇ ಶಾವಗಿ ಹೊಸಿಯಾಕತ್ತಳು. ಅದನ್ನ ಕೋಲ ಮ್ಯಾಲ ಹಾಕಲಾರದೇ ಒಂದು ರೊಟ್ಟೀ ಬುಟ್ಟಿ ಮ್ಯಾಲ ಅಡಾಲಕ ಹಾಕದಳು. ಒಣಗಿದ ಮ್ಯಾಲ ಅದನ್ನ ಕುದಿಸಿ, ಯುಗಾದಿ ಹಬ್ಬದ ದಿವಸ ಮಲ್ಲಯ್ಯಗ ಎಡಿ ತಗೊಂಡು ನಡದಳು. ಶಾವಿಗಿ ಕಪ್ಪಾಗಿತ್ತು. ಆವಾಗ ಸಾವಿತ್ರವ್ವ ಮಾಡಿದ ಶಾವಿಗಿನೇ ಈ ಗುಡಿ ಪೂಜಾರಿಗೋಳು ನಾ ತಂದೀನಿ ಅನ್ನೂ ಕಾರಣಕ್ಕ ತಗೋತಿರಲಿಲ್ಲ. ಇನ್ನ ಇದು ನಾನೇ ಖುದ್ದಾಗಿ ಮಾಡಿದ್ದು ಎಲ್ಲಿ ತಗೋತಾರ..? ಸುಮ್ಮ ದೂರದಿಂದ ಮಲ್ಲಯ್ಯನ ಕಡಿ ಕೈ ಮಾಡಿ ಎಡಿ ಹಿಡದು ಬಂದು ಬಿಡೂದು ಅಂತ ಆಕಿ ಲೆಕ್ಕಾ ಹಾಕಿದ್ದಳು. ಆ ವರ್ಷ ಗುಡಿ ಮುಂದ ದರಾಸಾರಿಗಿಂತಲೂ ಗದ್ದಲಿತ್ತು. ಗುಡಿ ಒಳಗ ಹೋಗೂದು ವಜ್ಜಿ ಇತ್ತು.

ಸುಮ್ಮ ಅಲ್ಲೇ ದೂರ ನಿಂತು ಮಲ್ಲಯ್ಯನ ಗುಡಿ ಕಡಿ ಮುಖ ಮಾಡಿ, ಎಡಿ ಹಿಡದು ಹೊಳ್ಳಿ ಬಿಡೂದು ಅಂತ ಯೋಚನೆ ಮಾಡಿ, ಶಾವಗಿ ತಾಟ ಕೈಗಿ ತಗೊಂಡು ಗುಡಿ ಬಾಗಿಲದೊಳಗ ನಿಂತು, ಎಡೀ ಹಿಡಿಯೂ ವ್ಯಾಳೆದೋಳಗ ಗುಡಿ ಒಳಗಿಂದ ‘ದೇವರು ಬಂತು.. ದೇವರು ಬಂತು.. ಬಾಜೂ ಸರ್ಕೋರಿ’ ಅಂತ ಜನ ದೆವ್ವ ಓಡಕೋಂತ ಬಂದಗ ಬಂದರು. ಸತ್ತೆವ್ವ ಬಾಜೂ ಸರದು ನಿಲ್ಲಬೇಕು ಅನ್ನೂದರೊಳಗ ಆ ಓಡಿಬರವರ ತ್ರಾಣದ ಎದುರು ಆಕಿ ತಾಳಲಾರದೇ, ಜೋಲಿ ಹೋಗಿ ಅಂಗಾತ ಬಿದ್ದಬಿಟ್ಟಳು. ಸಾವಿರ ಹೆಜ್ಜೀ ತುಳಿತಕ್ಕ ಸತ್ತೆವ್ವ ಮತ್ತ ಮ್ಯಾಲ ಏಳಲೇ ಇಲ್ಲ. ಆಕಿ ಕೈಯೊಳಗಿನ ಶಾವಿಗಿ ತಾಟ, ಓಡಿ ಬರೋ ಜನರ ಕೈಗಿ ಬಡದು ಹಾರಿ ಸೀದಾ ಹೋಗಿ ಗರ್ಭಗುಡಿ ಒಳಗಿರೋ ಮಲ್ಲಯ್ಯನ ತಲಿ ಮ್ಯಾಲ ಬಿದ್ದಕೊಂಡಿತ್ತು. ಜನರು ‘ದೇವರು ಬಂತು ಸರೀರಿ.. ದೇವರು ಬಂತು ಸರೀರಿ…’ ಅಂತ ಒಂದು ಸವನ ಅಡ್ರಾಸಿ ಓಡತಿದ್ದರು.

ಯುಗಾದಿ ಹಬ್ಬದ ದಿವಸ, ಗುಡಿ ಪೂಜಾರಿ ಚಂಡ್ರಯ್ಯನ ಮೈಯಾಗ ದೇವರು ಬಂದಿತ್ತು. ಆ ಚಂಡ್ರಯ್ಯ, ಸತ್ತೆವ್ವನ ಕೈಯಾಗಿನ ಎಡಿ ತಾಟ ಗರ್ಭಗುಡಿಯೊಳಗ ಜಿಗದಿದ್ದು ಅದೆಂಗೋ ನೋಡಿದ್ದ. ಬೇವಿನ ಗಿಡದ ಬಾಜೂ ಇರೋ ಮಾಲಗಂಬದ ಕೆಳಗ ನಿಂತ್ಕೊಂಡು ಚಂಡ್ರಯ್ಯ ‘ಆ ಹಾ.. ಹಾ…ನನಗ ಮೈಲಿಗಿ ಮಾಡ್ತೀರಿ… ಈ ಸಾರಿ ಮಳಿ ಬೆಳಿ ಕಾಣೂವಂತ್ರಿ.. ಯಾರು ಬೇಕು ಅವರು ಗರ್ಭ ಗುಡಿಯೊಳಗ ಬರ್ತೀರಿ.. ನನಗ ಅದು ಆಗೂದಿಲ್ಲ. ನಾ ಮುರ್ಚಟ್ ಆಗೀನಿ.. ಮುರ್ಚಟ್ ಆಗೀನಿ.. ಹಾ..ಹಾ..ಹಾ..’ ಅಂತ ಚಂಡ್ರಯ್ಯನ ಮೈಯೊಳಗಿನ ದೇವರು ಒಂದೇ ಸವನೇ ಉಲೀತಿತ್ತು.. ತಲಿ ಅಲ್ಲಾಡಸತಿತ್ತು… ‘ದೇವರು ಬಂತು ಸರೀರಿ..ದೇವರು ಬಂತು ಸರೀರಿ’ ಅಂತ ಮತ್ತ ಜನರು ಗುಡಿಯೊಳಗ ಓಡದರು. ತುಸು ಹೊತ್ತಿನ ಮ್ಯಾಲ ಚಂಡ್ರಯ್ಯ ಶಾಂತ ಆಗಿದ್ದ. ಜನರು ಗಾಳೀ ಹಾಕತಿದ್ದರು. ‘ಸತ್ತೆವ್ವಳ ಸಾವು ಬಾಳ ಚಲೋ ಸಾವು’ ಅನ್ನೋ ಮಾತು ದೇವೂರೊಳಗ ಕೇಳಿಬಂದಿತ್ತು…

‍ಲೇಖಕರು avadhi

1 May, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading