ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಥಾ ಸಾಹಿತ್ಯದ ಚರ್ಚೆ ಅನಾವಶ್ಯಕವೆ?

ಕೆ.ಎಂ.ವಿಶ್ವನಾಥ ಮರತೂರ

ಖ್ಯಾತ ಕಥೆಗಾರರಾದ ಸಂಧ್ಯಾ ಹೊನ್ನಗುಂಟಿಕರ್ ಮೇಡಂ ಅವರಿಗೆ ನಮಸ್ಕಾರಗಳು.

ಈ ಚರ್ಚೆಯನ್ನು ಇಲ್ಲಿಗೆ ಮುಗಿಸಬೇಕೆಂದು ಸುಮ್ಮನಾಗಿದ್ದೆ ಆದರೆ ಹಿರಿಯರಾದ ತಾವು ಈ ಚರ್ಚೆಯನ್ನು ‘ಅನಾವಶ್ಯಕ’ ಎನ್ನುವ ಪದ ಬಳಕೆ ಮಾಡಿರುವುದರಿಂದ ಪ್ರತಿಕ್ರಿಯೆ ಬರೆಯಬೇಕಾಯಿತು.

ನನ್ನ ಅನುಭವಕ್ಕೆ ತಿಳಿದಿರುವ ಹಾಗೆ ಸಾಹಿತ್ಯ ಅಕಾಡೆಮಿಗಳು, ಸಾಹಿತ್ಯದ ಸಂವಾದ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲ ಕಾರಣ ಸಾಹಿತ್ಯದ ಬಗ್ಗೆ ಚರ್ಚೆಯಾಗಲಿಯಂದು, ಕಾರ್ಯಕ್ರಮ ಮಾಡಿ ಉಂಡು ಹೋದ ಕೊಂಡ ಹೋದ ಮಾಡುವುದಕ್ಕಲ್ಲ, ಅನೇಕ ಹಿರಿಯರು ಸೇರಿರುವ ಆ ಕಾರ್ಯಕ್ರಮದಲ್ಲಿ ಚರ್ಚೆಗೆ ಹೆಚ್ಚಿನ ಅವಕಾಶ ದೊರೆಯದೆಯಿರುವುದು ದುರಂತದ ಸಂಗತಿ. ಒಂದು ಸಂವಾದ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದರೆ, ಚರ್ಚೆಯಾದರೆ ಮಾತ್ರ ಸಾರ್ಥಕತೆ ಪಡೆದುಕೊಳ್ಳುತ್ತದೆ. ನಾನು ಕಥೆಗಳ ಕುರಿತು ಚರ್ಚೆ ಮಾಡಿದ್ದು , ಕಥಾ ವಸ್ತು, ಕಥೆ ಕಟ್ಟುವಿಕೆ, ಕಥೆಯ ವಿಷಯ,ಕಥಾ ಹಂದರ, ಕಥೆಯ ಒಳಹರಿವು, ಓದುಗರ ಒಲವು, ಪ್ರಸ್ತುತ ಸ್ಥಿತಿಗತಿಯ ಬಗ್ಗೆ ಚರ್ಚಿಸಿದರೆ ಅದು ಅನಾವಶ್ಯಕ ಚರ್ಚೆ ಹೇಗಾಯಿತು?

ನಿಮ್ಮ ಪ್ರಕಾರ ಅವಶ್ಯಕ ಚರ್ಚೆ ಯಾವುದು? ನಾನು ಹೇಳಿದ್ದು ನನ್ನ ಅನಿಸಿಕೆ ಅದನ್ನು ಒಪ್ಪಿಕೊಳ್ಳುವುದು ಬಿಡುವುದು ನನ್ನ ಕೈಯಲ್ಲಿಲ್ಲ. ಬದಲಿಗೆ ಅನಿಸಿಕೆಯನ್ನು ವ್ಯಕ್ತಪಡಿಸುವ, ತಿಳಿದಿದ್ದನ್ನು ತಿಳಿದಂತೆ ಹೇಳುವುದನ್ನು ಅದು ಹೇಗೆ ನಿಮಗೆ ಅನಾವಶ್ಯಕವೆನಿಸಿತು? ನಿಮ್ಮಂತಹ ಹಿರಿಯ ಕಥೆಗಾರ್ತಿ ಸಾಹಿತ್ಯ ಚರ್ಚೆಗೆ ಅನಾವಶ್ಯಕ ಚರ್ಚೆ ಎಂದು ಬರೆದಿದ್ದು ನೋಡಿ ನೋವಾಗಿದೆ. ಚರ್ಚೆಗೊಳಪಡದ ಸಾಹಿತ್ಯ ಎಂತಹ ಸಾಹಿತ್ಯ ನೀವೇ ಹೇಳಿ. ಕುವೆಂಪು ಅವರ ರಾಮಾಯಣ ಇವತ್ತಿಗೂ ಪರ ವಿರೋಧಗಳ ಚರ್ಚೆಗೆ ಕಾರಣವಾಗಿಲ್ಲವೇ? ಸಾಹಿತ್ಯದ ಚರ್ಚೆಯನ್ನು ಅನಾವಶ್ಯಕ ಎನ್ನುವುದಾದರೆ ಸಂವಾದ ಎಂದು ಹೆಸರಿಟ್ಟು ಶಾಲು ಹಾರ ಸನ್ಮಾನಕ್ಕೆ ಕಾರ್ಯಕ್ರಮಗಳನ್ನು ಸೀಮಿತಗೊಳಿಸಿ ಕಥಾ ಸಂವಾದ ಚರ್ಚೆ ಎನ್ನುವ ಪದ ತೆಗೆದುಬಿಡೋಣವೆ?

ನೀವು ಉಲ್ಲೇಖಿಸಿದಂತೆ ನಮ್ಮ ಭಾಗದ ಕತೆಗಾರರಾದ ಶಾಂತರಸ, ಗೀತಾ ನಾಗಭೂಷಣ, ಸೂಗಯ್ಯಾ ಹಿರೇಮಠ ರಾಜಪುರೋಹಿತ್, ಡೋಣೂರು, ಡಾ. ಪೋತೆ, ನವಲ್ಕಲ್, ಸಗರ ಕೃಷ್ಟಾಚಾರ್, ಬಾಳಾಸಾಹೇಬ್, ಸಂಧ್ಯಾ ಹೊನ್ನಗುಂಟೆಕರ್, ಪ್ರಭಾಕರ್ ಜೋಶಿ,  ಇತರರ ಸಾಹಿತ್ಯವನ್ನು ಓದಿಕೊಂಡಿದ್ದೇನೆ. ಇನ್ನಷ್ಟು ಓದುವ ಸಲಹೆ ನೀಡಿದ ನಿಮಗೆ ಧನ್ಯವಾದಗಳು. ( ಸರಿತಾ ಕುಸಮಾಕರ ದೇಸಾಯಿ , ಸುಬ್ಬರಾವ್ ಕುಲಕರ್ಣಿ, ಜ್ಯೋತಿ ಕುಲಕರ್ಣಿ ಇವರನ್ನು ಹೊರತುಪಡಿಸಿ) ಅಧ್ಯಯನ ಮಾಡದೇ ಎಲ್ಲಿಯೂ ಬರೆಯುವುದಿಲ್ಲ ಎನ್ನುವುದನ್ನು ತಮ್ಮ ತಮನಕ್ಕೆ ತರಬಯಸುತ್ತೇನೆ.

ನನ್ನ ಲೇಖನದಲ್ಲಿ ಟೀಕೆಯಿಲ್ಲ, ವಿಮರ್ಶೆಯೂ ಅಲ್ಲ, ಒಬ್ಬ ಸಾಮಾನ್ಯ ಓದುಗನಾಗಿ ಸಾಹಿತ್ಯವನ್ನು ಅತ್ಯಂತ ಹತ್ತಿರದಿಂದ ಪ್ರೀತಿಸುವವನಾಗಿ ಅನಿಸಿಕೆ ಬರೆದಿದ್ದೇನೆ ಅಷ್ಟೆ. ನೀವು ಉಲ್ಲೇಖಿಸಿದಂತೆ, ನನಗೆ ಅಪಕ್ವ ತಿಳುವಳಿಕೆಯಿಲ್ಲ ಬದಲಿಗೆ ಸಾಹಿತ್ಯದ ಪಕ್ವತೆಯಿದೆ. ನನಗೆ ಅಪಕ್ವತೆಯಿದ್ದರೆ ಕಥೆಗಳ ಕುರಿತು ಬರೆಯುತ್ತಿರಲಿಲ್ಲ, ನನ್ನ ಪಕ್ವತೆಯ ಬಗ್ಗೆ ಅನುಮಾನ ಬೇಡ ನನ್ನ ನಿಲುವು ಮತ್ತು ಆಶೆಯವನ್ನು ಲೇಖನದಲ್ಲಿ ಈಗಾಗಲೇ ಹೇಳಿದ್ದೇನೆ. ಕಾರ್ಯಕ್ರಮದಲ್ಲಿ ಅನುಮಾನ, ವಿನಾಕಾರಣ ಗೊಂದಲ ಮೂಡಿಸಿಲ್ಲ ಬದಲಿಗೆ ಕಥೆಗಳನ್ನು ಚರ್ಚೆಗೆ ಹಚ್ಚಿದ್ದೇನೆ. ಒಂದು ಕಥೆ ಒರೆಗಚ್ಚಿ ನೋಡಿದರೆ ತಾನೆ ಇನ್ನಷ್ಟು ಮೆರಗು ಬರುವುದು?

ಸಾಹಿತಿಗಳಾದ ನಾವುಗಳು ಯಾಕೆ ಹೆಚ್ಚು ಜಗತ್ತಿಗೆ ತೆರೆದುಕೊಳ್ಳುವುದಿಲ್ಲ, ಓದುಗರ ಅನಿಸಿಕೆಯನ್ನು ಗೌರವಿಸುವುದಿಲ್ಲ? ಹೆಚ್ಚು ಚರ್ಚೆಗೊಳಪಡಿಸುವುದಿಲ್ಲ? ಓದುಗರ ಬೇರೆ ಬೇರೆ ಆಯಾಮಗಳಿಂದ ಸಾಹಿತ್ಯ ಇನ್ನಷ್ಟು ಗಟ್ಟಿಯಾಗಿ ಹೆಚ್ಚು ಓದುಗರನ್ನು ತಲುಪುತ್ತದೆ ಎನ್ನುವುದು ನನ್ನ ಚಿಕ್ಕ ಅನುಭವದ ಮಾತು.

ಇನ್ನೊಂದು ವಿಷಯ ನೆನಪಿರಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅನೇಕ ಹಿರಿ ಕಿರಿಯರು ಕರೆ ಮಾಡಿ ಹೇಳಿದ್ದೇನು ಗೊತ್ತೆ “ನಮಗೂ ಹಾಗೆ ಅನಿಸಿತು ನೀವು ಬರೆದು ಹೇಳಿದಿರಿ ನಾವು ಹೇಳಲಿಲ್ಲ ಅಷ್ಟೆ” ನಾವು ಹೀಗೆ ಹೇಳಬೇಕು ಎನ್ನುತ್ತೇವೆ ಎಲ್ಲಿ ತಪ್ಪು ತಿಳಿಯುತ್ತಾರೆ ಎಂದು ಸುಮ್ಮನಾಗುತ್ತೇವೆ.”

ಕೊನೆಯ ತುತ್ತು: “ಸಾಹಿತ್ಯ ಮತ್ತು ಸಾಹಿತಿ ಜಗತ್ತಿನೊಂದಿಗೆ ತೆರೆದುಕೊಳ್ಳಬೇಕು. ಪ್ರಸ್ತುತತೆಗೆ ಮುಖಾಮುಖಿಯಾಗಬೇಕು. ಚರ್ಚೆಗೊಳಪಡಬೇಕು. ಕಾದು ಕಾದು ಜನರ ಮನದೊಳಗೆ ಬೆಸುಗೆಯಾಗಬೇಕು ಅಂದಾಗ ಮಾತ್ರ ಸಾಹಿತ್ಯ ಮತ್ತು ಸಾಹಿತಿ ಜನಮಾನಸದಲ್ಲಿ ಹಾಸುಹೊಕ್ಕಾಗುತ್ತಾನೆ.”

ಇಷ್ಟು ಹೇಳಿ ಈ ಕಥಾ ಸಾಹಿತ್ಯದ ಅವಶ್ಯಕ ಚರ್ಚೆಯನ್ನು ಇಲ್ಲಿಗೆ ಮುಗಿಸುತ್ತೇನೆ. ಈ ಚರ್ಚೆಗೆ ಯಾವುದೇ ರೀತಿಯ ಪ್ರತಿಕ್ರಿಯೆ ಅವಶ್ಯಕತೆಯಿಲ್ಲವೆಂದು ಭಾವಿಸುತ್ತೇನೆ.

‍ಲೇಖಕರು avadhi

4 September, 2019

1 Comment

  1. Parameshwarappa Kudari

    ವಿಶ್ವನಾಥ ಮರತೂರ್ ಸರ್, ನಿಮ್ಮ ಅಭಿಪ್ರಾಯಕ್ಕೆ ನನ್ನ ಸಹಮತವಿದೆ.ಚರ್ಚೆಯಾಗದೇ, ಪ್ರಶ್ನಿಸದೇ ಯಾವುದನ್ನೂ ಒಪ್ಪಿಕೊಳ್ಳಲು ಮನಸ್ಸು ಒಪ್ಪುವುದಿಲ್ಲ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading