ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಣವಿ ಅಜ್ಜನಿಗೊಂದು ಪೋಸ್ಟ್ ಮಾಡದ ಪತ್ರ…

ಗಾಯತ್ರಿ ರವಿ

ನನ್ನ ಪ್ರೀತಿಯ ಕಣವಿ ಅಜ್ಜನಿಗೆ,

ಬಹಳ ದಿನಗಳಾದವು ಅಜ್ಜ, ಪತ್ರ ಬರೆಯದೆ. ಅಂಚೆ ಇಲಾಖೆಯಲ್ಲಿ ಇದ್ದುಕೊಂಡು ಮೊದ ಮೊದಲು ಖಾಲಿ ಪತ್ರಗಳನ್ನು ಕೌಂಟರ್‌ನಲ್ಲಿ ಕುಳಿತು ಮಾರುತ್ತಿದ್ದೆ. ಆನಂತರ ಭಾವನೆಗಳ ತುಂಬಿದ ಪತ್ರೆಗಳನ್ನು ಮನೆ ಮನೆಗೆ ಹೋಗಿ ಅಂಚೆ ಅಕ್ಕಳಾಗಿ ಮುಟ್ಟಿಸುತ್ತಿದ್ದೆ. ಹಗುರಾದ ಮನಸ್ಸು ಇಂದು ನಿಮ್ಮ ಅಗಲಿಕೆಯ ಸುದ್ಧಿ ಕೇಳಿ ಭಾರವಾಯಿತು. ಮೊದಲು ಪೆನ್ನು ಹಿಡಿದು ಬರೆಯುತ್ತಿದ್ದೆ ಅಜ್ಜ. ಮನಸ್ಸಿನಾಳದ ನೆನಪುಗಳು ಅಕ್ಷರ ರೂಪದಲ್ಲಿ ಹೊರ ಬರುತ್ತಿದ್ದವು.

ಅಜ್ಜ, ನೆನಪಿದೆಯೆ ? ನಾನು ನಿಮಗೆ ಮೊದಲ ಪತ್ರ ಬರೆದದ್ದು ನಿಮ್ಮ ‘ಹೂವು ಹೊರಳುವವು ಸೂರ್ಯನ ಕಡೆಗೆ, ನಮ್ಮ ದಾರಿ ಬರಿ ಚಂದ್ರನವರೆಗೆ’ ಈ ಕವಿತೆ ಓದಿದಾಗ. ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಪ್ರಕಟವಾದ ಈ ಕವಿತೆ ನನ್ನಲ್ಲಿ ಹುಟ್ಟಿಸಿದ ಬೆರಗು ಈಗಲೂ ಮರೆತಿಲ್ಲ. ನನಗೆ ತಿಳಿದಂತೆ ತಕ್ಷಣ ಪತ್ರ ಬರೆದು ಹಾಕಿದ್ದೆ.

ನನ್ನರಿವಿಗೆ ಬಾರದಂತೆ ಹಸಿರು ಬಣ್ಣದ ಅಂತರ್‌ದೇಶಿ ಪತ್ರ ನನ್ನ ವಿಳಾಸಕ್ಕೆ ಬಂದಿತ್ತು. ಇದು ನನ್ನದೇನಾ ? ಎಂದು ಅನುಮಾನದಿಂದ ಸ್ವಲ್ಪ ಸಮಯ ತೆಗೆದುಕೊಂಡು ಖಚಿತಪಡಿಸಿಕೊಂಡೆ. ‘ಪ್ರೀತಿಯ ಮೊಮ್ಮಗಳಿಗೆ, ಅನಂತ ಆಶೀರ್ವಾದಗಳು’ ಮುತ್ತಿನಂತ ಅಕ್ಷರಗಳ ಸರಮಾಲೆ ಓದುತ್ತ ಹೋದಂತೆ ನಂಬಲಸಾಧ್ಯವಾಯಿತು. ನೀವು ನನಗೆ ಮೊಮ್ಮಗಳ ಪಟ್ಟಕೊಟ್ಟು ಆಶೀರ್ವದಿಸಿದ್ದೀರಿ.

ನಾನು ನಿಮ್ಮನ್ನು ಭೇಟಿಯಾಗಬೇಕೆಂದು ಆಸೆ ವ್ಯಕ್ತಪಡಿಸಿದಾಗ, ಮರು ಟಪಾಲಿಗೆ ಯಾವ್ಯಾವ ಬಸ್ಸು, ವೇಳೆ, ಮನೆಯ ಫೋನ್ ನಂಬರ್ ಬರೆದು ತಿಳಿಸಿದ್ದೀರಿ. ಚೆಂಬೆಳಕಿನ ಗೇಟಿನ ಸದ್ದಾದಂತೆ ಅಮ್ಮ ಶಾಂತಕ್ಕ ಬಾಗಿಲು ತೆರೆದರು. ನೀನೇನಾ ಗಾಯತ್ರಿ ? ಎಂದು ಕೇಳಿ ನೀನು ಬಂದದ್ದು ಓಳ್ಳಯದಾಯಿತು.

ಅಜ್ಜ ನಿನಗಾಗಿ ಕಾಯುತ್ತಿದ್ದಾರೆ ಎಂದು ಹೇಳಿ ನೀರು ತಂದು ಕೊಟ್ಟರು. ಅಲ್ಲಿಯ ಗೋಡೆಯ ಮೇಲೆ ಗುಬ್ಬಿಯ ಕುರಿತಾಗಿ ಕವನದ ಭಾವಚಿತ್ರ ನೋಡಿದೆ. ನಂತರ ನೀವು ಬಂದು, ಇವರು ಕವಿತೆ ಬರೆತಾರೆ ಅಂತ ಅಕ್ಕನಿಗೆ ಪರಿಚಯ ಮಾಡಿಕೊಟ್ಟಿರಿ. ನನ್ನ ಕೆಲವು ಕವಿತೆಗಳನ್ನು ನೋಡಿ ಅಭಿಪ್ರಾಯ ಹೇಳುವೆ ಎಂದೂ ಹೇಳಿದ್ರಿ. ಕೊನೆಗೆ ಹೋಗುವಾಗ ಎಂ.ಆರ್. ಕಮಲಾ ಅವರ ಜಾಣೆ ಕವನ ಸಂಕಲನ ಕೈಗಿಟ್ಟು ನೀನೂ ಹೀಗೆ ಬರೆಯಬೇಕು ಎಂದು ಆಶೀರ್ವದಿಸಿದ್ದಿರಿ.

ಅಂದು ನಾನು ತುಂ ಗಾಬರಿಯಿಂದ, ಬಹಳ ಆತಂಕದಿಂದ ನಿಮ್ಮನ್ನು ಕಾಣಲು ಬಂದೆ. ಎಂಟು ತಿಂಗಳ ಗರ್ಭಿಣಿ ನಾನು. ಯಾವುದೋ ಒಂದು ಕಹಿ ಘಟನೆಯನ್ನು ಕೇಳಿ ಮನಸ್ಸು ವಿಚಲಿತಗೊಂಡಿತ್ತು. ಏನೋ ಒಂದು ತರಹದ ಭಯ. ಅದೇ ತಾನೆ ನನ್ನ ತಮ್ಮ ಜಗದೀಶ ಮಿಲ್ಟಿçಯಿಂದ ರಜೆ ಮೇಲೆ ಬಂದಿದ್ದ. ಅವನನ್ನು ಕರೆದುಕೊಂಡು ನಿಮಗೂ ತಿಳಿಸದಯೇ ನಿಮ್ಮ ಮನೆ ಬಾಗಿಲಗೆ ಬಂದು ನಿಂತಿದ್ದೆ.

ನನ್ನ ಮನದಾಳದ ಭಾವನೆಗಳನ್ನು ಅರಿತು ಅಮ್ಮನಿಗೆ ತಿಳಿಸಿ ಯಾವುದಕ್ಕೂ ಹೆದರಬೇಡ ಕೆಟ್ಟದ್ದೇನೂ ಆಗುವುದಿಲ್ಲ. ತುಂಬ ಪ್ರೀತಿಯಿಂದ ತಲೆ ಸವರಿದ್ದಿರಿ. ಅನುಪಮಾ ನಿರಂಜರ ಜೀವನ ಚರಿತ್ರೆ ನೆನಪು ಸಿಹಿ ಕಹಿ ಕೊಟ್ಟು ಮುಂದಿನ ಸಾರೆ ಬರುವಾಗ ಸಂತೊಷದಿಂದ ಮಗುವನ್ನು ಕರೆದುಕೊಂಡು ಬಾ. ಹಿತ್ತಲಲ್ಲಿ ಬೆಳೆದ ಮಾವಿನ ಹಣ್ಣುಗಳನ್ನು ಅಮ್ಮ ಉಡಿ ತುಂಬಿ ಕಳುಹಿಸಿದ್ದಳು.

ಅಂದು ತೆಗೆಸಿ ಕೊಂಡ ನಿಮ್ಮ ಜೊತೆಗಿನ ಫೋಟೊ ಈಗ ನನಗೆ ನೆನಪು ಮಾತ್ರ ಅಜ್ಜ, ಹೋಗಿ ಬಾ.

‍ಲೇಖಕರು Admin

17 February, 2022

1 Comment

  1. Nagaraj HUDED

    ಮಧುರವಾದ ನೆನಪು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading