ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಣ್ಣು ತೆರೆಸುವ ‘ಕದನ ಕಣ’

ಪ್ರಸಾದ್‌ ರಕ್ಷಿದಿ

‘ಇಲ್ಲಿ ಪ್ರಧಾನಿಗಳು,ರಾಷ್ಟ್ರಪತಿಗಳು ಎಷ್ಟು ಜನ ಬೇಕಾದರೂ ಬಂದು ಹೋಗಬಹುದು. ಆದರೆ ದೇಶ ಮಾತ್ರ ಒಂದೇ. ಅದು ಹಾಗೆ ಇರುತ್ತದೆ. ಆ ದೇಶಕ್ಕಾಗಿ ನಮ್ಮ ಹೋರಾಟ’ ಇದು ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟದಲ್ಲಿ ಪ್ಯಾರಾಮಿಲಿಟರಿ ಪಡೆ, ಸಿ ಆರ್ ಪಿ ಎಫ್, ಜಲಫಿರಂಗಿ, ಬಂದೂಕು, ಲಾಠಿ ಹಿಡಿದ ಫೋಲಿಸರು, ತಡೆ ಗೋಡೆಗಳು ಈ ಎಲ್ಲದರ ಎದುರು..ಹೆಣ್ಣು ಮಗಳೊಬ್ಬಳು ಮಾಡಿದ ಭಾಷಣದ ಮಾತುಗಳು..

‘ಈ ಎಲ್ಲ ಗೋಡೆಗಳನ್ನು ನಿರ್ಮಿಸಿರುವುದು ಮನುಷ್ಯರೇ, ಮನುಷ್ಯರು ಮನಸ್ಸು ಮಾಡಿದರೆ ಅವುಗಳನ್ನು ದಾಟಿ ಹೋಗುವುದು ಅಸಾಧ್ಯವೇನಲ್ಲ ಆದರೆ ನಾವು ಶಾಂತಿಗೆ ತರುವ ಕೆಲಸ ಮಾಡುವುದಿಲ್ಲ’ ಎನ್ನುವ ಕಿಸಾನ್ ಮೋರ್ಚಾದ ಹಿರಿಯರೊಬ್ಬರ ಮಾತು…

ರೈತ ಹೋರಾಟದ ಘಟ್ಟಿ ಧ್ವನಿಯಾಗಿ ಈಗ ದೇಶದ ತುಂಬ ಅನುರಣಿಸಲು ಆರಂಭವಾಗಿದೆ. ದೆಹಲಿ ಈಗ ನಡೆಯುತ್ತಿರುವ ರೈತ ಚಳುವಳಿ ಒಂದು ಅಪರೂಪದ ಜಾಗತಿಕ ವಿದ್ಯಮಾನ. ಭಾರತದ ಅಧಃಪತನ ಹೊಂದಿದ ಮಾದ್ಯಮಗಳು ಮತ್ತು ಫ್ಯಾಸಿಸ್ಟ್ ಶಕ್ತಿಗಳು ಇದನ್ನು ಎಷ್ಟೇ ಮುಚ್ಚಿಡಲು, ಶಕ್ತಿಕುಂದಿಸಲು, ತಮ್ಮ ಎಲ್ಲ ಕುತಂತ್ತ, ಅಪಪ್ರಚಾರಗಳ ಮೂಲಕ ಪ್ರಯತ್ನಿಸದರೂ.. ಅವರಿಂದ ಸಾಧ್ಯವಾಗದೆ ದಿನಕಳೆದಂತೆ ದೇಶಕ್ಕೆ ವ್ಯಾಪಿಸುತ್ತಿದೆ. ವಿದೇಶಗಳಲ್ಲಿ ಸುದ್ದಿಯಾಗಿದೆ ಮಾತ್ರವಲ್ಲ ಜನ ಬೆಂಬಲವನ್ನೂ ಗಳಿಸಿಕೊಳ್ಳುತ್ತಿದೆ.

ಇಂತ ಒಂದು ಚಳುವಳಿಯನ್ನು ಅದರ ಹಲವು ಆಯಾಮಗಳನ್ನು ಪ್ರತ್ಯಕ್ಷದರ್ಶಿಯಾಗಿ, ಅವರೊಡನೆ ಒಡನಾಡಿ ಅಲ್ಲಿನ‌ ಅನುಭವಗಳನ್ನು ನಮಗೆ ನವೀನ್ ಕುಮಾರ್ ಅವರು ಕಟ್ಟಿ ಕೊಟ್ಟಿದ್ದಾರೆ. ಇದು ನಾವು ಇದುವರೆಗೆ ಕಂಡು ಕೇಳಿರದ ಚಳುವಳಿಯ ಅನುಭವ ರೈತ ಹೋರಾಟಗಳಲ್ಲಿ ಭಾಗವಹಿಸಿದ ನಮ್ಮಂತವರಿಗೂ ಅಚ್ಚರಿ ಮೂಡಿಸುವ ವಿದ್ಯಮಾನ, ಇಲ್ಲಿ ದೇಶದ ನಾನಾ ಭಾಗಗಳಿಂದ ಬಂದವರಿದ್ದಾರೆ, ತೆಲಂಗಾಣದಿಂದ ಬಂದ ಶಿಕ್ಷಕರು ತಮಿಳುನಾಡಿನಿಂದ ಬಂದ ರೈತ ಕಾರ್ಮಿಕರು ಇಲ್ಲಿದ್ದಾರೆ.

ಅಮೆರಿಕಾ ದಿಂದ ಬಂದ ಯುವ ಇಂಜಿನಿಯರ್ ಒಬ್ಬರು ಚಳುವಳಿಗೆ ಬಂದವ ಬೂಟ್ ಪಾಲಿಷ್ ಮಾಡಿಕೊಡುವ ಕಾಯಕ ಮಾಡಿದ್ದಾರೆ.
ಹಿಂದೂ ಮುಸ್ಲಿಂ, ಸಿಕ್ಕರು ಜೊತೆಯಾಗಿ ಲಂಗರ್ ಗಳಲ್ಲಿ ಅನ್ನದಾಸೋಹ ನಡೆಸಿದ್ದಾರೆ. ಇಲ್ಲಿ ಗ್ರಂಥಾಲಯವಿದೆ, ಆಸ್ಪತ್ರೆ ಇದೆ, ಮಕ್ಕಳಿಗೆ ಶಾಲೆಯೂ ಇದೆ. ಮಕ್ಕಳನ್ನೇಕೆ ಕರೆತಂದಿರಿ ಎಂದರೆ, ನಾವೇನು ಮಾಡುತ್ತಿದ್ದೇವೆ ಎಂದು ಮಕ್ಕಳಿಗೆ ಈಗಲೇ ಅರಿವಾಗುವುದು ಒಳ್ಳೆಯದು ಎನ್ನುವ ಹಿರಿಯರಿದ್ದಾರೆ. ಎಲ್ಲದರಲ್ಲಿಯೂ ಮಹಿಳೆಯರಿಗೆ ಆದ್ಯತೆಯಿದೆ.

ಇದೊಂದು ಮಿನಿ ಭಾರತ ವಿಶ್ವವಿದ್ಯಾಲಯ ಎಂದು ಹೇಳಿದ ಪುರುಷೋತ್ತಮ ಬಿಳಿಮಲೆ ( ಅವರ ಸಂದರ್ಶನವೂ ಈ ಪುಸ್ತಕ ದಲ್ಲಿ ದಾಖಲಾಗಿದೆ) ಯವರ ಮಾತಿಗೆ ಚಿತ್ರ ಸಹಿತ ದಾಖಲೆಗಳನ್ನು ಲೇಖಕರು ಉದ್ದಕ್ಕೂ ನೀಡಿದ್ದಾರೆ. ಕೊನೆಯಲ್ಲಿ ಈ ಜನವಿರೋಧಿ ಕಾನೂನನ್ನು ಯಾಕೆ ವಿರೋಧಿಸಬೇಕು ಮತ್ತು ಅದೊಂದೇ ಅಲ್ಲ ದೇಶದ ಪ್ರಜಾಪ್ರಭುತ್ವ ದ ಉಳಿವಿಗೆ ಇಂತಹ ಹೋರಾಟ ಯಾಕೆ ಮುಖ್ಯ ಎನ್ನುವ ಬಗೆಗೂ ಲೇಖಕರು ಗಮನ ಸೆಳೆಯುತ್ತಾರೆ.

ಇಲ್ಲಿ ಹಲವಾರು ಸಂಗತಿಗಳಿವೆ, ಪ್ರತಿಯೊಂದನ್ನೂ ಓದಿಯೇ ಅನುಭವಿಸಬೇಕು. ಕೊನೆಗೂ ನನ್ನ ಅಚ್ಚರಿ ಸಿಕ್ ಜನಾಂಗದ ಬಗ್ಗೆ, ಧಾರ್ಮಿಕವಾಗಿ ಹೆಚ್ಚು ಕರ್ಮಠರಂತೆ ಕಾಣುವ ಈ ಜನಾಂಗ ಮಾನವ ಪ್ರೀತಿ, ಕಾಯಕ ದಾಸೋಹಗಳ ನಿಷ್ಠೆ, ಸಮಾನತೆಯ ಬದುಕು ಮುಂದಿನ ಬೆಳಕಾಗಿ ಕಾಣಿಸುತ್ತದೆ.

ಕರ್ನಾಟಕವೂ ಕಾಯಕ, ದಾಸೋಹ, ಸಮಾನತೆಯ ಧರ್ಮವನ್ನು ಹುಟ್ಟು ಹಾಕಿದ ನೆಲ ಯಾಕೆ ಹೀಗಿದೆ ಎಂಬ ವಿಷಾದವೂ ಆವರಿಸಿಕೊಳ್ಳುತ್ತದೆ.
ಇಂತ ಒಂದು ಹೊತ್ತಗೆಯನ್ನು ದಾಖಲಿಸುವ ಮೂಲಕ ನವೀನ್ ಕುಮಾರ್ ಚಳುವಳಿಗೆ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ.
ಚಳುವಳಿಯ ಬಗ್ಗೆ ಮೂಗು ಮುರಿಯುವವರನ್ನು ಕಣ್ಣು ತೆರೆಯುವಂತೆ ಮಾಡಿದ್ದಾರೆ.

‍ಲೇಖಕರು Avadhi

5 April, 2021

1 Comment

  1. ಶ್ರೀರಂಗ

    ಇಷ್ಟು ದೀರ್ಘ ಕಾಲ ಅಷ್ಟೆಲ್ಲಾ ಸವಲತ್ತುಗಳೊಡನೆ ದಿಲ್ಲಿಯಲ್ಲಿ ಚಳುವಳಿ ಮಾಡಲು ಹಣ ಕೊಟ್ಟವರು ಯಾರು?

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading