ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಣ್ಣ ಕಥೆ ’ಸಾವು’

ಸಾವು

– ಎಚ್ ಕೆ ಶರತ್

ಏಕಾಂತವನ್ನು ಆತು ಕೂರುವುದರಲ್ಲಿ ತನ್ನ ಪಾಲಿನ ಬಹುದೊಡ್ಡ ಸಂಭ್ರಮವಿದೆ ಎಂದು ಭಾವಿಸಿದ್ದ ಜೀವ, ತಾನು ಪ್ರೀತಿಸಿ ಮದುವೆಯಾದ ಕನಸಿನ ಗರ್ಭದೊಳಗೆ ಕಣ್ಮುಚ್ಚಿ ಕುಳಿತಿರುವ ಕಂದಮ್ಮನನ್ನು ಮೊದಲ ಬಾರಿಗೆ ಕಣ್ತುಂಬಿಕೊಳ್ಳುವ ಆ ಕ್ಷಣಕ್ಕಾಗಿ ಕಾತರಿಸುತ್ತಿದ್ದ.
ಕನಸು ರೂಮಿನಲ್ಲಿ ಮಲಗಿದ್ದಳು. ಜೀವ ಜಮಾನದಲ್ಲೇ ತಂದಿಟ್ಟಿದ್ದ ವಿಸ್ಕಿಯ ಬಾಟಲನ್ನು ತಂದು ಮುಂದಿಟ್ಟುಕೊಂಡ. ಗಾಜಿನ ಲೋಟಕ್ಕೆ ಕೊಂಚ ವಿಸ್ಕಿ ಸುರಿದುಕೊಂಡು ಅದಕ್ಕೆ ಸೋಡಾ ಬೆರೆಸಿದ.
ಇತ್ತೀಚೆಗೆ ಅವನು ಕುಡಿದಿರಲಿಲ್ಲ. ಕುಡಿಯಬೇಕೆಂದು ಅವನಿಗೂ ಅನಿಸಿರಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ತಾನು ಕುಡಿದರೆ ಕನಸು ತನ್ನೊಂದಿಗೆ ಒಂದೆರಡು ದಿನ ಮಾತು ಬಿಡುತ್ತಾಳೆ ಎಂಬುದು ಖಾತರಿಯಾದ ಮೇಲೆ ಅವನು ಕುಡಿಯುವುದನ್ನು ಕಡಿಮೆ ಮಾಡಿದ್ದ.
ಇಂದು ಅವನನ್ನು ಅರಿವಿಗೆ ನಿಲುಕದ ಸಂಕಟವೊಂದು ಆವರಿಸಿತ್ತು. ಬೆಂಗಳೂರು ತೊರೆದು ಬಂದ ಮೇಲೆ ಅವನ ಜಗತ್ತು ಕಿರಿದಾಗಿತ್ತು. ಐದಂಕಿಯ ಸಂಬಳ ಬರುವ ಕೆಲಸಕ್ಕೆ ರಾಜೀನಾಮೆ ನೀಡಿ, ಅವನು ಕಾಡನೂರು ಸಮೀಪದ ಎಸ್ಟೇಟಿನಲ್ಲಿ ಕನಸಿನೊಂದಿಗೆ ಹೊಸ ಬದುಕು ಕಟ್ಟಿಕೊಳ್ಳಲು ಒಂದೂವರೆ ವರ್ಷದ ಹಿಂದೆ ಇಲ್ಲಿಗೆ ಬಂದಿದ್ದ. ಅಂದಿನಿಂದ ಅವನ ಬದುಕಿಗೆ ಎಲ್ಲವೂ ಕನಸೇ ಆಗಿದ್ದಳು. ಇದೀಗ ಜೀವ ಮತ್ತು ಕನಸಿನ ಪ್ರೇಮ-ಕಾಮದ ಫಲವಾಗಿ ಹೊಸತೊಂದು ಜೀವ ಅವರ ಬದುಕಿಗೆ ಪ್ರವೇಶಿಸುವ ದಿನ ಸಮೀಪಿಸುತ್ತಿತ್ತು.
ತಾನು ಕನಸಿಗೆ ಪ್ರಪೋಸ್ ಮಾಡಿದ ದಿನವನ್ನು ಜೀವ ನೆನೆದ. ಕಣ್ಣಂಚು ತೇವಗೊಂಡದ್ದು ಅರಿವಾಗಿ ಜೇಬಿನಲ್ಲಿದ್ದ ಕಚರ್ಿಫಿಗೆ ಕೈ ಹಾಕಿದ. ಕನಸು… ತನ್ನ ಬದುಕಿನ ದಿಕ್ಕು ಬದಲಿಸಿದವಳು. ಅಹಂಗೆ ಕೊಡಲಿ ಪೆಟ್ಟು ಕೊಟ್ಟವಳು. ಪದೇ ಪದೇ ಮುನಿಸಿಕೊಂಡು ಮುನಿಸೇ ಪ್ರೀತಿಯೋ ಎಂಬ ದ್ವಂದ್ವ ಹುಟ್ಟಲೂ ಕಾರಣವಾದವಳು. ಜಾತಿ, ವಯಸ್ಸು, ಅಂತಸ್ತು ಎಲ್ಲವನ್ನೂ ಮೀರಿ ತನ್ನೊಳಗಿಳಿದವಳು. ನಿನಗೋಸ್ಕರ ಏನು ಬೇಕಾದರೂ ಮಾಡ್ತೀನಿ. ನೀನು ನನ್ನ ಮದುವೆಯಾಗದಿದ್ದರೂ ಪರವಾಗಿಲ್ಲ. ನೀನು ಖುಷಿಯಾಗಿ ನಗ್ನಗ್ತಾ ಇರ್ಬೇಕು. ನಾನು ಅದನ್ನು ಕಣ್ತುಂಬಿಕೊಳ್ಬೇಕು ಅಂತ ತುಂಬಾ ಭಾವುಕಳಾಗಿ ಮಾತಾಡುತ್ತಲೇ ತನ್ನೊಳಗಿನ ತಾಯ್ತನವನ್ನು ತೆರೆದಿಟ್ಟವಳು.
ಅಪ್ಪ ಅರಚಾಡಿದ. ಅಮ್ಮ ಬಿಕ್ಕಿ ಬಿಕ್ಕಿ ಅತ್ತಳು. ಮೊದಲಿನಿಂದಲೂ ನನ್ನ ಬಗ್ಗೆ ಅಸಹನೆ ಹೊಂದಿದ್ದ ತಮ್ಮ, ನಾನು ಮಾಡಬಾರದ್ದೇನನ್ನೋ ಮಾಡಿದ್ದೀನಿ ಎಂಬಂತೆ ಹೀಯಾಳಿಸಿ ಮಾತಾಡಿದ. ನಮ್ಮಿಬ್ಬರ ಮದುವೆಗೆ ಯಾರೂ ಒಪ್ಪಲಿಲ್ಲ. ಕೊನೆಗೆ ಕನಸು ಕೂಡ ಹಟ ಹಿಡಿದಿದ್ದಳು. ನಿಮ್ಮನೆಯವ್ರು ಒಪ್ದೆ ಇದ್ರೆ ನಾವು ಮದ್ವೆ ಆಗೋದು ಬೇಡ. ನೀನು ಅವ್ರು ತೋರ್ಸೋ ಒಳ್ಳೆ ಹುಡ್ಗಿನಾ ಮದ್ವೆಯಾಗು. ನನ್ನಂಥವಳು ನಿಂಗೆ ಬೇಡ ಅಂದಿದ್ದಳು.
ನಾನು ನಿನ್ನಂಥವಳೆ ನಂಗೆ ಇಷ್ಟ ಆಗೋದು ಅಂದ ಕೂಡಲೇ ಕೆನ್ನೆ ಮೇಲೆ ಪಟೀರನೆ ಬಾರಿಸಿದಳು. ನನ್ನ ಕಣ್ಣಿಂದ ನೀರು ಜಿನುಗಲಾರಂಭಿಸಿದ ಕೂಡಲೇ, ನೋವಾಯ್ತೇನೊ ಚಿನ್ನು ಅಂತ ಕೆನ್ನೆ ಮೇಲೆ ಮೆಲ್ಲನೆ ಕೈ ಆಡಿಸಿದಳು. ನಾನು ಅವಳನ್ನು ಬಿಗಿದಪ್ಪಿಕೊಂಡು ಜೋರಾಗಿ ಅತ್ತೆ. ಅವಳೂ ಅತ್ತು ಹಗುರಾದಳು.

ನಾವಿಬ್ಬರೂ ದೈಹಿಕ ಹಾಗು ಮಾನಸಿಕವಾಗಿ ಒಬ್ಬರಿಗೊಬ್ಬರು ಸಮರ್ಪಿಸಿಕೊಂಡಿದ್ದೆವು. ನಮ್ಮಿಬ್ಬರ ನಡುವೆ ಎಲ್ಲವೂ ತೆರೆದ ಪುಸ್ತಕದಂತಿತ್ತು. ಅವಳ ದೇಹದ ಪ್ರತಿ ಇಂಚಿಂಚಿನ ಪರಿಚಯವೂ ನನಗೆ ಅದಾಗಲೇ ಆಗಿತ್ತು. ಅವಳಿಗೆ ತನ್ನ ಮನದ ಮೇಲಾಗಿರುವ ಮಾಯದ ಗಾಯಗಳಿಗೆ ನಾನು ಮುಲಾಮಾಗಬಲ್ಲೆ ಎಂಬ ಭರವಸೆ ಇತ್ತಾದರೂ, ನಮ್ಮ ಮನೆಯವರಿಂದ ನಾನು ದೂರವಾಗುವುದು ಅವಳಿಗಿಷ್ಟವಿರಲಿಲ್ಲ. ಆದರೂ ನಾನು ಹಿಡಿದ ಪಟ್ಟು ಸಡಿಲಿಸಲೇ ಇಲ್ಲ. ಬೆಂಗಳೂರಿನಲ್ಲಿ ನಾಲ್ಕಾರು ಗೆಳೆಯರ ಸಮ್ಮುಖದಲ್ಲಿ ಕನಸನ್ನು ವರಿಸಿದೆ. ಅಂದು ಅವಳ ಕಣ್ಗಳಲ್ಲಿ ಕುದಿಯುವ ಕನಸಿತ್ತು. ಭೋರ್ಗರೆಯುವ ನೋವಿನ ಇರುವಿತ್ತು. ಎಲ್ಲವನ್ನೂ ಬಚ್ಚಿಟ್ಟುಕೊಂಡು ನಗಲು ಯತ್ನಿಸುತ್ತಿದ್ದಳಾದರೂ ಅವಳಿಗೆ ನಗಲಾಗುತ್ತಿರಲಿಲ್ಲ. ಮದುವೆಯಾದ ಮೇಲೂ ಕನಸು ಬದಲಾಗಲಿಲ್ಲ. ನಿಂಗೆ ಯಾವ ಮಗು ಬೇಕೆ ಅಂದಾಗಲೆಲ್ಲ, ನೀನೆ ಸಾಕು ಕಣೊ ಅನ್ನುತ್ತಿದ್ದಳು. ನನ್ನೊಳಗೆ ಮುಗ್ಧತೆ ಇನ್ನೂ ಪೂರ್ಣವಾಗಿ ಮಡಿದಿಲ್ಲವೆಂದು ಯಾರಾದರೂ ಅಂದರೆ ಒಳಗೊಳಗೆ ಸಂಭ್ರಮಿಸುತ್ತಿದ್ದ ನನಗೆ, ಅವಳು ನನ್ನನ್ನು ಮಗುವೆಂದೇ ಮುದ್ದಿಸುತ್ತಿದ್ದದ್ದು ಅಪರಿಮಿತ ಆನಂದವನ್ನು ಕರುಣಿಸುತ್ತಿತ್ತು.
ಜೀವ ನೆನಪಿನ ಪುಟಗಳನ್ನು ಪ್ರಯತ್ನಪೂರ್ವಕವಾಗಿ ತಿರುವಿ ಹಾಕಿದ. ಕನಸು ತನಗೆ ಒಲಿದದ್ದು ನೆನೆದಾಗಲೆಲ್ಲ ಅವನಿಗೆ ತನ್ನ ಬಗ್ಗೆಯೇ ಅಭಿಮಾನ ಮೂಡುತ್ತಿತ್ತು.

ವಿಸ್ಕಿ ತನ್ನ ದೇಹಕ್ಕೆ ಯಾಕೊ ಒಗ್ಗುತ್ತಿಲ್ಲವೆಂಬ ಸಂಗತಿ ಅವನಿಗೆ ಅರಿವಾಗತೊಡಗಿತು. ಬಾಟಲಿಯ ಬಿರಟೆ ಹಾಕಿ, ಡೈನಿಂಗ್ ಹಾಲ್ಗೆ ಹೋಗಿ ಫ್ರಿಜ್ನಲ್ಲಿದ್ದ ಬಿಯರ್ ಬಾಟಲ್ಗೆ ಕೈ ಹಾಕಿದ. ಓಪನರ್ ಕೈಗೆತ್ತಿಕೊಂಡು ಕ್ಯಾಪ್ ಬಿಚ್ಚಿದ. ನೊರೆಯಾಗಿ ಉಕ್ಕಲಾರಂಭಿಸಿದ ಬಿಯರು ಬಾಟಲಿಯಿಂದ ಹೊರಗೆ ಬರುವ ಮುನ್ನವೇ ತನ್ನ ಬಾಯಿಗಿಟ್ಟುಕೊಂಡ. ಆರಂಭದಲ್ಲಿ ಕೊಂಚ ವಗರಾದರೂ ಆಮೇಲಾಮೇಲೆ ಸರಾಗವಾಗಿ ಕುಡಿಯಲಾರಂಭಿಸಿದ.
ಬೆಂಗಳೂರಿನಲ್ಲಿದ್ದಾಗ ಗುಂಡು ಪಾರ್ಟಿ ಮಾಡುವ ಸಲುವಾಗಿ ತಾನು ಹಾಗು ತನ್ನ ನಾಲ್ಕಾರು ಸ್ನೇಹಿತರು ನೆಪಕ್ಕಾಗಿ ತಡಕಾಡುತ್ತಿದ್ದದ್ದು ಅವನಿಗೆ ನೆನಪಾಗಿ ನಗು ಬಂತು.
ಯಾವುದೇ ಕಾರಣಕ್ಕೂ ಕುಡಿಯಲೇಬಾರದೆಂದು ತೀರ್ಮಾನಿಸಿದ್ದ ತನ್ನನ್ನು ಕುಡಿತದ ಪರಿಧಿಯೊಳಗೆ ಎಳೆದು ತಂದ ಆತ್ಮೀಯ ಗೆಳೆಯ ಬಿಎಚ್ಚು ನೆನಪಾದ.
ಮಂಗಳೂರಿನ ಹಾಸ್ಟೆಲ್ನಲ್ಲಿದ್ದಾಗ ಕುಡಿಯುವುದನ್ನು ಕಲಿತ ಅವನಿಗೆ ಹಾಸನಕ್ಕೆ ಬಂದಾಗ ಕುಡಿಯಲು ಜೊತೆಗೊಬ್ಬ ಬೇಕಿತ್ತು. ಅದಕ್ಕೆ ನನಗೆ ಬಿಯರು ಕುಡಿಯೋದನ್ನ ಕಲಿಸಿದ ಬಡ್ಡಿ ಮಗ. ಕುಡಿಯೋದನ್ನು ಕಲಿಸಿ, ನಂದೊಂದು ಸಿನ್ಸಿಯರ್ ಅಡ್ವೈಸ್ ಏನಂದ್ರೆ ನೀನು ಜೀವನ್ದಲ್ಲಿ ಯಾವತ್ತೂ ಹಾಟ್ ಮುಟ್ಬೇಡ ಗುರು ಅಂತ ಬೇರೆ ಒತ್ತಿ ಹೇಳುತ್ತಿದ್ದುದು ನೆನಪಾಗಿ ಜೀವನ ಮುಖದ ಮೇಲೆ ಮುಗುಳ್ನಗೆ ಮನೆ ಮಾಡಿತು.
ಎಂಬಿಎ ಓದುವಾಗಲೇ ಕುಡಿಯುವುದು ರೂಢಿಯಾಗಿದ್ದರೂ ಜೀವನ ಪಾಲಿಗೆ ಅದೊಂದು ಚಟವಾಗಿರಲಿಲ್ಲ. ಬಿಎಚ್ಚು ಅಥವಾ ಫ್ರೆಂಡ್ಸು ಅಪರೂಪಕ್ಕೆ ಸಿಕ್ಕಾಗ ಅವರೊಂದಿಗೆ ಕುಡಿಯುತ್ತಿದ್ದನೆ ವಿನಾ ಒಬ್ಬನೇ ಕುಡಿಯುತ್ತಿದ್ದದ್ದು ಇಲ್ಲವೇ ಇಲ್ಲವೆನ್ನುವಷ್ಟು ವಿರಳ.
ಸ್ವಭಾವತಃ ಹೆಚ್ಚು ಮಾತನಾಡದ ಜೀವ, ಕುಡಿದಾಗ ಕೊಂಚ ಹೆಚ್ಚು ಮಾತಾಡುತ್ತಿದ್ದ. ತಾನು ಓದಿದ ಪುಸ್ತಕಗಳ ಕಥೆ ಹೇಳುತ್ತಿದ್ದ. ಅವನ ಕಥೆ ಕೇಳಲು ಒಂದಿಬ್ಬರು ಖಾಯಂ ಗಿರಾಕಿಗಳಿದ್ದರು.

ಬಿಯರು ಬಾಟಲು ಖಾಲಿಯಾದ ಮೇಲೆ ಮತ್ತೊಂದು ತರಲು ಡೈನಿಂಗ್ ಹಾಲ್ನತ್ತ ಹೆಜ್ಜೆ ಹಾಕಿದ ಜೀವ, ಹಾಗೆ ರೂಮಿನತ್ತ ಕಣ್ಣಾಡಿಸಿ ಕನಸು ಎಚ್ಚರವಾಗಿದ್ದಾಳ ಇಲ್ಲವಾ ಎಂದು ಖಾತರಿ ಪಡಿಸಿಕೊಂಡ.
ಅವನೊಳಗೆ ಅಸಹನೀಯ ಭಾವವೊಂದು ಮಿಸುಕಾಡುತ್ತಿತ್ತು. ಕನಸಿನ ಕಣ್ತಪ್ಪಿಸಿ ಕುಡಿಯುತ್ತಿರುವುದು ತಪ್ಪೇನೊ ಅನಿಸಲಾರಂಭಿಸಿತು. ಕುಡಿಯಲ್ಲ ಅಂತ ಮಾತು ಕೊಟ್ಟ ಮೇಲೂ ಕುಡಿದಿರುವುದು ಅವಳಿಗೆ ಗೊತ್ತಾದರೆ ತುಂಬಾ ನೊಂದುಕೊಳ್ಳುತ್ತಾಳೆ. ಇವತ್ತು ರಾತ್ರಿ ಹಾಲ್ನಲ್ಲೇ ಮಲಗಿಕೊಂಡರೆ ಒಳಿತು. ಅವಳ ಪಕ್ಕ ಮಲಗಿದರೆ ವಾಸನೆಯಿಂದಲೇ ಕಂಡುಹಿಡಿದು ಬಿಡುತ್ತಾಳೆ ಅಂದುಕೊಂಡ.
ಹಾಲ್ನಲ್ಲಿದ್ದ ಸೋಫಾದ ಮೇಲೆ ಮೈ ಚಾಚಿದನಾದರೂ ಎಷ್ಟೊತ್ತಾದರೂ ನಿದ್ದೆ ಹತ್ತಲಿಲ್ಲ. ಅರ್ಧ ಮುಕ್ಕಾಲು ಗಂಟೆ ಅಲ್ಲೇ ಹೊರಳಾಡಿದ ಅವನು, ಹೇಗಿದ್ದರೂ ಕನಸು ಮಲಗಿದ್ದಾಳೆ. ಅವಳ ಮೂಗಿಗೆ ವಾಸನೆ ಅಡರದಷ್ಟು ದೂರದಲ್ಲಿ ಹೋಗಿ ಮಲಗಿದರೆ ಸಮಸ್ಯೆಯೇನು ಆಗುವುದಿಲ್ಲವೆಂಬ ನಿರ್ಧಾರಕ್ಕೆ ಬಂದ.
ಕನಸು ಕಣ್ಮುಚ್ಚಿದ್ದಳು. ಅವಳ ಮುಖವನ್ನೇ ದಿಟ್ಟಿಸಿ ನೋಡಿದ. ಐದು ವರ್ಷದ ಹಿಂದೆ ಹೇಗಿದ್ದಳೋ ಈಗಲೂ ಹಾಗೆ ಇದ್ದಾಳೆ. ಕೊಂಚವೂ ಬದಲಾಗಿಲ್ಲ. ನನ್ನ ಮೇಲೆ ಅದೇ ಪ್ರೀತಿ. ಅಷ್ಟೇ ಮುನಿಸು.
ಅವಳ ಕೆನ್ನೆಯನ್ನು ಒಮ್ಮೆ ಮೃದುವಾಗಿ ಸವರುವ ಮನಸ್ಸಾಯಿತು. ಗುಳಿ ಬೀಳುವ ಜಾಗ ಯಾವುದಿರಬಹುದೆಂದು ಕಣ್ಣಲ್ಲೇ ಲೆಕ್ಕಾಚಾರ ಹಾಕಿದ. ಏನಾದರೂ ಆಗಲಿ ಒಮ್ಮೆ ಅವಳ ಕೆನ್ನೆ ಸವರಲೇಬೇಕೆಂದು ಹೊರಟ. ಅವಳು ಬೇಕಂತಲೇ ಮಗ್ಗುಲು ಬದಲಿಸಿದಳು.
‘ನಾನು ಅಷ್ಟೆಲ್ಲ ಹೇಳಿದ್ರೂ ಮತ್ತೆ ಕುಡ್ದಿದ್ದೀಯ. ಮುಟ್ಬೇಡ ನೀನು’ ಅಂದಳು ಕನಸು.
‘ನೀನಿನ್ನೂ ಮಲಗಿಲ್ವ?’
‘ಬೆಕ್ಕು ಕಣ್ಮುಚ್ಕಂದು ಆಲ್ಕೊಹಾಲು ಕುಡಿದ್ರೆ ಯಾರ್ಗೂ ಗೊತ್ತಾಗಲ್ಲ ಅಂದ್ಕಂಡಿದ್ಯ?’
‘ಚಿನ್ನು ಹಾಗಲ್ವೆ. ತುಂಬಾ ಬೋರಾಗ್ತಿತ್ತು ಅದ್ಕೆ’
‘ಹಂಗಾದ್ರೆ ನಾನು ನಿಂಗೆ ಇಷ್ಟು ಬೇಗ ಬೋರ್ ಆದ್ನ?
‘ಚಿನ್ನು ಪ್ಲೀಸ್…’
‘ಮಾತಾಡ್ಬೇಡ ನೀನು. ಸುಳ್ಪುರ್ಕ’
‘ಸಾರಿ… ಪ್ಲೀಸ್…’
‘ಹಾಗಾದ್ರೆ ನನ್ನ ಹೊಟ್ಟೆಲಿರೋ ಮಗು ಮೇಲೆ ಆಣೆ ಮಾಡು ಕುಡ್ಯಲ್ಲ ಅಂತ’
ದೇವರು, ಆಣೆ-ಪಾಣೆ ಯಾವುದರ ಮೇಲೂ ನಂಬಿಕೆ ಇಡದ ಜೀವ, ಅವಳ ಮೇಲಿನ ಪ್ರೀತಿಯಿಂದ ಪ್ರಾಮಾಣಿಕವಾಗಿ ಪ್ರಮಾಣ ಮಾಡಿದ.

ಆಪರೇಶನ್ ಥಿಯೇಟರ್ನ ಹೊರಗೆ ಕೂತಿದ್ದ ಜೀವನ ಎದೆ ಬಡಿತ ಏರುಗತಿಯಲ್ಲಿತ್ತು. ಇನ್ನೇನು ಕೆಲವೇ ಕ್ಷಣಗಳಲ್ಲಿ ಕಣ್ಮುಂದೆ ಪ್ರತ್ಯಕ್ಷವಾಗಲಿರುವ ತನ್ನ ಕೂಸಿಗೆ ಏನೆಂದು ಹೆಸರಿಡುವುದು ಎಂಬ ಜಿಜ್ಞಾಸೆ ಆ ಹೊತ್ತಲ್ಲಿ ಅವನನ್ನು ಕಾಡಲಾರಂಭಿಸಿತು. ರಾತ್ರಿ ಓದಿದ ಸಾವಿನ ಕುರಿತಾದ ಪುಸ್ತಕದಲ್ಲಿನ ವಿಚಾರಗಳ ಮಂಪರು ಅವನಲ್ಲಿ ಇನ್ನೂ ಇತ್ತು. ತನ್ನ ಕೂಸಿಗೆ ‘ಸಾವು’ ಅಂತ ಯಾಕೆ ನಾಮಕರಣ ಮಾಡಬಾರದೆನ್ನುವ ವಿಲಕ್ಷಣ ಆಲೋಚನೆಯೊಂದು ಅವನೊಳಗೆ ಸರಿದಾಡತೊಡಗಿತು.
ಜೀವ-ಕನಸು-ಸಾವು… ಹೇಗಿದೆ? ತನ್ನನ್ನೇ ತಾನು ಪ್ರಶ್ನಿಸಿಕೊಂಡ. ಬದುಕಿನ ಮುಖವಾಡಗಳೆಲ್ಲ ಬೆತ್ತಲಾಗುವುದು ಸಾವಿನೆದುರೇ ಅಲ್ಲವೇ? ತನ್ನೊಳಗೇ ಕೇಳಿಕೊಂಡ.
ಆಪರೇಶನ್ ಥಿಯೇಟರ್ ಬಾಗಿಲು ತೆರೆದು ಹೊರ ಬಂದ ನರ್ಸ್  ಕೈಯಲ್ಲಿ… ಕಣ್ತೆರೆಯುವ ಮುನ್ನವೇ ಕಣ್ಮುಚ್ಚಿದ ಹೆಣ್ಣು ಮಗು ಇತ್ತು.

‍ಲೇಖಕರು G

12 August, 2014

3 Comments

  1. Nagaraj kamble

    Really nice sir…

  2. Kiran

    wow, a very unexpected jolt at the end..
    a good story, but I think a little bit more framework was needed to make that impact harder…

  3. Dr.R.Usharani

    ನಿಜಕ್ಕೂ ಕಥೆ ತುಂಬಾ ಚೆನ್ನಾಗಿದೆ. ಅವನು ಬಯಸದೇ ಸಾವು ಅವನ ಮುಂದೆ ಬಂತು ನಿಂತಿತು. ಕಲ್ಪನೆಗೂ ವಾಸ್ಕವಕ್ಕೂ ಅಂತರ ತುಂಬಾ ಕಮ್ಮಿ ಅನ್ನಿಸುತ್ತೆ. ನಿಜಕ್ಕೂ ನಾನು ಆತನ ಕನಸು ಸಾಯಬಹುದು ಎಂದು ನಿರೀಕ್ಷೆ ಮಾಡಿದ್ದೆ. ಆದರೆ ನೀವು ಅವನ ಸಾವನ್ನು ಸಾಯಿಸಿದ್ದು ಸೂಕ್ತ ಅಂತ ಅನ್ನಿಸಿತು. ಯಾಕೆಂದರೆ ಸಾವು ನಿಶ್ಚಿತ. ಆದರೆ ಕನಸು…..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading